You are hereತಬರನ ಹಾಡು
ತಬರನ ಹಾಡು
ಎಚ್ಚರವಿಲ್ಲದ ಕತ್ತಲ ನಾಡಿಗೆ
ಎಂದಿಗಯ್ಯ ಬೆಳಕು
ಎಲ್ಲೆಡೆ ಬೆಳೆಯುವ ಸಾವು ಸಂಕಟಕೆ
ಇಲ್ಲವೇನು ಕೊನೆಯು
ಉಳ್ಳವರೆಸೆದ ಗಾಳಕೆ ಸಿಕ್ಕಿ
ಸ್ವಾತಂತ್ರ್ಯವು ಬರಿ ಗೋಳಾಯ್ತು
ಯೋಜನೆಯೆಲ್ಲ ಯೋಜನ ದೂರ
ಹಸಿವೆಯೆ ಬಡವನ ಬಾಳಾಯ್ತು
ಇದ್ದೊಂದು ಓಟನು ಮಾರಿಕೊಂಡರು
ಹಸಿರು ನೋಟುಗಳಿಗೆ
ತನು ಮನ ಧನವನು ಅರ್ಪಿಸಿಬಿಟ್ಟರು
ಲಾಟಿ ಬೂಟುಗಳಿಗೆ
ಅಧಿಕಾರದ ಮದ ಕುಣಿಯುತ್ತಿತ್ತು
ಕುರ್ಚಿ ಕುರ್ಚಿಯಲ್ಲಿ
ಬಡವನ ರಕ್ತ ಹರಿಯುತ್ತಿತ್ತು
ಬೀದಿ ಬೀದಿಯಲ್ಲಿ
ಬಿಳಿಯ ಟೋಪಿಗಳ ಬಿಳಿಯ ಮೋಡಗಳ
ನಂಬಿ ಕುಂತ ಜನರು
ಸುಳ್ಳು ಭಾಷಣದ ಹಳ್ಳಕ್ಕೆ ಬಿದ್ದು
ದಿಕ್ಕು ಕೆಟ್ಟರಯ್ಯ
ನಿಲ್ಲುವುದೆಂದಿಗೆ ಕುಂತ ಜನಗಳು
ಕೋಪಗೊಂಡು ಕೆರಳಿ
ಹರಿಯುವುದೆಂದಿಗೆ ಜನಪ್ರವಾಹ
ಕೆಂಪು ಹೂವು ಅರಳಿ
-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು
- Login or register to post comments
- Email this page