You are hereಕನ್ನಡವ್ವನಿಗೆ
ಕನ್ನಡವ್ವನಿಗೆ
ಯಂಗೆ ಹೇಳಲಿ ತಾಯಿ
ನಿನ್ನ ಗೌರ್‍ಯ?
ವಿಜಯನಗರದ ಹೆಬ್ಬಾಗಲಲಿ
ಇರುವೆ ಸಾಲಲ್ಲೆ ನಿನ್ನ ಬಳಗ
ತಲೆ ಮಗುಚಿ ಕಯ್ಯೊಡ್ಡಿದ ಲಕ್ಷಲಕ್ಷ ಜನಕೆ
ಭಿಕ್ಷ ಹಾಕಿದ ಕೃಷ್ಣದೇವರಾಯನೆಂಥ ಮಾನುಭಾವ
'ಮುತ್ತುರತ್ನಗಳನು ಬಳ್ಳದಿಂದ ಅಳೆದು ಮಾರಿದ'
ವ್ಯಾಪಾರಿಗಳು ನಿನಗೆ ಬಂಗಾರದಲಿ ಸಿಂಗಾರ ಮಾಡವ್ರೆ
ನಿನದೆಂಥ ಪುಣ್ಯ ತಾಯೇ
ರಾಜಗುರುಗಳನ್ನು ಯಣಕಿಂತ ಚೆನ್ನಗಿ ಹೊರುವೋರು
ರೆಡಿಯಾಗಿ ನಿಂತ ನಿನ್ನದು ತ್ಯಾಗಿಗಳ ನಾಡು
ಭೂಸುರರಿಗೆ ಅಗ್ರಹಾರದಲಿ ಸರಬತ್ತು ಕೊಟ್ಟ
ಯಂಥ ಜನಸೇವೆ!
ಸೂಳೆಯರಿಲ್ಲದ ನಾಡೊಂದು ನಾಡೆ?
ಹದವಾದ ಚರ್ಮದ ಹರಾಜಿಗಿಟ್ಟು ಜನವ ಬದುಕಿಸಿದ
ಕರ್ನಾಟಕ ರತ್ನಸಿಂಹಾಸನಾಧೀಶ್ವರರ
ಕನಸಿನಲಿ ಕಂಡು ಸಲುಗೆಯ ಮಾತಾಡಿದವೆಳೆ
ನಿನ್ನ ಕೀರ್ತಿ ಕಡಿಮೆಯೇನೆ?
ರೈತರ ಬೆವರ ನೆಕ್ಕಿ ನೆಕ್ಕೂದಿದ
ಜಮೀನುದಾರರ ಜೊತೆಗಾತಿ
ಕಾರ್ಮಿಕರ ರಕ್ತದ ರವೆವುಂಡೆಯ ಉಂಡು ಕಾರಿನ
ಹಾರನ್ನಿನಂತೆ ತೇಗುವ ಮಾಲೀಕರ ಮಿಂಡಗಾತಿ
ಎಲ್ಲೆಲ್ಲು ನೀನೆ, ನಿನ್ನ ಮಕವೆ
ಕುಣಿಸುತ್ತಾರೆ ಮ್ಯರಸುತ್ತಾರೆ
ಯಂಗೆ ಬಿಡಸಲೆ ನಿನ್ನ
ಯಂಗೆ ಕಯ್ಯೆತ್ತಿ ಮುಗಿಯಲೆ ನಿಂಗೆ?
-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು
- Login or register to post comments
- Email this page