You are hereಮದ್ಯಪಾನ: ನಮ್ಮ ಪೂರ್ವಿಕರು ಕಂಡುಹಿಡಿದದ್ದು

ಮದ್ಯಪಾನ: ನಮ್ಮ ಪೂರ್ವಿಕರು ಕಂಡುಹಿಡಿದದ್ದು


ಲೇಖಕರು: ಬಿ.ವಿ. ವೀರಭದ್ರಪ್ಪ
ಹಕ್ಕುಗಳು: ಲೇಖಕರವು

ಇಂದು ಮಡಿವಂತ ಅಳಲೆಕಾಯಿ ಪಂಡಿತರ ಕೈಯಲ್ಲಿ ಸೆರೆಸಿಕ್ಕಿರುವ ಆಯುರ್ವೇದ ಕ್ರಿ.ಪೂ. ೫೦೦ ರಷ್ಟು ಹಿಂದೆಯೇ ಪಕ್ಕಾ ವೈಜ್ಞಾನಿಕ ಪದ್ಧತಿಯನ್ನು ಅನುಸರಿಸುತ್ತಿತ್ತು ಎಂದರೆ ಅನೇಕರಿಗೆ ಆಶ್ಚರ್ಯ ವಾಗಬಹುದು. ಆದರೂ ಅದು ನಿಜ. ಸಮಾಜವನ್ನು ತಮ್ಮ ಬಿಗಿ ಮುಷ್ಠಿಯಿಂದ ನಿಯಂತ್ರಿಸುತ್ತಿದ್ದ ಧರ್ಮಶಾಸ್ತ್ರಕಾರರು ತಮ್ಮ ಪ್ರಾಮುಖ್ಯತೆಗೆ ಭಂಗವುಂಟಾದೀತೆಂಬ ಭೀತಿಯಿಂದ ವಿಜ್ಞಾನವನ್ನು ಹತ್ತಿಕ್ಕಲು ಯತ್ನಿಸಿದರು. ಧರ್ಮಶಾಸ್ತ್ರಕಾರರ ಉಪಟಳದಿಂದ ಪಾರಾಗಲು ವಿಜ್ಞಾ ನಿಗಳು ತಮ್ಮ ಕೃತಿಗಳಲ್ಲಿ ಧಾರ್ಮಿಕ ಮೂಢನಂಬಿಕೆಗಳಿಗೆ ಗೌರವ ಸಲ್ಲಿಸಿದಂತೆ ನಟಿಸಿ ತಮ್ಮ ಸಂಶೋಧನೆಗಳನ್ನು ಮುಂದುವರಿಸಬೇಕಾದುದು ಅನಿವಾರ್ಯವಾಯಿತು.

ಮದ್ಯ ಸೇವನೆಯು ಮಾನವನ ದೇಹ ಮತ್ತು ಮನಸ್ಸುಗಳ ಮೇಲೆ ಬೀರುವ ಪರಿಣಾಮವನ್ನು ವೈಜ್ಞಾನಿಕವಾಗಿ ಅಭ್ಯಸಿಸಿದ ಚರಕಸಂಹಿತೆಯ ವೈದ್ಯರ ಅಭಿಪ್ರಾಯವನ್ನು ಅವರ ಮಾತಿನಲ್ಲೇ ಇಲ್ಲಿ ಸಂಗ್ರಹಿಸಲಾಗಿದೆ:

"ಬೇರೆ ಬೇರೆ ವಸ್ತುಗಳಿಂದ ತಯಾರಾದ ಮದ್ಯ ಬೇರೆ ಬೇರೆ ಗುಣಗಳನ್ನು ಹೊಂದಿರುತ್ತದೆ. ದೇಹದ ಮೇಲೆ ಅದರ ಪ್ರಭಾವ ಬೇರೆ ಬೇರೆ ಯಾಗಿರುತ್ತದೆ. ಮತ್ತೇರಿಸುವ ಸ್ವಭಾವ ಅದಕ್ಕಿರುವುದರಿಂದ ಅದು ಉಂಟುಮಾಡುವ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳ ದೃಷ್ಟಿಯಿಂದ ಅದನ್ನು ನೋಡಬೇಕು.

"ಒಬ್ಬ ವ್ಯಕ್ತಿ ತನ್ನ ಶಕ್ತಿಗನುಸಾರವಾಗಿ, ಹರ್ಷಚಿತ್ತನಾಗಿ, ಆರೋಗ್ಯ ದಾಯಕ ಆಹಾರದೊಡನೆ, ಸರಿಯಾದ ರೀತಿಯಲ್ಲಿ, ಸರಿಯಾದ ಪ್ರಮಾಣದಲ್ಲಿ ಮದ್ಯವನ್ನು ತೆಗೆದುಕೊಂಡಿದ್ದಾದರೆ ಅದು ಅವನಿಗೆ ಅಮೃತ ಸಮಾನ ವಾಗುತ್ತದೆ. ಆದರೆ ಕೈಗೆ ಎಟ್ಟುಕಿದ್ದನ್ನು, ಅವಕಾಶ ಸಿಕ್ಕಿದಾಗಲೆಲ್ಲ ಕುಡಿಯುವವನಿಗೆ ಮತ್ತು ಒಂದೇ ಸಮನೆ ದುಡಿದು ದುಡುದು ದೇಹಬಡಕಲಾದವನಿಗೆ ಅದೇ ಮದ್ಯ ವಿಷವಾಗಿ ಪರಿಣಮಿಸುತ್ತದೆ."

ಪ್ರಾಚೀನ ಭಾರತದ ವೈದ್ಯರು ಮದ್ಯಪಾನವನ್ನು ನಿರ್ದಿಷ್ಟವಾಗಿ ಅರ್ಥಮಾಡಿಕೊಂಡಿದ್ದಾರೆ. ಅವರ ವಿಶ್ಲೇಷಣೆ ಆಧುನಿಕರಿಗೂ ಆಸಕ್ತಿ ಯನ್ನುಂಟು ಮಾಡುವಂತಿದೆ. ಇನ್ನಷ್ಟು ವಿವರವಾಗಿ ಅವರ ವಿಶ್ಲೇಷಣೆಯನ್ನು ಗಮನಿಸೋಣ:

"ಮದ್ಯಪಾನ ಮಾಡುವ ವ್ಯಕ್ತಿಯಲ್ಲಿ ಉಂಟಾಗುವ ಅಮಲನ್ನು ಮೂರು ಹಂತಗಳಲ್ಲಿ ಗುರುತಿಸಲಾಗಿದೆ; ಮೊದಲನೆಯದು, ಮಧ್ಯದ್ದು ಅಥವಾ ಎರಡನೆಯದು ಮತ್ತು ಕೊನೆಯದು ಅಥವಾ ಮೂರನೆಯದು. ಅವುಗಳಲ್ಲಿ ಪ್ರತಿಯೊಂದರ ಗುಣಾವಗುಣಗಳನ್ನು ವಿವರಿಸುತ್ತೇವೆ. ಅದು ಉಲ್ಲಾಸ, ಉತ್ಸಾಹಗಳನ್ನು ಉಂಟುಮಾಡುತ್ತದೆ. ಆಹಾರ ಪಾನೀಯಗಳ ಬಗ್ಗೆ ಸೂಕ್ಷ್ಮ ವಿವೇಚನೆ ಹಾಗೂ ಸಂಗೀತ, ಹಾಡು, ತುಂಟಾಟ ಮತ್ತು ಕಥೆಗಳ ಬಗ್ಗೆ ಆಸಕ್ತಿಯನ್ನು ಹೆಚ್ಚಿಸುತ್ತದೆ. ಅದು ಬುದ್ಧಿಶಕ್ತಿ ಅಥವಾ ಜ್ಞಾಪಕಶಕ್ತಿಯನ್ನು ಕುಂದಿಸುವುದಿಲ್ಲ ಮತ್ತು ಇಂದ್ರಿಯ ಸುಖಗಳಿಗೆ ಬಾಧಕವನ್ನುಂಟುಮಾಡುವುದಿಲ್ಲ. ಅದು ಸುಖ ನಿದ್ರೆ ಮತ್ತು ಸಂತೋಷದಾಯಕ ಎಚ್ಚರಿಕೆಯನ್ನು ಹೆಚ್ಚಿಸುತ್ತದೆ. ಇದು ಮದ್ಯ ಸೇವನೆಯಮೊದಲ ಅಥವಾ ಸಂತೋಷದಾಯಕ ಹಂತವಾಗಿದೆ.

ಸಂಬಂಧವಿಲ್ಲದ ನೆನಪು, ಗೊತ್ತು ಗುರಿ ಇಲ್ಲದ ಮರೆವು. ಆಗಾಗ ಗಂಟಲಾಳದಿಂದ ಬರುವ ಅಸ್ಪಷ್ಟ ತೊದಲು ನುಡಿ, ವಿವೇಚನೆಯಿಲ್ಲದ ಮಾತು, ಅಸ್ಥಿರ ನಡೆ, ನಿಲುವು, ಕುಳಿತುಕೊಂಡಾಗ, ಊಟ ಪಾನೀಯಗಳಲ್ಲಿ ತೊಡಗಿದಾಗ ಅಸಭ್ಯ ನಡತೆ ಇವು ಮದ್ಯಪಾನದಿಂದುಂಟಾದ ಎರಡನೆ ಹಂತದ ಚಿಹ್ನೆಗಳು.

ಎರಡನೆಯ ಹಂತವನ್ನು ದಾಟಿ ಮೂರನೆಯ ಹಂತವನ್ನು ತಲುಪುವ ಮುನ್ನ ರಾಜಸ ಮತ್ತು ತಾಮಸ ಸ್ವಭಾವದ ವ್ಯಕ್ತಿಗಳು ಮಾಡದಿರುವ ಅನುಚಿತ ವರ್ತನೆಯೇ ಇಲ್ಲ.

ಅನೇಕ ಕಷ್ಟಗಳಿಂದ ಕೂಡಿದ ದುರಂತದ ಪ್ರಪಾತದತ್ತ ಕರೆದೊಯ್ಯುವ ದಾರಿಯನ್ನು ಯಾವ ಪಯಣಿಗ ಆರಿಸಿಕೊಳ್ಳುತ್ತಾನೆ? ಅದೇ ರೀತಿ ವಿವೇಕವುಳ್ಳ ಯಾವನು ಮತಿಭ್ರಮಣೆಯೋ ಎಂಬಂತಹ ಅಮಲಿನ ಭಯಾನಕ ಸ್ಥಿತಿಯನ್ನು ತಲುಪಲು ಇಷ್ಟ ಪಡುತ್ತಾನೆ?

ಅಮಲಿನ ಮೂರನೆ ಹಂತವನ್ನು ತಲುಪಿದಾಗ ಅವನು ಶಕ್ತಿಗುಂದಿ ಕಡಿದ ಮರದಂತೆ ಬಿದ್ದಿರುತ್ತಾನೆ. ಅಮಲು ಮತ್ತು ಮಂಪರಿನ ಆಳದಲ್ಲಿ ಅವನು ಮನಸ್ಸು ಮುಳುಗಿಹೋಗಿರುತ್ತದೆ. ಅವನು ಬದುಕಿದ್ದರೂ ಸತ್ತ ಮನುಷ್ಯನಂತಿರುತ್ತಾನೆ.

ವಸ್ತುಗಳ ಅಥವ ಸ್ನೇಹಿತರ ಗುಣಗಳಲ್ಲಿ ಅವನು ತಾರತಮ್ಯವನ್ನು ಕಾಣಲಾರ. ತಾನು ಯಾವ ಉದ್ದೇಶಕ್ಕಾಗಿ ಮದ್ಯ ಸೇವಿಸಿದನೋ ಆ ಸುಖಾನುಭವದ ಅರಿವೂ ಅವನಿಗಿರುವುದಿಲ್ಲ.

ತಾನು ಏನನ್ನು ಮಾಡಬೇಕು, ಏನನ್ನು ಮಾಡಬಾರದು, ಯಾವುದು ಸುಖ, ಯಾವುದು ದುಃಖ, ಯಾವುದು ಒಳ್ಳೆಯದು, ಕೆಟ್ಟದ್ದು ಎಂಬ ತಾರತಮ್ಮವನ್ನು ಅರಿಯಲಾರದಂತಹ ಸ್ಥಿತಿಯನ್ನು ಹೊಂದಲು ಯಾವ ವಿವೇಕಿ ಇಷ್ಟಪಡುತ್ತಾನೆ?

ಅವನ ದುರಭ್ಯಾಸಕ್ಕಾಗಿ ಅವನನ್ನು ಅಯೋಗ್ಯ ಎಂದು ಪರಿಗಣಿಸುತ್ತಾರೆ. ಕೊನೆಗೆ ಅವನು ತನ್ನ ದುಶ್ಚಟದಿಂದ ತೀವ್ರ ರೋಗಗಳಿಗೆ ಬಲಿಯಾಗುತ್ತಾನೆ."

ಮಿತಿಮೀರಿದ ಕುಡಿತದಿಂದಾಗುವ ಕೆಟ್ಟ ಪರಿಣಾಮಗಳ ಬಗ್ಗೆ ಚರಕ ಸಂಹಿತೆಗೆ ಅರಿವಿದೆ. ಅದು ಕುಡಿತದ ಚಟವನ್ನು ತಪ್ಪಿಸಲು ಕೆಲವು ನಿವಾರಣೋಪಾಯಗಳನ್ನು ಸೂಚಿಸುತ್ತದೆ. ಅವುಗಳಲ್ಲಿ ನಿಯಂತ್ರಿತ ಮದ್ಯ ಸೇವನೆಯೂ ಸೇರಿರುವುದಲ್ಲದೆ ಧರ್ಮ ಮತ್ತು ನೀತಿಶಾಸ್ತ್ರದ ರೂಢಿಗಳಿಗೆ ವಿರುದ್ಧವಾದ "ತರುಣಿಯರ ಬೆಚ್ಚನೆ ದೇಹದ ಪ್ರೇಮಾಲಿಂಗನ, ಅವರ ಸೊಂಟ ತೊಡೆ ಮತ್ತು ತುಂಬಿದೆದೆಯ ಬಿಗಿಯಪ್ಪುಗೆಯ ನೆರವು" ಪಡೆಯಲು ಸಹ ಸೂಚಿಸಲಾಗಿದೆ. ಏನೇ ಆದರೂ, ಪ್ರಾಚೀನ ವೈದ್ಯರು ಕುಡುಕರ ಸ್ವಭಾವ ನೋಡಿ ಮದ್ಯಪಾನದ ಬಗ್ಗೆ ಅಥವಾ ಕುಡಿತದ ಕೆಟ್ಟ ಪರಿಣಾಮಗಳನ್ನು ನೋಡಿ ಮದ್ಯದ ಸಹಜ ಗುಣಗಳ ಬಗ್ಗೆ ತೀರ್ಪೂ ನೀಡಲು ನಿರಾಕರಿಸುತ್ತಾರೆ. ಈ ವಿಷಯವನ್ನು ಕುರಿತು ಚರಕ ಸಂಹಿತೆ ತನ್ನ ನಿಲುವನ್ನು ಈ ರೀತಿ ಸ್ಪಷ್ಟಪಡಿಸುತ್ತದೆ:

ಮದ್ಯವನ್ನು ಉಚಿತ ರೀತಿಯಲ್ಲಿ ಸೇವಿಸಿದಾಗ ಉಲ್ಲಾಸ, ಧೈರ್ಯ, ಸಂತೋಷ, ಶಕ್ತಿ, ಆರೋಗ್ಯ, ಪೌರುಷ ಮತ್ತು ಆನಂದದಾಯಕ ಅಮಲನ್ನು ನೀಡುತ್ತದೆ.

ಅದು ಹಸಿವು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಧ್ವನಿ ಮತ್ತು ರೂಪವನ್ನು ಉತ್ತಮಗೊಳಿಸುತ್ತದೆ. ಅದು ಪುಷ್ಟಿಕಾರಕ ಮತ್ತು ಶಕ್ತಿದಾಯಕ ಔಷಧ, ಅದು ನಿದ್ರೆಬಾರದ ರೋಗಿಗಳಿಗೆ ನಿದ್ರಾಜನಕ ಔಷಧಿಯಂತೆ ವರ್ತಿಸುತ್ತದೆ ಮತ್ತು ಸಂಕೋಚ ಸ್ವಭಾವದವರಿಗೆ ಮಾತನಾಡಲು ಹುಮ್ಮಸ್ಸು ನೀಡುತ್ತದೆ.

ಮದ್ಯ ಸೇವನೆಯ ಮೊದಲ ಹಂತದಲ್ಲಿ, ಎಳೆಯರಿರಲಿ ವಯಸ್ಸಾದವರಿರಲಿ ಎಲ್ಲರಲ್ಲೂ, ಪಂಚೇಂದ್ರಿಯಗಳ ಮೂಲಕ ಉಂಟು ಮಾಡುವ ಸಂತೋಷಕ್ಕೆ ಸರಿಸಮವಾದುದು ಪ್ರಪಂಚದಲ್ಲಿ ಇನ್ನೊಂದಿಲ್ಲ."

ಚರಕ ಸಂಹಿತೆಯ ಪ್ರಕಾರ ಎರಡೂವರೆ ಸಾವಿರ ವರ್ಷಗಳ ಹಿಂದಿನ ಆಯುರ್ವೇದ ವೈದ್ಯರು ಮದ್ಯಪಾನದ ಪರಿಣಾಮಗಳನ್ನು ಅರ್ಥ ಮಾಡಿಕೊಂಡ ರೀತಿ ಇದು. ಆಧುನಿಕ ವೈದ್ಯರ ಅಭಿಪ್ರಾಯಗಳು ಇದಕ್ಕಿಂತ ಯಾವ ರೀತಿ ಭಿನ್ನವಾಗಿವೆ?