You are hereದೋಣಿಯ ಹಾಡು
ದೋಣಿಯ ಹಾಡು
ನನ್ನೆದೆಯ ಬನದಲ್ಲಿ
ಹೂ ಬಳ್ಳಿಗಳ ತಳ್ಳಿ
ನದಿಯೊಂದು ಹರಿಯುತ್ತಿತ್ತು
ಶಿವಗಂಗೆ ತುಂಗೆ
ಕಾವೇರಿ ಕೃಷ್ಣೆ
ಏನೋ ಅದರ ಹೆಸರು
ಗಿಡದ ಮೊಗ್ಗುಗಳು ಅರಳಿ ನಕ್ಕವು
ಗಿರಿಯ ಸಾಲುಗಳಲ್ಲಿ
ರೋಮಾಂಚನ
ಹರಿವ ನದಿಗಳಿಗೆಲ್ಲ
ಹಗಲು ರಾತ್ರಿಗಳಿಲ್ಲ
ಎಲೆಯ ಉಲ್ಲಾಸಕ್ಕೆ ಎಲ್ಲೆ ಇಲ್ಲ
ತುಂಬಿ ಹರಿಯುವ ನದಿಯ ತುಂಬ
ಕುಣಿದು ಕುಪ್ಪಳಿಸುತ್ತ ಬಂತು
ಬಣ್ಣ ಬಣ್ಣದ ಹಾಡ ಹೊತ್ತ ದೋಣಿ
ಅಲೆಯ ತಲ್ಲಣದಲ್ಲಿ ನದಿಯ ನಗೆ ಏರಿತ್ತು
ಬಳ್ಳಿಗಳ ಮೈಯಲ್ಲಿ ಬೆಳದಿಂಗಳು
ಎದೆಯ ಹಕ್ಕಿಗಳು ಎಚ್ಚರವಾದವು
ಹಾಡಿನ ಮೋಡಿಗೆ ಬೆರಗಾಗಿ
ನಾಡಿನ ಜನಗಳು ಹುಚ್ಚರಾದರು
ಕತ್ತಲೆ ಕಳೆದು ಬೆಳಕಾಗಿ
ಎಲ್ಲೊ
ಭೂಲೋಕದಲಿ
ಯಾವ ಮೂಲೆಯ ಒಳಗೊ
ರಣವಾದ್ಯ ಮೊಳಗುತಿತ್ತು
ಮರಮರದ ಮೇಲೆಲ್ಲ ನೋವು ಕೂಗುತ್ತಿತ್ತು
ಸತ್ತವರ ನಿಟ್ಟುಸಿರು ಪ್ರೇತವಾಗಿ
ಮದ್ದುಗುಂಡಿನ ಹೊಗೆಯು ಹಬ್ಬಿಸಿದ ಧಗೆಯಲ್ಲಿ
ಮುಡಿದ ಮಲ್ಲಿಗೆಯೆಲ್ಲ ಬಾಡಿಹೋದೊ
ಕುಣಿವ ಕಾಲಿನ ಗೆಜ್ಜೆ ಕಳಚಿ ಬಿದ್ದಿತ್ತೆಲ್ಲೊ
ಹಾಡುಗಳು ನೀರಿನಲಿ ಚೆಲ್ಲಿಹೋದೊ
ಚೂರುಚೂರಾಗಿತ್ತು ದೋಣಿ
ಮುರಿದು ಬಿದ್ದವು ಎಲ್ಲ ಕನಸು
ಹೇಳಲಾಗದ ಗೋಳಿನಲ್ಲಿ
ಬಾಳು ಬಿದ್ದಿತ್ತು
ಆ ನೀರಿನಲ್ಲಿ ತೇಲಿಬಂದೊ ಹೆಣ
ಮೇಲಾಡುತಿದ್ದೊ ಹಾವು
ನಕ್ಕ ಚುಕ್ಕೆಗಳೆಲ್ಲ ಕಲ್ಲಿದ್ದಲಾಗಿದ್ದೊ
ಎಷ್ಟೊ ಈ ಸಲದ ಸಾವು?
ಮುರಿದ ಮನ ಇರಿದ ಎದೆ
ಕತ್ತಲೆಯು ಮುತ್ತಿರುವ ನಾಡಿನಲ್ಲಿ
ನನ್ನ ಒಲವಿನ ಹೂವ ಕಂಡಿರೇನು?
ಈ ಮಣ್ಣಿನಲಿ ಮಿಂಚಿ ಆನಂದವನು ಹಂಚಿ
ಮರೆಯಾದ ದನಿಯನ್ನು ಕಂಡಿರೇನು?
ನೆಲದ ನಗೆಯನು ನುಂಗಿ
ಹಾವುಗಳ ಹರಿದಾಟ
ಮೆಳೆ ಪೊದರುಗಳ ತುಂಬ
ಗಾಢ ಮೌನ
ನೆತ್ತಿಯನು ಎತ್ತಿದರೆ
ಹತ್ತಿ ಉರಿಯುವ ಮುಗಿಲು
ನನ್ನೆದೆಯ ನದಿ ಬತ್ತಿ ಒಣಗಿ ಹೋಗಿತ್ತು
ಉರಿದ ಹೂ ಬಳ್ಳಿಗಳ ಬೂದಿ ಸುರಿದಿತ್ತು
-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು
- Login or register to post comments
- Email this page