You are hereಇನ್ನರ್ಧ ಹೇಗೆ ಸಾಯುತ್ತಿದೆ
ಇನ್ನರ್ಧ ಹೇಗೆ ಸಾಯುತ್ತಿದೆ
ಲೇಖಕರು: ಬಿ.ವಿ. ವೀರಭದ್ರಪ್ಪ
ಹಕ್ಕುಗಳು: ಲೇಖಕರವು
ನಾನು ಈಚೆಗೆ ಓದಿದ ಸೂಸನ್ ಜಾರ್ಜ್‌ರ ’ಇನ್ನರ್ಧ ಹೇಗೆ ಸಾಯುತ್ತದೆ" (Susan George, How the other half dies: The real reasons for world Hunger, Penguin Books, 1981) ನನ್ನನ್ನು ಗಾಢವಾಗಿ ತಟ್ಟಿ ಅಲುಗಾಡಿಸಿ ಆಲೋಚನೆಗೆ ತೊಡಗಿಸಿದ ಅರ್ಥಶಾಸ್ತ್ರ, ಕೃಷಿವಿಜ್ಞಾನ, ಪರಿಸರ, ಯೋಜನೆ ಮುಂತಾದ ಬಹುವಿಷಯಕ್ಕೆ ಸಂಬಂಧಿಸಿದ ಒಂದು ಪುಸ್ತಕ. ೧೯೭೪ರಲ್ಲಿ ರೋಂನಲ್ಲಿ ನಡೆದ ವಿಶ್ವ ಆಹಾರ ಸಮ್ಮೇಳನದ ಅಂಗವಾಗಿ ಸಿದ್ಧಪಡಿಸಿದ "ವಿಶ್ವ ಹಸಿವಿನ ಕಾರಣಗಳು ಮತ್ತು ಪರಿಹಾರ" ಎಂಬ ವರದಿಯ ಲೇಖಕರಲ್ಲಿ ಒಬ್ಬರಾದ ಸೂಸನ್ ಆ ವರದಿಯಿಂದ ತೃಪ್ತರಾಗದೆ ತಾವು ಮುಂದುವರಿಸಿದ ಸಂಶೋಧನೆಯ ಫಲವೇ ಈ ಪುಸ್ತಕ.
ಫ್ರಾನ್ಸ್ ಮತ್ತು ಅಮೆರಿಕಗಳಲ್ಲಿ ಉನ್ನತ ಶಿಕ್ಷಣ ಪಡೆದ ಈ ಮಹಿಳೆಯನ್ನು ಕೆಲವು ಪ್ರಶ್ನೆಗಳು ಕಾಡುತ್ತಿದ್ದವು. ಆಫ್ರಿಕ, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕಗಳ ೫೦ ಕೋಟಿ ಜನ ಕಡುಬಡತನದಿಂದ ನರಳಿ ಸಾಯುತ್ತಿರುವುದೇಕೆ ? ಈ ಪರಿಸ್ಥಿತಿಗೆ ಕಾರಣರಾರು ? ಆಳವಾದ ಸಂಶೋಧನೆಯ ನಂತರ ಅವರು ಆ ದೇಶಗಳ ಬಡತನಕ್ಕೆ ಅಧಿಕ ಜನಸಂಖ್ಯೆ, ಆಧುನಿಕ ತಾಂತ್ರಿಕತೆಯ ಕೊರತೆ ಅಥವಾ ಪ್ರಕೃತಿಯವಿಕೋಪಗಳು ಕಾರಣಗಳಲ್ಲ; ಅವು ಬೇರೊಂದು ಕಾರಣದ ಪರಿಣಾಮಗಳು ಮಾತ್ರ ಎಂಬ ಸತ್ಯವನ್ನು ಮನಗಂಡರು. ಆಹಾರದ ಕೊರೆತೆಯಿಂದಲ್ಲ, ಶ್ರೀಮಂತ ರಾಷ್ಟ್ರಗಳು ವಿಶ್ವದ ಆಹಾರವನ್ನು ನಿಯಂತ್ರಿಸುತ್ತಿರುವುದರಿಂದ ವಿಶ್ವದ ಅರ್ಧ ಹಸಿವೆಗೀಡಾಗಿ ಸಾಯುತ್ತಿವೆ ಎಂದು ಆಕೆ ಈ ಪುಸ್ತಕದ ಮೂಲಕ ಪ್ರತಿಪಾದಿಸುತ್ತಾರೆ.
ಸೂಸನ್ ತಮ್ಮ ಅಧ್ಯಯನಕ್ಕೆ, ವಿಶ್ವಸಂಸ್ಥೆ, ಅಭಿವೃದ್ಧಿ ಹೊಂದಿದ ರಾಷ್ಟಗಳು ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳು ಒದಗಿಸಿದ ದಾಖಲೆಗಳನ್ನೇ ಬಹುವಾಗಿ ಬಳಸಿಕೊಂಡಿದ್ದಾರೆ. ಆದರೆ ಆಕೆಯ ಅಧ್ಯಯನದ ಫಲಿತಾಂಶ ಮಾತ್ರ ಮೇಲಿನ ಸಂಸ್ಥೆಗಳ ಧೋರಣೆ ಮತ್ತು ನಿಲುವುಗಳಿಂದ ಸಂಪೂರ್ಣ ಭಿನ್ನವಾಗಿದೆ.
ಅಭಿವೃದ್ಧಿ ಹೊಂದಿದ ಕೆಲವು ರಾಷ್ಟಗಳು ಹಿಂದುಳಿದ ಏಷ್ಯಾ, ಆಫ್ರಿಕ ಮತ್ತು ಲ್ಯಾಟಿನ್ ಅಮೆರಿಕದ ದೇಶಗಳಿಗಿಂತ ಬಹುಪಾಲು ಆಹಾರವನ್ನು ಸೇವಿಸುತ್ತವೆ. ಮುಂದುವರಿದ ರಾಷ್ಟಗಳ ಜನಸಂಖ್ಯೆ ವಿಶ್ವದ ಕಾಲು ಭಾಗ ಮಾತ್ರವಿದ್ದರೂ ಅವರು ವಿಶ್ವದ ಆಹಾರೋತ್ಪಾದನೆಯ ಅರ್ಧದಷ್ಟನ್ನು ಸೇವಿಸುತ್ತಿದ್ದಾರೆ. ಅವರ ಪ್ರಾಣಿಗಳು ವಿಶ್ವ ಆಹಾರದ ಕಾಲು ಭಾಗವನ್ನು ತಿಂದು ಹಾಕುತ್ತವೆ. ಅಂದರೆ ಚೀನ ಮತ್ತು ಇಂಡಿಯಾಗಳು ಸೇವಿಸುವಷ್ಟು ಆಹಾರವನ್ನು ಮುಂದುವರಿದ ದೇಶಗಳ ದನಗಳೇ ತಿಂದು ಹಾಕುತ್ತವೆ. ಬಡದೇಶಗಳ ಜನರು ಧಾನ್ಯವನ್ನು ನೇರವಾಗಿ ರೊಟ್ಟಿ, ಅನ್ನ ಅಥವಾ ಗಂಜಿಯ ರೂಪದಲ್ಲಿ ಸೇವಿಸಿದರೆ ಮುಂದುವರಿದ ದೇಶಗಳ ಜನರು ಧನ್ಯವನ್ನು ದನಗಳಿಗೆ ಮೇವನ್ನಾಗಿ ತಿನ್ನಿಸಿ, ತಾವು ದನದ ಮಾಂಸವನ್ನು ತಿನ್ನುತ್ತಾರೆ. ಅಮೆರಿಕದಲ್ಲಿ ಒಂದು ಪೌಂಡು ಮಾಂಸವನ್ನು ಉತ್ಪಾದಿಸಲು ೧೬ ಪೌಂಡು ಧಾನ್ಯವನ್ನು ದನಗಳಿಗೆ ತಿನ್ನಿಸಬೇಕಾಗುತ್ತದೆ. ಅಂದರೆ ಮುಂದುವರಿದ ದೇಶದ ಒಬ್ಬನು ತಿನ್ನುವ ಆಹಾರ, ಬಡದೇಶದ ೧೬ ಜನರು ತಿನ್ನುವ ಆಹಾರಕ್ಕೆ ಸಮವಾಗುತ್ತದೆ. ಅದೇ ಸಮಯದಲ್ಲಿ ಇನ್ನೊಂದು ಕಡೆ ಪ್ರತಿದಿನ ೧೦,೦೦೦ ಜನ ಹಸಿವು ಮತ್ತು ಅದಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಸಾಯುತ್ತಿರುತ್ತಾರೆ.
ಅಮೆರಿಕಾದಲ್ಲಿ ಕೃಷಿ ಬಹು ಬಂಡವಾಳದ ಭಾರಿ ಕೈಗಾರಿಕೆಯಾಗಿದೆ. ಒಂದು ಬಗೆಯ ಕೈಗಾರಿಕಾ ವಸ್ತುಗಳನ್ನು, ತಿನ್ನಬಹುದಾದ ಇನ್ನೊಂದು ಬಗೆಯ ಕೈಗಾರಿಕಾ ವಸ್ತುಗಳನ್ನಾಗಿ ಪರಿವರ್ತಿಸುವ ಭಾರಿ ಉದ್ಯಮವನ್ನು ಅವರು ಕೃಷಿ ಎಂದು ಕರೆಯುತ್ತಾರೆ. ೪೦ ವರ್ಷಗಳ ಹಿಂದೆ ಅಲ್ಲಿ ೬೮ ಲಕ್ಷ ಭೂ ಹಿಡುವಳಿಗಳಿದ್ದವು. ಈಗ ಅವುಗಳ ಸಂಖ್ಯೆ ೨೮ ಲಕ್ಷಕ್ಕೆ ಇಳಿದಿದೆ. ಅಂದರೆ ಲಾಭದಾಯಕ ಉತ್ಪತ್ತಿ ಮಾಡಲಾಗದ ೪೦ ಲಕ್ಷ ಸಣ್ಣ ಹಿಡುವಳಿಗಳು ತಮ್ಮ ಅಸ್ತಿತ್ವ ಕಳೆದು ಕೊಂಡು ದೊಡ್ಡವುಗಳಲ್ಲಿ ಲೀನವಾಗಿವೆ. ಇಂದು ಕೇವಲ ಶೇ.೧ ರಷ್ಟು ರೈತರು ಅಮೆರಿಕದ ಶೇ. ೬೦ರಷ್ಟು ಮಾಂಸನೀಡುವ ದನಗಳನ್ನು ಸಾಕುತ್ತಾರೆ. ಉದಾಹರಣೆಗೆ ಟೆನಾಕೋ ಎಂಬ ಕೃಷಿ ಸಂಸ್ಥೆಯ ಆದಾಯ ೧೯೭೫ರಲ್ಲಿ ೫೫ ಸಾವಿರ ಕೋಟಿ ಡಾಲರುಗಳಾಗಿತ್ತು. ಅದು ನಿಂಬೆಹಣ್ಣು, ದ್ರಾಕ್ಷಿ, ಗೋಡಂಬಿಗಳನ್ನು ಬೆಳೆಯುವುದರ ಜೊತೆಗೆ ಟ್ರಾಕ್ಟರುಗಳು, ರಸಗೊಬ್ಬರಗಳು ಮತ್ತು ಕ್ರಿಮಿನಾಶಕಗಳನ್ನು ಸಹ ಮಾಡುತ್ತದೆ.
ಉತ್ತರ ಕೆರೋಲಿನಾದಲ್ಲಿರುವ ಒಂದು ಪಶುಪಾಲನಾ ಸಂಸ್ಥೆ ೩,೭೫,೦೦೦ ಎಕರೆ ಭೂಮಿಯನ್ನು ಹೊಂದಿದೆ. ಅಲ್ಲಿ ಸರಾಸರಿ ೩೭ ಎಕರೆಗೆ ಒಬ್ಬನಂತೆ ೧,೦೦೦ ಜನ ಮಾತ್ರ ಕೆಲಸ ಮಾಡುತ್ತಾರೆ. ದನಗಳಿಗಾಗಿ ಧಾನ್ಯಗಳನ್ನು ಬಿತ್ತಿ ಬೆಳೆಯಲು ಅಲ್ಲಿ ವಿಮಾನಗಳೇ ಮುಂತಾದ ಆಧುನಿಕ ಯಂತ್ರಗಳನ್ನು ಉಪಯೋಗಿಸುತ್ತಾರೆ. ಅಲ್ಲಿ ಸಾಕಲ್ಪಡುವ ೫೦,೦೦೦ ದನಗಳು ನೆಲವನ್ನು ಸಹ ಸೋಕದಂತೆ ನೋಡಿಕೊಳ್ಳಲಾಗುತ್ತದೆ. ದನಗಳನ್ನು ತೆರೆದ ಹುಲ್ಲುಗಾವಲಿನಲ್ಲಿ ಮೇಯಲು ಬಿಡುವುದಿಲ್ಲ. ಆಧುನಿಕ ದೊಡ್ಡಿಗಳಲ್ಲಿ ಕೂಡಿ ಅಧಿಕ ಪೌಷ್ಠಿಕ ಆಹಾರವನ್ನು ಮತ್ತು ಬೆಳವಣಿಗೆಯನ್ನು ತೀವ್ರಗೊಳಿಸುವ ರಸಾಯನಿಕ ವಸ್ತುಗಳನ್ನು ತಿನ್ನಿಸಿ ಬೆಳಸುತ್ತಾರೆ. ಅಮೆರಿಕಾದಲ್ಲಿ ಕೃಷಿ ಕುಟುಂಬದ ಕಸುಬಾಗಿದ್ದ ಕಾಲ ಒಂದಿತ್ತು. ಈಗ ಅದು ಬಹು ಬಂಡವಾಳದ ಭಾರಿ ಉದ್ಯಮವಾಗಿದೆ.
ಮುಂದುವರಿದ ಪಾಶ್ಚಾತ್ಯ ದೇಶಗಳ ಆಹಾರ ಉತ್ಪಾದನೆಯ ನೀತಿ ಮಾರುಕಟ್ಟೆಯ ಬೇಡಿಕೆ ಅಥವಾ ಬೇಡಿಕೆಯ ಕೊರತೆಗೆ ತಕ್ಕಂತೆ ಹೊಂದಿಕೊಳ್ಳುತ್ತದೆ. ೧೯೬೦ರಲ್ಲಿ ಮಿತಿಮೀರಿದ ಆಹಾರೋತ್ಪಾದನೆಯ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಬೆಲೆಯ ಕುಸಿತವನ್ನು ತಡೆಗಟ್ಟುವುದು ಕಷ್ಟವಾಯಿತು. ಕೂಡಲೆ ಸರ್ಕಾರ ಐದು ಕೋಟಿ ಎಕರೆಗಳಲ್ಲಿ ರೈತರು ಆಹಾರ ಬೆಳೆಯದಿರಲು ೩೦೦ ಕೋಟಿ ಡಾಲರು ಸಬ್ಸಿಡಿ ಕೊಡಲಾರಂಭಿಸಿತು. ಈ ಪರಿಸ್ಥಿತಿ ೧೯೭೩ರವರೆಗೂ ಇತ್ತು. ವಿಶ್ವದ ಆಹಾರ ದಾಸ್ತಾನು ಗಣನೀಯವಾಗಿ ಕಡಿಮೆಯಾಗಿ ಮಾರುಕಟ್ಟೆ ಬೆಲೆ ಹೆಚ್ಚಾದ ನಂತರವೇ ಆ ರೈತರು ಆಹಾರ ಬೆಳೆಯಲು ಆರಂಭಿಸಿದ್ದು.
೧೯೬೯-೭೨ರಲ್ಲಿ ಅಮೆರಿಕ ೯ ಕೋಟಿ ಟನ್ನುಗಳಷ್ಟು ಕಡಿಮೆ ಆಹಾರ ಬೆಳೆಯಲು ತೀರ್ಮಾನಿಸಿತು. ಅದೇ ಅವಧಿಯಲ್ಲಿ ಇಂಡಿಯಾ, ಬಾಂಗ್ಲಾದೇಶ, ಪಾಕಿಸ್ತಾನ, ಟಾಂಜಾನಿಯಾ ಮುಂತಾದ ದೇಶಗಳು ತಮ್ಮ ತೀವ್ರ ಕ್ಷಾಮ ಪರಿಸ್ಥಿತಿಯನ್ನು ಎದುರಿಸಲು ಕೇವಲ ಒಂದು ಕೋಟಿ ಟನ್ ಗೋಧಿಗಾಗಿ ವಿಶ್ವಸಂಸ್ಥೆಯನ್ನು ಅಂಗಲಾಚಿ ಬೇಡಿಕೊಳ್ಳುತ್ತಿದ್ದುವು.
ಅಮೆರಿಕ ಅಷ್ಟು ಆಹಾರ ಬೆಳೆಯಲು ಸಮರ್ಥವಾದರೆ, ಬಡ ದೇಶಗಳೇಕೆ ತಮಗೆ ಸಾಕಾಗುವಷ್ಟು ಆಹಾರ ಬೆಳೆಯಬಾರದು? ಆಹಾರದ ಬಿಕ್ಕಟ್ಟನ್ನು ಪರಿಹರಿಸಲು ಇದೇ ಸರಿಯಾದ ದಾರಿಯಲ್ಲವೆ? ಬಡದೇಶಗಳಲ್ಲಿ ಸಹ ಎಲ್ಲರೂ ಹಸಿವಿನಿಂದ ಬಳಲುತ್ತಿಲ್ಲ. ಅಲ್ಲಿನ ಶೇ. ೫೦ರಷ್ಟು ಕಡುಬಡವರು ಮಾತ್ರ ಆಹಾರ ಬೆಳೆಯುವ ಅಥವಾ ಕೊಳ್ಳುವ ಸ್ಥಿತಿಯಲ್ಲಿ ಇಲ್ಲ.
ಹಿಂದುಳಿದ ಈ ಸ್ಥಿತಿಗೆ ಕಾರಣವೇನು? ಆಹಾರ ಬೆಳೆಯಲು ಭೂಮಿ ಬೇಕು. ಉತ್ತು ಬೆಳೆ ಬೆಳೆಯುವವರ ಕೈಯಲ್ಲಿ ಭೂಮಿ ಇಲ್ಲ. ಅಲ್ಪ ಸ್ವಲ್ಪ ಇದ್ದರೂ ಕೃಷಿಗೆ ಬೇಕಾದ ಬೀಜ, ಗೊಬ್ಬರ, ಕ್ರಿಮಿನಶಕಗಳಿಗೆ ಅಗತ್ಯವಾಗಿರುವ ಬಂಡವಾಳ ಅವರಲ್ಲಿ ಇಲ್ಲ. ಮೂರನೇ ಜಗತ್ತಿನ ದೇಶಗಳಲ್ಲಿ ಶೇ. ೨೦ರಷ್ಟು ದೊಡ್ಡ ರೈತರು ಶೇ. ೭೫ ರಷ್ಟು ಭೂಮಿಗೆ ಮಾಲೀಕರಾಗಿದ್ದಾರೆ. ಆದರೆ ಇಲ್ಲಿ ಭೂ ಹಿಡುವಳಿ ದೊಡ್ಡದಾದಷ್ಟು ಅದರ ಉತ್ಪಾದನೆ ಕಡಿಮೆ ಯಾಗುತ್ತಿದೆ. ಸಣ್ಣ ಹಿಡುವಳಿದಾರರು ತಮ್ಮ ಭೂಮಿಯಲ್ಲಿ ಹೆಚ್ಚು ಬೆಳೆ ಬೆಳೆಯುತ್ತಾರೆ. ಬೇರೆ ಮಾತಿನಲ್ಲಿ ಹೇಳುವುದಾದರೆ: ಬಡದೇಶಗಳಲ್ಲಿ ಭೂ ಸುಧಾರಣೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದದ್ದೇ ಆದರೆ, ಆಹಾರದ ಕೊರೆತೆಯನ್ನು ಅಷ್ಟರಮಟ್ಟಿಗೆ ನಿವಾರಿಸಬಹುದು.
ಮೂರನೇ ಜಗತ್ತಿನ ಕೃಷಿ ತಾಂತ್ರಿಕತೆಯಲ್ಲಿ ಇದುವರೆಗೂ ಇದ್ದ ಪ್ರಾಚೀನ ಪದ್ಧತಿಗೆ ಬದಲು ಅತ್ಯಾಧುನಿಕ ವಿಧಾನವನ್ನು ಜಾರಿಗೆ ತರುವುದು ಲಾಭದಾಯಕವಲ್ಲ. ಮಧ್ಯಮ ಮಾರ್ಗದ ತಾಂತ್ರಿಕತೆಯನ್ನು ಅನುಸರಿಸಿದಲ್ಲಿ ಆ ದೇಶಗಳು ಯಶಸ್ಸನ್ನು ಸಾಧಿಸಬಹುದು. ಆದರೆ ಮುಂದುವರಿದ ದೇಶಗಳು ತಮ್ಮ ಕೃಷಿ ಸಲಕರಣೆಗಳಿಗೆ ಗಿರಾಕಿಗಳನ್ನು ಪಡೆಯುವ ಉದ್ದೇಶದಿಂದ ಮೂರನೆಯ ಜಗತ್ತಿಗೆ ಅತ್ಯಾಧುನಿಕ ಕೃಷಿ ತಾಂತ್ರಿಕತೆಯನ್ನು ದೂಡುತ್ತಿದ್ದಾರೆ. ತಮ್ಮ ದೇಶಗಳಿಗೆ ಸರಿಯಾದ ತಾಂತ್ರಿಕತೆ ಎಲ್ಲ ದೇಶಗಳಿಗೂ ಸರಿಯಾಗಬಹುದು ಎಂದು ಅವರು ಭಾವಿಸಿದ್ದಾರೆ. ಈ ಉದ್ದೇಶದಿಂದ ಅವರು ಸ್ಥಳೀಯ ಮೇಲ್ವರ್ಗದ ಜನರನ್ನು ತಮ್ಮತ್ತ ಸೆಳೆದುಕೊಂಡು ಅವರ ಮೂಲಕ ತಮ್ಮ ವಸ್ತುಗಳನ್ನು ಬಿಕರಿ ಮಾಡುತ್ತಾರೆ. ಅವರ ಉನ್ನತ ಶಿಕ್ಷಣಕ್ಕಾಗಿ ಉದಾರ ವಿದ್ಯಾರ್ಥಿ ವೇತನಗಳನ್ನು ನೀಡಲಾಗುತ್ತದೆ. ಪಾಶ್ಚಾತ್ಯ ಜೀವನ ವಿಧಾನವನ್ನು ಅಳವಡಿಸಿಕೊಂಡ ಅವರು ಕ್ರಮೇಣ ತಮ್ಮ ದೇಶಗಳಲ್ಲಿ ಪಾಶ್ಚಾತ್ಯರ ಏಜೆಂಟರಂತೆ ವರ್ತಿಸತೊಡಗುತ್ತಾರೆ.
ಮೂರನೇ ಜಗತ್ತಿನ ಬಡದೇಶಗಳು ಯಾವ ಬೆಳೆಯನ್ನು ಬೆಳೆಯಬೇಕು, ಯಾವ ರಸಗೊಬ್ಬರ ಕ್ರಿಮಿನಾಶಕಗಳನ್ನು ಬಳಸಬೇಕು ಎಂಬುದನ್ನು ಮುಂದುವರಿದ ದೇಶಗಳು ನಿರ್ಧರಿಸುತ್ತವೆ. ಮಧ್ಯಯುಗದಲ್ಲಿ ಬಲಿಷ್ಟ ರಾಷ್ಟ್ರಗಳು ದುರ್ಬಲ ರಾಷ್ಟ್ರಗಳನ್ನು ತಮ್ಮ ವಸಾಹತುಗಳನ್ನಾಗಿ ಮಾಡಿ ಕೊಳ್ಳುತ್ತಿದ್ದುವು. ಈಗ ಅಂತಹ ಕ್ರಮ ಭಾರಿ ದುಬಾರಿ ಅಥವಾ ಅಸಾಧ್ಯವಾದುದು ಎಂದು ವಿಯಾಟ್ನಾಂ, ಕೊರಿಯಾ, ಚಿಲಿಗಳಂತಹ ದೇಶಗಳಲ್ಲಿ ತಾವು ಪಡೆದ ಅನುಭವದಿಂದ ಅವರಿಗೆ ಮನವರಿಕೆಯಾಗಿದೆ. ಅದಕ್ಕಿಂತ ಸುಲಭ ಮತ್ತು ಪರಿಣಾಮಕಾರಿ ಮಾರ್ಗ ಎಂದರೆ ಆಹಾರದ ನೆರವಿನ ಮೂಲಕ ಬಡದೇಶಗಳನ್ನು ತಮ್ಮ ಅಂಕೆಯಲ್ಲಿಟ್ಟುಕೊಳ್ಳುವುದು. ಬರ ಪ್ರಕೃತಿಯ ವಿಕೋಪವಲ್ಲ: ಅದನ್ನು ಧಾನ್ಯ ವರ್ತಕರು ನಿರ್ಮಿಸುತ್ತಾರೆ" ಎಂದು ಬರ್ತೋಲ್ಡ್ ಬ್ರೆಕ್ಟ್ ಹೇಳಿದ್ದು ಅಪ್ಪಟ ಸತ್ಯ.
ಮಿತಿಮೀರಿದ ಜನಸಂಖ್ಯೆಯ ಹೆಚ್ಚಳದಿಂದ ತತ್ತರಿಸುತ್ತಿರುವ ಬಡದೇಶಗಳಲ್ಲಿ ಜನ ನಿಯಂತ್ರಣ ಅಗತ್ಯವನ್ನು ಕುರಿತು ಒಂದೇ ಸಮನೆ ತಜ್ಞರೆನಿಸಿಕೊಂಡವರು ಬೋಧನೆ ಮಾಡುತ್ತಾರೆ. ಆದರೆ ಸೂಸನ್ ಜಾರ್ಜ್‌ರ ವ್ಯಂಗ್ಯೋಕ್ತಿಯ ಪ್ರಕಾರ ಜನ ನಿಯಂತ್ರಣದ ಅಗತ್ಯವಿರುವುದು ಮುಂದುವರಿದ ದೇಶಗಳಲ್ಲಿ, ಬಡದೇಶಗಳಲ್ಲಲ್ಲ. ಏಕೆಂದರೆ ಮಾಂಸಾಹಾರವನ್ನು ಅತಿಯಾಗಿ ಸೇವಿಸುವ ಬಿಳಿಯ ಶ್ರೀಮಂತ ವ್ಯಕ್ತಿ, ಬಡವರ ಬಗ್ಗೆ ನಿರ್ದಯನಾಗಿ ಪರೋಕ್ಷ ನರಭಕ್ಷಕನಂತೆ ವರ್ತಿಸುತ್ತಾನೆ. ದನಗಳು ಧಾನ್ಯವನ್ನು ತಿಂದು ಬೆಳೆಯುವುದರಿಂದ ದನಗಳ ಮಾಂಸವನ್ನು ಸೇವಿಸುವ ಬಿಳಿಯ ಜನ ಪರೋಕ್ಷವಾಗಿ ಆಫ್ರಿಕ ಮತ್ತು ಏಷ್ಯಾಗಳ ಬಡಮಕ್ಕಳನ್ನೇ ತಿಂದು ಬದುಕುತ್ತಾರೆ.
ವಿಶ್ವದ ಶೇ. ೬ರಷ್ಟು ಜನ ವಿಶ್ವದ ಶೇ. ೩೫ರಷ್ಟು ಸಂಪನ್ಮೂಲಗಳನ್ನು ಬಳಸುತ್ತಾರೆ. ತಲಾ ಆದಾಯ ೨೦೦ ಡಾಲರಿಗಿಂತ ಕಡಿಮೆ ಇರುವ ಬಡದೇಶಗಳ ೧೦೦ ಕೋಟಿ ಜನರು ಅಮೆರಿಕದ ನಾಗರಿಕರು ಬಳಸುವ ಶೇ. ೧ರಷ್ಟು ಸಂಪನ್ಮೂಲ ಗಳನ್ನು ಮಾತ್ರ ಬಳಸುತ್ತಾರೆ. ಬಡದೇಶಗಳ ಆಹಾರ ಕೊರತೆಗೆ ನಿಜವಾದ ಕಾರಣ ಜನಸಂಖ್ಯೆಯಲ್ಲ. ಬಹುಪಾಲು ಭೂಮಿ ಕೆಲವೇ ಕೆಲವರ ಕೈಯಲ್ಲಿರುವುದರಿಂದ ಅದು ಬರಡಾಗಿದೆ. ೨೫೦ ಎಕರೆಗಿಂತ ಹೆಚ್ಚು ಭೂಮಿಯುಳ್ಳ ಶೇ. ೨.೫ರಷ್ಟು ವಿಶ್ವದ ಭೂಮಾಲೀಕರು ಜಗತ್ತಿನ ಮುಕ್ಕಾಲು ಸಾಗುವಳಿ ಭೂಮಿಯನ್ನು ನಿಯಂತ್ರಿಸುತ್ತಾರೆ.
ಜನಸಾಂದ್ರತೆ ದಟ್ಟವಾಗಿರುವ ದೇಶಗಳು ಆಹಾರದ ಕೊರೆತೆಯಿಂದ ನರಳುತ್ತವೆ ಎಂಬುದು ನಿಜವಲ್ಲ. ಇಂಡಿಯಾದಲ್ಲಿ ಒಂದು ಚದುರ ಕಿಲೋಮೀಟರಿಗೆ ೧೭೨ ಜನ ವಾಸಿಸಿದರೆ ಬೊಲಿವಿಯದಲ್ಲಿ ಕೇವಲ ೫ ಜನ ವಾಸಿಸುತ್ತಾರೆ. ಆದರೆ ಎರಡು ದೇಶಗಳಲ್ಲೂ ಬರ ಇದ್ದೇ ಇರುತ್ತದೆ. ಒಂದು ಚದುರ ಕಿಲೋಮೀಟರ್‌ಗೆ ೩೨೬ ಜನಸಾಂದ್ರತೆ ಇರುವ ಹಾಲೆಂಡ್‌ನಲ್ಲಿ ಬರ ಇಲ್ಲ. ಸಾಗುವಳಿ ಭೂಮಿ ಒಬ್ಬ ವ್ಯಕ್ತಿಗೆ ಇಂಡಿಯಾದಲ್ಲಿ .೭೫ ಎಕರೆ, ಬೊಲಿವಿಯದಲ್ಲಿ ೧.೫೭ ಎಕರೆ ಮತ್ತು ಹಾಲೆಂಡ್‌ನಲ್ಲಿ .೧೫ ಎಕರೆ ಇದೆ. ಇಂಡಿಯ ಬೊಲಿವಿಯಗಳು ಹಸಿವಿನಿಂದ ನರಳುತ್ತಿದ್ದರೆ ಹಾಲೆಂಡ್ ತನ್ನ ಅಗತ್ಯಕಿಂತ ಹೆಚ್ಚು ಆಹಾರ ಬೆಳೆದು ರಫ್ತು ಸಹ ಮಾಡುತ್ತದೆ. ಮತ್ತೊಂದು ಉದಾಹರಣೆ, ಚೀನಾದ ಜನಸಂಖ್ಯೆ ೫೦ ಕೋಟಿ ಇದ್ದಾಗ ಅದು ತೀವ್ರ ಬರಪೀಡಿತವಾಗಿತ್ತು. ಈಗ ಅಲ್ಲಿ ೧೦೦ ಕೋಟಿ ಜನರಿದ್ದರೂ ಅವರೆಲ್ಲರಿಗೂ ಸಾಕಾಗುವಷ್ಟು ಆಹಾರಬೆಳೆಯಲಾಗುತ್ತಿದೆ. ಆಹಾರದ ಕೊರೆತೆ ನೀಗಿದುದರಿಂದ ಜನಸಂಖ್ಯಾ ಏರಿಕೆಯ ಪ್ರಮಾಣವೂ ಕಡಿಮೆ ಯಾಗುತ್ತಿದೆ. ಇದರಿಂದ ಒಂದು ಅಂಶ ಸ್ಪಷ್ಟ. ಜನಸಂಖ್ಯೆನಿಯಂತ್ರಿಸುವುದರಿಂದ ಬಡತನ ತೊಲಗುವುದಿಲ್ಲ. ಆರ್ಥಿಕ ಸ್ಥಿತಿ ಸುಧಾರಿಸಿದಂತೆಲ್ಲಾ ಜನಸಂಖ್ಯೆಯ ಏರಿಕೆ ಕಡಿಮೆಯಾಗುತ್ತದೆ. ಬಡತನ ಮತ್ತು ಜನಸಂಖ್ಯೆಯ ಹೆಚ್ಚಳ ಎರಡೂ ರಾಜಕೀಯ ಮತ್ತು ಆರ್ಥಿಕ ನೀತಿಯಲ್ಲಿನ ದೋಷಗಳ ಪರಿಣಾಮಗಳು.
ತಾವು ನೀಡುವ ನೆರವಿನಿಂದ ಬಡರಾಷ್ಟ್ರಗಳು ಅಭಿವೃದ್ಧಿ ಹೊಂದುತ್ತವೆ ಅಥವಾ ಹೊಂದಬೇಕು ಎಂಬ ನಂಬಿಕೆಯಿಂದ ಮುಂದುವರಿದ ರಾಷ್ಟಗಳು ನೆರವನ್ನು ನೀಡುವುದಿಲ್ಲ. ಬಡದೇಶಗಳಲ್ಲಿ ತಲೆದೋರಬಹುದಾದ ಕ್ರಾಂತಿಕಾರಕ ಪರಿಸ್ಥಿತಿಯನ್ನು ದೂರಸರಿಸಿ ಆ ರಾಷ್ಟ್ರಗಳು ಸದಾ ಪರಾವಲಂಬಿಗಳಾಗಿರುವಂತೆ ಮಾಡುವುದು ಮುಂದುವರಿದ ರಾಷ್ಟ್ರಗಳ ಒಂದು ತಂತ್ರವಾಗಿದೆ. ತಾವು ನೀಡುವ ನೆರವು ಭ್ರಷ್ಟ ಮೇಲ್ವರ್ಗದ ಅಧಿಕಾರಿಗಳ ಭೋಗಜೀವನಕ್ಕಾಗಿ ವಿನಿಯೋಗ ವಾಗುತ್ತದೆಂದು ಅಮೆರಿಕನ್ನರಿಗೆ ಚೆನ್ನಾಗಿ ಗೊತ್ತು.
ಸ್ಥಳೀಯ ಉನ್ನತ ವರ್ಗವನ್ನು ತಮ್ಮ ಪರಮಾಡಿಕೊಂಡು ಮುಂದುವರಿದ ದೇಶಗಳು ಅವರನ್ನು ತಮ್ಮ ದೇಶಗಳಿಗೆ ತರಬೇತಿಗಾಗಿ ಆಹ್ವಾನಿಸುತ್ತಾರೆ. ಅಲ್ಲಿ ಅವರಿಗೆ ವಿದೇಶೀಯ ಭೋಗಜೀವನ ರೂಢಿಯಾಗುತ್ತದೆ. ಅವರು ಸ್ವದೇಶಕ್ಕೆ ಹಿಂತಿರುಗಿದ ನಂತರ ವಿದೇಶಿ ಮೌಲ್ಯಗಳಿಗೇ ಜೋತು ಬೀಳುತ್ತಾರೆ. ದೊಡ್ಡ ದೊಡ್ಡ ಪ್ರತಿಷ್ಠಾನಗಳು, ಬಹುರಾಷ್ಟ್ರೀಯ ಸಂಸ್ಥೆಗಳು ಈ ದಿಕ್ಕಿನಲ್ಲಿ ಸರ್ಕಾರದೊಡನೆ ಸಹಕರಿಸುತ್ತವೆ.
ತಾಂತ್ರಿಕತೆ ಎಂದರೆ ಕೇವಲ ಟ್ರಾಕ್ಟರ್‌ನಂತಹ ಯಂತ್ರಗಳು ಮಾತ್ರವಲ್ಲ. ಯಾವ ಬೆಳೆಯನ್ನು ಬೆಳೆಯಬೇಕು. ಅದಕ್ಕೆ ಯಾವ ಗೊಬ್ಬರ, ಔಷಧ ಮುಂತಾದುವನ್ನು ಬಳಸಬೇಕು ಮತ್ತು ಆ ಬೆಳೆಯನ್ನು ಎಲ್ಲಿ ಹೇಗೆ ಮಾರಾಟ ಮಾಡಬೇಕು ಎಂಬುದೆಲ್ಲಾ ನಾವು ಆರಿಸಿಕೊಳ್ಳುವ ತಾಂತ್ರಿಕತೆಯನ್ನು ಅವಲಂಬಿಸಿರುತ್ತದೆ.
ಅನೇಕ ಬಡದೇಶಗಳು ತಮ್ಮ ಪರಿಸರಕ್ಕೆ ಸೂಕ್ತವಾದ ತಾಂತ್ರಿಕತೆಯನ್ನು ಗೊತ್ತುಪಡಿಸುವ ಜವಾಬ್ದಾರಿಯನ್ನು ಶ್ರೀಮಂತ ರಾಷ್ಟ್ರಗಳಿಗೆ ಒಪ್ಪಿಸಿವೆ. ಮುಂದುವರಿದ ದೇಶಗಳು ತಮ್ಮ ಅಭಿವೃದ್ಧಿ ವಿಧಾನಗಳನ್ನೇ ಬಡ ದೇಶಗಳೂ ಹೇರಲು ಹೋಗುತ್ತವೆ.
ತಾಂತ್ರಿಕತೆಯ ಆಯ್ಕೆ ಎಂದರೆ: ಅದನ್ನು ಒದಗಿಸುವವನ ಆಯ್ಕೆ. ನೀವು ಆಹಾರೋತ್ಪಾದನೆಗಾಗಿ ಬಹುರಾಷ್ಟ್ರೀಯ ಸಂಸ್ಥೆಗಳು ಒದಗಿಸುವ ತಾಂತ್ರಿಕತೆ, ರಸಗೊಬ್ಬರ, ಕೀಟನಾಶಕಗಳನ್ನು ಅವಲಂಬಿಸಬಹುದು. ಇದರಿಂದ ಸ್ಥಳೀಯ ಸಂಪನ್ಮೂಲಗಳನ್ನು ಕಡೆಗಣಿಸಿ ಪರಾವಲಂಬನೆಗೆ ಅವಕಾಶ ಮಾಡಿಕೊಟ್ಟಂತಾಗುವುದರ ಜೊತೆಗೆ ಉತ್ಪಾದನೆಯ ವೆಚ್ಚವೂ ಗಣನೀಯವಾಗಿ ಹೆಚ್ಚುತ್ತದೆ. ಆಹಾರದ ಬೆಲೆ ಹೆಚ್ಚುವುದರಿಂದ ನಿರುದ್ಯೋಗಿಗಳಾದ ಬಡಜನ ಆಹಾರವನ್ನು ಕೊಳ್ಳಲು ಅಸಮರ್ಥರಾಗುತ್ತಾರೆ.
ಆಧುನಿಕ ತಾಂತ್ರಿಕತೆ ಹಿಂದುಳಿದ ದೇಶಗಳ ಮೇಲೆ ಎಂತಹ ದುಷ್ಪರಿಣಾಮ ಬೀರಬಹುದು ಎಂಬುದಕ್ಕೆ ನಾರ್ವೆಯ ನೆರವಿನಿಂದ ಕೇರಳದಲ್ಲಿ ಬಳಕೆಗೆ ತಂದ ಆಧುನಿಕ ಮತ್ಸೋದ್ಯಮದ ಸಾಧನೆಯನ್ನು ನೋಡಬಹುದು.
ಕೇರಳದ ಕರಾವಳಿಯ ಮೀನುಗಾರರು ಪರಂಪರೆಯಿಂದ ಮೀನು ಹಿಡಿದು ಮಾರುವ ಕಸುಬಿನಲ್ಲಿ ನಿಪುಣರಾಗಿದ್ದರು. ಅವರ ಸಂಪಾದನೆ ಕಡಿಮೆ ಯಾಗಿದ್ದರೂ ಅವರಿಗೆ ಮತ್ತು ಅವರ ಪರಿಸರದ ಬಡಜನರಿಗೆ ಪೌಷ್ಠಿಕ ಆಹಾರದ ಕೊರತೆ ಇರಲಿಲ್ಲ. ಮೀನು ಅಗ್ಗದ ದರದಲ್ಲಿ ಮಾರಾಟವಾಗುತ್ತಿತ್ತು. ನಾರ್ವೆಯ ಸಹಾಯದಿಂದ ಆಧುನಿಕ ಫೈಬರ್‌ಗ್ಲಾಸ್ ದೋಣಿಗಳನ್ನು ಬಳಸಿ ಆಳದ ಕಡಲಿನಲ್ಲಿ ಬೃಹತ್ ಪ್ರಮಾಣದ ಮೀನು ಹಿಡಿಯಲಾಯಿತು. ಅವನ್ನು ಕೆಡದಂತೆ ಆಧುನಿಕ ಶೈತ್ಯೀಕರಣ ಯಂತ್ರೋಪಕರಣಗಳನ್ನು ಬಳಸಲಾಯಿತು. ಇದರಿಂದ ಮೀನಿನ ಬೆಲೆ ಅಗಾಧವಾಗಿ ಹೆಚ್ಚಿತು. ಮೊದಲ ಹಂತದಲ್ಲಿ ಕೊಳ್ಳುವವರ ಕೊರತೆ ಉಂಟಾಯಿತು. ಸ್ಥಳೀಯರು ಪೌಷ್ಠಿಕ ಆಹಾರದಿಂದ ವಂಚಿತರಾದರು. ಸೈಕಲ್ ಮೇಲೆ ಬುಟ್ಟಿಗಳಲ್ಲಿಟ್ಟುಕೊಂಡು ಮೀನು ಮಾರಾಟ ಮಾಡುವುದು ನಿಂತುಹೋಯಿತು. ಶೈತ್ಯೀಕರಿಸಿದ ವ್ಯಾನುಗಳಲ್ಲಿ ಮೀನನ್ನು ದೂರದ ನಗರಗಳ ಶ್ರೀಮಂತರಿಗೆ ಒದಗಿಸುವುದು ಆರಂಭವಾಯಿತು. ಅಲ್ಲಿಯೂ ಸಾಕಷ್ಟು ಗಿರಾಕಿಗಳು ಸಿಗದೆ ಈಗ ಮೀನನ್ನು ದೂರದ ಅರಬ್ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಈ ಉದ್ಯಮದಿಂದ ಕೆಲವೇ ಕೆಲವರು ಶ್ರೀಮಂತರಾಗಿ ಬಡ ಮೀನುಗಾರರು ನಿರುದ್ಯೋಗಿಗಳಾಗಿದ್ದಾರೆ. ಸ್ಥಳೀಯರು ಮೀನಿನ ಆಹಾರದಿಂದ ವಂಚಿತರಾಗಿದ್ದಾರೆ. ಆಧುನಿಕ ತಾಂತ್ರಿಕತೆ ಇಂಡಿಯಾ ದಂತಹ ಹಿಂದುಳಿದ ದೇಶದ ಮೇಲೆ ಉಂಟುಮಾಡುತ್ತಿರುವ ಪರಿಣಾಮ ಇದು.
ಒಂದು ದೇಶಕ್ಕೆ ಸೂಕ್ತವಾದ ತಾಂತ್ರಿಕತೆ ಆ ದೇಶದ ನೈಸರ್ಗಿಕ ಹಾಗೂ ಮಾನವ ಸಂಪನ್ಮೂಲಗಳನ್ನು ಅವಲಂಬಿಸಿರಬೇಕಾಗುತ್ತದೆ. ನಾರ್ವೆಗೆ ಸೂಕ್ತವಾದುದು ಇಂಡಿಯಾಕ್ಕೂ ಸೂಕ್ತವಾಗಲಾರದು. ಇದನ್ನು ಅರ್ನಸ್ಟ್ ಷುಮೇಕರ್ ತನ್ನ Small is Beautiful: Economics as if people mattered ಎಂಬ ಪುಸ್ತಕದಲ್ಲಿ ವಿಶದವಾಗಿ ವಿಶ್ಲೇಷಿಸಿದ್ದಾನೆ.
೧೯೪೪-೬೫ರ ವರೆಗೆ ಮೆಕ್ಸಿಕೋದಲ್ಲಿ ರಾಕ್‌ಫೆಲ್ಲರ್ ಪ್ರತಿಪ್ಠಾನದ ನೆರವಿನಿಂದ ಡಾ|| ನಾರ್‍ಮನ್ ಬೋರ್‌ಲಾಗ್ ನಡೆಸಿದ ಸಂಶೋಧನೆಯ ಫಲವಾಗಿ ಹೆಚ್ಚು ಇಳುವರಿ ನೀಡುವ ಗೋಧಿ ತಳಿಗಳನ್ನು ಕಂಡುಹಿಡಿಯ ಲಾಯಿತು. ಅಮೆರಿಕದಲ್ಲಿ ಇದರ ಪೂರ್ಣ ಲಾಭ ಪಡೆದ ನಂತರ ಇಂಡಿಯಾ, ಪಾಕಿಸ್ತಾನ, ಇಂಡೋನೇಷ್ಯಾಗಳಿಗೆ ಅದನ್ನು ವಿಸ್ತರಿಸಲಾಯಿತು. ಫಿಲಿಪೈನ್ಸ್‌ನಲ್ಲಿ ಮಾಡಿದ ಪ್ರಯೋಗಗಳಿಂದ ಅಧಿಕ ಇಳುವರಿ ಭತ್ತದ ತಳಿ ರೂಢಿಗೆ ಬಂತು.
ಅಧಿಕ ಇಳುವರಿ ನೀಡುವ ಈ ತಳಿಗಳಿಗೆ ಅಧಿಕ ಪ್ರಮಾಣದ ರಸಗೊಬ್ಬರ ಮತ್ತು ಕ್ರಿಮಿನಾಶಕಗಳು ಆವಶ್ಯಕ. ಅವುಗಳನ್ನು ಪಡೆಯಲು ಬಹುರಾಷ್ಟ್ರೀಯ ಸಂಸ್ಥೆಗಳನ್ನು ಅವಲಂಬಿಸದೆ ಗತ್ಯಂತರವಿಲ್ಲ. ಹೀಗೆ ಹಸಿರು ಕ್ರಾಂತಿ ಪುನಃ ನಮ್ಮನ್ನು ಪರಾವಲಂಬನೆಯತ್ತ ತಳ್ಳುತ್ತಿದೆ.
ಅಲ್ಲದೆ ಹೆಚ್ಚು ಬಂಡವಾಳ ಹೂಡಿ ಆಧುನಿಕ ಕೃಷಿಯಲ್ಲಿ ತೊಡಗುವ ಸಾಮರ್ಥ್ಯ ಬಡರೈತನಿಗೆ ಇಲ್ಲ. ಹೆಚ್ಚು ಭೂಮಿಯುಳ್ಳ ರೈತ ಹೆಚ್ಚು ಬಂಡವಾಳ ಹೂಡಿ ಲಾಭ ಪಡೆಯಲು ಸಾಧ್ಯವಾಯಿತು. ಶ್ರೀಮಂತ ರೈತನನ್ನು ಮತ್ತಷ್ಟು ಶ್ರೀಮಂತಗೊಳಿಸಿ, ಬಡರೈತನು ತನ್ನ ಜಮೀನನ್ನು ಮಾರಿ ಶ್ರೀಮಂತನ ಜಮೀನಿನಲ್ಲಿ ಕೂಲಿಯಾಳಾಗುವಂತೆ ಅಥವಾ ಪಟ್ಟಣಕ್ಕೆ ವಲಸೆ ಹೋಗುವಂತೆ ಮಾಡುವಲ್ಲಿ ಹಸಿರು ಕ್ರಾಂತಿ ಯಶಸ್ವಿಯಾಯಿತು.
ಮುಂದುವರಿದ ದೇಶಗಳಲ್ಲಿ ಕೃಷಿ ಉದ್ಯಮ ಅತ್ಯಂತ ಲಾಭದಾಯಕ ಉದ್ಯಮವಾಗಿದೆ. ಒಂದು ಕಡೆ ರಸಗೊಬ್ಬರ, ಕ್ರಿಮಿನಾಶಕಗಳ ಉತ್ಪಾದನೆ, ಮಾರಟ, ಇನ್ನೊಂದು ಕಡೆ ಸಿದ್ಧಪಡಿಸಿದ ಆಹಾರ ವಸ್ತುಗಳನ್ನು ಆಕರ್ಷಕ ಪ್ಯಾಕೆಟ್‌ಗಳಲ್ಲಿ ತುಂಬಿ ಮಾರಾಟ ಮಾಡುವುದು ಇಂದು ಭಾರಿ ಉದ್ಯಮವಾಗಿದೆ. ಈ ಉದ್ಯಮದಲ್ಲಿ ಬಹುರಾಷ್ಟ್ರೀಯ ಸಂಸ್ಥೆಗಳು ತೊಡಗಿವೆ.
ಜಗತ್ತಿನ ಅರ್ಧದಷ್ಟು ಜನ ಏಕೆ ಮತ್ತು ಹೇಗೆ ಹಸಿವಿನಿಂದ ಸಾಯುತ್ತಿದ್ದಾರೆ ಎಂಬುದನ್ನು ವಿವರಿಸುವುದರಲ್ಲೇ ಲೇಖಕರು ತೃಪ್ತಿ ಪಡೆಯುವುದಿಲ್ಲ. ಈ ಬೃಹದ್ ಸಮಸ್ಯೆಗೆ ಪರಿಹಾರವನ್ನು ಪಡೆಯಲು ಕೆಲವು ಮೂಲಭೂತ ಸಲಹೆಗಳನ್ನು ಸಹ ನೀಡುತ್ತಾರೆ.
ಮೂರನೆ ಜಗತ್ತಿನ ದೇಶಗಳು ತಮ್ಮ ಅಭಿವೃದ್ಧಿಗೆ ತಾವೇ ಹೊಣೆಗಾರರಾಗಬೇಕು. ತಮ್ಮ ಪರಿಸರ ಮತ್ತು ಸಂಪನ್ಮೂಲಗಳಿಗೆ ತಕ್ಕ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಬೇಕು. ಭೂ ಸುಧಾರಣೆಯ ಮೂಲಕ ಗ್ರಾಮೀಣ ಬಹುಸಂಖ್ಯಾತ ಜನರಿಗೆ ಸಾಮಾಜಿಕ ನ್ಯಾಯ ದೊರೆಯಬೇಕು. ಸ್ಥಳೀಯ ಜನರ ಹಸಿವನ್ನು ನೀಗುವ ಆಹಾರೋತ್ಪಾದನೆಯಲ್ಲಿ ತೊಡಗಬೇಕು. ಅಭಿವೃದ್ಧಿ ಯೋಜನೆಗಳು ಸ್ಥಳೀಯ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳನ್ನು ಬಳಸಿಕೊಳ್ಳುವಂತಿರಬೇಕು. ಪರಾವಲಂಬನೆಯ ಕ್ಷಿಪ್ರ ಪ್ರಗತಿಗಿಂತ ಸ್ವಾವಲಂಬನೆಯ ಮಂದಗತಿ ಶಾಶ್ವತ ಪರಿಹಾರ ನೀಡುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು. ಇವು ಲೇಖಕರು ಮೂರನೆ ಜಗತ್ತಿಗೆ ನೀಡುವ ಸಲಹೆಗಳು.
ಸೂಸನ್ ಜಾರ್ಜ್ ತಮ್ಮ ಆಳವಾದ ಅಧ್ಯಯನದಿಂದ ಮುಂದುವರಿದ ದೇಶಗಳು ನೀಡುವ ನೆರವು ನೆರವಲ್ಲ, ಅದೊಂದು ಗಾಳ ಎಂಬುದನ್ನು ಅನೇಕ ದೃಷ್ಟಾಂತಗಳಿಂದ ಸಾಬೀತುಗೊಳಿಸಿದ್ದಾರೆ. ಲೇಖಕರ ವಾದ ಸರಣಿಯನ್ನು ಒಪ್ಪದೇ ಇರುವವರೂ ಸಹ ಅಲ್ಲಿ ಒದಗಿಸಿರುವ ವಿಪುಲ ದಾಖಲೆಗಳು ಮತ್ತು ಅಂಕಿಸಂಖ್ಯೆಗಳಿಂದ ಚಕಿತರಾಗುತ್ತಾರೆ.
ನಮ್ಮ ದೇಶದ ರಾಜಕಾರಣಿಗಳು, ಅರ್ಥಶಾಸ್ತ್ರಜ್ಞರು ಮತ್ತು ಅಭಿವೃದ್ಧಿ ಯೋಜನೆಯಲ್ಲಿ ಆಸಕ್ತಿ ಇರುವ ಎಲ್ಲರೂ ಅಗತ್ಯವಾಗಿ ಈ ಪುಸ್ತಕವನ್ನು ಓದಬೇಕು.
- Login or register to post comments
- Email this page