You are hereಕಂಡೆ ನನ್ನವಳ ಒಂದು ದಿವಸ

ಕಂಡೆ ನನ್ನವಳ ಒಂದು ದಿವಸ


ಕೊಲೆಯ ಹಿಂದಿನ ರಾತ್ರಿ ಸೂರ್ಯ ಚಂದ್ರರ ಹಿಡಿದು
ಹಣದ ಪೆಟ್ಟಿಗೆಯಲ್ಲಿ ಕೂಡಿಟ್ಟರು
ಭಾರತದ ಬಾವುಟವ ಸುತ್ತಿ ಬಾಯಿಗೆ ತುರುಕಿ
ಕಿತ್ತುಕೊಂಡರು ಅವಳ ಮಾತುಗಳನು

ಕತ್ತಿಯನು ಹಿಡಿದವರು ಹತ್ತಾರು ಜನನುಗ್ಗಿ
ಎತ್ತಿಕೊಂಡರು ಅವಳ ಹಣ್ಣಿನಂತೆ
ಮುಖಕೆ ತುಬಕನೆ ಉಗಿಯಬೇಕೆನಿಸಿತವಳಿಗೆ
ಮುಖಗಳೇ ಇರಲಿಲ್ಲ ಬಂದವರಿಗೆ

ಸಪ್ತಸಾಗರವೆದ್ದು ಬರಸೆಳೆದುಕೊಂಡಂತೆ
ಕಾಮುಕರ ಸರಪಳಿಗೆ ಒಳಗಾದಳು
ಬೇಟೆಗಾರರು ಎಸೆದ ಬಲೆಯೊಡನೆ ಸೆಣಸುತ್ತ
ಪಂಜುಗಳ ಪಹರೆಯಲಿ ಮರೆಯಾದಳು

ಅವಳ ಬಾಳಿನ ಬಳ್ಳಿ ಉಕ್ಕಿನಪ್ಪುಗೆಯಲ್ಲಿ
ರಕ್ತವನು ಬಸಿಬಸಿದು ನೆಲಕುರುಳಿತು
ಕತ್ತಲೆಯ ರಾಕ್ಷಸರು ಪಣಕಟ್ಟಿ ಆಡಿದರು
ಕಣ್ಣಿನುಂಡೆಗಳ ಗೋಲಿಯಾಟ

ತಾಳಿಯನು ತೂಗಿದರು ಕುಡಿದು ಕೂಗಾಡಿದರು
ಮಾರವಾಡಿಯು ಅದಕೆ ಇಟ್ಟ ಬೆಲೆಗೆ
ಮಯ್ಯ ದಳಗಳನೆಲ್ಲ ಒಂದೊಂದನೇ ಹೊಸಗಿ
ಹೊತ್ತು ಹೊರಟರು ಅವಳ ಎತ್ತಲೋ?

ಕಂಡೆ ನನ್ನವಳ ಒಂದು ದಿವಸ
ಕಂಡೆ ನನ್ನನು ನಾನೆ ಕನ್ನಡಿಯಲಿ

-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು