You are hereಮುಗ್ಧ ಹಸುಳೆಗಳಿಗೆ ಕ್ರೂರ ’ಸರಪಳಿ’
ಮುಗ್ಧ ಹಸುಳೆಗಳಿಗೆ ಕ್ರೂರ ’ಸರಪಳಿ’
ಲೇಖಕರು: ಬಿ.ವಿ. ವೀರಭದ್ರಪ್ಪ
ಹಕ್ಕುಗಳು: ಲೇಖಕರವು
ದೇವರುಗಳ ಮತ್ತು ಬಾಬಾಗಳ ಬಗ್ಗೆ ಜನರಲ್ಲಿ ನಂಬಿಕೆಯನ್ನು ಹುಟ್ಟಿಸಲು ಅವರ ಅನುಯಾಯಿಗಳು ಅನುಸರಿಸುವ ತಂತ್ರಗಳು ಎಂತಹ ಮಾರಾಟ ತಜ್ಞರನ್ನೂ ಬೆರಗುಗೊಳಿಸುವಂತಿವೆ. ಅವುಗಳಲ್ಲಿ ಒಂದು ವಿಧಾನವನ್ನು ಕುರಿತು ಮಾತ್ರ ಇಲ್ಲಿ ವಿವರಿಸಲು ಇಚ್ಛಿಸುತ್ತೇನೆ.
ಒಂದು ಸಂಜೆ ನನ್ನ ಹತ್ತು ವರ್ಷದ ಮಗಳು ಸುಧಾ, ಬಹು ಗಂಭೀರವಾಗಿ ಬರೆಯುತ್ತಾ ಕುಳಿತಿರುವುದನ್ನು ಕಂಡು ನನಗೆ ಸಮಾಧಾನವಾಯಿತು. ಮರುದಿನದ ಟೆಸ್ಟ್‌ಗೆ ತಯಾರಿ ಮಾಡಿಕೊಳ್ಳುತ್ತಿರಬಹುದೆಂದು ತಿಳಿದು ಅಗತ್ಯವಿದ್ದರೆ ಸಹಾಯ ಮಾಡಲು ಮುಂದಾದೆ. ಆದರೆ ಅವಳು ಸಂಕೋಚದಿಂದ ಬರವಣಿಗೆ ಸಾಮಗ್ರಿಗಳನ್ನು ಮುಚ್ಚಿಟ್ಟುಕೊಳ್ಳಲು ಯತ್ನಿಸಿದಳು. ನನ್ನೊಡನೆ ಎಂದೂ ಮರೆಮಾಚದವಳು ಹೀಗೆ ಮುಚ್ಚಿಡುವಂತಹ ವಿಷಯ ಏನಿರಬಹುದೆಂದು ಊಹಿಸದಾದೆ. ಮುಚ್ಚಿರುವುದೇನೆಂದು ಕೇಳಿದೆ. ಅವಳು ಅರೆಮನಸ್ಸಿನಿಂದ ಎಲ್ಲ ತೋರಿಸಿದಳು.
ಒಂದು ತುಂಡು ಕಾಗದದಲ್ಲಿ ’ಸತ್ಯ ಸಾಯಿ ಸಾಯಿಬಾಬಾ ಸತ್ಯಸಾಯಿ ಸಾಯಿ ಸತ್ಯ ಸತ್ಯ’ ಎಂದು ಬರೆದಿತ್ತು. ಅದರ ಕೆಳಗೆ ಅಂಥದೇ ಹತ್ತು ಕಾಗದಗಳಲ್ಲಿ ಬರೆದು ಹತ್ತು ಜನರಿಗೆ ಹಂಚಿದರೆ ಮನಸ್ಸಿನ ಆಸೆಗಳು ಕೈಗೂಡುವುವೆಂದೂ, ಹಾಗೆ ಮಾಡದಿದ್ದಲ್ಲಿ ಅನೇಕ ತೊಂದರೆಗಳಿಗೆ ಗುರಿಯಾಗಬೇಕಾಗಬಹುದೆಂದೂ ಎಚ್ಚರಿಸಲಾಗಿತ್ತು. ಅಲ್ಲದೆ ಅದರಂತೆ ಮಾಡಿದ ಕೆಲವರಿಗೆ ಕಷ್ಟ ನಿವಾರಣೆಯಾಗಿ ನೂರಾರು ರೂಪಾಯಿ ಲಾಭ ಆದದ್ದು, ಮಾಡದ ಇತರ ಕೆಲವರಿಗೆ ಸಾವು ನೋವು, ನೂರಾರು ರೂಪಾಯಿ ನಷ್ಟ ಆದದ್ದು ವಿವರಿಸಲಾಗಿತ್ತು. ನನಗೆ ಎಲ್ಲಾ ಸ್ಪಷ್ಟವಾಯಿತು.
ಆ ಕಾಗದಗಳನ್ನು ಚೂರು ಚೂರು ಮಾಡಿ ಅವಳ ಕೆನ್ನೆಗೆ ಎರಡು ಬಾರಿಸಬೇಕೆನಿಸುವಷ್ಟು ಸಿಟ್ಟು ಬಂತು. ಹಾಗೆ ಮಾಡಿ ಎಳೆಯ ಮನಸ್ಸಿನ ಮೇಲೆ ಆಘಾತ ಮಾಡುವುದು ಸರಿಯಲ್ಲವೆಂದು ಸಂಯಮ ತಂದುಕೊಂಡೆ. ಕ್ಷಣ ಆಲೋಚಿಸಿ, ಮುಖದ ಮೇಲೆ ಮಂದಹಾಸ ತುಳುಕಿಸಿ ’ನಿನ್ನ ಮನಸ್ಸಿನಲ್ಲಿ ಏನು ಆಸೆ ಇದೆ. ಮರೆಮಾಚದೆ ಹೇಳು’ ಎಂದೆ. ಅವಳು ಸ್ವಲ್ಪ ಧೈರ್ಯ ತಂದುಕೊಂಡು ಈ ಸಾರಿಯ ಟೆಸ್ಟ್‌ನಲ್ಲಿ ಮೊದಲ ಐದರಲ್ಲೊಂದು ರ್‍ಯಾಂಕ್ ಪಡೆಯಬೇಕೆಂದಿರುವೆ ಎಂದಳು. ಅವಳು ಇದುವರೆಗೂ ೧೦ರಿಂದ ೧೫ನೇ ರ್‍ಯಾಂಕುಗಳಲ್ಲಿ ಒಂದನ್ನು ಪಡೆಯುತ್ತಿದ್ದಳು. ತಾಳ್ಮೆಯಿಂದ ಅವಳನ್ನು ಕುರಿತು, "ನೋಡು ಸಾಯಿಬಾಬಾ ಸರಪಳಿ ಕಾಗದವನ್ನು ಶ್ರದ್ಧೆಯಿಂದ ಬರೆದಿದ್ದೀಯ, ಅವುಗಳನ್ನು ಹತ್ತು ಜನರಿಗೆ ಹಂಚುತ್ತೀಯೆ, ಅದರಲ್ಲಿ ಬರೆದಿರುವುದು ನಿಜವಾದರೆ ನಿನಗೆ ಮುಂದಿನ ತಿಂಗಳು ಮೊದಲ ಐದರಲ್ಲೊಂದು ರ್‍ಯಾಂಕು ಖಂಡಿತ ಸಿಗುತ್ತೆ. ಅದರಲ್ಲಿ ಬರೆದಿರುವುದು ಸುಳ್ಳಾದರೆ ಸಿಗೋದಿಲ್ಲ. ಇದು ಒಂದು ಪ್ರಯೋಗ ಎಂದು ತಿಳಿದುಕೋ. ಮುಂದಿನ ತಿಂಗಳು ನಿನ್ನ ’ಪ್ರಗತಿ’ಯನ್ನು ನನಗೆ ತೋರಿಸು" ಎಂದು ಹೇಳಿ ಕಳಿಸಿದೆ.
ಒಂದು ದಿನ ಶಾಲೆಯಿಂದ ಬಂದ ಅವಳು ಇದ್ದಕ್ಕಿದ್ದಂತೆ ಕೋಣೆಯ ಮೂಲೆಯನ್ನು ಸೇರಿಬಿಟ್ಟಳು. ಅವಳ ತಾಯಿ ’ಯಾಕೆ ಏನಾಯಿತು’ ಎಂದರೂ ಉತ್ತರವಿಲ್ಲ. ’ನಿಮ್ಮ ಮುದ್ದಿನ ಮಗಳು ಮೂಲೆ ಸೇರಿದ್ದಾಳೆ. ಏನೋ ವಿಚಾರಿಸಿ’ ಎಂದು ನನ್ನ ಹೆಂಡತಿ ಹೇಳಿದಾಗ ನನಗೆ ಅಚ್ಚರಿಯಾಗಲಿಲ್ಲ. ಅಂತಹ ಸುದ್ದಿಯನ್ನು ನಾನು ನಿರೀಕ್ಷಿಸುತ್ತಲೇ ಇದ್ದೆ. ಸುಧಾ, ಬಾ ಇಲ್ಲಿ’ ಎಂದೆ. ಅವಳು ತಲೆತಗ್ಗಿಸಿ ಸಪ್ಪೆ ಮೋರೆ ಮಾಡಿಕೊಂಡು ಬಂದು ದೂರವೇ ನಿಂತಳು. ’ನಿನ್ನ ಪ್ರಗತಿ ವರದಿ ತಾ’ ಎಂದೆ. ಅವಳ ಕಣ್ಣಿಂದ ಕೋಡಿ ಹರಿಯಿತು. ನಿಧಾನವಾಗಿ ತನ್ನ ಪ್ರಗತಿ ವರದಿಯನ್ನು ಮುಂದಿಟ್ಟಳು. ಕಳೆದ ಟೆಸ್ಟ್‌ನ ಫಲಿತಾಂಶ ಅಲ್ಲೇ ದಾಖಲಾಗಿತ್ತು. ಎಲ್ಲ ವಿಷಯಗಳಲ್ಲಿ ಪಾಸಾಗಿದ್ದಳಾದರೂ, ಗಳಿಸಿದ ರ್‍ಯಾಂಕು ೧೮ನೆಯದಾಗಿತ್ತು. ಅವಳ ಮುಖ ನೋಡಿದೆ. ಕೆನ್ನೆಗುಂಟ ನೀರು ಇಳಿಯುತ್ತಲೇ ಇತ್ತು. ಹತ್ತಿರ ಕೂರಿಸಿಕೊಂಡು ಬೆನ್ನುತಟ್ಟಿ ಹೇಳಿದ. ’ನೀನು ಮೊದಲ ರ್‍ಯಾಂಕು ಪಡೆಯುವುದಕ್ಕೂ ಸಾಯಿಬಾಬಾ ಹೆಸರು ಬರೆಯುವುದಕ್ಕೂ ಏನು ಸಂಬಂಧ? ಮೊದಲಿನಂತೆ ಓದಿದ್ದರೆ ೧೫ನೇ ರ್‍ಯಾಂಕಾದರೂ ಗಿಟ್ಟುತ್ತಿತ್ತು. ನೋಡು ನೀನು ನಂಬಿದ ನಿನ್ನ ಸಾಯಿಬಾಬಾ ನಿನ್ನನ್ನು ಇನ್ನೂ ಮೂರು ರ್‍ಯಾಂಕು ಕೆಳಗೆ ತಳ್ಳಿದ’ ಎಂದು ಸಮಾಧಾನಪಡಿಸಿದೆ.
ಅವಳ ಪ್ರಯೋಗವೇ ಅವಳಿಗೆ ಪಾಠ ಕಲಿಸಿತ್ತು. ಪರೀಕ್ಷೆಯಲ್ಲಿ ಉತ್ತಮ ರ್‍ಯಾಂಕು ಗಳಿಸಲು ಕಠಿಣ ಅಭ್ಯಾಸ ಬಿಟ್ಟು ಸುಲಭೋಪಾಯವಿಲ್ಲ ವೆಂದು ಈ ಅನುಭವ ಅವಳಿಗೆ ಮನವರಿಕೆ ಮಾಡಿಕೊಟ್ಟಿತು.
ಸಾಯಿಬಾಬಾ ಹೆಸರಿನಲ್ಲಿ ಮಾತ್ರವಲ್ಲ, ತಿರುಪತಿ ವೆಂಕಟರಮಣ, ಮಂತ್ರಾಲಯದ ರಾಘವೇಂದ್ರ, ಧರ್ಮಸ್ಥಳದ ಮಂಜುನಾಥ, ಜೀಸಸ್ ಕ್ರೈಸ್ತ, ಅಯ್ಯಪ್ಪ ಸ್ವಾಮಿ ಮುಂತಾದ ಅನೇಕ ಹೆಸರುಗಳಲ್ಲಿ ಮುಗ್ಧರನ್ನು ದಾರಿ ತಪ್ಪಿಸುವ ಇಂತಹ ಪತ್ರಗಳು ಅಂಚೆಯ ಮೂಲಕ ಬರುತ್ತಲೇ ಇರುತ್ತವೆ.
ಆಸೆ ತೋರಿಸಿ, ಅಂಜಿಸಿ ಭಕ್ತಕೋಟಿಯನ್ನು ಬೆಳೆಸುವ ಇವರ ಯತ್ನ ಹಾಸ್ಯಾಸ್ಪದವಾಗಿದೆಯಲ್ಲದೆ, ಅವರ ತಂತ್ರಗಳು ಯಾವ ಕೀಳು ಮಟ್ಟವನ್ನು ತಲುಪಿವೆ ಎಂಬುದಕ್ಕೆ ಸಾಕ್ಷಿಯಾಗಿದೆ.
- Login or register to post comments
- Email this page