You are hereಗುಡಿಗೆ ಹೋಗುವವರ ಹಾಡು

ಗುಡಿಗೆ ಹೋಗುವವರ ಹಾಡು


ಗುಟ್ಟಿನ ಲೋಕದ ಗುಡಿಗೆ ಹೋಗವೆವು
ಶತಮಾನದ ಸುಳ್ಳನು ಒಡೆದು
ಹೊಸಬಾಳ ಪಯಣದಲ್ಲಿ
ನಾವಿಟ್ಟು ಮೊದಲ ಹೆಜ್ಜೆ

ಕೆಟ್ಟು ನಿಂತಿರುವ ಕಾಲದ ರಥವನು
ಎಳೆಯುತೀವಿ ಮುಂದೆ
ಸಮತೆಯ ಹೂಗಳು ಚೆಲ್ಲಿದ ಪಥವನು
ತುಳಿಯುತೀವಿ ನಾವು

ಮರೆತು ಹೋಗಿರುವ ಗುರುತು ಸಿಗದಿರುವ
ನಮ್ಮ ಸೊಲ್ಲೆ ಬನ್ನಿ
ಜಗವೆಲ್ಲ ಕೇಳಲಿ ಅಚ್ಚರಿಗೊಳ್ಳಲಿ
ಹೊಸ ಮಾತನೊಂದೆ ಅನ್ನಿ

ದೇವರಿರುವನೊ ಎಂತು ಇರುವನೊ
ನೋಡುತೀವಿ ಇಂದು
ಆತಂಕದ ತಲ್ಲಣದಾಕ್ಷಣಕೆ
ಹಾತೊರೆಯುತೀವಿ ನಾವು

ಎಂದೂ ಬರದವರು ಇಂದು ಬರುವೆವು
ಏಳು ಮಂಜುನಾಥ
ಹೊರಗೆ ಉಳಿದವರು ಒಳಗೆ ಬರುವೆವು
ಬರಮಾಡಿಕೊಳ್ಳೊ ದೇವ

-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು