You are hereದೇವರು, ಸಮಾಜ, ಸಾಹಿತ್ಯ -ಒಂದು ಸ್ಥೂಲ ನೋಟ

ದೇವರು, ಸಮಾಜ, ಸಾಹಿತ್ಯ -ಒಂದು ಸ್ಥೂಲ ನೋಟ


ಲೇಖಕರು: ಬಿ.ವಿ. ವೀರಭದ್ರಪ್ಪ
ಬಿಹಕ್ಕುಗಳು: ಲೇಖಕರವು

ಅನಾದಿ ಕಾಲದಿಂದಲೂ ದೇವರು ಕಲೆ, ಸಾಹಿತ್ಯದ ವಸ್ತುವಾಗಿದ್ದಾನೆ. ದೇವರನ್ನು ಕುರಿತ ಕಲ್ಪನೆಗಳು ಕಾಲ ದೇಶ ಸನ್ನಿವೇಶಗಳಿಗೆ ಅನುಗುಣವಾಗಿ ಬದಲಾಗುತ್ತಾ ಬಂದಿವೆ. ನಿಸರ್ಗದ ಮಡಿಲಲ್ಲಿ ಜೀವಿಸಿದ್ದ ಆದಿಮಾನವನಿಗೆ ಪ್ರಕೃತಿಯ ಶಕ್ತಿಗಳಾದ ಗಾಳಿ, ಮಳೆ, ಬೆಂಕಿ ಮುಂತಾದವು ದೇವತೆಗಳಾದುವು. ಈ ದೇವತೆಗಳ ಸ್ಥಾನಮಾನಗಳು ಸಮಾಜದಲ್ಲಾದ ಬದಲಾವಣೆಗಳಿಂದ ಏರುಪೇರೂ ಆಗಿವೆ. ಸೂರ್‍ಯನು ಸೂರ್‍ಯನಾರಾಯಣನಾದ. ಭಯೋತ್ಪಾದಕನಾದ ರುದ್ರ ಅಭಯ ಪ್ರದಾಯಕನಾದ ಶಂಕರನೂ ಆದ.

ಪ್ರಕೃತಿಯ ಶಕ್ತಿಗಳಿಂದ ರಕ್ಷಣೆಯನ್ನು ಪಡೆಯಲು ಭಯಗ್ರಸ್ತ ಮಾನವನು ದೇವರನ್ನು ಮೊರೆಹೊಕ್ಕ, ಕಾಲಕ್ರಮದಲ್ಲಿ ರಕ್ಷಣೆಯ ಜೊತೆಗೆ ಅನುಗ್ರಹಕ್ಕಾಗಿಯೂ ದೇವರನ್ನು ಬೇಡಿದ.

ದೇವರನ್ನು ನಂಬುವ ಆಸ್ತಿಕರಂತೆ ನಾಸ್ತಿಕರೂ ಎಲ್ಲ ಕಾಲದಲ್ಲೂ ಎಲ್ಲ ದೇಶಗಳಲ್ಲೂ ಇದ್ದರು. ಭಾರತದಲ್ಲಿ ನಾಸ್ತಿಕರು ಬಹು ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿದ್ದಾರೆ. ಇವರು ಲೋಕಾತೀತವಾದ ಧರ್ಮ, ಪುನರ್ಜನ್ಮ, ಪಾಪ, ಪುಣ್ಯ, ಕರ್ಮಗಳನ್ನು ನಂಬುವುದಿಲ್ಲ. ಎಲ್ಲಕ್ಕೂ ಭೌತ ಪದಾರ್ಥಗಳೇ ಕಾರಣ; ದೇಹದಿಂದ ಬೇರೆಯಾದ ಅತ್ಮ, ಪುನರ್ಜನ್ಮ, ಕರ್ಮತತ್ತ್ವವಿಲ್ಲ ಎಂಬುದು ಅವರು ವಿಶ್ವಾಸ. ವೇದಗಳು, ಛಾಂದೋಗ್ಯ, ಬೃಹದಾರಣ್ಯಕ (೧೧ ೪.೧೨), ಕಠ (೧೧೬) ಶ್ವೇತಾಶ್ವತರ ಮುಂತಾದ ಉಪನಿಷತ್ತುಗಳಲ್ಲಿ ದೇವರನ್ನು ಅಲ್ಲಗಳೆಯುವ ಭೌತವಾದದ ಉಲ್ಲೇಖಗಳು ಇವೆ. ರಾಮಾಯಣದಲ್ಲಿ (೧೧ ೧೦೮) ಜಾಬಾಲಿ ಎಂಬುವನು ಪರಲೋಕವಿಲ್ಲ, ಶ್ರಾದ್ಧ ಮಾಡುವುದು ವ್ಯರ್ಥ ಎಂದು ಸಾರುತ್ತಾನೆ.

ಮಹಾಭಾರತವು ಈ ಭೌತವಾದಿಗಳನ್ನು ಚಾರ್ವಾಕರೆಂದೂ, ಲೋಕಾಯತರೆಂದೂ ಕರಿದಿದೆ. ವೇದವನ್ನು ಚೆನ್ನಾಗಿ ಅಧ್ಯಯನ ಮಾಡಿದ ಬ್ರಾಹ್ಮಣರೂ ಶರೀರದಿಂದ ಬೇರೆಯಾದ ಆತ್ಮವಾಗಲಿ, ಪರಲೋಕವಾಗಲಿ ಇಲ್ಲವೆಂದು ವಾದಿಸುತ್ತಿದ್ದರೆಂದು ಮಹಾಭಾರತ ತಿಳಿಸುತ್ತದೆ. ಈ ಬ್ರಾಹ್ಮಣರು ಪರ ಪೀಡನೆಯನ್ನು ಟೀಕಿಸುತ್ತಾ, ಅಹಿಂಸೆಯನ್ನು ಪ್ರಶಂಸಿಸುತ್ತಿದ್ದರು. ಅವರಲ್ಲಿ ಕೆಲವರು ಕಠೋರವಾದ ಸನ್ಯಾಸವನ್ನು ಪಾಲಿಸುವವರಾಗಿದ್ದರು. ಈ ಭೌತವಾದಿಗಳು ಸನ್ಯಾಸದಿಂದ ಮಾತ್ರ ಧೈರ್ಯ ಮತ್ತು ಶಾಂತಿ ಸಾಧ್ಯವೆಂದು ಬೋಧಿಸುತ್ತಿದ್ದರು. (ಘಿII ೨೮೮.೧೩)

ಒಂದು ದುರದೃಷ್ಟದ ಸಂಗತಿ ಎಂದರೆ, ಲೋಕಾಯತ, ಚಾರ್ವಾಕವಾದ ಗಳನ್ನು ಕುರಿತ ಗ್ರಂಥಗಳಾವುವೂ ಅವು ರಚಿತವಾದ ರೂಪದಲ್ಲೇ ಇಂದು ನಮಗೆ ದೊರೆಯುತ್ತಿಲ್ಲ. ವೇದೋಷನಿಷತ್ತುಗಳಲ್ಲಿ ನಿರೀಶ್ವರವಾದವನ್ನು ಖಂಡಿಸಲು ಅನುಕೂಲವಾಗುವಂತೆ ಮಾತ್ರ ಲೋಕಾಯತ, ಚಾರ್ವಾಕ ವಾದವನ್ನು ಬಳಸಿಕೊಳ್ಳಲಾಗಿದೆ. ಅಲ್ಲಲ್ಲಿ ಉಲ್ಲೇಖ ವಾದ ಮಾತುಗಳಿಂದಲೇ ನಿರೀಶ್ವರವಾದ ಸಿದ್ಧಾಂತವನ್ನೂ ರೂಪಿಸಿಕೊಳ್ಳಬೇಕಾಗಿದೆ.

ಯೋಗವಾಶಿಷ್ಟವೆಂಬುದು ಕ್ರಿ.ಶ. ೬ನೆಯ ಶತಮಾನದಲ್ಲಿ ರಚಿತವಾದ ಒಂದು ವೈಶಿಷ್ಟ್ಯಪೂರ್ಣ ತತ್ತ್ವಶಾಸ್ತ್ರ ಗ್ರಂಥ. ಆತ್ಮ ಕಲ್ಯಾಣಗಳೇ ಈ ಕೃತಿಯ ವಸ್ತು.

ಜೀವನದಲ್ಲಿ ಕಷ್ಟಕಾರ್ಪಣ್ಯಗಳು ಅವಿಚಾರ ಮತ್ತು ಅಜ್ಞಾನದಿಂದ ಉದ್ಭವಿಸುತ್ತವೆ. ಶುದ್ಧ ವಿಚಾರವು ಜೀವನದ ಎಲ್ಲ ಯಶಸ್ಸಿಗೆ ಕಾರಣವಾಗಿದೆ. ವಿವೇಕಿಯಾದ ಮನುಷ್ಯ ಸಂಸಾರ ತ್ಯಾಗ ಮಾಡಬೇಕಾಗಿಲ್ಲ. ಅವನು ನಿಷ್ಕಾಮಿಯಾಗಿ ಜೀವನದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾನೆ. ಸೋಲು ಗೆಲುವುಗಳಿಂದ ಅವನು ಬಾಧಿತನಾಗುವುದಿಲ್ಲ. ಯಾವ ಋಷಿಯು ಹೇಳಿದ ಮಾತೇ ಆಗಿರಲಿ ಅದು ಅತಾರ್ಕಿಕವಾಗಿದ್ದರೆ ಅದನ್ನು ತಿರಸ್ಕರಿಸಬೇಕು. ಯಾವುದು ವಿಚಾರದ ಒರೆಗಲ್ಲಿನಲ್ಲಿ ತರ್ಕ ಸಮ್ಮತವೆಂದು ತೋರುವುದೋ ಅದನ್ನು ಮಾತ್ರ ಸ್ವೀಕರಿಸಬೇಕು. ಇನ್ನೂ ಮುಂದೆ ಹೋಗಿ ಆ ಕೃತಿ ಹೇಳುತ್ತದೆ: ತರ್ಕಶುದ್ಧವಾದ ಹೇಳಿಕೆ ಒಬ್ಬ ಚಿಕ್ಕ ಬಾಲಕನು ಹೇಳಿದ್ದಾದರೂ ಅದು ಸ್ವೀಕಾರ ಯೋಗ್ಯ; ಚತುರ್ಮುಖ ಬ್ರಹ್ಮನೇ ಹೇಳಿದ್ದರೂ ಅತಾರ್ಕಿಕವಾದ ಹೇಳಿಕೆ ತಿರಸ್ಕಾರ ಯೋಗ್ಯವಾದುದು.

ಯೋಗವಾಶಿಷ್ಠದ ಎರಡನೇ ಭಾಗದ ಆರನೆಯ ಅಧ್ಯಾಯವು ದೈವ ನಿರಾಕರಣಕ್ಕೆ ಮೀಸಲಾಗಿದೆ. ಸ್ವಪ್ರಯತ್ನದಿಂದ ಮಾನವನು ತನ್ನ ಇಷ್ಟಾರ್ಥವನ್ನು ಸಾಧಿಸುತ್ತಾನೆ. ಸೂಕ್ತ ಪ್ರಯತ್ನವು ಅಪೇಕ್ಷಿತ ಫಲವನ್ನು ನೀಡುತ್ತದೆ, ದೈವಾನುಗ್ರಹದಿಂದ ಇಷ್ಟಾರ್ಥವನ್ನು ಸಾಧಿಸಬಹುದು ಎಂಬ ಹೇಳಿಕೆಯ ಯಥಾರ್ಥತೆಯನ್ನು ಪರೀಕ್ಷಿಸಲು ಸಾಧ್ಯವಿಲ್ಲ. ಅದು ಕೇವಲ ಕಲ್ಪನೆಯ ಮಾತು. ಹಾಗಾದರೆ ಮಾನವನು ಅನೇಕ ವೇಳೆ ಎಷ್ಟೇ ಪ್ರಯತ್ನಪಟ್ಟರೂ ಸಫಲನಾಗುವುದಿಲ್ಲವೇಕೆ? ಅದಕ್ಕೆ ಯೋಗ ವಾಶಿಷ್ಠಕಾರನು ಸ್ಪಷ್ಟ ಉತ್ತರ ನೀಡುತ್ತಾನೆ: ನಮ್ಮ ಸದ್ಯದ ಸೋಲಿಗೆ ನಮ್ಮ ಪ್ರಯತ್ನದಲ್ಲಿರುವ ದೋಷ ಅಥವಾ ನಾವು ಎದುರಿಸಬೇಕಾಗಿರುವ ಸಮಸ್ಯೆಯ ಅಪೂರ್ಣ ಜ್ಞಾನ ಕಾರಣವಾಗಿರಬಹುದೇ ಹೊರತು ನಮ್ಮ ಪ್ರಾಚೀನ ಕರ್ಮವಾಗಲಿ, ದೈವೀಶಕ್ತಿಯಾಗಲಿ ಅಲ್ಲ." ಯೋಗವಾಶಿಷ್ಠಕಾರನ ವಿಚಾರ ಅತ್ಯಾಧುನಿಕವೂ, ಮನೋವೈಜ್ಞಾನಿಕವೂ ಆಗಿದೆ. ಇಷ್ಟೆಲ್ಲಾ ವೈಚಾರಿಕ ಸಾಹಿತ್ಯ ಪ್ರಾಚೀನ ಭಾರತೀಯರಿಗೆ ಪರಿಚಿತವಿದ್ದರೂ ಅದರ ಪರಂಪರೆ ಏಕೆ ಮುಂದುವರಿಯಲಿಲ್ಲವೆಂಬುದು ಸೋಜಿಗದ ವಿಷಯವಾಗಿದೆ.

ಆಸ್ತಿಕ ಸಿದ್ಧಾಂತದ ತಾತ್ತ್ವಿಕ ಬಲವು ನಿರೀಶ್ವರವಾದದ ನಾಶಕ್ಕೆ ಬಹುಶಃ ಕಾರಣವಾಗಿರಲಾರದು. ಆ ನಾಶದ ಕಾರಣವನ್ನು ರಾಜಕೀಯ ಮೂಲಗಳಲ್ಲಿ ಕಾಣಬಹುದು. ನಮ್ಮ ಪುರಾಣಗಳಲ್ಲಿ ಬರುವ ದೇವಾಸುರರ ಯುದ್ಧಗಳು ಭಾಗಶಃ ಚಾರಿತ್ರಿಕ ಘಟನೆಗಳ ಪ್ರತಿರೂಪಗಳಾಗಿರುವುದು ಎಲ್ಲರಿಗು ತಿಳಿದ ವಿಷಯವಾಗಿದೆ. ಸುರಾಸುರರು ಸೋದರರೇ ಆದರೂ ಸುರರು ಸುಲಕ್ಷಣದ ಸ್ಫುರದ್ರೂಪಿಗಳಾಗಿದ್ದು, ಅಸುರರು ಮಾತ್ರ ಕರಾಳ ರೂಪದ ಕೋರೆದಾಡೆಗಳ ರಕ್ಕಸರಾದುದು ಹೇಗೆ? ಸುರರು ಅಸುರರನ್ನು ಕಾಲಕ್ರಮೇಣ ಮೂಲೆಗೊತ್ತಿದರು. ಈಗ ಪುರಾಣಗಳಲ್ಲಿ ಬರುವ ರಕ್ಕಸರ ವರ್ಣನೆಯೆಲ್ಲ ಗೆದ್ದ ರಾಜರ ಅಥವಾ ಅವರ ಪುರೋಹಿತರ ರಚನೆಗಳಾಗಿರಲು ಸಾಕು.

ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ರುದ್ರರಲ್ಲಿ ನಡೆದ ಪರಸ್ಪರ ಸ್ಪರ್ಧೆ, ಹೋರಾಟಗಳ ಮೂಲವನ್ನು ಪ್ರಾಚೀನ ರಾಜಕೀಯ ಘಟನಾವಳಿಗಳಲ್ಲಿ ಹುಡುಕಬೇಕೇ ಹೊರತು ತತ್ತ್ವಜ್ಞಾನಿಗಳ ತಾತ್ತ್ವಿಕ ಸಿದ್ಧಾಂತಗಳಲ್ಲಿ ಅಲ್ಲ.

’ದೈವ’ದ ಕಲ್ಪನೆ ರೂಪಿತವಾದುದು ರಾಜಕೀಯ ಘಟನಾವಳಿಗಳಿಂದ; ಋಷಿಗಳ ತಪಸ್ಸಿನಿಂದ ಅಲ್ಲ. ಸಣ್ಣಪುಟ್ಟ ರಾಜರುಗಳು ಸ್ಥಳೀಯ ದೇವತೆಗಳಾಗಿ ರೂಪಗೊಂಡಿದ್ದರೆ, ಚಕ್ರಾಧಿಪತಿಯು ಸಂದರ್ಭಾನುಸಾರವಾಗಿ ಮಹಾದೇವನೋ, ಮಹಾವಿಷ್ಣುವೋ ಆಗಿ ರೂಪುಗೊಂಡ. ತಾಯಿಯಿಂದ ಮೊದಲ ಬಾರಿಗೆ ದೇವರನ್ನು ಕುರಿತು ತಿಳಿಯುವ ಮಗುವಿನಿಂದ ಹಿಡಿದು ದಿವ್ಯಾನುಭವದಿಂದ ದೇವರ ಅಸ್ತಿತ್ವವನ್ನು ಸ್ಥಾಪಿಸುವ ತತ್ವಜ್ಞಾನಿಯವರೆಗೆ ದೇವರನ್ನು ಕುರಿತು ಮಾತನಾಡುವವರೆಲ್ಲಾ ಸುಮಾರು ಮೂರು ನಾಲ್ಕು ಸಾವಿರ ವರ್ಷಗಳ ಹಿಂದೆ ಭರತ ಖಂಡದ ಅಸ್ಪಷ್ಟ ರಾಜಕೀಯ ಘಟನಾವಳಿಗಳಿಂದ ರೂಪಿತವಾದ ಒಂದು ತತ್ತ್ವವನ್ನು ಕುರಿತು ಮಾತಾಡುತ್ತಿದ್ದಾ ರೆಂಬುದು ಬಹುಶಃ ಅವರಿಗೇ ತಿಳಿಯದು.

ಆಧುನಿಕ ಮಾನವನ ಧಾರ್ಮಿಕ ನಂಬಿಕೆಗಳು ಕುಸಿಯುತ್ತಿರುವುದನ್ನು ನಾವು ಪ್ರತ್ಯಕ್ಷ ಕಾಣುತ್ತಿದ್ದೇವೆ. ದೇವರ ಸರ್ವಶಕ್ತಿಯ ಬಗ್ಗೆ ಜನರಿಗೆ ನಂಬಿಕೆ ಕ್ಷೀಣಿಸುತ್ತಿದೆ. ಇಂದು ಜನರು ಧರ್ಮ ಸಂಸ್ಥೆಗಳನ್ನು ಆಶ್ರಯಿಸುತ್ತಿರುವುದು ಅಲೌಕಿಕ ಉದ್ದೇಶಗಳಿಗಾಗಿ ಅಲ್ಲ; ಸದ್ಯದ ಲೌಕಿಕ ಕಾರಣಗಳಿಗಾಗಿ.

ಹಿಂದೆ ಜನರು ಧರ್ಮಕ್ಕಾಗಿ ಪ್ರಾಣತ್ಯಾಗ ಮಾಡಲೂ ಸಿದ್ಧರಿದ್ದರು. ಪರಧರ್ಮೀಯರನ್ನು ಹಿಂಸಿಸಿದರು, ಕೊಂದರು, ತಮ್ಮ ದೇಹವನ್ನು ತಾವೇ ದಂಡಿಸಿ ಕೊಂಡರು. ಪಾಪ ಪರಿಹಾರಕ್ಕಾಗಿ, ನರಕದಿಂದ ಪಾರಾಗಲು ಅನೇಕ ಪ್ರಾಯಶ್ಚಿತ್ತಗಳನ್ನು ಮಾಡಿಕೊಂಡರು. ಇಂದು ಎಷ್ಟು ಜನ ನರಕದ ವಿಚಾರದಿಂದ ತತ್ತರಿಸುತ್ತಿದ್ದಾರೆ. ನರಕವೆಂಬುದು ಇಂದು ಒಂದು ನಗೆಯ ವಿಷಯವಾಗಿದೆ.

ಪಾಪ ಪ್ರಜ್ಞೆ ಇಂದು ನಮ್ಮಲ್ಲಿ ಕಡಿಮೆಯಾಗುತ್ತಿದೆ, ಎಂಬುದನ್ನು ಧಾರ್ಮಿಕ ಗುರುಗಳೂ ಒಪ್ಪುತ್ತಾರೆ. ಅಂದರೆ ಪಾಪಪುಣ್ಯಗಳ ಭಾವನೆ ನಮ್ಮಲ್ಲಿ ಸಂಪೂರ್ಣವಾಗಿ ಮಾಯವಾಗಿದೆ ಎಂದಲ್ಲ. ಅವುಗಳ ಭಾವನೆಯಲ್ಲಿ ತೀವ್ರತೆ ಕಡಿಮೆಯಾಗಿದೆ. ಸುಳ್ಳು, ವಂಚನೆ, ವ್ಯಭಿಚಾರಗಳಿಗೆ ಇಂದು ಯಾರೂ ತಲೆದಂಡ ವಿಧಿಸುವುದಿಲ್ಲ. ಪ್ರಾರ್ಥನಾ ಮಂದಿರಗಳಲ್ಲಿ ಇಂದು ಜನ ಸಮೂಹ ಕಡಿಮೆ ಯಾಗುತ್ತಿದೆ. ಒಮ್ಮೊಮ್ಮೆ ಜನರಿದ್ದರೂ ಅವರು ಮೋಜಿಗಾಗಿ ಬಂದವರು, ಪ್ರಾರ್ಥನೆಗಾಗಿ ಅಲ್ಲವೆಂಬುದು ಯಾರಿಗಾದರೂ ಸ್ಪಷ್ಟವಾದೀತು. "ಯುವಕರ ನೈತಿಕಮಟ್ಟ ಇಳಿಮುಖಗೊಂಡಿದೆ" ಎಂದು ಪ್ರಲಾಪ ಮಾಡುವವರ ಸಂಖ್ಯೆ ಕಡಿಮೆಯೇನಲ್ಲ. ದೈವ ವಿಮುಖರಾದ ಆದೇ ಯುವಜನರು ಸಾಹಸ, ಬುದ್ಧಿಮತ್ತೆ, ಔದಾರ್‍ಯ, ಸದ್ವರ್ತನೆಗಳನ್ನು ರೂಢಿಸಿ ಕೊಂಡಿರುವುದು ಆಸ್ತಿಕರಾದ ಹಿರಿಯರಿಗೆ ಬಿಡಿಸಲಾಗದ ಒಗಟಾಗಿದ್ದರೆ ಆಶ್ಚರ್ಯವಿಲ್ಲ. ಇಂದು ಜನರು ಧರ್ಮವಿಲ್ಲದೇ ಬದುಕಲು ಕಲಿಯುತ್ತಿದ್ದಾರೆ.

ಈ ಶತಮಾನದ ಆರಂಭದಲ್ಲಿ ಬ್ರಿಟಿಷರ ಧಾರ್ಮಿಕ ಅವನತಿಯನ್ನು ಗಮನಿಸಿದ ಈಲಿಯಟ್ "The world is trying the experiment of attempting to form a civilized non christian mentality. The experiment will fail. But we must be very patient in awaiting its collapse; meanwhile redeeming the time so that Faith may be preserved alive in the dark ages before us; to renew and rebuild civilisation and save the world from suicide" ಎಂದು ಘೋಷಿಸಿದ.

ಈಲಿಯಟನ ಭಯವು ನಿರಾಧಾರವಾದುದೆಂದು ಈಗ ದೃಢಫ ಪಟ್ಟಿದೆ. ವಿಜ್ಞಾನ ಯುಗವು ಅಣುಶಕ್ತಿಯ ಮಾರಕಾಸ್ತ್ರಗಳನ್ನು ಬಳಸಿ ನಮ್ಮನ್ನು ಆತ್ಮಹತ್ಯೆಯ ಗುರಿಯತ್ತ ಸೆಳೆದೊಯ್ಯಬಹುದು ಎಂದು ಭಾವಿಸಲಾಗಿತ್ತು. ಆದರೆ ಎರಡನೆಯ ಮಹಾಯುದ್ಧದ ನಂತರ ಬಲಿಷ್ಠ ರಾಷ್ಟಗಳಾದ ಅಮೆರಿಕ ಮತ್ತು ರಷ್ಯಾಗಳು ತೋರಿಸಿದ ಅಸಾಧಾರಣ ಸಮತೋಲನ ಬುದ್ಧಿಮತ್ತೆಯಿಂದ ಆ ಭಯವು ನಿವಾರಣೆಗೊಂಡಿತು. ಈಲಿಯಟ್ ಭಾವಿಸಿದ್ದಂತೆ ಅಣ್ವಸ್ತ್ರಗಳಿಂದ ಪ್ರಪಂಚ ಪ್ರಳಯವಾಗಲಿಲ್ಲ; ಧರ್ಮವು ಗುಪ್ತವಾಗಿ ಕಾಪಾಡಿಕೊಂಡು ಬಂದ ಸರಳ ನಂಬಿಕೆಗಳು ಅಳಿದುಳಿದ ಜನರನ್ನು ಧಾರ್ಮಿಕ ನಂಬಿಕೆಗಳತ್ತ ಹಿಂತಿರುಗಿಸುವ ಅವಕಾಶವೂ ಒದಗಲಿಲ್ಲ. ಅದರ ಬದಲು ಛಿiviಟizeಜ ಟಿoಟಿ-ಛಿhಡಿisಣiಚಿಟಿ meಟಿಣಚಿಟiಣಥಿಯನ್ನು ನಿರ್ಮಿಸುವ ಪ್ರಯತ್ನವು ಪಾಶ್ಚಿಮಾತ್ಯ ದೇಶಗಳಲ್ಲಿ ನಿರಾತಂಕವಾಗಿ ಮುಂದುವರಿಯುತ್ತಿದೆ. ಭಾರತದಲ್ಲಿ ಧರ್ಮದ ಬಾಹ್ಯರೂಪದ ಮೆರುಗು ಕಾಣುತ್ತಿದೆಯಾದರೂ ಅದು ಒಳಗೊಳಗೇ ಟೊಳ್ಳಾಗಿ ಹೋಗಿದೆ. ಇಂದು ಭಾರತೀಯರ ಅನೇಕ ಧಾರ್ಮಿಕ ಆಚರಣೆಗಳು ಮೋಜಿನ ಹಬ್ಬಗಳಾಗಿ ಮಾತ್ರ ಉಳಿದಿದೆ.

ವಿಜ್ಞಾನವು ಇಂದು ಮಾನವನ ಎಲ್ಲ ಕ್ಷೇತ್ರಗಳನ್ನೂ ಪ್ರವೇಶಿಸಿದೆ. ತನ್ನ ಭವಿಷ್ಯವನ್ನು ತಾನೇ ರೂಪಿಸಿಕೊಳ್ಳಲು ತೊಡಗುವಂತೆ ವಿಜ್ಞಾನವು ಮಾನವನನ್ನು ಪ್ರೇರೇಪಿಸುತ್ತಿದೆ. ಕ್ಷಾಮಡಾಮರಗಳು ತಲೆದೋರಿದಾಗ ಇನ್ನು ಮುಂದೆ ಅವನು ಭಜನೆ ಸ್ತೋತ್ರಗಳಿಗೆ ಮೊರೆಹೋಗಲಾರ; ವಿಜ್ಞಾನದ ಯಂತ್ರ ಸೌಲಭ್ಯಗಳಿಗೆ, ಆರ್ಥಿಕ ಯೋಜನೆಗಳಿಗೆ ಮೊರೆಹೋಗುತ್ತಾನೆ. ಬಡತನದ ಬೇಗೆಯನ್ನು ಭಿಕ್ಷಾಟನೆಯಿಂದ ಹೋಗಲಾಡಿಸಲು ಬಯಸುವುದಿಲ್ಲ; ಬದಲು ವೈಜ್ಞಾನಿಕ ಯೋಜನೆಗಳಿಂದ ಹೊಡೆದಟ್ಟಲು ಯತ್ನಿಸುತ್ತಾನೆ. ಏನೇ ಇರಲಿ, ವೈಜ್ಞಾನಿಕ ನಾಗರಿಕತೆಯು ದೇವರ ಇರುವಿಕೆಗೆ ಅನನುಕೂಲವಾದ ವಾತಾವರಣವನ್ನು ಉಂಟುಮಾಡುವುದರಲ್ಲಿ ಯಾವ ಸಂಶಯವೂ ಇಲ್ಲ.

ಆಸ್ತಿಕರೂ ಸಾಮಾನ್ಯವಾಗಿ ನಾಸ್ತಿಕರ ಮುಂದೊಡ್ಡುವ ಪ್ರಶ್ನೆಗಳು ಎರಡು: ದೇವರ ಅಸ್ತಿತ್ವದಲ್ಲಿ ನಂಬಿಕೆ ಇಲ್ಲದೆ ಮಾನವನಲ್ಲಿ ನ್ಯಾಯ, ನೀತಿ, ಪ್ರಾಮಾಣಿಕತೆಗಳು ಉಳಿಯಲು ಹೇಗೆ ಸಾಧ್ಯ? ದೇವರಿಲ್ಲದೆ ಈ ವಿಶ್ವ ಹೇಗೆ ಸೃಷ್ಟಿಯಾಯಿತು? ಈ ಎರಡು ಪ್ರಶ್ನೆಗಳಿಗೂ ನಿರೀಶ್ವರವಾದಿಗಳು ಸಮಂಜಸ ಉತ್ತರ ನೀಡಿದ್ದಾರೆ. ಮಾನವನಲ್ಲಿ ನ್ಯಾಯ, ನೀತಿ, ಪ್ರಾಮಾಣಿಕತೆಗಳು ಆ ಮೌಲ್ಯಗಳಿಗಾಗಿ ಉಳಿಯಬೇಕೇ ಹೊರತು ಹೊರಗಿನ ಭಯದಿಂದಾಗಲಿ, ಭರವಸೆಯಿಂದಾಗಲಿ ಉಳಿಯುವಂತಾಗಬಾರದು. ಬಹುಮಾನಕ್ಕಾಗಿ ಆಸೆಪಟ್ಟೋ, ಶಿಕ್ಷೆಗೆ ಹೆದರಿಯೋ ನ್ಯಾಯ, ನೀತಿ, ಪ್ರಾಮಾಣಿಕತೆಗಳನ್ನು ಪಾಲಿಸುವ ವ್ಯಕ್ತಿಗಿಂತಲೂ ಸಾಮಾಜಿಕ ಹೊಣೆಗಾರಿಕೆಯನ್ನರಿತು ಅವುಗಳನ್ನು ಅವುಗಳಿಗಾಗಿಯೇ ಪಾಲಿಸುವವನು ಶ್ರೇಷ್ಠನಾಗುತ್ತಾನೆ. ನ್ಯಾಯ ನೀತಿ ಪ್ರಾಮಾಣಿಕತೆಗಳಿಗಾಗಿ ದೇವರ ಸೃಷ್ಟಿಯಾಗಿದ್ದರೆ, ಮಗುವನ್ನು ಬೆದರಿಸಲು ತಾಯಿ ಸೃಷ್ಟಿಸಿದ ’ಗುಮ್ಮ’ನಿಗೂ ದೇವರಿಗೂ ಇರುವ ವ್ಯತ್ಯಾಸವೇನು?

ಎರಡನೆಯ ಪ್ರಶ್ನೆ: ವಿಶ್ವವನ್ನು ಯಾರು ಸೃಷ್ಟಿಸಿದರು? ಮೊದಲ ಕಾರಣ ಯಾವುದು? ಈ ಪ್ರಶ್ನೆಗೆ ಉತ್ತರವಾಗಿ ನಾಸ್ತಿಕರು ಮರುಪ್ರಶ್ನೆಯೊಂದನ್ನು ಮುಂದಿಡುತ್ತಾರೆ. ವಿಶ್ವವು ದೇವರ ಸೃಷ್ಟಿಯಾಗಿದ್ದರೆ ದೇವರನ್ನು ಸೃಷ್ಟಿಸಿದವರಾರು? ದೇವರು ತನಗೆ ತಾನೆ ಸೃಷ್ಟಿಯಾದನೆಂದು ಆಸ್ತಿಕರು ಹೇಳುವುದಾದರೆ ವಿಶ್ವವೇ ತನಗೆ ತಾನು ಯಾಕೆ ಸೃಷ್ಟಿಯಾಗಿರಬಾರದು, ತಾತ್ತ್ವಿಕವಾಗಿ ಆಸ್ತಿಕನು ನಿರುತ್ತರನಾಗುತ್ತಾನೆ. ಕೊನೆಗೆ ತನಗೆ ಆದ ದಿವ್ಯಾನುಭವದ ಆಧಾರವನ್ನು ಮುಂದಿಡುತ್ತಾನೆ. ಅನುಭವವು ವೈಯಕ್ತಿಕವಾದ್ದರಿಂದ ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಲು ಸಾಧ್ಯವಿಲ್ಲ. ಅಲ್ಲಿಗೆ ವಿವಾದ ಮುಗಿಯುತ್ತದೆ.

ಈ ಸಂದರ್ಭದಲ್ಲಿ ಒಬ್ಬ ಶ್ರೇಷ್ಠ ಸಮಾಜ ಸುಧಾರಕ ಮತ್ತು ಪರಮ ನಾಸ್ತಿಕ ಗೋರಾರವರು ಮಹಾತ್ಮ ಗಾಂಧೀಯವರನ್ನು ಭೇಟಿಯಾದಾಗ ಅವರೀರ್ವರಲ್ಲಿ ನಡೆದ ಸಂವಾದವನ್ನು ಉಲ್ಲೇಖಿಸ ಬಯಸುತ್ತೇನೆ. (An atheist with Gandhi)

ಗಾಂಧಿ ಗೋರಾರನ್ನು ಕೇಳುತ್ತಾರೆ. ’ಈಗ ಹೇಳಿ ನೀವೇಕೆ ನಾಸ್ತಿಕರಾಗಿದ್ದೀರಿ?’ ಗೋರಾ ನಾಸ್ತಿಕವಾದದ ಸಾರಾಂಶವನ್ನು ಸಂಕ್ಷೇಪವಾಗಿ ಆದರೆ ಸ್ಪಷ್ಟವಾಗಿ ವಿವರಿಸಿ, ’ಮಾನವನಿಗೆ ಆತ್ಮಸ್ಥೈರ್ಯವನ್ನು ನೀಡಲು, ಮತ್ತು ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಗಳನ್ನು ಅಹಿಂಸಾ ಮಾರ್ಗದಿಂದ ಸಾಧಿಸಲು ನನಗೆ ನಾಸ್ತಿಕವಾದ ಅಗತ್ಯ. ನಾನೆಲ್ಲಿಯಾದರೂ ತಪ್ಪಿರುವೆನೇ ಹೇಳಿ. ಬಾಪು.’ ಗಾಂಧಿ ಹೇಳಿದರು ’ಹೌದು, ನಿಮ್ಮ ಮಾತಿನಲ್ಲಿ ಒಂದು ಆದರ್ಶವಿದೆ. ನಾನು ನನ್ನ ಆಸ್ತಿಕವಾದ ಸರಿ ಎಂದಾಗಲಿ ಅಥವಾ ನಿಮ್ಮ ನಾಸ್ತಿಕವಾದ ತಪ್ಪೆಂದಾಗಲಿ ಹೇಳಲಾರೆ. ನಾವಿಬ್ಬರೂ ಸತ್ಯಾನ್ವೇಷಕರು, ತಪ್ಪೆಂದು ನಮಗೆ ಮನವರಿಕೆಯಾದಾಗ ನಾವು ಬದಲಾಯಿಸೋಣ. ನೀವು ಸರಿಯೋ ನಾನು ಸರಿಯೋ ಪರಿಣಾಮ ತಿಳಿಸುತ್ತದೆ. ಆಗ ನಾನು ನಿಮ್ಮ ದಾರಿ ಹಿಡಿಯಬಹುದು, ನೀವು ನನ್ನ ದಾರಿ ಹಿಡಿಯಬಹುದು ಅಥವಾ ನಾವಿಬ್ಬರೂ ಮೂರನೆಯ ದಾರಿ ಹಿಡಿಯಬಹುದು. ಆದ್ದರಿಂದ ನಿಮ್ಮ ಕೆಲಸದಲ್ಲಿ ಮುಂದುವರಿಯಿರಿ. ನಿಮ್ಮ ಪದ್ಧತಿಯು ನನ್ನದರ ವಿರುದ್ಧವಾದರೂ ನಾನು ನಿಮಗೆ ಸಹಾಯ ಮಾಡುತ್ತೇನೆ.’

ವಿಜ್ಞಾನದ ಒತ್ತಡದಿಂದ ಕ್ರಮೆಣ ಶಿಥಿಲಗೊಳ್ಳುತ್ತಿರುವ ಧರ್ಮದ ಸ್ಥಾನವನ್ನು ತುಂಬುವುದು ಹೇಗೆ; ಧರ್ಮದ ನಾಶದಿಂದ ಉಂಟಾಗುವ ಭಾವನಾ ಶ್ಯೂನ್ಯವನ್ನು ಕಲೆ ಸಾಹಿತ್ಯಗಳು ತುಂಬಬೇಕಾದುದು ಅನಿವಾರ್‍ಯವೂ ಅವಶ್ಯಕವೂ ಆಗಿದೆ. ಧರ್ಮವು ಜನರನ್ನು ಮರುಳುಗೊಳಿಸುವ ಒಂದು ಅಫೀಮು ಎಂಬ ಮಾತು ಸತ್ಯವಿರಬಹುದು. ಆದರೆ ಕೇವಲ ವೈಚಾರಿಕತೆಯಿಂದ ಮಾನವನ ಮನಸ್ಸು ತಣಿಯಲಾರದು. ತರ್ಕವೊಂದೇ ಮಾನವನ ಜೀವನವನ್ನು ನಿಯಂತ್ರಿಸಲಾರದು. ಜಾಗೃತ ಪ್ರಜ್ಙೆ ಮನಸ್ಸಿನ ಒಂದು ಚಿಕ್ಕ ಅಂಶ ಮಾತ್ರ. ವಾಸ್ತವವಾಗಿ ನಾವು ಹೊರಗಿನ ದೈವದ ಕೈಗೊಂಬೆಗಳಲ್ಲ; ಸುಪ್ತಪ್ರಜ್ಞೆಯ ಅಂತರಾಳದಲ್ಲಿ ಅಡಗಿರುವ ಅನೇಕ ತುಡಿತ, ಸೆಳೆತಗಳ ಬಂಧಿಗಳು. ದೇವದಾನವರ ಪುರಾಣ ಕಥೆಗಳು ಮನಸ್ಸಿನ ಸಮತೋಲನವನ್ನು ಕಾಪಾಡಲು ಅಗತ್ಯವಾದ ಕಲಾಸಾಮಗ್ರಿಗಳನ್ನು ಒದಗಿಸುತ್ತವೆ.

ನಮ್ಮ ಪ್ರಕೃತಿಯ ಒಂದು ಭಾಗವು ವೈಚಾರಿಕತೆಯಿಂದ ಭಿನ್ನವಾದ ತೃಪ್ತಿಯನ್ನು ಬಯಸುತ್ತದೆ. ಇಲ್ಲಿ ವೈಜ್ಞಾನಿಕ ಚಿಂತನೆ ಬೇಕಾಗಿಲ್ಲ; ಕಲ್ಪನೆ ಬೇಕು. ಪುರಾಣ ಪ್ರತಿಮೆಗಳು, ಸಂಕೇತಗಳು ಚಿತ್ರಿಸುವ ಕಲ್ಪನಾ ತರಂಗಗಳ ಮೇಲೆ ವಿಹರಿಸಿದಾಗ ಆ ಭಾಗಕ್ಕೆ ತೃಪ್ತಿ.

ಸಂಕೇತಗಳು ಕನಸುಗಳ ಜೀವಾಳ. ನಾವು ಸುಪ್ತಪ್ರಜ್ಞೆಯಲ್ಲಿ ಆಲೋಚನೆ ಮಾಡಲಾರೆವು. ಸುಪ್ತಪ್ರಜ್ಞೆಯ ಆಲೋಚನೆಗಳು ಜಾಗೃತ ಲೋಕಕ್ಕೆ ತಳ್ಳಲ್ಪಟ್ಟಾಗ ಸಂಕೇತಗಳು, ಪ್ರತೀಕಗಳು ರೂಪಗೊಳ್ಳುತ್ತವೆ.

ಧರ್ಮದಿಂದ ನಾವು ದೂರ ಸರಿದರೂ ಪುರಾಣ ಪ್ರತಿಮೆಗಳನ್ನು ನಾವು ಪುರಸ್ಕರಿಸಬೇಕು. ದೇವದಾನವರು, ಯಕ್ಷ ಗಂಧರ್ವ ಕಿನ್ನರರು, ಕಲಾಭಿವ್ಯಕ್ತಿಗೆ ಅಗತ್ಯವಾದ ಮೂಲಸಾಮಗ್ರಿಯನ್ನು ನೀಡುತ್ತಾರೆ.

ಪ್ರಾಚೀನ ಕಾಲದಲ್ಲಿ ಕಾವ್ಯ, ನೃತ್ಯ, ನಾಟಕಗಳೆಲ್ಲ ಒಂದರೊಡನೊಂದು ಬೆರೆತು ಒಂದು ಅಖಂಡ ಕಲಾಕೃತಿ ಮೂಡುತ್ತಿತ್ತು. ಆ ಕ್ರಿಯೆಯಲ್ಲಿ ಇಡೀ ಸಮಾಜವೇ ಧಾರ್ಮಿಕವಾಗಿ ಪಾಲುಗೊಳ್ಳುತ್ತಿತ್ತು. ಜೀವನ, ಕಾವ್ಯ, ಧರ್ಮ ಎಲ್ಲ ಒಂದೇ ಆಗಿದ್ದ ಕಾಲವದು.

ಜೀವಂತ ಕಾವ್ಯ ಒಂದು ಕಾಲಕ್ಕೆ ಅಸ್ತಿತ್ವದಲ್ಲಿತ್ತು. ನಂತರ ಪುರಾಣ ಕಾವ್ಯಗಳಂತಹ ಸ್ಥಗಿತ ಕಾವ್ಯ ಅಸ್ತಿತ್ವಕ್ಕೆ ಬಂತು. ಅಂದರೆ ಜೀವಂತ ಕಾವ್ಯದ ಸ್ಥಾನವನ್ನು ಧರ್ಮ ಆಕ್ರಮಿಸಿತು. ಈಗ ಧರ್ಮಕ್ಕೆ ಬದಲು ಏನನ್ನು ತರುವುದು? ಸ್ಥಗಿತ ಕಾವ್ಯವನ್ನು ತೊಡೆದು ಹಾಕಿ ಅದು ಯಾವ ಜೀವಂತ ಮೂಲದಿಂದ ಬಂತೋ ಅಲ್ಲಿಗೆ ಮರುಳುವುದು ಹೇಗೆ?

ಜೀವಂತ ಕಾವ್ಯವು ಎಲ್ಲೋ ಕೆಲವು ಆದಿವಾಸಿಗಳನ್ನುಳಿದು ಜನ ಸಾಮಾನ್ಯರಿಗೆ ಹಿಡಿಸಲಾರದೆಂಬ ವಾದವೊಂದಿದೆ. ಒಂದು ಕಡೆ ಕವಿಗಳು ಕಲಾವಿದರು ನವ್ಯಕಲೆಯ ಹೆಸರಿನಲ್ಲಿ ಕಲೆಯನ್ನು ಸಾಮಾನ್ಯರಿಂದ ಬೇರ್ಪಡಿಸಿ ತಮ್ಮದೇ ಆದ ಸಂಕುಚಿತ ಗುಂಪುಗಳಿಗೆ ಮಾತ್ರ ರಚಿಸಲು ತೊಡಗಿದರು; ದಂತ ಗೋಪುರಗಳನ್ನು ಸೇರಿದರು. ಇದರಿಂದ ನವ್ಯಕಾವ್ಯ ಜನ ಸಂಪರ್ಕವನ್ನು ಕಳೆದುಕೊಂಡು ನಿಸ್ಸತ್ವಗೊಂಡಿತು. ಇಂದು ಸೃಜನಶೀಲರಾದ ಕೆಲವು ಕವಿಗಳು ಕಲಾವಿದರು ಪುನಃ ಜನಸಾಮಾನ್ಯರ ಸಂಪರ್ಕವನ್ನು ಪಡೆಯಲು ಕಾತರರಾಗಿದ್ದಾರೆ. ಅದಕ್ಕಾಗಿ ಜನಪ್ರಿಯ ಸಂಪರ್ಕ ಮಾಧ್ಯಮಗಳಾದ ನಾಟಕ ಮತ್ತು ಸಿನೆಮಾಗಳತ್ತ ತಮ್ಮ ದೃಷ್ಟಿಯನ್ನು ಹರಿಸಿದ್ದಾರೆ.