You are hereಅಲ್ಲೆ ಕುಂತವರೆ
ಅಲ್ಲೆ ಕುಂತವರೆ
ಒಂದಾನೊಂದು ಊರು
ಊರಿಗೆ ಮಳೆಯಿಲ್ಲ
ಬೂಟಿನ ಸದ್ದು ಗುಂಡಿನ ಸದ್ದು
ಕತ್ತಿಯ ತಿವಿತ ಕೂಗಾಟ
ಊರಿಗೆ ಬೆಳೆಯಿಲ್ಲ
ಮಳೆರಾಯ ಕ್ವಾಪದಲಿ ದೇಸಂತರಾ ಹೋಗಿ
ಅಂದಾವೆ ಹೋಯಿತಲ್ಲೊ
ನಗುತಿದ್ದ ಮಲ್ಲಿಗೆಯ ಮಕದಲ್ಲಿ ಕಳೆಗುಂದಿ
ಚಂದಾವೆ ಹೋಯಿತಲ್ಲೊ
ಬಡವನ ದನವೊಂದು ಸಗಣಿಯ ಇಕ್ಕಾದೆ
ನೆಲವ ತಾರಿಸಲಿಲ್ಲ
ಮದುವೆಯ ಮನೆಯಲ್ಲಿ ವಡವೇಯ ಮಾತೇರಿ
ಹಸೆಗೆ ಕೂರಿಸಲಿಲ್ಲ
ಅನ್ನ ನೀಡದೆ ಹೋದ ನೂರಾರು ದೇವರು
ಹೋದಾವು ಬಿದ್ದಾವು ಪಾಳುಬಾವಿ
ಅನ್ನ ನೀಡದ ದೊರೆಯ ದರಬಾರು ನಿರುವಾದು
ಬಡಜನ ಬುಡುತಾರೆ ಬಾಯಿ ಬಾಯಿ
ವಟ್ಟೆಗಿಲ್ಲದ ಜನರ ವಣನೆತ್ತಿ ಮ್ಯಾಲೇರಿ
ಕುಣಿಯುತ್ತ ಬರುತಾವೆ ಕರೆಬಾಣ
ಯಾರಾನ ಕದ್ದಾರೆ ಮರುಮಾತು ಕೊಟ್ಟಾರೆ
ಬಯಲಲ್ಲಿ ನ್ಯಡಸವರೆ ಕತ್ತಿವರಸೆ
ಸುತ್ತಮುತ್ತ ಹಸಿರು ಮಳೆ
ಬೆಳೆಯುತಾರೆ ಬೆಂಕಿ ಬೆಳೆ
ಕಪ್ಪು ಜನರ ತಲೆಯ ಮ್ಯಾಲೆ
ಬಿಳಿಬಿಳಿ ಮಡಕೆ
ಪಾತಾಳದ ಆಳದಲ್ಲಿ
ಭರವಸೆಗಳ ಕೋಳದಲ್ಲಿ
ನರಳುತಾರೆ ಉರುಳುತಾರೆ
ಜನರ ಜಂಗುಳಿ
ಈ ಬಾಳಿನ ಗೋಳನೆಲ್ಲ
ಗುಡಿಸು ಬಾರೊ ಮಳೆರಾಯ
ಆಕಾಸವ ಬಗೆದು ಬಾರೊ
ಸುಕಪ್ರೀತಿಯ ಬೆಳಕು ತೋರೊ
ಸುತ್ತ ಬಿಗಿದ ಬೇಲಿಯನ್ನು
ಬಿಳಿಸು ಬಾರೊ ಮಳೆರಾಯ
ಎದೆಗಳ ಕಡಲು ಬತ್ತೋದೊ
ಬಡವರ ಕಣ್ಣಲಿ ನೀರಿಲ್ಲ
ಹುಯ್ಯೋ ಹುಯ್ಯೋ ಮಳೆರಾಯ
ಜನ ಸುತ್ತ ಮುತ್ತ ನೋಡ್ತರೆ
ಆಕಾಸ ನೋಡ್ತರೆ
ಬಡವರ ಮನೆ ಗುಂಡಿ ಬಿಂದ್ಗೆ
ಹಂಡೆ ಕಡಾಯಿಕಡ್ಗ ಎಲ್ಲ
ಯಜಮಾನ್ರ ಮನೆ ಸೇರ್ಕಂಡೊ
ರಾತ್ರಿ ಹಗ್ಲು ಅನ್ನಂಗಿಲ್ಲ
ಜೀವುಕ್ಕೆ ಗ್ಯಾರಂಟಿ ಇಲ್ಲ
ಜಮೀನ್ದಾರ್ರ ಮನೆ ಸುತ್ತ
ಗವ ಅನ್ನೊ ರಾತ್ರೆವೆಳ್ಗೆ
ಎಲ್ಲೆಲ್ಲೂ ಕಪ್ಪುಜನ
ಡೋಲ್ ಬಡ್ಕಂಡು ಪದ ಯೇಳ್ತಾ ಅವ್ರೆ
ಮಳೆ ಬರ್ದೇ ಇದ್ರೇನೆ ಚಂದ
ಅನ್ನಂಗೆ ಕುಣಿತಾ ಅವ್ರೆ
ಹುಯ್ಯೋ ಹುಯ್ಯೋ ಮಳೆರಾಯ
ಹೂವಿನ ತ್ವಾಟಕೆ ನೀರಿಲ್ಲ
ಚಂಡೂವಿನ ತ್ವಾಟಕೆ ನೀರಿಲ್ಲ
ಬೀದಿಯ ನಲ್ಲೀಲಿ ನೀರಿಲ್ಲ
ನಲ್ಲೀಗ್ ಕುಡಿಯಾಕ್ ನೀರಿಲ್ಲ
ಬಾರಪ್ಪೋ ಮಳೆರಾಯ
ನೀ ಬಂದುಯ್ಯೋ ಮಳೆರಾಯ
ಜನ ಕಾಲಿಗಡ್ಗೆ ತಪ್ಲೆ ಯಿಡಕೊಂಡು
ಅನ್ನ ನೀರು ವುಡಿಕಂಡು
ಬೀದ್ ಬೀದಿ ಸುತ್ತಾ ಅವ್ರೆ
ಯಾರಾನ ಯಾವ್ದಾನ ಗ್ವಾಡೆ ಕ್ಯಳಗೆ ಕುಂತಿದ್ರೆ
ಗಲ್ಲೀಲಿ ನಿಂತಿದ್ರೆ
ಓಡ್ ಬಂದು ಅವುರನ್ನ ಗದುರ್ಸಿ
ಗ್ವಾಮಾಳೆ ಯಿಡ್ದು
ಯಂಗುಸಾದ್ರೆ ಮಡ್ಲು ಕಾಯಿ ತಡ್ಕಿ
ಆಮ್ಯಾಲೆ ಬುಡೋರು ವಂದಷ್ಟು ಜನ
ಎಲ್ಲೆಲ್ಲೂ ಅವ್ರೆ ಅವ್ರ ಮಕವೆ
ಒಂದಿನ ಭರ್ರೋ ಅಂತ ಮಳೆ ಹುಯ್ತದೆ
ಕದ ಅಂಚಿನ ತೂತ್ನಿಂದ ಮಿಂಚು ಕುಕ್ತದೆ
ಗುಡ್ಲು ಸಿಡ್ಲು ವಡಿತದೆ
ವಬ್ಬರ ಮಾತು ವಬ್ಬುರ್‍ಗ್ ಕೇಳ್ಸಲ್ಲ
ಮಳೆ ಜೋರಾಗಿ ಬೀದಿಗಲ್ಲೀಲೆಲ್ಲ ಆಳೆತ್ರ ಹರೀತಿದ್ದಂಗೆ
ಮನೆ ಮ್ಯಾಲೂ ನುಗ್ ಬುಡ್ತು
ನಾನಂತೂ ಬಟ್ಟೆ ತರ ನ್ಯಂದೋದೆ
ಮನೆ ಮ್ಯಾಗಳ ನೀರು ರವ ರವಷ್ಟೇ ಇಂಗ್ತಿದ್ದಂಗೆ
ಕದಾನ ಯಾರೊ ಬಡಬಡ ಬಡಿಯಾಕ್ ಸುರುಮಾಡುದ್ರು
ಅದ್ರ ಜತ್ಗೆ ಕಿಟ್ಗಿ ಸೂರಿನ ಅಂಚು
ಮನೆಲಿ ಇದ್ದ ಬದ್ದ ಕಂಚು
ದಡದಡ ಅನ್ನಾಕ್ ತಿರಿಕಂಡೊ
ಕಬ್ಬುಣದ ಬೂಟುನ ಸದ್ದು
ಫಳಾರ್ ಅನ್ನೋ ಗುದ್ದು
ಮಳೆನೀರು ನನ ನೀರು
ನಾನು ನ್ಯಲಕ್ ಕಚ್ಕಂಡ್ ಬುಟ್ಟೆ
ನತ್ತೀ ಮ್ಯಾಗಳ ಅಂಚು ಕದ ಕಿಟ್ಗಿ ಕಡೀಂದ
ನಾಲ್ಕ್ ಜನ ನ್ಯಂದೋಗಿರೋ ಮನೆವಳೀಕೆ
ಪುದೀರ್‍ನೆ ತೂರ್ ಬಂದ್ರು
ವಬ್ಬೊಬ್ಬರ್‍ಗು ಮೂರ್ ಮೂರ್ ಕಣ್ಣೂ
ಕೆಂಪು ಬಿಳಿ ಹಸ್ರು ರವರವ ಉರಿತವೆ
ಬಂದೋರೆ ಕುಂತಿದ್ದೋನ್ ಮುಂಗೈಯಿಡ್ಕಂಡು
ಕೈ ಉಳ್ಕಂಗೆ ನುಲ್ಚಿ ತ್ಯಾಂಕ್ಸೂ ಅಂದ್ರು
ಗುರ್ತು ಕೂನು ಇಲ್ದೋರು
ನಂಗೊಂದೂ ಗೊತ್ತಾಗ್ದೆ ಈಕ್ ಮೆಟ್ಟಂಗಾದೆ
ಐದು ವರ್ಷದ ಹಿಂದೆ ಓಟಿಗೆ ಬಂದೋರು
ನೋಟನ್ನು ಕೊಟ್ಟೋರು ಅಲ್ಲವೇನೊ
ಕೊಟ್ಟ ಸಾಲವ ಜನರು ಯಿಂದಕ್ಕೆ ಕೊಡದಿರಲು
ಕೈಕಾಲು ಮುರಿಯೋರು ಅಲ್ಲವೇನೊ
ಮಾತು ಕೇಳದ ಜನರ ನೇತು ಹಾಕಲು ಮರಕೆ
ಹಾವಿನ ಹಗ್ಗವ ತಂದವರು
ಮಂತ್ರಿ ಮಾನ್ಯರ ಜೊತೆಗೆ ತಂತ್ರವ ಮಾಡೋರು
ಚೂರಿಯ ಗೆಳೆಯರು ಅಲ್ಲವೇನೊ
ಗಾಂಧಿಮಹಾತ್ಮನ ವಾರಸುದಾರರು
ರಾಮ ನಾಮವ ಜಪಿಸಿ ಬಂದರಲ್ಲೊ
ಕಚ್ಚೆ ಟೋಪಿಯ ಒಳಗೆ ಹೆಗಲ ಚೋಳಿಗೆ ತುಂಬ
ಬಡವರ ತಲೆಗಳ ತಂದರಲ್ಲೊ
ವಂಡು ಅಂತ ಕೈ ಸನ್ನೆ ಮಾಡದ್ರು
ನಾ ಏಳ್ಳಿಲ್ಲ ತಲೆ ಅಲ್ಲಾಡುಸ್ದೆ
ಈ ನನ ಮಕ್ಳು ಯಿಂಗಾದ್ರೆ ದಾರಿಗೆ ಬರಲ್ಲ
ಅಂತ ವಳಗಿಂದ ಬೀದಿಗೆ ತಂದ್ರು
ಅಲಿ ನಾಗ್ರಾವು ಹಸ್ರಾವು ಯಬ್ಬಾವುಂತರ
ನೀರು ನುಲ್ಕಂಡು ಹರೀತದೆ
ನನ್ ಮಯ್ಯಿಂದ ರಕ್ತ ಯಿಂಕಿಂಕ್ರಾನೆ
ತೊಟ್ಟಿಕ್ಕಿ ಹರ್ಯೋ ನೀರು
ಬಣ್ಣಾ ಏರ್ತಾ ಅದೆ
ಆದಿ ಬೀದೀಲಿ ಆಡೋ ಹುಡುಗರ
ಪದ ಕೇಳುಸ್ತಾ ಅದೆ
ಬನ್ನಿರಿ ಆಯನ ಆನೆಕಲ್ಲ
ಬನ್ನಿರಿ ಆಡಾನ ನೀರಾಟ
ಗೆಳೆಯರೆಲ್ಲ ಕೂಡಾನ
ಕಪ್ಪೆ ಚಿಪ್ಪು ಆಡಾನ
ಕೈಲೇ ಬಾವಿ ತೋಡಾನ
ನೀರು ಬಂದಾವ ನೋಡಾನ
ಬನ್ನಿರಿ ಆಯನ ಆನೇಕಲ್ಲ
ಬನ್ನಿರಿ ಆಡಾನ ನೀರಾಟ
ಏನಿದೇನು ಚೀರಾಟ
ಏನಿದೇನು ಹೋರಾಟ
ಆಂಗನ್ಕಂಡು ವುಡುಗ್ರೆಲ್ಲ
ಬಿದ್ದಂಬೀಳ ವಾಟವಡದ್ಬುಟ್ರು
ನನ್ನಿವ್ರು ಕುಯ್ದು ಪಾಲ್ ಆಕ್ತಾ ಅವ್ರೆ ಅನ್ನುಸ್ತು
ನನ್ ಎಳ್ಡ್ ಕಯ್ಯಿ ಎಳ್ಡ್ ಕಾಲು
ಇಪ್ಪತ್ ಬೆಳ್ಳು ಸಾವ್ರಾರ್ ಕೂದ್ಲು
ಮೂಗು ಬಾಯಿ ಮೂವತ್ತೆಳ್ಡ್ ಹಲ್ಲುಗೊಳೆಲ್ಲ
ಗಾಳೀಲಿ ಆಕಾಸದ ತುಂಬಾ ಹಾರ್‍ತಾ ಅವೆ
ನನ್ ಮೂಳೇನ ಇವ್ರ ಬೂಟ್ಗಳು
ತುಳ್ದು ಪುಡ್ ಪುಡಿ ಮಾಡ್ತಾ ಅವೆ
ನನ್ಗೆ ರೋಸೋಯ್ತು
ಕಲ್ತಿದ್ದು ಕೇಳಿದ್ದು ಯಲ್ಲಾ ಮರ್‍ತೋಗಿ
ಉಳ್ಕಂಡಿತ್ತೊಂದೇ ಮಾತು
'ಧಿಕ್ಕಾರ ಧಿಕ್ಕಾರ'
ಅಂತ ಅವ್ರು ಯದ್ರಿ ಪದ್ರಗುಟ್ಟಂಗೆ ಕಿರುಚ್ ಬುಟ್ಟೆ
ಅವ್ರು 'ಎಲಾ ಇವ್ನ' ಅನ್ಕಂಡು
ಒಂದು ಉದ್ದಾಗಿರೋ ದಬ್ಳ ಟೈನಾದಾರ ತಗಂಡು
ಎಳ್ಡ್ ತುಟೀನು ಸೇರ್‍ಸಿ ವಲದ್ಬುಟ್ರು
ಬಾಯ್ ಬೀಗಾ ಹಾಕ್ಬುಟ್ರು
ಗ್ವಾಮಾಳೆ ಹಿಂಡುತಾರೆ
ತಲೆಬುಳ್ಡೆ ಜಜ್ಜುತಾರೆ
ಮಾತಿಲ್ಲದ ಗಂಟಲಿಗೆ
ವಲೆದುಕೊಂಡ ತುಟಿಗಳಿಗೆ
ಅದುಮಿ ಅದುಮಿ ತುರುಕುತಾರೆ
ಅನ್ನದ ಮಿದಿಕೆ
ಹುಟ್ಟಿದ ನಿರ್ವಾಣಕ್ಕೆ
ಸೆಣಬಿನಂಬ ಸುತ್ತಿಬಿಗಿದು
ದರದರನೆ ಎಳೆಯುತಾರೆ
ಕತ್ತಲೇಲಿ ಕೊಳ್ಳಿದೆವ್ವ
ಕೈಗಳಲ್ಲಿ ಬೆಳ್ಳಿಕತ್ತಿ
ಸುತ್ತ ನಿಂತು ಕುಣಿಯುತಾರೆ
ಕಾಡು ಕಲ್ಲು ಗಿಡ ಗುಡ್ಡ ಯಲ್ಲಾ ದಾಟುದ ಮ್ಯಾಲೆ
ಒಂದು ಬಟ್ಟಬಯಲಿಗೆ ಯಳಕಂಬಂದ್ರು
ಆ ಬಯ್ಲಿನ ಸುತ್ತಮುತ್ತ ತರತರದ ತ್ವಾಟಗಳು
ತಗ್ಗಿ ಬಗ್ಗಿ ನಗ್ತ ನ್ಯಗೀತ ನಿಂತವೆ
ಅವ್ರು ಕತ್ತೀ ತ್ವಾಟಕೆ ಹೋದಾರು
ಅಲ್ಲಿ ಚಿನ್ನದ ಕತ್ತಿ ತಂದಾರು
ಬಾಕಿನ ತ್ವಾಟಕೆ ಹೋದಾರು
ಬೆಳ್ಳಿಬಾಕ ತಂದಾರು
ಸೀಮೆಣ್ಣೆ ಬಾವಿಗಾಳು ಅಲ್ಲಿ
ಬಂದೂಕ ಬೆಳೆದವರೆ
ದತ್ತೂರಿ ಗಿಡಗಾಳು ಅಲ್ಲಿ
ಮದ್ದುಗುಂಡು ಉದುರುತಾವೆ
ಬಂದೋರ ಚಿನ್ನದ ಕತ್ತೀಲಿ ನನ್ ತಲೇನ
ನುಣ್ಣುಗೆ ಬೋಳುಸ್ತಾರೆ
ರಕ್ತಾ ತೊಟ್ಟಿಕ್ತಿರೋ ಹಣೆಗೆ ಮಂತ್ರ ಯೇಳ್ಕಂಡು
ಮೂರ್ ನಾಮಾ ಇಕ್ತಾ ಅವ್ರೆ
ನೇಣಾಕೋರಂಗೆ ಬಿಳೀ ಉರೀನ
ಜನ್ವಾರ ಅಂತ ಕುತ್ಗೇಗ್ ನ್ಯಾತಾಕ್ತಾ ಅವ್ರೆ
ನನ್ನ ಅಂತರ ಮುಕನಾಗಿ ಮಲುಗ್ಸಿ
ಚಿನ್ನದ ಕತ್ತೀಲಿ ನನ್ನೆದೆ ಮ್ಯಾಗಳ
ಕೂದಲ್ನ ಬೋಳ್ಸಿ
ಬೆಳ್ಳೀ ಬಾಕೇಲಿ ಯದೇನ
ತೂತ್ ಮಾಡುದ್ರು
ರಕ್ತ ಬುಳಬುಳನೆ ಬತ್ತಿದ್ದಂಗೆ ವೋಡೋಗಿ
ಒಂದು ಸಸಿ ತಂದು ಅಲ್ಲಿ ನೆಟ್ ಬುಟ್ರು
ಆ ಸಸಿ ನನ್ ಮೈತುಂಬ ಬೇರ್‍ಬುಟ್ಟು ಅರಳ್ತಾ ಅದೆ
ಅದು ಬಲ್ತು ಕ್ವಂಬೆ ರ್‍ಯಂಬೆ ವೂವ ಕಾಯಿ ಅಣ್ಣು
ಬುಡ್ತಿದ್ದುಗೆ ನನ್ನ ಉಸ್ರು ವಂಟೋಯ್ತು
ಒಂದಿನ ನಾನು ಸುಳ್ದಾಡ್ತಿದ್ದೆ
ಕಣ್ಣಿಲ್ಲ ಕಾಲಿಲ್ಲ ಮೈಯಿಲ್ಲ ಉಸ್ರಿಲ್ಲ
ಅದೇ ಬಯ್ಲು ಅದೇ ಮರ
ಅದೆ ಜನ ಗಿಟುಕಾಸ್ಕೊಂಬುಟ್ಟವ್ರೆ
ನಡ್ವೆ ದ್ವಡ್ದಾಗೊಂದ್ ಸ್ಟೇಜ್ ಹಾಕವ್ರೆ
ಅದ್ರ ಮ್ಯಾಲೆ ದ್ವಡ್ ದ್ವಡ್ಡೋರು
ನಗನಗ್ತಾ ಕುಂತವ್ರೆ
ಸುತ್ತಮುತ್ತ ಜನವೆಲ್ಲ ಮೂಳೆ ಚಕ್ಳ ಬುಟ್ಕೊಂಡು
ಕಚ್ಚರುಬೆ ಕಟ್ಕಂಡು
ಪದ ಯೇಳ್ತಾ ಅವ್ರೆ
ತಾಳಾ ಮೇಳ ಹಾಕ್ಕಂಡು
ಕುಣ್ದು ಕುಪ್ಪಳುಸ್ತಾ ಅವ್ರೆ
ಇವ್ರ ಸೇವೆ ದೊಡ್ಡಾದು
ಯಸ್ರಯೆತ್ತಿ ಕೊಂಡಾಡಿ
ಇವ್ರ ತ್ಯಾಗ ದೊಡ್ಡದು
ಸ್ಟೇಜಿನ ಮ್ಯಾಲಕೆ ಕರೆತನ್ನಿ
ಇವರ ಕಾರು ಬಂಗಾರ
ಗಂಧದ ಹಾರಾ ಹಾಕೀರಿ
ಇವರ ಬಂಗಲೆ ದೊಡ್ಡಾದು
ಸೀಟಿನ ಧೂಳಾ ವರಸೀರಿ
ಇವರ ಜೇಬು ಅಗಾಲ
ಭಕ್ತಿ ಭಜನೆ ಮಾಡೀರಿ
ಇವರ ಮಗಳು ದೊಡ್ಡೋಳು
ಮಾವ ದೇವ ಅನ್ನೀರಿ
ಇವ್ರ ಮೈಯಿ ದಪ್ಪಾದು
ಹೊತ್ತುಕೊಂಡು ಕುಣಿಯೀರಿ
ಮ್ಯಾಲೆ ಕುಂತಿರೋ ನಮ್ಮಪ್ಪದಿರ ಪಾದಕೆ ಗೋವಿಂದ
ಅವ್ರ ಯೆಂಡಿರ ಪಾದಕೆ ಗೋವಿಂದ
ಮಕ್ಕಳ ಪಾದಕೆ ಗೋವಿಂದ
ಅವ್ರ ತಾತನ ಪಾದಕೆ ಗೋವಿಂದ
ಮುತ್ತಾತನ ಪಾದಕೆ ಗೋವಿಂದ
ಈತರ ಇವ್ರು ಕುಣೀತಿದ್ರೆ
ಮ್ಯಾಲಿರೋರು ಇವುರ್‍ನ ನೋಡಿ
ಆನಂದ ಪಟ್ಕಂಡು ತಲೆದೂಗ್ತಾ ಅವ್ರೆ
ಇವ್ರ ಭಯಾ ಭಕ್ತೀನ
ಮನಸಾರೆ ಮೆಚ್ಕತ್ತಾ ಅವ್ರೆ
ನಾನು 'ಎಲ ಇವ್ನಾ' ಅನ್ಕಂಡು
ಸ್ಟೇಜಿನತಕಾ ಹೋದೆ
ಅಲ್ಲಿ ದ್ವಡ್ ದ್ವಡ್ ಮನಸ್ರಯಿಂದ್ಗಡೆ
ಮರೇಲಿ ಯಾರೋ ಕುಂತಿದ್ರು
ಅವುರುನ್ನ ನೋಡ್ದೇಟ್ಗೆ ನನ್ಗೆ
ಭೀತಿ ಬಡೀತು ಮಂಕು ಕವೀತು
ಅಲ್ಲೆ ದ್ವಡ್ಡ ಮನಷ್ರಿಂದೆ
ಅಲ್ಲೇ ಕುಂತವರೆ ಅವರು
ಅಲ್ಲೇ ಕುಂತವರೆ
ಬೇವಿನ ಸೊಪ್ಪು ಹಾಸವರೆ
ಬೇವಿನ ಸೊಪ್ಪು ಹೊದ್ದವರೆ
ಹಳೇ ಕ್ಯರವ ಕಾಯಿಸಿ
ಮಯ್ಯಿಗೆ ಬರೆಯ ಎಳೆಯೋರು
ಸೈಜುಕಲ್ಲು ಹೊರಸೋರು
ಹುಣಸೆ ಮರಕೆ ಕಟ್ಟೋರು
ಅಲ್ಲೇ ಕುಂತವರೆ ಅವರು
ಅಲ್ಲೇ ಕುಂತವರೆ
ನಿಂಬೇ ಹಣ್ಣು ಮಡಗವರೆ
ಬಾಣ್ತಿ ಕಯ್ಯ ಮಡಗವರೆ
ಮೂಳೇ ಜೋಳಿಗೆ ಹಾಕವರೆ
ಮೀಸೆ ಮರೆಯಲಿ ನಗುತಾರೆ
ದೊಡ್ಡ ಮನುಷರ ಹಿಂದವರೆ
ಅಲ್ಲೇ ಕುಂತವರೆ ಅವರು
ಅಲ್ಲೇ ಕುಂತವರೆ
-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು
- Login or register to post comments
- Email this page