You are hereಎಲ್ಲ ಬಣ್ಣವನ್ನು ನುಂಗುವ ಮಸಿ
ಎಲ್ಲ ಬಣ್ಣವನ್ನು ನುಂಗುವ ಮಸಿ
ಲೇಖಕರು: ಬಿ.ವಿ. ವೀರಭದ್ರಪ್ಪ
ಬಿಹಕ್ಕುಗಳು: ಲೇಖಕರವು
ಕಳೆದ ಅಕ್ಟೋಬರ್‌ನಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಎಂ.ಜಿ.ಆರ್. ಸಕ್ಕರೆ ಕಾಯಿಲೆ, ಮೂತ್ರಪಿಂಡಗಳ ನಾಶ ಮತ್ತು ಎಡಭಾಗದ ಮೆದುಳಿಗೆ ಹೊಡೆದ ಲಕ್ವದಿಂದ ಬಲಭಾಗದ ಕೈಕಾಲು ಬಿದ್ದುಹೋಗಿ ಜೀವಂತ ಹೆಣ ಎನ್ನುವ ಸ್ಥಿತಿಯಲ್ಲಿದ್ದರು. ಆ ವಿಷಮ ಗಳಿಗೆಯಲ್ಲಿ ಭಾರತದ ಮತ್ತು ಅಮೆರಿಕೆಯ ಅತ್ಯುತ್ತಮ ವೈದ್ಯಕೀಯ ಸೇವೆ ಅವರಿಗೆ ದೊರಕಿದುದರಿಂದ ಅವರು ಉಳಿದರು. ಎಂ.ಜಿ.ಅರ್. ಅಭಿಮಾನಿಗಳು ಇಂತಹ ಅಸಾಧಾರಣ ಕೃತ್ಯಕ್ಕಾಗಿ ಆಧುನಿಕ ವೈದ್ಯ ವಿಜ್ಞಾನಕ್ಕೆ ಮತ್ತು ಚಿಕಿತ್ಸೆ ನೀಡಿದ ವೈದ್ಯರಿಗೆ ಅದರಲ್ಲೂ ಡಾ|| ಖಲೀದ್ ಬಟ್‌ರಿಗೆ ಹಾಗೂ ಮೂತ್ರಪಿಂಡ ದಾನಮಾಡಿದ ಎಂ.ಜಿ.ಅರ್. ಪುತ್ರಿ ಸಂಬಂಧಿ ಲೀಲಾವತಿಗೆ ಕೃತಜ್ಞತೆಗಳನ್ನು ಸಲ್ಲಿಸಬೇಕಾದ್ದು ಸಹಜವಾಗಿತ್ತು.
ಆದರೆ ನಡೆದದ್ದೇನು? ಎಂ.ಜಿ.ಅರ್. ಸಾವುಬದುಕಿನ ನಡುವೆ ಹೋರಾಡುತ್ತಿದ್ದ ಗಂಡಾಂತರ ಸ್ಥಿತಿಯಲ್ಲಿ ಕಂಚಿ ಕಾಮಕೋಟಿ ಶಂಕರಾಚಾರ್ಯರು ಜನಪ್ರಿಯ ನಾಯಕನ ಆರೋಗ್ಯಕ್ಕಾಗಿ ನಾಡಿನ ಎಲ್ಲ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲು ಅಭಿಮಾನಿಗಳಿಗೆ ಕರೆ ನೀಡಿದರು. ಜನರು ಅದನ್ನು ಪಾಲಿಸಿದರು. ಕಾರ್ಮಿಕ ಮಂತ್ರಿ ರಾಘವಾನಂದಮ್ ಸಹ ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತರು. ಈತ ತನ್ನ ೬೯ ವರ್ಷದ ಜೀವಿತ ಅವಧಿಯಲ್ಲಿ ಎಂದೂ ಯಾವ ದೇವಾಲಯಕ್ಕೂ ಹೋಗಿರಲಿಲ್ಲ ಮತ್ತು ಯಾವ ದೇವರಿಗೂ ಕೈಮುಗಿದಿರಲಿಲ್ಲ. ಈಗ ಈತ ತಿಮ್ಮಪ್ಪನ ಭಕ್ತ; ಸಾವಿನ ಹಾಸಿಗೆಯಲ್ಲಿದ್ದ ನಾಯಕನಿಗೆ ಚೈತನ್ಯವನ್ನು ನೀಡಿದ ಬ್ರೂಕ್‌ಲಿನ್ ವೈದ್ಯ ಡಾ|| ಖಲೀದ್ ಮತ್ತು ಅವರ ಸಂಗಡಿಗರು ಕ್ರಮೇಣ ಅಭಿಮಾನಿಗಳ ನೆನಪಿನ ಕೋಶದಿಂದ ಮರೆಯಾಗುತ್ತಾರೆ. ಆ ಸ್ಥಾನದಲ್ಲಿ ಕಂಚಿ ಕಾಮಕೋಟಿಯ ಶಂಕರಾಚಾರ್‍ಯರು, ತಿರುಪತಿ ತಿಮ್ಮಪ್ಪ ಅಯ್ಯಪ್ಪಸಾಮಿ ಮುಂತಾದ ದೇವಾನುದೇವತೆಗಳು ಪ್ರತಿಷ್ಠಾಪಿತರಾಗುತ್ತಾರೆ.
ಇದೆಂತಹ ವಿಪರ್ಯಾಸ, ದೇವರನ್ನು ಸೃಷ್ಟಿಸಿದವರು ಅನಾಗರಿಕರು, ಅವರನ್ನು ಪೂಜಿಸುವವರು ಮೂರ್ಖರು. ದೈವನಂಬಿಕೆಯನ್ನು ಪ್ರಚಾರ ಮಾಡುವವರು ಡಾಂಬಿಕರು ಮತ್ತು ವಂಚಕರು’ ಎಂದು ತನ್ನ ಜೀವನವಿಡೀ ಸಾರಿದ ಪೆರಿಯಾರ್‌ನ ಅನುಯಾಯಿ ಎಂ.ಜಿ.ಅರ್.ನ ಅಭಿಮಾನಿಗಳು ಮುಟ್ಟಿದ ಸ್ಥಿತಿಯನ್ನು ನೆನಸಿಕೊಂಡರೆ ವೈಚಾರಿಕತೆ ಎಂದಾದರೂ ಈ ನಾಡಿನಲ್ಲಿ ಬೇರು ಬಿಟ್ಟೀತೆ ಎಂಬ ಸಂದೇಹ ಮೂಡುತ್ತದೆ.
ನಾಳೆ ಎಂ.ಜಿ.ಅರ್. ಉಳಿವಿಗೆ ಕಾರಣ ತಿರುಪತಿ ತಿಮ್ಮಪ್ಪನಲ್ಲ ಬ್ರೂಕ್ ಲಿನ್‌ನ ಡಾ|| ಖಲೀದ್ ಬಟ್ ಎಂದು ವಿಚಾರವಾದಿಗಳು ಒಂದು ಚಳುವಳಿ ಹೂಡುತ್ತಾರೆ ಎಂದು ಭಾವಿಸೋಣ. ಹೌದು, ಖಲೀದ್ ಎಂ.ಜಿ.ಅರ್.ರನ್ನು ಉಳಿಸಲೆಂದೇ ಅವತರಿಸಿದ ಅವತಾರ ಪುರುಷ ಎಂದು ಮತ್ತೊಬ್ಬ ಆಚಾರ್ಯರು ಹೇಳಿಬಿಡುತ್ತಾರೆ. ಆಗ ಖಲೀದೇಶ್ವರನು ಪ್ರತಿಷ್ಠಾಪನೆ ಗೊಂಡು ಎಂ.ಜಿ.ಅರ್. ಅಭಿಮಾನಿಗಳ ಆರಾಧ್ಯದೈವವಾಗಿಬಿಡಬಹುದು!
ಕೇವಲ ತಮಾಷೆಗೆ ನಾನು ಇದನ್ನು ಹೇಳುತ್ತಿಲ್ಲ. ಅತ್ಯಂತ ಮಾನವತಾ ವಾದಿಯಾದ ಬುದ್ಧನು ಬೋಧಿಸಿದ ಜೀವನ ವಿವೇಕದ ಗತಿ ಏನಾಯಿತು? ಅದು ಕಾಲಕ್ರಮದಲ್ಲಿ ಮಹಾಯಾನವಾಗಿ, ಭಾವನಾವಾದವಾಗಿ ಕೊನೆಗೆ ಬುದ್ಧನು ವಿಷ್ಣುವಿನ ಹನ್ನೊಂದನೆಯ ಅವತಾರವಾಗಿ ಹಿಂದು ದೇವರುಗಳ ರಾಶಿಯಲ್ಲಿ ಒಬ್ಬನಾಗಿಬಿಟ್ಟ. ಅಸಲಿ ಬೌದ್ಧಧರ್ಮ ಭಾರತದಿಂದ ಗಡೀಪಾರಾಗಿ ನಕಲಿ ಅವತಾರ ಮಾತ್ರ ಇಲ್ಲಿ ಉಳಿಯಿತು.
ಕಾರ್‍ಯಕಾರಣ ಸಂಬಂಧವನ್ನು ವಸ್ತುನಿಷ್ಠವಾಗಿ ನಿರ್ಧರಿಸುವ ವಿಧಾನವನ್ನು ನಾವು ಅಪಾಯಕಾರಿ ಎಂದು ಭಾವಿಸುತ್ತೇವೆ. ಅದಕ್ಕಾಗಿಯೇ ನಾವು ನಮ್ಮ ಮಕ್ಕಳಿಗೆ ಗುರುಹಿರಿಯರಲ್ಲಿ ಭಯಭಕ್ತಿಯಿಂದ ನಡೆದುಕೊಳ್ಳಲು ಬೋಧಿಸುತ್ತೇವೆಯೇ ಹೊರತು, ಒಂದು ವಸ್ತು ಅಥವಾ ಘಟನೆಯನ್ನು ಕುರಿತು ಏನು, ಏಕೆ, ಹೇಗೆ ಎಂದು ಪ್ರಶ್ನಿಸಲು ಕಲಿಸುವುದಿಲ್ಲ. ಮಕ್ಕಳ ಜ್ಞಾನಕೋಶ ಬೆಳೆಯುವುದು ಹಿರಿಯರ ಬೋಧನೆಯಿಂದಲ್ಲ; ತಮ್ಮ ಸುತ್ತಲ ಪ್ರಪಂಚವನ್ನು ಕಂಡು ಪಡುವ ಸಹಜ ವಿಸ್ಮಯದಿಂದ. ಈ ವಿಸ್ಮಯವೇ ಪ್ರಶ್ನೆಯ ರೂಪವನ್ನು ತಾಳಿ ಉತ್ತರಕ್ಕಾಗಿ ತವಕಿಸುತ್ತದೆ. ಗುರುಹಿರಿಯರು ಆ ಮಗುವಿನ ಮುಗ್ಧ ಕುತೂಹಲವನ್ನು ತಣಿಸಿದರೆ ಸಾಕು ಮಗು ತನಗೆ ತಾನೆ ಜ್ಞಾನವನ್ನು ಸಂಪಾದಿಸುತ್ತದೆ.
ನಮ್ಮ ಪರಂಪರೆಯಲ್ಲಿ ಕಿರಿಯರು ಹಿರಿಯರನ್ನು ಪ್ರಶ್ನಿಸುವುದು ಅಧಿಕ ಪ್ರಸಂಗವಾಗಿ, ಅಶಿಸ್ತಾಗಿ ಕಾಣಿಸುತ್ತದೆ. ಇದರಿಂದ ಇತ್ತ ಕಿರಿಯರ ಕುತೂಹಲವೂ ತಣಿಯುವುದಿಲ್ಲ. ಅತ್ತ ಗುರುವಿನ ಹೊಣೆಗಾರಿಕೆಯೂ ಹೆಚ್ಚುವುದಿಲ್ಲ. ತಾನು ಲಾಗಾಯ್ತಿನಿಂದ ನಂಬಿಕೊಂಡು ಬಂದ ಮೌಢ್ಯವನ್ನೇ ಜ್ಞಾನವೆಂದೂ, ತಾನೊಬ್ಬ ಸರ್ವಜ್ಞನೆಂದೂ ಆತ ಭಾವಿಸುತ್ತಾನೆ. ಜ್ಞಾನದ ತಳಹದಿಯಾದ ಪ್ರಶ್ನೆ, ಸಂಶಯ ಅಪನಂಬಿಕೆಗಳ ಅಭಿವ್ಯಕ್ತಿಗೇ ಅವಕಾಶವಿಲ್ಲದೆ ಹೋದರೆ ತರ್ಕ, ಸಂವಾದ, ಅನ್ವೇಷಣೆಗಳಿಗೆ ಸ್ಥಾನವೆಲ್ಲಿ?
೧೯೭೭ರಲ್ಲಿ ವೆಂಕಟೇಶ್ವರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿಚಾರವಾದಿ ಡಾ|| ಕೋವೂರ್ ಅವರನ್ನು ಒಂದು ಉಪನ್ಯಾಸಕ್ಕೆ ಆಹ್ವಾನಿಸಿ, ದಿನಾಂಕವನ್ನು ಗೊತ್ತುಪಡಿಸಿಕೊಂಡು ವಿಶ್ವವಿದ್ಯಾನಿಲಯದ ಸಭಾಂಗಣಕ್ಕಾಗಿ ರಿಜಿಸ್ಟ್ರಾರ್‌ನ್ನು ಕೇಳಿ ಕೊಂಡರು. "ಅವರು ಅಕೆಡಮಿಕ್ ಅಲ್ಲದ ವಿಷಯ ಮಾತಾಡಲು ಸಭಾಂಗಣ ಕೊಡುವುದಿಲ್ಲ" ಎಂದರು. ವಿದ್ಯಾರ್ಥಿಗಳು ಕೋವೂರ್ ಉಪನ್ಯಾಸದ ವಿಷಯ ’ವಿಜ್ಞಾನ ಮತ್ತು ವೈಜ್ಞಾನಿಕ ದೃಷ್ಟಿ’ ಎಂದು ಎಷ್ಟು ಮನವಿ ಮಾಡಿಕೊಂಡರೂ ರಿಜಿಸ್ಟ್ರಾರ್ ತಮ್ಮ ನಿರ್ಧಾರ ಬದಲಿಸಲಿಲ್ಲ; ಕೊನೆಗೆ ಆ ಕಾರ್‍ಯಕ್ರಮ ರದ್ದಾಗ ಬೇಕಾಯಿತು. ಆಗ ಶೂನ್ಯದಿಂದ ವಸ್ತುಗಳನ್ನು ಸೃಷ್ಟಿಸುವ ಸಾಯಿಬಾಬ ಪವಾಡಗಳಿಗೆ ಕೋವೂರ್ ಬಲವಾದ ಸವಾಲು ಒಡ್ಡಿದ್ದರು. ಬಹುಶಃ ಇಂತಹ ಉಪನ್ಯಾಸಗಳನ್ನು ಕೇಳಿ ವಿದ್ಯಾರ್ಥಿಗಳು ಕೆಟ್ಟುಹೋಗಬಹುದೆಂದು ವಿಶ್ವವಿದ್ಯಾನಿಲಯದ ಅಧಿಕಾರಿಗಳು ಭಾವಿಸಿದ್ದಿರಬೇಕು. ಅದರೆ ಒಂದು ವಾರದ ಹಿಂದೆ ಅದೇ ಸಭಾಂಗಣವನ್ನು ಜಯಮಾಲಿನಿಯ ಅರೆನಗ್ನ ನೃತ್ಯ ಪ್ರದರ್ಶನಕ್ಕೆ ನೀಡಲಾಗಿತ್ತು! ತಿರುಪತಿ ತಿಮ್ಮಪ್ಪನ ದೈತ್ಯಶಕ್ತಿಯ ಮುಂದೆ ಕೋವೂರರ ವಿಚಾರವಾದ ತಲೆ ಎತ್ತಲು ಸಾಧ್ಯವೆ?
ಪ್ರಾಚೀನ ಭಾರತದಲ್ಲಿ ವಿಜ್ಞಾನ ಅದ್ಭುತ ಯಶಸ್ಸನ್ನು ಗಳಿಸಿತ್ತು ಎಂದು ಹೇಳಲಾಗುತ್ತಿದೆ. ಆದರೆ ಅಂದಿನ ವಿಜ್ಞಾನಿಗಳು ಸ್ವಾರ್ಥಸಾಧನೆಗಾಗಿ ತಾವು ಗಳಿಸಿದ ಜ್ಞಾನವನ್ನು ಕೆಲವರಿಗೇ ಮೀಸಲಾಗಿಟ್ಟರು. ಅದನ್ನು ಪ್ರಸಾರ ಮಾಡಿ ಜನಸಾಮಾನ್ಯರಲ್ಲಿ ವೈಜ್ಞಾನಿಕ ದೃಷ್ಟಿಯನ್ನು ಬೆಳೆಸಲಿಲ್ಲ. ಇದರ ಪರಿಣಾಮವಾಗಿ ವೈಜ್ಞಾನಿಕ ಬೆಳವಣಿಗೆ ನಮ್ಮಲ್ಲಿ ಮುಂದುವರಿಯಲಿಲ್ಲ.
ಪಾಶ್ಚಾತ್ಯ ದೇಶಗಳಲ್ಲಿ ವಿಜ್ಞಾನ ಉಗಮವಾದುದು ೧೭ನೇ ಶತಮಾನದಿಂದೀಚೆಗೆ. ಹೆಜ್ಜೆಹೆಜ್ಜೆಗೂ ಅದು ಕಂದಾಚಾರದ ಚರ್ಚನ್ನು ವಿರೋಧಿಸಿ ತನ್ನ ಪ್ರಗತಿಯನ್ನು ಸಾಧಿಸಬೇಕಾಗಿತ್ತು. ಸಹಜವಾಗಿ ವಿಜ್ಞಾನಿಗಳಿಗೆ ಜನಸಾಮಾನ್ಯರ ಬೆಂಬಲ ಬೇಕಾಯಿತು. ಅವರು ಜನರಿಗೆ ಉಪಯೋಗವಾಗುವ ಸಂಶೋಧನೆಗಳಲ್ಲಿ ತೊಡಗಿದರು. ಅಲ್ಲದೆ ಜನರಲ್ಲಿ ವೈಜ್ಞಾನಿಕ ದೃಷ್ಟಿಯನ್ನು ಬೆಳೆಸಿದರು. ವಿಜ್ಞಾನದ ಬೆಳವಣಿಗೆಗೆ ಜನಸಾಮಾನ್ಯರ ಬೆಂಬಲ ಹೆಚ್ಚಾದಂತೆಲ್ಲಾ ಚರ್ಚಿನ ವಿರೋಧ ಕಡಿಮೆಯಾಯಿತು. ವೈಚಾರಿಕತೆ ಪಾಶ್ಚಾತ್ಯರ ಜೀವನ ವಿಧಾನವಾಯಿತು.
ಭಾರತೀಯರಿಗೆ ಅಧುನಿಕ ವಿಜ್ಞಾನದ ಪರಿಚಯವಾದುದು ಕಳೆದ ನೂರು ವರ್ಷಗಳಿಂದೀಚೆಗೆ. ಸ್ವಾತಂತ್ರ್ಯಾನಂತರ ವೈಜ್ಞಾನಿಕ ಬೆಳವಣಿಗೆಗೆ ನಾವು ವಿಶೇಷ ಗಮನ ಕೊಡುತ್ತಿದ್ದೇವೆ. ಅತಿ ಹೆಚ್ಚು ವಿಜ್ಞಾನಿಗಳನ್ನು ಹೊಂದಿರುವ ದೇಶಗಳಲ್ಲಿ ಇಂದು ಭಾರತ ನಾಲ್ಕನೇ ಸ್ಥಾನ ಪಡೆದಿದೆ. ಅದು ಹೆಮ್ಮೆಯ ವಿಷಯವಾದರೂ ವಿಜ್ಞಾನಿಗಳ ಸಂಖ್ಯೆಯೊಡನೆ ಗುಣವನ್ನು ಹೋಲಿಸಿದಾಗ ನಾವು ನಿರಾಶರಾಗಬೇಕಾಗಿದೆ. ಏಕೆಂದರೆ ನಮ್ಮ ವಿಜ್ಞಾನಿಗಳು ಪ್ರವೃತ್ತಿಯಿಂದ ವೃತ್ತಿಯನ್ನಾರಿಸಿ ಕೊಂಡವರಲ್ಲ; ಸಂಪಾದನೆಯ ಸುಲಭ ಮಾರ್ಗ ಎಂದು ಅವರು ವಿಜ್ಞಾನವನ್ನಾರಿಸಿಕೊಂಡವರು. ಪ್ರವೃತ್ತಿಯಿಂದ ಅವರಲ್ಲಿ ಅನೇಕರು ಕಂದಾಚಾರಿಗಳು, ಅವರು ಇಬ್ಬಗೆಯ ಜೀವನ ನಡೆಸುತ್ತಿದ್ದಾರೆ. ಪ್ರಯೋಗಾಲಯದಲ್ಲಿ ವೈಜ್ಞಾನಿಕ ವಿಧಾನಗಳನ್ನೂ ಅನುಸರಿಸುವ ಅವರು ಹೊರೆಗೆ ಕಂದಾಚಾರದ ಆಚರಣೆಗಳಲ್ಲಿ ತೊಡಗಿರುತ್ತಾರೆ. ತಮ್ಮ ಪ್ರಯೋಗಗಳಿಗೆ ಯಶಸ್ಸು ದೊರೆಯಲಿ ಎಂದು ದೇವರಿಗೆ ಪೂಜೆ, ಹರಕೆಗಳನ್ನು ಸಲ್ಲಿಸುತ್ತಾರೆ. ಜೀವನದ ಸಮಸ್ಯೆಗಳನ್ನು ಕುರಿತು ಸಂಶೋಧನೆ ಮಾಡಲು ಅವರು ಪೂರ್ಣ ಅಸಮರ್ಥರು.
ಪವಾಡಗಳನ್ನು ಮಾಡುವುದಾಗಿ ಜನರನ್ನು ವಂಚಿಸುವ ಧಾರ್ಮಿಕ ವ್ಯಕ್ತಿಗಳಿಗೆ ನಮ್ಮ ದೇಶದಲ್ಲಿ ಕೊರತೆ ಇಲ್ಲ. ಅಂಥವರ ಅನುಯಾಯಿಗಳಾಗಿ ಅವರ ಅತೀಂದ್ರಿಯ ಶಕ್ತಿಯನ್ನು ಸಮರ್ಥಿಸುವ ವಿಜ್ಞಾನಿಗಳೂ ನಮ್ಮಲ್ಲಿ ಇದ್ದಾರೆ. ಯಾರು ಜನರ ಮೂಢ ನಂಬಿಕೆಗಳನ್ನು ನಿವಾರಿಸಿ ಅವರಲ್ಲಿ ವೈಜ್ಞಾನಿಕ ದೃಷ್ಟಿಕೋನವನ್ನು ಬೆಳೆಸಬೇಕೋ ಅಂತಹ ವಿಜ್ಞಾನಿಗಳೇ ಮೌಢ್ಯವನ್ನು ಪ್ರಚಾರ ಮಾಡುತ್ತಿರುವುದು ನಮ್ಮ ದೇಶದ ದೊಡ್ಡ ದುರಂತ. ಸಾಯಿಬಾಬಾರ ಕೈ ಚಳಕಗಳನ್ನು ಪವಾಡಗಳೆಂದು ಪ್ರಚಾರ ಮಾಡಿದ ಡಾ||ಎಸ್. ಭಗವಂತಂ ಮತ್ತು ಜೋತಿಷ್ಯವನ್ನು ವಿಜ್ಞಾನವೆಂದು ಪ್ರತಿಪಾದಿಸುತ್ತಿರುವ ಡಾ|| ಬಿ.ವಿ.ರಾಮನ್ ಅವರನ್ನು ದೃಷ್ಟಾಂತಕ್ಕಾಗಿ ಇಲ್ಲಿ ಸ್ಮರಿಸಬಹುದು.
ಆದರೆ ಇತ್ತೀಚೆಗೆ ಕೆಲವು ವಿಜ್ಞಾನಿಗಳಾದರೂ ಪವಾಡಪುರುಷರ ವಂಚನೆಗಳನ್ನು ಬಹಿರಂಗಗೊಳಿಸಲು ಮತ್ತು ಜನರಲ್ಲಿ ವೈಚಾರಿಕ ದೃಷ್ಟಿಯನ್ನು ಬೆಳೆಸಲು ಮುಂದೆ ಬರುತ್ತಿದ್ದಾರೆ. ಡಾ|| ಎಚ್. ನರಸಿಂಹಯ್ಯನವರ ನೇತೃತ್ವದ ಒಂದು ವಿಜ್ಞಾನಿಗಳ ತಂಡ ಹೊಂಚು ಹಾಕಿ ಸಾಯಿಕೃಷ್ಣನ ಪವಾಡದ ಹಿಂದಿನ ವಂಚನೆಯನ್ನು ಬಯಲು ಮಾಡಿತು. ಗಡಿಯಾರ, ಉಂಗುರ ಮತ್ತು ಬೂದಿಗಳನ್ನು ಸೃಷ್ಟಿಸುತ್ತಿದ್ದ ಸಾಯಿಬಾಬಾ ಕುಂಬಳಕಾಯಿಯನ್ನು ಸೃಷ್ಟಿಸಲಾರದೇ ಹೋದ. ಗುಲಬರ್ಗ ವಿಭಾಗದ ಗ್ರಾಮೀಣ ಜನರನ್ನು ಕಿತ್ತು ತಿನ್ನುತ್ತಿದ್ದ ’ಭಾನಾಮತಿ’ ಎಂಬುದು ಅತೀಂದ್ರಿಯ ಶಕ್ತಿಯ ಫಲವಾಗಿರದೆ ಒಂದು ಬಗೆಯ ಮಾನಸಿಕ ರೋಗ ಎಂದು ’ನಿಮ್ಹಾನ್ಸ್’ನ ವೈದ್ಯರ ತಂಡ ದೃಷ್ಟಾಂತಗಳಿಂದ ತೋರಿಸಿಕೊಟ್ಟಿತು. ಶ್ರೀಲಂಕಾದ ವಿಚಾರವಾದಿ ಡಾ|| ಕೋವೂರ್ ತಮ್ಮ ಜೀವಿತ ಕಾಲದಲ್ಲಿ ಭಾರತವನ್ನು ಮೂರು ಸಾರಿ ಸುತ್ತಿ ವೈಚಾರಿಕತೆ ಹರಡಲು ಶ್ರಮಿಸಿದರು. ನಿಧಾನವಾಗಿಯಾದರೂ ದಿನದಿಂದ ದಿನಕ್ಕೆ ಜನರಲ್ಲಿ ವೈಚಾರಿಕತೆ ಹಬ್ಬುವುದು ಅನಿವಾರ್ಯವಾಗಿದೆ.
- Login or register to post comments
- Email this page