You are hereಅಗ್ನಿ ಶಾಮಕರು

ಅಗ್ನಿ ಶಾಮಕರು


ಧರೆಹತ್ತಿ ಉರಿದಾಗ ಗಂಗೆಯನು ತಂದವರು
ಕಟ್ಟಡವು ಕುಸಿದಾಗ ಹೆಗಲು ಕೊಟ್ಟವರು
ಕೆರೆಗೆ ಬಿದ್ದವನನ್ನು ಬಿಗಿದಪ್ಪಿ ತಂದವರು
ಅಗ್ನಿಶಾಮಕರು ನಮ್ಮ ಸೋದರರು

ಹಗಲು ಸುಡುತಿದ್ದರೂ ನಡುರಾತ್ರಿಯಿದ್ದರೂ
ಕರೆಬಂದ ಕೂಡಲೇ ಮಡದಿ ಮಕ್ಕಳ ಬಿಟ್ಟು
ಓಡೋಡಿ ಬರುವವರು
ತಂಗಳೂಟವನುಂಡು ಹೊಗೆಯ ಕಾಡಿಗೆ ನುಗ್ಗಿ
ಹೋರಾಡುವವರು
ಹಲವು ದಿನಗಳಿಗೊಮ್ಮೆ ಕರುಳ ಕುಡಿಗಳ ಕಂಡು
ನಗೆ ಚೆಲ್ಲುವವರು
ಅಗ್ನಿಶಾಮಕರು ನಮ್ಮ ಸೋದರರು

ಜಾತಿವೈರದ ಜ್ವರವು ಏರುತಿಹುದಣ್ಣ
ಕೋಮುದ್ವೇಷದ ಬೆಂಕಿ ಉರಿಯುತಿಹುದಣ್ಣ
ಈ ಬೆಂಕಿಯಾರಿಸಲು ಪ್ರೀತಿಗಂಗೆಯು ಬೇಕು
ಎಲ್ಲರೂ ಅಗ್ನಿಶಾಮಕರಿಂದು ಆಗಬೇಕು

-
ಕವಿ - ಡಾ. ಸಿದ್ಧಲಿಂಗಯ್ಯ
ಹಕ್ಕುಗಳು: ಲೇಖಕರದು