You are hereಒಂದು ಪದ

ಒಂದು ಪದ


ಇಕ್ರಲಾ ವದೀರ್‍ಲಾ
ಈ ನನ್ ಮಕ್ಕಳ ಚರ್ಮ ಎಬ್ರಲಾ
ದೇವ್ರು ಒಬ್ನೇ ಅಂತಾರೆ
ಒಣಿಗೊಂದೊಂದ್ ತರಾ ಗುಡಿ ಕಟ್ಟವ್ರೆ
ಎಲ್ಲಾರು ದೇವ್ರ ಮಕ್ಳು ಅಂತಾರೆ
ಹೊಲೇರ್ನ ಕಂಡ್ರೆ ಹಾವ್ ಕಂಡಂಗಾಡ್ತಾರೆ
ಹೋಟ್ಲು, ಬಾವಿ, ಮನೆ ಯಾವುದ್ಕೂ ಸೇರ್‍ಸಲ್ವಲ್ರೊ
ನಮ್ ಹೇಲ್ ತಿನ್ನೋ ನಾಯ್ನ ಕ್ವಾಣಿವಳೀಕ್ ಬುಟ್ ಕತ್ತಾರೆ
ನಾವ್ ಬೆಳೆದತ್ ತಿಂತಾರೆ ನಾವ್ ದುಡಿದಿತ್ ತಗತ್ತಾರೆ
ನಾವ್ ಮಾತ್ರ ಬ್ಯಾಡಾ
ಹೊಲೇರು, ಮಾದುಗ್ರು ಅನ್ನೋ ಬದ್ಲು,
ಹರಿಜನಾ ಅಂತ ಕರ್‍ದು ನಗ್ತಾರಲ್ಲಪ್ಪೋ
ನಮ್ಯಾಲ್ ಮೀಟಿಂಗ್ ಮಾಡ್ತಾರೆ, ಕಾನೂನ್ ಮಾಡ್ತಾರೆ
ನಮ್ಮ ಯಸ್ರೇಳಿ ಹಾರ ಹಾಕ್ತಾರೆ, ಹಾಕುಸ್ಕತ್ತಾರೆ
ನಮ್ಮುನ್ನ ಉದ್ಧಾರ ಮಾಡ್ತೀವಿ ಅಂತ ಪೇಪರಲಿ
ಮೈಕೇಲಿ ಜೋರಾಗಿ ಕೂಗ್ತಾ ಅವ್ರಲ್ಲಪ್ಪೋ
ನಾವ್ ಮಾತ್ರ ಇಸ್ಕೋಲಿಗೋಗಾಂಗಿಲ್ಲ ಜೀತಕ್ಕೋಗ್ಬೇಕು
ತಲೆ ಎತ್ತಾಂಗಿಲ್ಲ - ಬಗ್ಗುಸ್ಬೇಕು
ಈ ನನ್ ಮಕ್ಳು ಕಳ್ಳಾಟ ಆಡ್ತಾ ಅವ್ರೆ ಅದಕ್ಕೇನೆ
ಇಕ್ರಲಾ ವದೀರ್‍ಲಾ ಈ ಸೂಳೆ ಮಕ್ಳ ಮೂಳೇ ಮುರೀರ್‍ಲಾ

-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು