You are hereವಿಧವೆ: ಈ ಶಬ್ದದ ಬಳಕೆ ಇನ್ನೆಷ್ಟು ದಿನ?

ವಿಧವೆ: ಈ ಶಬ್ದದ ಬಳಕೆ ಇನ್ನೆಷ್ಟು ದಿನ?


ಲೇಖಕರು: ಬಿ.ವಿ. ವೀರಭದ್ರಪ್ಪ
ಹಕ್ಕುಗಳು: ಲೇಖಕರವು

ವೇದಗಳು, ರಾಮಾಯಣ, ಮಹಾಭಾರತ, ಮನು, ಯಾಜ್ಞವಲ್ಕ್ಯ, ಪರಾಶರ ಮುಂತಾದ ಕೃತಿಗಳ ವಸ್ತುನಿಷ್ಠ ಅಧ್ಯಯನ ಕಾಲಾನುಕ್ರಮವಾಗಿ ವಿಧವೆಯವರನ್ನು ಹೇಗೆ ಔನ್ನತ್ಯದಿಂದ ಅವನತಿಗೆ ತಳ್ಳಲಾಗಿದೆ ಎಂಬುದು ಸ್ಪಷ್ಟಪಡಿಸುತ್ತದೆ.

ಋಗ್ವೇದ, ಒಬ್ಬ ಸ್ತ್ರೀಗೆ ಏಕಕಾಲದಲ್ಲಿ ಬಹುಜನ ಗಂಡಂದಿರು ಸಲ್ಲುವುದಿಲ್ಲ ಎಂದು ಮಾತ್ರ ಹೇಳುತ್ತದೆ. ಬಹುಪತ್ನಿತ್ವ ವಿವಾಹವನ್ನು ಮಾತ್ರ ವೇದ ನಿಷೇಧಿಸುವುದೇ ವಿನಃ ವಿಧವಾ ವಿವಾಹವನ್ನಾಗಲಿ, ಪುನರ್ವಿವಾಹ ವನ್ನಾಗಲಿ ಅದು ತಿರಸ್ಕರಿಸುವುದಿಲ್ಲ. ಗಂಡನ ಮರಣಾನಂತರ ವಿಧವೆಯು ತನ್ನ ಪತಿಯ ಸೋದರನನ್ನು ವಿವಾಹವಾಗುವುದು ಧಾರ್ಮಿಕ ವಿಧಿಯಾಗಿತ್ತು. ತನ್ನ ಪತಿಗೆ ಸೋದರರಿಲ್ಲದಿದ್ದರೆ ಅವಳು ಕುಟುಂಬದ ಹತ್ತಿರದ ಸಂಬಂಧಿಯನ್ನು ಮದುವೆಯಾಗಿ ಮಕ್ಕಳನ್ನು ಪಡೆಯಬಹುದಾಗಿತ್ತು.

ಮಹಾಭಾರತದಲ್ಲಿನ ಸ್ತ್ರೀ ಪುರುಷ ಸಂಬಂಧಗಳು ಅತ್ಯಂತ ವೈವಿಧ್ಯಪೂರ್ಣವಾಗಿವೆ. ಮಹಾಭಾರತದ ಕವಿಯು ಆರ್ಯ ಜನಾಂಗದ ಹಾಗೂ ಆರ್ಯಪೂರ್ವ ಭಾರತೀಯ ಜನಾಂಗಗಳ ಸಂಪ್ರದಾಯಗಳನ್ನು ನೈಜವಾಗಿ ಚಿತ್ರಿಸಿದ್ದಾನೆ. ಭಾರತದಲ್ಲಿ ನಿರೂಪಣೆಗೊಂಡ ಸಂಗತಿಗಳು ಐತಿಹಾಸಿಕವಾಗಿ ಸತ್ಯವಿರಬಹುದು, ಇಲ್ಲದಿರಬಹುದು. ಆದರೆ ಅಲ್ಲಿ ವಿವರಿಸಲಾದ ಸಾಮಾಜಿಕ ನೀತಿಗಳು ಬಹುಮಟ್ಟಿಗೆ ವಾಸ್ತವ ಎನ್ನಬಹುದು.

ಪ್ರಾಚೀನ ಭಾರತದಲ್ಲಿ ರೂಢಿಯಲ್ಲಿದ್ದ ’ನಿಯೋಗ’ ಎಂಬ ಪದ್ಧತಿಯನ್ನು ಮಹಾಭಾರತ ಉಲ್ಲೇಖಿಸುತ್ತದೆ. ಪತಿ ಮಡಿದಾಗ ಇಲ್ಲವೆ ನಪುಂಸಕನಾದಾಗ ಅವನ ಮಡದಿಯು ಗೊತ್ತಾದ ಪುರುಷನಿಂದ ಮಕ್ಕಳನ್ನು ಪಡೆಯಬಹುದಾಗಿತ್ತು. ಆ ಮಕ್ಕಳು ಶಾಸ್ತ್ರರೀತ್ಯ ಗತಿಸಿದ ಪತಿಯ ಮಕ್ಕಳೇ ಆಗಿ ಅವನ ಆಸ್ತಿಗೆ ಹಕ್ಕುದಾರರಾಗುತ್ತಿದ್ದರು. ಹೊಲದಲ್ಲಿ ಬಿತ್ತಿದ ಬೆಳೆಯು ಹೊಲದ ಒಡೆಯನಿಗೇ ಸಲ್ಲುತ್ತದೆ. ಬಿತ್ತಿದವನಿಗಲ್ಲ ಎಂಬ ನಂಬಿಕೆ ಇಂತಹ ಪದ್ಧತಿಗೆ ಪೋಷಕವಾಗಿತ್ತು.

ಮಡದಿಯಾದ ಅಂಬಿಕೆ ಮತ್ತು ಅಂಬಾಲಿಕೆಯರಿಗೆ ಪುತ್ರ ಸಂತಾನವಾಗುವ ಮೊದಲೇ ವಿಚಿತ್ರವೀರ್‍ಯನು ಗತಿಸಿದಾಗ ವಂಶದ ಕುಡಿಯನ್ನು ಬೆಳೆಸಬೇಕೆಂದು ಎಲ್ಲರೂ ವಿಚಿತ್ರವೀರ್‍ಯನ ಮಲಸೋದರನಾದಬೀಷ್ಮನತ್ತ ನೋಡುತ್ತಾರೆ; ಭೀಷ್ಮ ಬ್ರಹ್ಮಚರ್‍ಯ ವ್ರತವನ್ನು ಕೈಗೊಂಡಿರುವುದರಿಂದ ಅಸಹಾಯಕನಾಗಿರುತ್ತಾನೆ. ಕೊನೆಯಲ್ಲಿ ಇನ್ನೊಬ್ಬ ಮಲಸೋದರನಾದ ವ್ಯಾಸ ಋಷಿಯಿಂದ ಅಂಬಿಕೆ ಮತ್ತು ಅಂಬಾಲಿಕೆಯರು ಮಕ್ಕಳನ್ನು ಪಡೆಯಬಹುದೆಂದು ಭೀಷ್ಮ ಮತ್ತು ಸತ್ಯವತಿಯರು ತೀರ್ಮಾನಿಸುತ್ತಾರೆ. ವ್ಯಾಸ ವಿಚಿತ್ರವೀರ್‍ಯನ ತಾಯಿಯಾದ ಸತ್ಯವತಿಗೆ ವಿವಾಹ ಪೂರ್ವದಲ್ಲಿ ಪರಾಶರ ಋಷಿಯಿಂದ ಜನಿಸಿದವನು, ಸತ್ಯವತಿ ಮತ್ತು ಭೀಷ್ಮರ ಪ್ರಾರ್ಥನೆ ಮನ್ನಿಸಿ ದ್ವೈಪಾಯನ ವ್ಯಾಸನು ಅಂಬಿಕೆ ಮತ್ತು ಅಂಬಾಲಿಕೆಯರನ್ನು ಕೂಡಿದುದರ ಫಲವಾಗಿ ಧೃತರಾಷ್ಟ್ರ ಮತ್ತು ಪಾಂಡು ಜನಿಸುತ್ತಾರೆ.

ಮಹಾಭಾರತದ ಆದಿಪರ್ವದ ೧೦೪ನೇ ಅಧ್ಯಾಯದಲ್ಲಿ ಬರುವ ದೀರ್ಘತಮ ಎಂಬ ಋಷಿಗೆ ಕಥೆ ಗಮನಾರ್ಹ. ಬೃಹಸ್ಪತಿಯ ಅಣ್ಣ ಉತಥ್ಯನೆಂಬ ಋಷಿಗೆ ದೀರ್ಘತಮನೆಂಬ ಮಗನಿದ್ದನು. ಅವನು ಹುಟ್ಟು ಕುರುಡ ನಾದರೂ ಮಹಾವಿದ್ವಾಂಸ, ವಿವಾಹಿತನಾಗಿದ್ದರೂ ಅವನು ಪರಸ್ತ್ರೀಯ ರೊಡನೆ ಸ್ವೇಚ್ಛಾಚಾರದಿಂದ ವರ್ತಿಸುತ್ತಿದ್ದ. ಇದರಿಂದ ಬೇಸತ್ತ ಋಷಿಗಳು ಅವನಿಗೆ ಬಹಿಷ್ಕಾರ ಹಾಕಿದರು. ಅವನ ಮಡದಿಯಾದ ಪ್ರದ್ವೇಷಿಗೆ ಆ ವೇಳೆಗೆ ಮಕ್ಕಳಿದ್ದರು. ದೀರ್ಘತಮನು ಕುರುಡನಾದ್ದರಿಂದ ಅವನಿಗೂ ಅವನ ಮಕ್ಕಳಿಗೂ ಪ್ರದ್ವೇಷಿಯೇ ದುಡಿದು ಹಾಕಬೇಕಾಗಿತ್ತು. ಪತಿಯ ದುವರ್ತನೆ ಯಿಂದ ಬೇಸತ್ತ ಅವಳು ’ಇನ್ನು ನಾನು ದುಡಿದು ಹಾಕುವುದಿಲ್ಲ. ನೀನು ಮನ ಬಂದಲ್ಲಿಗೆ ಹೋಗು. ನಾನು ಮತ್ತೊಬ್ಬ ಗಂಡನನ್ನು ಮಾಡಿಕೊಳ್ಳುವೆ" ಎಂದು ಹೇಳಿದಳು. ಇದನ್ನು ಕೇಳಿದ ದೀರ್ಘತಮನು ಕೆರಳಿ "ಸ್ತ್ರೀಗೆ ಜೀವನಪರ್‍ಯಂತ ಒಬ್ಬನೇ ಗಂಡನಿರಬೇಕು. ಅವನು ಸತ್ತಿರಲಿ, ಬದುಕಿರಲಿ ಸ್ತ್ರೀಯು ಮತ್ತೊಬ್ಬ ಗಂಡನನ್ನು ಮಾಡಿಕೊಳ್ಳಕೂಡದೆಂದು ಇಂದಿನಿಂದ ನಾನು ಶಾಸನ ಮಾಡುತ್ತೇನೆ" ಎಂಬುದಾಗಿ ಗುಡುಗಿದ. ಅವನು ವಿದ್ವಾಂಸನಾದುದರಿಂದ ಅಂತಹ ಶಾಸನವನ್ನೂ ಮಾಡಿದ. ಇದರಿಂದ ಸ್ತ್ರೀಯ ಪುನರ್ವಿ ವಾಹದ ಅಥವಾ ವಿಧವಾ ವಿವಾಹದ ಹಕ್ಕಿಗೆ ಯಾವ ಸಂದರ್ಭದಲ್ಲಿ ಎಂತಹ ಪುರುಷರಿಂದ ಚ್ಯುತಿಯುಂಟಾಗಿರಬಹುದೆಂದು ಊಹಿಸಬಹುದು.

ವೇನನೆಂಬ ರಾಜನ ಆಳ್ವಿಕೆಯಲ್ಲಿ ’ನಿಯೋಗ’ ಮತ್ತು ವಿಧವಾ ವಿವಾಹ ಪದ್ಧತಿಗಳು ರೂಢಿಯಲ್ಲಿದ್ದುವೆಂದು ಮನುವೇ ಹೇಳುತ್ತಾನೆ. ಆದರೆ ಅವನೇ ಮುಂದುವರೆದು ’ನಿಯೋಗ’ವು ಸಾಧು ಸಮ್ಮತವಲ್ಲ. ವಿಧವಾ ವಿವಾಹವು ಬುದ್ಧಿ ವಂತರಿಗೆ ಸಮ್ಮತವಲ್ಲ ಎನ್ನುತ್ತಾನೆ. ಇದು ಅವನ ಕಾಲಕ್ಕಾಗಲೇ ಸ್ತ್ರೀಯ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಯತ್ನನಡೆದಿತ್ತು, ಅದಕ್ಕೆ ಮನುವಿನ ಸಮ್ಮತಿಯೂ ಇತ್ತು ಎಂಬುದನ್ನು ಸ್ಪಷ್ಟಪಡಿಸುತ್ತದೆ. ವೇನರಾಜನನ್ನು’ ರಾಜರ್ಷಿ ಪ್ರವರ’ನೆಂದೂ, ಅವನು ವರ್ಣ ಸಂಕರಕ್ಕೆ ಕಾರಣನಾದನೆಂದೂ ಒಂದೇ ಉಸಿರಿನಲ್ಲಿ ಮನುವು ಉಚ್ಛರಿಸುವುದನ್ನು ನೋಡಿದರೆ ಯಾವ ದಿಕ್ಕಿನಲ್ಲಿ ಸಾಮಾಜಿಕ ಮೌಲ್ಯಗಳು ಬದಲಾಗುತ್ತಿದ್ದುವೆಂಬುದು ಸ್ಪಷ್ಟವಾಗುತ್ತದೆ. ವಿಧವಾ ವಿವಾಹವು ಬುದ್ಧಿವಂತರಿಗೆ ಸಮ್ಮತವಲ್ಲ ಎಂದು ಮಾತ್ರ ಹೇಳುವುದನ್ನು ಗಮನಿಸಿದಾಗ ಮನುವಿನ ಕಾಲದಲ್ಲೂ ಅಂತಹ ಪದ್ಧತಿ ಜನ ಸಾಮಾನ್ಯರಲ್ಲಿ ರೂಢಿಯಲ್ಲಿದ್ದು, ಅದೊಂದು ಪಾಪಕೃತ್ಯವೆಂದು ಪರಿಗಣಿತ ವಾಗಿರಲಿಲ್ಲವೆಂದು ವೇದ್ಯವಾಗುತ್ತದೆ.

ಗಂಡ ಸತ್ತಮೇಲೆ ಹೆಂಡತಿಯು ಸಹಗಮನ ಅಥವಾ ಸತಿ ಹೋಗುವುದು ಬಹು ಪ್ರಾಚೀನ ಕಾಲದಿಂದ ರೂಢಿಯಲ್ಲಿದ್ದ ಪದ್ಧತಿಯೇನಲ್ಲ. ಮನುಸ್ಮೃತಿಯಲ್ಲಾಗಲಿ, ರಾಮಾಯಣ, ಮಹಾಭಾರತಗಳಲ್ಲಾಗಲಿ ಅಂತಹ ಆಚರಣೆಯ ವರ್ಣನೆ ಇಲ್ಲ. ಮಧ್ಯಯುಗದಲ್ಲಿ ರಾಜ ಸತ್ತಾಗ ಮಡದಿಯರು ಸಹಗಮನ ಆಚರಿಸಲು ತೊಡಗಿದರು. ಶತ್ರುಗಳ ಕೈಯಲ್ಲಿ ಸಿಕ್ಕು ಅವಮಾನ ಗೊಳ್ಳುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿಯೂ ಸ್ತ್ರೀಯರು ಸಹಗಮನ ಆಚರಿಸುತ್ತಿದ್ದರು. ಆದರೆ ’ಸತಿ’ ಒಂದು ಕಡ್ಡಾಯವಾದ ದಾರ್ಮಿಕ ವಿಧಿಯಾಗಲು ಸ್ತ್ರೀಯ ಮೇಲೆ ಪುರುಷನ ಕ್ರೌರ್‍ಯವೂ ಕಾರಣ.

ವೇದಗಳಲ್ಲಿ, ರಾಮಾಯಣ ಮಹಾಭಾರತಗಳಲ್ಲಿ ಹೆಂಡತಿ ಒಮ್ಮೊಮ್ಮೆ ಗಂಡನೊಡನೆ ಜೀವ ತ್ಯಾಗಮಾಡಿದ ಪ್ರಸಂಗ ಉಂಟು. ಆದರೆ ಅದು ಸತಿಯರ ನಿಯಮವಾಗಿರುವುದಕ್ಕಿಂತಲೂ ಅಪವಾದವಾಗಿರುವುದೇ ಹೆಚ್ಚು. ಋಗ್ವೇದದಲ್ಲಿ ದೊರೆಯುವುದೆಂದು ಹೇಳಲಾದ ’ಸತಿ’ ಪರವಾದ ಆಧಾರವು ಭ್ರಷ್ಟ ಪಂಡಿತರ ಹಸ್ತಕ್ಷೇಪವೆಂದು ಈಗ ದೃಢಪಟ್ಟಿದೆ. ದಶರಥನು ಮಡಿದಾಗ ಅವನ ಮೂವರು ಮಡದಿಯರಲ್ಲಿ ಯಾರೊಬ್ಬರೂ ಸಹಗಮನ ಮಾಡಲಿಲ್ಲ. ಪಾಂಡವು ಮಡಿದಾಗ ಕುಂತಿಯು ಸಹಗಮನ ಮಾಡಲಿಲ್ಲ. ಆದರೆ ಮಾದ್ರಿಯು ಮಾಡಿದಳು. ಪಾಂಡುವನ್ನು ವ್ರತಭ್ರಷ್ಟನನ್ನಾಗಿ ಮಾಡಿ ದುರ್ಮರಣಕ್ಕೆ ತಳ್ಳಿದ ಪಾಪದ ಪ್ರಾಯಶ್ಚಿತ್ತಕ್ಕೆ ಮಾದ್ರಿಯು ಸಹಗಮನ ಮಾಡುತ್ತಾಳೆ. ಸುಮಾರು ಎಂಟನೆಯ ಶತಮಾನದ ವರೆಗಿನ ಕೃತಿಗಳಲ್ಲಿ ’ಸತಿ’ ಧಾರ್ಮಿಕ ವಿಧಿಯಾಗಿರದೆ ವೈಯಕ್ತಿಕ ಕ್ರಿಯೆಯಾಗಿದೆ. ಅಲ್ಲಿಂದೀಚೆಗೆ ’ಸತಿ’ ಪ್ರತಿಪಾದಕರು ಕಾಣಸಿಗುತ್ತಾರೆ. ಸತಿ ಹೋಗುವುದೊಂದೇ ವಿಧವೆಗೆಯಿರುವ ಧಾರ್ಮಿಕ ವಿಧಿ ಎಂದು ಅಂಗೀರಸ ಹೇಳಿದರೆ ಗಂಡನೊಡನೆ ಅಗ್ನಿಪ್ರವೇಶ ಮಾಡುವ ಸ್ತ್ರೀಯು ತನ್ನ ಗಂಡನ ಪಾಪಗಳನ್ನೆಲ್ಲಾ ನಿವಾರಿಸಿ, ಅವನೊಡನೆ ಸ್ವರ್ಗದಲ್ಲಿ ಮೂರೂವರೆ ಕೋಟಿ ವರ್ಷಕಾಲ ಸುಖದಿಂದ ಬಾಳುತ್ತಾಳೆ ಎಂದು ಹಾರೀತನು ಸಾರಿದ್ದಾನೆ. ಸ್ತ್ರೀಯು ಸಚ್ಚಾರಿತ್ರಳಲ್ಲದಿದ್ದರೂ ಸ್ವಇಚ್ಛೆಯಿಂದಾಗಲಿ ಬಲವಂತದಿಂದಾಗಲಿ ಪತಿಯೊಡನೆ ಸುಡಲ್ಪಟ್ಟರೆ ಅಂಥಾ ಸ್ತ್ರೀಯು ಪತಿಯೊಡನೆ ಶಾಶ್ವತವಾಗಿ ಸ್ವರ್ಗಸುಖ ಅನುಭವಿಸುತ್ತಾಳೆ ಎಂದು ಪರಾಶರ ಸ್ಮೃತಿಯಲ್ಲಿ ಸೇರಿರುವ ಒಂದು ಪ್ರಕ್ಷಿಪ್ತ ಶ್ಲೋಕ ಘೋಷಿಸುತ್ತದೆ.

೧೮೧೧ರಲ್ಲಿ ರಾಜಾರಾಮ ಮೋಹನರಾಯ್‌ನ ಅಣ್ಣ ಜಗನ್ಮೋಹನ ರಾಯ್ ಮಡಿದಾಗ ಅವನ ಮಡದಿಯನ್ನು ಅವಳ ಇಚ್ಛೆಗೆ ವಿರುದ್ಧವಾಗಿ ಗಂಡನ ಹೆಣದೊಡನೆ ಸುಡಲಾಯಿತು. ಅವಳು ಚೀರುತ್ತಾ ಸಾವಿನ ದವಡೆಯಿಂದ ತಪ್ಪಿಸಿಕೊಳ್ಳಲು ಚಿತೆಯಿಂದ ಹಾರಲು ಯತ್ನಿಸಿದಾಗ ಅವಳ ಚೀರಾಟ ಕೇಳದಂತೆ ಶಂಖ, ಜಾಗಟೆಗಳನ್ನು ಮೊಳಗಿಸಿ ಬೊಂಬುಗಳಿಂದ ಅವಳನ್ನು ಅದುಮಿ ಹಿಡಿಯಾಲಾಯಿತು. ಮುಂದೆ ರಾಜಾರಾಮ ಮೋಹನರಾಯ್ ’ಸತಿ’ಯ ವಿರುದ್ಧ ಹೋರಾಡಲು ಕುಟುಂಬದಲ್ಲಿ ನಡೆದ ಈ ಘಟನೆ ಅವನ ಮೇಲೆ ತೀವ್ರ ಪರಿಣಾಮ ಬೀರಿರಬೇಕು. ರಾಯ್‌ನಂತಹ ಎಚ್ಚೆತ್ತ ಭಾರತೀಯರ ದೀರ್ಘ ಚಳವಳಿಯ ಫಲವಾಗಿ ಲಾರ್ಡ್ ವಿಲಿಯಂ ಬೆಂಟಿಂಕನು ೧೮೨೯ರಲ್ಲಿ ’ಸತಿ’ ಪದ್ಧತಿಯನ್ನು ಕಾನೂನುಬಾಹಿರವೆಂದು ಸಾರಿದನು. ಈಶ್ವರಚಂದ್ರ ವಿದ್ಯಾಸಾಗರ್ ಹಿಂದೂ ವಿಧವೆಯರ ಪುನರ್ವಿವಾಹದ ಪರವಾಗಿ ಈ ಚಳಿವಳಿಯನ್ನು ಮುಂದುವರಿಸಿದುದರ ಪರಿಣಾಮವಾಗಿ ೧೮೫೬ರಲ್ಲಿ ವಿಧವೆಯರ ವಿವಾಹವು ಶಾಸನ ಬದ್ಧವಾಯಿತು.

ವಿಧವೆಯರು ಇಂಥವೇ ವೇಷಭೂಷಣಗಳನ್ನು ಧರಿಸಬೇಕೆಂದು ಪ್ರಾಚೀನ ಕೃತಿಗಳಲ್ಲಿ ಎಲ್ಲಿಯೂ ಹೇಳಿಲ್ಲ. ಆದರೂ ಇಂದು ಹಿಂದೂ ವಿಧವೆಯರು ಬಳೆ, ಕುಂಕುಮ, ಹೂವು ಮುಂತಾದ ಸ್ತ್ರೀ ಸಹಜ ಶೃಂಗಾರ ಸಾಧನಗಳನ್ನು ವರ್ಜಿಸಬೇಕಾದುದು ಒಂದು ಆಚಾರವಾಗಿದೆ. ಕೆಲವು ವರ್ಗದ ವಿಧವೆಯರು ತಲೆಯನ್ನು ಆಗಾಗ ಬೋಳಿಸಿಕೊಂಡು, ಕುಪ್ಪಸ ತ್ಯಜಿಸಿ ಏಕವರ್ಣದ ಸೀರೆಯನ್ನು ಮಾತ್ರ ಧರಿಸಬೇಕಾಗಿದೆ. ಕ್ರಿ.ಶ. ೧೭ನೆಯ ಶತಮಾನದವರೆಗೆ ವಿಧವೆಯರು ತಲೆಬೋಳಿಸಿಕೊಳ್ಳುವ ಬಗ್ಗೆ ಯಾವ ಶಾಸ್ತ್ರಾದ ಆಧಾರವೂ ದೊರೆಯುವುದಿಲ್ಲ. ೧೮೮೯ರಲ್ಲಿ ಧಾರವಾಡದ ವೆಂಕಟರಂಗೋ ಕಟ್ಟಿಯವರು ’ವಿಧವೆಯರ ಮುಂಡನ ಅನಾಚಾರ’ ಎಂಬ ಕಿರುಹೊತ್ತಿಗೆಯನ್ನು ಪ್ರಕಟಿಸಿ ಅದರ ಕೊನೆಯಲ್ಲಿ ವಿಧವೆಯರು ತಲೆ ಬೋಳಿಸಿಕೊಳ್ಳುವ ಸಂಪ್ರದಾಯ ಕ್ರಿ.ಶ. ೧೫೩೦ರ ತರುವಾಯ ರೂಢಿಗೆ ಬಂದ ಅನಾಚಾರವೆಂದೂ ಅದಕ್ಕಿಂತ ಹಿಂದಿನ ಶಾಸ್ತ್ರಗ್ರಂಥಗಳಲ್ಲಿ ಮುಂಡ ಮೋಚುವುದಕ್ಕೆ ಪೋಷಕವಾಗಿ ಆಧಾರಗಳನ್ನು ತೋರಿಸಿಕೊಟ್ಟವರಿಗೆ ಒಂದು ಸಾವಿರ ರೂಪಾಯಿ ಇನಾಮು ಕೊಡುವುದಾಗಿ ಸಂಕುಚಿತ ಬುದ್ಧಿಯ ಪಂಡಿತರಿಗೆ ಸವಾಲು ಹಾಕಿದರು.

ಪರಾಶರ ಮತ್ತು ವೃದ್ಧಹಾರೀತ ಸ್ಮೃತಿಗಳಲ್ಲಿ ಗೋವಧೆಯನ್ನು ಮಾಡಿದ ಪಾಪಕ್ಕೆ ಪ್ರಾಯಶ್ಚಿತ್ತವಾಗಿ ಕೇಶಮುಂಡನೆ ವಿಧಿಸಲಾಗಿದೆ. ಆದರೆ ಅದು ಪುರುಷರಿಗೆ ಮಾತ್ರ. ಅದೇ ಅಪರಾಧವನ್ನು ಸ್ತ್ರೀಯು ಮಾಡಿದರೆ ಅವಳಿಗೆ ಅಷ್ಟು ಶಿಕ್ಷೆಯಿಲ್ಲ. ಅವಳ ಕೂದಲಿನ ತುದಿಯ ಎರಡು ಅಂಗುಲ ಗಳಷ್ಟನ್ನು ಮಾತ್ರ ಕತ್ತರಿಸಿ ಹಾಕಬೇಕು ಆಪಸ್ತಂಬದಲ್ಲಿ ಮೂರು ಅಂಗುಲ ಎಂದು ಹೇಳಲಾಗಿವೆ. ಆದರೆ ಇದಕ್ಕೂ ವಿಧವೆಯರ ತಲೆ ಬೋಳಿಸುವ ಶಾಸ್ತ್ರಕ್ಕೂ ಸಂಬಂಧವಿಲ್ಲ.

ವಿಧವೆಯರು ಬ್ರಹ್ಮಚರ್‍ಯವನ್ನು ಪಾಲಿಸಬೇಕೆಂಬ ಮನುಸ್ಮೃತಿಯ ವಾಕ್ಯದ ಉಗ್ರ ಪ್ರತಿಪಾದನೆಯೇ ಇದಕ್ಕೆ ಕಾರಣವಿರಬೇಕು. ಅರ್ವಾಚೀನ ಸ್ಮೃತಿಕಾರರ ಕೈಯಲ್ಲಿ ಈ ಘೋರ ಹಂತವನ್ನು ಮುಟ್ಟಿರಬೇಕು. ಜೈನ ಮತ್ತು ಬೌದ್ಧ ಭಿಕ್ಷುಕಿಯರೆ ಬೋಳು ತಲೆಯ ವೇಷವನ್ನು ಹಿಂದೂ ವಿಧವೆಯರಿಗೂ ವಿಧಿಸಲಾಯಿತೇನೋ!