You are hereದಲಿತರು ಬರುವರು

ದಲಿತರು ಬರುವರು


ದಲಿತರು ಬರುವರು ದಾರಿಬಿಡಿ
ದಲಿತರ ಕೈಗೆ ರಾಜ್ಯ ಕೊಡಿ

ಕೋಟಿ ಕೋಟಿ ಕನಸುಗಳೊಂದಿಗೆ
ಹತ್ತಿ ಉರಿಯುವ ಮನಸುಗಳೊಂದಿಗೆ
ಗುಡುಗು ಮಿಂಚಿನ ಘೋಷಣೆಯಲ್ಲಿ
ಭೂಕಂಪನಗಳ ಭಾಷೆಗಳಲ್ಲಿ
ಬಂತೋ ದಲಿತರ ಮೆರವಣಿಗೆ
ನೆಲಕೆ ಕಾಲುಗಳ ಬರವಣಿಗೆ

ಜಾತಿ ಮತಗಳ ಮುಳ್ಳಿನ ಮೆಳೆಗೆ
ಮುಳ್ಳಾದರು ಇವರು
ತಮ್ಮನು ನುಂಗಿದ ಏಳು ಸಮುದ್ರಕೆ
ಮುಗಿಲಾದರು ಇವರು

ಎಲ್ಲಾ ಜಾತಿಯ ಬಡವರು ಬಂದರು
ಎಲ್ಲ ಮತಗಳ ಶೋಷಿತರು
ಭಾಷೆ ಭೇದಗಳ ಗಡಿಯನು ದಾಟಿ
ಸಮತೆಯ ಭಾವದ ಚಿಲುಮೆಯ ಮೀಟಿ
ದಲಿತರು ಬಂದರು ದಾರಿಬಿಡಿ
ದಲಿತರ ಕೈಗೆ ರಾಜ್ಯ ಕೊಡಿ

ಬೆಳೆಯಿತು ಮೊಗ್ಗೊಡೆಯಿತು
ಕೊನೆಗಾಣದ ದಲಿತರ ಮೆರವಣಿಗೆ
ಗುಂಡಿಗೆ ಗುಂಡು ರಕ್ತಕೆ ರಕ್ತ
ಹೆಗಲಿಗೆ ಹೆಗಲು ಪ್ರಾಣಕೆ ಪ್ರಾಣ
ದಲಿತ ಭಾರತದ ಬಾವುಟದಲ್ಲಿ
ನಿಂತರು ರೈತರು ಕಾರ್ಮಿಕರು
ಬಿರಿದವು ಹೂವು ಬನಬನದಲ್ಲಿ
ಹಾರಿದೊ ಹಕ್ಕಿ ನೂರಾರು
ಕಂಡಿತು ಕೆಂಪು ಮೂಡಣದಲ್ಲಿ
ಬೆಳಗಾಯಿತು ಬಡವರಿಗೆ

-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು