You are hereಹಾವಿನ ಹಟ್ಟಿಯಲ್ಲಿ ರಂಗಸ್ವಾಮಿ ದೇವರ ಭೂತ

ಹಾವಿನ ಹಟ್ಟಿಯಲ್ಲಿ ರಂಗಸ್ವಾಮಿ ದೇವರ ಭೂತ


ಲೇಖಕರು: ಬಿ.ವಿ. ವೀರಭದ್ರಪ್ಪ
ಹಕ್ಕುಗಳು: ಲೇಖಕರವು

ಇಂದು ಅಸ್ಪೃಶ್ಯತೆ ಪಟ್ಟಣ ಮತ್ತು ನಗರವಾಸಿಗಳಲ್ಲಿ ಬಹುಮಟ್ಟಿಗೆ ಕಡಿಮೆಯಾಗಿದೆ. ಇತ್ತೀಚೆಗೆ ಉಡುಪಿಯಲ್ಲಿ ನಡೆದ ಅಖಿಲ ಭಾರತ ಧರ್ಮ ಸಂಸದ್‌ನಲ್ಲಿ ಹರಿಜನ ಪಂಗಡದ ನೀಲಕಂಠಸ್ವಾಮಿಗಳು ಪೇಜಾವರ ಸ್ವಾಮಿಗಳ ಜೊತೆಗೆ ಒಂದೇ ವೇದಿಕೆಯ ಮೇಲೆ ಕುಳಿತಿದ್ದರು. ಹರಿಜನ ಪ್ರತಿನಿಧಿಯಾದ ಆ ಸ್ವಾಮಿ ಅಸ್ಪೃಶ್ಯತೆಯ ಬಗ್ಗೆ ಮಾತಾಡಲು ಮಾತ್ರ ಆ ಸಭೆಯಲ್ಲಿ ಅವಕಾಶ ದೊರೆಯಲಿಲ್ಲ. ಆ ಮಾತು ಬೇರೆ. ಆದರೆ ಈಗಲೂ ಹಳ್ಳಿಗಳಲ್ಲಿ ಅಸ್ಪೃಶ್ಯತೆ ೫೦ ವರ್ಷಗಳ ಹಿಂದಿನಂತೆಯೇ ಮುಂದುವರಿದಿದೆ.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ವಿಶ್ವನಾಥಹಳ್ಳಿ ಗೊಲ್ಲರಹಟ್ಟಿ (ಹಾವಿನ ಹಟ್ಟಿ)ಯಲ್ಲಿ ಮೊದಲು ಸಹಕಾರ ಸಂಘವಿದ್ದ ಸ್ಥಳದಲ್ಲೇ ಈಗ ಒಂದು ನ್ಯಾಯಬೆಲೆ ಅಂಗಡಿ ಇದೆ. ಗುಡ್ಡದ ಸಾಂತೇನಹಳ್ಳಿ ಮತ್ತು ತಿರುಮಲಾಪುರ ಗ್ರಾಮಗಳೂ ಈ ನ್ಯಾಯಬೆಲೆ ಅಂಗಡಿಯ ವ್ಯಾಪ್ತಿಗೆ ಒಳಪಟ್ಟಿವೆ. ಈ ಭಾಗದ ಗೊಲ್ಲರ ಹಟ್ಟಿಗಳ ಸುತ್ತ ಬೇಲಿ ಹಾಕಲಾಗಿರುತ್ತದೆ. ಹಟ್ಟಿಯೊಳಗೆ ಹರಿಜನರು ಹೋಗುವಂತಿಲ್ಲ. ಹಟ್ಟಿಯ ಹೊರಗಿನಿಂದಲೇ ಅವರು ಕೂಗು ಹಾಕಬೇಕು. ಅಂಗಡಿಯವನು ಇವರಾರೆಂದು ವಿಚಾರಿಸಿ ಅವನಿಂದ ಕಾರ್ಡು ಹಣ ಪಡೆದುಕೊಂಡು ಹೋಗಿ ಎಷ್ಟೋ ಹೊತ್ತಿನ ನಂತರ ಹೊರಗೆ ಕಾದು ಕುಳಿತ ಹರಿಜನರಿಗೆ ಕಾಳು ತಂದುಕೊಂಡಬೇಕು. ತೂಕ ಅಳತೆಗಳೆಲ್ಲಾ ನ್ಯಾಯಬೆಲೆ ಅಂಗಡಿಯವನ ಮರ್ಜಿಗೆ ಸೇರಿದ ವಿಷಯಗಳು. ಹರಿಜನರು ಈ ಕಟ್ಟಳೆಗೆ ಬದ್ಧರಾಗಿ ನಡೆದುಕೊಳ್ಳುವಂತೆ ಅವರ ತಲೆಯಲ್ಲಿ ’ರಂಗಸ್ವಾಮಿ ದೇವರ’ ಭೂತ ಭಯವನ್ನು ಚೆನ್ನಾಗಿ ತುಂಬಲಾಗಿದೆ.

ಗುಡ್ಡದ ಸಾಂತೇನಹಳ್ಳಿ ರಾಮಲಿಂಗಪ್ಪ, ಪಿ.ಯು.ಸಿ. ಮುಗಿಸಿದ ಒಬ್ಬ ಹರಿಜನ ತರುಣ. ಆಧುನಿಕ ಶಿಕ್ಷಣದಿಂದ ಸ್ವಾಭಿಮಾನವನ್ನು ಬೆಳೆಸಿಕೊಂಡ ಆತ ನ್ಯಾಯಬೆಲೆ ಅಂಗಡಿಯಿಂದ ಕಾಳು ಕೊಳ್ಳುವುದಕ್ಕಾಗಿ ಗೊಲ್ಲರಹಟ್ಟಿಯೊಳಗೆ ಹೋದ. ಅಂಗಡಿಯವನು ಧಾನ್ಯ ತೂಗುತ್ತಿದ್ದಾಗ ಹಟ್ಟಿಯ ತರುಣನೊಬ್ಬ ಅಪರಿಚಿತನಾದ ನೆರೆಯೂರ ಯುವಕನ ಹೆಸರು ಜಾತಿಗಳನ್ನು ಕೇಳಿದ. ರಾಮಲಿಂಗಪ್ಪ ಇದ್ದ ವಿಷಯವನ್ನು ಸಂಕೋಚವಿಲ್ಲದೆ ಹೇಳಿದ. ಹಟ್ಟಿಯ ಕಟ್ಟುಪಾಡು ಮುರಿದಿರುವುದು ಗೊಲ್ಲರ ತರುಣನಿಗೆ ಮಹದಪರಾಧವಾಗಿ ಕಂಡಿತು. ಅವನ ಕೋಪ ನೆತ್ತಿಗೇರಿತು. ’ಮಾದಿಗ ಸೂಳೆಮಗನೆ, ಹಟ್ಟಿಯೊಳಗೆ ಬಂದು ನಮ್ಮ ಕುಲ ಕೆಡಿಸಿದೆಯಲ್ಲೋ’ ಎಂದು ಕತ್ತು ಹಿಡಿದು ಹೊರತಳ್ಳಿದ. ಅಷ್ಟರೊಳಗೆ ಇನ್ನಷ್ಟು ಜನ ಸೇರಿ ಹರಿಜನ ತರುಣನನ್ನು ಅವಾಚ್ಯ ಶಬ್ಧಗಳಿಂದ ಬೈದು ಎಳೆದಾಡಿದರು. ಹಟ್ಟಿಯವರು ತನ್ನ ಮೇಲೂ ಎಲ್ಲಿ ಅಪರಾಧವನ್ನು ಹೊರಿಸುತ್ತಾರೋ ಎಂದು ಹೆದರಿದ ನ್ಯಾಯಬೆಲೆ ಅಂಗಡಿಯವನು ’ಹಟ್ಟಿಯೊಳಗೆ ಬರಬಾರದು ಎಂದು ಗೊತ್ತಿದ್ದೂ ಒಳಗೆ ಬಂದು ಇಷ್ಟೆಲ್ಲಾರಗಳೆ ಮಾಡಿದೆಯಲ್ಲ. ಮೊದಲು ಇಲ್ಲಿಂದ ಹೋಗು’ ಎಂದು ಹೇಳಿ ರಾಮಲಿಂಗಪ್ಪನನ್ನು ಸಾಗು ಹಾಕಿದ.

ಅವಮಾನಿತನಾದ ಈ ತರುಣ ತಹಶೀಲ್‌ದಾರರಿಗೆ ಒಂದು ದೂರು ಸಲ್ಲಿಸಿ ಹರಿಜನರು ನ್ಯಾಯಬೆಲೆ ಅಂಗಡಿಗೆ ನಿರಾತಂಕವಾಗಿ ಹೋಗಿ ಬರುವಂತಿರಬೇಕು ಇಲ್ಲವೆ ನ್ಯಾಯಬೆಲೆ ಅಂಗಡಿಯನ್ನು ಬೇರೆಡೆಗೆ ವರ್ಗಾಯಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾನೆ. ಪೊಲೀಸರಿಗೆ ಮತ್ತೊಂದು ದೂರು ಸಲ್ಲಿಸಿದ್ದಾನೆ.

ನವಂಬರ್ ೧೫ರಂದು ಗಲಾಟೆ ನಡೆದಾಗ ರಾಮಲಿಂಗಪ್ಪ ತನ್ನ ರೇಷನ್ ಕಾರ್ಡನ್ನು ಅಂಗಡಿಯಲ್ಲೇ ಬಿಟ್ಟು ಬಂದಿದ್ದ. ಅದನ್ನು ತರಲು ಆತ ನವಂಬರ್ ೧೯ರಂದು ಮತ್ತೊಮ್ಮೆ ಗೊಲ್ಲರ ಹಟ್ಟಿಗೆ ಹೋದಾಗ ಹಟ್ಟಿಯ ತಿಮ್ಮಪ್ಪ ಮತ್ತು ವೀರನಾಗಪ್ಪ ಎರಡನೆ ಸಾರಿ ಹಲ್ಲೆ ಮಾಡಿ ಜಾತಿ ಹಿಡಿದು ಬೈದು ಎಳೆದಾಡಿದರು. ಈ ಹುಡುಗ ತನ್ನ ಜಾತಿಯಲ್ಲಿ ಹುಟ್ಟಿದ ಏಕೈಕ ಕಾರಣಕ್ಕಾಗಿ ಎರಡು ಸಾರಿ ಹಲ್ಲೆ ಗೀಡಾದ, ಅವಮಾನಿತನಾದ. ಈ ಬಗ್ಗೆ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ನಂ. ೧೬೮/೮೫ ದಿನಾಂಕ ೧೫-೧೧-೮೫ ಮತ್ತು ೧೬೯/೮೫ ದಿನಾಂಕ ೧೯-೧೧-೮೫- ಎರಡೂ ಕೇಸ್ ನೊಂದಾಯಿಸಲಾಗಿದೆ.

ಇದಾದ ನಂತರ ಗುಡ್ಡದ ಸಾಂತನಹಳ್ಳಿಯ ೨೫ ಹರಿಜನ ಕುಟುಂಬಗಳು ನ್ಯಾಯಬೆಲೆ ಅಂಗಡಿಗೆ ಮುಕ್ತವಾಗಿ ಹೋಗಿಬರಲು ಅವಕಾಶ ವಿರುವಂತೆ ಏರ್ಪಾಟು ಮಾಡಬೇಕೆಂದು ತಹಶೀಲ್‌ದಾರರಿಗೆ ಮನವಿ ಸಲ್ಲಿಸಿದ್ದಾರೆ.

ಅವರು ಬರೆದ ಅರ್ಜಿಯಲ್ಲಿ "ಮೇಲು ಜಾತಿಯಾವರಾದ ಗೊಲ್ಲರ ಜನಾಂಗವು ಕೀಳು ಜಾತಿಯಾದ ಹರಿಜನರ ಮೇಲೆ ಹಲ್ಲೆ ನಡೆಸಿದ ಬಗ್ಗೆ ..." ಎಂದು ವಿಷಯವನ್ನು ಸೂಚಿಸಿರುವುದು ಗಮನಾರ್ಹವಾಗಿದೆ. ವಾಸ್ತವವಾಗಿ ಈ ಹರಿಜನರಿಗೆ ಮೇಲು ಜಾತಿಯವರಾಗಿ ಕಾಣುವ ಈ ಗೊಲ್ಲರು ಸಹ ಹಿಂದುಳಿದ ಪರಿಶಿಷ್ಟ ವರ್ಗದವರಾಗಿದ್ದು ಹರಿಜನರಿಗಿಂತ ಸ್ವಲ್ಪವೇ ಸ್ವಲ್ಪ ಮೇಲಿನವರಾಗಿದ್ದಾರೆ.

ನಮ್ಮ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯಲ್ಲಿ ಅತ್ಯಂತ ಮೇಲು ಜಾತಿಯವನಿಗೂ ಅತ್ಯಂತ ಕೆಳಜಾತಿಯವನಿಗೂ ನೇರ ಸಂಪರ್ಕ ವೇರ್ಪಡುವುದಿಲ್ಲ. ತನಗಿಂತ ತಕ್ಷಣ ಮೇಲಿನವನಿಂದ ಮಾತ್ರ ತಾನು ತುಳಿಯಲ್ಪಡುತ್ತಾನೆಂಬುದು ನಿಜವಾದರೂ ಶ್ರೇಣಿಯಲ್ಲಿ ಅತ್ಯಂತ ಕೆಳಗಿನವನು ತನ್ನ ಭುಜದ ಮೇಲೆ, ಎಲ್ಲ ಮೇಲಿನವರ ಭಾರ ಹೊರಬೇಕಾಗಿರುತ್ತದೆ.

ಗೊಲ್ಲರು ಹರಿಜನರ ವಿರುದ್ಧ ಆಚರಿಸುವ ಅಸ್ಪೃಶ್ಯತೆಗಿಂತ ಕ್ರೂರವಾದ ಅಸ್ಪೃಶ್ಯತೆಯನ್ನು ತಮ್ಮ ಹೆಣ್ಣುಮಕ್ಕಳ ವಿರುದ್ದವೇ ಆಚರಿಸುತ್ತಿದ್ದಾರೆ. ಚಳಿಯಿರಲಿ, ಮಳೆಯಿರಲಿ ಮುಟ್ಟಾದ ಗೊಲ್ಲರ ಹೆಂಗಸರು ಹಟ್ಟಿಯ ಹೊರೆಗೆ ರಾತ್ರಿಗಳನ್ನು ಕಳೆಯಬೇಕಾದ ಅಮಾನುಷ ಪದ್ಧತಿ ಈಗಲೂ ರೂಢಿಯಲ್ಲಿದೆ. ಬಾಣಂತಿ ಹೆಂಗಸು ಆಗತಾನೆ ಹುಟ್ಟಿದ ಮಗುವಿನೊಡನೆ ಕೆಲವು ದಿನ ಹಟ್ಟಿಯೊರಗಿನ ಮುರುಕು ಗುಡಿಸಲಲ್ಲಿ ಕಾಲ ಕಳೆಯಬೇಕೆಂಬ ಕಟ್ಟಳೆ ಇಂದಿಗೂ ಆಚರಣೆಯಲ್ಲಿದೆ. ಪ್ರಕೃತಿ ಹೆಣ್ಣಿನ ಬಗ್ಗೆ ಕಠಿಣತೆಯನ್ನು ತೋರಿದೆ; ಪ್ರಕೃತಿಯ ಕಾಠಿಣ್ಯದ ಜೊತೆಗೆ ಗೊಲ್ಲರ ಹೆಂಗಸರು ತಮ್ಮ ಕುಲಾಚಾರದ ಕ್ರೌರ್‍ಯವನ್ನು ಅನುಭವಿಸಬೇಕಾಗಿದೆ.

ಇಂತಹ ಕ್ರೂರ ಪುರಾತನ ಪದ್ಧತಿಗಳನ್ನು ಬದಿಗೆ ಸರಿಸಿ ತಮ್ಮ ಹೆಂಗಸರ ಮೇಲೆ ಸ್ವಲ್ಪ ದಯೆ ತೋರಿಸಿದರೆ ಅವರ ’ರಂಗಸ್ವಾಮಿ ದೇವರು’ ಮುನಿಯುವುದಿಲ್ಲ ಎಂದು ವಿದ್ಯಾವಂತ ಗೊಲ್ಲರು ತಮ್ಮ ಜನರಿಗೆ ತಿಳಿಹೇಳ ಬೇಕಾಗಿದೆ.

ಹೊಳಲ್ಕೆರೆ ಪೋಲಿಸರು ಅಸ್ಪೃಶ್ಯತೆಯ ಈ ಕೇಸುಗಳನ್ನು ಗಂಭೀರವಾಗಿ ಪರಿಗಣಿಸಿ ಹುಂಬ ಹಲ್ಲೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಂಡಾಗ ಮಾತ್ರ ಮುಂದೆ ಇಂತಹ ಘಟನೆಗಳು ಪುನರಾವರ್ತನೆ ಆಗುವುದನ್ನು ತಪ್ಪಿಸಬಹುದು.