You are hereಕಪ್ಪು ದೇವತೆಯ ಕಣ್ಗಾವಲು

ಕಪ್ಪು ದೇವತೆಯ ಕಣ್ಗಾವಲು


ಪ್ರೀತಿಯ ಗಂಗೆ ಹರಿಯುತಲಿರಲಿ
ಅಂತರಂಗದ ಕಣಿವೆಯಲಿ
ಮೈತ್ರಿಯ ಮಲ್ಲಿಗೆ ಪರಿಮಳವ ಬೀರಲಿ
ಎದೆಯಾಳದ ಹೂದೋಟದಲಿ

ದೀಪದ ಹುಳುಗಳು ದಾರಿಯ ತೋರಲಿ
ಕಗ್ಗತ್ತಲ ಈ ಕಾಡಿನಲಿ
ಪಾರಿವಾಳಗಳು ಪುಳುಕದಿ ಹಾರಲಿ
ಭಯದಲಿ ನಲುಗಿದ ಬಾನಿನಲಿ

ಉರಿಯಿದೆ ವಿಷವಿದೆ ಇರಿಯುವ ಅಲಗಿದೆ
ಎನ್ನುವ ಅಂಜಿಕೆ ಈಗೇಕೆ
ಕನಸು ಕವಿತೆಗಳ ಹುಣ್ಣಿಮೆಯಿರಲು
ಮುಂದಿನ ದುಗುಡದ ಮಾತೇಕೆ

ಮಣ್ಣಿನ ಋಣದಲಿ ಕಣ್ಣನು ತೆರೆದೆವು
ಬೆಳೆದೆವು ಬೆಳಕಿನ ಕರುಣೆಯಲಿ
ಕಪ್ಪು ದೇವತೆಯ ಕಣ್ಗಾವಲಿನಲಿ
ಅರಳಲಿ ಚೇತನ ಬಾಳಿನಲಿ

-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು