You are hereಕಸಾಯಿಖಾನೆಯಲ್ಲಿ ಮಠಾಧೀಶರ ಮೂತಿ

ಕಸಾಯಿಖಾನೆಯಲ್ಲಿ ಮಠಾಧೀಶರ ಮೂತಿ


ಲೇಖಕರು: ಬಿ.ವಿ. ವೀರಭದ್ರಪ್ಪ
ಹಕ್ಕುಗಳು: ಲೇಖಕರವು

ಉಡುಪಿಯ ಇಬ್ಬರು ಪ್ರತಿಷ್ಠಿತ ಸ್ವಾಮಿಗಳು ಆಧುನಿಕ ಕಸಾಯಿ ಖಾನೆಗಳ ಬಗ್ಗೆ ಉಗ್ರ ಹೇಳಿಕೆಗಳನ್ನು ನೀಡಿದ್ದಾರೆ. ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಇತ್ತೀಚೆಗೆ ಬಿಜಾಪುರದಲ್ಲಿ ಮಾತಾಡುತ್ತಾ "ಗೋಮಾತೆಯ ರಕ್ಷಣೆಗಾಗಿ ತಾವು ಪ್ರಾಣಾರ್ಪಣೆಗೂ ಸಿದ್ಧ" ಎಂದಿದ್ದಾರೆ. ಬೆಂಗಳೂರಿನ ಕಾಚರಕನ ಹಳ್ಳಿಯ ಬಳಿ ಸ್ಥಾಪಿಸಲು ಉದ್ದೇಶಿಸಿರುವ ೫.೮ ಕೋಟಿ ರೂಪಾಯಿ ವೆಚ್ಚದ ಆಧುನಿಕ ಕಸಾಯಿ ಖಾನೆಯ ಯೋಜನೆಯನ್ನು ಸರ್ಕಾರ ಕೈಬಿಡದಿದ್ದರೆ ತಮ್ಮ ಹಾಗೆ ಅನೇಕರು ಪ್ರಾಣ ತ್ಯಾಗಕ್ಕೆ ತಯಾರಿದ್ದಾರೆ ಎಂದು ಘೋಷಿಸಿದ್ದಾರೆ. ಅಲ್ಲದೆ, ಸರ್ಕಾರ ಬಹುಮತೀಯರ ಭಾವನೆಗಳನ್ನು ಕಡೆಗಣಿಸಿ ಅಲ್ಪಸಂಖ್ಯಾತರನ್ನು ಓಲೈಸಲು ತೊಡಗಿದೆ ಎಂದು ಆರೋಪಿಸಿದ್ದಾರೆ.

ಪಾಲಿಮಾರು ಮಠದ ಶ್ರೀ ವಿದ್ಯಾಮಾನ್ಯತೀರ್ಥ ಸ್ವಾಮೀಜಿ ಸರ್ಕಾರ ಗೋಹತ್ಯಾ ಕಾನೂನನ್ನು ತಿದ್ದುಪಡಿ ಮಾಡಬೇಕು ಮತ್ತು ಜಾರಿಯಲ್ಲಿ ತರಬೇಕು ಎಂದು ಕರೆ ನೀಡಿದ್ದಾರೆ.

ಇಬ್ಬರು ಸ್ವಾಮಿಗಳು ಮತ್ತು ಅವರು ಪ್ರತಿನಿಧಿಸುವ ಮಠಗಳು ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನ ಪಡೆದಿವೆ. ಅವರು ನೀಡುವ ಹೇಳಿಕೆಗಳು ಅಷ್ಟೇ ಜವಾಬ್ದಾರಿಯಿಂದ ಕೊಡಿರುತ್ತವೆ ಎಂದು ಸಾಮಾನ್ಯರು ನಂಬುತ್ತಾರೆ ಮತ್ತು ಜವಾಬ್ದಾರಿಯಿಂದ ಕೊಡಿರಬೇಕು ಎಂದು ವಿಚಾರವಂತರು ನಿರೀಕ್ಷಿಸುತ್ತಾರೆ.

ಚಳವಳಿಯ ನಾಯಕತ್ವವನ್ನು ವಹಿಸಿರುವ ಶ್ರೀ ಸುಗುಣೇಂದ್ರ ತೀರ್ಥರ ಆಪಾದನೆಯನ್ನು ಪರಿಶೀಲಿಸೋಣ. ಭಾರತದ ಬಹುಸಂಖ್ಯಾತರು ಹಿಂದೂಗಳು. ಅವರು ಸಸ್ಯಾಹಾರಿಗಳು, ಅಲ್ಪಸಂಖ್ಯಾತರು ಮುಸ್ಲಿಮರು, ಕ್ರಿಶ್ಚಿಯನ್ನರು, ಅವರು ಮಾಂಸಾಹಾರಿಗಳು ಎಂಬುದು ಅವರ ಮಾತಿನ ಇಂಗಿತವಾಗಿದೆ. ವಾಸ್ತವಾಂಶವೇನೆಂದರೆ ಭಾರತದಲ್ಲಿ ಶೇ. ೬೦ಕ್ಕಿಂತ ಹೆಚ್ಚು ಜನ ಮಾಂಸಾಹಾರಿಗಳು. ಬೆಂಗಳೂರಿನ ಭಾರತೀಯ ಆಡಳಿತ ಸಂಸ್ಥೆಯ ಹಿಂದಿನ ನಿರ್ದೇಶಕ ಎನ್.ಎಸ್. ರಾಮಸ್ವಾಮಿ ಅವರ ಪ್ರಕಾರ ಸಮಾರು ೫೦ ಕೋಟಿ ಭಾರತೀಯರು ತಪ್ಪದೆ ಅಥವಾ ಆಗಾಗ ಮಾಂಸಾಹಾರ ಸೇವಿಸುತ್ತಾರೆ.

ವೇದಗಳ ಕಾಲದಲ್ಲಿ ಹಿಂದೂಗಳಿಗೆ ಮಾಂಸಾಹಾರ ಪ್ರಿಯವಾಗಿತ್ತು. ಬೌದ್ಧ ಮತ್ತು ಜೈನಧರ್ಮಗಳ ಪ್ರಭಾವದಿಂದ ಹಿಂದು ಆಚಾರ್‍ಯರು ಸಸ್ಯಾಹಾರಿಗಳಾದರು. ವೀರಶೈವರು ಸಸ್ಯಾಹಾರಿಗಳಾದುದು ಸಹ ಜೈನರನ್ನು ಅನುಸರಿಸಿಯೇ. ಬಹುಪಾಲು ಹಿಂದೂಗಳು ಹಿಂದಿನಂತೆ ಈಗಲೂ ಮಾಂಸಾಹಾರಿಗಳು. ಇತ್ತೀಚಿನವರೆಗೂ ಮೇಲು ಜಾತಿಗಳು ಹಿಂದೂ ಸಸ್ಯಾಹಾರಿಗಳು ಕೆಳಜಾತಿಗಳ ಹಿಂದೂ ಮಾಂಸಾಹಾರಿಗಳನ್ನು ಹೀನಾಯವಾಗಿ ಕಾಣುತ್ತಿದ್ದರು. ಕ್ರಮೇಣ ಆ ಭಾವನೆ ಕಡೆಮೆಯಾಗುತ್ತಿದೆ. ಇಂದು ಆಹಾರ ಪದ್ಧತಿ ವೈಯಕ್ತಿಕ ವಿಷಯವಾಗಿದೆ. ಒಂದೇಕುಟುಂಬದಲ್ಲಿ ಸಸ್ಯಾಹಾರಿಗಳು ಮಾಂಸಹಾರಿಗಳು ಜತೆಜತೆಗೆ ಇರುವುದು ಇಂದು ಅಚ್ಚರಿಯ ವಿಷಯವಾಗಿಲ್ಲ.

ವಿಜಯವಾಡದ ನಾಸ್ತಿಕ ಕೇಂದ್ರದಲ್ಲಿ ರೂಢಿಯಲ್ಲಿರುವ ಒಂದು ಆಚರಣೆಯನ್ನು ಕುರಿತು ಪ್ರಸ್ತಾಪಿಸುವುದು ಇಲ್ಲಿ ಅಪ್ರಸ್ತುತವಾಗಲಿಕ್ಕಿಲ್ಲ. ಮಹಾತ್ಮಗಾಂಧಿಯ ಒಡನಾಡಿಗಳಾಗಿದ್ದರೂ ಕಟ್ಟಾ ನಾಸ್ತಿಕರಾಗಿದ್ದ ಗೋರಾ (ಅವರ ಪೂರ್ಣ ಹೆಸರು ಗೋ. ರಾಮಚಂದ್ರರಾವ್) ಜಾತಿ ಸಂಕೇತ ವಾಗಿದ್ದ ಜನಿವಾರವನ್ನು ಕಿತ್ತು ಹಾಕಿ, ನಾಸ್ತಿಕ ಕೇಂದ್ರವನ್ನು ಸ್ಥಾಪಿಸಿದರು. ದೇವರನ್ನು ನಂಬದ ಈ ಸಂಸ್ಥೆಯ ಸದಸ್ಯರಿಗೆ ಮಾನವೀಯತೆಯಲ್ಲಿ ಅಪಾರ ವಿಶ್ವಾಸ. ನಾನಾ ರೀತಿಯ ಪ್ರಗತಿಪರ ಸೇವಾಕಾರ್‍ಯಗಳಲ್ಲಿ ಈ ಕೇಂದ್ರ ಸದಾ ತೊಡಗಿರುತ್ತದೆ. ಅಲ್ಲಿ ಆಗಾಗ ಸಾಮೂಹಿಕ ಭೋಜನಕೂಟಗಳು ನಡೆಯುತ್ತವೆ. ಅನ್ನ, ಹುಳಿ, ಸಾರು, ಪಲ್ಯ, ಉಪ್ಪಿನಕಾಯಿಗಳಂತಹ ಸಾಮಾನ್ಯ ಸಸ್ಯಾಹಾರವನ್ನು ಅಲ್ಲಿ ಬಡಿಸಲಾಗುತ್ತದೆ.

ಆ ಸಮುದಾಯ ಭೋಜನದ ಒಂದು ವಿಶೇಷವೇನೆಂದರೆ: ಭೋಜನ ಶಾಲೆಯ ಬಾಗಿಲಲ್ಲಿ ಮೇಜಿನ ಮೇಲೆ ಎರಡು ಸೀಸೆಗಳಲ್ಲಿ ಆಧುನಿಕ ಸಿದ್ಧ ಕಾರ್ಖಾನೆಯೊಂದರಿಂದ ತರಿಸಿದ ಆಹಾರವಸ್ತುಗಳಿರುತ್ತವೆ. ಒಂದು ಸೀಸೆಯಲ್ಲಿ ದನದ ಮಾಂಸ ಇನ್ನೊಂದರಲ್ಲಿ ಹಂದಿಯ ಮಾಂಸ. ಈ ಭೋಜನಕೂಟದಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಬಾಗಿಲ ಬಳಿ ಇರುವ ಈ ಸೀಸೆಗಳಿಂದ ಒಂದೊಂದು ಚಮಚ ದನದ ಮಾಂಸ ಮತ್ತು ಹಂದಿ ಮಾಂಸ ಸೇವಿಸಿ ಊಟಕ್ಕೆ ಕುಳಿತುಕೊಳ್ಳುತ್ತಾರೆ.

ಗೋಮಾಂಸಹಿಂದೂಗಳಿಗೆ ನಿಷಿದ್ಧ, ಹಂದಿ ಮಾಂಸ ಮುಸಲ್ಮಾನರಿಗೆ ತ್ಯಾಜ್ಯ. ಈ ಸಾಂಕೇತಿಕ ದನ ಮತ್ತು ಹಂದಿ ಮಾಂಸ ಸೇವನೆಯ ಉದ್ದೇಶ ಅಂತಹ ಆಹಾರವನ್ನು ಸೇವಿಸುವವರ ವಿರುದ್ಧ ನಮಗೆ ಅಸಹ್ಯ ಭಾವನೆ ಇಲ್ಲ ಎಂಬುದನ್ನು ಪ್ರತ್ಯಕ್ಷ ತೋರಿಸುವುದಾಗಿದೆ. ಇದೊಂದು ಭಾವೈಕ್ಯತೆಯ ಸಹಪಂಕ್ತಿ ಭೋಜನ.

೧೯೭೮ರಲ್ಲಿ ಒಂದು ಅಧ್ಯಯನ ಶಿಬಿರದಲ್ಲಿ ಭಾಗವಹಿಸಲು ಹೋಗಿದ್ದ ನನಗೆ ಅಂತಹ ಒಂದು ಭೋಜನಕೂಟದಲ್ಲಿ ಭಾಗವಹಿಸುವ ಅವಕಾಶ ದೊರಕಿತ್ತು. ನಾನು ಸಾಮಾನ್ಯವಾಗಿ *ಸಸಾಹ್ಯಾರಿ*. ಸಂದರ್ಭ ಒದಗಿದಾಗ, ಮಾಂಸಾಹಾರವನ್ನು ಸೇವಿಸಿದ್ದೇನೆ. ಅಂದು ವಿಜಯವಾಡದ ಸಾಮೂಹಿಕ ಭೋಜನಕೂಟದಲ್ಲಿ ಒಂದೊಂದು ಚಮಚ ಗೋ ಮತ್ತು ಹಂದಿ ಮಾಂಸ ಸೇವಿಸಲು ನನಗೆ ಯಾವ ಹಿಂಜರಿತವೂ ಆಗಲಿಲ್ಲ. ಬದಲಿಗೆ ಭಿನ್ನ ಸಾಮಾಜಿಕ ಮತ್ತು ಭೌಗೋಳಿಕ ಹಿನ್ನೆಲೆಯ ಹಿಂದೂ, ಮುಸಲ್ಮಾನ್ ಮತ್ತು ಕ್ರೈಸ್ತರೊಡನೆ ಸಹಪಂಕ್ತಿಯಲ್ಲಿ ಬೆರೆಯುವ ಅವಕಾಶ ದೊರಕಿದ್ದಕ್ಕೆ ಪುಲಕಿತನಾಗಿದ್ದೆ. ಆಂಧ್ರದ ಹಳ್ಳಿಪಟ್ಟಣಗಳ ಕಮ್ಮ, ರೆಡ್ಡಿ, ಬ್ರಾಹ್ಮಣ, ಆದಿವಾಸಿಗಳ ಸಾಮಾಜಿಕ ಆಚಾರ ವಿಚಾರಗಳ ಪರಿಚಯ ನನ್ನ ಹೃದಯವನ್ನು ಶ್ರೀಮಂತಗೊಳಿಸಿತ್ತು.

ಪಾಲಿಮಾರು ಮಠದ ಶ್ರೀ ವಿದ್ಯಾಮಾನ್ಯ ತೀರ್ಥರು ಗೋಹತ್ಯಾ ನಿಷೇಧ ಕಾಯಿದೆಯನ್ನು ತಿದ್ದುಪಡಿ ಮಾಡಬೇಕು ಮತ್ತು ಆಚರಣೆಯಲ್ಲಿ ತರಬೇಕು ಎಂದು ಹೇಳಿದ್ದಾರೆ. ವಾಸ್ತವವಾಗಿ ಈಗಾಗಲೇ ಗೋಹತ್ಯೆ ಕಾನೂನು ಪ್ರಕಾರ ಶಿಕ್ಷಾರ್ಹಅಪರಾಧವಾಗಿದೆ. ೧೨ ವರ್ಷಕ್ಕೆ ಮೇಲ್ಪಟ್ಟ ಎತ್ತು, ಎಮ್ಮೆ ಮತ್ತು ಕೋಣಗಳನ್ನು ಮಾತ್ರ ವಧಿಸಲು ಈಗಿನ ಕಾನೂನು ಪ್ರಕಾರ ಅವಕಾಶವಿದೆ. ಆದರೆ ಕದ್ದು ಹಸು ಗಳನ್ನು ಕೊಲ್ಲುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಸಂದಿಗೊಂದಿಗಳಲ್ಲಿ ಖಾಸಗಿ ಒಡೆತನದ ಕಸಾಯಿ ಖಾನೆಗಳು ಇಂತಹ ಕಾನೂನುಬಾಹಿರ ಚಟವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತವೆ. ಈ ಕಾನೂನುಬಾಹಿರ ಕೃತ್ಯಗಳನ್ನು ತಪ್ಪಿಸುವುದು ಸಹ ಆಧುನಿಕ ಕಸಾಯಿಖಾನೆ ಸ್ಥಾಪನೆಯ ಉದ್ದೇಶಗಳಲ್ಲಿ ಒಂದಾಗಿದೆ.

ಆಧುನಿಕ ಕಾಸಾಯಿಖಾನೆಗಳನ್ನು ವಿರೋಧಿಸುವ ಮಠಾಧಿಪತಿಗಳು ಇಡೀ ಭಾರತದ ಜನರನ್ನು ಸಸ್ಯಾಹಾರಿಗಳನ್ನಾಗಿ ಮಾಡಲು ಯತ್ನಿಸುತ್ತಿದ್ದಾರೆಯೇ? ಅಥವಾ ಶೇ. ೬೦ಕ್ಕಿಂತ ಹೆಚ್ಚು ಮಾಂಸಾಹಾರಿಗಳು ಕೊಳಕು ಕೊಚ್ಚೆಗಳಲ್ಲಿ ಸಿದ್ಧಪಡಿಸುವ ಅಶುಚಿ ಮಾಂಸವನ್ನು ಮಾತ್ರ ಸೇವಿಸಲಿ ಎಂದು ಬಯಸುತ್ತಾರೆಯೆ? ಪಶುಪಾಲನೆ, ಮಾಂಸೋತ್ಪಾದನೆ, ಮಾರಾಟ, ಪರಿಸರ ವಿಜ್ಞಾನ-ಈ ಯಾವುದರೊಡನೆಯೂ ಸಂಬಂಧ ಇಲ್ಲದ ಈ ಸ್ವಾಮಿಗಳು ತಮಗೆ ಸಂಬಂಧಿಸದ ವಿಷಯದಲ್ಲಿ ಮೂಗು ತೂರಿಸುತ್ತಿರುವುದೇಕೆ? ಪ್ರಾಣಿದಯೆಯಿಂದಲೆ? ಯಾವುದು ಪ್ರಾಣಿದಯೆ? ಪ್ರಾಣಿಗಳನ್ನು ಚಿತ್ರಹಿಂಸೆಗೆ ಒಳಪಡಿಸಿ ಕೊಲ್ಲುವುದೆ? ಅಥವಾ ಎಚ್ಚರ ತಪ್ಪಿಸಿ, ನೋವಿನ ಅರಿವಾಗದಂತೆ ಕೊಲ್ಲುವುದೆ?

ರೂಢಿಯ ಕಸಾಯಿಖಾನೆಗಳ ಕೊಳಕು ಮತ್ತು ಹಿಂಸೆಗಳನ್ನು ನೋಡುವ ಎದೆಗಾರಿಕೆ ಸ್ವಾಮಿಗಳಿಗೆ ಇದ್ದರೆ ಒಮ್ಮೆ ಅವರು ಅಲ್ಲಿಗೆ ಭೇಟಿ ನೀಡಲಿ. ಆಧುನಿಕ ಕಸಾಯಿಖಾನೆಗಳನ್ನೂ ನೋಡಲಿ. ನಂತರ ಯಾವುದು ಅಪೇಕ್ಷಣೀಯ ಎಂದು ತಿಳಿಸಲಿ. ಅಥವಾ ಅವರಿಗೆ ಸಾಧ್ಯವಾಗುವುದಾದರೆ ಎಲ್ಲ ಮಾಂಸಾಹಾರಿ ಗಳನ್ನು ಸಸ್ಯಾಹಾರಿಗಳನ್ನಾಗಿ ಪರಿವರ್ತಿಸಲಿ. ಆದರೆಪ್ರಾಣಿದಯೆಯ ಹೆಸರಿನಲ್ಲಿ ಮೂಕಪ್ರಾಣಿಗಳ ಹಿಂಸೆಯನ್ನು ಹೆಚ್ಚಿಸುವುದು ಮಾತ್ರ ಬೇಡ.

ಈಗಿರುವ ಗೋಹತ್ಯಾ ನಿಷೇಧ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಏಕೆ ಆಗುತ್ತಿಲ್ಲ ಎಂಬುದನ್ನು ಸ್ವಾಮಿಗಳು ಎಂದಾದರೂ ಯೋಚಿಸಿದ್ದಾರೆಯೆ? ಒಂದು ಹಸುವನ್ನು ಸಾಕಲು ದಿನಕ್ಕೆ ೧೦ರಿಂದ ೧೫ ರೂಪಾಯಿಯ ಹುಲ್ಲು-ಮೇವು ಬೇಕಾಗುತ್ತದೆ. ಬರಡು ಹಸುಗಳಿಗೆ ವರ್ಷಕ್ಕೆ ರೂ.೩,೦೦೦ದಿಂದ ರೂ ೪,೫೦೦ ಖರ್ಚು ಮಾಡುವ ಗೋಮಾತೆಯ ಸೇವಕರು ಎಷ್ಟಿದ್ದಾರೆ. ರೂ. ೩೦೦-೪೦೦ಕ್ಕೆ ಅದನ್ನು ಮಾರಿ ಕೈತೊಳೆದುಕೊಳ್ಳಲು ಬಯಸುವುದು ಅಪರಾಧವಾಗುವುದಿಲ್ಲ. ಆದರೆ ಅದನ್ನು ಕೊಂದು ಆಹಾರವನ್ನಾಗಿ ಪರಿವರ್ತಿಸಿ, ಅಗ್ಗದ ಬೆಲೆಗೆ ಪೌಷ್ಠಿಕ ಆಹಾರವನ್ನು ಒದಗಿಸುವುದು ಕಾನೂನಿನ ದೃಷ್ಟಿಯಿಂದ ಅಪರಾಧ. ಈ ಅಪರಾಧವನ್ನು ತಡೆಗಟ್ಟಲು ಏಕೆ ಸಾಧ್ಯವಾಗುವುದಿಲ್ಲ? ಎತ್ತು, ಎಮ್ಮೆ, ಕೋಣದ ಮಾಂಸದಿಂದ ಹಸುವಿನ ಮಾಂಸವನ್ನು ಬೇರ್ಪಡಿಸುವುದಾದರೂ ಹೇಗೆ?

ಹಸುವೊಂದಕ್ಕೆ ವರ್ಷಕ್ಕೆ ರೂ. ೩೦೦೦ದಷ್ಟು ಹಣವನ್ನು ವಿನಿ ಯೋಗಿಸಲು ಸಾಧ್ಯವಾದರೆ ಮಾತ್ರ ಗೋಹತ್ಯೆಯನ್ನು ಪರಿಣಾಮ ಕಾರಿಯಾಗಿ ತಡೆಗಟ್ಟಲು ಸಾಧ್ಯ, ಈಗಿನ ಪರಿಸ್ಥಿತಿಯಲ್ಲಿ ಮನುಷ್ಯರಿಗೂ ಅಷ್ಟು ಹಣ ಖರ್ಚು ಮಾಡಲು ನಮ್ಮ ಸರ್ಕಾರಕ್ಕಾಗಲಿ, ಖಾಸಗಿ ಸಂಸ್ಥೆಗಳಿಗಾಗಲಿ ಸಾಧ್ಯವಿಲ್ಲದಾಗ ಬರಡು ಹಸುಗಳನ್ನು ಸಂರಕ್ಷಿಸುವುದು ಹೇಗೆ? ಆರ್ಥಿಕ ತಳಹದಿಯ ಮೇಲೆ ನಿಂತಿರದ ಭಾವನಾತ್ಮಕ ಕಾಯಿದೆಯಿಂದ ಆತ್ಮವಂಚನೆಗಿಂತ ಹೆಚ್ಚಿನದೇನನ್ನು ನಿರೀಕ್ಷಿಸಲು ಸಾಧ್ಯ?

ಕಸಾಯಿಖಾನೆಗಳ ಆಧಿನಿಕತೆಯನ್ನು ವಿರೋಧಿಸುವವರಲ್ಲಿ ಹಿಂದೂ ಸ್ವಾಮಿಗಳ ಜೊತೆಗೆ ಮುಸ್ಲಿಂ ಮುಲ್ಲಾಗಳೂ ಸೇರಿದ್ದಾರೆ. ಯಾಂತ್ರೀಕೃತ ಹತ್ಯೆ ಇಸ್ಲಾಂನ ’ಹಲಾಲ್’ಗೆ ಅಡ್ಡಿಯಾಗುವುದಂತೆ. ಪ್ರಾಣಿಯ ಕೊರಳಿನ ನರ ಕತ್ತರಿಸಿ ರಕ್ತ ಹರಿಯ ಬಿಟ್ಟು ನಂತರ ಕೊಂದು ಪ್ರಾಣಿಯ ಮಾಂಸ ಮಾತ್ರ ಮುಸ್ಲಿಮರಿಗೆ ಸ್ವೀಕಾರ ಯೋಗ್ಯವಾಗುತ್ತದೆ. ಇದರ ಉದ್ದೇಶ ಪ್ರಾಣಯನ್ನು ಎಚ್ಚರ ತಪ್ಪಿಸಿ ಸಾಯಿಸುವುದೇ ಆಗಿದೆ. ಇಸ್ಲಾಂ ಧರ್ಮ ಪ್ರಾಣಿದಯೆಗೆ ವಿಶೇಷ ಮಹತ್ವ ನೀಡುತ್ತದೆ. ’ಹಲಾಲ್’ ರೂಢಿಗೆ ಬಂದ ಕಾಲದಲ್ಲಿ ಪ್ರಾಣಿದಯೆಯನ್ನು ಅದಕ್ಕಿಂತ ಬೇರೆ ರೀತಿಯಿಂದ ತೋರಿಸುವುದು ಗೊತ್ತಿರಲಿಲ್ಲ. ಆಧುನಿಕ ವಿಜ್ಞಾನ ಅದಕ್ಕಿಂತ ಉತ್ತಮ ರೀತಿಯಲ್ಲಿ ನೋವಿಲ್ಲದೆ ಎಚ್ಚರ ತಪ್ಪಿಸುವ ವಿಧಾನವನ್ನು ಬಳಕೆಗೆ ತಂದಿದೆ. ಸೌದಿ ಅರೇಬಿಯಾ, ಕುವೈತ್‌ನಂತಹ ಅಪ್ಪಟ ಇಸ್ಲಾಮಿಕ್ ದೇಶಗಳಲ್ಲಿ ಆಧುನಿಕ ಕಸಾಯಿಖಾನೆಗಳು ಅಸ್ತಿತ್ವದಲ್ಲಿವೆ. ಹೀಗಿದ್ದೂ ಭಾರತೀಯ ಮುಲ್ಲಾಗಳು ಆಧುನಿಕ ಕಸಾಯಿ ಖಾನೆಗಳನ್ನು ವಿರೋಧಿಸುವುದು ವಿಚಿತ್ರವಾಗಿದೆ.

ಭಾವನಾವಾದದಿಂದ ಇಲ್ಲದ ಸಮಸ್ಯೆಗಳನ್ನು ಹುಟ್ಟುಹಾಕಬಹುದೇ ಹೊರತು ಅವುಗಳಿಗೆ ಪರಿಹಾರ ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. ಹಸಿವು, ಪೌಷ್ಠಿಕ ಆಹಾರ, ಪ್ರಾಣಿದಯೆಯಂತೆ ಮಾನವೀಯ ಸಮಸ್ಯೆಗಳನ್ನು ಮೂಲ ಭೂತವಾದ ಮತ್ತು ಭಾವುಕತೆಯಿಂದ ನೋಡುವವರು ವಾಸ್ತವಿಕತೆಗೆ ಬೆನ್ನು ತಿರುಗಿಸಿದವರಾಗುತ್ತಾರೆ. ಆರ್ಥಿಕಪ್ರಜ್ಞೆ ಮತ್ತು ತಾಂತ್ರಿಕಜ್ಞಾನದಿಂದ ಈ ಸಮಸ್ಯೆಗೆ ಸೂಕ್ತ ಪರಿಹಾರ ಕೊಂಡುಕೊಳ್ಳಬೇಕಾಗುತ್ತದೆ. ಸರ್ಕಾರ ಮತೀಯ ಶಕ್ತಿಗಳಿಗೆ ಮಣಿಯದೆ ಸಾರ್ವಜನಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಳ್ಳುವುದು ಒಳ್ಳೆಯದು.