You are hereದೇವರ ನಂಬದವನ ಮಾನವೀಯ ಹೋರಾಟ

ದೇವರ ನಂಬದವನ ಮಾನವೀಯ ಹೋರಾಟ


ಲೇಖಕರು: ಬಿ.ವಿ. ವೀರಭದ್ರಪ್ಪ
ಹಕ್ಕುಗಳು: ಲೇಖಕರವು

ಜನನಿಬಿಡ ಸಾರ್ವಜನಿಕ ಸ್ಥಳಗಳಲ್ಲಿ, ಗುಡಿ ಮಸೀದಿಗಳನ್ನು ಅಕ್ರಮವಾಗಿ ಹುಟ್ಟುಹಾಕಿ ಅವುಗಳಿಗಾಗಿ ಹೋರಾಡಿ ರಕ್ತಚೆಲ್ಲುವ ಮೂಢರು ಮತ್ತು ಅವರಿಗೆ ಬುದ್ಧಿಹೇಳಿ ತಿದ್ದುವ ಬದಲು ಅವರ ಬೆಂಬಲಕ್ಕೆ ನಿಲ್ಲುವ ನಮ್ಮ ಅರೆಬೆಂದ ರಾಜಕಾರಣಿಗಳು ಚಾರ್‍ಲ್ಸ್ ಬ್ರಾಡ್ಲಾರಿಂದ ಕಲಿಯಬೇಕಾದ್ದು ಬಹಳ ಇದೆ.

ಇಂಗ್ಲೆಂಡಿನ ಒಬ್ಬ ಗುಮಾಸ್ತರ ಮಗನಾದ ಚಾರ್‍ಲ್ಸ್ ಬ್ರಾಡ್ಲಾ ತಾವೊಬ್ಬ ನಾಸ್ತಿಕರಾಗಿದ್ದರೂ ತಮ್ಮ ಪ್ರಾಮಾಣಿಕ ಸಮಾಜ ಸೇವೆಯಿಂದ ೧೮೮೦ರಲ್ಲಿ ನಾರ್‍ತಂಪ್ಟನ್ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾದರು. ಪ್ರಮಾಣವಚನ ಸ್ವೀಕರಿಸುವಾಗ ಅಂದಿನ ರೂಢಿಯಂತೆ ’ದೇವರ ಅನುಗ್ರಹದಿಂದ’ ಎಂದು ಹೇಳಬೇಕಾಗಿತ್ತು. ನಾಸ್ತಿಕರಾದ ಬ್ರಾಡ್ಲಾ ಹಾಗೆ ಹೇಳಲು ನಿರಾಕರಿಸಿದರು. ೭೦೦ ವರ್ಷಗಳ ’ಹೌಸ್ ಆಫ್ ಕಾಮನ್ಸ್’ ಇತಿಹಾಸದಲ್ಲಿ ಇಂತಹ ಸಂವಿಧಾನಾತ್ಮಕ ಬಿಕ್ಕಟ್ಟು ಇದೇ ಮೊದಲನೆಯದಾದ್ದರಿಂದ ಅದನ್ನು ಪರಿಶೀಲಿಸಲು ಒಂದು ಸಮಿತಿ ನೇಮಕವಾಯಿತು. ಆ ಸಮಿತಿಯ ತೀರ್ಪು ಬ್ರಾಡ್ಲಾರಿಗೆ ವಿರುದ್ಧವಾಗಿತ್ತು. "ನಾನು ಪ್ರಜೆಗಳ ಪ್ರತಿನಿಧಿ. ಸಂಸತ್ತಿನ ಸದಸ್ಯನಾದ ನನ್ನ ಹಕ್ಕನ್ನು ಪ್ರಶ್ನಿಸಲು ಸಮಿತಿಗೆ ಹಕ್ಕಿಲ್ಲ" ಎಂದು ಬ್ರಾಡ್ಲಾ ಸವಾಲು ಹಾಕಿದರು. ಆದರೆ ಸಂಪ್ರದಾಯ ಶರಣದಿಂದ ಕೂಡಿದ ಸಂಸತ್ತಿನಲ್ಲಿ ಪರಂಪರೆಯ ಆಚರಣೆಗೇ ಬಹುಮತ ದೊರೆಯಿತು. ಸಂಸತ್ತಿನ ಪರಂಪರೆಯನ್ನು ಧಿಕ್ಕರಿಸಿದ್ದಕ್ಕಾಗಿ ಬ್ರಾಡ್ಲಾ ಒಂದು ದಿನದ ಜೈಲುಶಿಕ್ಷೆಯನ್ನು ಅನುಭವಿಸಬೇಕಾಯಿತು. ನಂತರ ಪ್ರಧಾನ ಮಂತ್ರಿ ಗ್ಲಾಡ್‌ಸ್ಟನ್ ತೀರ್ಮಾನದಂತೆ ಅವರಿಗೆ ಸಂಸತ್ತಿನಲ್ಲಿ ಪ್ರವೇಶ ದೊರೆಯಿತು. ದೇವರ ಹೆಸರು ಉಲ್ಲೇಖಿಸದೆ ಪ್ರಜೆಗಳ ಹೆಸರಿನಲ್ಲೇ ಅವರು ಪ್ರಮಾಣವಚನ ಸ್ವೀಕರಿಸಿದರು.

ಚರ್ಚ್‌ನ ಕುತಂತ್ರದಿಂದ ಕೆಲವರು ಇದನ್ನು ಆಕ್ಷೇಪಿಸಿ "ಧರ್ಮದ್ರೋಹ ರಾಜ ದ್ರೋಹ" ಎಂದು ನ್ಯಾಯಾಲಯಕ್ಕೆ ಮೊರೆ ಹೋದರು. ಒಂಬತ್ತು ತಿಂಗಳ ನಂತರ ನ್ಯಾಯಾಲಯ ತೀರ್ಪು ನೀಡಿ ಬ್ರಾಡ್ಲಾರ ಸದಸ್ಯತ್ವವನ್ನು ರದ್ದುಗೊಳಿಸಿತು. ತಾತ್ಕಾಲಿಕವಾಗಿ ಚರ್ಚ್ ಜನಾಭಿಪ್ರಾಯದ ವಿರುದ್ಧ ಜಯಗಳಿಸಿತು. ಖಾಲಿಯಾದ ಸ್ಥಾನಕ್ಕೆ ಮರುಚುನಾವಣೆ ಅತ್ಯಂತ ಬಿರುಸಿನಿಂದ ನಡೆಯಿತು. ಅತಿ ಸಂಪ್ರದಾಯ ಶರಣರೆಂದು ಹೆಸರಾದ ನಾರ್‍ತಂಪ್ಟನ್ ಮತದಾರರು ಚರ್ಚಿನ ಪ್ರತಿನಿಧಿಯನ್ನು ಮಣ್ಣುಮುಕ್ಕಿಸಿ ಬ್ರಾಡ್ಲಾರನ್ನು ಇನ್ನಷ್ಟು ಬಹುಮತದಿಂದ ಆಯ್ಕೆ ಮಾಡಿದರು. ಮತ್ತೆ ಅದೇ ಕತೆ ಪುನರಾವರ್ತನವಾಯಿತು. ಪ್ರಧಾನಮಂತ್ರಿ ಮಧ್ಯ ಪ್ರವೇಶಿಸಿ ಪ್ರಮಾಣ ವಚನದಲ್ಲಿದ್ದ " ದೇವರ ಅನುಗ್ರಹದಿಂದ " ಎಂಬ ಭಾಗವನ್ನು ತೆಗೆದುಹಾಕಿ ತಿದ್ದುಪಡಿ ಮಂಡಿಸಿದರು. ಅದು ಅಂಗೀಕಾರವಾಗದ್ದರಿಂದ ಎರಡನೆಯ ಬಾರಿಗೆ ಬ್ರಾಡ್ಲಾರ ಆಯ್ಕೆ ರದ್ದಾಯಿತು. ನಾರ್‍ತಂಪ್ಟನ್ ಪ್ರಜೆಗಳು ಆಗ ಬೀದಿಗಿಳಿದರು. ಚರ್ಚುಗಳ ಕುತಂತ್ರದ ವಿರುದ್ಧ ಮತ್ತು ಬ್ರಾಡ್ಲಾ ಪರವಾಗಿ ೮೦೦೦ ಜನ ಸಂಸತ್ತಿನ ಮುಂದೆ ಭಾರಿ ಪ್ರದರ್ಶನ ನಡೆಸಿದರು. "ಸರ್ಕಾರದ ಆಜ್ಞೆಯೋ, ಜನಗಳ ಆಕಾಂಕ್ಷೆಯೋ?" ಎಂದು ಪತ್ರಿಕೆಗಳು ಅಗ್ರ ಲೇಖನ ಬರೆದುವು. ಬ್ರಾಡ್ಲಾ ಮೂರನೆಯ ಸಾರಿ ಅತ್ಯಧಿಕ ಮತಗಳಿಂದ ಆಯ್ಕೆಯಾದರು. ಅಲ್ಲಿಗೆ ಅವರು ಮೂಢ ಸಂಪ್ರದಾಯದ ವಿರುದ್ಧ ಹೋರಾಟ ಪ್ರಾರಂಭಿಸಿ ೫ ವರ್ಷಗಳಾಗಿತ್ತು. ಮತ್ತೊಮ್ಮೆ ಅವರ ಸದಸ್ಯತ್ವ ರದ್ದಾಯಿತು.

ಆಗ ಬ್ರಾಡ್ಲಾ ಚರ್ಚಿನ ಜನವಿರೋಧೀ ಕುತಂತ್ರಗಳನ್ನು ತಮ್ಮ ಉಪನ್ಯಾಸಗಳಲ್ಲಿ ಬಹಿರಂಗಗೊಳಿಸುತ್ತ, ಅದು ಹೇಗೆ ಮಾನವ ಪ್ರಗತಿಗೆ ಬಾಧಕವಾಗಿದೆ ಎಂದು ಸಾರುತ್ತಾ ಪ್ರಚಾರ ಕಾರ್ಯದಲ್ಲಿ ತೊಡಗಿದರು. ಅದೇ ಸಂದರ್ಭದಲ್ಲಿ ಅವರ ’ಹುಮ್ಯಾನಿಟಿಸ್ ಗೈನ್ ಫ್ರಂ ಅನ್-ಬಿಲೀಫ್’ ಎಂಬ ಕೃತಿ ಪ್ರಕಟವಾಯಿತು. ಆರು ತಿಂಗಳಲ್ಲಿ ಮರುಚುನಾವಣೆಯೆ ನಡೆದು ನಾಲ್ಕನೆಯ ಬಾರಿ ಬ್ರಾಡ್ಲಾ ವಿಜಯಿಗಳಾಗಿದ್ದರು. ಆ ವೇಳೆಗೆ ಚರ್ಚು ಗಾಳಿ ಬೀಸುವ ದಿಕ್ಕನ್ನು ಗುರುತಿಸಿತ್ತು. ಈ ಸಾರಿ ’ದೇವರ ಅನುಗ್ರಹ’ ಎಂಬ ಭಾಗವಿಲ್ಲದೆ ಬ್ರಾಡ್ಲಾ ಪ್ರಮಾಣವಚನ ಸ್ಚೀಕರಿಸಿದಾಗ ವಿರೋಧ ವ್ಯಕ್ತವಾಗಲಿಲ್ಲ. ಅಲ್ಲಿಗೆ ಆ ಹೋರಾಟ ಪ್ರಾರಂಭವಾಗಿ ಆರು ವರ್ಷ ಕಳೆದಿತ್ತು.

ಬ್ರಾಡ್ಲಾರಂತೆ ನಮ್ಮ ರಾಜಕಾರಣಿಗಳು ನಾಸ್ತಿಕರಾಗದಿದ್ದರೆ ಹೋಗಲಿ, ಜವಾಬ್ದಾರಿ ನಾಗರಿಕರಂತೆಯಾದರೂ ವರ್ತಿಸಬೇಡವೆ? ಬೆಂಗಳೂರಿನ ಸಿಟಿ ಮಾರ್ಕೆಟ್ ಕಲಾಸಿಪಾಳ್ಯಂಗಳಲ್ಲಿ ಸದಾ ಕಿಕ್ಕಿರಿದ ಜನಜಂಗುಳಿಯಲ್ಲಿ ಒಬ್ಬರ ಮೈಗೆ ಒಬ್ಬರು ತಾಕದಂತೆ ಸರಾಗವಾಗಿ ನಡೆಯುವಷ್ಟು ಅಗಲವಾದ ಬೀದಿಗಳಿರಬೇಕು. ಬೀದಿಬದಿಗಳು ಮಲಮೂತ್ರಗಳಿಂದ ಹೊಲಸಾಗದೆ ಶುಚಿಯಾಗಿರಬೇಕು. ಹಾಗಿರಬೇಕಾದರೆ ಗಣೇಶ ಗುಡಿಗಳಿಗಿಂತ ಅಲ್ಲಲ್ಲಿ ಸಾರ್ವಜನಿಕ ಶೌಚಗೃಹಗಳು ನಿರ್ಮಾಣವಾಗಬೇಕು ಮತ್ತು ಅವು ಶುಚಿಯಾಗಿರುವಂತೆ ವ್ಯವಸ್ಥೆಯಾಗಬೇಕು ಎಂಬ ಅರಿವನ್ನಾದರೂ ಅವರು ಬೆಳೆಸಿಕೊಳ್ಳಬೇಡವೆ?

ನಮ್ಮ ರಾಜಕಾರಣಿಗಳಿಗೆ ಇಂತಹ ಜನಹಿತ ಕಾರ್ಯಗಳಲ್ಲಿ ಆಸಕ್ತಿ ಎಲ್ಲಿಂದ ಬಂದೀತು. ಜನರನ್ನು ಕೆರಳಿಸಿ ಉದ್ವೇಗಗೊಳಿಸುವುದು, ಉದ್ವೇಗಗೊಂಡ ಜನರನ್ನು ಬೆಂಬಲಿಸಿ ಅವರ ಓಟುಗಳಿಗೆ ಹೊಂಚು ಹಾಕುವುದು ಮಾತ್ರ ಅವರಿಗೆ ಗೊತ್ತು ಎಂಬ ಅರಿವು ಅಲ್ಲೇ ವಾಸ ಮಾಡುವ ಮತ್ತು ಆಗಾಗ ಅಲ್ಲಿಗೆ ಹೋಗಿ ಬರುವ ನಮಗಾದರೂ ಇರಬೇಡವೆ?

ಉಚ್ಚೆ ಹೇಲುಗಳ ಹೊಲಸಿನ ನಡುವೆ ದೇವರನ್ನು ಕಟ್ಟಿಹಾಕುವ ಹೇಯ ಕೆಲಸಕ್ಕಿಂತ ಪರಿಸರವನ್ನು ನಿರ್ಮಲಗೊಳಿಸುವ, ಅಲ್ಲಿ ವಾಸಿಸುವವರ ದೇಹ ಮನಸ್ಸುಗಳನ್ನು ಹಗುರಗೊಳಿಸಲು ಅತ್ಯವಶ್ಯಕವಾದ ಸಾರ್ವಜನಿಕ ಕಕ್ಕಸುಗಳಿಗಾಗಿ ನಾವು ಹೋರಾಡಿದರೆ, ಚಳವಳಿ ನಡೆಸಿದರೆ ಅದು ನಾಗರಿಕವೆನಿಸೀತು. ಅರ್ಥಪೂರ್ಣ ವಾದೀತು.

ಅನಾಗರಿಕರೆಂದು ನಾವು ಕರೆಯುವ ನಮ್ಮ ಪೂರ್ವಜರು ಜನ ಬಾಹುಳ್ಯದಿಂದ ದೂರವಿರುವ ಪ್ರಶಾಂತ ನದಿ ದಡಗಳಲ್ಲಿ, ಗುಡ್ಡ ಬೆಟ್ಟಗಳ ಶಿಖರಗಳಲ್ಲಿ, ಗುಡಿಗಳನ್ನು ಕಟ್ಟುತ್ತಿದ್ದರು. ಹಿಂದಿನವರ ವಿವೇಕವಾಗಲಿ ಆಧುನಿಕರ ವೈಚಾರಿಕತೆಯಾಗಲಿ ಇಲ್ಲದ ನಾವು ಪಟ್ಟಣಗಳಲ್ಲಿ ಬೀಡುಬಿಟ್ಟ ಆದಿವಾಸಿಗಳಾಗಿದ್ದೇವೆ.

ನಗರ ಬಡಾವಣೆಗಳಲ್ಲಿ ವಾಸಿಸುವವರ ಕಿವಿಗಳಿಗೆ ಹಗಲು ರಾತ್ರಿ ಮೈಕಿನಿಂದ ಬೈರಿಗೆ ಹಿಡಿಯದಿದ್ದಲ್ಲಿ, ಗುಡಿ ಮಸೀದಿಗಳ ಪ್ರಾರ್ಥನೆ ಪೂರ್ತಿಯಾಗುವುದಿಲ್ಲ. ಧರ್ಮದ ಹೆಸರಿನಲ್ಲಿ ಪ್ರಸಾರವಾಗುವ ಈ ಶಬ್ಧ ಮಾಲಿನ್ಯವನ್ನು ಎಲ್ಲಿಯವರೆಗೆ ನಾವು ಸಹಿಸಿ ಕೊಳ್ಳಬೇಕು? ಯಾಕೆ ಸಹಿಸಿ ಕೊಳ್ಳಬೇಕು? ಈ ಧಾರ್ಮಿಕ ಹುಚ್ಚಾಟಗಳು ಹೀಗೇ ಮುಂದುವರಿದಲ್ಲಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಒಂದು ಮಿತಿಯನ್ನು ವಿಧಿಸಲು ಸಂವಿಧಾನದ ತಿದ್ದುಪಡಿಗಾಗಿ ಚಳವಳಿ ಆರಂಭವಾಗುವ ದಿನಗಳೂ ದೂರವಿಲ್ಲ.