You are hereಚಳಿಯ ಹಾಡು

ಚಳಿಯ ಹಾಡು


ಚಳಿಯು ಬಂತಲ್ಲಾ
ಇಳೆಯ ಮೇಲೆ ಚಳಿಯು ಬಂತಲ್ಲ
ಮಂಜಿನ ಕಂಬಳಿ ಹೊದ್ದುಕೊಂಡು
ಮಾತೇ ಇಲ್ಲದ ಕಳ್ಳನ ರೀತಿ
ಬಾಗಿಲ ಕಿಂಡಿ ತೂರಿತ್ತು
ಕಂಡವರನ್ನು ಹಿಡಿದಿತ್ತು

ಮರಗಳಿಗೆಲ್ಲ ಮಂಜಿನ ಟೋಪಿ
ಬೆಟ್ಟದ ಸಾಲಿಗೆ ಬೆಳ್ಳಿಯ ಬಟ್ಟೆ
ಕಂಡಲ್ಲೆಲ್ಲಾ ಇಬ್ಬನಿ ಹಬ್ಬ
ಬಂದವರಾರೋ ಹೋದವರಾರೋ
ತಿಳಿಯುವುದೇ ಇಲ್ಲ

ಗಡಗಡ ಎಂದು ನಡುಗಿಸುತ್ತಿತ್ತು
ತಬಲ ಬಡಿದವು ಹಲ್ಲುಗಳು
ಕುಣಿದವು ಕಯ್ಯಿ ಕಾಲುಗಳು
ಬಡವರ ಬಿಡಲಿಲ್ಲ
ಹಣವಂತರ ಬಿಡಲಿಲ್ಲ
ಫ್ಯಾಷನ್ ಹುಡುಗಿಯ ಬಿಡಲೇ ಇಲ್ಲ
ಚಳಿಯು ಬಂತಲ್ಲ
ಇಳೆಯ ಮೇಲೆ ಚಳಿಯು ಬಂತಲ್ಲ

ಮಲಗಿದ್ದವರನ್ನು ಕೂರಿಸಿತು
ಕುಂತವರನ್ನು ನಿಲ್ಲಿಸಿತು
ನಿಂತವರನ್ನು ಓಡಿಸಿತು
ಚಳಿಯು ಬಂತಲ್ಲ
ಚಳಿಯನು ಗೆಲ್ಲುವ ವೀರನು ಕಾಫ಼ಿ
ಕುಡಿಯಲು ಕಾಸಿಲ್ಲ
ಕಾಫ಼ಿ ಕುಡಿಯಲು ಕಾಸಿಲ್ಲ

ಚಳಿಗೆ ಹೆದರಿ ಗಂಡು ಹೆಣ್ಣು
ತಿನ್ನಲು ಹೋಗಿ ಪ್ರೀತಿಯ ಹಣ್ಣು
ಮಕ್ಕಳಾದವಲ್ಲ
ಮನೆಮನೆಯಲ್ಲಿ ಊರಿನ ತುಂಬ
ಕುಣಿದು ನಿಂತವಲ್ಲ

ಗಯ್ಯಾಳಿ ಹೆಂಡತಿ ಕಾಟದಿಂದ
ತಪ್ಪಿಸಿಕೊಂಡ ಸಂತಸದಿಂದ
ಮುಂಜಾನೆಯಲಿ ಗುಮಾಸ್ತನೊಬ್ಬ
ಡೂಟಿಗೆ ಹೊರಟಿದ್ದ
ಬಾಗಿಲು ದಾಟಿ ಬಂದಿದ್ದೇ ತಡ
ಮೂಗಿನ ಮೇಲೆ ಭಾರಿ ಹೊಡೆತ
ಚಳಿಯು ಹಿಡಿದಿತ್ತು
ಹೊಂಚು ಹಾಕಿ ಚಳಿಯು ಹಿಡಿದಿತ್ತು

-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು