You are hereಅಂಬೇಡ್ಕರ್ ವಿಚಾರಧಾರೆ -೩ : ಬ್ರಾಹ್ಮಣರೇಕೆ ಸಸ್ಯಾಹಾರಿಗಳಾದರು?
ಅಂಬೇಡ್ಕರ್ ವಿಚಾರಧಾರೆ -೩ : ಬ್ರಾಹ್ಮಣರೇಕೆ ಸಸ್ಯಾಹಾರಿಗಳಾದರು?
ಲೇಖಕರು: ಬಿ.ವಿ. ವೀರಭದ್ರಪ್ಪ
ಹಕ್ಕುಗಳು: ಲೇಖಕರವು
ಐತರೇಯ ಬ್ರಾಹ್ಮಣದಲ್ಲಿ ಯಜ್ಞದ ವಿವರಗಳನ್ನು ಸುದೀರ್ಘವಾಗಿ ಕೊಡಲಾಗಿದೆ. ಪ್ರಾಣಿಯನ್ನು ವಾಸ್ತವವಾಗಿ ವಧಿಸುವ ಕ್ರಿಯೆಗೆ ಮೊದಲು ಅನೇಕ ಧಾರ್ಮಿಕ ಆಚರಣೆಗಳನ್ನು ಅನುಸರಿಸಬೇಕಾಗಿತ್ತು. ಬಲಿಪಶುವನ್ನು ಯೂಪಸ್ತಂಭಕ್ಕೆ ಕಟ್ಟುವುದು ಒಂದು ವಿಧಿ. ಯಜ್ಞದ ಉದ್ದೇಶಕ್ಕನು ಗುಣವಾಗಿ ನಿಶ್ಚಿತ ಮರದಿಂದ ಯೂಪಸ್ತಂಭವನ್ನು ತಯಾರಿಸುತ್ತಿದ್ದರು. ಸ್ವರ್ಗವನ್ನು ಬಯಸುವವನು ಖದಿರ ಮರದ, ದೇಹ ಬಲವನ್ನು ಬಯಸುವವನು ಬಿಲ್ವ ವೃಕ್ಷದ, ಸೌಂದರ್ಯ ಮತ್ತು ಪಾಂಡಿತ್ಯಗಳನ್ನು ಗಳಿಸುವ ಅಪೇಕ್ಷೆಯುಳ್ಳವನು ಪಾಲಶಮರದ ಯೂಪಗಳನ್ನು ತಯಾರಿಸಬೇಕು. ಯೂಪದ ಲೇಪನ ಇನ್ನೊಂದು ಮುಖ್ಯ ಕ್ರಿಯೆ. ಅನಂತರ ಬಲಿಗಾಗಿ ನಿಲ್ಲಿಸಲಾದ ಪ್ರಾಣಿಯ ಸುತ್ತ ಅಗ್ನಿ ಪ್ರದಕ್ಷಿಣೆ. ಪ್ರಾಣಿಯ ಸುತ್ತ ಅಗ್ನಿ ಯನ್ನೊಯ್ಯುವ ಕಾರ್‍ಯದ ನಂತರ ಅದನ್ನು ಬಲಿಗಾಗಿ ಪುರೋಹಿತರಿಗೆ ಒಪ್ಪಿಸುವ ಕಾರ್‍ಯ ನಡೆಯುತ್ತದೆ. ಪ್ರಾಣಿಯನ್ನು ಯಾರು ಬಲಿಗಾಗಿ ಅರ್ಪಿಸಬೇಕು? ಯಜ್ಞ ನಡೆಸುವವನ ಜೊತೆಗೆ ಅವನ ತಂದೆ, ತಾಯಿ, ಸಹೋದರ, ಸಹೋದರಿ, ಸ್ನೇಹಿತ ಮತ್ತು ಬಂಧುಗಳು ಅದನ್ನು ಬಲಿಗಾಗಿ ಒಪ್ಪಿಸಿಕೊಡಬೇಕು.
ಪ್ರತಿಯೊಬ್ಬರೂ ಯಜ್ಞಕ್ಕೆ ಬಲಿಯಾಗುವ ಪ್ರಾಣಿಯನ್ನು ಅರ್ಪಿಸುವಲ್ಲಿ ಜೊತೆಗೂಡಬೇಕೆಂಬುದನ್ನು ಗ್ರಹಿಸುವುದು ಕಷ್ಟವಲ್ಲ. ಯಜ್ಞ ನಡೆಸುವಲ್ಲಿ ಭಾಗವಹಿಸಲು ಅರ್ಹರಾದವರು ಒಟ್ಟು ಹದಿನೇಳು ಬ್ರಾಹ್ಮಣ ಪುರೋಹಿತರಿದ್ದರು. ವಾಸ್ತವವಾಗಿ ಇಡೀ ಪ್ರಾಣಿಯ ದೇಹವೇ ಅವರಿಗೆ ಬೇಕಾಗಿತ್ತು. ಪ್ರಾಣಿಯ ಇಡೀ ದೇಹ ದೊರೆಯದಿದ್ದರೆ ಈ ಹದಿನೇಳು ಮಂದಿ ಪುರೋಹಿತರಿಗೆ ಸಾಕಷ್ಟು ಹಂಚಿಕೆ ಯಾಗುವುದಾದರೂ ಹೇಗೆ? ಈ ಪ್ರಾಣಿಯ ಬಗೆಗೆ ಅಧಿಕಾರವಿರುವ ಪ್ರತಿಯೊಬ್ಬರೂ ತಮ್ಮ ಹಕ್ಕನ್ನು ಬಿಟ್ಟು ಕೊಟ್ಟಲ್ಲದೆ ಬ್ರಾಹ್ಮಣರು ಪೂರ್ಣವಾಗಿ ಅದನ್ನು ದಕ್ಕಿಸಿ ಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿಯೇ ಯಜ್ಞ ನಡೆಸುವವನ ಸ್ನೇಹಿತ ಕೂಡಾ ತನ್ನ ಹಕ್ಕನ್ನು ಬಿಟ್ಟು ಕೊಡುವಂತೆ ಸೂಚಿಸಲಾಗಿದೆ.
ನಂತರ ಆ ಪ್ರಾಣಿಯ ವಧೆಯ ಕಾರ್ಯ ಐತರೇಯ ಬ್ರಾಹ್ಮಣ ಹೇಳುತ್ತದೆ; "ಅದರ ಕಾಲುಗಳನ್ನು ಉತ್ತರದ ಕಡೆ ಚಾಚಿ. ಅದರ ಕಣ್ಣುಗಳನ್ನು ಸೂರ್ಯನ ಕಡೆ ತಿರುಗಿಸಿ. ಉಸಿರು ವಾಯುವಿಗೆ ಸೇರಲಿ... ದೇಹ ಭೂಮಿಗೆ ಅರ್ಪಿತವಾಗಲಿ.
ಇಡೀ ಚರ್ಮವನ್ನು ಸುಲಿ. ನಾಭಿಯನ್ನು ಸೀಳುವ ಮುನ್ನ ಜಠರದ ವಪೆ ಹರಿದುಹಾಕು. ಅದರ (ಬಾಯಿ ಮುಚ್ಚಿ) ಶ್ವಾಸೋಚ್ಛ್ವಾಸ ನಿಲ್ಲಿಸು. ಈ ರೀತಿಯಾಗಿ ಹೋತಾರನು ಅದರ ಉಸಿರನ್ನು ನಿಲ್ಲಿಸುತ್ತಾನೆ."
ಯಜ್ಞ ಪಶುವಿನ ದೇಹದ ಮಾಂಸವನ್ನು ಹಂಚಿಕೊಳ್ಳುವ ಬಗ್ಗೆ ಐತರೇಯ ಬ್ರಾಹ್ಮಣ ಈ ರೀತಿ ಹೇಳುತ್ತದೆ:
"ನಾಲಗೆ ಹಾಗೂ ಎರಡು ದವಡೆ ಎಲುಬುಗಳನ್ನು ಪ್ರಸ್ತೋತಾರನಿಗೆ ಕೊಡಬೇಕು. ಗಿಡುಗನಂತಿರುವ ಎದೆಯನ್ನು ಉದ್ಗಾತಾರನಿಗೆ, ಗಂಟಲನ್ನು ಪ್ರತಿಹರ್ತಾರನಿಗೆ, ಬಲಸೊಂಟದ ಕೆಳಭಾಗವನ್ನು ಹೋತಾರನಿಗೆ, ಎಡಭಾಗವನ್ನು ಬ್ರಾಹ್ಮನಿಗೆ, ಬಲತೊಡೆಯನ್ನು ಮೈತ್ರವರುಣನಿಗೆ, ಎಡತೊಡೆಯನ್ನು ಬ್ರಾಹ್ಮಣಚ್ಛಮ್ಸಿಗೆ, ಭುಜ ಸಹಿತವಾದ ಬಲಬದಿಯನ್ನು ಅಧ್ವರ್ಯುವಿಗೆ, ಎಡಬದಿಯನ್ನು ಮಂತ್ರ ಹೇಳುವವರ ಜೊತೆಗಾರರಿಗೆ, ಎಡಭುಜವನ್ನು ಪ್ರತಿ ಪಾಶತಾರನಿಗೆ, ಬಲಿಮುಂಗಾಲಿನ ಕೆಳಭಾಗವನ್ನು ನೇಷ್ತಾರನಿಗೆ, ಎಡ ಮುಂಗಾಲಿನ ಕೆಳಭಾಗವನ್ನು ಪೋತಾರನಿಗೆ, ಬಲ ತೊಡೆಯ ಮೇಲಿನ ಭಾಗವನ್ನು ಆಚ್ಛಾವಾಕನಿಗೆ, ಎಡಭಾಗವನ್ನು ಅಗ್ನಿಧಾರನಿಗೆ, ಬಲಮುಂಗಾಲಿನ ಮೇಲ್ಭಾಗವನ್ನು ಆತ್ರೇಯನರಿಗೆ, ಎಡಮುಂಗಾಲಿನ ಭಾಗವನ್ನು ಸದಸ್ಯನಿಗೆ, ಬೆನ್ನೆಲುಬು ಮತ್ತು ಮೂತ್ರಕೋಶವನ್ನು ಗೃಹಪತಿ (ಯಜ್ಞ ಮಾಡಿಸುವನು)ಗೆ, ಬಲಪಾದವನ್ನು ಸಂತರ್ಪಣೆ ನಡೆಸುವ ಗೃಹಪತಿಗೆ, ಎಡಪಾದವನ್ನು ಆ ಗೃಹಪತಿಯ ಪತ್ನಿಗೆ, ಮೇಲ್ತುಟಿಯನ್ನು ಅವರಿಬ್ಬರಿಗೂ ಕೊಡಬೇಕು."
"ಮೇಲೆ ಹೇಳಿದಂತೆ ಯಜ್ಞಪಶುವನ್ನು ಹಂಚಿದವರಿಗೆ ಅದು ಸ್ವರ್ಗಕ್ಕೆ ಸೋಪಾನ. ಹೀಗಲ್ಲದೆ ಬೇರೆ ರೀತಿ ಪಶುವನ್ನು ವಿಭಾಗಿಸುವವರು, ಪ್ರಾಣಿಯನ್ನು ಕೇವಲ ಮಾಂಸದ ಬಯಕೆಯಿಂದ ಕೊಲೆ ಮಾಡುವವರು ಚಾಂಡಾಲರು ಮತ್ತು ಅನೀತಿವಂತರು." (೧೧ ಪುಟ ೪೪೧-೪೨)
ಮೇಲಿನ ಉಲ್ಲೇಖವು ಎರಡು ವಿಷಯಗಳನ್ನು ನಿರ್ವಿವಾದವಾಗಿ ಮಂಡಿಸುತ್ತದೆ. ಮೊದಲನೆಯದು, ಯಜ್ಞ ಪಶುವಿನ ಮಾಂಸವನ್ನು ಪೂರ್ಣವಾಗಿ ಬ್ರಾಹ್ಮಣರೇ ತಮ್ಮದಾಗಿಸಿಕೊಳ್ಳುತ್ತಿದ್ದರು. ಒಂದು ಸ್ವಲ್ಪ ಭಾಗವಲ್ಲದೆ, ಯಜ್ಞ ನಡೆಸಿದವನಿಗೂ ಅದು ದೊರಕುತ್ತಿರಲಿಲ್ಲ. ಎರಡನೆಯದು, ಪ್ರಾಣಿಯ ವಧೆಯಲ್ಲಿ ಬ್ರಾಹ್ಮಣರೇ ಕಟುಕರ ಪಾತ್ರ ವಹಿಸುತ್ತಿದ್ದರು.
ಯಜ್ಞದಲ್ಲಿ ಬಲಿಯಾದ ಪ್ರಾಣಿಯ ಮಾಂಸವನ್ನು ನ್ಯಾಯವಾಗಿ ಬ್ರಾಹ್ಮಣರು ತಿನ್ನಬಾರದು. ಯಜ್ಞದ ಮೂಲಧ್ಯೇಯವೆಂದರೆ ವ್ಯಕ್ತಿಯು ತನ್ನನ್ನೇ ಬಲಿಯಾಗಿ ದೇವರಿಗೆ ಅರ್ಪಿಸಬೇಕು ಎಂಬುದು. ಈ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಬದಲಾಗಿ ಪ್ರಾಣಿಯನ್ನು ಅರ್ಪಿಸುವುದರಿಂದ, ಪ್ರಾಣಿಯ ಮಾಂಸವೆಂದರೆ ಮಾನವ ಮಾಂಸವೇ ಎಂದಂತಾಯಿತು. ಆದರೆ ಯಜ್ಞದಲ್ಲಿ ಅರ್ಪಿತವಾದ ಪ್ರಾಣಿಯ ಮಾಂಸದ ಸರ್ವಸ್ವಾಮ್ಯವನ್ನು ಹೊಂದಲೆಳಸಿದ ಬ್ರಾಹ್ಮಣರಿಗೆ ಈ ವಾದವು ಆಪ್ಯಾಯಮಾನವೆನಿಸಲಾರದು. ಈ ದೃಷ್ಟಿಯಿಂದ ಮಾಂಸವು ಬ್ರಾಹ್ಮಣರಿಗೆ ದೊರೆಯದೇ ಹೋದೀತೆಂಬ ಭೀತಿಯಿಂದ ಐತರೇಯ ಬ್ರಾಹ್ಮಣವು ಈ ವಾದವನ್ನು ವಿವರಿಸಲು ಶ್ರಮಪಟ್ಟಿದೆ:
’ಯಜ್ಞಕಾರ್ಯವನ್ನು ಅರಿತವನು ತನ್ನನ್ನೇ ದೇವರಿಗೆ ಅರ್ಪಿಸುತ್ತಾನೆ. ಅಗ್ನಿ ಮತ್ತು ಸೋಮರು ಎಲ್ಲ ದೇವತೆಗಳ ಪ್ರತಿನಿಧಿಗಳು. ಯಜ್ಞ ನಡೆಸುವಾತನು ಪ್ರಾಣಿಯನ್ನು ಅಗ್ನಿ- ಸೋಮರಿಗೆ ಅರ್ಪಿಸಿದಾಗ ಆತನು ತನ್ನನ್ನೇ ಹವಿಸ್ಸಾಗಿ ಅರ್ಪಿಸುವ. ಕರ್ತವ್ಯದಿಂದ ವಿಮುಕ್ತನಾಗುತ್ತಾನೆ. ಅಗ್ನಿ-ಸೋಮರಿಗೆ ಅರ್ಪಿಸಿದ ಪ್ರಾಣಿಯನ್ನು ತಿನ್ನಬೇಡಿ. ಆ ಪ್ರಾಣಿಯನ್ನು ತಿನ್ನುವಾತ ಮಾನವ ಮಾಂಸ ತಿಂದಂತಾಗುತ್ತದೆ. ಏಕೆಂದರೆ ಯಜ್ಞ ಪಶುವಿನ ಮೂಲಕ ಯಜ್ಞಕರ್ತನೇ ಅರ್ಪಿತವಾಗುತ್ತಾನೆ. ಆದರೆ ಈ ಅಭಿಪ್ರಾಯ ಮನ್ನಿಸಲ್ಪಡಲಾಗದು’. (೧೧.ಪುಟ. ೮೦)
ಈ ಸತ್ಯಾಂಶವನ್ನು ಉಲ್ಲೇಖಿಸಿದ ಮೇಲೆ ಬ್ರಾಹ್ಮಣರು ಗೋಮಾಂಸ ಭಕ್ಷಕರಾಗಿದ್ದರು, ಅಷ್ಟೇಅಲ್ಲ. ಅವರು ಕಟುಕರೇ ಆಗಿದ್ದರು ಎಂಬ ಹೇಳಿಕೆಗೆ ಬೇರೆ ಆಧಾರ ಬೇಕಾಗಲಾರದು.
ಹಾಗಾದರೆ ಬ್ರಾಹ್ಮಣರೇಕೆ ತಮ್ಮ ನೀತಿ ಬದಲಾಯಿಸಿದರು? ಅವರ ಬದಲಾವಣೆಯನ್ನು ಅಂಬೇಡ್ಕರ್ ಎರಡು ಹಂತಗಳಲ್ಲಿ ವಿವೇಚಿಸುತ್ತಾರೆ. ಮೊದಲನೆಯದು, ಅವರೇಕೆ ಗೋಮಾಂಸ ಭಕ್ಷಣೆ ಕೈಬಿಟ್ಟರು ಎಂಬುದು.
ಅಶೋಕ ಮತ್ತು ಮನುಗಳು ಸ್ವಲ್ಪಮಟ್ಟಿಗೆ ಪ್ರಾಣಿದಯೆ ಕುರಿತು ಹೇಳಿರುವರೇ ವಿನಾ ಗೋಹತ್ಯೆಯನ್ನು ನಿರ್ದಿಷ್ಟವಾಗಿ ನಿಷೇಧಿಸಿಲ್ಲ. ಬದಲಾಗಿ ಮನುಸ್ಮೃತಿಯ ಐದನೆಯ ಅಧ್ಯಾಯದ ಕೆಳಗಿನ ಶ್ಲೋಕಗಳನ್ನು ನೋಡಬಹುದು:
ಚಲಿಸಲಾಗದುದು ಚಲಿಸಬಹುದಾದುದರ ಆಹಾರ. ಕೋರೆದಾಡೆಗಳಿಲ್ಲದ ಪ್ರಾಣಿಯು ಕೋರೆದಾಡೆಗಳಿರುವುದರ ಆಹಾರ. ಕೈಗಳಿಲ್ಲದವುಗಳು ಕೈವುಳ್ಳವುಗಳ, ಅಂಜಬುರುಕ ಪ್ರಾಣಿಗಳು ಶೌರ್ಯವುಳ್ಳವುಗಳ ಆಹಾರ ( ೫. ೨೯)
ತನ್ನ ಆಹಾರವೆನಿಸಿದುದನ್ನು ಪ್ರತಿನಿತ್ಯ ತಿಂದರೂ ಪಾಪ ಮಾಡಿದಂತಾಗುವುದಿಲ್ಲ. ಏಕೆಂದರೆ ಸೃಷ್ಟಿಕರ್ತನೆ ಆ ತಿನ್ನಲ್ಪಡುವ ಹಾಗೂ ತಿನ್ನುವ ಪ್ರಾಣಿಗಳೆರಡನ್ನೂ ಸೃಷ್ಟಿಸಿದ್ದಾನೆ. (೫.೩೦)
ದೇವತೆಗಳೇ ಸಾರಿದ ನೀತಿಯಂತೆ ಯಜ್ಞಕಾರ್ಯಕ್ಕಾಗಿ ಮಾಂಸದ ಬಳಿಕೆ ಯುಕ್ತ, ಆದರೆ ಇತರ ಸಂದರ್ಭಗಳಲ್ಲೂ ಮಾಂಸ ಭಕ್ಷಣೆಯನ್ನು ಅನುಸರಿಸುವುದು ರಾಕ್ಷಸ ನೀತಿ. (೫.೩೧)
ದೈವ, ದೇವತೆಗಳ ಗೌರವಾರ್ಥ ಮಾಂಸ ಭಕ್ಷಿಸುವವನು, ಪ್ರಾಣಿಯನ್ನು ಆತ ತಾನೇ ವಧಿಸಿರಲಿ, ಕೊಂಡಿರಲಿ ಅಥವಾ ಇತರರಿಂದ ದಾನವಾಗಿ ಸ್ವೀಕರಿಸಿರಲಿ ಪಾಪ ಮಾಡಿದಂತಾಗುವುದಿಲ್ಲ. (೫.೩೨)
ವೇದದ ನಿಜವಾದ ಅರ್ಥವನ್ನು ತಿಳಿದ ದ್ವಿಜನು ಆ ಉದ್ದೇಶಕ್ಕಾಗಿ ಪ್ರಾಣಿಯನ್ನು ವಧಿಸಿದರೆ ತನಗೂ ಪ್ರಾಣಿಗೂ ಮೋಕ್ಷ ತಂದು ಕೊಳ್ಳುತ್ತಾನೆ. (೫.೪೨)
ಯಜ್ಞಕ್ಕಾಗೇ ಸ್ವಯಂಭುವು ತಾನೇ ಪ್ರಾಣಿಗಳನ್ನು ಸೃಜಿಸಿದ, ಇಡೀ ವಿಶ್ವದ ಹಿತಕ್ಕಾಗಿ ಯಜ್ಞಗಳು ಸ್ಥಾಪಿತವಾಗಿದೆ. ಆದುದರಿಂದ ಪ್ರಾಣಿಗಳನ್ನು ವಧಿಸುವುದು ಸಾಮಾನ್ಯ ದೃಷ್ಟಿಯ ಪ್ರಾಣಿವಧೆಯಲ್ಲ (೫.೩೯)
ಯಜ್ಞಕ್ಕಾಗಿ ವಧಿಸಲಾದ ಮೂಲಿಕೆಗಳು, ಮರಗಳು, ಹಕ್ಕಿಗಳು ಮತ್ತಿತರ ಪ್ರಾಣಿಗಳು ಶ್ರೇಷ್ಠವಾದ ಜನ್ಮವನ್ನು ಹೊಂದುತ್ತವೆ. (೫.೪೦)
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮನು, ಮಾಂಸ ಭಕ್ಷಣೆ ಕಡ್ದಾಯವೆಂದು ಸಾರುತ್ತಾನೆ:
ಯಜ್ಞಕಾರ್ಯ ನಡೆಸಲು ಅಥವಾ ಭೋಜನ ಮಾಡಲು ನಿಯತನಾದ ವ್ಯಕ್ತಿಯು ಮಾಂಸ ಭಕ್ಷಿಸಲು ನಿರಾಕರಿಸಿದರೆ ಅವನು ಮುಂದಿನ ಇಪ್ಪತ್ತೊಂದು ಜನ್ಮದಲ್ಲಿ ಆ ಪ್ರಾಣಿಯ ಜನ್ಮ ಪಡೆಯುತ್ತಾನೆ. (೫.೩೫)
ತಲತಲಾಂತರದಿಂದಲೂ ಬ್ರಾಹ್ಮಣರು ಗೋಮಾಂಸ ಭಕ್ಷಿಸುತ್ತಿದ್ದರೆಂಬುದನ್ನು ಇದೆಲ್ಲಾ ಸಿದ್ಧಪಡಿಸುತ್ತದೆ. ಅವರೇಕೆ ಗೋಮಾಂಸ ಭಕ್ಷಣೆ ಕೈಬಿಟ್ಟರು? ಇನ್ನೂ ಮುಂದೆ ಹೋಗಿ ಅವರೇಕೆ ಮಾಂಸ ಭಕ್ಷಣೆಯನ್ನು ಪೂರ್ಣವಾಗಿ ತ್ಯಜಿಸಿ ಸಸ್ಯಾಹಾರಿಗಳಾದರು? ಈ ಎರಡು ಕ್ರಾಂತಿಗಳು ಒಂದೇ ಸಾರಿ ನಡೆದಿವೆ. ಇವು ಧರ್ಮಶಾಸ್ತ್ರಕಾರ ಮನುವಿನ ಉಪದೇಶದಂತೆ ನಡೆದುದಲ್ಲ. ಅವನ ಅಭಿಮತಕ್ಕೆ ವಿರುದ್ಧವಾಗಿ ನಡೆದಿವೆ. ಬ್ರಾಹ್ಮಣರು ತೀವ್ರವಾದ ಈ ಹೆಜ್ಜೆ ಕೈಗೊಳ್ಳಲು ಕಾರಣವೇನು?
ಎರಡು ವಿವರಣೆ ನೀಡಲಾಗಿದೆ. ಮೊದಲನೆಯದು, ಗೋಪೂಜೆಯ ಈ ಮನೋಭಾವ ಅದ್ವೈತ ದರ್ಶನದ ಪ್ರತೀಕ. ಇಡೀ ಜಗತ್ತನ್ನೆಲ್ಲಾ ಒಂದೇ ಶಕ್ತಿ ಆವರಿಸಿದೆಯಾಗಿ ಮಾನವ ಹಾಗೂ ಪ್ರಾಣಿಗಳ ಜೀವನವೆಲ್ಲವೂ ಪವಿತ್ರವಾದುದು ಎಂಬ ವಿವರಣೆ. ಈ ವಿವರಣೆ ತೃಪ್ತಿಕರವಾಗಿಲ್ಲ. ಸರ್ವ ಜೀವನವೂ ಒಂದೇ ಎಂಬುದನ್ನು ಸಾರುವ ವೇದಾಂತ ಸೂತ್ರವು ಯಜ್ಞಕ್ಕಾಗಿ ಪ್ರಾಣಿಗಳನ್ನು ವಧಿಸುವುದನ್ನು ನಿಷೇಧಿಸಿಲ್ಲ. ಅದ್ವೈತದ ಗುರಿಸಾಧನೆಗಾಗಿ ಈ ಬದಲಾವಣೆಯಾಗಿದೆ ಎಂದಾದರೆ ಅದೇಕೆ ಗೋಹತ್ಯೆ ಮಾತ್ರ ನಿಷೇಧವಾಗುವುದರಲ್ಲಿ ಅಂತ್ಯಗೊಂಡಿತು ಎಂಬುದೇ ಪ್ರಶ್ನೆ. ಎಲ್ಲ ಪ್ರಾಣಿಗಳಿಗೂ ಈ ನೀತಿ ಅನ್ವಯಿಸಬೇಕಾಗಿತ್ತು.
ಎರಡನೆಯದು, ಮೊದಲನೆಯದಕ್ಕಿಂತ ಹೆಚ್ಚು ಜಾಣ್ಮೆಯದಾಗಿದೆ. ಪುನರ್ಜನ್ಮ ತತ್ತ್ವದ ಪ್ರಸಾರದಿಂದಾಗಿ ಬ್ರಾಹ್ಮಣರ ಜೀವನದಲ್ಲಿ ಈ ಬದಲಾವಣೆಯುಂಟಾಯಿತು ಎಂಬುದು. ಇದು ಸತ್ಯಾಂಶಕ್ಕೆ ಹೊಂದಿಕೆಯಾಗುವುದಿಲ್ಲ. ಬೃಹದಾರಣ್ಯಕ ಉಪನಿಷತ್ತು ಪುನರ್ಜನ್ಮದ ಬಗೆಗೆ ಹೇಳಿದೆ. ಆದರೂ ಕೂಡ ಜ್ಞಾನಿಯಾದ ಮಗನು ತನಗೆ ಹುಟ್ಟಬೇಕೆಂದು ಬಯಸುವವನು ಎತ್ತು ಅಥವಾ ಕೋಣ ಅಥವಾ ಇತರೆ ಮಾಂಸ ಹಾಗೂ ಅನ್ನ ಮತ್ತು ತುಪ್ಪದ ಚರು ಸಿದ್ಧಪಡಿಸ ಬೇಕೆಂದು ಸೂಚಿಸಿದೆ. ಉಪನಿಷತ್ತಿನಲ್ಲಿ ಸೂಚಿತವಾದ ಈ ತತ್ತ್ವವು ಅದೇಕೆ ಸುಮಾರು ೪೦೦ ವರ್ಷಗಳ ನಂತರದ ಮನುಸ್ಮೃತಿಯ ಕಾಲದವರೆಗೂ ಬ್ರಾಹ್ಮಣರ ಮೇಲೆ ಪ್ರಭಾವ ಬೀರಿಲ್ಲ? ವಾಸ್ತವವಾಗಿ ಈ ವಿವರಣೆಯು ವಿವರಣೆಯೇ ಅಲ್ಲ. ಪುನರ್ಜನ್ಮ ತತ್ತ್ವದ ಪರಿಣಾಮವಾಗಿ ಬ್ರಾಹ್ಮಣರು ಸಸ್ಯಾಹಾರಿಗಳಾದರು ಎಂದಾದರೆ, ಅದೇಕೆ ಬ್ರಾಹ್ಮಣೇತರ ಹಿಂದೂಗಳು ಸಸ್ಯಾಹಾರಿಗಳಾಗಲಿಲ್ಲ?
ಅಂಬೇಡ್ಕರರ ದೃಷಿಯಲ್ಲಿ ಬ್ರಾಹ್ಮಣರು ಗೋಮಾಂಸ ಭಕ್ಷಣೆ ತ್ಯಜಿಸಿ ಗೋವನ್ನು ಪೂಜಿಸಲು ಆರಂಭಿಸಿದುದು ಒಂದು ದೊಡ್ಡ ರಾಜತಂತ್ರ. ಭೌದ್ಧ ಧರ್ಮ ಮತ್ತು ಬ್ರಾಹ್ಮಣ ಧರ್ಮಗಳೊಳಗಣ ಹೋರಾಟ ಮತ್ತು ಭೌದ್ಧ ಧರ್ಮಕ್ಕಿಂತ ಬ್ರಾಹ್ಮಣ ಧರ್ಮ ಉನ್ನತವೆಂದು ತೋರಿಸಿಕೊಡುವ ನೀತಿಯಲ್ಲಿ ಗೋಪೂಜಾ ಪದ್ಧತಿಯ ರಹಸ್ಯ ಅಡಗಿದೆ. ಭಾರತದ ಇತಿಹಾಸದಲ್ಲಿ ಬೌದ್ಧ ಮತ್ತು ಬ್ರಾಹ್ಮಣ ಧರ್ಮಗಳ ನಡುವಿನ ಹೋರಾಟವು ಮಹತ್ವದ್ದು. ಈ ಸತ್ಯವನ್ನು ಅರ್ಥಮಾಡಿಕೊಳ್ಳದೆ, ಹಿಂದೂ ಧರ್ಮದ ಕೆಲವೊಂದು ಗುಣಗಳನ್ನು ವಿವರಿಸುವುದು ಅಸಾಧ್ಯ.
ದುರದೃಷ್ಟವಶಾತ್ ಇತಿಹಾಸದ ವಿದ್ಯಾರ್ಥಿಗಳು ಈ ಹೋರಾಟದ ಮಹತ್ವವನ್ನು ಪೂರ್ಣವಾಗಿ ಕಡೆಗಣಿಸಿದ್ದಾರೆ. ಬ್ರಾಹ್ಮಣವಾದ (Brahmanism) ಇತ್ತೆಂಬುದನ್ನು ಅವರು ಅರಿತಿದ್ದಾರೆ. ಆದರೆ ಈ ವಾದಗಳು ಮೇಲ್ಮೈಗಳಿಸಲು ನಡೆಸುತ್ತಿದ್ದ ಹೋರಾಟದ ಬಗೆಗೆ ಮತ್ತು ಆ ಹೋರಾಟವು ಸುಮಾರು ೪೦೦ ವರ್ಷಗಳ ಕಾಲ ನಡೆದು ಕೆಲವೊಂದು ಮರೆಯಲಾಗದ ಗುರುತನ್ನು ಭಾರತದ ಧರ್ಮ, ಸಮಾಜ ಮತ್ತು ರಾಜಕೀಯದ ಮೇಲೆ ಮುದ್ರೆಯೊತ್ತಿರುವುದರ ಬಗ್ಗೆ ಪೂರ್ಣವಾಗಿ ಅಜ್ಞರಾಗಿದ್ದಾರೆ.
ಒಂದು ಕಾಲದಲ್ಲಿ ಬೌದ್ಧ ಧರ್ಮವು ಭಾರತದ ಬಹುಸಂಖ್ಯಾತ ಜನತೆಯ ಧರ್ಮವಾಗಿತ್ತು. ಶತಮಾನಗಳ ಕಾಲ ಅದು ಜನಸಾಮಾನ್ಯರ ಧರ್ಮವಾಗಿತ್ತು. ಹಿಂದೆ ಯಾವ ಧರ್ಮವೂ ನಡೆಸಿರದಷ್ಟು ತೀವ್ರವಾಗಿ ಅದು ಬ್ರಾಹ್ಮಣ ಧರ್ಮವನ್ನು ಎಲ್ಲೆಡೆಯಿಂದಲೂ ಅಪ್ಪಳಿಸುತ್ತಿತ್ತು. ಬ್ರಾಹ್ಮಣವಾದ ತನ್ನ ಪ್ರಭಾವ ಕಳೆದು ಕೊಳ್ಳುತ್ತಿತ್ತು. ಬೌದ್ಧ ಧರ್ಮದ ಪ್ರಸಾರದಿಂದಾಗಿ ಅರಮನೆಯಲ್ಲೂ, ಜನ ಸಾಮಾನ್ಯರಲ್ಲೂ ಬ್ರಾಹ್ಮಣರು ತಮ್ಮೆಲ್ಲ ಶಕ್ತಿ ಮತ್ತು ಗೌರವಗಳನ್ನುಕಳೆದುಕೊಂಡರು. ಬೌದ್ಧಧರ್ಮದ ಕೈಲಿ ಅನುಭವಿಸಿದ ಸೋಲಿನಿಂದ ಅವರು ಬುಸುಗುಟ್ಟುತ್ತಿದ್ದರು, ಹಾಗೂ ಕಳೆದುಕೊಂಡ ಗೌರವ ಹಾಗೂ ಸಾಮರ್ಥ್ಯ ಗಳಿಸಲು ಸಾಧ್ಯವಾದ ಎಲ್ಲಾ ಯತ್ನವನ್ನೂ ನಡೆಸುತ್ತಿದ್ದರು.
ಬೌದ್ಧ ಧರ್ಮವು ಜನಸಾಮಾನ್ಯರ ಮೇಲೆ ಅದೆಷ್ಟು ತೀವ್ರ ಪ್ರಭಾವ ಬೀರಿತ್ತು, ಅವರನ್ನೆಷ್ಟು ಬಲವಾಗಿ ತನ್ನೆಡೆ ಸೆಳೆದುಕೊಂಡಿತ್ತೆಂದರೆ, ಅದರ ಧ್ಯೇಯ ಧೋರಣೆಗಳನ್ನೇ ಒಪ್ಪಿ ಅನುಸರಿಸಿ ಅದನ್ನು ತೀವ್ರತರವಾದ ರೀತಿಯಿಂದ ಅನುಕರಿಸದೆ ಹೋರಾಟ ನಡೆಸುವುದೇ ಬ್ರಾಹ್ಮಣರಿಗೆ ಸಾಧ್ಯವಿರಲಿಲ್ಲ. ಬುದ್ದನ ಮರಣಾನಂತರ ಅವನ ಅನುಯಾಯಿಗಳು ಅವನ ಮೂರ್ತಿಗಳನ್ನು ಸ್ಥಾಪಿಸಿ ಸ್ತೂಪಗಳನ್ನು ಕಟ್ಟಲಾರಂಭಿಸಿದರು. ಬ್ರಾಹ್ಮಣರೂ ಅದೇ ದಾರಿ ಹಿಡಿದರು. ಅವರು ದೇವಾಲಯಗಳನ್ನು ಕಟ್ಟಿಸಿ ಶಿವ, ವಿಷ್ಣು, ರಾಮ, ಕೃಷ್ಣ ಮತ್ತಿತರರ ಮೂರ್ತಿಗಳನ್ನು ಸ್ಥಾಪಿಸಿ ಬುದ್ಧನ ಪೂಜೆಗೆ ಮುಂದಾದ ಜನರನ್ನು ತಮ್ಮೆಡೆಗೆ ಸೆಳೆದುಕೊಂಡರು. ಹೀಗೆ ಬ್ರಾಹ್ಮಣ ಧರ್ಮದಲ್ಲಿ ಸ್ಥಾನವೇ ಇಲ್ಲದ ದೇವಾಲಯಗಳು ಮತ್ತು ಮೂರ್ತಿಪೂಜೆ ಹಿಂದೂ ಧರ್ಮದಲ್ಲಿ ಸೇರಿಕೊಂಡವು.
ಅತಿಥಿಯು ಆಗಮಿಸಿದಾಗಲೆಲ್ಲಾ ಆತನ ತೃಪ್ತಿಗಾಗಿ ಗೋವಧೆ ಮಾಡಬೇಕಾಗಿತ್ತಾಗಿ ಬಹುಶಃ ಅತಿಥಿಯನ್ನು ’ಗೋಘ್ನ’ ಎಂದು ದ್ವೇಷಿಸುತ್ತಿದ್ದಂತೆ, ಬ್ರಾಹ್ಮಣರನ್ನೂ ಕೂಡ ಗೋಹತ್ಯಾಕಾರಿಗಳೆಂದು ಜನತೆ ದ್ವೇಷಿಸಲಾರಂಭಿಸಿತು. ಈ ಕಾರಣಕ್ಕಾಗಿ ಬೌದ್ಧರ ಮುಂದೆ ತಮ್ಮ ಸ್ಥಾನಮಾನ ಉನ್ನತಗೊಳಿಸಿಕೊಳ್ಳುವಲ್ಲಿ ಯಜ್ಞಗಳನ್ನು ಕೈಬಿಟ್ಟು ಗೋಹತ್ಯೆ ನಿಲ್ಲಿಸುವುದಲ್ಲದೆ ಬ್ರಾಹ್ಮಣರಿಗೆ ಬೇರೆ ದಾರಿಯೇ ಇರಲಿಲ್ಲ.
ಬೌದ್ಧ ಭಿಕ್ಷುಗಳು ಪಡೆದ ಗೌರವಯುತವಾದ ಸ್ಥಾನವನ್ನು ಆಕ್ರಮಿಸಿಕೊಳ್ಳುವುದಕ್ಕಾಗಿಯೇ ಬ್ರಾಹ್ಮಣರು ಗೋಮಾಂಸ ಭಕ್ಷಣೆಯನ್ನು ತ್ಯಜಿಸಿದರು ಎಂಬುದಕ್ಕೆ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಸ್ಯಾಹಾರಿಗಳಾದುದೇ ಸೂಕ್ತ ಆಧಾರವೆನಿಸಬಹುದು. ಬ್ರಾಹ್ಮಣರೇಕೆ ಪೂರ್ಣ ಸಸ್ಯಾಹಾರಿಗಳಾದರು? ಸಸ್ಯಾಹಾರಿಗಳಾದರೇನೇ ತಮ್ಮ ವಿರೋಧಿ ಎನಿಸಿದ ಬೌದ್ಧಧರ್ಮವು ಆಕ್ರಮಿಸಿಕೊಂಡ ಸ್ಥಾನವನ್ನು ಮರಳಿ ಪಡೆಯಬಹುದಾಗಿತ್ತು ಎಂಬುದು ಉತ್ತರವಾಗಬಹುದು.
ಆದರೆ, ಈ ಸಂದರ್ಭದಲ್ಲಿ ಸಾರ್ವಜನಿಕ ದೃಷ್ಟಿಯಿಂದ, ಬೌದ್ಧ ಧರ್ಮದೊಡನೆ ಹೋಲಿಸಿದಾಗ ಹಿಂದೂ ಧರ್ಮದಲ್ಲಿ ಕೀಳೆನಿಸುವ ಒಂದಂಶ ವಿತ್ತೆಂಬುದನ್ನು ನೆನಪಿನಲ್ಲಿಡಬೇಕು; ಅದೆಂದರೆ, ಬ್ರಾಹ್ಮಣ ಧರ್ಮದ ಮೂಲವೆನಿಸಿದ ಪ್ರಾಣಿವಧೆ. ಬೌದ್ಧರು ಅದಕ್ಕೆ ತೀವ್ರ ವಿರೋಧಿಗಳಾಗಿದ್ದರು. ಹೀಗಿರುವಾಗಿ ಕೃಷಿಕರಾದ ಜನಸಾಮಾನ್ಯರಲ್ಲಿ ಗೋವು ಆದಿಯಾಗಿ ಪ್ರಾಣಿಗಳನ್ನು ವಧಿಸುವ ಬ್ರಾಹ್ಮಣ ಧರ್ಮದ ಬಗೆಗೆ ತಿರಸ್ಕಾರ ಬೆಳೆದು ಬೌದ್ಧಧರ್ಮದಲ್ಲಿ ಅಭಿಮಾನ ಮೂಡಿದುದು ವಾಸ್ತವವೆ., ತಾವು ಕಳೆದುಕೊಂಡ ಸ್ಥಾನವನ್ನು ಮರಳಿ ಪಡೆಯಲು ಬ್ರಾಹ್ಮಣರು ಬೌದ್ಧ ಭಿಕ್ಷುಗಳಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಲೇಬೇಕಾಯಿತು. ಗೋಮಾಂಸಾಹಾರ ತ್ಯಜಿಸಬೇಕಷ್ಟೇ ಅಲ್ಲದೆ ಸಸ್ಯಾಹಾರಿಗಳಾಗಬೇಕಾಯಿತು. ಅದನ್ನವರು ಸಾಧಿಸಿದರು.
ಬೌದ್ಧ ಭಿಕ್ಷುಗಳು ತಾವಾಗೇ ಸತ್ತ ಪ್ರಾಣಿಗಳ ಅಥವಾ ಇತರ ಪ್ರಾಣಿಗಳಿಂದ ಕೊಲ್ಲಲ್ಪಟ್ಟ ಪ್ರಾಣಿಗಳ ಮಾಂಸವನ್ನು ಸೇವಿಸುತ್ತಿದ್ದರು. ಬ್ರಾಹ್ಮಣರು ಮಾಂಸ ಸೇವನೆ ಕೈಬಿಡುವ ಅಗತ್ಯವಿರಲಿಲ್ಲ. ಯಜ್ಞ ಪದ್ಧತಿಯನ್ನು ಕೈಬಿಡುವುದರಿಂದ ಗೋಹತ್ಯೆಯನ್ನು ನಿಲ್ಲಿಸುವುದರಿಂದ ಕೇವಲ ನಿರ್ದಿಷ್ಟ ಪರಿಣಾಮವುಂಟಾಗುತ್ತಿತ್ತು. ಹೆಚ್ಚೆಂದರೆ ಬೌದ್ಧರಿಗೆ ಸಮಾನವಾದ ಸ್ಥಾನ ಬ್ರಾಹ್ಮಣರಿಗೂ ಸಿಗುತ್ತಿತ್ತು. ಇದರಿಂದ ತಾವು ಬೌದ್ಧರಿಗಿಂತ ಮೇಲು ಎಂದು ತೋರುವ ಬಯಕೆ ನೆರವೇರುತ್ತಿರಲಿಲ್ಲ. ಯಜ್ಞಕ್ಕಾಗಿ ಗೋವನ್ನು ಬಲಿಕೊಡುವ ಪದ್ಧತಿಯನ್ನು ವಿರೋಧಿಸಿದ್ದರಿಂದ ಬೌದ್ಧರು ಜನಸಾಮಾನ್ಯರ ಹೃದಯದಲ್ಲಿ ದೊಡ್ಡಸ್ಥಾನ ಪಡೆದಿದ್ದರು. ಆ ಗೌರವಯುತ ಸ್ಥಾನದಿಂದ ಅವರನ್ನು ಕೆಳಗಿಳಿಸುವುದೇ ಬ್ರಾಹ್ಮಣರ ಗುರಿಯಾಗಿತ್ತು.
ತಮ್ಮ ಗುರಿ ಸಾಧನೆಗಾಗಿ ಬ್ರಾಹ್ಮಣರು ಸಾಹಸಯುತ ತಂತ್ರವೊಂದನ್ನು ಬಳಸಬೇಕಾಯಿತು. ಅತಿರೇಕವನ್ನು ಅತಿರೇಕದಿಂದಲೇ ಗೆಲ್ಲುವ ನೀತಿ ಅದು. ಪ್ರಗತಿ ಶೀಲತೆಯನ್ನು ವಿರೋಧಿಸಲು ಎಲ್ಲ ಪ್ರತಿಗಾಮಿಗಳು ಇಂತಹುದೇ ನೀತಿಯನ್ನು ಬಳಸುತ್ತಾರೆ. ಬೌದ್ಧರನ್ನು ಕೆಳಗುರುಳಿಸಲು ಬ್ರಾಹ್ಮಣರಿಗಿದ್ದ ಒಂದೇ ದಾರಿ ಎಂದರೆ, ಅವರಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಸಸ್ಯಾಹಾರಿಗಳಾಗುವುದಾಗಿತ್ತು.
- Login or register to post comments
- Email this page