You are hereಕೆಂಪು ಸೂರ್ಯ
ಕೆಂಪು ಸೂರ್ಯ
ಎಲ್ಲಿದ್ದರೋ ಅವರು ಯಂಗಿದ್ದರೋ ಅವರು
ಎಚ್ಚೆತ್ತ ಸಿಂಹಗಳು ನನ್ನ ಜನರು
ಎಷ್ಟು ಲೋಕದ ಕನಸ ಕಾಣುತಿದ್ದರೋ ಅವರು
ಎದ್ದ ಬಿರುಗಾಳಿಗಳು ನನ್ನ ಜನರು
ಯಾವ ಮಾಯದ ನಿದ್ದೆ ಕವಿದಿತ್ತು ಇವರನ್ನು
ಯಾವ ಉಕ್ಕಿನ ಸರಳು ಬಿಗಿದಿತ್ತು ಇವರ
ಯಾವ ಬಣ್ಣದ ಬೀಗ ಮುಚ್ಚಿತ್ತು ಬಾಯನ್ನು
ಯಾವ ಮೋಡದ ಹಿಂಡು ತಡೆದಿತ್ತು ಬೆಳಕ
ಸಾಹುಕಾರರ ಬಲೆಗೆ ಪಾರಿವಾಳಗಳಂತೆ
ಸಿಕ್ಕಿ ಸುಸ್ತಾದಂಥ ನನ್ನ ಜನರು
ಎಲ್ಲರೂ ತಲೆಯೆತ್ತಿ ಬಲೆಯೊಡನೆ ಹಾರಿದರು
ಎದುರಾದ ಮೋಡಗಳ ಸೀಳಿಕೊಂಡು
ದಟ್ಟ ಅಡವಿಯ ನಡುವೆ ಬಿದ್ದಂಥ ಬೀಜಗಳು
ಹೂವಾಗಿ ಊರೊಳಗೆ ಬಂದವಲ್ಲೋ
ಹೂವ ಮುಡಿಯುವ ಧೈರ್ಯ ಊರ ದೇವತೆಗಿಲ್ಲ
ಕ್ರಾಂತಿಕನ್ಯೆಯ ಕಣ್ಣ ಸೆಳೆದವಲ್ಲೊ
ಇಪ್ಪತ್ತು ಅಂಶಗಳ ಒಪ್ಪೊತ್ತಿನೂಟದಲಿ
ಸೊರಗಿ ಉಚ್ಚಳ್ಳು ಕಡ್ಡಿಯಾಗಿ
ಬೆಂದು ಬಳಲಿದ ಜನರು ಕೆಂಪು ಸೂರ್ಯನ ಕಂಡು
ಹಬ್ಬದೂಟಕೆ ಎದ್ದು ನಿಂತರಲ್ಲೊ
-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು
- Login or register to post comments
- Email this page