You are hereಲಿಂಕನ್ ಶಿಕ್ಷಕನಿಗೆ ಹೇಳಿದ್ದು

ಲಿಂಕನ್ ಶಿಕ್ಷಕನಿಗೆ ಹೇಳಿದ್ದು


ಲೇಖಕರು: ಬಿ.ವಿ. ವೀರಭದ್ರಪ್ಪ
ಹಕ್ಕುಗಳು: ಲೇಖಕರವು

ನಾ ಬಲ್ಲೆ
ಎಲ್ಲರೂ ನ್ಯಾಯಪರರಲ್ಲ
ಎಲ್ಲರೂ ಸತ್ಯವಂತರಲ್ಲ ಎಂಬುದನು
ಆದರೆ ಪ್ರತಿಯೊಬ್ಬ ಮುಠ್ಠಾಳನಿಗೆ ಪ್ರತಿಯಾಗಿ
ಒಬ್ಬ ಧೀರೋದಾತ್ತ,
ಪ್ರತಿಯೊಬ್ಬ ಸ್ವಾರ್ಥಿ ರಾಜಕಾರಣಿಗೆ ಬದಲು
ಒಬ್ಬ ನಿಷ್ಠಾವಂತ ನಾಯಕ,
ಪ್ರತಿಯೊಬ್ಬ ಶತ್ರುವಿಗೆ ಬದಲು
ಒಬ್ಬ ಸನ್ಮಿತ್ರನಿರುವನೆಂಬುದನು ಕಲಿಸು

ನಿನಗೆ ಸಾಧ್ಯವಾದರೆ ಕಲಿಸು
ಗಳಿಸಿದ ಒಂದು ಡಾಲರು
ಸಿಕ್ಕ ಐದಕ್ಕಿಂತ ಹೆಚ್ಚು ಬೆಲೆಯುಳ್ಳದೆಂಬುದನು.
ಕಲಿಸು ಸೋಲುವುದನು ಕಲಿಯಲು
ಮತ್ತು ಗೆಲುವಿನಲ್ಲಿ ಹರ್ಷಿಸುವುದನು.
ಪುಸ್ತಕಗಳ ಅದ್ಭುತಗಳನ್ನು ಅವನಿಗೆ ಕಲಿಸು
ಆದರೆ ಆಕಾಶದ ಹಕ್ಕಿಗಳನ್ನು
ಹಾರಾಡುವ ದುಂಬಿಗಳನ್ನು ಮತ್ತು
ಹಸಿರು ಮಲೆಯ ಹೂಗಳನ್ನು ಕುರಿತು
ಧ್ಯಾನಿಸಲು ಅವನಿಗೆ ಬಿಡುವು ಮಾಡಿಕೊಂಡು.
ಶಾಲೆಯಲಿ ವಂಚಿಸುದಕ್ಕಿಂತ
ಫೇಲಾಗುವುದು ಹೆಚ್ಚು ಗೌರವವೆಂಬುದನು ಕಲಿಸು
ಎಲ್ಲರೂ ತಪ್ಪೆಂದಾಗ
ತನ್ನ ವಿಚಾರಗಳಲಿ ಅವನು ನಂಬಿಕೆ ಉಳಿಸಿಕೊಳ್ಳಲು ಕಲಿಸು.

ನಯದ ಜನರಲಿ ವಿನಯದಲಿ ಮತ್ತು
ಒರಟರಲಿ ಒರಟುತನದಿ ನಡೆಯುವುದನು ಕಲಿಸು
ಬೆವರು ಬುದ್ಧಿಗಳನು
ಹೆಚ್ಚು ಬೆಲೆ ತೆರುವವನಿಗೆ
ಮಾರುವುದನು,
ಆದರೆ ತನ್ನ ಹೃದಯ ಮತ್ತು ಆತ್ಮಕ್ಕೆ
ಬೆಲೆಯ ಚೀಟಿಯನು
ಎಂದಿಗೂ ಅಂಟಿಸದಿರುವುದನು ಕಲಿಸು

ಬೇಸರಗೊಂಡಾಗ ನಗುವುದನು
ಕಣ್ಣೀರಿನಲಿ ಅವಮಾನವಿಲ್ಲೆಂಬುದನು ಮತ್ತು
ತನ್ನಲ್ಲಿ ತಾನು ವಿಶ್ವಾಸ ಹೊಂದುವುದನು ಕಲಿಸು
ಆಗಲೇ ಅವನಿಗೆ ಮಾನವೀಯತೆಯಲಿ
ದಿವ್ಯ ವಿಶ್ವಾಸ ಮೂಡುವುದು.

(ಅಮೆರಿಕದ ಅಧ್ಯಕ್ಷ ಅಬ್ರಹಾಂ ಲಿಂಕನ್ ತನ್ನ ಮಗ ಕಲಿಯುತ್ತಿದ್ದ ಶಾಲೆಯ ಮುಖ್ಯೋಪಾಧ್ಯಾಯನಿಗೆ ಬರೆದ ಒಂದು ಪತ್ರ.)