You are hereಜಾತಿ, ವರ್ಗ ಮತ್ತು ಧರ್ಮ

ಜಾತಿ, ವರ್ಗ ಮತ್ತು ಧರ್ಮ


ಲೇಖಕರು: ಬಿ.ವಿ. ವೀರಭದ್ರಪ್ಪ
ಹಕ್ಕುಗಳು: ಲೇಖಕರವು

ಎಲ್ಲ ಪ್ರಾಚೀನ ಸಮಾಜಗಳಂತೆ ವೇದಪೂರ್ವ ಭಾರತೀಯ ಬುಡಕಟ್ಟುಗಳೂ ಜಾತಿ ಮತ್ತು ವರ್ಗರಹಿತವಾಗಿದ್ದವು. ಪ್ರತಿಯೊಂದು ಬುಡಕಟ್ಟು ತಾನು ವಿಶೇಷವಾಗಿ ಸಂಬಂಧ ಹೊಂದಿರುವ ಪ್ರಾಣಿ ಅಥವಾ ಮರದ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಮತ್ಸ್ಯ, ಅಜೆ, ಗೋತಮ, ವತ್ಸ, ಶುನಕ, ಕೌಶಿಕ, ಮಂಡೂಕೇಯ, ಕಶ್ಯಪ ಇತ್ಯಾದಿ ಗುಂಪುಗಳ ಹೆಸರುಗಳು ಸಾಮಾನ್ಯವಾಗಿ ಒಂದು ಗುಂಪನ್ನು ಇನ್ನೊಂದರಿಂದ ಬೇರ್ಪಡಿಸಲು ಆ ಗುಂಪಿಗೆ ಗೆಳೆಯರೋ ಶತ್ರುಗಳೋ ಇಟ್ಟ ಅಡ್ಡ ಹೆಸರು ಮಾತ್ರ (L. ೮೯) ಇಂತಹ ಒಂದೊಂದು ಗುಂಪು ಅಥವಾ ಬುಡಕಟ್ಟಿಗೆ ಸೇರಿದ ಸದಸ್ಯರಲ್ಲಿ ಸರ್ವ ಸಮಾನತೆ ಇತ್ತು. ಬುಡಕಟ್ಟಿಗೆ ಸೇರಿದ ಆಸ್ತಿಯ ಮೇಲೆ ಸಾಮೂಹಿಕ ಒಡೆತನ ಇತ್ತೇ ಹೊರತು ವ್ಯಕ್ತಿಯು ತಾನಷ್ಟೇ ಬಲಶಾಲಿಯಾಗಿರಲಿ, ಸಮರ್ಥನಾಗಿರಲಿ ಖಾಸಗಿ ಆಸ್ತಿಯನ್ನು ಹೊಂದಲು ಅವಕಾಶವಿರಲಿಲ್ಲ. ವೇದಪೂರ್ವ ಬುಡಕಟ್ಟುಗಳ ವೈಶಿಷ್ಟ್ಯವಾಗಿದ್ದ ಭೂಮಿಯ ಸಾಮೂಹಿಕ ಒಡೆತನದ ಗುರುತುಗಳು ಬ್ರಿಟಿಷರ ಆಳ್ವಿಕೆಯಷ್ಟು ಇತ್ತೀಚಿನವರೆಗೆ ಸ್ವಲ್ಪ ಮಟ್ಟಿಗಾದರೂ ಉಳಿದುಕೊಂಡು ಬಂದಿದೆ ಎಂದು ಚಾರಿತ್ರಿಕ ದಾಖಲೆಗಳಿಂದ ಸ್ಪಷ್ಟವಾಗುತ್ತದೆ. ಬಾಡೆನ್ ಪೋವೆಲ್‌ನ ವಿವರಣೆಯಂತೆ ಬ್ರಿಟೀಷರ ಕಾಲದ ಭಾರತದಲ್ಲಿ ಎರಡು ರೀತಿಯ ಹಳ್ಳಿಗಳಿದ್ದವು. ೧) ೨೧೮,೧೭೦ ಚದರ ಮೈಲಿ ವಿಸ್ತೀರ್ಣವುಳ್ಳ ಅವಿಭಕ್ತಹಳ್ಳಿಗಳು ೨) ೫.೭೫೩೧೩ ಚದುರ ಮೈಲಿ ವಿಸ್ತೀರ್ಣವುಳ್ಳ ರೈತವಾರಿ ಹಳ್ಳಿಗಳು . (L. ೧೮೯) ರೈತವಾರಿ ಹಳ್ಳಿಗಳಲ್ಲಿ ಸಾಮೂಹಿಕ ಒಡೆತನವಿರಲಿಲ್ಲವೆಂದು ಒಪ್ಪಿಕೊಂಡರೂ ವಿಸ್ತಾರವಾದ ಉಳಿದ ಭಾಗಗಳಲ್ಲಿ ಭೂಮಿಯ ಸಾಮೂಹಿಕ ಒಡೆತನವಿತ್ತೆಂದು ತಿಳಿದ ಬರುತ್ತದೆ. ಅಲ್ಲದೆ ರೈತವಾರಿ ಹಳ್ಳಿಗಳಲ್ಲೂ ಹಳೆಯ ಸಾಮೂಹಿಕ ಜೀವನದ ಪಳೆಯುಳಿಕೆಗಳು ಉಳಿದಿದ್ದವು. ಉಳುಮೆಗೊಳಗಾದ ಆ ಹಳ್ಳಿಯ ಭೂಮಿಗಳನ್ನು ಕುಟುಂಬಗಳಿಗೆ ಹಂಚಲಾಗುತ್ತಿತ್ತಾದರೂ ಅದನ್ನು ಗೊತ್ತಾದ ಅವಧಿಯ ನಂತರ ಮರು ಹಂಚಿಕೆಗೆ ಒಳಪಡಿಸಲಾಗುತ್ತಿತ್ತು. ಈ ಮರು ಹಂಚಿಕೆಯ ಉದ್ದೇಶ ಸಮಾನತೆಯನ್ನು ಕಾಪಾಡುವುದೇ ಆಗಿತ್ತು. ಈ ಪದ್ಧತಿ ಕೇವಲ ಭಾರತೀಯ ಬುಡಕಟ್ಟುಗಳ ವೈಶಿಷ್ಟ್ಯವಾಗಿರದೆ ವಿಶ್ವದಾದ್ಯಂತ ರೂಢಿಯಲ್ಲಿತ್ತು. ಪ್ಯಾಲಸ್ಟೈನ್, ಟ್ರಾನ್ಸ್ ಜೋರ್ಡಾನ್ ಮತ್ತು ಸೈಬೀರಿಯಾಗಳ ಬುಡಕಟ್ಟುಗಳಲ್ಲಿ ಈ ಪದ್ಧತಿ ರೂಢಿಯಲ್ಲಿತ್ತು. ಪುರಾತನ ಇಂಗ್ಲೆಂಡಿನ ಹಳ್ಳಿಗಳೂ ಭೂಮಿಯನ್ನು ಗೊತ್ತಾದ ಅವಧಿಯ ನಂತರ ಮರು ಹಂಚಿಕೆಗೊಳ ಪಡಿಸುವ ಸಾಮೂಹಿಕ ಒಡೆತನ ಪದ್ಧತಿ ಇತ್ತು.

ಬುಡಕಟ್ಟಿನ ಜನರು ನಾಗರಿಕರಿಗಿಂತ ಹೆಚ್ಚು ಶಿಸ್ತು ಸಂಪನ್ನರು. ಅವರದು ಸಂವಿಧಾನದತ್ತ ಪ್ರಜಾತಂತ್ರವಲ್ಲ: ಆದರೆ ಸರಳ ನಿರಾಡಂಬರ ಮೂಲಭೂತ ಪ್ರಜಾತಂತ್ರ. ಅವರು ಹಾಡಿ, ಕುಣಿದು ಜೀವನವನ್ನು ಆನಂದಿಸಬಲ್ಲವರಾಗಿದ್ದರು. ಅವರಲ್ಲಿ ಆಳುವ ವರ್ಗ ಸೇವಕ ವರ್ಗ ಎಂದು ವರ್ಗಭೇದವಿರಲಿಲ್ಲ. ಬಹುಶಃ ಅದೇ ಅವರ ಆನಂದದ ಗುಟ್ಟಾಗಿರ ಬಹುದು. ಅವರಿಗೆ ಹಕ್ಕುಗಳು ಬೇರೆ, ಕರ್ತವ್ಯಗಳು ಬೇರೆ ಆಗಿರಲಿಲ್ಲ. ಪ್ರತಿ ಯೊಬ್ಬನೂ ತಾನು ಮಾಡಿದ ಮತ್ತು ಉಪಯೋಗಿಸುವ ಮುಟ್ಟುಗಳಿಗೆ ಮಾತ್ರ ತಾನು ಒಡೆಯನಾಗಿದ್ದನು. ಉತ್ಪಾದಿತ ವಸ್ತುಗಳು ಸಾಮೂಹಿಕ ಒಡೆತನಕ್ಕೆ ಒಳಗಾಗಿ ಎಲ್ಲರಿಂದಲೂ ಉಪಯೋಗಿಸಲ್ಪಡುತ್ತಿದ್ದವು.

ವರ್ಗರಹಿತ ಪ್ರಾಚೀನ ಸಮಾಜಗಳಿಂದ ವರ್ಗಗಳು ಹೇಗೆ ಉದಿಸಿದವು ಎಂಬುದು ಕುತೂಹಲಕರ ಪ್ರಶ್ನೆ. ಈ ದೃಷ್ಟಿಯಿಂದ ಋಗ್ವೇದದ ಒಂದು ಭಾಗವೆಂದು ಹೇಳಲಾದ, ಆದರೆ ವಿವಾದಾಸ್ಪದವಾದ, ಪುರುಷಸೂಕ್ತದ ಎರಡು ಋಕ್ಕುಗಳು ತುಂಬಾ ಸ್ವಾರಸ್ಯವಾಗಿವೆ. ಪುರುಷಸೂಕ್ತ ಸೃಷ್ಟಿಯ ಉಗಮವನ್ನು ವಿವರಿಸುವ ಒಂದು ಸಿದ್ಧಾಂತ. ಪ್ರಪಂಚದ ಬೇರೆ ಬೇರೆ ಭಾಗಗಳಲ್ಲೂ ಸೃಷ್ಟಿಯ ಮೂಲವನ್ನು ಕುರಿತು ಬೇರೆ ಬೇರೆ ಸಿದ್ಧಾಂತಗಳಿವೆ. ಈಜಿಪ್ಟ್ ಜನರ ನಂಬಿಕೆಯಂತೆ *’ಖ್ನುಮು’* ಎಂಬ ದೇವತೆ ಎಲ್ಲ ಜೀವಿಗಳನ್ನು ಕುಂಬಾರನ ಚಕ್ರದ ಮೇಲೆ ರೂಪಿಸಿದ. ಅವನು ಚರಾಚರ ವಸ್ತುಗಳೆಲ್ಲದರ ಜನಕ. ಬೈಬಲ್ಲಿನ ಪುರಾತನ ಒಡಂಬಡಿಕೆಯಲ್ಲೂ ಇಂಥದೇ ಒಂದು ಸಿದ್ಧಾಂತವಿದೆ.

ಈ ಸಿದ್ಧಾಂತಗಳು ತಮಾಷೆಯಾಗಿದ್ದು ಮಕ್ಕಳಿಗೆ ವಿನೋದವನ್ನುಂಟು ಮಾಡಲು ಯೋಗ್ಯವಾಗಿವೆ. ಈ ಮಾತುಗಳನ್ನು ೧೧ಮತ್ತು ೧೨ನೇ ಋಕ್ಕು ಗಳನ್ನುಳಿದ ಪುರುಷಸೂಕ್ತಕ್ಕೂ ಅನ್ವಯಿಸಬಹುದು. ಆದರೆ ಪುರುಷ ಸೂಕ್ತದ ೧೧ಮತ್ತು ೧೨ನೇ ಋಕ್ಕುಗಳಿಗೆ ಈ ಮಾತುಗಳು ಅನ್ವಯಿಸುವುದಿಲ್ಲ. ಈ ಎರಡು ಋಕ್ಕುಗಳು ಆಳವಾದ ಅಧ್ಯಯನಕ್ಕೆ ಅರ್ಹವಾಗಿವೆ. ಮೇಲು ನೋಟಕ್ಕೆ ಈ ಎರಡು ಋಕ್ಕುಗಳು ಚಾತುರ್ವಣ್ಯಗಳು ಸೃಷ್ಟಿಕರ್ತನಾದ ಪುರುಷನ ದೇಹದಿಂದ ಹೇಗೆ ಉದ್ಭವಿಸಿದುವೆಂಬುದನ್ನು ಮಾತ್ರ ತಿಳಿಸುತ್ತದೆ. ಪುರುಷನ ತಲೆಯಿಂದ ಬ್ರಾಹ್ಮಣ, ಬಾಹಗಳಿಂದ ಕ್ಷತ್ರಿಯ, ತೊಡೆಗಳಿಂದ ವೈಶ್ಯ ಮತ್ತು ಪಾದಗಳಿಂದ ಶೂದ್ರರು ಉದಿಸಿದರೆಂದು ಅವು ಹೇಳುತ್ತದೆ. ಈ ಶ್ಲೋಕಗಳನ್ನು ಸೃಷ್ಟಿಯ ಉಗಮವನ್ನು ವಿವರಿಸುವ ಕವಿಯ ಕಲ್ಪನೆ ಎಂದು ಯಾರೂ ಭಾವಿಸುವುದಿಲ್ಲ.

ಹಾಗೆ ಭಾವಿಸಬೇಕೆಂಬ ಉದ್ದೇಶ ಕರ್ತೃಗೂ ಇರಲಿಲ್ಲ. ಚಾತುರ್ವಣ್ಯಗಳ ಆಧಾರದ ಮೇಲೆ ಸಮಾಜವನ್ನು ರಚಿಸಬೇಕು ಎಂಬ ಸೃಷಿಕರ್ತನ ಆದೇಶವನ್ನು ಅವು ಹೊಂದಿವೆಯೆಂದು ಆಗಿನ ಆರ್‍ಯರು ಭಾವಿಸುದರೂ ಅವರಿಗೆ ಈ ಋಕ್ಕುಗಳು ಸಮಾಜ ರಚನೆಯನ್ನು ವಿವರಿಸುವ ದೈವೀ ಆಜ್ಞೆಯಾಗಿ ಕಂಡವು. ಇದರ ಪರಿಣಾಮವಾಗಿ ಶೂದ್ರನು ಅನೇಕ ಅನಾನುಕೂಲಗಳನ್ನು ಎದುರಿಸ ಬೇಕಾಯಿತು. ಅವನು ಹಿಂಡಿದ ಹಸುವಿನ ಹಾಲು ಅಗ್ನಿಹೋತ್ರಕ್ಕೆ ಉಪಯೋಗವಿಲ್ಲ. ಯಜ್ಞಯಾಗಾದಿಗಳು ನಡೆಯುವಾಗ ಅವನೊಡನೆ ಮಾತನಾಡಬಾರದು, ಸೋಮಪಾನ ಗೋಷ್ಠಿಗೆ ಅವನನ್ನು ಸೇರಿಸಬಾರದು. ಅವನು ಇತರರ ಸೇವಕನೇ ಹೊರತು ಬೇರೇನೂ ಅಲ್ಲ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯರು ದ್ವಿಜರು ಆದರೆ ಶೂದ್ರ ಅದ್ವಿಜ: ಅವನಿಗೆ ಉಪನಯನವಿಲ್ಲ. ಶೂದ್ರ ನೀಡಿದ ಅನ್ನವನ್ನುಂಡ ಬ್ರಾಹ್ಮಣ ಶೂದ್ರನಾಗಿ ಹುಟ್ಟುತ್ತಾನೆ. ಶೂದ್ರನು ವೇದ ಪಠಿಸಿದರೆ ಅವನ ನಾಲಗೆ ಕತ್ತರಿಸಬೇಕು. ಶೂದ್ರನ ಸಕಲ ಆಸ್ತಿ ಬ್ರಾಹ್ಮಣನಿಗೆ ಸೇರಿದ್ದು, ಉಚ್ಛವರ್ಣದವರನ್ನು ಸೇವಿಸುವುದೇ ಶೂದ್ರನ ಕರ್ತವ್ಯ. ಅವನು ಎಷ್ಟು ಉಚ್ಛವರ್ಣದವರನ್ನು ಸೇವಿಸುವನೋ ಅಷ್ಟು ಹೆಚ್ಚು ಪುಣ್ಯಗಳಿಸುತ್ತಾನೆ. ಇತ್ಯಾದಿ.

ಪುರುಷ ಸೂಕ್ತವನ್ನು ಸ್ಮ್ಖತಿಕಾರರೆಲ್ಲರೂ ವೈಶಿಷ್ಟ್ಯಪೂರ್ಣ ಗ್ರಂಥವೆಂದು ಪ್ರಶಂಸಿಸಿದ್ದಾರೆ. ಅದರ ವೈಶಿಷ್ಟ್ಯವೇನು? ಚಾತುರ್ವಣ್ಯಗಳನ್ನು ಆದರ್ಶವೆಂದು ಕರೆಯುವುದೇ ಅದರ ವೈಶಿಷ್ಟ್ಯವಾಗಿದೆ. ಒಂದು ಪಕ್ಷ ಪುರುಷ ಸೂಕ್ತವು ವರ್ಗರಹಿತ ಸಮಾಜವನ್ನು ಸ್ಥಾಪಿಸುವಂತೆ ಬೋಧಿಸಿದ್ದಿದ್ದರೆ ಅದನ್ನು ವೈಶಿಷ್ಟ್ಯವೆಂದು ಭಾವಿಸಬಹುದಾಗಿತ್ತು. ಉತ್ಪಾದನೆಯ ಸಾಧನೆಗಳು ಹೆಚ್ಚಿದಂತೆಲ್ಲಾ ವರ್ಗರಹಿತ ಸಮಾಜದಲ್ಲಿ ಶ್ರಮವಿಭಜನೆ ಅನಿವಾರ್ಯವಾಯಿತು. ಮಾನಸಿಕ ಶ್ರಮಜೀವಿಗಳು ಮತ್ತು ದೈಹಿಕ ಶ್ರಮಜೀವಿಗಳು ಎಂದು ಅವರಲ್ಲಿ ಎರಡು ವರ್ಗ ಉದಿಸಿದವು. ಹೀಗೆ ಅತಿ ಪುರಾತನವಲ್ಲದ ಎಲ್ಲ ಸಮಾಜಗಳಲ್ಲೂ ವರ್ಗಗಳ ಉಗಮ ಸಹಜಕ್ರಿಯೆಯಾಯಿತು. ಒಬ್ಬ ವ್ಯಕ್ತಿ ಮಾನಸಿಕ ಶ್ರಮಜೀವ ಯಾಗುವುದು ಅಥವಾ ದೈಹಿಕ ಶ್ರಮಜೀವಿಯಾಗುವುದು ಅವನ ಪ್ರವೃತ್ತಿಯನ್ನು ಅವಲಂಬಿಸಿರುತಿತ್ತು. ವ್ಯಕ್ತಿಯ ವೈಯಕ್ತಿಕ ಪ್ರವೃತ್ತಿಯನ್ನು ಆಧರಿಸಿದ್ದ ವರ್ಗ ಚಲನಾತ್ಮಕವಾಗಿತ್ತು; ಆನುವಂಶಿಕವಾಗಿರಲಿಲ್ಲ. ಪುರುಷ ಸೂಕ್ತ ಮತ್ತು ಅದನ್ನನುಸರಿಸಿದ ಧರ್ಮಸೂತ್ರಗಳು ಚಲನಾತ್ಮಕವಾಗಿದ್ದ ವರ್ಗವನ್ನು ನಿಶ್ಚಲಗೊಳಿಸಿ ಜಾತುರ್ವಣ್ಯಗಳನ್ನು ಜಾತಿಗಳನ್ನಾಗಿ ಮಾಡಿದವು.

ವಾಸ್ತವವಾಗಿದ್ದ ಶ್ರಮವಿಭಜನೆಯನ್ನು ಒಂದು ಆದರ್ಶವೆಂದು ಪ್ರಶಂಸಿಸಿದ್ದಲ್ಲದೆ ಅದನ್ನು ದೈವ ನಿರ್ಮಿತವೆಂದು ಸಾರಲಾಯಿತು.

ಸೋಜಿಗದ ಸಂಗತಿಯೆಂದರೆ ಪುರುಷಸೂಕ್ತದ ೧೧ ಮತ್ತು ೧೨ನೇ ಋಕ್ಕುಗಳು ಪ್ರಕ್ಷಿಪ್ತವೆಂದೂ, ಇಡೀ ಪುರುಷಸೂಕ್ತ ಋಗ್ವೇದಕ್ಕೆ ಬಹುಕಾಲಾ ನಂತರದಲ್ಲಿ ಸೇರ್ಪಡೆಯಾಯಿತೆಂದೂ ಆಂತರಿಕ ಆಧಾರಗಳಿಂದ ವಿದ್ವಾಂಸರು ಸ್ಪಷ್ಟಪಡಿಸಿದ್ದಾರೆ. ಕೆಳವರ್ಗಗಳ ಶೋಷಣೆಗಾಗಿ ಮೇಲುವರ್ಗ ಧರ್ಮವನ್ನು ಹೇಗೆ ಬಳಸಿಕೊಂಡಿತೆಂಬುದಕ್ಕೆ ಇದಕ್ಕಿಂತ ಬೇರೆ ದೃಷ್ಟಾಂತ ಬೇಕಿಲ್ಲ.

ಭಾರತೀಯ ತತ್ತ್ವಶಾಸ್ತ್ರದ ಇತಿಹಾಸವನ್ನು ಅವಲೋಕಿಸಿದಾಗ ಒಂದು ಆಶ್ಚರ್ಯದ ಸಂಗತಿಯನ್ನು ಗಮನಿಸಬಹುದು. ಭಾರತೀಯ ತಾತ್ತ್ವಿಕ ಪರಂಪರೆಯಲ್ಲಿ ದೈವಕ್ಕೆ ಬಹು ಇಕ್ಕಟ್ಟಾದ ಜಾಗ ಮಾತ್ರ ಇದೆ. ಆರು ಪ್ರಮುಖ ತತ್ತ್ವಶಾಸ್ತ್ರದ ಶಾಖೆಗಳಲ್ಲಿ ಎರಡು ಮಾತ್ರ ದೇವರ ಅಸ್ತಿತ್ವದಲ್ಲಿ ಎಲ್ಲೋ ಸ್ವಲ್ಪ ನಂಬಿಕ ಇರುವಂಥವು ಇನ್ನುಳಿದ ಪ್ರಮುಖ ತತ್ತ್ವಶಾಸ್ತ್ರದ ಮುಖ್ಯ ಶಾಖೆಗಳು ನಿರೀಶ್ವದವಾದಕ್ಕೆ ಸೇರಿದವು. ಬೌದ್ಧ, ಜೈನ, ಚಾರ್ವಾಕ ಪೂರ್ವಮೀಮಾಂಸ, ಸಾಂಖ್ಯ, ವೇದಾಂತ ಮತ್ತುನ್ಯಾಯ ವೈಶೇಷಿಕಗಳು ಭಾರತೀಯ ತತ್ತ್ವಶಾಸ್ತ್ರದ ಮುಖ್ಯ ಶಾಖೆಗಳು, ಅವುಗಳಲಿ ವೇದಾಂತ ಮತ್ತು ನ್ಯಾಯ-ವೈಶೇಷಿಕಗಳು ಮಾತ್ರ ಸ್ವಲ್ಪ ಮಟ್ಟಿಗೆ ಆಸ್ತಿಕ ಶಾಖೆಗಳು. ಉಳಿದವು ತೀವ್ರ ನಾಸ್ತಿಕ ಶಾಖೆಗಳು. ವೇದಾಂತವು ಬೌದ್ಧ ಧರ್ಮದಿಂದ ಪ್ರಭಾವಿತವಾಗಿರುವುದರಿಂದಲೂ, ಜಗತ್ತನ್ನು ’ಮಿಥ್ಯ’ ಎಂದು ಭಾವಿಸಿದ್ದ ರಿಂದಲೂ ಅದ್ವೈತ ಕಲ್ಪನೆಯದೈವ, ಕೇವಲ ಭ್ರಮೆ ಮಾತ್ರವಾಗುತ್ತದೆ. ನ್ಯಾಯ ವೈಶೇಷಿಕ ಸೂತ್ರಗಳು ಮೂಲದಲ್ಲೆಲ್ಲೂ ದೇವರ ಪ್ರತಿಪಾದನೆ ಮಾಡಿಲ್ಲ. ಕ್ರಮೇಣ ಅವುಗಳ ಪ್ರತಿಪಾದಕರು ದೇವರ ಅಗತ್ಯವನ್ನು ಕಂಡರು. ಈ ರೀತಿಯಲ್ಲಿ ತತ್ತ್ವಶಾಸ್ತ್ರದ ಆಳವಾದ ಅಧ್ಯಯನದಿಂದ ಭಾರತೀಯ ತತ್ತ್ವ ಶಾಸ್ತ್ರಜ್ಞರು ನಿರೀಶ್ವರ ವಾದಿಗಳೆಂದು ಮನದಟ್ಟಾಗುತ್ತದೆ. ಹೀಗಿದ್ದೂ ಜನ ಸಾಮಾನ್ಯರು ಇತಿಹಾಸದ ಉದ್ದಕ್ಕೂ ದೇವನಲ್ಲಿ ನಂಬಿಕೆ ತಾಳಿದ್ದು ಆಶ್ಚರ್ಯವೇ ಸರಿ. ಬಹುಶಃ ಭಾರತೀಯ ತತ್ತ್ವಜ್ಞಾನಿಗಳು ಜನಸಾಮಾನ್ಯರಿಂದ ದೂರನಿಂತ ತರ್ಕಶಾಸ್ತ್ರ ನಿಪುಣರಾಗಿದ್ದರೆಂದು ತೋರುತ್ತದೆ. ಇದು ಅವರ ಹಿರಿಮೆ ಯಾಗಿರುವಂತೆ ದೌರ್ಬಲ್ಯವೂ ಆಗಿದೆ. ಇದರಿಂದ ದೊರೆತ ಅವಕಾಶವನ್ನು ಮತ ಧರ್ಮ ಪ್ರಚಾರಕರು ಉಪಯೋಗಿಸಿಕೊಂಡು ತಮ್ಮ ವರ್ಗದ ಸ್ವಾರ್ಥಕ್ಕಾಗಿ ಜನರಲ್ಲಿ ದೈವೀಭಾವನೆ, ಮೂಢನಂಬಿಕೆಗಳನ್ನು ಬಿತ್ತಿದರು.

ವಾಸ್ತವವಾಗಿ ದೈವೀಭಾವನೆಯ ಬೇರುಗಳು ತಾತ್ತ್ವಿಕ ಸಿದ್ಧಾಂತದ ಹೊರವಲಯದಲ್ಲೇ ಬೇರು ಬಿಟ್ಟವು. ಆದ್ದರಿಂದ ತತ್ತ್ವಜ್ಞಾನಿಗಳು ಎಷ್ಟೇ ಹರಿತವಾದ ತಮ್ಮ ವಾದಗಳನ್ನು ಮಂಡಿಸಿದರೂ ದೈವದ ಮಿಥ್ಯಾ ಭಾವನೆಯನ್ನು ಕಿತ್ತು ಹಾಕಲಾಗಲಿಲ್ಲ.

ದೈವಿಕದ ಕಲ್ಪನೆಯ ತಳಹದಿಯನ್ನು ಸರಿಯಾಗಿ ಗ್ರಹಿಸಿದ ಮೊದಲ ತತ್ತ್ವ ಜ್ಞಾನಿ ಮಾರ್ಕ್ಸ್ ಎನ್ನಬಹುದು. ಅಲ್ಲದೆ ದೈವೀಕಲ್ಪನೆಯನ್ನು ದಿಕ್ಕರಿಸಿ ಮಾನವನು ಬೆಳೆಯುವ ವಿಧಾನವನ್ನು ಅವನು ವಿವರಿಸಿದ್ದಾನೆ. ಆದ್ದರಿಂದ ಭಾರತೀಯ ತತ್ತ್ವಜ್ಞಾನದ ಬೆಳವಣಿಗೆಯ ಮುಂದುವರಿದ ಹಂತವನ್ನು ಮಾರ್ಕ್ಸ್‌ನ ಧರ್ಮ ಜಿಜ್ಞಾಸೆಯಲ್ಲಿ ನಾವು ಕಾಣಬಹುದು.

ಮನುಷ್ಯ ದೇವರನ್ನು ನಿರ್ಮಿಸಿದ್ದು ನಿಜವಾದರೂ ಅವನು ಸಹಜವಾಗಿ ದೈವೀಭಾವನೆಯುಳ್ಳವನೆಂಬುದು ಸರಿಯಲ್ಲ, ಅಂದರೆ ಯಾವುದೋ ಒಂದು ಚಾರಿತ್ರಿಕ ಸಂದರ್ಭದಲ್ಲಿ, ಕೆಲವೊಂದು ಭೌತಿಕ ಅವಶ್ಯಕತೆಗಳಿಗಾಗಿ ಮನುಷ್ಯನು ಧರ್ಮವನ್ನು ಪಾಲಿಸುತ್ತಾನೆ. ದೇವರನ್ನು ನಿರ್‍ಮಿಸುತ್ತಾ ಯಜ್ಞಯಾಗಾದಿಗಳನ್ನು ಮಾಡುತ್ತಾನೆ. ಪೂಜೆ ಪೌರೋಹಿತ್ಯಗಳನ್ನು ಆಚರಿಸುತ್ತಾನೆ. ಇದರಿಂದ ಭಿನ್ನವಾದ ಬದಲಾದ ಚಾರಿತ್ರಿಕ ಸಂದರ್ಭಗಳಲ್ಲಿ, ಬದಲಾದ ಪರಿಸರದಲ್ಲಿ ಮಾನವನಿಗೆ ದೇವರ ಅಗತ್ಯ ಬೀಳದೇ ಹೋಗಬಹುದು. ದೇವರ ಕಲ್ಪನೆ ತತ್ತ್ವ ಶಾಸ್ತ್ರಜ್ಞರು ಬೇಕೆಂದಾಗ ನಿರ್ಮಿಸಿದ ಸೃಷ್ಟಿಯೂ ಅಲ್ಲ, ಅಥವಾ ಮಾನವ ಪ್ರಜ್ಞೆಗೆ ಸದಾ ಅಗತ್ಯವಾದ ಭಾವನೆಯೂ ಅಲ್ಲ, ನಿರ್ದಿಷ್ಟವಾದ ಭೌತಿಕ ಪರಿಸರದಲ್ಲಿ ಅದು ಮಾನವನ ಪ್ರಜ್ಞೆಯೊಳಗೆ ಅವತರಿಸಿತು. ಆ ಪರಿಸರ ಬೇರೆಯಾದಾಗ ದೈವದ ಕಲ್ಪನೆ ಅಸಂಗತವಾಗುತ್ತದೆ, ತನಗೆ ತಾನೆ ನಶಿಸಿ ಹೋಗುತ್ತದೆ.

ಮಾನವ ಸಮಾಜದ ಬೆಳವಣಿಗೆಯಲ್ಲಿ ಮಾರ್ಕ್ಸ್ ಮೂರು ಹಂತಗಳನ್ನು ಗುರುತಿಸುತ್ತಾನೆ - ೧. ವರ್ಗಪೂರ್ವ ಸಮಾಜ ೨. ವರ್ಗ ಸಮಾಜ ಮತ್ತು ೩. ವರ್ಗರಹಿತ ಸಮಾಜ. ವರ್ಗಪೂರ್ವ ಸಮಾಜದಲ್ಲಿ ಉತ್ಪಾದನೆಯ ಮಟ್ಟ ಬಹಳ ಕೆಳಮಟ್ಟದಲ್ಲಿದ್ದು ಸಮಾಜ ಕನಿಷ್ಠ ಮಟ್ಟದಲ್ಲಿ ಅಸ್ತಿತ್ವ ದಲ್ಲಿರಲು ಮಾತ್ರ ಸಾಕಾಗುತ್ತಿತ್ತು. ಅಲ್ಲಿ ಅಧಿಕ ಉತ್ಪಾದನೆ ಇರಲಿಲ್ಲ. ಇದರಿಂದ ಒಂದು ವರ್ಗ ಇನ್ನೊಂದು ವರ್ಗದ ಶೋಷಣೆಯಿಂದ ಜೀವಿಸುವ ಸಾಧ್ಯತೆ ಇರಲಿಲ್ಲ. ಅದು ಸಮುದಾಯ ಜೀವನವಾಗಿತ್ತು, ಎಲ್ಲರೂ ಸಮಾನವಾಗಿ ಬಡವರಾಗಿದ್ದರು; ಸಮುದಾಯದ ಶ್ರಮ ಜೀವನಕ್ಕೆ ಪ್ರತಿಯೊಬ್ಬರೂ ಕಾಣಿಕೆಯನ್ನು ಸಲ್ಲಿಸಬೇಕಾಗಿತ್ತು.

ಕಾಲಾನುಕ್ರಮದಲ್ಲಿ ಉತ್ಪಾದನಾಮಟ್ಟ ಏರಿದಂತೆಲ್ಲ ಸಮುದಾಯ ಜೀವನಕ್ಕೆ ಅಗತ್ಯವಾದುದಕ್ಕಿಂತ ಹೆಚ್ಚಿಗೆ ಉತ್ಪಾದಿಸಲು ಸಾಧ್ಯವಾಯಿತು. ಆಗ ಬೇರೆ ಬೇರೆ ಗುಂಪುಗಳು ಬೇರೆ ಬೇರೆ ಕೌಶಲ ಕೆಲಸಗಳಲ್ಲಿ ನಿಪುಣರಾಗಲು ಅವಕಾಶ ಕಲ್ಪಿಸಲಾಯಿತು. ಆ ಶ್ರಮ ವಿಭಜನೆ ಉತ್ಪಾದಕರು ಮತ್ತು ಉತ್ಪಾದನೆಯ ಮೇಲ್ವಿಚಾರಕರು ಎಂದು ಎರಡು ವರ್ಗಗಳನ್ನು ಸೃಷ್ಟಿಸಿತು. ಈ ಮೇಲ್ವಿಚಾರಕರು ಸಮುದಾಯದ ನಾಯಕರು ಅಥವಾ ಪುರೋಹಿತರು ಆಗಿರುತ್ತಿದ್ದರು. ಅವರು ಉತ್ಪಾದನೆಯ ಸಾಧನೆಗಳ ಮೇಲ್ವಿಚಾರಕರಾಗಿದ್ದರಿಂದ ಕೊನೆಗೆ ಆಳುವ ವರ್ಗವಾದರು. ಈ ರೀತಿ ಸಮುದಾಯವು ಆಳುವ ವರ್ಗ ಮತ್ತು ದುಡಿಯುವ ವರ್ಗವಾಗಿ ವಿಭಾಗವಾಯಿತು.

ಪ್ರಪಂಚದಾದ್ಯಂತ ವರ್ಗ ವಿಭಜನೆ ವಾಸ್ತವವಾಗಿ ಹೇಗೆ ನಡೆಯಿತೆಂದು ಅಧ್ಯಯನ ನಡೆಸಬೇಕಾಗಿದೆ. ಆದರೆ ಇಷ್ಟು ನಿಜ: ಉತ್ಪಾದನಾ ಸಾಧನಗಳ ಬೆಳವಣಿಗೆಯಿಂದಾಗಿ ವರ್ಗ ವಿಭಜನೆಯಿಂದ ಕೂಡಿದ ಸಮಾಜವನ್ನು ನಿಯಂತ್ರಿಸಲು ಒಂದು ಹೊಸ ಮಾಧ್ಯಮ ಬೇಕಿತ್ತು. ದೈವದ ಕಲ್ಪನೆ ಮಾಡಿದ್ದು ಇಂತಹ ಪರಿಸರದಲ್ಲಿ, ಸಮಾಜದ ಬೆಳವಣಿಗೆಯ ಒಂದು ಚಾರಿತ್ರಿಕ ಹಂತದಲ್ಲಿ ಧರ್ಮ ಉದಿಸಿತು. ಬಲಿಷ್ಠ ವರ್ಗ ದುರ್ಬಲ ವರ್ಗಗಳನ್ನು ಶೋಷಿಸಿ ತನ್ನ ಅಂಕೆಯಲ್ಲಿಟ್ಟುಕೊಳ್ಳಲು ಧರ್ಮ ಅಗತ್ಯವಾಯಿತು.

ಮಾರ್ಕ್ಸ್ ಧರ್ಮವನ್ನು ಮಾದಕ ವಸ್ತುವೆಂದು ಕರೆದಿರುವುದು ಯಥಾರ್ಥವಾದುದು. ವಾಸ್ತವ ಲೋಕದ ಕಾರ್ಪಣ್ಯಗಳನ್ನು ಮರೆತು ಭ್ರಮಾ ಲೋಕದಲ್ಲಿ ವಿಹರಿಸಲು ಮನುಷ್ಯನು ಮಾದಕ ವಸ್ತುಗಳಿಗೆ ಮೊರೆ ಹೋಗುತ್ತಾನೆ. ಧರ್ಮವೂ ಮಾದಕ ವಸ್ತುಗಿಂತ ಬೇರೇನನ್ನೂ ಸಾಧಿಸಲಾರದು. ಜನರಿಗೆ ನಿಜವಾದ ಸುಖ ದೊರೆಯಬೇಕಾದರೆ ಧರ್ಮದ ಕಾಲ್ಪನಿಕ ಸುಖ ತೊಲಗಬೇಕು.

ಜಾತಿ ಮತ್ತು ವರ್ಗರಹಿತ ಸಮಾಜ ನಿರ್ಮಾಣಕ್ಕೂ ನಾಸ್ತಿಕ ಪ್ರಜ್ಞೆಯ ಪ್ರಸಾರಕ್ಕೂ ಸಮೀಪ ಸಂಬಂಧವಿದೆ. ಭಾರತೀಯ ತತ್ತ್ವಶಾಸ್ತ್ರದಲ್ಲಿರು ವಂತೆಯೇ ಪಾಶ್ಚಾತ್ಯ ಕ್ರಾಂತಿ ಸಾಹಿತ್ಯದಲ್ಲಿಯೂ ಅಪಾರ ನಾಸ್ತಿಕ ಸಾಹಿತ್ಯವಿದೆ. ಅದೆಲ್ಲವೂ ದೋಷರಹಿತವಾಗಿರದೆ ಇರಬಹುದು. ಸೂಕ್ತ ಟೀಕೆಟಿಪ್ಪಣಿಗಳೊಡನೆ ಅದನ್ನು ಜನತೆಯ ಮುಂದೆ ಇಟ್ಟಾಗ ಅದು ಪರಿಣಾಮ ಬೀರದೆ ಇರದು, ಒಟ್ಟಿನಲ್ಲಿ ದೇವರು ಮತ್ತು ಧರ್ಮದ ನಾಶ, ವಿಜ್ಞಾನ ಮತ್ತು ವೈಚಾರಿಕ ಪ್ರಜ್ಞೆಯ ಪ್ರಸಾರ, ಹಾಗೂ ಜಾತಿ ಮತ್ತು ವರ್ಗರಹಿತ ಸಮಾಜ ನಿರ್ಮಾಣ ಒಟ್ಟಿಗೆ ನಡೆಯಬೇಕಾದ ಕ್ರಿಯೆಗಳು. ಇವುಗಳಲ್ಲಿ ಯಾವ ಒಂದರ ಮೇಲೆ ಒತ್ತು ಕೊಟ್ಟು ಉಳಿದವನ್ನು ಅಲಕ್ಷಿಸುವುದಾಗಲೀ ಒಂದಾದ ಮೇಲೆ ಒಂದನ್ನು ಎತ್ತಿಕೊಳ್ಳುವುದಾಗಲೀ ಉದ್ದೇಶಿತ ಗುರಿಸಾಧನೆಗೆ ಸಹಾಯಕ ವಾಗಲಾರದು.