You are hereಇಡೀ ಜಗತ್ತಿಗೆ ಚೆಡ್ಡಿ ತೊಡಿಸ ಹೊರಟವರು
ಇಡೀ ಜಗತ್ತಿಗೆ ಚೆಡ್ಡಿ ತೊಡಿಸ ಹೊರಟವರು
ಲೇಖಕರು: ಬಿ.ವಿ. ವೀರಭದ್ರಪ್ಪ
ಹಕ್ಕುಗಳು: ಲೇಖಕರವು
ಪ್ರಾಚೀನ ಭಾರತೀಯರಿಗೆ ಇತಿಹಾಸಪ್ರಜ್ಞೆ ಇರಲಿಲ್ಲವೆಂಬುದನ್ನು ಸಾಮಾನ್ಯವಾಗಿ ಎಲ್ಲ ಇತಿಹಾಸಕಾರರೂ ಒಪ್ಪುತ್ತಾರೆ. ಸಮಾಜ ವಿಜ್ಞಾನಗಳಲ್ಲಿ ಒಂದಾದ ಇತಿಹಾಸವನ್ನು ಉಳಿದ ವಿಜ್ಞಾನಗಳನ್ನು ಅಭ್ಯಸಿಸುವಂತೆ ನಿರಪೇಕ್ಷ ಬುದ್ಧಿಯಿಂದ ಅಭ್ಯಾಸ ಮಾಡಬೇಕೆಂಬುದು ಆಧುನಿಕರ ಅಭಿಮತ. ಪ್ರಾಚೀನ ಭಾರತದ ಇತಿಹಾಸವನ್ನು ಪಾಶ್ವಾತ್ಯರು ಅನೇಕ ವೇಳೆ ತಮ್ಮ ಮೂಗಿನ ನೇರಕ್ಕೆ ನೋಡಿದ್ದರೂ ಅವರು ಒಂದು ವೈಜ್ಞಾನಿಕ ಶಿಸ್ತಿಗೆ ಒಳಪಟ್ಟಿರುವುದನ್ನು ಅವರ ಬರಹಗಳಿಂದ ಮನಗಾಣಬಹುದು.
ಆಧುನಿಕ ಹಿಂದೂ ಮತಾಂಧರಿಗೆ ಇತಿಹಾಸವೆಂಬುದು ಪೂರ್ಣ ನಿಶ್ಚಿತ ಸಿದ್ಧಾಂತವನ್ನು ಎತ್ತಿಹಿಡಿಯುವ ಒಂದು ಸಾಧನ ಮಾತ್ರವಾಗಿದೆ. ಉದಾಹರಣೆಗೆ ವಿಶ್ವಹಿಂದೂ ಪರಿಷತ್ತಿನ ಮುಖವಾಣಿಯಾದ "ವಿಶ್ವ ಹಿಂದು" ಪತ್ರಿಕೆಯ ಲೇಖನಗಳನ್ನು ಪರಿಶೀಲಿಸಬಹುದು. ಹಿಂದೂ ಧರ್ಮವೇ ಎಲ್ಲ ಧರ್ಮಗಳ ತಾಯಿ ಮತ್ತು ಎಲ್ಲ ಧರ್ಮಗಳಿಗಿಂತ ಶ್ರೇಷ್ಠ ಎಂದು ಸಾಧಿಸಲು ಅಲ್ಲಿ ಇಡೀ ವಿಶ್ವ ಇತಿಹಾಸವನ್ನೇ ತಿರುಚಿ ಲೇವಡಿಗೊಳಿಸಲಾಗಿದೆ.
"ವಿಶ್ವ ಹಿಂದು"ವಿನ ಸೆಪ್ಟಂಬರ್ ೧೯೮೩ರ ಸಂಚಿಕೆಯಲ್ಲಿ ಜೆರೂಸಲಮ್ ಎಂಬುದು "ಯೆದುಶಾಲಯಮ್" ಅಲ್ಲದೆ ಬೇರೆಯಲ್ಲ, " "ಹಾಗೆಂದರೆ ಯದುಗಳ ಒಡೆಯನಾದ ಕೃಷ್ಣನ ಆಲಯ"ವೆಂದು ಪ್ರತಿಪಾದಿಸಲಾಗಿದೆ. ಅಲ್ಲದೆ "ಗುಡ್ಡದ ಮೇಲಿನ ಗೋಪುರ ಮತ್ತು ಈಗ ಮಸೀದಿಯಾಗಿ ದುರುಪಯೋಗವಾಗುತ್ತಿರುವ ಸಮೀಪದ ಆಲ್ ಅಖ್‌ಸಾಗಳು ಪ್ರಾಚೀನ ಕೃಷ್ಣ ದೇವಾಲಯಗಳೆಂದು ಎಲ್ಲರೂ ತಿಳಿಯಬೇಕು" ಎಂದು ಘೋಷಿಸಲಾಗಿದೆ.
ಕೃಷ್ಣ ದೇವಾಲಯಗಳನ್ನು ಅಲ್ಲಿ ಯಾರು ಯಾವಾಗ ಕಟ್ಟಿದರು ಎಂಬ ಬಗ್ಗೆ ಯಾವ ದಾಖಲೆಗಳನ್ನೂ ಅಲ್ಲಿ ಸಾದರಪಡಿಸಿಲ್ಲ. ಯಹೂದಿಗಳಿಗೆ, ಕ್ರೈಸ್ತರಿಗೆ ಮತ್ತು ಮಹಮ್ಮದೀಯರಿಗೆ ಪರಂಪರೆಯಿಂದ ಪವಿತ್ರ ಸ್ಥಳವಾಗಿರುವ ಜೆರೂಸಲಮ್ ಮೇಲೆ ತಮ್ಮ ಹಕ್ಕನ್ನೂ ಸ್ಥಾಪಿಸುವುದರ ಮೂಲಕ ಹಿಂದೂ ಧರ್ಮಕ್ಕೆ ವಿಶ್ವವ್ಯಾಪಕತೆಯನ್ನು ತರಬಹುದೆಂದು ವಿಶ್ವ ಹಿಂದು ಪರಿಷತ್ತು ಭಾವಿಸಿದಂತಿದೆ.
"ವಿಶ್ವ ಹಿಂದು" ಪತ್ರಿಕೆಯ ಅಸಂಬದ್ಧ ಪ್ರಲಾಪ ಅಲ್ಲಿಗೆ ನಿಲ್ಲುವುದಿಲ್ಲ ಲಂಡನ್ನಿನಲ್ಲಿರುವ ಸೈಂಟ್ ಪಾಲ್ಸ್ ಕ್ಯಾಥೆಡ್ರೆಲ್ ಸಹ ಹಿಂದೆ ಕೃಷ್ಣನಿಗೆ ಸಂಬಂಧಿಸಿದ್ದಾಗಿತ್ತು. ಅದರ ’ಆರಂಭದ’ ಹೆಸರು ’ಗೋಪಾಲ (ಕೃಷ್ಣ) ಮಂದಿರ’ ಎಂದು ಅದು ಹೇಳಿದೆ. ಅದರ ಮುಂದಿರುವುದು ’ತ್ರಿಶೂಲಪಾಣಿಯಾದ ಶಿವನ ಪ್ರತಿಮೆ’. ಒಳಗೆ ಪ್ರಮುಖವಾಗಿ ಕಾಣುವುದು ’ಕೃಷ್ಣನ ಸುದರ್ಶನ ಚಕ್ರ’
ಈ ಪತ್ರಿಕೆಯನ್ನು ಉಲ್ಲೇಖಿಸುವುದಾದರೆ ಪ್ಯಾರಿಸ್‌ನ ನಾಟ್ರ್‌ಡೇಮ್ ಚರ್ಚ್ "ಮೂಲದಲ್ಲಿ ಮಾತೃದೇವಿಯಾದ ಭಗವತಿಯ-ಪಾರ್ವತಿ, ಭವಾನಿ, ಚಂಡಿ, ಅರ್ಥಾತ್ ದುರ್ಗಿಯ ದೇವಾಲಯವಾಗಿತ್ತು " ಅಷ್ಟೇ ಅಲ್ಲ; "ಪ್ಯಾರಿಸ್ ಪರಮೇಶ್ವರಿ ಯಮ್ ಆಗಿತ್ತು. ರೋಮನ್ನರ ಆಳ್ವಿಕೆಯಲ್ಲಷ್ಟೇ ಅದು ಪ್ಯಾರಿಸೋರಿಯಮ್ ಆಯಿತು. ನಂತರ ಇನ್ನೊ ಮೊಟಕಾಗಿ ಪ್ಯಾರಿಸ್ ಆಯಿತು". ಶಿಶ್ವಹಿಂದೂ ಪರಿಪತ್ತಿನ ಪತ್ರಿಕೆ ಇನ್ನೂ ಹೇಳುವುದೇನೆಂದರೆ "ನಾಟ್ರ್‌ಡೇಮ್ ಚರ್ಚ್ ಬದಿಯಲ್ಲಿ ಹರಿಯುವ ’ಸೈನ್’ ನದಿ, ಸಿಂಧೂ ನದಿಯ ಹೆಸರಿನ ವಿಕೃತ ರೂಪ."
ಈ ಹುಚ್ಚು ಅಲ್ಲಿಗೇ ನಿಲ್ಲುವುದಿಲ್ಲ. ಮೆಕ್ಕಾದಲ್ಲಿರುವ ’ಕಾಬ’ ಸಹ ಒಂದು ’ಬಹೃದ್ ವಿಷ್ಣು ದೇವಾಲಯ.’ ಭಾರತದ ಒಳಗೇ ಇರುವ ತಾಜಮಹಲ್ ಅಂತೂ "ತೇಜೋ ಮಹಾಲಯ, ಶಿವ ದೇವಾಲಯ" ಎಂದು ಎಂದೋ ತೀರ್ಮಾನವಾಗಿದೆ. ದೆಹಲಿ ಮತ್ತು ಆಗ್ರಾಗಳಲ್ಲಿರುವ ಜುಮ್ಮಾ ಮಸೀದಿಗಳು ಹಿಂದೂ ದೇವಾಲಯಗಳು. ಆದ್ದರಿಂದಲೇ ಅಲ್ಲಿ ಕಾಣುವ ಮಾಸಲು ಕಂದು ಬಣ್ಣ ಭಗವಾನ್ ಝಾಂಡಾದ ಕೇಸರಿ ಬಣ್ಣವಲ್ಲದೆ ಬೇರೆಯಲ್ಲ ಎಂದು ಮೇಲಿಂದ ಮೇಲೆ ಹೇಳಲಾಗುತ್ತಿದೆ.
ಒಂದೇ ಮಾತಿನಲ್ಲಿ ಹೇಳುವುದಾದರೆ ’ವಿಶ್ವ ಹಿಂದು’ ಪತ್ರಿಕೆಯ ಪ್ರಕಾರ’ ಕ್ರಿಸ್ತಪೂರ್ವ ಯುಗದಲ್ಲಿ ಇಡೀ ವಿಶ್ವದ ಎಲ್ಲ ಜನರು ಹಿಂದೂ ಗಳಾಗಿದ್ದರು."
ಇದನ್ನು ಹುಚ್ಚು ಎನ್ನಿ ಅಥವಾ ಪಾಂಡಿತ್ಯವೆನ್ನಿ. ಇದರ ಹಿಂದೆ ಒಂದು ಉದ್ದೇಶವಿರುವುದು ಸ್ಪಷ್ಟವಿದೆ. ವಿಶ್ವ ಹಿಂದೂ ಪರಿಷತ್, ಆರೆಸ್ಸೆಸ್ ಮತ್ತು ಭಾ.ಜ.ಪಗಳು ಒಂದೇ ಆತ್ಮದ ವಿವಿಧ ರೂಪಗಳು, ಅನಕ್ಷರತೆ ಮತ್ತು ಮೌಢ್ಯ ತುಂಬಿರುವ ಈ ದೇಶದಲ್ಲಿ ಮತ್ತೊಮ್ಮೆ ಮನುಧರ್ಮವನ್ನು ಎತ್ತಿಹಿಡಿಯುವುದೇ ಈ ಎಲ್ಲ ಅವತಾರಗಳ ಏಕಮಾತ್ರ ಗುರಿ. ವಿಶ್ವದ ಶ್ರೇಷ್ಠ ಸ್ಮಾರಕಗಳೆಲ್ಲಾ ಹಿಂದೂ ದೇವ ಮಂದಿರಗಳೆಂದು ಹೇಳಿ ಮುಗ್ಧ ಜನರಲ್ಲಿ ಅನ್ಯಾಕ್ರಮಣಶೀಲ ಮತಾಂಧತೆ (chauvinism)ಯನ್ನು ಬೆಳೆಸುವುದು ಅವರ ಉದ್ದೇಶ. ಅನ್ಯ ಧರ್ಮೀಯರ ವಿರುದ್ಧ ಆಕ್ರಮಣ ಕಾರ್ಯಗಳನ್ನು ಸಂಘಟಿಸಲು ಇದು ಒಂದು ನೆಪ.
ವಿಶ್ವ ಹಿಂದೂ ಪರಿಷತ್ತಿನ ಅಂತಿಮ ಗುರಿಯಾದ ಹಿಂದೂ ಗಣರಾಜ್ಯ ಸ್ಥಾಪನೆಯಾದರೆ ಏನಾದೀತು ಎಂಬುದನ್ನು ಊಹಿಸುವುದು ಕಷ್ಟವಲ್ಲ.
ಜರ್ಮನರು ಜಗತ್ತಿನಲ್ಲೇ ಶ್ರೇಷ್ಠವಾದ ಆರ್ಯ ಜನಾಂಗ ಎಂಬ ವಾದದ ಮೂಲಕ ಹಿಟ್ಲರನು ತನ್ನ ಪ್ರಜೆಗಳಲ್ಲಿ ವಿಷಬೀಜ ಬಿತ್ತಿದ್ದು ಇನ್ನೂ ಇತಿಹಾಸದ ಪುಟಗಳಲ್ಲಿ ಹಸುರಾಗಿಯೇ ಇದೆ. ನಂತರ ನಡೆದ ಯಹೂದಿಗಳ ಮಾರಣ ಹೋಮ, ಕೇಂದ್ರೀಕೃತ ಶಿಬಿರಗಳು ಮತ್ತು ಗ್ಯಾಸ್ ಛೇಂಬರ್‌ಗಳು, ಕೊನೆಯಲ್ಲಿ ಜರ್ಮನಿಯ ಸರ್ವನಾಶ, ಈ ಸಂದರ್ಭದಲ್ಲಿ ನೆನಪಿಗೆ ಬರಬೇಕಾಗಿದೆ.
’ವಿಶ್ವ ಹಿಂದು’ ಪತ್ರಿಕೆ ವಿಶ್ವದ ಎಲ್ಲ ಮತೀಯ ಸ್ಮಾರಕಗಳನ್ನು ತಮ್ಮವೆಂದು ಹೇಳಿಕೊಂಡಿದೆ. ಆದರೆ ಹಿಟ್ಲರನ ನಾಜಿ ಧ್ವಜದ ಸಂಕೇತವಾದ ಸ್ವಸ್ತಿಕವನು ಮಾತ್ರ ಹಿಂದೂ ಮೂಲದ್ದೆಂದು ಇನ್ನೂ ಹೇಳಿಕೊಂಡಿಲ್ಲ. ಆರೆಸ್ಸೆಸ್‌ನ ಗುರು ಗೋಲ್ವಾಲ್ಕರ್ ನಿಸ್ಸಂಕೋಚವಾಗಿ ಹಿಟ್ಲರ್‌ನನ್ನು ತನ್ನ ಆದರ್ಶವೆಂದು ಹೇಳಿಕೊಂಡಿದ್ದಾರೆ.
ಹಿಂದೆ ವರ್ಣಾಶ್ರಮಗಳ ಬೋಧನೆಯ ಮೂಲಕ ಹಿಂದೂ ಸಮಾಜವನ್ನು ಛಿದ್ರ ಛಿದ್ರ ಮಾಡಿ ನಿರ್ವೀರ್‍ಯಗೊಳಿಸಿದ ಜನರೇ ಇಂದು ಹಿಂದೂ ಅನ್ಯಾಕ್ರಮಣಶೀಲ ಮತಾಂಧತೆಯನ್ನು ಬೋಧಿಸಿ ದೇಶವನ್ನು ಛಿದ್ರಗೊಳಿಸಲು ಮತ್ತು ತನ್ಮೂಲಕ ಬಹುಸಂಖ್ಯಾತ ಹಿಂದೂ ಸಮಾಜವನ್ನು ತಮ್ಮ ಅಂಕೆಯಲ್ಲಿಟ್ಟುಕೊಳ್ಳಲು ವ್ಯಾಪಕ ವ್ಯೂಹವನ್ನು ರಚಿಸುತ್ತಿದ್ದಾರೆ. ನಾವು ಎಚ್ಚೆತ್ತ ರಾಷ್ಟ್ರಗಳ ಜನತೆಯೊಡನೆ ತಲೆ ಎತ್ತಿಕೊಂಡು ಬದುಕಬೇಕಾದರೆ, ಎಲ್ಲ ಹಿಂದೂಗಳು, ಮಹಮ್ಮದಿಯರು ಮತ್ತು ಎಲ್ಲ ಮತೀಯರು ತಮ್ಮ ತಮ್ಮ ಮತ ಮೌಢ್ಯತೆಗಳನ್ನು ತೊರೆದು ಪ್ರಬಲವಾದ ಜಾತ್ಯತೀತ ಸಮಾಜವನ್ನು ಕಟ್ಟಲು ಶ್ರಮಿಸಬೇಕಾಗಿದೆ.
- Login or register to post comments
- Email this page