You are hereಒಂದು ದನದ ಪದ
ಒಂದು ದನದ ಪದ
ಗೊಂತಿನ ಮುಂದೆ ನಿಲಿಸವರೆ
ಗೂಟಕೆ ನನ್ನ ಕಟ್ಟವರೆ
ಹಿಡಿಹಿಡಿ ಒಣಹುಲ್ಲ ಹಾಕಿ ತಾನೆ
ಮೆಚ್ಚಿಕೊಳ್ಳುತಾನೆ
ದೇವರಂಥ ಮನುಷ ನನ್ನೊಡೆಯ
ನನ್ನ ಬೆನ್ನ ಮ್ಯಾಲೆ ಬಾಸುಂಡೆ ಬರೆಯ ನೋಡಿ
ತನ್ನ ಬಲಕೆ ತಾನೆ ಮೆಚ್ಚಿ ಕೊಳ್ಳುತಾನೆ
ರಾಜನಂಥ ವ್ಯಗುತಿ ನನ್ನ ಧಣಿ
ಕೊಟ್ಟಿಗೇಲಿ ಕಟ್ಟಿ ನನ್ನ ಮಾತೆ ಮಾತೆ ಅನ್ನುತಾರೆ
ಮಾತಿಗೊಂದು ತೂಕ ಬ್ಯಾಡವ?
ಗಟ್ಟಿಹಾಲ ಕರೆದರೂನೆ ಹಾಲಿಗೆಲ್ಲ ನೀರಬೆರಸಿ
ಮಾರುತಾರಲ್ಲೊ ಮುಂದೇನೆ ಮಾರುತಾರಲ್ಲೊ
ಗಾಡಿದೊಂದು ಮರದ ತೂಕ ಇವರದೊಂದು ಭೀಮತೂಕ
ಹೆಜ್ಜೆ ಹಾಕೊ ಬಸವಣ್ಣ ಅನ್ನುತಾರಲ್ಲೊ
ಶಂಕರಾತ್ರಿ ಹಬ್ಬದೊಳಗೆ ಬೆಂಕಿಮ್ಯಾಲೆ ಹಾರಬೇಕು
ತಿಗವತೊಳೆದಿದ್ದರೂನೆ ಕೊಂಬಿಗೆಲ್ಲ ಹೂವಸಿಗಿಸಿ
ತಳ್ಳುತಾರಲ್ಲೊ ಬೆಂಕಿಗೆ ತಳ್ಳುತಾರಲ್ಲೊ
-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು
- Login or register to post comments
- Email this page