You are hereಮಕ್ಕಳನ್ನು ಧರ್ಮದ ಉರುಳಿಗೆ ಸಿಲುಕಿಸುವ ಪಠ್ಯಪುಸ್ತಕಗಳು
ಮಕ್ಕಳನ್ನು ಧರ್ಮದ ಉರುಳಿಗೆ ಸಿಲುಕಿಸುವ ಪಠ್ಯಪುಸ್ತಕಗಳು
ಲೇಖಕರು: ಬಿ.ವಿ. ವೀರಭದ್ರಪ್ಪ
ಹಕ್ಕುಗಳು: ಲೇಖಕರವು
ಪಠ್ಯ ಪುಸ್ತಕಗಳು ಮಕ್ಕಳ ಮನೋವಿಕಾಸಕ್ಕೆ ಮತ್ತು ವ್ಯಕ್ತಿತ್ವದ ಬೆಳವಣಿಗೆಗೆ ಸುಲಭವಾಗಿ ದೊರೆಯುವ ಅತ್ಯಮೂಲ್ಯ ಸಾಧನಗಳು. ತಮ್ಮ ಐದನೇ ವರ್ಷದಿಂದಲೇ ಮಕ್ಕಳು ಪಠ್ಯಪುಸ್ತಕಗಳ ಪ್ರಭಾವಕ್ಕೆ ಒಳಗಾಗುತ್ತಾರೆ. ಅವರು ಶಾಲಾ ಕಾಲೇಜುಗಳಲ್ಲಿ ತಮ್ಮ ಶಿಕ್ಷಣ ಮುಗಿಸಿ ಜೀವನದಲ್ಲಿ ಕಾಲಿಡುವ ವೇಳೆಗೆ ಅವರ ವ್ಯಕ್ತಿತ್ವಗಳು ಅಪೇಕ್ಷಣೀಯವೋ ಅನಪೇಕ್ಷಣೀಯವೋ ಆದ ಒಂದು ನಿಶ್ಚಿತ ರೂಪವನ್ನು ತಾಳಿರುತ್ತವೆ. ಆದ್ದರಿಂದ ನಾವು ಮಕ್ಕಳಿಗೆ ನೀಡುವ ಶಿಕ್ಷಣದ ಸ್ವರೂಪದ ಬಗ್ಗೆ ನಮಗೆ ನಿರ್ದಿಷ್ಟ ನಿಲುವು ಇರಬೇಕಾಗುತ್ತದೆ.
ನಮ್ಮ ದೇಶದ ರಾಜಕೀಯ, ಆರ್ಥಿಕ ಮತ್ತು ಶೈಕ್ಷಣಿಕ ಧೋರಣೆಗಳು ಹೇಗಿರಬೇಕೆಂಬುದನ್ನು ನಮ್ಮ ಸಂವಿಧಾನದ ಮೂಲಕ ನಾವು ನಿರ್ಧರಿಸಿದ್ದೇವೆ. ನಮ್ಮ ಸಂವಿಧಾನ ನಮ್ಮಿಂದಲೇ ಸೃಷ್ಟಿಯಾದ ನಮ್ಮ ಆಶೋತ್ತರಗಳ ದ್ಯೋತಕವಾಗಿದೆ. ನಮ್ಮ ಪಠ್ಯಪುಸ್ತಕಗಳು ನಮ್ಮ ಸಂವಿಧಾನದ ಧ್ಯೇಯೋದ್ದೇಶಗಳಿಗೆ ಪೂರಕವಾಗಿರಬೇಕಲ್ಲವೆ? ಸಂವಿಧಾನದ ಪ್ರಸ್ತಾವನೆಯಲ್ಲೇ ಸ್ಪಷ್ಟಪಡಿಸಿರುವಂತೆ ನಮ್ಮದು ಸರ್ವ ಸ್ವತಂತ್ರ, ಸಮಾಜವಾದಿ ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯ. ನಾವು ಈಗಾಗಲೇ ಅಂತಹ ಜಾತ್ಯತೀತ ಗಣರಾಜ್ಯವನ್ನು ಸ್ಥಾಪಿಸಿದ್ದೇವೆ ಎಂದಲ್ಲ; ಸ್ಥಾಪಿಸಬೇಕಾಗಿದೆ ಎಂದು ಅದರ ಇಂಗಿತ. ಅದೊಂದು ಆದರ್ಶ. ಅಂತಹ ಆದರ್ಶ ಸಾಧನೆಗೆ ಮುಂದಿನ ಜನಾಂಗವನ್ನು ಸಿದ್ಧಪಡಿಸುವಲ್ಲಿ ಪಠ್ಯಪುಸ್ತಕಗಳು ಮಹತ್ತರ ಪಾತ್ರವನ್ನು ವಹಿಸಬೇಕಾಗಿದೆ ಎಂಬುದರಲ್ಲಿ ಬಹುಶಃ ಎರಡು ಮಾತಿಲ್ಲ. ಸೆಕ್ಯುಲರ್ ಪದವನ್ನು ಕನ್ನಡದಲ್ಲಿ ಜಾತ್ಯತೀತ ಎಂದು ಅನುವಾದ ಮಾಡಲಾಗುತ್ತಿದೆ; ಧರ್ಮಾತೀತತೆ ಎಂಬುದು ಹೆಚ್ಚು ಸೂಕ್ತ. ಇವೆರಡಕ್ಕಿಂತಲೂ ಲೌಕಿಕ ಎಂಬುದು ಅತ್ಯುತ್ತಮ ಎಂದು ನನ್ನ ಭಾವನೆ. ’ಸೆಕ್ಯುಲರಿಸಂ’ ಎಂಬುದಕ್ಕೆ ಸರಿಯಾದ ಕನ್ನಡ ಪದವೇನೇ ಇರಲಿ ’ಸೆಕ್ಯುಲರಿಸಂ’ ಪದದ ಪರಿಕಲ್ಪನೆಯೇ ನಮ್ಮ ದೇಶದಲ್ಲಿ ವಿಚಿತ್ರವಾಗಿದೆ, ನಾನು ನನ್ನ ಈ ಲೇಖನದ ಮೂಲಕ ಮಂಡಿಸಬೇಕಾಗಿರುವ ಮುಖ್ಯ ವಿಷಯವನ್ನು ಪ್ರವೇಶಿಸುವ ಮುನ್ನ ಸೆಕ್ಯುಲರಿಸಂ ಪರಿಕಲ್ಪನೆಯನ್ನು ಕುರಿತು ವಿಶ್ಲೇಷಿಸಬೇಕಾದುದು ಅಗತ್ಯವಾಗಿದೆ.
ದೇವರು ಮತ್ತು ದೇವರ ತವರುಮನೆಯಾದ ಧರ್ಮವನ್ನು ದೂರವಿಟ್ಟು ಜನರ ಲೌಕಿಕಾಭ್ಯುದಯವನ್ನು ಗುರಿಯಾಗುಳ್ಳ ಸರ್ಕಾರವನ್ನು ಹೊಂದಿರಬೇಕಾದುದು ಲೌಕಿಕ ಗಣರಾಜ್ಯ (secular republic) ದ ಪರಮ ಗುರಿಯಾಗಿದೆ. ಆದರೆ ಸ್ವಧರ್ಮಾಭಿಮಾನದ ಪಾಪಪ್ರಜ್ಞೆಯಿಂದ ಪೀಡಿತರಾಗಿರುವ ನಮ್ಮ ರಾಜಕೀಯ ತಜ್ಞರು ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣುವುದೇ ಸೆಕ್ಯುಲರಿಸಂ ಎಂದು ಸೆಕ್ಯುಲರಿಸಂಗೆ ತಪ್ಪು ವ್ಯಾಖ್ಯಾನ ನೀಡುತ್ತಾ ಬಂದಿದ್ದಾರೆ. ವಾಸ್ತವವಾಗಿ ಸೆಕ್ಯುಲರಿಸಂ ಎಂದರೆ ದೇವರು ಧರ್ಮಗಳಿಗೆ ಸಂಬಂಧವಿರದ ಮಾನವನನ್ನು ಕೇಂದ್ರವಾಗುಳ್ಳ ರಾಜಕೀಯ ವ್ಯವಸ್ಥೆಯಾಗಿದೆ. ಅಂತೆಯೇ ಲೌಕಿಕ ಗಣರಾಜ್ಯದಲ್ಲಿ ಶಿಕ್ಷಣಕ್ಕೂ ದೇವರನ್ನು ಮೂಲವಾಗುಳ್ಳ ಧರ್ಮಕ್ಕೂ ಯಾವ ಸಂಬಂಧವೂ ಇರಬೇಕಾಗಿಲ್ಲ. ಒಂದು ಪಕ್ಷ ಇದ್ದರೆ ಅದು ದೇವರನ್ನು ವೈಜ್ಞಾನಿಕ ವಿಶ್ಲೇಷಣೆಗೆ ಒಳಪಡಿಸುವ ವಿಧಾನವಾಗಿರಬೇಕು. ಅಂದರೆ ನಮ್ಮ ಪಠ್ಯಪುಸ್ತಕಗಳಲ್ಲಿ ಜನಜೀವನದ ಹಾಸುಹೊಕ್ಕಾಗಿರುವ ದೇವರು, ಧರ್ಮ, ಪುನರ್ಜನ್ಮ ಕರ್ಮ ಸಿದ್ಧಾಂತ, ಅದೃಷ್ಟ, ಸ್ವರ್ಗ, ನರಕಗಳ ಕಲ್ಪನೆಗಳ ಪ್ರಸ್ತಾಪ ಮಾಡಲೇಬಾರದೆಂದಲ್ಲ. ಮಾಡಿದಾಗ ಅವನ್ನು ಸಾಂಪ್ರದಾಯಿಕವಾಗಿ ಮಾಡದೆ ವೈಜ್ಞಾನಿಕವಾಗಿ ವಿಶ್ಲೇಷಿಸಬೇಕು ಎಂದು ಅರ್ಥ. ಶಿಕ್ಷಣ ಕ್ಷೇತ್ರವನ್ನು ಇನ್ನೂ ತಮ್ಮ ಬಿಗಿಮುಷ್ಠಿಯಲ್ಲಿ ಭದ್ರವಾಗಿ ಹಿಡಿದಿಟ್ಟು ಕೊಂಡಿರುವ ನಮ್ಮ ಸಂಪ್ರದಾಯವಾದಿಗಳು ಇಂತಹ ವಾದವನ್ನು ಒಪ್ಪುವುದಿಲ್ಲ. ಹಾಗೆ ಮಾಡುವುದು ನಮ್ಮ ಪುರಾತನ ಸಂಸ್ಕೃತಿಗೇ ಮಾರಕವೆಂದು ಅವರು ಭಾವಿಸುತ್ತಾರೆ. ಪುರಾತನ ಸಂಸ್ಕೃತಿಯನ್ನು ಎತ್ತಿ ಹಿಡಿಯುವುದು ತಮ್ಮ ಆಜನ್ಮ ಹಕ್ಕು ಎಂದು ಅವರು ಭಾವಿಸುತ್ತಾರೆ.
ಸಂವಿಧಾನದತ್ತವಾದ ಮೂಲಭೂತ ಹಕ್ಕುಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅವಕಾಶವಿರುವುದು ನಿಜ. ತಮಗೆ ಇಷ್ಟವಾದ ಧರ್ಮವನ್ನು ಅನುಸರಿಸಲು, ಬೋಧಿಸಲು ಮತ್ತು ಪ್ರಚಾರ ಮಾಡಲು ಎಲ್ಲ ಪ್ರಜೆಗಳಿಗೂ ಸ್ವಾತಂತ್ರ್ಯವಿದೆ. ಆದರೆ ಅವರು ಖಾಸಗಿಯಾಗಿ ಆ ಕೆಲಸ ಮಾಡಬಹುದೇ ಹೊರತು ಸರ್ಕಾರದ ಮಾಧ್ಯಮಗಳ ಮೂಲಕ ಅದನ್ನು ಮಾಡಲಾಗದು. ಪಠ್ಯಪುಸ್ತಕಗಳ ಮೂಲಕ ಹಾಗೆ ಮಾಡುವುದು ಸಂವಿಧಾನ ಬಾಹಿರವಾಗುತ್ತದೆ.
ಆದರೆ ವಾಸ್ತವವಾಗಿ ನಮ್ಮ ಪಠ್ಯಪುಸ್ತಕಗಳಲ್ಲಿ ದೇವರು ಧರ್ಮವನ್ನು ಸ್ವೇಚ್ಛೆಯಾಗಿ ಉಲ್ಲೇಖಿಸಲಾಗಿದೆ. ಕನ್ನಡ ಭಾರತಿ-೧ರ ಮೊದಲ ಪಾಠವೇ ’ಈಶ’ನಿಗೆ ಮೀಸಲಾಗಿದೆ. ಎರಡನೆಯ ಪಾಠದಲ್ಲಿ ’ಈಶನ’ ತೊಡೆಯೇರಿದ ’ಗಣಪ’ನನ್ನು ಕುರಿತು ಇದೆ. ಆರನೆಯ ಪಾಠದಲ್ಲಿ ಧಾರ್ಮಿಕ ಆಚರಣೆಯ ಸಂಕೇತವಾದ ’ರಥ’ ವನ್ನು ಪರಿಚಯಿಸಲಾಗಿದೆ. ಎಂಟನೆಯ ಪಾಠದಲ್ಲಿ ಮತ್ತೊಮ್ಮೆ ’ಬಸವನ ರಥ’ವನ್ನು ಎಳೆದು ತರಲಾಗಿದೆ. ಹದಿನೇಳನೇ ಪಾಠದಲ್ಲಿ ಆಲದ ಮರದ ಕೆಳಗೆ ಕೂತು ದೇವರ ಭಜನೆ ಮಾಡುವ ಋಷಿಯ ಪರಿಚಯ ಇದೆ. ಹದಿನೆಂಟನೆಯ ಪಾಠದಲ್ಲಿ ನೇರವಾಗಿ ಗಣಪನ ಪೂಜಾವಿಧಿಯನ್ನು ನಿರೂಪಿಸಲಾಗಿದೆ. ಇಪ್ಪತ್ತೊಂದನೆಯ ಪಾಠದಲ್ಲಿ ದೇವರಿಗೆ ಪ್ರೀತಿಯನ್ನುಂಟುಮಾಡುವ ಸಂಪಿಗೆಯ ಮರದ ಪರಿಚಯವಿದೆ. ಇಪ್ಪತ್ಮೂರನೆಯ ಪಾಠದಲ್ಲಿ ತಕಲಿಯನ್ನು ಹಿಡಿದರೆ ಕಳೆವುದು ನರಕ, ಬರುವುದು ನಾಕ ಎಂದು ಸಾರಲಾಗಿದೆ. ಇಪ್ಪತ್ತನಾಲ್ಕನೆಯ ಪಾಠದಲ್ಲಿ ಗುರುಪೂಜೆ ಶಾರದ ಪೂಜೆಯನ್ನು ಪರಿಚಯಿಸಲಾಗಿದೆ. ಇಂತಹ ಪುಸ್ತಕವನ್ನು ಲೌಕಿಕ ಗಣರಾಜ್ಯದ ಮುದ್ದು ಮಕ್ಕಳು, ಅವರು ಹಿಂದುಗಳಿರಲಿ, ಮುಸಲ್ಮಾನರಿರಲಿ, ಕ್ರಿಶ್ಚಿಯನ್ನರಿರಲಿ ಪಠ್ಯವನ್ನಾಗಿ ಓದಬೇಕಾಗಿದೆ. ಇದೇನು ಒಂದನೆಯ ತರಗತಿಯ ಪಠ್ಯ ಪುಸ್ತಕವೊ ಅಥವಾ ಹಿಂದೂ ಧರ್ಮದ ಪರಿಚಯ ಕೃತಿಯೋ ಎಂದು ಯಾರಿಗಾದರೂ ಸಂದೇಹವನ್ನುಂಟು ಮಾಡಿದರೆ ಅಚ್ಚರಿ ಪಡಬೇಕಾಗಿಲ್ಲ. ಇದೇ ಮಾತು ಉಳಿದ "ಭಾರತಿ"ಗಳಿಗೂ ಅನ್ವಯಿಸುತ್ತದೆ. ಕನ್ನಡ ಹಿಂದುಗಳ ಭಾಷೆ ಮಾತ್ರವಲ್ಲ, ಕರ್ನಾಟಕದಲ್ಲಿರುವ ಎಲ್ಲರದು ಎಂದು ಹೇಳುವ ನಾವು ಕನ್ನಡ ಪುಸ್ತಕಗಳನ್ನು ಎಲ್ಲ ಧರ್ಮೀಯರೂ ಆದರಿಸುವ ರೀತಿಯಲ್ಲಿ ಬರೆಯುವುದು ಅವಶ್ಯಕವಲ್ಲವೆ? ಎಂಬುದನ್ನು ತೀವ್ರವಾಗಿ ಆಲೋಚಿಸಬೇಕಾಗಿದೆ. ಅಲ್ಪ ಸಂಖ್ಯಾತರು ಕನ್ನಡ ವಿರೋಧಿಗಳು ಎಂದು ನಿಂದಿಸುವ ಮುನ್ನ ಅವರು ಕನ್ನಡ ಕಲಿಯಲು ಇರಬಹುದಾದ ಅಡಚಣೆಗಳೇನು ಎಂಬುದನ್ನು ನಾವು ಆಳವಾಗಿ ಆಲೋಚಿಸಬೇಕು. ಅದರ ಅರ್ಥ ಇತರ ಧರ್ಮಗಳನ್ನು ಕುರಿತ ಪಾಠಗಳನ್ನೂ ಸೇರಿಸಬೇಕಿತ್ತು ಎಂದಲ್ಲ. ಈಗಿರುವ ಧರ್ಮ ಸಂಬಂಧವಾದ ಪಾಠಗಳಿಗೆ ಬದಲು ಮನುಷ್ಯ ಮನುಷ್ಯರಲ್ಲಿ ಮಧುರ ಬಾಂಧವ್ಯ ಬೆಳೆಸಲು ಸಹಾಯಕವಾದ ಪಾಠಗಳನ್ನು ಅಳವಡಿಸಬಹುದಾಗಿತ್ತು ಎಂದು!
ಪಠ್ಯಪುಸ್ತಕಗಳಲ್ಲಿ ದೇವರು, ಧರ್ಮ ಸಂಬಂಧವಾದ ಪಾಠಗಳಿರಬೇಕು ಎಂದು ವಾದಿಸುವವರು, ಅಂತಹ ಪಾಠಗಳಿಂದ ಮಾತ್ರ ಮಕ್ಕಳು ನೀತಿವಂತರಾಗುತ್ತಾರೆ ಎಂದು ಭಾವಿಸುತ್ತಾರೆ. ಇಂದು ನಮ್ಮ ಸಮಾಜ ಅನೀತಿಯ ತುತ್ತತುದಿಯನ್ನು ತಲುಪಿದೆ ಎಂದೂ, ಅಂತಹ ನೈತಿಕ ಅಧಃಪತನಕ್ಕೆ ಧಾರ್ಮಿಕ ಶಿಕ್ಷಣದ ಕೊರತೆಯೇ ಮುಖ್ಯಕಾರಣವೆಂದೂ ಅವರು ವಾದಿಸುತ್ತಾರೆ. ಅವರ ವಾದ ಎಷ್ಟು ನಿರಾಧಾರವಾದುದು ಎಂಬುದನ್ನು ಸ್ಪಷ್ಟ ಪಡಿಸುವುದು ಕಷ್ಟದ ಕೆಲಸವಲ್ಲ. ಬಹು ಸಂಖ್ಯಾತರಾದ ಶೂದ್ರರನ್ನು ವಿದ್ಯೆ ಕಲಿಯಲು ಮತ್ತು ಆಸ್ತಿಗಳಿಸಲು ಅನರ್ಹರನ್ನಾಗಿ ಮಾಡಿದ ಚಾತುರ್ವಣ್ಯ ಧರ್ಮದಿಂದ ನಾವು ನೀತಿ ಕಲಿಯಬೇಕೆ? ಅಸ್ಪೃಶ್ಯತೆ, ದೇವದಾಸಿ ಪದ್ಧತಿ ಮತ್ತು ಸತಿ ಸಹಗಮನಗಳಂತಹ ಕ್ರೂರ ಸಂಪ್ರದಾಯಗಳನ್ನು ಆಚರಣೆಯಲ್ಲಿ ತಂದ ಧರ್ಮದಿಂದ ನಾವು ನೀತಿ ಕಲಿಯಬೇಕೆ? ನಮ್ಮ ರಾಜಕೀಯ, ಸಾಮಾಜಿಕ ವ್ಯವಸ್ಥೆಯಲ್ಲಿ ಎಷ್ಟೇ ಲೋಪದೋಷಗಳಿದ್ದರೂ ಇಂದು ನಾವು ಹಿಂದಿನ ತಲೆಮಾರುಗಳಿಗಿಂತಲೂ ನೈತಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹೆಚ್ಚು ಪ್ರಗತಿಪರವಾದ ಜೀವನವನ್ನು ನಡೆಸುತ್ತಿದ್ದೇವೆ. ಈ ಪ್ರಗತಿಗೆ ಕಾರಣ ಪ್ರಪಂಚದ ಯಾವ ಧರ್ಮವೂ ಅಲ್ಲ. ಸಮಾನತೆ, ಸ್ವಾತಂತ್ರ್ಯ ಮತ್ತು ಸೋದರತ್ವಗಳನ್ನು ಬೋಧಿಸಿದ ಫ್ರೆಂಚ್ ಕ್ರಾಂತಿಗೆ ಮುಂಚಿನ ಮುಕ್ತ ಚಿಂತಕರಿಗೆ, ವೈಚಾರಿಕಯುಗಕ್ಕೆ ನಾಂದಿಯನ್ನು ಹಾಡಿದ ಮಾನವತಾವಾದಿಗಳಿಗೆ, ಧರ್ಮದಿಂದ ಭಿನ್ನವಾದ ಮಾನವೀಯ ನೀತಿಯನ್ನು ಬೋಧಿಸಿದ ನಿರೀಶ್ವರವಾದಿಗಳಿಗೆ, ಅಂತಹ ಕೀರ್ತಿ ಸಲ್ಲುತ್ತದೆ. ಆದ್ದರಿಂದ ನಮ್ಮ ಮಕ್ಕಳನ್ನು ನೀತಿವಂತರನ್ನಾಗಿಸಬೇಕಾಗಿದ್ದರೆ ಮೊದಲು ಅವರನ್ನು ದೇವರು ಮೂಲವಾಗಿರುವ ಧರ್ಮಗಳಿಂದ ದೂರವಿಟ್ಟು ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಶೋಷಣೆಗಳಿಂದ ಮುಕ್ತವಾದ, ಮನುಷ್ಯ ಕೇಂದ್ರವಾಗಿರುವ ಮಾನವೀಯ ನೀತಿಯನ್ನು ಪ್ರತಿಪಾದಿಸುವ ಪಾಠಗಳನ್ನು ಪಠ್ಯಪುಸ್ತಕಗಳಲ್ಲಿ ಸೇರಿಸಬೇಕಾಗಿದೆ.
ಹಾಗಾದರೆ ನೀತಿ ಎಂದರೇನು? ನೈತಿಕ ಶಿಕ್ಷಣವನ್ನು ಕುರಿತು ಆಧುನಿಕ ಶಿಕ್ಷಣ ತಜ್ಞರು ಆಳವಾದ ಸಂಶೋಧನೆಗಳನ್ನು ನಡೆಸಿದ್ದಾರೆ. ಸ್ವಾಯತ್ತತೆ, ವೈಚಾರಿಕತೆ, ಪರೋಪಕಾರ ಮತ್ತು ಹೊಣೆಗಾರಿಕೆ ಪ್ರವೃತ್ತಿಗಳು ನೀತಿಯ ನೆಲೆಗಟ್ಟಾಗಿವೆ ಎಂಬುದು ಅವರ ಅಭಿಪ್ರಾಯ. ಅವರಲ್ಲಿ ವಿಲ್ಸನ್ ಮತ್ತು ಪೀಟರ್ ಗುಂಪಿನವರು ವೈಚಾರಿಕತೆಗೆ ಒತ್ತು ಕೊಟ್ಟರೆ, ಫ್ಲೆಚರ್ ಮತ್ತು ವಿನ್ನಿಕಾಟ್ ಗುಂಪಿನವರು ಪ್ರೀತಿ ಅಥವಾ ಪರೋಪಕಾರಕ್ಕೆ ಒತ್ತು ಕೊಡುತ್ತಾರೆ. ವೈಚಾರಿಕತೆ ಮತ್ತು ಪ್ರೀತಿಗಳು ಪರಸ್ಪರ ಪೂರಕ ಪ್ರವೃತ್ತಿಗಳು ಎಂಬುದು ವಿಲಿಯಂ ಕೇ ಅವರ ಅಭಿಪ್ರಾಯ.
ಮೇಲೆ ಹೇಳಿದ ನಾಲ್ಕು ಪ್ರವೃತ್ತಿಗಳನ್ನು ನೀತಿಯ ಆಧಾರ ಸ್ತಂಭಗಳೆಂದು ಪರಿಗಣಿಸಲು ಕಾರಣಗಳಿವೆ. ನೈತಿಕ ಕ್ರಿಯೆಗೆ ವ್ಯಕ್ತಿ ಸ್ವಾತಂತ್ರ್ಯ ಅತ್ಯವಶ್ಯಕ. ಏಕೆಂದರೆ ಒತ್ತಾಯದಿಂದ ಮಾಡಿದ ಯಾವುದೇ ಕೆಲಸವನ್ನು ನೈತಿಕ ಕ್ರಿಯೆ ಎಂದು ಕರೆಯಲು ಸಾಧ್ಯವಿಲ್ಲ. ಸ್ವಂತ ಇಚ್ಛೆಯಿಂದ ತೆಗೆದುಕೊಂಡ ತೀರ್ಮಾನ ಮಾತ್ರ ನೈತಿಕ ತೀರ್ಮಾನವಾಗುತ್ತದೆ. ಆದರೆ ಸ್ವತಂತ್ರ ತೀರ್ಮಾನವನ್ನು ತೆಗೆದುಕೊಳ್ಳುವ ಮುನ್ನ ಅದು ವೈಚಾರಿಕತೆಯ ಅರ್ಹತೆಯನ್ನು ಹೊಂದಿರಬೇಕು. ಕ್ರಿಯೆಯು ಬೇರೆಯವರ ಮೇಲೂ ತನ್ನ ಪರಿಣಾಮವನ್ನು ಬೀರುವಂತಿದ್ದರೆ ಅಂಥವರ ಹಿತವನ್ನು ಸಹ ತೀರ್ಮಾನಕ್ಕೆ ಮುನ್ನ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಅಂತಿಮವಾಗಿ ಯಾವುದೇ ತೀರ್ಮಾನ ಕಾರ್‍ಯರೂಪಕ್ಕೆ ಬಾರದ ಹೊರತು ಅದಕ್ಕೆ ಬೆಲೆ ಇಲ್ಲವಾದ್ದರಿಂದ ಸ್ವಂತ ಇಚ್ಛೆಯಿಂದ ತೆಗೆದುಕೊಂಡ, ಪರೋಪಕಾರ ಗುಣದಿಂದ ಕೂಡಿದ, ವೈಚಾರಿಕ ತೀರ್ಮಾನವನ್ನು ಒಬ್ಬ ವ್ಯಕ್ತಿ ಕಾರ್‍ಯರೂಪಕ್ಕೆ ತಂದಾಗ ಮಾತ್ರ ಆ ವ್ಯಕ್ತಿಯನ್ನು ನೀತಿವಂತನೆಂದು ಕರೆಯಬಹುದು.
ನೀತಿಯ ಪ್ರವೃತ್ತಿಗಳನ್ನು ಇನ್ನೂ ಸ್ವಲ್ಪ ವಿಶದಪಡಿಸಬಹುದು. ಒಬ್ಬ ವ್ಯಕ್ತಿ ತಾನು ಒಂದು ನೈತಿಕ ಡೋಲಾಯಮಾನ ಸ್ಥಿತಿಯಲ್ಲಿದ್ದಾಗ ಬೇರೆಯವರ ಸಲಹೆ, ಸೂಚನೆ, ಒತ್ತಾಯಗಳಿಗೆ ತನ್ನ ತೀರ್ಮಾನವನ್ನು ಒಳಪಡಿಸದೆ, ತನ್ನ ಸ್ವಂತ ತೀರ್ಮಾನಕ್ಕೆ ಬರುವ ಪ್ರವೃತ್ತಿಯನ್ನು ಸ್ವಾಯತ್ತತೆ ಎಂದು ಕರೆಯಬಹುದು. ಆದರೂ ಅವನು ಬೇರೆಯವರ ಸಲಹೆ ಪಡೆಯಲು ಮತ್ತು ಅದರ ಗುಣದೋಷಗಳನ್ನು ತೂಗಿ ನೋಡಲು ಸ್ವತಂತ್ರನಿರುತ್ತಾನೆ. ಅವನು ತನ್ನ ಗುರು ಹಿರಿಯರ ಮಾರ್ಗದರ್ಶನ ಪಡೆದರೂ ಅದರ ಆದೇಶಕ್ಕೆ ಬದ್ದನಾಗಿರಬೇಕೆಂದು ಭಾವಿಸುವುದಿಲ್ಲ.
ವೈಯಕ್ತಿಕ ಸ್ವಾಯತ್ತತೆಯನ್ನು ಬೆಳೆಸಲು ತರ್ಕಬದ್ಧವಾಗಿ ಚರ್ಚಿಸುವ ಗುಣ ಅತ್ಯವಶ್ಯಕ, ಮಗು ಸ್ವತಂತ್ರವಾಗಿ ಕ್ರಿಯಾಶೀಲವಾಗಿರುವುದರ ಜೊತೆಗೆ ಸ್ವತಂತ್ರವಾಗಿ ಆಲೋಚಿಸುವಂತೆ ಮಾಡುವ ಪ್ರವೃತ್ತಿಯನ್ನು ವೈಚಾರಿಕತೆ ಎಂದು ಕರೆಯಬಹುದು.
ಪರೋಪಕಾರ ಪ್ರವೃತ್ತಿಯು ವಸ್ತುಗಳ ಮತ್ತು ಸ್ಥಳಗಳಿಗಿಂತ ಹೆಚ್ಚಾಗಿ ಜನಗಳ ಬಗ್ಗೆ ನಮಗಿರುವ ಕಾಳಜಿಯನ್ನು ತೋರಿಸುತ್ತದೆ. ಸಂಪೂರ್ಣವಾಗಿ ವೈಚಾರಿಕವಾದ ತೀರ್ಮಾನವು ಹಲವು ವೇಳೆ ಸಂಬಂಧಿಸಿದ ವ್ಯಕ್ತಿಗಳ ಮೇಲೆ ಅನಪೇಕ್ಷಿತ ಪರಿಣಾಮವನ್ನುಂಟುಮಾಡಬಹುದು. ಜನರನ್ನು ಹೊರತುಪಡಿಸಿದ ತೀರ್ಮಾನವು ಅದೆಷ್ಟೇ ವೈಚಾರಿಕವಾಗಿದ್ದರೂ ಅದು ನೈತಿಕವಾಗಿರುವುದಿಲ್ಲ.
ಹೊಣೆಗಾರಿಕೆ ಪ್ರವೃತ್ತಿಯನ್ನು ನಿರೂಪಿಸುವುದು ಕಷ್ಟ. ತಾನು ಕೈಗೊಂಡ ನೈತಿಕ ನಿರ್ಣಯವನ್ನು ಕಾರ್‍ಯರೂಪಕ್ಕೆ ತರುವ ಜವಾಬ್ದಾರಿಯನ್ನೂ ವ್ಯಕ್ತಿ ಹೊಂದಿರುತ್ತಾನೆ. ಹಾಗೆಯೇ ಅವನು ತಾನು ಮಾಡಿದ ಕೆಲಸಕ್ಕೆ ಬಾಧ್ಯವೂ ಆಗಿರಬೇಕಾಗಿರುತ್ತದೆ. ಇಂತಹ ಪ್ರವೃತ್ತಿಯನ್ನು ನೈತಿಕ ಹೊಣೆಗಾರಿಕೆ ಪ್ರವೃತ್ತಿ ಎಂದು ಕರೆಯಬಹುದು.
ಮಕ್ಕಳಲ್ಲಿ ಸ್ವಾಯತ್ತತೆ, ವೈಚಾರಿಕತೆ, ಪರೋಪಕಾರ ಮತ್ತು ಹೊಣೆಗಾರಿಕೆ ಪ್ರವೃತ್ತಿಗಳನ್ನು ಬೆಳೆಸುವ ಪಾಠಕ್ರಮವನ್ನು ನೈತಿಕ ಶಿಕ್ಷಣ ಎಂದು ಕರೆಯಲಾಗುತ್ತಿದೆ. ವಾಸ್ತವವಾಗಿ ನೈತಿಕ ಶಿಕ್ಷಣಕ್ಕೂ ಧಾರ್ಮಿಕ ಶಿಕ್ಷಣಕ್ಕೂ ಇರುವುದು ತೋರಿಕೆಯ ಸಂಬಂಧ ಮಾತ್ರ. ಒಂದರಿಂದ ಇನ್ನೊಂದನ್ನು ಬೇರ್ಪಡಿಸುವುದು ಅತ್ಯವಶ್ಯಕ. ಧಾರ್ಮಿಕ ಶಿಕ್ಷಣದಲ್ಲಿ ದಯೆ, ಪರೋಪಕಾರದಂತಹ ಕೆಲವು ಪ್ರವೃತ್ತಿಗಳನ್ನು ಕಾಣಬಹುದಾದರೂ ಸ್ವಾಯತ್ತತೆ, ವೈಚಾರಿಕತೆ ಮತ್ತು ಹೊಣೆಗಾರಿಕೆಗಳು ಅಲ್ಲಿ ಶೂನ್ಯ. ಅಷ್ಟೇ ಅಲ್ಲ, ಅದಕ್ಕೆ ಪೂರ್ಣ ವಿರುದ್ಧವಾದ ಪ್ರವೃತ್ತಿಗಳನ್ನು ಅಲ್ಲಿ ಪೋಷಿಸಲಾಗುವುದು. ಧಾರ್ಮಿಕ ಶಿಕ್ಷಣವನ್ನು ಪಡೆದ ಮಕ್ಕಳು ಮುಂದೆ ಧರ್ಮದಲ್ಲಿ ನಂಬಿಕೆಯನ್ನು ಕಳೆದುಕೊಳ್ಳಬೇಕಾಗಿ ಬಂದಾಗ ದಯೆ, ಪರೋಪಕಾರ ಪ್ರವೃತ್ತಿಗಳನ್ನು ಕಳೆದುಕೊಳ್ಳುವ ಸಂಭವವಿದೆ.
ಇಂದು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ’ನೈತಿಕ ವಿಜ್ಞಾನ’ ಎಂಬ ಹೆಸರಿನಲ್ಲಿ ಪಠ್ಯಪುಸ್ತಕಗಳನ್ನು ತರಗತಿಗೊಂದರಂತೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಅಭ್ಯಾಸ ಮಾಡಬೇಕಾಗಿದೆ. ಈ ಪುಸ್ತಕಗಳಲ್ಲಿ ನೀತಿಯೂ ಊನ; ವಿಜ್ಞಾನವಂತೂ ಇಲ್ಲವೇ ಇಲ್ಲ. ವಿಜ್ಞಾನ ಪದವನ್ನು ಇದಕ್ಕಿಂತ ಹೆಚ್ಚು ದುರುಪಯೋಗಿಸಲು ಸಾಧ್ಯವೇ ಇಲ್ಲ. ಆಧುನಿಕ ಶಿಕ್ಷಣ ಶಾಸ್ತ್ರದ ಮಾನದಂಡದಿಂದ ನೋಡಿದಾಗ ಈ ಪಠ್ಯಪುಸ್ತಕಗಳು ಎಷ್ಟು ಅಪಾಯಕಾರಿ ಎಂದು ಸ್ಪಷ್ಟವಾಗುತ್ತದೆ. ಉದಾಹರಣೆಗೆ ಎರಡನೆ ತರಗತಿಯ ’ನೈತಿಕ ವಿಜ್ಞಾನ’ದಲ್ಲಿ "ಆದಿಯಲ್ಲಿ ದೇವನೊಬ್ಬನೇ ಇದ್ದ, ನಂತರ ಅವನು ಈ ಜಗತ್ತನ್ನು ಮಾಡಿದ" ಎಂದು ಹೇಳಲಾಗಿದೆ. ದೇವರು ಒಬ್ಬನೇ ಎಲ್ಲಿ ಇದ್ದ? ಅವನನ್ನು ಮಾಡಿದವರು ಯಾರು? ಎಂದು ಮಗು ಪ್ರಶ್ನಿಸಿದರೆ ಗುರುವಿನ ಉತ್ತರವೇನು?
ನಮ್ಮ ಪಠ್ಯಪುಸ್ತಕಗಳ ಜಾತ್ಯತೀತತೆಯ ಅಥವಾ ಲೌಕಿಕತೆಯ ವಿರೋಧಿ ನೀತಿಯನ್ನು ಪಟ್ಟಿ ಮಾಡುತ್ತಾ ಹೋದರೆ ಒಂದು ಪ್ರೌಢ ಪ್ರಬಂಧವೇ ಆದೀತು. ಅಂತಹ ಸಾಹಸಕ್ಕೆ ನಾನಿಲ್ಲಿ ಕೈಹಾಕುವುದಿಲ್ಲ. ಬದಲಾಗಿ, ಪಠ್ಯಪುಸ್ತಕಗಳಲ್ಲಿ ಅಳವಡಿಸಬಹುದಾದ ಒಂದು ಉತ್ತಮ, ಮಾದರಿ ಪಾಠವನ್ನು ಇಲ್ಲಿ ಉದಾಹರಿಸಬಯಸುತ್ತೇನೆ. ದೇವನೂರು ಮಹದೇವ ಅವರ "ಜಾಣೆ ಉಜ್ವಲಾ" (ಸಂಕ್ರಮಣ ೬೮) ಪಾಠವನ್ನು ನೋಡೋಣ.
ಅಮ್ಮ: ಉಜ್ವಲಾ ಏನು ಮಾಡುತ್ತಿದ್ದೀಯೆ?
ಉಜ್ವಲಾ: ಅಮ್ಮ ಓದುತ್ತಿದ್ದೇನೆ.
ಅಮ್ಮ: ಏನು ಓದುತ್ತಿದ್ದೀಯೆ?
ಉಜ್ವಲಾ: ಗೋವಿನ ಕಥೆ ಓದುತ್ತಿದ್ದೇನೆ.
ಅಮ್ಮ: ಜಾಣೆ, ಓದು.
ಉಜ್ವಲಾ: ...ಹಿಂದೆ ಬಂದರೆ ಒದೆಯಬೇಡಿರಿ.
ಮುಂದೆ ಬಂದರೆ ಹಾಯ ಬೇಡಿರಿ...
ಅಮ್ಮ: ಉಜ್ವಲಾ, ನೀನು ಓದುತ್ತಿರು, ನಾನು ದೇವಸ್ಥಾನಕ್ಕೆ ಹೋಗುವೆ.
ಉಜ್ವಲಾ: ಅಮ್ಮಾ ಅಮ್ಮಾ ನಾನೂ ಬರುವೆ.
ಅಮ್ಮ: ಹಾಗಾದರೆ ಬಾ ಹೋಗೋಣ.
ಉಜ್ವಲಾ: ಇದೋ ದೇವಸ್ಥಾನ, ಅಮ್ಮಾ ದೇವಸ್ಥಾನದ ಮುಂದೆ ಕಣ್ಣು
ಕಾಲು ಇಲ್ಲದವರು ಯಾಕೆ ಕೈಮುಗಿಯುತ್ತಾ ಇದ್ದಾರೆ?
ಅಮ್ಮ: ಇವರು ಭಿಕ್ಷುಕರು ಮಗಳೆ. ಹೊಟ್ಟೆಗೆ ಇಲ್ಲದ್ದಕ್ಕೆ ಭಿಕ್ಷೆ
ಬೇಡುತ್ತಿರುವರು. ಈಗ ನಾವು ದೇವಸ್ಥಾನದ ಒಳಕ್ಕೆ ಹೋಗೋಣ ಬಾ.
ಉಜ್ವಲಾ: ಅಮ್ಮಾ, ಪೂಜಾರಿ ಮಂಗಳಾರತಿ ತರುತ್ತಿದ್ದಾನೆ!
ಅಮ್ಮ: ಹಿರಿಯರನ್ನು ಬಹುವಚನದಲ್ಲಿ ಮಾತಾಡಿಸಬೇಕು ಮಗಳೇ ತಿಳಿಯಿತಾ? ಈಗ ದೇವರಿಗೆ ಕೈಮುಗಿ.
ಉಜ್ವಲಾ: ದೇವರಿಗೆ ಯಾಕಮ್ಮಾ ಕೈಮುಗಿಯಬೇಕು?
ಅಮ್ಮ: ಕೈಮುಗಿದರೆ ದೇವರು ಒಳ್ಳೆಯದು ಮಾಡುತ್ತಾನೆ ಮಗಳೇ.
ಉಜ್ವಲಾ: ಕಣ್ಣು ಕಾಲು ಇಲ್ಲದವರಿಗೆ ದೇವರು ಒಳ್ಳೆಯದು ಮಾಡಿಲ್ಲ
ಯಾಕಮ್ಮ? ಕಣ್ಣು ಕಾಲು ಇಲ್ಲದವರು ಯಾವಾಗಲೂ ಕೈ ಮುಗಿದೇ ಇರುವರಲ್ಲ!
ಅಮ್ಮಾ: ಅದು ನನಗೆ ತಿಳಿಯದು ಮಗಳೇ.
ಉಜ್ವಲಾ: ಹಾಗಾದರೆ ನಾನು ಕೈಮುಗಿಯುವುದಿಲ್ಲ.
ಅಮ್ಮಾ: ನೀನು ಮೊಂಡು ಹುಡುಗಿ. ಬೇಗ ಮನೆಗೆ ಹೋಗೋಣ ಬಾ.
ಈ ಮಾದರಿ ಪಾಠಕ್ಕೆ ಅಭ್ಯಾಸವಾಗಿ ಬೇರೆ ಬೇರೆ ರೀತಿಯ ಪ್ರಶ್ನೆಗಳನ್ನು ಲೇಖಕರು ತಯಾರು ಮಾಡಿದ್ದಾರೆ. ಅವುಗಳಲ್ಲಿ ಕೆಲವು ಪ್ರಶ್ನೆಗಳು ಹೀಗಿದೆ:
ಕೆಳಗಿನ ಪ್ರಶ್ನೆಗಳಿಗೆ ಹೌದು ಅಥವಾ ಇಲ್ಲ ಎಂದು ಉತ್ತರಿಸಿ.
೧. ನೀವು ಗೋವಿನ ಕಥೆ ಓದಿದ್ದೀರಾ?
೨. ನೀವು ಭಿಕ್ಷುಕರನ್ನು ನೋಡಿದ್ದೀರಾ?
೩. ನೀವು ದೇವರಿಗೆ ಕೈಮುಗಿಯುತ್ತೀರಾ?
೪. ನೀವು ಜಾಣೆ ಉಜ್ವಲಳಂತೆ ಪ್ರಶೆಗಳನ್ನು ಕೇಳುವಿರಾ?
ಈ ಪಾಠವನ್ನು ನಮ್ಮ ಕಂದಾಚಾರದ ಶಿಕ್ಷಣ ಪಂಡಿತರು ಒಂದು ದೈವ ವಿರೋಧಿ ಧರ್ಮವಿರೋಧಿ, ಅನೀತಿ ಪಾಠ ಎಂದು ಬೊಬ್ಬೆಹಾಕಬಹುದು. ಆದರೆ ಇದು ಒಂದು ಉತ್ತಮ ಜಾತ್ಯತೀತ ಅಥವಾ ಲೌಕಿಕ ನೀತಿ ಕಥೆಯಾಗಿದೆ. ಹಾಗೆ ಭಾವಿಸಲು ಬಲವಾದ ಕಾರಣಗಳನ್ನು ಕೊಡಬಹುದು. ಈ ಮೊದಲು ಈ ಲೇಖನದಲ್ಲಿ ವಿಶ್ಲೇಷಿಸಲಾದ ನೀತಿಯ ಆಧಾರ ಸ್ತಂಭಗಳಾದ ಸ್ವಾಯತ್ತತೆ, ವೈಚಾರಿಕತೆ, ಪರಹಿತ ಚಿಂತನೆ ಮತ್ತು ಹೊಣೆಗಾರಿಕೆ ಪ್ರವೃತ್ತಿಗಳನ್ನು ಮಕ್ಕಳಲ್ಲಿ ಬೆಳೆಸಲು ಈ ಪಾಠ ಅತ್ಯಂತ ಸಹಕಾರಿಯಾಗಿದೆ.
ದೇವರಿಗೆ ಕೈಮುಗಿಯಬೇಕೇ ಬೇಡವೇ ಎಂಬಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಉಜ್ವಲ ತಾಯಿಯ ಆದೇಶವನ್ನು ಮೀರಿ ಸ್ವಾಯತ್ತ ನೈತಿಕ ನಿರ್ಣಯವನ್ನು ತೆಗೆದುಕೊಳ್ಳುತ್ತಾಳೆ. ಕೈಮುಗಿದರೆ ದೇವರು ಒಳ್ಳೆಯದನ್ನು ಮಾಡುತ್ತಾನೆ ಎಂದು ತಾಯಿ ಹೇಳಲು ಕಣ್ಣು ಕಾಲು ಇಲ್ಲದವರು ಯಾವಾಗಲೂ ಕೈ ಮುಗಿದೇ ಇದ್ದರೂ ಅವರಿಗೆ ದೇವರು ಏಕೆ ಒಳ್ಳೆಯದು ಮಾಡಿಲ್ಲ ಎಂದು ತರ್ಕಬದ್ಧವಾದ ಯೋಜನೆಯನ್ನು ಉಜ್ವಲ ಮಾಡುತ್ತಾಳೆ. ದೇವಸ್ಥಾನಕ್ಕೆ ಹೋದ ಉಜ್ವಲಳಲ್ಲಿ ದೇವರ ಮಂಗಳಾರತಿಗಿಂತ ಹೊಟ್ಟೆಗಿಲ್ಲದ ಕುಂಟ ಕುರುಡರ ಬಗ್ಗೆ ಹೆಚ್ಚು ಕಾಳಜಿಯುಂಟಾಗುತ್ತದೆ. ದೇವರಿಗೆ ಕೈ ಮುಗಿದರೆ ಅವನು ಒಳ್ಳೆಯದು ಮಾಡುತ್ತಾನೆ ಎಂಬುದು ನಿಜವಲ್ಲ ಎಂದು ಮನವರಿಕೆಯಾದಾಗ ಉಜ್ವಲ ಕೈಮುಗಿಯುವುದಿಲ್ಲ ಎಂದು ಹೇಳುತ್ತಾಳೆ. ಅಷ್ಟೇ ಅಲ್ಲ ಹಾಗೆಯೇ ಮಾಡುತ್ತಾಳೆ. ಈ ಪಾಠದಲ್ಲಿ ಸ್ವಾಯತ್ತತೆ, ವೈಚಾರಿಕತೆ, ಪರಹಿತ ಚಿಂತನೆ ಮತ್ತು ಹೊಣೆಗಾರಿಕೆ ಪ್ರವೃತ್ತಿಗಳು ಸಮರಸವಾಗಿ ಮೈವೆತ್ತಿವೆ.
ಧರ್ಮಗಳಿಂದ ದೂರವಾದ ನೈತಿಕ ಪ್ರವೃತ್ತಿಗಳನ್ನು ಮಕ್ಕಳಲ್ಲಿ ಬೆಳೆಸುವಂತಹ ಪಾಠಕ್ರಮವನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಬೇಕಾದುದು ಶಿಕ್ಷಣ ತಜ್ಞರ ಹೊಣೆಗಾರಿಕೆಯಾಗಿದೆ.
ನಮ್ಮ ಸಂವಿಧಾನದಲ್ಲಿ ೪೨ನೇ ತಿದ್ದುಪಡಿಯ ಮೂಲಕ ಹೊಸದಾಗಿ ಸೇರಿಸಲಾದ ಮೂಲಭೂತ ಕರ್ತವ್ಯಗಳಲ್ಲಿ ಒಂದಾದ "ವೈಜ್ಞಾನಿಕ ಪ್ರವೃತ್ತಿ, ಮಾನವೀಯತೆ, ಅನ್ವೇಷಣೆ ಮತ್ತು ಸುಧಾರಣಾ ಮನೋಭಾವ"ಗಳನ್ನು ಬೆಳೆಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಬೇಕು ಎಂಬುದರತ್ತ ನಿಮ್ಮ ಗಮನಸೆಳೆದು, ಸಂವಿಧಾನ ಬದ್ಧ ಕರ್ತವ್ಯಗಳನ್ನು ತಾತ್ತ್ವಿಕವಾಗಿ ಮಾತ್ರ ಒಪ್ಪಿಕೊಂಡು ಆಚರಣೆಯಲ್ಲಿ ತರಲು ಹಿಂಜರಿದರೆ ನಾವು ನಿಜವಾಗಲೂ ನೈತಿಕ ಹೊಣೆಗೇಡಿಗಳಾಗುತ್ತೇವೆ ಎಂಬುದನ್ನು ನಾವು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳುವುದು ಅವಶ್ಯಕ ಎಂದು ಹೇಳಿ ನನ್ನ ಈ ಪ್ರಬಂಧವನ್ನು ಮುಕ್ತಾಯಗೊಳಿಸುತ್ತೇನೆ.
- Login or register to post comments
- Email this page