You are hereಈ ದೇವರುಗಳು

ಈ ದೇವರುಗಳು


ಅರೆ ಡೋಲಿನಬ್ಬರಕೆ ಮುಗಿಲುದ್ದ ನೆಗೆದು
ಕೇಕೆಯನು ಹಾಕುತ್ತ ಕುಣಿದು ಕುಪ್ಪಳಿಸಿ
ಇನ್ನೂ ಬರಲಿಲ್ಲೆಂದು ತಂಗಿ ಕರಿಯಮ್ಮ
ಕಣ್ಣೀರ ಮಿಡಿವನು ವೀರಾಂಜನೇಯ

ಗಾಳಿ ಮಳೆ ಚಳಿಯಿಂದ ದೇವರುಳಿಯಲಿ ಎಂದು
ಗುಡಿಯ ಕಟ್ಟಲು ಹೋದ ಭಕ್ತರನು ತಡೆದು
ಊರ ಜನರೆಲ್ಲರಿಗು ಸೂರು ಸಿಕ್ಕುವವರೆಗು
ತನಗೆ ಗುಡಿ ಬೇಡೆಂದ ಈ ಕೆಂಚರಾಯ

ಕುಸಿದ ಕಂದನ ಕಣ್ಣ ಬೆಳಕಾರುವುದ ಕಂಡು
ಹಸುಗೂಸನೊಯ್ಯಿರೋ ಆಸ್ಪತ್ರೆಗೆಂದು
ಕಳೆದ ಕಂದನ ಜೀವ ಮರಳಿ ತಂದಾಕೆ
ಎಲ್ಲಮ್ಮ ತಾಯಿ ಅವಳೆಲ್ಲಿಯವಳು

ಭಕ್ತಾದಿಗಳ ಬವಣೆ ಪರಿಹರಿಸದಿದ್ದರೆ
ಉರಿವ ಮೆಣಸಿನ ಘಾಟು ಸಹಿಸುವುದು ಹೇಗೆಂದು
ಕುದುರೆ ಮೇಲಿದ್ದರೂ ಬೆದರಿ ಕಂಗಾಲಾದ
ಸಗಣಿ ರಂಗನು ಯಾವ ಮೂಲದವನು

ಸಂಸ್ಕೃತವ ತಿಳಿಯದ ಸ್ವರ್ಗದಲಿ ನೆಲೆಸದ
ಕಪ್ಪು ದೇವತೆಗಳು ಬರಿಗಾಲಿನವರು
ಬೆರಗೆ ಸಿರಿಯಾಗಿದ್ದ ನಮ್ಮ ಹಿರಿಯರ ಕನಸು
ಮೈಯ್ಯಾಗಿ ನಮ್ಮೊಡನೆ ಬಾಳುವರು

-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು