You are hereಬಿ.ವಿ. ವೀರಭದ್ರಪ್ಪ

ಬಿ.ವಿ. ವೀರಭದ್ರಪ್ಪ


ಜನನ ೧೯೩೬ರಲ್ಲಿ, ಚಿತ್ರದುರ್ಗ ಜಿಲ್ಲೆಯ ಫಟಪರ್ತಿ ಗ್ರಾಮದ ರೈತ ಕುಟುಂಬದಲ್ಲಿ. ಚಳ್ಳಕೆರೆ, ಚಿತ್ರದುರ್ಗ, ಮೈಸೂರು ಧಾರವಾಡದಲ್ಲಿ ವಿದ್ಯಾಭ್ಯಾಸ, ಎಂ.ಎ. ಪದವೀಧರ.

ಬಳ್ಳಾರಿ, ದಾವಣಗೆರೆಯಲ್ಲಿ ಕನ್ನಡ ಟ್ಯೂಟರ್, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿರುವ ಬಿ.ವಿ. ವೀರಭದ್ರಪ್ಪ 'ದ್ವಿತೀಯ ಭಾಷಾಬೋಧನೆ' (೧೯೭೮), 'ಪವಾಡ ಪರೀಕ್ಷೆ' (೧೯೮೦), 'ಚಿತ್ರಪಲ್ಲವ' (ಜಿ.ಪಿ. ಬಸವರಾಜು ಅವರೊಡನೆ ಸಂಪಾದಿತ) ಎಂಬ ಪುಸ್ತಕಗಳನ್ನು ರಚಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಇವರು ೧೯೭೦ರಲ್ಲಿ ದಾವಣಗೆರೆಯಲ್ಲಿ ಸ್ಥಾಪಿತವಾದ 'ಪ್ರತಿಮಾ ಸಭಾ'ದ ಸಂಸ್ಥಾಪಕ ಸದಸ್ಯರು. ಹವ್ಯಾಸ, ಪರಿಸರ ಅಧ್ಯಯನ ಮತ್ತು ಮುಕ್ತ ಪತ್ರಿಕೋದ್ಯಮ.
("ವೇದಾಂತ ರೆಜಿಮೆಂಟ್ ಮತ್ತು ಇತರ ವೈಚಾರಿಕ ಬರಹಗಳು" ಪುಸ್ತಕದಲ್ಲಿನ ಪರಿಚಯ.)


ಕರ್ನಾಟಕದ ಅತ್ಯಂತ ಅಪರೂಪದ ವಿಚಾರವಂತರಲ್ಲಿ ವೀರಭದ್ರಪ್ಪ ಒಬ್ಬರು. ದಾವಣಗೆರೆಯ ಕಾಲೇಜೊಂದರಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ವೀರಭದ್ರಪ್ಪ ಈ ನಾಡಿನ ಮೌಢ್ಯ, ಶೋಷಣೆ, ಬೌದ್ಧಿಕ ಗುಲಾಮಗಿರಿಯನ್ನು ತಮ್ಮ ಪ್ರಬುದ್ಧ, ವೈಚಾರಿಕ ನಿಲುವಿನಿಂದ ವಿಶ್ಲೇಷಿಸಿದ್ದಾರೆ. ಪುರೋಹಿತಶಾಹಿಯ ದಬ್ಬಾಳಿಕೆ ಇಲ್ಲಿ "ವೇದಾಂತ ರೆಜಿಮೆಂಟ್" ಆಗಿದೆ. ಯುವ ಜನತೆಯಲ್ಲಿ ಸ್ಫೂರ್ತಿ ಹೊಮ್ಮಿಸಬಲ್ಲ ಈ ಪುಸ್ತಕವನ್ನು "ಪತ್ರಿಕೆ ಪ್ರಕಾಶನ" ಹೆಮ್ಮೆಯಿಂದ ನೀಡುತ್ತಿದೆ.
-ಪಿ. ಲಂಕೇಶ್
("ವೇದಾಂತ ರೆಜಿಮೆಂಟ್" ಪುಸ್ತಕದ ಹಿಂಪುಟದಿಂದ)


ಕರ್ನಾಟಕದ ಕೆಲವೇ ವಿಚಾರವಾದಿಗಳಲ್ಲಿ ಪ್ರಮುಖವಾದ ಹೆಸರು ಪ್ರೊ|| ಬಿ ವಿ ವೀರಭದ್ರಪ್ಪನವರದು. ವಿಚಾರವಾದಿ 'ಕೋವೂರ'ರ ವಿಚಾರಗಳನ್ನು ಪ್ರಥಮಬಾರಿಗೆ ಕನ್ನಡಿಗರಿಗೆ ಪರಿಚಯಿಸಿದವರು ಇವರು. ಇವರ ವಿಚಾರವಾದದ ಪ್ರಖರತೆ ಲಂಕೇಶ್ ಪತ್ರಿಕೆಯಲ್ಲಿ ಬೆಳಕು ಕಂಡವು. ಬರೆದ ಕೆಲವೇ ಕೃತಿಗಳು ಸಾಕಷ್ಟು ಚರ್ಚೆಗೆ ಒಳಗಾಗಿವೆ. 'ವೇದಾಂತ ರೆಜಿಮೆಂಟ್', 'ಧರ್ಮ ಮತ್ತು ವೈಚಾರಿಕತೆ', 'ವಾಸ್ತು ಎಷ್ಟು ವಾಸ್ತವ?', 'ಭಗವದ್ಗೀತೆ: ಒಂದು ವೈಚಾರಿಕ ಚಿಂತನೆ'... ಹೀಗೆ ಕೆಲವೇ ಕೃತಿಗಳನ್ನು ಬರೆದರು ಕೂಡ ನಮ್ಮ ನಡುವೆ ಇರುವಂತಹ ಒಬ್ಬ ವಿಚಾರವಾದಿ ಲೇಖಕರು ಇವರು.
-ಆರ್ ಜಿ ಹಳ್ಳಿ ನಾಗರಾಜ್
("ಮತೀಯವಾದ ಭಯೋತ್ಪಾದನೆ ಮತ್ತು ಧರ್ಮ" ಪುಸ್ತಕದಿಂದ)


ತಮ್ಮ 'ವೇದಾಂತ ರೆಜಿಮೆಂಟ್' ಪುಸ್ತಕದಿಂದಾಯ್ದ ಕೆಲವು ಲೇಖನಗಳನ್ನು ವಿಚಾರಮಂಟಪದಲ್ಲಿ ಪ್ರಕಟಿಸಲು ಒಪ್ಪಿಗೆಯಿತ್ತ ಶ್ರೀ. ಬಿ.ವಿ. ವೀರಭದ್ರಪ್ಪನವರಿಗೆ ವಿಚಾರಮಂಟಪ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತದೆ.