You are hereಕೊಳೆಗೇರಿಯ ಹಾಡು

ಕೊಳೆಗೇರಿಯ ಹಾಡು


ಬಡವರ ಜೋಪಡಿ ನೆಲಸಮವಾದ
ನೋವಿನ ಕಥೆ ಕೇಳಿ
ದುಡಿಯುವ ಜನಗಳ ಪ್ರಾಣವು ಹೋದ
ಗೋಳಿನ ಕಥೆ ಕೇಳಿ

ಮಹಾನಗರದ ಮಧ್ಯ ಭಾಗದಲಿ
ಬಡವರ ಗುಡಿಸಲು ಗುಂಪಿತ್ತು
ಕೂಲಿಯ ಮಾಡುವ ಗಾಡಿಯ ಎಳೆಯುವ
ಬೆವರನು ಸುರಿಸುವ ಜನವಿತ್ತು

ಬೀದಿಬೀದಿಯಲ್ಲಿ ಭಿಕ್ಷೆಯ ಎತ್ತುವ
ಮಕ್ಕಳ ಹಿಂಡು ಅಲ್ಲಿತ್ತು
ಬೀಡಿಯ ಹೊಗೆಯು ಮನೆಯೊಳಗಿತ್ತು
ಗುಡಿಸಲು ಗುಡಿಸಲ ತಬ್ಬಿತ್ತು

ಸಣ್ಣಸಂಗತಿಗು ಕೂಗಾಡುವ ಕುಣಿಯುವ
ಹೆಂಗಸರಾ ಪಡೆ ಅಲ್ಲಿತ್ತು
ಮಾಜೀ ರೌಡಿಯ ಕುಂಟು ನಡಿಗೆಯಲಿ
ಪೋಲೀಸರ ಏಟಿನ ಗುರುತಿತ್ತು

ಓಟಿನ ಕಾಲದ ಲೈಟಿನ ಕಂಬ
ಕತ್ತಲೆ ಚೆಲ್ಲಿತ್ತು
ಮನೆಗಳ ಮುಂದೆ ಹರಿಯುವ ಮೋರಿಗೆ
ತೂರಾಡುವ ಜನ ಬಿದ್ದಿತ್ತು

-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು