You are hereವೇದಗಳು: ಭಕ್ಷಣೆಯೇ ಕೇಂದ್ರ
ವೇದಗಳು: ಭಕ್ಷಣೆಯೇ ಕೇಂದ್ರ
ಲೇಖಕರು: ಬಿ.ವಿ. ವೀರಭದ್ರಪ್ಪ
ಹಕ್ಕುಗಳು: ಲೇಖಕರವು
ವೇದಗಳ ಬಗ್ಗೆ ಬೇರೆ ಬೇರೆ ಜನರಿಗೆ ಬೇರೆ ಬೇರೆ ಕಲ್ಪನೆಗಳಿವೆ, ಬ್ರಹ್ಮನ ನಾಲ್ಕು ಮುಖಗಳಿಂದ ನಾಲ್ಕು ವೇದಗಳು ಬಂದವೆಂಬುದು ಒಂದು ಸನಾತನ ಕಲ್ಪನೆ. ಸಂಪ್ರದಾಯಿಕ ಹಿಂದುಗಳು ವೇದದಲ್ಲಿ ಇಲ್ಲಿದಿರುವುದು ವಿಶ್ವದಲ್ಲಿ ಎಲ್ಲೂ ಇಲ್ಲ ಎಂದು ಭಾವಿಸುತ್ತಾರೆ. ವೇದ ಮಂತ್ರಗಳ ಸರಿಯಾದ ಉಚ್ಚಾರದಿಂದ ಅಸಾಧ್ಯವು ಸಾಧ್ಯವಾಗುತ್ತದೆ ಎಂದು ಸಾಮಾನ್ಯರು ನಂಬುತ್ತಾರೆ. ಯಾವುದೇ ವಾದವನ್ನು ಎತ್ತಿ ಹಿಡಿಯಲು ಅಥವಾ ತಳ್ಳಿ ಹಾಕಲು ವಿದ್ವಾಂಸರು ಒಂದಲ್ಲ ಒಂದು ವೇದ ಶ್ಲೋಕಕ್ಕೆ ಶರಣಾಗುತ್ತಾರೆ. ಹಾಗಾದರೆ ವೇದ ಎಂದರೇನು? ಅದರಲ್ಲಿ ಏನೇನಿದೆ?
ಪ್ರತಿಕೂಲ ಪರಿಸರದೊಡನೆ ಹೋರಾಡಿ, ಬದುಕಿ ಉಳಿಯುವ ತೀವ್ರ ಬಯಕೆ ಋಗ್ವೇದದ ಹಾಡುಗಳ ಮುಖ್ಯ ವಸ್ತುವಾಗಿದೆ. ಅನ್ನ, ಹಸುಗಳು, ಗಂಡು ಮಕ್ಕಳು, ಬಲ, ಜಯ, ಸಂಪತ್ತು, ಕುದುರೆ, ರಥ ಮುಂತಾದವುಗಳ ಬಯಕೆಗಳು ಮೇಲಿಂದ ಮೇಲೆ ಅವುಗಳಲ್ಲಿ ವ್ಯಕ್ತವಾಗಿದೆ.
ವೈದಿಕ ಕವಿಗಳ ಕಲ್ಪನೆಯಲ್ಲಿ, ತಮ್ಮ ಅಂಕೆಗೆ ಮೀರಿದ ಪ್ರಕೃತಿ ಶಕ್ತಿಗಳಾದ ಗಾಳಿ, ಮಳೆ, ಸೂರ್ಯ, ಬೆಂಕಿ ಮುಂತಾದವು ದೈವತ್ವ ಪಡೆದಿದೆ.
ಲೌಕಿಕ ವಸ್ತುಗಳ ತೀರದ ಬಯಕೆ ಋಗ್ವೇದದ ಪ್ರಮುಖ ವಸ್ತುವಾಗಿದೆ. ಕೆಲವು ಋಕ್‌ಗಳ ಸರಳಾನುವಾದವನ್ನು ಇಲ್ಲಿ ನೋಡಬಹುದು:
ಮಹಾಮಹಿಮ, ಉತ್ತೇಜನಕಾರ, ಬಲಶಾಲಿ ಪಿತು (ಅಂದರೆ ಆಹಾರ) ವನ್ನು ನಾನು ಸ್ತುತಿಸುತ್ತೇನೆ. ಅವನ ಪೌಷ್ಠಿಕ ಶಕ್ತಿಯಿಂದ ತ್ರಿತನು ವಿಕಲ ವೃತ್ತನನ್ನು ಜಯಿಸಿದ.
ಶತ್ರು ಸಂಹಾರಕರಾದ ಇಂದ್ರ ಮತ್ತು ವರುಣರು ನಮ್ಮ ಬಳಿ ರಕ್ಷಕ ರಾಗಿರಲಿ, ಅವರಿಂದ ನಾವು ಒಳ್ಳೆಯ ಗಂಡು ಮಕ್ಕಳು , ಗಂಡು ಮೊಮ್ಮಕ್ಕಳು, ಫಲವತ್ತಾದ ನೆಲ, ದೀರ್ಘಾಯಸ್ಸು ಮತ್ತು ಗಂಡಸುತನವನ್ನು ಪಡೆಯುವಂತಾಗಲಿ.
ಸೌಭಾಗ್ಯಕಾರಕ ಪಿತು. ಸೌಭಾಗ್ಯ ಸಾಧನಗಳೊಡನೆ ನಮ್ಮ ಬಳಿಗೆ ಬಾ; (ನೀನು) ಸಂತಸದ ಆಗರ; ಗೌರವಾನ್ವಿತ ಗೆಳೆಯ, ಅಸೂಯೆ ಇಲ್ಲದವನು.
ವೀರಕುಮಾರ, ಅನ್ನ ಮತ್ತು ಹಸುಗಳ ಒಡೆಯ, ಓ ಆಗ್ನಿ, ನಮಗೆ ಅಪಾರ ಶಕ್ತಿಯನ್ನು ಕೊಡು; ನೀನು ಎಲ್ಲವನ್ನೂ ಬಲ್ಲವನು.
ಅತಿ ಮಧುರ ಪಿತು, ನಿನ್ನನ್ನು ವಿತರಣೆ ಮಾಡುವವರು. ನಿನ್ನನ್ನು ಮತ್ತು ನಿನ್ನ ರಸವನ್ನು ಭುಜಿಸುವವರು ನಿನ್ನ ಹಾಗೆ ಉದ್ದ ಕತ್ತಿನಿಂದ ವೃದ್ಧಿಯಾಗಲಿ.
ಹಸುಗಳಿಂದ ಬೆಣ್ಣೆಯನ್ನು ಪಡೆಯುವಂತೆ ನಾವು ನಮ್ಮ ನುಡಿಗಳಿಂದ, ಓ ಪಿತು, ನಿನ್ನನ್ನು ಒಲಿಸುತ್ತೇವೆ. ದೇವರುಗಳೊಡನೆ ಕುಳಿತು ಸಂತಸದಿಂದ ಭುಂಜಿಸುವ ನೀನು ನಮ್ಮೊಡನೆ ಕುಳಿತು ಸಂತಸದಿಂದ ಭುಂಜಿಸು.
ಕುದಿಸಿದ ಹಾಲು ಅಥವಾ ಕುದಿಸಿದ ಬಾರ್‍ಲಿಯಿಂದಾದ ಸೋಮ ಮಿಶ್ರಣವನ್ನು ನಾವು ಸೇವಿಸುವೆವು; ಆದ್ದರಿಂದ ದೇಹವೇ, ನೀನು ಕೊಬ್ಬಿ ಬೆಳೆ.
ನಾಸತ್ಯರೆ, ಹಸುಗಳನ್ನು ನೀಡುವ, ಕುದುರೆಗಳನ್ನು ಕೊಡುವ, ಸಂಪತ್ತನ್ನು ಕರುಣಿಸುವ ನಿಮ್ಮ ರಥದಲ್ಲಿ ಬನ್ನಿ; ಉಜ್ವಲವಾದ ದೇಹ ಕಾಂತಿಯುಳ್ಳ ನಿಮ್ಮನ್ನು ಸ್ತುತಿಗಳು ಸುತ್ತುವರಿಯಲಿ.
ಆಹಾರಧಾರಣಳಾದ ಉಷಸ್ ನಾವು ನಮ್ಮ ಗಂಡು ಮಕ್ಕಳು ಮತ್ತು ಗಂಡು ಮೊಮ್ಮಕ್ಕಳನ್ನು ಪೋಷಿಸಲು ಅಗತ್ಯವಾದ ಬಗೆಬಗೆಯ ಸಂಪತ್ತನ್ನು ಕೊಡು.
ಬಲಾಢ್ಯ ದೇವರುಗಳ ಮನಸ್ಸು, ಓ ಪಿತು, ನಿನ್ನ ಮೇಲೆ ಕೀಲಿಸಿದೆ; ನಿನ್ನ ಸಕ್ರಿಯ ನೆರವಿನಿಂದ (ಇಂದ್ರ) ಅರಿಯನ್ನು ಕೊಂದ.
ಕರಂಭ ಎಂಬ ಹೆಸರಿನ ಧಾನ್ಯವೇ, ಅಂಗವನ್ನು ಬಲಗೊಳಿಸಿ ಸಕ್ರಿಯಗೊಳಿಸು; ಆದ್ದರಿಂದ ದೇಹವೇ ನೀನು ಕೊಬ್ಬಿ ಬೆಳೆ.
ದೇವನಿರಲಿ ಮಾನವನಿರಲಿ, ಯಾವ ಶತ್ರುವೂ ನಮ್ಮನ್ನು ಗೆಲ್ಲದಿರಲಿ; (ಓ ಅಗ್ನಿ) ಅಂತಹ ಇಬ್ಬಗೆಯ ಶತ್ರುಗಳಿಂದ ನಮ್ಮನ್ನು ಪಾರುಮಾಡು.
ಅನೇಕರು ಅಸೂಯೆ ಪಡುವಂತಹ ಸಂಪತ್ತು ದಿನೇ ದಿನೇ ನಮ್ಮನ್ನು ಸೇರಲಿ ಮತ್ತು ಆಹಾರ ನಮಗಾಗಿ ಕಾಯುತ್ತಿರಲಿ.
ಅಶ್ವಿನಿಗಳೇ ಹಸುಗಳು, ಗಂಡುಮಕ್ಕಳು, ರಥಗಳು, ಕುದುರೆಗಳು ಮತ್ತು ಆಹಾರದಿಂದ ಕೂಡಿದ ಸಂಪತ್ತನ್ನು ನಮಗೆ ನೀಡಿ.
ಇಂತಹ ಹಾಡುಗಳು ಋಗ್ವೇದದಲ್ಲಿ ರಾಶಿರಾಶಿಯಾಗಿವೆ. ಅವುಗಳನ್ನು ಸಂಖ್ಯಾಶಾಸ್ತ್ರದ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ವೇದಗಳನ್ನು ಕುರಿತು ಅತಿ ಪ್ರಾಚೀನ ಅರ್ಥಕೋಶವಾದ ’ನಿಘಂಟು’ ಆಹಾರವನ್ನು ಕುರಿತು ೩೧ ಸಮಾನಾರ್ಥಕ ಪದಗಳನ್ನು ಹೆಸರಿಸಿದೆ. ಋಗ್ವೇದದಲ್ಲಿ ಆ ಪದಗಳು ಒಟ್ಟು ೩,೦೦೦ ಕ್ಕಿಂತ ಹೆಚ್ಚು ಸಾರಿ ಕಾಣಿಸಕೊಳ್ಳುತ್ತವೆ ಎಂದು ಲೆಕ್ಕಹಾಕಲಾಗಿದೆ. ಅಂದರೆ ಋಗ್ವೇದದಲ್ಲಿ ಸರಾಸರಿ ಮೂರು ಹಾಡುಗಳಲ್ಲಿ ಒಂದು ಆಹಾರವನ್ನು ಕುರಿತದ್ದಾಗಿದೆ.
’ನಿಘಂಟು’ವಿನಲ್ಲಿ ನೀರನ್ನು ಕುರಿತು ೧೦೧, ಬಲವನ್ನು ಕುರಿತು ೨೮, ಹಸುವನ್ನು ಕುರಿತು ೯, ಸಂಪತ್ತನ್ನು ಕುರಿತು೨೮, ಸಂತಾನವನ್ನು ಕುರಿತು ೧೫ ಸಮಾನಾರ್ಥ ಪದಗಳಿವೆ. ಬೆರಗುಗೊಳಿಸುವ ಇನ್ನೊಂದು ಉದಾಹರಣೆಯನ್ನು ಉಲ್ಲೇಖಿಸುವುದಾದರೆ ಋಗ್ವೇದದಲ್ಲಿ ’ಹಸು’ ಪದವು ತನ್ನೆಲ್ಲ ಸಮಾನಾರ್ಥಕ ಪದಗಳೊಡನೆ ಒಂದು ಸಾವಿರಕ್ಕಿಂತ ಹೆಚ್ಚು ಸಾರಿ ’ಹಸುವಿನ ಬಯಕೆ’ ಎಂಬ ಅರ್ಥದಲ್ಲಿ ಬಳಕೆಯಾಗಿದೆ.
ವೇದಮಂತ್ರಗಳನ್ನು ಅವರು ತಮ್ಮ ಬಯಕೆಗಳನ್ನು ಈಡೇರಿಸಿ ಕೊಳ್ಳುವುದ ಕ್ಕಾಗಿಯೇ ಜಪಿಸುತ್ತಿದ್ದರು. ಅದಕ್ಕಾಗಿಯೇ ವೈದಿಕಹಾಡುಗಳನ್ನು ’ಕಾಮವರ್ಷಿ’ ಅಂದರೆ ’ಬಯಕೆಗಳ ಸುರಿಮಳೆ’ ಎಂದು ಕರೆಯುತ್ತಾರೆ. ಈ ಬಯಕೆಗಳ ಸ್ವರೂಪವಾದರೂ ಏನು? ಆಹಾರ, ಹಸುಗಳು, ಗಂಡುಮಕ್ಕಳು, ಬಲ, ಜಯ, ಸಂಪತ್ತು ಮುಂತಾದುವೇ ಹೊರತು ಮೋಕ್ಷವಲ್ಲ. ಅನಂತರದ ವೈದಿಕ ಅನುಯಾಯಿಗಳು ಎತ್ತಿ ಹಿಡಿಯುವ ’ಮೋಕ್ಷ’ ಪದದ ಅರಿವೇ ಪ್ರಾರಂಭದ ವೈದಿಕ ಕವಿಗಳಿಗಿರಲಿಲ್ಲ.
- Login or register to post comments
- Email this page