You are hereನಾವು
ನಾವು
ಕೂಳಿಲ್ಲದೆ ಕೊರಗುವವರು
ನಾವು ಹಸಿದ ಹುಲಿಗಳು
ಮೇಲಿರುವರ ಸುಳ್ಳು ಸುಲಿದು
ನೆಗೆಯಲಿರುವ ಕಲಿಗಳು
ಕಷ್ಟಪಟ್ಟು ದುಡಿದರೂನೆ
ನಮಗೆ ಕೂಳು ದೊರೆಯದು
ದುಡಿಯದಿರುವ ಯಜಮಾನರ
ಮಜವ ಹೇಳ ತೀರದು
ದೇವ್ರು ಮತವ ಮುಂದೆ ಮಾಡಿ
ನಮಗೆ ಮೋಸ ನಡೆದಿದೆ
ಅನ್ಯಾಯಕೆ ಅನ್ಯಾಯ
ಮುಯ್ಯಿಗೆ ಮುಯ್ ಮುಂದಿದೆ
ತತ್ವಗಿತ್ವ ಬೇಡ ನಮಗೆ
ಬೇಕು ನಮಗೆ ಅನ್ನವು
ಗುರುವುಗಿರುವು ಬೇಡ ನಮಗೆ
ಬೇಕು ವಸತಿ ವಸನವು
ಭಯಭೀತಿಯ ಬೇರುಸಹಿತ
ಕಿತ್ತು ಮುಂದೆ ನಡೆವೆವು
ವಿಷಜಂತುವ ಹುಡುಕಿ ತಡಕಿ
ಹಿಡಿದು ತಂದು ಕಡಿವೆವು
-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು
- Login or register to post comments
- Email this page