You are hereಈ ದೇಶದ ಸೆರೆಮನೆ
ಈ ದೇಶದ ಸೆರೆಮನೆ
ಓ ಗೆಳೆಯ!
ಕೋಳ ತೊಡಿಸಿಕೊಂಡ ಸೋದರ
ಕನಸು ಚಿಂತನೆಯ ಕಗ್ಗೊಲೆಯ ಈ ಮನೆಯಲ್ಲಿ
ರಕ್ತ ಉಕ್ಕು ದುಡಿಮೆಯ ಬಯಲಿನ ಮೇಲೆ
ಮುತ್ತು ಮೀನುಗಳ ಸಾಗರದ ತೀರದ ಮೇಲೆ
ದಂಡಿನ ಎಣ್ಣೆಯ ಬಂದರಿನಲ್ಲಿ
ಯುದ್ಧದ ಹಡಗುಗಳಲ್ಲಿ
ಭತ್ತ ಟೀ ಗೊದುಮೆಯ ಭೂಮಿಯಲ್ಲಿ
ಕುರಿ ಮಂದೆಯ ಸಂದಿಗಳಲ್ಲಿ
ಓ ಗೆಳೆಯ!
ಕೋಳ ತೊಡಿಸಿಕೊಂಡ ಸೋದರ
ನಾವು:
ಬರಲಿರುವ ಬಿರುಗಾಳಿಯ ಕೂಡಿಕೊಂಡ ಮೋಡಗಳು
ಇದ್ದಕ್ಕಿದ್ದಂತೆ ಎದ್ದೇಳುವ ಬಿರುಗಾಳಿಯ ಸಂಗೀತಗಳು
ಗೆಜೆಲ್ ಕಲೇ ಇವಿನ್ ಹಿಸಾರ್ ಗಳ
ಕೊರೆಯುವ ಕತ್ತಲ ಕೋಣೆಯಲ್ಲಿದ್ದರೂ
ನಾವು ಸೊರಗಿದ ಸೆರೆಯಾಳುಗಳಲ್ಲ
ಬಂದಿಗಳೇ ಬೇರೆ ಸೆರೆಮನೆಗಳೇ ಬೇರೆ
ಈ ನೆಲದ ಬಂದಿಗಳು ಯಾರೆಂದರೆ;
ಕಾರ್ಖಾನೆ ಹೊಲಗಳಲ್ಲಿ ಸುತ್ತಿದ ಸರಪಳಿಗಳಲ್ಲಿ
ಯಜಮಾನರ ಸುಖಕ್ಕಾಗಿ ಜೀವಗಳನು ತೇದವರು
ಬೆವರು ಸುರಿಸಿ ಬೆಂದವರು
ಈ ನೆಲದ ಬಂದಿಗಳು
ಬಂದೂಕ ಬಂಗಾರದ ಗೂಢಾಚಾರರು
ಈ ದೇಶದ ರಾಜರು
ಗುಡ್ಡೆಗುಡ್ಡೆಯಾಗಿ ಬಯಲಿನಲ್ಲಿ ಚೆಲ್ಲಿಹೋದ ಮನೆಗಳು
ಈ ನಾಡಿನ ನಿಜವಾದ ಜೈಲುಗಳು
ಸ್ವಾತಂತ್ರ್ಯದ ಕೂಗಿನಲ್ಲಿ ಮತ್ತು ಗುಲಾಮಗಿರಿಯಲ್ಲಿ
ಇಕ್ಕಟ್ಟಿಗೆ ಸಿಕ್ಕೆದೆ ಇರಾನ್
ಎಂದೆಂದೂ ನಾವು:
ಬಿರುಗಾಳಿಯ ಒಂದಾಗುವ ಮೋಡಗಳು
ನುಗ್ಗಿ ಬರುವ ಬಿರುಗಾಳಿಯ ರಭಸ ಸಂಗೀತಗಳು
ಧಗಧಗಿಸುವ ಬೆಂಕಿಯ ಬೆಳಕಲ್ಲಿ
ನಮ್ಮ ಚರ್ಮಕ್ಕಂಟಿದ ಗಾಯಗಳ
ಸುಡುವ ಎದೆಯ ಹಾಡಿನಲ್ಲಿ
ಬಿಡುಗಡೆ
ಓ ರಕ್ತಸಿಕ್ತ ಪರಿವರ್ತನೆಯೇ
ಓ ಮುಂಗಾಣುವ ಕ್ರಾಂತಿಯೇ
(ಇರಾನಿನ ಕವಿ ಸುಲ್ತಾನ್ ಪುರ್ ಅವರ ಪದ್ಯದ ಅನುವಾದ)
-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು
- Login or register to post comments
- Email this page