You are hereಒಂದು ಅಶ್ವಮೇಧ*

ಒಂದು ಅಶ್ವಮೇಧ*


ಲೇಖಕರು: ಬಿ.ವಿ. ವೀರಭದ್ರಪ್ಪ
ಬಿಹಕ್ಕುಗಳು: ಲೇಖಕರವು

(*ಜನಸಾಮಾನ್ಯರಿಗೆ ತಿಳಿಯದ ಭಾಷೆಯಿಂದ ಮುಗ್ಧರನ್ನು ಎಷ್ಟು ಸುಲಭವಾಗಿ ವಂಚಿಸಬಹುದು. ಸಂಸ್ಕೃತದ ಶ್ಲೋಕಗಳು, ಮಂತ್ರಗಳ ಬಗ್ಗೆ ’ಪೂಜ್ಯಭಾವನೆ’ ಇರುವ ಜನರಿಗೆ ಅವುಗಳ ನಿಜವಾದ ಅರ್ಥ ಗೊತ್ತಾದಾಗಲೇ ಅದರಲ್ಲಡಗಿರುವ ಮೋಸದ ಅರಿವಾಗುವುದು. ಇತ್ತೀಚೆಗೆ ಹೈದರಾಬಾದಿನಲ್ಲಿ ನಡೆದ ’ಅಶ್ವಮೇಧ ಯಜ್ಞ’ ದಲ್ಲಿ ಪುರೋಹಿತರು ಜಪಿಸಿದ ಮಂತ್ರಗಳ ಅರ್ಥವನ್ನು ಸಂಗ್ರಹಿಸಿ ಇಲ್ಲಿ ಕೊಡಲಾಗಿದೆ.)

ಕಳೆದ ಮೇ ಕೊನೆ ವಾರದಲ್ಲಿ ಹೈದರಾಬಾದಿನ ವಸ್ತು ಪ್ರದರ್ಶನ ಮೈದಾನದಲ್ಲಿ ಒಂದು ಭಾರಿ ತಮಾಷೆ ನಡೆಯಿತು. ಒಂದು ವಾರದುದ್ದಕ್ಕೆ ನಡೆದ ಈ ಮೇಳಕ್ಕೆ ’ಅಶ್ವಮೇಧ ಯಜ್ಞ’ ಎಂದು ಕರೆಯಲಾಯಿತು. ಯಜ್ಞದ ಮುಖಂಡ ಕುಂಭ ಕೋಣಂನ ರಾಮಾನುಜ ತಾತಾಚಾರಿ ಪ್ರಕಾರ, ’ವಿಶ್ವ’ದ ಮೂಲೆ ಮೂಲೆಗಳಿಂದ ೨೦೦೦ ಜನ ವೈದಿಕ ಪಂಡಿತರು ಆಗಮಿಸಿದ್ದರು. ೧೧೦೧ ಯಜ್ಞಕುಂಡ ಗಳನ್ನು ನಿರ್ಮಿಸಲಾಗಿತ್ತು. ಅವುಗಳಲ್ಲಿ ಕೆಲವನ್ನು ಯೋನಿಯ ಆಕಾರದಲ್ಲೂ ಮತ್ತೆ ಕಲವನ್ನು ಲಿಂಗದ ಆಕಾರದಲ್ಲೂ ರಚಿಸಲಾಗಿತ್ತು. ಪ್ರತಿಯೊಂದಕ್ಕೆ ವೇದಕಾಲದ ಒಬ್ಬೊಬ್ಬ ಋಷಿಯ ಹೆಸರನ್ನು ಇಡಲಾಗಿತ್ತು. ಆರು ಟನ್ನಿನಷ್ಟು ತುಪ್ಪ ಮತ್ತು ಇನ್ನೂ ಹೆಚ್ಚು ಟನ್‌ಗಳ ಸೌದೆಯನ್ನು ಸುಟ್ಟು ಬೂದಿ ಮತ್ತು ಹೊಗೆಯನ್ನಾಗಿ ಪರಿವರ್ತಿಸಲಾಯಿತು.

ಅಮೂಲ್ಯ ಆಹಾರ ವಸ್ತುಗಳನ್ನು ಧರ್ಮದ ಹೆಸರಿನಲ್ಲಿ ಸುಟ್ಟು ನಾಶ ಮಾಡುವ ಈ ದೊಂಬರಾಟವನ್ನು ವಿರೋಧಿಸಿದ ವಿಚಾರವಾದಿಗಳನ್ನು ಪೊಲೀಸರು ನಯವಾಗಿ ಎಳೆದುಕೊಂಡು ಹೋದರು.

ವಿಶ್ವಶಾಂತಿ, ಮಾನವ ಪ್ರೇಮಗಳಿಗಾಗಿ ಆಚರಿಸಲಾಯಿತೆಂದು ಹೇಳಲಾದ ಅಶ್ವಮೇಧ ಯಜ್ಞದಲ್ಲಿ ಜಪಿಸಲಾಗುವ ಮಂತ್ರಗಳ ಅರ್ಥವೇನು ಎಂದು ಬಹುಶಃ ಈ ಯಜ್ಞಕ್ಕೆ ಬೆಂಬಲ ನೀಡಿದ ಹೈದರಾಬಾದಿನ ಆಸ್ತಿಕ ಮಹಾಶಯರಿಗೆ ತಿಳಿದಿರಲಾರದು. ಅಶ್ವಮೇಧದ ವಿಧಿ ವಿಧಾನಗಳನ್ನು ’ಯಜುರ್‍ವೇದ’ದಲ್ಲಿ ಸುವಿಸ್ತಾರವಾಗಿ ಹೇಳಲಾಗಿದೆ. ಕೆಲವೇ ಪಂಡಿತರಿಗೆ ತಿಳಿಯುವ ದೇವಭಾಷೆಯಲ್ಲಿ ಹೇಳಲಾದ ಈ ಮಂತ್ರಗಳ ಅಂತರಾರ್ಥ ಎಲ್ಲ ಆಸ್ತಿಕ ಮಹಾಶಯರಿಗೆ ತಿಳಿದಿರಲಿ ಎಂಬ ಸದುದ್ದೇಶದಿಂದ ಈ ಲೇಖನವನ್ನು ರಚಿಸಲಾಗಿದೆ. ಯಜುರ್‍ವೇದದ ೨೩ನೆಯ ಅಧ್ಯಾಯದ ೧೯ರಿಂದ ೩೦ರ ವರೆಗಿನ ಮಂತ್ರಗಳಿಗೆ ಮಹೀಧರಾಚಾರ್ಯರು ನೀಡಿರುವ ವ್ಯಾಖ್ಯಾನವನ್ನು ಆಧಾರವಾಗಿಟ್ಟುಕೊಂಡು ಅಶ್ವಮೇಧ ಯಜ್ಞದ ಆಚರಣೆಯನ್ನು ಇಲ್ಲಿ ವಿವರಿಸಿದೆ.

ಯಜಮಾನನ ಹಿರಿಯ ಪತ್ನಿ ಋತ್ವಿಜರೊಡನೆ ಅಶ್ವಶಾಲೆಗೆ ಹೋಗಬೇಕು, ಕುದುರೆಯೊಡನೆ ಮಲಗಿ ಹೀಗೆನ್ನಬೇಕು, ’ಓ ಕುದುರೆ, ಯಾವುದ ರಿಂದ ಗರ್ಭ ನಿಲ್ಲುವುದೋ ಆ ನಿನ್ನ ವೀರ್‍ಯವನ್ನು ನಾನು ಆಕರ್ಷಿಸಿ ನನ್ನ ಯೋನಿಯಲ್ಲಿ ಸ್ವೀಕರಿಸುತ್ತೇನೆ. ಆ ರೀತಿಯಲ್ಲಿ ನೀನು ನನ್ನಲ್ಲಿ ಪ್ರವೇಶಿಸು’ (ಯಜು. ಅಧ್ಯಾಯ, ೨೩, ಮಂತ್ರ ೧೯)

ರಾಜನ ಪಟ್ಟದ ರಾಣಿ ಸ್ವತಃ ಕುದುರೆಯ ಲಿಂಗವನ್ನು ತನ್ನ ಯೋನಿಯಲ್ಲಿಟ್ಟುಕೊಳ್ಳಬೇಕು. (ಯಜು. ಅಧ್ಯಾಯ ೨೩, ಮಂತ್ರ ೨೦)

ಯಜಮಾನನು ಕುದುರೆಯೊಡನೆ ಹೇಳುತ್ತಾನೆ ’ಓ ಕುದುರೆ, ನೀನು ನನ್ನ ಪತ್ನಿಯನ್ನು ರಮಿಸು. ತೊಡೆಗಳನ್ನು ಮೇಲೆತ್ತಿ ಆಕೆಯ ಯೋನಿಯಲ್ಲಿ ವೀರ್‍ಯವನ್ನು ಸುರಿಸು. ಆಕೆ ಹೊಸ ಚೈತನ್ಯವನ್ನು ಹೊಂದಿ ಸಂಭೋಗಸುಖವನ್ನು ಪಡೆಯುತ್ತಾಳೆ. ನೀನು ನಿನ್ನ ಲಿಂಗವನ್ನು ನನ್ನ ಪತ್ನಿಯ ಯೋನಿಯಲ್ಲಿಡು.’ (ಯಜು. ಅಧ್ಯಾಯ ೨೩, ಮಂತ್ರ ೨೧)

ಯಜ್ಞಶಾಲೆಯಲ್ಲಿ ಅಧ್ವರ್‍ಯು ಮೊದಲಾದ ಪುರೋಹಿತರು ಯಜಮಾನನ ಕಿರಿಯ ಪತ್ನಿಯರೊಡನೆ ಹಾಸ್ಯವಾಡುತ್ತಾರೆ. ತಮ್ಮ ಬೆರಳುಗಳನ್ನು ಸ್ತ್ರಿಯರ ಯೋನಿಯೊಳಗೆ ತೂರಿಸುತ್ತಾರೆ. ಸ್ತ್ರೀಯರ ಶೀಘ್ರಗಮನದಿಂದ ಭಗಲಿಂಗ ಘರ್ಷಣೆಯಲ್ಲಿ ಹುಟ್ಟುವಂತಹ ಶಬ್ದ ಹುಟ್ಟುತ್ತದೆ. ಆ ಯುವತಿಯರು ಪುರೋಹಿತರನ್ನು ಚುಡಾಯಿಸುತ್ತಾರೆ. ಅವರ ಲಿಂಗದ ತುದಿಯನ್ನು ತೋರಿಸುತ್ತಾ ತೆರೆದ ಬಾಯಿಯಂತಿದೆ ಎಂದು ಹಾಸ್ಯ ಮಾಡುತ್ತಾರೆ (ಯಜು. ಅಧ್ಯಾಯ ೨೩, ಮಂತ್ರ ೨೩)

ಹದಿನಾರು ಋತ್ವಿಜರಲ್ಲಿ ಒಬ್ಬನು ಪಟ್ಟ ಮಹಿಷಿಯೊಡನೆ ಸರಸ ವಾಡುತ್ತಾನೆ. "ಓ ಪಟ್ಟದ ರಾಣಿ, ಮಂಚದ ಮೇಲೆ ಹತ್ತಿ ನಿನ್ನ ತಂದೆ ತನ್ನ ಲಿಂಗವನ್ನು ನಿನ್ನ ತಾಯಿಯ ಯೋನಿಯಲ್ಲಿ ಇಟ್ಟದ್ದರಿಂದ ನೀನು ಹುಟ್ಟಿದೆ. ಥೂ ಅಸಹ್ಯ" ಎನ್ನುತ್ತಾನೆ. ಪಟ್ಟದ ರಾಣಿ ಆ ಬ್ರಾಹ್ಮಣನೊಡನೆ ಸರಸವಾಡುತ್ತಾಳೆ. ’ನಿನ್ನ ತಾಯಿ ತಂದೆಯರಿಗೆ ನೀನು ಸಹ ಅದೇರೀತಿ ಹುಟ್ಟಿರುವಿ. ಆದ್ದರಿಂದ ನಮ್ಮ ಹುಟ್ಟುಗಳು ಸಮಾನ’ ಎನ್ನುತ್ತಾಳೆ. (ಯಜು. ಅಧ್ಯಾಯ ೨೩, ಮಂತ್ರ ೨೪)

ಪುರುಷನು ಸ್ತ್ರೀಯ ಯೋನಿಯನ್ನು ಎರಡು ಕೈಗಳಿಂದ ಅಗಲಿಸಿ ಲಿಂಗವನ್ನು ಪ್ರವೇಶಿಸುತ್ತಾನೆ. (ಯಜು. ಅಧ್ಯಾಯ ೨೩, ಮಂತ್ರ ೨೬)

ಚಿಕ್ಕದಾಗಲಿ ದೊಡ್ಡದಾಗಲಿ ಲಿಂಗವು ಯೋನಿಯೊಳಗೆ ಪ್ರವೇಶಿಸುತ್ತದೆ. ವೃಷಣಗಳು ಹೊರಗೆ ತೂಗಾಡುತ್ತವೆ. (ಯಜು. ಅಧ್ಯಾಯ ೨೩, ಮಂತ್ರ ೨೭)

ಯಜ್ಞಕಾಲದಲ್ಲಿ ಪುರೋಹಿತರು ಎಷ್ಟು ಕಾಲ ರಾಜನ ಪತ್ನಿಯೊಡನೆ ರತಿಕ್ರೀಡೆ ನಡೆಸುತ್ತಾರೋ ಅಲ್ಲಿಯವರೆಗೆ ಪಟ್ಟದರಾಣಿ ಯೋನಿಯಲ್ಲಿ ಕುದುರೆಯ ಶಿಶ್ನ ಇರುತ್ತದೆ. ಯಾವಾಗ ಪುರುಷಾಂಗ ಉಬ್ಬುತ್ತದೊ ಆಗ ಯೋನಿ ಕಮಲದಂತೆ ಅರಳುತ್ತದೆ. ಸ್ತ್ರೀ ಪುರುಷರು ಒಂದಾಗುತ್ತಾರೆ. ಸ್ತ್ರೀ ಕೆಳಗೆ ಮಲಗಿ ತನ್ನ ತೊಡೆಗಳನ್ನು ಎತ್ತುತ್ತಾಳೆ, ಪುರುಷನು ಮೇಲೆ ಬಾಗಿ ರಮಿಸುತ್ತಾನೆ. (ಯಜು. ಅಧ್ಯಾಯ ೨೩, ಮಂತ್ರ ೨೯)

ಕುದುರೆಯ ಸೇವಕ ದಾಸಿಯೊಡನೆ ಹೇಳುತ್ತಾನೆ; "ಶೂದ್ರ ಸ್ತ್ರೀಯೊಡನೆ ವೈಶ್ಯನು ರಮಿಸಿದರೆ ಅವಳ ಗಂಡ ತನ್ನ ಹೆಂಡತಿ ದೊಡ್ಡವನೊಡನೆ ರಮಿಸಿದಳು ಎಂದು ಸಂತೋಷಿಸುವುದಿಲ್ಲ; ವ್ಯಭಿಚರಿಸಿದಳು ಎಂದು ಅಳುತ್ತಾನೆ." ಆ ದಾಸಿ ಸೇವಕನಿಗೆ ಉತ್ತರಿಸುತಾಳೆ. "ವೈಶ್ಯ ಸ್ತ್ರೀಯೊಡನೆ ಶೂದ್ರನು ರಮಿಸಿದರೆ ಅವಳ ಗಂಡ ತನ್ನ ಹೆಂಡತಿ ವೀರ್‍ಯಲಾಭ ಗಳಿಸಿದ್ದಾಳೆ ಎಂದು ಆನಂದಿಸುವುದಿಲ್ಲ. ತನ್ನ ಹೆಂಡತಿ ನೀಚನೊಡನೆ ರಮಿಸಿದಳು ಎಂದು ಗೋಳಾಡುತ್ತಾನೆ. (ಯಜು. ಅಧ್ಯಾಯ ೨೩, ಮಂತ್ರ ೩೦)

ಅಶ್ವಮೇಧ ಯಜ್ಞವನ್ನು ಶ್ರೌತ ಸೂತ್ರಗಳೂ ಇದೇರೀತಿ ವರ್ಣಿಸಿವೆ. ಇಲ್ಲಿ ಸಭ್ಯತೆಗಾಗಿ ಕೆಲವು ವರ್ಣನೆಗಳನ್ನು ಕೈಬಿಡಲಾಗಿದೆ. ಕೆಲವನ್ನು ಆದಷ್ಟು ನಯಗೊಳಿಸಲಾಗಿದೆ. ವೈದಿಕ ಪುರೋಹಿತರಿಗೆ ಮಿಥುನವೇ ಒಂದು ಯಜ್ಞ. ಒಂದು ಮಂತ್ರದಲ್ಲಿ ಹೀಗೆ ಹೇಳಿದೆ; ’ಕಾಮವು ಕೆಂಡ, ಭಗಲಿಂಗಗಳು ಆ ಕೆಂಡವನ್ನು ಹುಟ್ಟಿಸುವ ಅರಣಿಗಳು. (ಯಜ್ಞದಲ್ಲಿ ಬೆಂಕಿಯನ್ನು ಹುಟ್ಟಿಸಲು ಬಳಸುವ ಕೊರಡುಗಳು). ಜನನೇಂದ್ರಿಯ ರೋಮಗಳು ದರ್ಭೆಗಳು. ಹೋಮ ಸಮಿತ್ತು ವೀರ್‍ಯ. ಸುರತದಲ್ಲಿ ಹುಟ್ಟುವ ಧ್ವನಿಗಳು ಮಂತ್ರಗಳು, ವೃಷಣಗಳು ಪುರೋಹಿತರು.’

ಜರ್ಮನ್ ನಾಟಕಕಾರ ಮತ್ತು ಕವಿ ಬ್ರೆಕ್ಟ್ ತನ್ನ ಒಂದು ಕವನದಲ್ಲಿ ಹೀಗೆ ಹೇಳುತ್ತಾನೆ; "ನೀತಿ ಬೋಧಕರು, ಹಲವರಿಗೆ ತಿಳಿಯದ ಲ್ಯಾಟಿನ್ ಭಾಷೆಯಲ್ಲಿ ಪ್ರವಚನ ನೀಡುತ್ತಾರೆ. ನಾನು ಅದನ್ನು ಸಾಮಾನ್ಯರ ಆಡುಮಾತಿಗೆ ಅನುವಾದ ಮಾಡುತ್ತೇನೆ. ಆಗ ಅದರಲ್ಲಿ ಅಡಗಿರುವ ಮೋಸವೆಲ್ಲಾ ಬಯಲಾಗುತ್ತದೆ." ಇದೇ ಮಾತನ್ನು ಸಂಸ್ಕೃತದಲ್ಲಿರುವ ವೈದಿಕ ಸಾಹಿತ್ಯಕ್ಕೂ ಅನ್ವಯಿಸಬಹುದು.
’ಒಂದು ಅಶ್ವಮೇಧ’ - ಓದುಗರ ಪ್ರತಿಕ್ರಿಯೆ ಕುಹಕಿಗಳ ಕುಚೋದ್ಯವಿರಬಹುದೆ?

ದಿನಾಂಕ ೧೧-೮-೮೫ರ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾದ ಶ್ರೀಬಿ.ವಿ. ವೀರಭದ್ರಪ್ಪನವರ ಲೇಖನ ’ಒಂದು ಅಶ್ವಮೇಧ’ವು ಬಹು ಪ್ರಾಚೀನಕಾಲ ದಿಂದಲೂ ಲಕ್ಷಾಂತರ ಹಿಂದೂಗಳಿಂದ ಪರಮ ಪವಿತ್ರವೆಂದು ಪರಿಗಣಿಸಲ್ಪಟ್ಟ ನಾಲ್ಕು ವೇದಗಳಲ್ಲಿ ಎರಡನೆಯದಾದ ಯಜುರ್ವೇದದ ಬಗ್ಗೆ ಅಪಾರ ವಿಶ್ವಾಸವನ್ನು ಹೊಂದಿರುವ ಆಸ್ತಿಕ ಮಹಾಜನರ ಮನಸ್ಸನ್ನು ನೋಯಿಸಬಹುದಾಗಿದ್ದರೂ, ವೇದಗಳಲ್ಲಿ ಬರೆದದ್ದೆಲ್ಲವೂ ಪವಿತ್ರ ಹಾಗೂ ಪ್ರಶ್ನಾತೀತ ಎಂಬ ಕುರುಡು ನಂಬಿಕೆಗೆ ಬದ್ಧರಾಗದೆ, ನಿಜವಾಗಿಯೂ ಯಾವುದು ಏಕೆ-ಹೇಗೆ-ಹೀಗೆ ಆಗಿರಬಹುದೆಂದು ವಿಚಾರ ಮಾಡಲು ಬಹಳ ಉಪಯುಕ್ತವಾಗಿದೆ.

ಈ ಲೇಖನದಲ್ಲಿ " ಒಂದು ಅಶ್ವಮೇಧ" ಕೊಟ್ಟ ಅರ್ಥ-ವ್ಯಾಖ್ಯಾನ ಗಳನ್ನು ಅವಲೋಕಿಸಿದಾಗ, ನಿಸ್ಸಂದೇಹವಾಗಿಯೂ ಈ ಆಕ್ಷೇಪಿತ ಮಂತ್ರಗಳು (೧೯ರಿಂದ ೩೦, ಅಧ್ಯಾಯ ೨೩) ಯಜುರ್ವೇದದ ಭಾಗ ಹೌದೇ? ಎಂಬ ಅನುಮಾನ ಬರುತ್ತದೆ. ಅಂದರೆ ಈ ಮಂತ್ರಗಳು ಈಗ ಲಭ್ಯವಿರುವ ಯಜುರ್ವೇದದಲ್ಲಿ ಇಲ್ಲ ಎಂದಲ್ಲ. ಮೂಲಕೃತಿಯಲ್ಲಿ ಇಲ್ಲದಿರಬಹುದಾಗಿದ್ದು ಕಾಲಾಂತರದಲ್ಲಿ ಯಾರೋ ಕುಹಕಿಗಳ ಕುಚೋದ್ಯದಿಂದಾಗಿ ಸೇರಿಸಲ್ಪಟ್ಟಿರಬಾರದೇಕೆ?

ನಾನು ಹೀಗೆ ವಿಚಾರ ಮಾಡಲು ಪ್ರಬಲ ಕಾರಣ ಏನೆಂದರೆ,’ಅಶ್ವಮೇಧ’ ಯಾಗದ ಬಗ್ಗೆರಾಮಾಯಣ, ಮಹಾಭಾರತ ಗ್ರಂಥಗಳಲ್ಲಿರುವ ವಿವರಣೆಗಳಲ್ಲಾಗಲೀ, ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯವರು ಪ್ರಕಟಿಸಿರುವ ಕನ್ನಡ ವಿಶ್ವಕೋಶದಲ್ಲಾಗಲೀ (ಸಂಪುಟ ೧) ಅಶ್ವಮೇಧಯಾಗದ ಸಂದರ್ಭದಲ್ಲಿ ಈ ಮಂತ್ರಗಳಲ್ಲಿ ಹೇಳಿರುವಂತೆ ಕ್ರಿಯೆಗಳು ನಡೆದವು, ನಡೆಯುತ್ತಿದ್ದವು ಅಥವಾ ನಡೆಯಬೇಕು ಎಂದು ಹೇಳಿಲ್ಲ.

ಮಹಾಭಾರತವನ್ನೇ ತೆಗೆದುಕೊಂಡರೆ-ಕುರುಕ್ಷೇತ್ರ ಕದನದಲ್ಲಿ ನಡೆದ ಅಪಾರ ಬಂಧುಹತ್ಯಾ ಪಾಪ ಪರಿಹಾರಾರ್ಥವಾಗಿ ವ್ಯಾಸರ ಸಲಹೆಯಂತೆ ಯುಧಿಷ್ಠಿರನು ಕೈಗೊಳ್ಳುವ ಅಶ್ವಮೇಧಯಾಗದ ವರ್ಣನೆಗಳಲ್ಲಿ ಎಲ್ಲಿಯೂ, ಯುಧಿಷ್ಠಿರನ ಪಟ್ಟದ ರಾಣಿ ಅಂದರೆ ದ್ರೌಪದಿಯು ಅಶ್ವಶಾಲೆಗೆ ಹೋಗಿ ಯಾಗದ ಕುದುರೆಯ ಪಕ್ಕದಲ್ಲಿ ಮಲಗಿ ೧೯ ಮತ್ತು ೨೦ನೆಯ ಮಂತ್ರಗಳಲ್ಲಿ ಹೇಳಿರುವಂತೆ ನಡೆದುಕೊಂಡ ಬಗ್ಗೆ ಯಾಗಲೀ, ಯುಧಿಷ್ಠಿರನು ೨೧ನೆಯ ಮಂತ್ರದಲ್ಲಿ ಹೇಳಿರುವಂತೆ ಕುದುರೆಯನ್ನು ಬೇಡಿಕೊಂಡನು ಎಂದಾಗಲೀ, ಅಧ್ವರ್ಯು ಮೊದಲಾದ ಪುರೋಹಿತರು ಯುಧಿಷ್ಠಿರನ ಕಿರಿಯ ಪತ್ನಿಯ ರೊಂದಿಗೆ ೨೩ನೆಯ ಮಂತ್ರದಲ್ಲಿ ಹೇಳಿರುವಂತೆ ವರ್ತಿಸಿದರು, ಹಾಗೂ ಆ ಸ್ತ್ರೀಯರ ಅದೇ ಮಂತ್ರದಲ್ಲಿ ಹೇಳಿರುವಂತೆ ಅವರೊಂದಿಗೆ ಸರಸವಾಡುತ್ತಿದ್ದರು ಎಂದಾಗಲಿ ವಿವರಗಳು ಕಾಣಬರುವುದಿಲ್ಲ.

ಈಗ ವ್ಯಭಿಚಾರ ಎಂದು ಪರಿಗಣಿಸಲ್ಪಡುವ ವಿವಾಹ ಪೂರ್ವ ಅಥವಾ ವಿವಾಹೇತರ ಹೆಣ್ಣು-ಗಂಡಿನ ಲೈಂಗಿಕ ಸಂಬಂಧಗಳನ್ನು ಕೂಡಾ ಆ ಕಾಲದಲ್ಲಿ ಅಕ್ರಮ ಎಂದೇನೂ ಭಾವಿಸುತ್ತಿರಲಿಲ್ಲ ಎಂಬುದಕ್ಕೆ ಮಹಾ ಭಾರತದಲ್ಲಿ ಅನೇಕ ಉದಾಹರಣೆಗಳು ದೊರೆಯುವಾಗ, ಯುಧಿಷ್ಠಿರನು ಅಶ್ವಮೇಧಯಾಗವನ್ನು ಈ ಆಕ್ಷೇಪಿತ ಮಂತ್ರಗಳನ್ನೂ ಒಳಗೊಂಡಂತೆ ಯಜುರ್ವೇದದ ಪ್ರಕಾರವೇ ನಡೆಸಿದ್ದರೆ. ದ್ರೌಪದಿಯು, ಖಂಡಿತವಾಗಿಯೂ ಯಾಗದ ಕುದುರೆಯೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದಿದ- ಹಾಗೂ ಇತರ ಘಟನೆಗಳೂ ಈ ಮಂತ್ರಗಳಲ್ಲಿ ಹೇಳಿರುವಂತೆ ನಡೆದ ಬಗ್ಗೆ ಮಹಾಭಾರತದಲ್ಲಿ ಬರೆಯಲ್ಪಟ್ಟಿಲ್ಲವೇಕೆ?

(ಕುದುರೆಯು, ಅದರ ಪರ್ಯಟನೆಯ-ಕಾಳಗಗಳ-ಕುದುರೆಯ ಬಲಿಯ -ಹೋಮದ-ದಾನ ದಕ್ಷಿಣೆ ಭೋಜನಗಳ ವರ್ಣನೆ ಇಲ್ಲಿ ಅಪ್ರಸ್ತುತ)

ರಾಮಾಯಣದಲ್ಲಿಯೂ ’ಅಶ್ವಮೇಧ’ಯಾಗ ನಡೆಯಿತೆನ್ನಲಾಗಿದ್ದರೂ ಯಜುರ್ವೇದದ ಈ ಮಂತ್ರಗಳ ಅನ್ವಯ ಕ್ರಿಯೆಗಳು ನಡೆದ ಬಗ್ಗೆ ಯಾವ ಸಮರ್ಥನೆಯೂ ದೊರೆಯುವುದಿಲ್ಲ.

ಕನ್ನಡ ವಿಶ್ವಕೋಶದ ಪ್ರಕಾರ-ಅಶ್ವಮೇಧವು ವಸಂತ ಅಥವಾ ಗ್ರೀಷ್ಮಋತುಗಳಲ್ಲಿ ನಡೆಸಲ್ಪಡುತ್ತಿದ್ದ ಒಂದು ಜನಪ್ರಿಯ ರಾಜ್ಯೋತ್ಸವ. ಗಾಯನ, ವೇಣು ವಾದನ ಇತ್ಯಾದಿಗಳನ್ನೊಳಗೊಂಡ ಈ ಉತ್ಸವದಲ್ಲಿ ಉತ್ತಮ ತಳಿಯ ಕುದುರೆಯೊಂದನ್ನು, ಅದು ಸ್ವೇಚ್ಛೆಯಾಗಿ ರಾಜಕುಮಾರರ-ಅಧಿಕಾರಿಗಳ ಬೆಂಗಾವಲಿನಲ್ಲಿ ಒಂದು ವರ್ಷ ಸುತ್ತಾಡಿ ಬಂದನಂತರ , ಹೋತವೊಂದರ ಜೊತೆಯಲ್ಲಿ ಬಲಿಗಂಬಕ್ಕೆ ಕಟ್ಟಿ, ನಂತರ ಅದರ ಮೇಲೆ ಬಟ್ಟೆಯನ್ನು ಹೊದಿಸಿ ಉಸಿರುಕಟ್ಟಿಸಿ ಸಾಯಿಸಲಾಗುತ್ತಿತ್ತು. ಆಮೇಲೆ ಅದನ್ನು ಜಾಣತನದಿಂದ ಕತ್ತರಿಸಿ ವಿವಿಧ ಭಾಗಗಳನ್ನು ಒಲೆಗಳ ಮೇಲೆ ಸುಟ್ಟು ಪ್ರಜಾಪತಿಗೆ ಅರ್ಪಿಸಲಾಗುತ್ತಿತ್ತು. ಬೇರೆ ಸಾವಿರಾರು ಪ್ರಾಣಿಗಳೂ ಬಲಿಯಾಗುತ್ತಿದ್ದವು. ಇಲ್ಲಿ ಕೂಡಾ ಯಾಗ ಸಂದರ್ಭದ ಲೈಂಗಿಕ ಚಟುವಟಿಕೆಗಳ ಸಂಭಾವ್ಯತೆ ಅಥವಾ ಅವಶ್ಯಕತೆಯ ಬಗ್ಗೆ ಏನೂ ಹೇಳಿಲ್ಲ.

ಹೀಗಿರುವಾಗ ೨೩ನೆಯ ಅಧ್ಯಾಯದ ೧೯ರಿಂದ ೩೦ರ ವರೆಗಿನ ಮಂತ್ರಗಳು ನಿಜವಾಗಿಯೂ ಯಜುರ್ಮೇದದ ಮಂತ್ರಗಳಾಗಿದ್ದು ಯಾಗಕಾಲದಲ್ಲಿ ಪಠಿಸಲ್ಪಡುತ್ತಿದ್ದಲ್ಲಿ ಆ ಕಾಲದಲ್ಲಿ ಸಂಸ್ಕೃತವೇ ಜನರ ಆಡುಭಾಷೆಯಾಗಿತ್ತು ಎಂದು ಭಾವಿಸಿದರೆ.. (ಬೇರೆ ಭಾಷೆಗಳು ಇದ್ದ ಬಗ್ಗೆ ಮಾಹಿತಿಯ ಕೊರೆತೆಯಿಂದಾಗಿ)- ಈ ಮಂತ್ರಗಳ ಅರ್ಥವನ್ನು ಗ್ರಹಿಸಿ ಅದೇ ಪ್ರಕಾರ ವರ್ತಿಸಲಾಗಿದ್ದಲ್ಲಿ- ಯುಧಿಷ್ಠಿರನು ಅಶ್ವಮೇಧಯಾಗವನ್ನು ಮಾಡಿದಾಗ ದ್ರೌಪದಿಯು ೧೯ಮತ್ತು ೨೦ನೆಯ ಮಂತ್ರಗಳಲ್ಲಿ ಹೇಳಿರುವಂತೆ, ಯುಧಿಷ್ಠಿರ ಹಾಗೂ ಅಶ್ವಶಾಲೆಯಲ್ಲಿ ಸೇರಿದ್ದ ಋತ್ವಿಜರ ಸಮುಖದಲ್ಲಿ, ಯಾಗದ ಕುದುರೆ ಯಿಂದ ಸಂಭೋಗದ ತೃಪ್ತಿಯನ್ನು ಪಡೆದಳು ಎಂದಾಗುತ್ತದೆ; ಮತ್ತು ಯುಧಿಷ್ಠಿರನೇ ಕುದುರೆಯನ್ನು ಕುರಿತು ದ್ರೌಪದಿಗೆ ಸಂಭೋಗ ಸುಖವನ್ನು ನೀಡೆಂದು ಕೇಳಿಕೊಂಡ ಎಂದಾಗುತ್ತದೆ. ಹಾಗೆಯೇ ಪುರೋಹಿತರ ಮತ್ತು ಯುಧಿಷ್ಠಿರನ ಕಿರಿಯ ಪತ್ನಿಯರ ನಡುವೆ ಲೈಂಗಿಕ ಚಟುವಟಿಕೆಗಳು ನಡೆದವು ಎಂದಾಗುತ್ತದೆ.

ಈ ರೀತಿ ನಡೆದೇ ಇಲ್ಲವಾಗಿದ್ದರೆ ಅತ್ಯಂತ ಧರ್ಮನಿಷ್ಠನಾಗಿದ್ದು ಧರ್ಮರಾಯನೆಂದೇ ಪ್ರಖ್ಯಾತನಾಗಿದ್ದ ಯುಧಿಷ್ಠಿರನು ತಾನು ನಡೆಸಿದ ಅಶ್ವಮೇಧಯಾಗದಲ್ಲಿ ಮಂತ್ರಗಳಲ್ಲಿ ಹೇಳಿರುವಂತೆ ಎಲ್ಲವನ್ನೂ ನಡೆಸದೆ ಕ್ರಿಯಾ ಲೋಪದ ದೋಷಕ್ಕೆ ಗುರಿಯಾಗುತ್ತಾನೆ. ಆಗ ಅವರ ಯಾಗವೂ ಅಪೂರ್ಣ ಹಾಗೂ ದೋಷಯುಕ್ತವಾದುದಾಗಿರುತ್ತದೆ.

ಹೀಗೆಯೇ ರಾಮಾಯಣದಲ್ಲಿ ಶ್ರೀರಾಮನು ಅಶ್ವಮೇಧಯಾಗವನ್ನು ನಡೆಸಿದಾಗ ಸೀತೆಯೂ ಇದೇ ಪ್ರಕಾರ ಯಾಗಕಾರ್ಯದಲ್ಲಿ ಸಹಕರಿಸ ಬಹುದೇ ಎಂದೂ ವಿಚಾರ ಮಾಡಬೇಕಾಗುತ್ತದೆ.

ಪಂಚ ಮಹಾ ಪತಿವ್ರತೆಯರಲ್ಲಿ ಗಣ್ಯರಾದ ಸೀತಾ ದ್ರೌಪದಿಯರು ತಮ್ಮ ಗಂಡಂದಿರು ನಡೆಸಿದ ಅಶ್ವಮೇಧಯಾಗಗಳಲ್ಲಿ, ಧರ್ಮ ಅಥವಾ ಕರ್ತವ್ಯ ಪಾಲನೆಯ ಒಂದೇ ಒಂದು ಉದ್ದೇಶದಿಂದ ಕೂಡಾ, ಬಹಿರಂವಾಗಿಯೇ ಆಗಲಿ ಏಕಾಂತದಲ್ಲಿಯೇ ಆಗಲಿ ಯಾಗದ ಕುದುರೆ ಗಳೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದಿದ್ದರು ಎಂದು, ಯಾಗಗಳಲ್ಲಿ ನಂಬಿಕೆ ಇರುವ ಮತ್ತು ಮಂತ್ರಗಳ ಪಾವಿತ್ರ್ಯದ ಬಗ್ಗೆ ತೀವ್ರ ವಿಶ್ವಾಸವಿರುವ ಪುರೋಹಿತರಾಗಲೀ-ಪಂಡಿತರಾಗಲೀ-ಬೇರೆ ಯಾರೇ ಆಗಲೀ ಪ್ರಮಾಣೀಕರಿಸಿ ಹೇಳಿಯಾರೇ?
ಬೊ.ನಾ. ಕೃಷ್ಣಮೂರ್ತಿ