You are hereಮದ್ಯಪಾನ ಮತ್ತು ಮಠಗಳು*

ಮದ್ಯಪಾನ ಮತ್ತು ಮಠಗಳು*


ಲೇಖಕರು: ಬಿ.ವಿ. ವೀರಭದ್ರಪ್ಪ
ಹಕ್ಕುಗಳು: ಲೇಖಕರವು

ಅಕ್ಟೋಬರ್ ೨ರಂದು ಬೆಂಗಳೂರಿನ ಗಾಂಧಿಭವನದಲ್ಲಿ ಮದ್ಯಪಾನ ವ್ಯಸನ ದಿಂದ ಸಮಾಜದ ಮೇಲೆ ಆಗುತ್ತಿರುವ ದುಷ್ಟರಿಣಾಮಗಳ ಬಗ್ಗೆ ಚಿಂತಿಸಲು ಮತ್ತು ರಚನಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳಲು ಮಠಾಧಿಪತಿಗಳ ಒಂದು ಸಮಾವೇಶವನ್ನು ಕರೆಯಲಾಗಿದೆ. ಧರ್ಮವೇ ಒಂದು ಅಫೀಮು ಎಂದು ಭಾವಿಸುವ ವಿಚಾರವಾದಿಗಳಿಗೆ ಧರ್ಮ ಗುರುಗಳು ಪಾನನಿಷೇಧಕ್ಕಾಗಿ ಒಂದುಗೂಡುತ್ತಿರುವುದು ಒಂದು ಒಗಟಿನಂತೆ ಕಾಣ ಬಹುದು. ನಮ್ಮ ಮಠಾಧಿಪತಿಗಳು "ನಾವೆಲ್ಲ ಒಂದು, ನಾವೆಲ್ಲ ಹಿಂದು" ಎಂಬ ಘೋಷಣೆಯಡಿಯಲ್ಲಿ ಒಂದುಗೂಡುವುದು ಸಾಮಾನ್ಯವಾಡಿಕೆ. ಆದರೆ ಗಾಂಧಿಜಯಂತಿಯಂದು ನಡೆಯುವ ಸಾಮಾವೇಶದಲ್ಲಿ ಜೈನ, ಮುಸ್ಲಿಂ ಮತ್ತು ಇತರ ಧರ್ಮಗಳೂ ಭಾಗವಹಿಸುತ್ತಾರೆ ಎಂಬುದು ಇನ್ನೊಂದು ವಿಶೇಷ: ತಮ್ಮ ತಮ್ಮ ಧರ್ಮ, ಜಾತಿಗಳ ಕಕ್ಷೆಯೊಳಗೇ ಸುತ್ತುವ ಮಠಾಧಿಪತಿಗಳು ತಮ್ಮ ಸಂಕುಚಿತ ವಲಯಗಳನ್ನು ದಾಟಿ ದಿನೇದಿನೇ ಹೆಚ್ಚುತ್ತಿರುವ ಮದ್ಯವ್ಯಸನದ ಪಿಡುಗಿನ ವಿರುದ್ಧ ಹೋರಾಟಕ್ಕೆ ಅಣಿಯಾಗುತ್ತಿರುವುದು ಸ್ವಾಗತದ ಸಂಗತಿ.

ಈಗಾಗಲೇ ತಮ್ಮ ನೂರಾರು ಶಾಲಾವನಗಳಲ್ಲಿ ಸಸ್ಯಗಳನ್ನು ನೆಡುವ, ಮರಗಳನ್ನು ಬೆಳೆಸುವ ಮತ್ತು ಗ್ರಾಮೀಣ ಜನರಿಗೆ ನೀರು ಮತ್ತು ನೈರ್ಮಲ್ಯಗಳ ಬಗ್ಗೆ ತಿಳಿವಳಿಕೆ ಮೂಡಿಸುವ ಜನಜಾಗೃತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ಸಿರಿಗೆರೆಯ ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಸ್ವಾಮೀಜಿ ಅವರು ಪಾನನಿಷೇಧ ಕುರಿತ ಸಮ್ಮೇಳನದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿರುವುದಾಗಿ ತಿಳಿದುಬಂದಿದೆ. ರಾಮ ಜನ್ಮಭೂಮಿಯ ಸಂರಕ್ಷಣೆಯಂತಹ ಭಾವನಾತ್ಮಕ ವಿಷಯಗಳಲ್ಲಿ ತಮ್ಮ ಕರ್ತೃತ್ವ ಶಕ್ತಿಯನ್ನು, ವ್ಯರ್ಥಗೊಳಿಸುವ ಮತ್ತು ಶ್ರದ್ಧಾಬಿಂದುಗಳ ಹೆಸರಿನಲ್ಲಿ ನೂತನ ಶೋಷಣಾ ಕೇಂದ್ರಗಳನ್ನು ಸ್ಥಾಪಿಸುವ ದಂಧೆಯಲ್ಲೇ ತೊಡಗಿರುವ ನಮ್ಮ ಧರ್ಮಗುರುಗಳು ತಡವಾಗಿಯಾದರೂ ನಮ್ಮ ಸಮಾಜದ ಜ್ವಲಂತ ಸಮಸ್ಯೆಗಳತ್ತ ತಮ್ಮ ದೃಷ್ಟಿಯನ್ನು ತಿರುಗಿಸುತ್ತಿರುವುದು ಮೆಚ್ಚುವ ಸಂಗತಿಯಾಗಿದೆ. ಮಠಗಳಲ್ಲಿ ಜನರಿಗೆ ನಂಬಿಕೆ ಉಳಿಯ ಬೇಕಾದರೆ ಅವು ತಮ್ಮ ಕಂದಾಚಾರಗಳನ್ನು ಬದಿಗೆ ಸರಿಸಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕಾದುದು ಅಗತ್ಯ.

ಈಗ ಆರು ತಿಂಗಳ ಹಿಂದೆ ಸಿರಿಗೆರೆ ಸ್ವಾಮೀಜಿ ಅವರ ನೇತೃತ್ವದಲ್ಲಿ ಮದ್ಯಪಾನ ನಿಷೇಧ ಆಂದೋಲನ ಪ್ರಾರಂಭವಾದಾಗ ಅನೇಕರು ಅದರ ಉದ್ದೇಶದ ಬಗ್ಗೆ ಸಂದೇಹ ತಾಳಿದ್ದರು. ತಮ್ಮ ಪ್ರತಿಷ್ಠಿತ ಅನುಯಾಯಿಗಳ ಕುಟುಂಬಗಳಿಗೆ ಸೇರಿದ ಕೆಲವು ತರುಣರು ಮದ್ಯಪಾನ ದಿಂದ ಉನ್ಮತ್ತರಾಗಿ ಅಪಘಾತಕ್ಕೀಡಾದುದರ ಹಿನ್ನೆಲೆಯಲ್ಲಿ ಈ ಆಂದೋಲನ ಹುಟ್ಟಿಕೊಂಡುದೆ. ಇದು ತಮ್ಮ ಜಾತಿಯ ಜನರನ್ನು ಕುಡಿತದ ಚಟದಿಂದ ಬಿಡಿಸಲು ಹಾಕಿಕೊಂಡ ಒಂದು ಪರಿಮಿತವಾದ ಕಾರ್ಯಕ್ರಮ ಎಂದು ಕೆಲವರು ಟೀಕಿಸಿದರು. ಕೆಲವು ಗಣ್ಯರು, "ಈ ಸ್ವಾಮಿಗೆ ಬೇರೆ ಕೆಲಸ ಇಲ್ಲ. ಇದೆಲ್ಲಾದರೂ ಆಗುವ ಕೆಲಸವೆ? ’ಬಸವನ ಬಳಗ’ದಲೇ ಕುಡಿಯುವವರು ಬೇಕಾದಷ್ಟು ಜನ ಇಲ್ಲವೆ? ಕುಡಿಯೋರಿಗೆ ಇವ್ರೇನು ದುಡ್ಡು ಕೊಡುತಾರಾ? ನಮ್ಮ ದುಡ್ಡು ನಾವು ಕುಡಿತೀವಿ. ಇವ್ರಿಗ್ಯಾಕೆ ಬೇಕು ಇದರ ಉಸಾಬರಿ’ ಎಂದು ಅವರ ಹಿಂದೆಯೇ ಗೊಣಗಿಕೊಳ್ಳುತ್ತಿದ್ದುದು ಉಂಟು.

ಈ ಆಂದೋಲನದಲ್ಲಿ ಸಕ್ರಿಯ ಆಸಕ್ತಿ ಹೊಂದಿರುವ ನಾನು ಇದರ ಬಗ್ಗೆ ಜನರ ಪ್ರತಿಕ್ರಿಯೆ ಏನೆಂದು ಕುತುಹಲದಿಂದ ಗಮನಿಸುತ್ತಿದ್ದೇನೆ. ಸಿರಿಗೆರೆ ಸ್ವಾಮೀಜಿ ಮತ್ತು ಮಠದಲ್ಲಿ. ನಿಷ್ಠೆ ತೋರುವ ಕೆಲವು ಪ್ರತಿಷ್ಠಿತರೇ ಮದ್ಯಪಾನ ನಿಷೇಧಕ್ಕಾಗಿ ಏರ್ಪಡಿಸುವ ಪಾದಯಾತ್ರೆಗಳ ಬಗ್ಗೆ ಅಪಹಾಸ್ಯ ಮಾಡುತ್ತಾರೆ. ಆದರೆ ಪಾದಯಾತ್ರೆ ನಡೆಸಿದ ಹಳ್ಳಿಗಳ ಸಾಮಾನ್ಯ ಜನ, ಲಿಂಗಾಯತರಲ್ಲದವರೂ ಸಹ, ಈ ಚಳವಳಿಯಲ್ಲಿ ಆಸಕ್ತಿ ಮತ್ತು ನಂಬಿಕೆಯನ್ನು ತಾಳುತ್ತಿದ್ದಾರೆ.

ಹೆಮ್ಮನ ಬೇತೂರು, ತುರ್ಚಗಟ್ಟ, ಕಂದನಕೋವಿ, ಸಿದ್ಧನೂರು, ಕುರುಡಿ, ಮೆದೆಕೇರಿಪುರ, ಬೇಡರೆಡ್ಡಿಹಳ್ಳಿ, ಬಂಜಗೆರೆ, ಅಜ್ಜನಹಳ್ಳಿ ಘಟಪರ್ತಿ ಗಳಲ್ಲಿ ಸ್ವಾಮೀಜಿಯವರ ನೇತೃತ್ವದಲ್ಲಿ ಪಾದಯಾತ್ರೆಗಳು ನಡೆದ ನಂತರ ಅಲ್ಲಿ ಬಹುಮಟ್ಟಿಗೆ ಹೆಂಡ ಸಾರಾಯಿಯ ಮಾರಾಟ ನಿಂತುಹೋಗಿದೆ. ಎಲ್ಲೋ ಕೆಲವರು ಪಕ್ಕದ ಊರುಗಳಿಂದ ಕುಡಿದು ಬರುವವರಾದರೂ ಊರಲ್ಲಿ ತಲೆಎತ್ತಿ ಓಡಾಡಲು ಅಂಜುತ್ತಾರೆ. ಈ ಮೊದಲು ಕುಡುಕರ ಅಸಭ್ಯ ವರ್ತನೆ, ಅಟ್ಟಹಾಸಗಳಿಗೆ ಊರಿನ ಸಭ್ಯರು ಅಂಜಬೇಕಾಗಿತ್ತು.

ಮೆದೆಕೇರಿಪುರ ಹೆಚ್ಚಾಗಿ ಲಂಬಾಣಿ ಮತ್ತು ನಾಯಕರು ಇರುವ ಹಳ್ಳಿ. ಅವರೆಲ್ಲಾ ಸಮೀಪದ ಮ್ಯಾಂಗನೀಸ್ ಗಣಿಗಳಲ್ಲಿ ಕಷ್ಟದ ಕೆಲಸ ಮಾಡುತ್ತಾರೆ. ಹೆಚ್ಚು ಕೂಲಿಯನ್ನೂ ತರುತ್ತಾರೆ. ಆದರೆ ಅದರಲ್ಲಿ ಮುಕ್ಕಾಲು ಪಾಲು ಕುಡಿತಕ್ಕೇ ಮೀಸಲಾಗಿತ್ತು. ಗಂಡಸರ ಜತೆಗೆ ಹೆಂಗಸರೂ ಕುಡಿಯುವುದು ರೂಢಿಯಲ್ಲಿತ್ತು. ಆ ಊರಿನ ಕೆಲವು ತರುಣರು ಶಾಲೆ, ಕಾಲೇಜುಗಳಲ್ಲಿ ಕಲಿತಿದ್ದರೂ ಹಿರಿಯರ ಜಾಡಿನಲ್ಲೇ ನಡೆಯುತ್ತಿದ್ದರು,. ಆದರೆ ಮದ್ಯಪಾನ ನಿಷೇಧ ಆಂದೋಲನ ಪ್ರಾರಂಭವಾದ ಅನಂತರ ಆ ಊರಿನ ತರುಣರೇ ಮದ್ಯದ ಮಾರಾಟ ಮಾಡುವುದನ್ನು ನಿಲ್ಲಿಸಲು ಮುಂದೆ ಬಂದರು. ಹಿರಿಯರೂ ಅವರೊಡನೆ ಸಹಕರಿಸಿದರು. ಒಂದು ವಾರ ಯಶಸ್ವಿಯಾಗಿ ಪಾನನಿಷೇಧ ಆಚರಣೆಗೆ ತಂದ ನಂತರವೇ ಸ್ವಾಮೀಜಿ ಅಲ್ಲಿ ಪಾದಯಾತ್ರೆ ಮಾಡಲು ಒಪ್ಪಿಕೊಂಡರು. ಅಂದು ಸುಮಾರು ಮೂರು ಸಾವಿರ ವಿದ್ಯಾರ್ಥಿಗಳು ಮತ್ತು ಹಳ್ಳಿಯ ಜನ ಸಿರಿಗೆರೆಯಿಂದ ಮೆದೆಕೇರಿ ಪುರಕ್ಕೆ ಸ್ವಾಮಿಗಳೊಡನೆ ನಡೆದುಕೊಂಡು ಹೋದರು. ಲಂಬಾಣಿ ಹೆಣ್ಣು ಮಕ್ಕಳು ಹಬ್ಬದ ಉಡುಗೆಗಳನ್ನು ಧರಿಸಿ ಕುಣಿದು ಹಾಡಿ ನಲಿದರು. ಇನ್ನು ಮುಂದೆ ಈ ಊರಿನಲ್ಲಿ ಮದ್ಯಪಾನ ಮಾರಾಟ ಮಾಡುವಿದಿಲ್ಲ ಮತ್ತು ಇತರರು ಮಾರಾಟ ಮಾಡಲು ಬಿಡುವುದಿಲ್ಲ ಎಂದು ಆ ಉದ್ಯೋಗದಲ್ಲಿ ತೊಡಗಿದ್ದವರೇ ಪ್ರತಿಜ್ಞೆ ಮಾಡಿದರು. ಆಡಿದ ಮಾತಿನಂತೆ ಇಂದಿಗೂ ನಡೆದುಕೊಳ್ಳುತ್ತಿದ್ದಾರೆ.

ಚಳ್ಳಕೆರೆ ತಾಲ್ಲೂಕಿನ ಘಟಪರ್ತಿಯ ಕಥೆ ಇನ್ನೂ ರೋಮಾಂಚನ ಕಾರಿಯಾಗಿದೆ. ಅದು ಹೆಚ್ಚಾಗಿ ನಾಯಕರು, ಕುರುಬರು, ಹರಿಜನರು ಇರುವ ಊರು. ರೆಡ್ಡಿ ಮತ್ತು ಲಿಂಗಾಯತರು ಇಲ್ಲಿ ಅಲ್ಪ ಸಂಖ್ಯಾತರು. ಈ ಪ್ರದೇಶದಲ್ಲಿ ರೈತಸಂಘ ಚುರುಕಾಗಿ ಕೆಲಸ ಮಾಡುತ್ತಿದೆ. ಅಧಿಕೃತ ಅಂಗಡಿಯಲ್ಲಿ ಮಾರಲಾದ ಹೆಂಡ ಕುಡಿದ ಕೆಲವರು ತೀವ್ರ ಅಸ್ವಸ್ಥರಾದ ನಂತರ ಅಲ್ಲಿಯ ರೈತರು ಹೆಂಡದ ವಿರುದ್ಧ ಸಮರ ಸಾರಿದರು. ಕೆಲವು ದಿನ ಅಂಗಡಿಯಲ್ಲಿ ಮುಚ್ಚಿಸಿದರು. ಆದರೆ ಪೋಲಿಸರ ಕುಮ್ಮಕ್ಕಿನಿಂದ ಪುನಃ ಅಂಗಡಿಯಲ್ಲಿ ಹೆಂಡದ ಮಾರಾಟ ಪ್ರಾರಂಭ ವಾಯಿತು. ಆಗ ಸಿರಿಗೆರೆ ಶ್ರೀಗಳ ಆಂದೋಲನ ಕೇಳಿದ್ದ ರೈತನಾಯಕರು ಅವರನ್ನು ಭೇಟಿಯಾಗಿ ತಮಗೆ ಬೆಂಬಲ ಮತ್ತು ಮಾರ್ಗದರ್ಶನ ನೀಡಬೇಕು, ತಮ್ಮ ಊರಲ್ಲಿ ಪಾದಯಾತ್ರೆ ಮಾಡಬೇಕು ಎಂದು ಕೇಳಿಕೊಂಡರು. ಜುಲೈ ೩೦ರಂದು ಬೇಡರೆಡ್ಡಿಹಳ್ಳಿ, ಬಂಜಗೆರೆ, ಅಜ್ಜನಹಳ್ಳಿ ಮತ್ತು ಘಟಪರ್ತಿಗಳಲ್ಲಿ ಸಿರಿಗೆರೆ ಸ್ವಾಮಿಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಯಬೇಕೆಂದು ತೀರ್ಮಾನವಾಯಿತು.

ಘಟಪರ್ತಿ ನಾನು ಹುಟ್ಟಿದ ಊರಾದ್ದರಿಂದ ಅಂದು ನಡೆದ ಬಹಿರಂಗ ಸಭೆಯಲ್ಲಿ ನಾನು ಅಧ್ಯಕ್ಷತೆ ವಹಿಸಬೇಕಾಯಿತು. ಅಂದು ಬೆಳಿಗ್ಗೆ ೧೦ ಗಂಟೆಗೆ ಹೊರಟು ೮ ಕಿ.ಮೀ. ನಡೆದು, ಮೂರು ಹಳ್ಳಿಗಳ ಮೂಲಕ ಹಾದು ನಾಲ್ಕನೆಯ ಹಳ್ಳಿಯಲ್ಲಿ ಬಹಿರಂಗ ಸಭೆ ಸೇರಿದೆವು. ಪಾದಯಾತ್ರೆಯಲ್ಲಿ ಅಕ್ಕಪಕ್ಕದ ಹಳ್ಳಿಗಳ ಸಾವಿರಾರು ಜನ ಸೇರಿಕೊಂಡರು. ಅದರಲ್ಲಿ ಮಹಿಳೆಯರು ಪುರುಷರಷ್ಟೇ ಸಂಖ್ಯೆಯಲ್ಲಿದ್ದರು. ಘಟಪರ್ತಿ ತಲುಪಿದಾಗ ೩೦೦೦ಕ್ಕೂ ಹೆಚ್ಚು ಜನ ಅಲ್ಲಿ ಸೇರಿದ್ದರು. ಆ ಸಭೆಯಲ್ಲಿ ಮಾತಾಡಿದ ಕೆಲವರು ೧೯೪೨ ಮತ್ತು ೧೯೪೭ರ ಗಾಂಧಿ ಚಳವಳಿ ಮತ್ತು ಈಚಲ ಸತ್ಯಾಗ್ರಹಗಳನ್ನು ನೆನಪಿಗೆ ತಂದುಕೊಂಡರು. ಸಿರಿಗೆರೆ ಸ್ವಾಮೀಜಿ ಗಂಡಸರ ಮದ್ಯ ವ್ಯಸನವನ್ನು ಬಿಡಿಸಲು ಹೆಂಗಸರು ಟೊಂಕಕಟ್ಟಿ ಒನಕೆ ಓಬವ್ವನಂತೆ ಹೋರಾಡಬೇಕು ಎಂದು ಕರೆ ನೀಡಿದರು.

ಅಂದೇ ಹೆಂಡ ಸಾರಾಯಿ ಮಾರಾಟಗಾರರಿಗೆ ಊರ ಜನರಿಂದ ೭ ದಿನಗಳಲ್ಲಿ ಅಂಗಡಿ ಮುಚ್ಚಲು ನೋಟಿಸ್ ಜಾರಿಯಾಯಿತು. ಆಗಸ್ಟ್ ೧೦ ರ ನಂತರ ಹೆಂಡದ ಲಾರಿ ಊರೊಳಗೆ ಬರಕೂಡದು ಎಂದು ಕಟ್ಟಪ್ಪಣೆ ಮಾಡಲಾಗಿತ್ತು. ಆಗಸ್ಟ್ ೧೨, ೧೯ ಮತ್ತು ೩೦ರಂದು ಹೆಂಡದ ಲಾರಿ ಪೊಲೀಸ್ ಕುಮ್ಮಕ್ಕಿನೊಡನೆ ಊರೊಳಗೆ ಬಂದಿತಾದರೂ ನೆರೆದ ನೂರಾರು ಜನರು ಹೆಂಡವನ್ನು ಲಾರಿಯಿಂದ ಕೆಳಗಿಳಿಸಲು ಬಿಡಲಿಲ್ಲ. ಇದೇ ೭ರ ಮೇಳೆಗೆ ರೈತರ ಮತ್ತು ಪೊಲೀಸರ ನಡುವೆ ದೊಡ್ಡ ಸಂಘರ್ಷ ತಲೆದೋರಿತು. ಮೀಸಲು ಪೋಲೀಸ್ ಪಡೆ ಬಂದರೂ ರೈತರು ಮತ್ತು ಮಹಿಳೆಯರು ಜಗ್ಗಲಿಲ್ಲ. ಗಾಂಧಿ ಭಾವಚಿತ್ರ ಮುಂದಿಟ್ಟು ಕೊಂಡು ಭಜನೆ ಮಾಡುತ್ತಾ ಶಾಂತಿಯುತವಾಗಿ ಪ್ರತಿಭಟನೆ ಮುಂದುವರಿಸಿದರು. ಪರಿಸ್ಥಿತಿಯನ್ನು ಹತೋಟಿಗೆ ತರಲು ಸ್ಥಳಕ್ಕೆ ಧಾವಿಸಿದ ತಹಶೀಲ್‌ದಾರ ಗಂಗಪ್ಪ ಮತ್ತು ಡಿ.ವೈ.ಎಸ್.ಪಿ. ಸಿದ್ದೇಶ್ವರ ಗೌಡರನ್ನು ಜನ ತರಾಟೆಗೆ ತೆಗೆದು ಕೊಂಡರು. "ಊರಲ್ಲಿ ಕುಡಿಯಲು ನೀರಿದೆಯಾ ಎಂದು ಯಾರಾದರೂ ಬಂದು ಕೇಳಿದ್ದೀರಾ? ಈಗ ಹೆಂಡ ಸಾರಾಯಿ ತಂದು ಕುಡೀರಿ ಅಂತ ಹೇಳ್ತೀರಿ. ನಾಚಿಕೆಯಾಗೋಲ್ವೆ ನಿಮಗೆ" ಎಂದು ರೈತ ಮಹಿಳೆಯರು ಛೀಮಾರಿ ಮಾಡಿದರು. ಅಧಿಕಾರಿಗಳು ಹೆಂಡದ ಲಾರಿ ಸಮೇತ ವಾಪಸಾಗ ಬೇಕಾಯಿತು.

ಘಟಪರ್ತಿ ಮತ್ತು ಸುತ್ತಣ ಊರುಗಳ ರೈತರ ದೃಢಸಂಕಲ್ಪ, ತಹಶೀಲದಾರರ ವಿವೇಚನೆ. ಡಿ.ವೈ.ಎಸ್.ಪಿ.ಯ ಸಂಯಮಪೂರ್ಣ ವರ್ತನೆ ಫಲಕಾರಿಯಾದವು. ಹಣದ ಬಲದಿಂದ ಯಾರನ್ನಾದರೂ ಕೊಳ್ಳಬಹುದು. ಏನನ್ನಾದರೂ ಮಾಡಬಹುದು; ಯಾರ ಮನೆ ಹಾಳಾದರೂ ಚಿಂತೆಯಿಲ್ಲ, ತಮ್ಮ ದುಡ್ಡಿನ ಚೀಲ ತುಂಬಿದರೆ ಸಾಕು ಎಂದು ಕೊಬ್ಬಿರುವ ಹೆಂಡದ ದೊರೆಗಳ ಸಂಚು ಫಲಿಸಲಿಲ್ಲ.

ಆಗಸ್ಟ ೧೫ರಂದು ದಾವಣಗೆರೆಯಲ್ಲಿ ನಡೆದ ಪಾದಯಾತ್ರೆಯ ನಂತರ ಸೇರಿದ್ದ ಸುಮಾರು ೧೦,೦೦೦ ಜನರನ್ನು ಉದ್ದೇಶಿಸಿ ಮುಖ್ಯ ಆತಿಥಿಗಳಾಗಿ ಆಗಮಿಸಿದ್ದ ಡಾ. ಶಿವರಾಮ ಕಾರಂತರು ಮಾತನಾಡಿದರು. ಸಮಾಜದಲ್ಲಿ ಗಣ್ಯರಾದವರು ತಾವು ಮಾತ್ರ ಮದ್ಯದ ವ್ಯಸನದಿಂದ ದೂರವಿದ್ದರೆ ಸಾಲದು, ಈ ಸಮಸ್ಯೆ ತಮಗೆ ಸಂಬಂಧಿಸಿದ್ದಲ್ಲ ಎಂದು ಉಪೇಕ್ಷೆ ತಾಳದೆ ಈ ಆಂದೋಳನದಲ್ಲಿ ಪಾಲುಗೊಳ್ಳಬೇಕು. ನಾನೊಬ್ಬ ಲೇಖಕನೆಂದು ನನ್ನ ಬಗ್ಗೆ ಗೌರವವುಳ್ಳವರು ನನ್ನ ಮಾತಿಗೆ ಬೆಲೆ ಕೊಡುತ್ತಾರೆ. ಅದೇರೀತಿ ಭಿನ್ನ ಭಿನ್ನ ವೃತ್ತಿಗಳಲ್ಲಿರುವ ಗಣ್ಯರ ಮಾತನ್ನು ಆಯಾ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ತಪ್ಪದೆ ಕೇಳುತ್ತಾರೆ ಎಂದು ಕಾರಂತರು ಅಭಿಪ್ರಾಯಪಟ್ಟರು.

ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ’ಬೆಂಗಳೂರು ಮಹಾನಗರದ ಆರೋಗ್ಯ’ ಎಂಬ ವಿಚಾರಸಂಕಿರಣದಲ್ಲಿ ಪ್ರಬಂಧ ಮಂಡಿಸಿದ ರಾಷ್ಟೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನಗಳ ಸಂಸ್ಥೆಯ (NIMHANS) ಪ್ರಾಧ್ಯಾಪಕ ಡಾ|| ಮೋಹನ್ ಐಸಾಕ್ ಮದ್ಯವ್ಯಸನದ ದುಷ್ಪರಿಣಾಮಗಳ ಬಗ್ಗೆ ಗಾಬರಿ ಹುಟ್ಟಿಸುವ ಸಂಗತಿಗಳನ್ನು ಹೊರಗೆಡವಿದ್ದಾರೆ. ಇಂದು ಕುಡಿತದ ಚಟ ಎಷ್ಟು ಬೃಹದಾಕಾರವಾಗಿ ಬೆಳೆದಿದೆ ಎಂದರೆ ಮದ್ಯ ಮಾರಾಟದಿಂದ ಸರ್ಕಾರಕ್ಕೆ ಬರುವ ಆದಾಯದ ಎರಡರಷ್ಟು ಹಣವನ್ನು ಮದ್ಯವ್ಯಸನಿಗಳ ಆರೋಗ್ಯ ಮತ್ತು ಪುನರ್ವಸತಿಗಾಗಿ ವಿನಿಯೋಗಿಸ ಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಕುಡಿತದ ಸಂಬಂಧವಾಗಿ ಬರುವ ಕ್ಷಯ ಮತ್ತು ಹೃದಯ ರೋಗಗಳ ಸಂಖ್ಯೆ ಕಳವಳಕಾರಿಯಾಗುವಷ್ಟು ಹೆಚ್ಚಾಗಿತ್ತಿದೆ. ನಿಮ್ಹಾನ್ಸ್‌ಗೆ ಬರುವ ರೋಗಿಗಳಲ್ಲಿ ಶೇ. ೬೦ ರಿಂದ ಶೇ. ೮೦ರಷ್ಟು ರೊಗಿಗಳು ಕುಡಿತದ ಚಟ್ಟಕ್ಕೆ ಬಲಿ ಯಾದವರಾಗಿರುತ್ತಾರೆ. ಕುಡುಕರಿಂದ ಆಗುವ ಅಪರಾಧ, ಹಿಂಸಾಚಾರ ಮತ್ತು ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ. ಶೇ. ೭೫ರಷ್ಟು ಬಾಲಾಪರಾಧಿಗಳ ತಂದೆಯರು ಮದ್ಯವ್ಯಸನಿ ಗಳಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಭಾರತ ಸಂವಿಧಾನದ ರಾಷ್ಟ್ರೀಯ ನೀತಿಯನ್ನು ನಿರ್ದೆಶಿಸುವ ತತ್ತ್ವಗಳಲ್ಲಿ ಜನರು ಆರೋಗ್ಯ ರಕ್ಷೆಣೆ ಮತ್ತು ಪೌಷ್ಠಿಕ ಆಹಾರದ ಪೂರೈಕೆಯ ದೃಷ್ಟಿಯಿಂದ ಮದ್ಯಪಾನ ಮತ್ತು ಮಾದಕ ವಸ್ತುಗಳ ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಘೋಷಿಸಲಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಒಂದಾದಮೇಲೆ ಒಂದರಂತೆ ಅನೇಕ ರಾಜ್ಯಗಳು ಪಾನನಿಷೇಧದ ನಿಯಮಗಳನ್ನು ಸಡಿಲಿಸುತ್ತಾ ಬಂದಿವೆ. ಗುಜರಾತ್ ಮಾತ್ರ ಕಟ್ಟುನಿಟ್ಟಾಗಿ ಪಾನ ನಿಷೇಧವನ್ನು ಪಾಲಿಸುತ್ತಾ ಬಂದಿವೆ. ಇತ್ತೀಚೆಗೆ ನಾಗಾಲ್ಯಾಂಡ್‌ನ ಮಹಿಳೆಯರು ಮಧ್ಯ ಮಾರಾಟದ ವಿರುದ್ಧ ಆಕ್ರೋಶದಿಂದ ಹೋರಾಟಕ್ಕಿಳಿದುದರಿಂದ ಅಲ್ಲಿಯ ಸರ್ಕಾರ ಪಾನನಿಷೇಧವನ್ನು ಜಾರಿಗೆ ತಂದಿದೆ.

ರಾಷ್ಟ್ರೀಯ ನಿರ್ದೇಶಕ ತತ್ತ್ವಗಳನ್ನು ಜಾರಿಗೆ ತರಲೇಬೇಕೆಂದು ಹೋರಾಟ ಮಾಡಲು ಕಾನೂನುಪ್ರಕಾರ ಅವಕಾಶವಿಲ್ಲದಿರಬಹುದು. ನಿರ್ದೇಶಕ ತತ್ತ್ವಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮಾರ್ಗದರ್ಶಿಗಳಾಗ ಬೇಕೆಂದು ಸಂವಿಧಾನದ ಕರ್ತೃಗಳು ಆಶಿಸಿದ್ದರು ಎಂಬುದರಲ್ಲಿ ಸಂಶಯವಿಲ್ಲ, ಅವರ ಕನಸುಗಳನ್ನು ನನಸಾಗಿಸಬೇಕಾದ ಹೊಣೆಗಾರಿಕೆ ಇಂದಿನ ಸರ್ಕಾರಗಳ ಮೇಲಿದೆ. ಆದರೆ ನಮ್ಮ ಸರ್ಕಾರ ನಿರ್ದೇಶಕ ತತ್ತ್ವಗಳ ೪೭ನೇ ವಿಧಿಗೆ ಸಂಪೂರ್ಣವಾಗಿ ಬೆನ್ನು ತಿರುಗಿಸಿದೆ. ಅದಕ್ಕೆ ಕಾರಣ ಮದ್ಯ ಮಾರಾಟದಿಂದ ಸರ್ಕಾರದ ಬೊಕ್ಕಸಕ್ಕೆ ಬರುವ ಆದಾಯವೊಂದೇ ಕಾರಣವಲ್ಲ. ಹೆಂಡದ ದೊರೆಗಳಿಂದ ರಾಜಕೀಯ ನಾಯಕರು ಮತ್ತು ಪಕ್ಷಗಳಿಗೆ ದೊರೆಯುವ ಎಂಜಲು ಕಾಸೂ ಕಾರಣವಾಗಿದೆ. ಈ ವಿಷವೃತ್ತದಿಂದ ಜನರನ್ನು ಕಾಪಾಡುವವರು ಮಾತ್ರ ಎಲ್ಲಿಯೂ ಕಾಣುತ್ತಿಲ್ಲ. ಆದ್ದರಿಂದ ಜನರೇ ತಮ್ಮ ಉಳಿವಿಗಾಗಿ ಮತ್ತು ಏಳಿಗೆಗಾಗಿ ತಾವೇ ಸನ್ನದ್ಧರಾಗಬೇಕಾಗಿದೆ. ಘಟಪರ್ತಿ ಗ್ರಾಮ ದಲ್ಲಿ ಅಂತಹ ಕೆಲಸ ಈಗ ಪ್ರಾರಂಭವಾಗಿದೆ. ಇತರ ಗ್ರಾಮಗಳಿಗೆ ಇದು ಮೇಲ್ಪಂಕ್ತಿಯಾಗಬೇಕಾಗಿದೆ.

ನಮ್ಮ ಧರ್ಮಗುರುಗಳು ಆಗಾಗ ’ಸರ್ವಧರ್ಮ ಸಮ್ಮೇಳನ’, ’ವಿಶ್ವ ಹಿಂದು ಪರಿಷತ್’ ಇತ್ಯಾದಿ ಹೆಸರುಗಳಲ್ಲಿ ಗತವೈಭವದ ಡಾಂಬಿಕ ಪ್ರದರ್ಶನದಲ್ಲಿ ತಲ್ಲೀನವಾಗುವುದುಂಟು. ಅದರ ಬದಲು ಜನಸಾಮಾನ್ಯರ ಸಮಸ್ಯೆಗಳತ್ತ ತಮ್ಮ ದೃಷ್ಟಿ ಹೊರಳಿಸುವುದು ಅಗತ್ಯ. ಈಗಲೂ ಧರ್ಮ ಗುರುಗಳ ಬಗ್ಗೆ ಸಾಮಾನ್ಯ ಜನರಲ್ಲಿ ಗೌರವಭಾವ ಇದೆ. ಆ ಸದ್ಭಾವನೆಗೆ ತಕ್ಕಂತೆ ಮಠಾಧಿಪತಿಗಳು ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ತೋರಲು ಮುಂದಾಗುತ್ತಾರೆಂದು ನಿರೀಕ್ಷಿಸಲಾಗಿದೆ.

*ಧರ್ಮದ ಅಫೀಮು ಹಂಚುವುದೇ ಮಠಗಳ, ಜಗದ್ಗುರುಗಳ ಕೆಲಸವೆಂಬುದು ನಿಜ ವಾದರೂ, ಇತ್ತೀಚಿಗೆ ಚಿತ್ರದುರ್ಗ ಜಿಲ್ಲೆಯ ಕೆಲವು ಜಗದ್ಗುರುಗಳು ಈ ರಾಜ್ಯವನ್ನು ಕಾಡುತ್ತಿರುವ ಮದ್ಯಪಾನದ ವಿರುದ್ಧ ಜನಸಂಘಟನೆ ಮಾಡತೊಡಗಿದ್ದಾರೆ. ಬೇರೆ ಯಾವುದೇ ವಿಚಾರದಲ್ಲಿ ಈ ಜಗದ್ಗುರುಗಳನ್ನು ಒಪ್ಪಲಾಗದಿದ್ದರೂ ಮದ್ಯಪಾನ ನಿಷೇಧದ ಚಳವಳಿ ನಡೆಸುತ್ತಿರುವ ಇವರ ಕಾರ್ಯ ಸ್ವಾಗತಾರ್ಹ.

ಓದುಗರ ಅಭಿಪ್ರಾಯಗಳು

Search