You are hereಅಡಗೂಲಜ್ಜಿಯ ಕಥೆ
ಅಡಗೂಲಜ್ಜಿಯ ಕಥೆ
ಅಪರೂಪದ ಕೌರೊಂದು ಹಿಮಾಲಯದಿಂದ
ದಬಕ್ಕನೆ ಕ್ಯಳೀಕ್ ಬಿದ್ದು ಇತ್ ಕಡೀಕ್ ಬತ್ತಾ ಅದೆ
ಅದರ್‍ವಳಗೆ ಅಡಗೂಲಜ್ಜಿ ಕುಂತವ್ಳೆ. ಅರೀದ್ ಹುಡುಗ ಅದನ್ನೋಡಸ್ತದೆ
ಕಚ್ಚೇ ಬೊಜ್ಜು ಟೋಪಿಯೋರು ಅದರಿಂದೆ ಜೈಕಾರ ಕ್ಯಾಕ ಹಾಕ್ಕಂಡ್
ಓಡೋಡ್ ಬತ್ತಾ ಅವ್ರೆ. ಕೆಟ್ರೆ ರಿಪೇರಿ ಮಾಡ್ಕಂಡ್
ನಿಂತ್ರೆ ನೂಕ್ಕಂಡ್ ದಿಗ್ವಿಜಯಕ್ವಂಟವ್ರೆ
ಕಾಲುಂಗರ ಮಾತ್ರ ಕಂಡೋರು ಕಾರ್‍ನ ಅಲ್ಲಲ್ಲೇ ನಿಲ್ಸಿ
ಹಾರಹಾಕಿ ಅಡ್ ಬೀಳ್ತಾರೆ. ಇತ್ತ ಮೂಡಣಕ್ಕೆ ವಂಟಾಗ
ದ್ವಣ್ಣೇ ತಿರುಗ್ಸೋರ್‍ನ ಕಾಯಸ್ಥರ್‍ನ ಹಿಂದುಕ್ ನೂಕಿ
ಕಾರುಗ್ ದಾರಿ ಮಾಡ್ಕೊಡ್ತಾರೆಯ ಒಂದು ನಮಾಜ್ ಸಿಕ್ಕಿದ ಮ್ಯಾಲೆ
ಅದು ತೆಂಕಣಕ್ಕೆ ತಿರುಗ್ತದೆ
ಅಲ್ಲಿ ಒಬ್ಬ ಪೈಲ್ವಾನ್ ತ್ವಡೇ ಭುಜ ತಟ್ಕಂಡು ಒಬ್ಬ ಬಡ್ಡೀಮಗನ್ನ ಎಳ್ಕಂಡು
ಬಡಬಡನ ಓಡೋಡಿ ಅಡ್ ಬೀಳ್ತಿದ್ದಂಗೆ
ಡೊಳ್ಳೊಟ್ಟೆಕುಳ್ಳ ಹಲ್ಲುದ್ರಿದ ಅಜ್ಜ ಇನ್ನೊಬ್ಬ ಸಕ್ಕತ್ ಗೂಂಡಾ
ಇವ್ರು ಓಡ್ಬಂದ್ ಪೈಲ್ವಾನನ್ನ ಎಳೆದಾಕಿ, ನುಗ್ಗಿ,
ಅಡಗೂಲಜ್ಜಿ ಕಾಲು, ಕೈ, ಸ್ವಂಟ, ನೆರೆಕೂದ್ಲು
ಇತ್ಯಾದಿಗಳನ್ನ ನೆಕ್ಕಿ ನೆಕ್ಕಿ ಚಪ್ಪರಿಸಿ ಕ್ಯಾಕಹಾಕಿ
ಮುಂದಕ್ಕಳುಸ್ತಾರೆ
ಮುಂದಿನ ರಾಜ್ಯಕ್ಕೆ ಹತ್ತು ತಲೇ ಒಬ್ಬ ಪಾಳ್ಳೇಗಾರ
ಅವ್ನು ಸಭೆ ಒಳಗೆ ಕುಂತಿದ್ದೋನು ಸುದ್ದಿ ಕೇಳಿ ಗಕ್ಕನ್ ನಕ್ತಾನೆ
ನಾಟಕ ಕಂಪನಿಯೋರು ಹಾರ್ಮನಿ ಮೇಸ್ಟ್ರುಗಳು
ಅಜ್ಜೀಗ್ ಜೈ ಅಂತ ನುಗ್ತಾರೆ
ಪಾಳ್ಳೇಗಾರನ ಕಡೇರು ನಾಟಕದೋರ್‍ನ ರುಬ್ಬಿ ಅಪ್ಪಚ್ಚಿಮಾಡಿ
ಕರೇ ಬೀದಿಗಳಲ್ಲಿ ಬಡಕಲ ಕಾರ್‍ನ ಓಡುಸ್ಕೊಂಡೋಗಿ
ನೀರುಗ್ ಮುಳುಗುಸ್ತಾರೆ
ಅಜ್ಜಿ ಅರೆಜೀವದಲ್ ತೇಲ್ವಾಗ
ಯಾವ್ಯಾವ ದೇಸದೋರೋ ಮೀನುಗ್ ಮಂದಿದ್ದೋರು
ಬಣ್ಣ ಬಣ್ಣದ ಬೆಸ್ತರು
ಕೈ ಬೀಸಿ ಕರೀತಾರೆ
-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು
- Login or register to post comments
- Email this page