You are hereನನ್ನ ಜನಗಳು
ನನ್ನ ಜನಗಳು
ಹಸಿವಿನಿಂದ ಸತ್ತೋರು ಸೈಜುಗಲ್ಲು ಹೊತ್ತೋರು
ವದೆಸಿಕೊಂದು ವರಗಿದೋರು ನನ್ನ ಜನಗಳು
ಕಾಲುಕಯ್ಯಿ ಹಿಡಿಯೋರು ಕೈ ಮಡಗಿಸಿಕೊಳ್ಳೋರು
ಭಕ್ತರಪ್ಪೋ ಭಕ್ತರೋ ನನ್ನ ಜನಗಳು
ಹೊಲವನುತ್ತು ಬಿತ್ತೋರು ಬೆಳೆಯ ಕುಯ್ದು ಬೆವರೋರು
ಬಿಸಿಲಿನಲ್ಲಿ ಬೇಯೋರು ನನ್ನ ಜನಗಳು
ಬರಿಗೈಲೇ ಬಂದೋರು ಉಸ್ಸೆಂದು ಕೂತೋರು
ಹೊಟ್ಟೆಬಟ್ಟೆ ಕಟ್ಟಿದೋರು ನನ್ನ ಜನಗಳು
ಮಾಳಿಗೆಗಳ ಎತ್ತಿದೋರು ಬಂಗಲೆಗಳ ಕಟ್ಟಿದೋರು
ತಳಾದೀಗೆ ಸಿಕ್ಕಿದೋರು ನನ್ನ ಜನಗಳು
ಬೀದಿಯಲ್ಲಿ ಬಿದ್ದೋರು ಸದ್ದಿಲ್ಲದೆ ಇದ್ದೋರು
ಒಳಗೊಳಗೇ ಅತ್ತೋರು ನನ್ನ ಜನಗಳು
ಬಡ್ಡಿಯನ್ನು ತೆತ್ತೋರು ಭಾಷಣಗಳ ಬೆಂಕಿಯಲ್ಲಿ
ಬೆಂದು ಬೂದಿಯಾದೋರು ನನ್ನ ಜನಗಳು
ಪರಮಾತ್ಮನ ಹೆಸರು ಹೇಳಿ ಪರಮಾನ್ನ ಉಂಡಜನಕೆ
ಬೂಟುಮೆಟ್ಟು ಹೊಲೆದೋರು ನನ್ನ ಜನಗಳು
ಚಿನ್ನವನ್ನು ತೆಗೆಯೋರು ಅನ್ನವನ್ನು ಕಾಣದೋರು
ಬಟ್ಟೆಯನ್ನು ನೇಯೋರು ಬರಿಮೈಲೇ ಹೋಗೋರು
ಹೇಳಿದಂತೆ ಕೇಳುತಾರೆ ನನ್ನ ಜನಗಳು
ಗಾಳಿಯಲ್ಲೆ ಬಾಳುತಾರೆ ನನ್ನ ಜನಗಳು
-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು
- Login or register to post comments
- Email this page