You are hereಕಪ್ಪು ಕಾಡಿನ ಹಾಡು

ಕಪ್ಪು ಕಾಡಿನ ಹಾಡು


ಹರಕೆ ಹೊತ್ತರು ಹೊಸ ಹೆಣ್ಣು ಗಂಡು
ಒಂದು ಮಗುವಾಗಲೆಂದು
ರಾತ್ರಿಗಳ ಯಾತ್ರೆಯನು ಮಾಡಿದರು
ಮುಳುಗಿ ಎದ್ದರು ಪ್ರೇಮಕಾಮಗಳ
ಗಂಗೆ ಕಾವೇರಿಗಳಲಿ
ಹಸಿದು ಹೋರಾಡಿದರು
ಹೂವು ಕಬ್ಬಿಣವಾಗಿ ಕಬ್ಬಿಣವು ಕೆಂಪಾಗಿ
ಹಲವು ರೂಪಕೆ ಸಿಕ್ಕಿ
ಸೊಕ್ಕೇರಿ ಕುಣಿವ ತನಕ
ಮೂಳೆ ಲಟಲಟವಾಗಿ ಮಯ್ಯೆಲ್ಲ ಮಳೆಯಾಗಿ
ಜೀವ ಕಾರಂಜಿ ತೋಟದಗಲಕು ಚಿಮ್ಮಿ
ಹರಿವ ತನಕ
ಸಂಕೋಚಗಳಿಗಿರುವ ಹೊರಗಾದರು
ಚುಂಬನದ ಚಂದಕ್ಕೆ ಬೆರಗಾದರು

ಊರಂಚಿನಲ್ಲಿ ಜೋಪಡಿಯಲ್ಲಿ
ಅಳುವ ಹಾಡುವ ಸದ್ದು
ಸೂರಿಗೆ ಬಿಗಿದ ಹಗ್ಗ ತೂಗುವ ತೊಟ್ಟಿಲಿನಲ್ಲಿ
ಹೊಳೆವ ಅರಳುವ ಒಂದು ಕಪ್ಪು ಹೂವು
ತಿಪ್ಪೆಗುಂಡಿಯ ಕಡೆ ಹೋದ ಹುಡುಗರನ್ನು
ಚಪ್ಪಾಳೆ ತಟ್ಟಿ ಕರೆವ ದೆವ್ವಗಳ ಗುಂಪು
ಕಳ್ಳರಾಕಾರದಲಿ ತೇಲಿ ಬರುವ ಮೋಡಗಳ ಹಿಂಡು
ದೂರದಲಿ ಯಾರದೋ ಹೊಲದಲ್ಲಿ ಅಂಗಸಾಧನೆಯಲ್ಲಿ
ತೊಡಗಿರುವ ಕೊಲೆಗಡುಕರು
ಸುಡುಗಾಡಿನಲಿ ಹುಟ್ಟಿ ಸುತ್ತೆಲ್ಲ ಮೊಳಗುವ
ಸತ್ತವರ ಹಾಡು
ಆಕಾಶದಿಂದ ನೆಲಕ್ಕೆ ಚಕ್ಕನೆ ಜಿಗಿದು
ಜನದ ಮುಂದೆ ಕುಣಿದು
ಕಾಸುಕಿತ್ತು ಮುಗಿಲಲ್ಲಿ ಮರೆಯಾಗುವ
ಜುಂಜಪ್ಪ ಕುರ್ ಮಾಮಾಗಳ ಪಡೆ
ಆಗಾಗ ಬರುವ ಗುರು
ಭಯಭಕ್ತಿಯನು ಹಂಚಿ
ಮಿಂಚುವನು ಮರದಡಿಯಲ್ಲಿ
ದಿನವೂ ಬರುವ ಯಜಮಾನ
ದೂರದಲೇ ನಿಂತು ಗರ್ಜಿಸಿ
ಅಟ್ಟುವನು ಕೆಲಸಕ್ಕೆ ಆಳುಗಳನು

ನಡು ಹಗಲಿನಲ್ಲಿ ಕಪ್ಪುಮೋಡವು ಕೆರಳಿ
ಪುಕ್ಕಲು ಸೂರ್ಯನನ್ನು ಓಡಿಸಿಕೊಂಡು ಹೋಗಿ
ಜಗವೆಲ್ಲ ಕತ್ತಲಾಗಿ ಆಕಾಶ ಅಲುಗಾಡಿ ಅತ್ತು
ದಿನವೆಲ್ಲ ಮಳೆಯಾಯಿತು
ಕೂಲಿ ಕಂಬಳಕ್ಕೆಂದು ಮನೆಬಿಟ್ಟು ಹೋದ
ಅಪ್ಪ ಅವ್ವಂದಿರು ಹಿಂತಿರುಗಿ ಬರದೆ
ಮಕ್ಕಳಿಗೆ ಗೋಳಾಯಿತು

ಓಡಿ ಹೋದವನು ಮತ್ತೆ ಬಂದ
ಆಕಾಶಕ್ಕೆಸೆದ ಕಿತ್ತಲೆಯಂತೆ ತಕತಕನೆ ಕುಣಿದ
ಹಟ್ಟಿ ಹುಡುಗರು ಎದ್ದು ಮಳೆಯ ನೀರಿಗೆ ಇಳಿದು
ಮುಖ ತೊಳೆದು ಮನೆಕಟ್ಟಿ
ಸೇತುವೆಗಳ ನಿರ್ಮಿಸಿದರು

ಹಳೆಯಕಾಲದ ಹರಿದ ಗುರುಛತ್ರಿ
ಬಿಚ್ಚಿದರೆ ಗದೆ ಮುಚ್ಚಿದರೆ ಕತ್ತಿ
ಬಸವಣ್ಣ ಸರ್ವಜ್ಞ ಕನಕನುಡಿ ಬಳ್ಳಿಯನು
ನೆಟ್ಟರೆದೆಗೆ
ಕಪ್ಪು ಹುಡುಗನು ಕಂಡ
ನಕ್ಷತ್ರ ಕಿತ್ತ ಕನಸು
ಏಳೇಳು ಲೋಕವನು
ಸುತ್ತಿಳಿದ ಕನಸು

ಸಂಚಾರಕಾಯಿತು ಸಂಚಕಾರ
ತೆರೆದರೂ ಮುಚ್ಚಿರುವ ಗುಡಿ ಹೋಟೆಲು
ಇದ್ದರೂ ಸಿಗಲಿಲ್ಲ ಕೊಳದ ನೀರು
ಅಪ್ಪ ಅವ್ವನ ಒಡನಾಟದಲ್ಲಿ
ಧಣಿಯ ಕೊಟ್ಟಿಗೆಯಲ್ಲಿ ಹಬ್ಬದೂಟ
ಹೊಲೆತನದ ಬೆಂಕಿಯಲ್ಲಿ
ಸುಟ್ಟುಹೋದವು ಎದೆಯ ಹೂವು

ಈ ಊರ ಗುಡಿ ಗೋಪುರಗಳಿಗೆ ಬೆಂಕಿಹಚ್ಚಿ
ನನ್ನ ಸುಟ್ಟಂತೆ ಇವರನ್ನೂ ಸುಡಬೇಕು
ಉಳ್ಳವರ ಅಟ್ಟಹಾಸಕ್ಕೆ ಚಟ್ಟ ಕಟ್ಟಿ
ಸುಡುಗಾಡಿನಲ್ಲಿವರ ನೆಡಬೇಕು
ಎಂದು ಈ ಹುಡುಗ ಹೊರಟ
ಕಪ್ಪು ಕಾಡಿನ ಕಡೆಗೆ
ಜನದ ಕಡೆಗೆ

-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು