You are hereಧರ್ಮ ಬರಡಾದ ಈ ದೇಶವನ್ನು ಕನಿಕರಿಸಿ
ಧರ್ಮ ಬರಡಾದ ಈ ದೇಶವನ್ನು ಕನಿಕರಿಸಿ
ಲೇಖಕರು: ಬಿ.ವಿ. ವೀರಭದ್ರಪ್ಪ
ಹಕ್ಕುಗಳು: ಲೇಖಕರವು
ನಂಬಿಕೆಗಳು ತುಂಬಿ ಧರ್ಮ ಬರಡಾದ ದೇಶವನು,
ನನ್ನ ಗೆಳೆಯರೆ ಹಾಗು ಸಹಪಯಣಿಗರೆ,
ಮರುಕದಿ ನೋಡಿ.
ತಾನು ನೇಯದ ಉಡುಗೆಯನು ತೊಡುವ
ತಾನು ಬೆಳೆಯದ ಅನ್ನವನುಂಬುವ
ತಾನು ಬಟ್ಟಿ ಇಳಿಸದ ಮದ್ಯವನು ಸೇವಿಸುವ
ಗೂಂಡಾ ತಮ್ಮ ನಾಯಕನೆಂದು
ಮಿಂಚುವ ವಿಜಯಿಯನು
ಸುಂದರನೆಂದುಗ್ಗಡಿಸುವ
ಕನಸಿನಲ್ಲಿ ಬೇಡವಾದ ವ್ಯಾಮೋಹಕ್ಕೆ
ಎಚ್ಚರದಲ್ಲಿ ಅರ್ಪಿಸಿಕೊಂಬುವ
ಸ್ಮಶಾನ ಯಾತ್ರೆಯಲಲ್ಲದೆ ದನಿಯನೆತ್ತರಿಸದ
ಸ್ಮಾರಕಗಳಲಲ್ಲದೆ ಹೆಮ್ಮೆ ಪಡದ ಮತ್ತು
ಖಡ್ಗ ಕೊರಡುಗಳ ನಡುವೆ
ಕೊರಳು ಬಂದಿಯಾದಲ್ಲದೆ ಬಂಡೇಳಲರಿಯದ
ಹೊಸ ನಾಯಕನನು ತುತ್ತೂರಿಯಿಂದ ಸ್ವಾಗತಿಸಿ
ಧಿಕ್ಕಾರದಿ ಬೀಳ್ಕೊಟ್ಟು
ಮತ್ತೊಬ್ಬನನು ಇನ್ನೊಮ್ಮೆ ತುತ್ತೂರಿಯಿಂದ ಸ್ವಾಗತಿಸುವ
ಜನರ ಮರುಕದಿ ನೋಡಿ.
ಯಾರ ರಾಜಕಾರಣಿ ನರಿಯೊ
ಯಾರ ತತ್ವಜ್ಞಾನಿ ಡೊಂಬನೊ
ಯಾರ ಕಲೆ ತೇಪೆ ಮತ್ತು ಅಣಕವೊ
ಯಾರ ವಿವೇಕಿಗಳು ವಯಸ್ಸಿನಿಂದ ಕಿವುಡರಾಗಿರುವರೊ
ಯಾರ ವೀರರು ಇನ್ನು ತೊಟ್ಟಿಲಲ್ಲಿರುವರೊ
ಅಂತ ಜನರ ಕನಿಕರಿಸಿ.
ಯಾವ ದೇಶ ಹಲವು ಭಾಗಗಳಾಗಿ ವಿಭಜನೆಗೊಂಡು
ಪ್ರತಿಯೊಂದು ತಾನೆ ಒಂದು ದೇಶವೆಂದು ತಿಳಿಯುವುದೊ
ಅಂಥ ದೇಶವನ್ನು ಕನಿಕರಿಸಿ.
ಮೂಲ: ಖಲಿಲ್ ಗಿಬ್ರಾನ್
- Login or register to post comments
- Email this page