You are hereಅರ್ಜುನ ದ್ರೋಣರಿಗೆ ಪ್ರಶಸ್ತಿ, ಏಕಲವ್ಯನಿಗೆ ನಾಸ್ತಿ
ಅರ್ಜುನ ದ್ರೋಣರಿಗೆ ಪ್ರಶಸ್ತಿ, ಏಕಲವ್ಯನಿಗೆ ನಾಸ್ತಿ
ಲೇಖಕರು: ಬಿ.ವಿ. ವೀರಭದ್ರಪ್ಪ
ಹಕ್ಕುಗಳು: ಲೇಖಕರವು
ಮೊನ್ನೆ ರಾಷ್ಟ್ರಪತಿ ವೆಂಕಟರಾಮನ್ ಅವರು ರಾಷ್ಟ್ರಪತಿ ಭವನದ ಅಶೋಕ ಹಾಲಿನಲ್ಲಿ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮರೆಂದು ಪರಿಗಣಿಸಲಾದ ೧೫ ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿಗಳನ್ನು ಮತ್ತು ಇಬ್ಬರು ಕೋಚ್‌ಗಳಿಗೆ ದ್ರೋಣ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿದರು. ಕ್ರೀಡಾ ಪಟುಗಳಲ್ಲಿ ಹಾಗೂ ಕೋಚ್‌ಗಳಲ್ಲಿ ಶ್ರೇಷ್ಠರಾದವರನ್ನು ಗುರುತಿಸುವ ಸಲುವಾಗಿ ಸ್ಥಾಪಿತವಾದ ಪ್ರಶಸ್ತಿಗಳಿಗೆ ಅರ್ಜುನ, ದ್ರೋಣರ ಹೆಸರನ್ನಿಟ್ಟಿರುವುದು ಆಕಸ್ಮಿಕವಲ್ಲ. ಅಂದು ಮಹಾಭಾರತದ ಅರ್ಜುನ ಮತ್ತು ದ್ರೋಣರು ಯಾವ ಕ್ರೀಡಾ ಮನೋಭಾವ ಮತ್ತು ಶ್ರೇಷ್ಠತೆಗಳನ್ನು ಪ್ರತಿನಿಧಿಸಿದ್ದರೋ ಇಂದು ಅಂಥದೇ ಮೌಲ್ಯಗಳನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಅರ್ಜುನ ಪ್ರಶಸ್ತಿ ಮತ್ತು ದ್ರೋಣ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ ಎಂಬುದು ಸ್ವಯಂವೇದ್ಯವಾಗುತ್ತದೆ.
ಮೂರು ಲೋಕಗಳಲ್ಲಿ ಅದ್ವಿತೀಯ ಧನುರ್ವಿದ್ಯಾಪಟುವಾಗುವ ಮಹತ್ತ್ವಾಕಾಂಕ್ಷೆ ಹೊಂದಿದ್ದ ಕ್ಷತ್ರಿಯ ಕುಮಾರ ಅರ್ಜುನನಿಗೆ ತನ್ನ ಹಂಬಲವನ್ನು ಈಡೇರಿಸಬಲ್ಲ ಗುರುವೊಬ್ಬನನ್ನು ಪಡೆಯುವುದು ಕಷ್ಟವಾಗಲಿಲ್ಲ. ಗುರು ದ್ರೋಣಾಚಾರ್‍ಯ ಅರ್ಜುನನ ಆಸೆಯನ್ನು ನೆರವೇರಿಸುವ ಭರವಸೆಯನ್ನು ನೀಡಿದ.
ಅದೇ ಸಂದರ್ಭದಲ್ಲಿ ಬೇಡರ ಹುಡುಗ ಏಕಲವ್ಯ ದ್ರೋಣನಲ್ಲಿ ವಿದ್ಯಾರ್ಜನೆ ಮಾಡಲು ಹಂಬಲಿಸಿ ವಿಫಲನಾದ. ಆದರೆ ಅವನು ಹತಾಶನಾಗದೆ ತನ್ನ ಸ್ವಂತ ಸಂಕಲ್ಪಶಕ್ತಿ ಮತ್ತು ಸತತ ಪರಿಶ್ರಮದಿಂದ ಅದ್ವಿತೀಯ ಧನುರ್ವಿದ್ಯೆಯನ್ನು ಸಂಪಾದಿಸುವಲ್ಲಿ ಯಶಸ್ವಿಯಾದ. ಮುಂದೆ ದಿನ ಅವನ ಅದ್ವಿತೀಯ ಬಾಣ ಪ್ರಯೋಗ ಸಾಮರ್ಥ್ಯವನ್ನು ಪ್ರತ್ಯಕ್ಷ ಕಾಣುವ ಅವಕಾಶ ಅರ್ಜುನ ಮತ್ತು ದ್ರೋಣರಿಗೆ ದೊರೆಯಿತು. ಆದರೆ ಅವರು ಏಕಲವ್ಯನ ಅದ್ಭುತ ಸಾಧನೆಗೆ ಮೆಚ್ಚಿಗೆ ಸೂಚಿಸುವ ಬದಲು ಹೊಟ್ಟೆಕಿಚ್ಚುಪಟ್ಟರು. ಅಷ್ಟೇ ಅಲ್ಲ, ಆ ವಿದ್ಯೆಯಿಂದ ಅವನನ್ನು ವಂಚಿತನನ್ನಾಗಿ ಮಾಡಲು ಹಂಚಿಕೆ ಹೂಡಿದರು.
ಏಕಲವ್ಯ ತನ್ನ ಸ್ವಂತ ಸಾಮರ್ಥ್ಯದಿಂದ ಗಳಿಸಿದ, ಎಂದೂ ಯಾರೂ ಕದಿಯಲಾರದಂತಹ ವಿದ್ಯಾಸಂಪತ್ತನ್ನು ದ್ರೋಣ ಅರ್ಜುನರು ಅತ್ಯಂತ ನಯ ವಂಚನೆಯಿಂದ ಅಪಹರಿಸಿದರು. ದ್ರೋಣ ತನ್ನ ಬಳಿಗೆ ವಿದ್ಯಾರ್ಜನೆಗೆ ಬಂದ ಅರ್ಹ ವಿದ್ಯಾರ್ಥಿಗೆ ವಿದ್ಯೆ ನೀಡಲು ನಿರಾಕರಿಸಿದ. ಆದರ ಏಕಲವ್ಯ ತನಗೆ ವಿದ್ಯೆ ನೀಡಲು ನಿರಾಕರಿಸಿದವನ ಪ್ರತಿಮೆಯನ್ನು ಗುರು ಎಂದು ಭಾವಿಸಿದ. ತನ್ನ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ನೀಡಲೂ ಹಿಂಜರಿಯಲಿಲ್ಲ. ಕೂದಲೆಳೆಯಿಂದ ಕತ್ತು ಕೊಯ್ಯುವುದಕ್ಕಿಂತಲೂ ನಯವಾಗಿ ದ್ರೋಣಾರ್ಜುನರು ಏಕಲವ್ಯನ ಅದ್ವಿತೀಯ ಧನುರ್ವಿದ್ಯೆಯನ್ನು ಅಪಹರಿಸಿದರು. ಇದು ಮಹಾಭಾರತದಲ್ಲಿ ದಾಖಲಾಗಿರುವ ಒಂದು ಐತಿಹ್ಯ. ಈ ಘಟನೆ ದ್ರೋಣ, ಅರ್ಜುನ ಮತ್ತು ಏಕಲವ್ಯರ ವಿಭಿನ್ನ ಕ್ರೀಡಾ ಮನೋಭಾವಗಳಿಗೆ ಕನ್ನಡಿ ಹಿಡಿಯುತ್ತದೆ.
ವಿದ್ಯೆ ಉನ್ನತ ವರ್ಗದವರಿಗೆ ಮಾತ್ರ ಮೀಸಲು ಎಂಬುದು ಭಾರತೀಯ ಸಂಸ್ಕೃತಿ ಪ್ರತಿಪಾದಿಸುವ ಒಂದು ಮೌಲ್ಯ. ಅಪರೂಪಕ್ಕೆ ಕೆಳವರ್ಗದ ಒಬ್ಬ ಪ್ರತಿಭಾವಂತ ವಿದ್ಯಾರ್ಥಿ ತನ್ನ ಸ್ವಂತ ಪ್ರಯತ್ನದಿಂದ ಅಸಾಧಾರಣ ವಿದ್ಯೆಯನ್ನು ಗಳಿಸಿದರೆ ಅದು ಅಪರಾಧ. ಅಂತಹ ಅಪರಾಧಿಯನ್ನು ಶಿಕ್ಷಿಸುವ ಹಕ್ಕೂ ಉನ್ನತ ವರ್ಗದ ಆಚಾರ್ಯನಿಗಿದೆ ಎಂಬುದನ್ನು ಸಾಬೀತುಗೊಳಿಸುತ್ತದೆ ಮೇಲಿನ ದೃಷ್ಟಾಂತ.
ಮಹಾಭಾರತದ ಈ ಮೌಲ್ಯ ಅಪ್ರಜ್ಞಾಪೂರ್ವಕವಾಗಿ ಭಾರತೀಯ ಸಂಸ್ಕೃತಿಯಲ್ಲಿ ಇಂದಿನವರೆಗೂ ಉಳಿದು ಮುಂದುವರೆದುಕೊಂಡು ಬಂದಿರುವುದನ್ನು ನಾವು ಕಾಣುತ್ತೇವೆ. ಈ ಕಾರಣಕ್ಕಾಗಿಯೇ ಕೋಲಾರ ಜಿಲ್ಲೆಯ ಮುರಾಂಡ ಹಳ್ಳಿಯ ನಾರಾಯಣಸ್ವಾಮಿ ೩೦೦೦ ಹಿರಿಯ ಕ್ರೀಡಾಪಟುಗಳು ಭಾಗವಹಿಸಿದ್ದ ಅಂತರ ರಾಷ್ಟ್ರೀಯ ಓಟದ ಸ್ಪರ್ಧೆಯಲ್ಲಿ ಐದನೆಯ ಸ್ಥಾನಗಳಿಸಿದ್ದರೂ ಭಾರತೀಯ ಕೋಚ್‌ಗಳಿಂದ ವಂಚಿತನಾಗಿ ಇಂಗ್ಲೆಂಡಿನಲ್ಲಿ ಅನಾಥ ಸ್ಥಿತಿಯನ್ನು ಅನುಭವಿಸ ಬೇಕಾಯಿತು. ಬರುವ ಜುಲೈ-ಆಗಸ್ಟ್ ತಿಂಗಳುಗಳಲ್ಲಿ ಅಮೆರಿಕದಲ್ಲಿ ನಡೆಯುವ ’ವಿಶ್ವ ಹಿರಿಯರ ಓಟದ ಸ್ಪರ್ಧೆ’ಗೆ ಮತ್ತೊಮ್ಮೆ ನಾರಾಯಣಸ್ವಾಮಿ ಆಯ್ಕೆಯಾಗಿದ್ದಾನೆ. ಅಷ್ಟೇ ಅಲ್ಲ, ವಿಶ್ವದಾಖಲೆಯನ್ನೇ ಮುರಿದಿದ್ದಾನೆ! ಆದರೆ ಆತ ಅಮೆರಿಕಕ್ಕೆ ಹೋಗಲು ಹಣವಿಲ್ಲದೆ ಒದ್ದಾಡುತ್ತಿದ್ದಾನೆ. ಆತನ ಸಹಾಯಕ್ಕಾಗಿ ’ಪತ್ರಿಕೆ’ಯಲ್ಲಿ ಮನವಿ ಮಾಡಿಕೊಳ್ಳಬೇಕಾದ ದುಸ್ಥಿತಿ ಉಂಟಾಗಿದೆ. ಆದರೆ ಎಷ್ಟೋ ಮಂದಿ ಅನಾಮಧೇಯರು ಯಾವ ಯಾವುದೋ ಕ್ರೀಡೆಗಳ ಹೆಸರಿನಲ್ಲಿ ದೇಶವಿದೇಶಗಳಲ್ಲಿ ವಿಹಾರ ಮಾಡುತ್ತಿರುತ್ತಾರೆ. ದ್ರೋಣಾರ್ಜುನರ ವಂಶಕ್ಕೆ ಸೇರಿರುವುದೇ ಅವರಿಗಿರುವ ಅರ್ಹತೆ.
ಭಾರತದ ಶೇ. ೮೦ರಷ್ಟಿರುವ ಹಳ್ಳಿಗಳಲ್ಲಿ ಪ್ರತಿಭೆಗೆ ಕೊರತೆ ಇಲ್ಲ. ಆದರೆ ಅವರಿಗೆ ಕನಿಷ್ಠ ಸವಲತ್ತುಗಳೂ ಇಲ್ಲ. ನೂರಾರು, ಸಾವಿರಾರು ಏಕಲವ್ಯರನ್ನು ಕಡೆಗಣಿಸಿ ಅನರ್ಹ ಅರ್ಜುನರಿಗೆ ಸಲ್ಲದ ಪ್ರೋತ್ಸಾಹ ನೀಡುತ್ತಿರುವುದರ ಫಲವನ್ನು ನಾವು ೧೯೮೪ರ ಒಲಂಪಿಕ್ಸ್‌ನಲ್ಲಿ ಚೆನ್ನಾಗಿ ಕಂಡಿದ್ದೇವೆ. ಭಾರತ ಒಂದು ಕಂಚಿನ ಪದಕವನ್ನೂ ಗಳಿಸದೆ ಪದಕ ಪಟ್ಟಿಯಲ್ಲಿ ಹೇಳಹೆಸರಿಲ್ಲದೆ ಹೋಗಿದೆ. ಈ ನಾಚಿಕೆ ಗೇಡಿನ ಸ್ಥಿತಿಗೆ ಏಕಲವ್ಯನನ್ನು ಕಡೆಗಾಣಿಸಿರುವ ದ್ರೋಣಾರ್ಜುನ ಸಂಸ್ಕೃತಿಯಲ್ಲದೆ ಬೇರೆ ಕಾರಣವಿಲ್ಲ.
ಇತ್ತೀಚೆಗೆ ಪತ್ರಿಕೆಗಳಿಗೆ ವರದಿಯಾಗಿರುವ ಒಂದು ಸುದ್ದಿ ಏಕಲವ್ಯರು ತಮ್ಮ ಸವಲತ್ತುಗಳಿಂದ ಹೇಗೆ ವಂಚಿತರಾಗುತ್ತಿದ್ದಾರೆ ಎಂಬುದನ್ನು ಮತ್ತೊಂದು ಬಗೆಯಿಂದ ಸಾಬೀತುಗೊಳಿಸುತ್ತದೆ. ಕರ್ನಾಟಕ ವಿಶ್ವವಿದ್ಯಾನಿಲಯದ ಕೆಲವು ಉನ್ನತ ಅಧಿಕಾರಿಗಳು ಮತ್ತು ಗುಮಾಸ್ತರು ಒಟ್ಟುಗೂಡಿ ರೂ. ೧,೪೮,೯೮೧ರಷ್ಟು ಸ್ಕಾಲರ್ ಷಿಪ್ ಹಣವನ್ನು ಅರ್ಹ ವಿದ್ಯಾರ್ಥಿಗಳಿಗೆ ದಕ್ಕದಂತೆ ವಂಚಿಸಿ ತಮ್ಮಲ್ಲೇ ಹಂಚಿಕೊಂಡಿದ್ದಾರೆಂದೂ, ಆ ಬಗೆಗೆ ಈಗ ಪೋಲೀಸರು ಮೊಕದ್ದಮೆ ಹೂಡಿದ್ದಾರೆಂದೂ ತಿಳಿದುಬಂದಿದೆ. ೧೯೭೮ರಿಂದ ೧೯೮೩ರವರೆಗೆ ಅಬಾಧಿತವಾಗಿ ನಡೆದ ವಂಚನೆ ಇಷ್ಟು ತಡವಾಗಿ ಬೆಳಕಿಗೆ ಬಂದಿದೆ ಎಂದರೆ ವಂಚನೆಗೊಳಗಾದವರು ಏಕಲವ್ಯನ ಬಂಧುಗಳೆಂಬುದರಲ್ಲಿ ಅನುಮಾನವಿಲ್ಲ. ಭಾರತ ಸರ್ಕಾರ ಹಿಂದುಳಿದ ವರಿಗೆ, ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ನಾನಾ ಬಗೆಯ ಸವಲತ್ತುಗಳನ್ನು ನೀಡಲು ತಾತ್ತ್ವಿಕವಾಗಿ ಒಪ್ಪಿಕೊಂಡು ಕಾರ್ಯೋನ್ಮುಖವಾಗಿದ್ದರೂ ದ್ರೋಣಾರ್ಜುನರು ಒಟ್ಟು ಗೂಡಿ ಆ ಸೌಲಭ್ಯ ಅವರಿಗೆ ದಕ್ಕದಂತೆ ತಡೆಯುತ್ತಿದ್ದಾರೆ.
ಏಕಲವ್ಯನನ್ನು ವಂಚಿಸಿದ ದ್ರೋಣಾರ್ಜುನರ ಹೆಸರಿನಲ್ಲಿ ಕ್ರೀಡಾ ಪ್ರಶಸ್ತಿಗಳನ್ನು ನೀಡುತ್ತಿರುವ ನಮ್ಮ ಸರ್ಕಾರ ಅಪ್ರಜ್ಞಾಪೂರ್ವಕವಾಗಿ ಶೇ. ೮೦ರಷ್ಟು ಪ್ರತಿಭೆಯನ್ನು ದಮನ ಮಾಡುವಲ್ಲಿ ಸಹಜವಾಗಿಯೇ ಯಶಸ್ವಿಯಾಗಿದೆ.
ಭಾರತ ಸರ್ಕಾರ ಅರ್ಜುನ ಪ್ರಶಸ್ತಿ, ದ್ರೋಣ ಪ್ರಶಸ್ತಿಗಳನ್ನು ನೀಡುವುದರ ಜತೆಗೆ ಈ ಮುಂದಿನಂತೆ ಒಂದು ಕ್ರೀಡಾ ಘೋಷಣೆಯನ್ನೂ ಅಳವಡಿಸಿ ಕೊಳ್ಳಬಹುದು: "ದ್ರೋಣ ಕಿ.ಜೈ, ಅರ್ಜುನ್ ಕಿ. ಜೈ.- ಏಕಲವ್ಯ ಕಿ ನೈ ನೈ."
- Login or register to post comments
- Email this page