You are hereಆಸೆ
ಆಸೆ
ಭರತ ಮಾತೆಯ ಪ್ರೀತಿ ತುಂಬಿ ಹರಿಯುತ್ತಿರಲು
ಕಾವೇರಿ ಗಂಗೆಯರ ರೂಪದಲ್ಲಿ
ರಾಷ್ಟ್ರಧ್ವಜವನು ನೋಡಿ ರಾಷ್ಟ್ರಗೀತೆಯ ಹಾಡಿ
ಪುಳಕಗೊಳ್ಳಲಿ ಎಳೆಯ ಬಾಲರೆಲ್ಲ
ದಾಳಿಗಳ ನೋವಿನಲಿ ಬಂಧನದ ಬವಣೆಯಲಿ
ಬಸವಳಿದ ಈ ತಾಯ ಮಕ್ಕಳೆಲ್ಲ
ಜಾತಿ ಮತ ಭಾಷೆಗಳ ಭೇದದಲಿ ಮೈಮರೆತು
ಗುರುತಿಲ್ಲದವರಂತೆ ಬಾಳಬಹುದೆ
ಬಿಸಿಲು ಬಿರುಗಾಳಿಯಲಿ ಕಂಗೆಡುವ ಧಗೆಯಲ್ಲಿ
ಅನುಗಾಲ ಜೊತೆಗೂಡಿ ಸಾಗಿದವರು
ಯಾರು ವಿಷ ಹಿಂಡಿದರೊ ಯಾವ ಮಾಟದ ಫಲವೊ
ದ್ವೇಷ ದಳ್ಳುರಿಯಲ್ಲಿ ಬೀಳಬೇಕೆ
ಎಚ್ಚೆತ್ತ ಜನಕೋಟಿ ದನಿಯೆತ್ತಿ ಹಾಡಿರಲಿ
ಒಡಕುಗಳ ಕತ್ತಲೆಯು ಕಳೆಯಿತೆಂದು
ಜನಮನದ ತೋಟದಲಿ ಐಕ್ಯತೆಯ ಹೂವರಳಿ
ಜೀವಕಳೆ ಮತ್ತೊಮ್ಮೆ ಮೂಡಿತೆಂದು
-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು
- Login or register to post comments
- Email this page