You are hereಚೋಮನ ಮಕ್ಕಳ ಹಾಡು

ಚೋಮನ ಮಕ್ಕಳ ಹಾಡು


ಕಾಲ ನೀಲ ಬೆಳ್ಳಿ ಗುರುವ ಚೆನಿಯ
ಚೋಮನ ಮಕ್ಕಳು ನಾವು

ಕಣ್ಣಿನ ಒಳಗೆ ನೋವಿರುವವರು
ಮಣ್ಣಿನ ಒಳಗೆ ಮುಖವಿಟ್ಟವರು
ತಾಯಿಯನಗಲಿದ ಮಕ್ಕಳು ನಾವು
ನೋವನಪ್ಪಿದವರು

ಉಕ್ಕಿನ ಮಯ್ಯಿ ಹೂವಿನ ಮನಸು
ಮೂಡುವ ಭೂಮಿಯ ಗೇಣಿಯ ಕನಸು
ಭೂತಾಯಿಯ ಮಲಮಕ್ಕಳು ನಾವು
ಚೋಮನ ಎಲುಬುಗಳು

ಒಡೆಯರ ಸುಂದರ ತೋಟದ ಒಳಗೆ
ಅರಳುವ ಹೂವಿನ ದಳದಳಗಳಲ್ಲಿ
ಅಪ್ಪನ ಬೆವರಿನ ರಕ್ತವು ಸೋರಿ
ಕೆಂಪಾದವು ಹೂವು

ದಣಿಗಳ ಹಬ್ಬದ ಊಟಕ್ಕಾಗಿ
ಖಂಡವ ಕಿತ್ತು ಕೊಟ್ಟವರು
ನೆಲದಾಧಾರ ತಪ್ಪಿದ ಜನರು
ಮುಗಿಲಿನ ಆಸರೆ ಸಿಗದವರು

ಭೂಮಿ ಬಿಟ್ಟ ನೀಲಿಯ ಬಾನಿಗೆ
ನಮ್ಮಯ ನಾಡಿನ ಎಲ್ಲಾ ಜನತೆಗೆ
ಚೋಮನ ಹೆಸರು ಕಥೆಗೊತ್ತು
ಚೋಮನ ಮಕ್ಕಳೆ ಹೇಳುವ ಕಥೆಯನು
ಕೇಳಿರಿ ಸ್ವಾಮಿ ಈ ಹೊತ್ತು

-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು