You are hereಧರ್ಮಾಂಧರ ಕಣ್ತೆರಸಬಲ್ಲ ತೀರ್ಪು

ಧರ್ಮಾಂಧರ ಕಣ್ತೆರಸಬಲ್ಲ ತೀರ್ಪು


ಲೇಖಕರು: ಬಿ.ವಿ. ವೀರಭದ್ರಪ್ಪ
ಹಕ್ಕುಗಳು: ಲೇಖಕರವು

ವೇದ, ಉಪನಿಷತ್ತು ಮತ್ತು ಗೀತೆಗಳನ್ನು ಹಿಂದೂ ಸಂಪ್ರದಾಯ ವಾದಿಗಳು ಪರಮ ಪವಿತ್ರ ಗ್ರಂಥಗಳೆಂದು ಭಾವಿಸುತ್ತಾರೆ. ಅವುಗಳಲ್ಲಿರುವುದೆಲ್ಲಾ ಪರಮ ಸತ್ಯವೆಂದು ಅವರ ತಿಳಿವಳಿಕೆ. ಹಿಂದಿ ಪಾಕ್ಷಿಕ ಪತ್ರಿಕೆ ’ಸರಿತಾ’ದ ಜುಲೈ ೧೯೭೭ರ ಮೊದಲ ಸಂಚಿಕೆಯಲ್ಲಿ ಸೋಮ ಸಬ್‌ಲೋಕ್ ಎಂಬ ಲೇಖಕಿ ’ಆತ್ಮ ಮತ್ತು ಪುನರ್ಜನ್ಮ’ ಎಂಬ ತನ್ನ ಲೇಖನದಲ್ಲಿ ವೇದೋಪ ನಿಷತ್ತುಗಳ ಸೂಕ್ತಿಗಳನ್ನು ಒರೆಗೆ ಹಚ್ಚಿ ಅವೆಲ್ಲಾ ಅಸಂಬದ್ಧ ಪ್ರಲಾಪಗಳೆಂದು ಅಭಿಪ್ರಾಯಪಟ್ಟಳು.*

ಆ ಲೇಖನವನ್ನು ಓದಿದ ಕೆಲವರು ಕುಪಿತರಾಗಿ ವೇದೋಪ ನಿಷತ್ತುಗಳು ಪರಮ ಸತ್ಯವನ್ನು ಸಾರುವ ಪುಣ್ಯಗ್ರಂಥಗಳು, ಅವುಗಳನ್ನು ನಿಂದಿಸುವವರು ಧರ್‍ಮ ದ್ರೋಹಿಗಳು ಎಂದು ಬೊಬ್ಬೆ ಹಾಕಿದರು. ಈ ಟೀಕೆಗಳಿಗೆ ಉತ್ತರ ನೀಡಿ ಲೇಖಕಿ ಏಪ್ರಿಲ್ ೧೯೭೮ರ ಎರಡನೆಯ ಸಂಚಿಕೆಯಲ್ಲಿ ಒಂದು ಮರುಲೇಖನ ಬರೆದಳು. ಇದರಿಂದ ಇನ್ನಷ್ಟು ಆಘಾತಗೊಂಡ ಮತಾಂಧರು ಬೇರೇನೂ ಮಾಡಲು ತೋಚದೆ ಈ ಲೇಖನದಿಂದ ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಪೆಟ್ಟಾಗಿದೆ ಎಂದು ದೆಹಲಿ ಆಡಳಿತಕ್ಕೆ ಮೊರೆ ಇಟ್ಟರು; ಒತ್ತಾಯ ತಂದರು. ಭಾರತೀಯ ದಂಡಸಂಹಿತೆಯ ೯೫ ಎ ಕಲುಮಿನ ಪ್ರಕಾರ ದೆಹಲಿ ಆಡಳಿತ ೧೯೭೮ರಲ್ಲಿ ’ಸರಿತಾ’ದ ಪ್ರಕಾಶಕ ವಿಶ್ವನಾಥ್ ಮತ್ತು ಲೇಖಕಿ ಸೋಮ ಸಬ್‌ಲೋಕ್ ಅವರ ವಿರುದ್ಧ ಮೊಕದ್ದಮೆ ಹೂಡಿತು. ಈ ಮೊಕದ್ದಮೆಯ ವಿಚಾರಣೆ ಐದು ವರ್ಷಗಳ ಕಾಲ ನಡೆದು ಉತ್ತರ ಭಾರತದ ಜನರ ಕುತೂಹಲ ಕೆರಳಿಸಿತ್ತು. ದೆಹಲಿಯ ಅಧಿಕ ಮುಖ್ಯ ನ್ಯಾಯಾಧೀಶ ಸುಭಾಷ್ ವಾಸನ್ ಅವರು ತಮ್ಮ ಏದ್ವತ್‌ಪೂರ್ಣ ತೀರ್ಪಿನಲ್ಲಿ ಸಂಪಾದಕ ವಿಶ್ವನಾಥ್ ಮತ್ತು ಲೇಖಕಿ ಸೋಮ ಸಬ್‌ಲೋಕ್ ಅವರನ್ನು ಆರೋಪಗಳಿಂದ ವಿಮುಕ್ತಿಗೊಳಿಸಿದರು. ವಿಚಾರ ಪೂರ್ಣವಾದ ಅವರ ತೀರ್ಪಿನ ಸಂಕ್ಷಿಪ್ತ ಪಾಠವನ್ನು ಇಲ್ಲಿ ಕೊಡಲಾಗಿದೆ:

ಈ ಪ್ರಕರಣದ ಸಂಗತಿಗಳು ಅಷ್ಟೇನು ವಿವಾದಾಸ್ಪದವಾಗಿಲ್ಲ. ’ಸರಿತಾ’ ಪತ್ರಿಕೆಯ ಸಂಪಾದಕ-ಪ್ರಕಾಶಕ ಮತ್ತು ಲೇಖಕಿ ಏಪ್ರಿಲ್ ೧೯೭೮ರ ಎರಡನೆ ಸಂಚಿಕೆಯಲ್ಲಿ ’ಆತ್ಮ ಮತ್ತು ಪುನರ್ ಜನ್ಮ’ ಎಂಬ ಆಕ್ಷೇಪಿತ ಲೇಖನವನ್ನು ಬರೆದಿರುವುದಾಗಿ ಒಪ್ಪಿಕೊಂಡಿದ್ದಾರೆ.

ನಾನು ಸರ್ಕಾರದ ಪರ ವಕೀಲರ ಮತ್ತು ಆರೋಪಿಗಳ ಪರ ವಕೀಲರ ವಿದ್ವತ್‌ಪೂರ್ಣವಾದಗಳನ್ನೂ ಕೇಳಿದ್ದೇನೆ. ಆಕ್ಷೇಪಿತ ಲೇಖನವನ್ನು ನೇರವಾಗಿ ಓದಿದಾಗ ಆರೋಪಿಗಳು ಉದ್ದೇಶಪೂರ್ವಕವಾಗಿ ಹಿಂದೂಧರ್ಮವನ್ನು ಯಾವುದೇ ರೀತಿಯಿಂದ ಅವಮಾನಗೊಳಿಸಿಲ್ಲವೆಂದೂ, ಆಕ್ಷೇಪಿತ ಲೇಖನ ಸಾಹಿತ್ಯದ ಹಿನ್ನೆಲೆಯಲ್ಲಿ ಮಾಡಲಾದ ಗಂಭೀರ ಚರ್ಚೆ ಎಂದೂ ತಿಳಿದು ಬರುವುದಾಗಿ ಪ್ರತಿವಾದಿ ಪರ ವಕೀಲರು ತಮ್ಮ ವಾದವನ್ನು ಮಂಡಿಸಿದ್ದಾರೆ.

ಭಾರತೀಯ ನಾಗರಿಕರ ಯಾವುದೇ ಗುಂಪಿನ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಅಥವಾ ಅವಮಾನಗೊಳಿಸುವ ಉದ್ದೇಶದಿಂದ ಆಡಿದ ಮಾತು ಅಥವಾ ಬರೆದ ಬರಹ ಐ.ಪಿ.ಸಿ. ೨೯೫ಎ ಕಲಮು ಪ್ರಕಾರ ಅಪರಾಧವಾಗುತ್ತದೆ. ಸಂಪಾದಕ ಮತ್ತು ಲೇಖಕಿಯ ಉದ್ದೇಶ ಹಿಂದುಗಳ ಧಾರ್ಮಿಕ ಭಾವನೆಯನ್ನು ಕೆರಳಿಸುವುದಾಗಿದೆ ಎಂದು ಆ ಲೇಖನದಿಂದಲೇ ತೋರಿಸಿಕೊಡಬೇಕಾಗಿದೆ. ಆಕ್ಷೇಪಿತ ಲೇಖನ ಜುಲೈ ೭೭ರ ಮುಖ್ಯ ಲೇಖನಕ್ಕೆ ಪ್ರತಿಕ್ರಿಯೆಯಾಗಿ ಅನೇಕ ಓದುಗರಿಂದ ಬಂದ ಪ್ರತಿಭಟನೆ ಮತ್ತು ಟೀಕೆಗಳಿಗೆ ಉತ್ತರವಾಗಿ ಬರೆದಿರುವುದು ಸ್ಪಷ್ಟವಾಗಿದೆ. ಮುಖ್ಯ ಲೇಖನ ಆಪಾದನೆಗೆ ಒಳಗಾಗಿಲ್ಲ. ಆಕ್ಷೇಪಿತ ಮರು ಲೇಖನದಲ್ಲಿ ಆತ್ಮ ಸರ್ವಾಂತರ್ಯಾಮಿ ಅಲ್ಲ ಎಂಬ ಲೇಖಕರ ಅಭಿಪ್ರಾಯವನ್ನು ಒಬ್ಬ ಓದುಗ ವಿರೋಧಿಸಿದ್ದಾನೆ. ದೇಹ ಮತ್ತು ಆತ್ಮಕ್ಕೆ ನೇರ ಸಂಬಂಧವಿದೆ ಎಂದು ಲೇಖಕಿ ಹೇಳಿದ್ದಾರೆ. ಆದರೆ ಒಬ್ಬ ಓದುಗರ ಆತ್ಮದ ಕೆಲಸಗಳು ದೇಹದ ಕೆಲಸಗಳಿಗಿಂತ ಭಿನ್ನ ಎಂದು ಅಭಿಪ್ರಾಯ ಪಟ್ಟಿದ್ದಾನೆ.

ಗೀತೆಯ ಶ್ಲೋಕ (೧೩/೩೩) ಹೇಳುವಂತೆ ಒಂದು ಆತ್ಮ ಎಲ್ಲ ದೇಹಗಳನ್ನೂ ಬೆಳಗಿಸುತ್ತದೆ ಎಂಬುದು ತಪ್ಪು, ಪ್ರತಿಯೊಬ್ಬರೂ ಭಿನ್ನ ಅಭಿರುಚಿ, ಭಿನ್ನ ಕೆಲಸ ಮತ್ತು ಭಿನ್ನ ನಿಲುವುಗಳನ್ನು ಹೊಂದಿದ್ದಾರೆ. ಆದ್ದರಿಂದ ಈ ಜೀವಿಗಳೆಲ್ಲ ಒಂದೇ ಆತ್ಮದಿಂದ ಮೂಡಿಬಂದವರೆಂದು ಹೇಳುವುದು ಸರಿಯಲ್ಲ ಎಂದು ಲೇಖಕಿ ಅಭಿಪ್ರಾಯ ಪಟ್ಟಿದ್ದಾರೆ.

ಆತ್ಮ ನಿರಾಕಾರವಾದುದು. ಕೆಲವರು ಅದರ ಇರುವಿಕೆಯನ್ನು ನಂಬುತ್ತಾರೆ. ಮತ್ತೆ ಕೆಲವರು ನಂಬುವುದಿಲ್ಲ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿ ಆತ್ಮ ಇದೆ ಅಥವಾ ಇಲ್ಲ ಎಂದು ಪ್ರತಿಪಾದಿಸಲು ಸ್ವತಂತ್ರನಾಗಿದ್ದಾನೆ. ಆತ್ಮದ ಇರುವಿಕೆಯ ಬಗೆಗೆ ಓದುಗರು ಎತ್ತಿದ ಸಂದೇಹಗಳಿಗೆ ಲೇಖಕಿ ನೀಡಿದ ಉತ್ತರ ಯಾವುದೇ ರೀತಿಯಿಂದ ಹಿಂದುಗಳ ಧಾರ್ಮಿಕ ಭಾವನೆಗಳನ್ನು ಕೆರಳಿಸಲು ಯತ್ನಿಸುತ್ತದೆ ಎಂದು ನನಗೆ ಕಂಡುಬರುವುದಿಲ್ಲ. ಲೇಖಕಿ ಗೀತೆಯ ಶ್ಲೋಕ(೧೩/೩೩)ದಲ್ಲಿ ವ್ಯಕ್ತವಾಗಿರುವ ಅಭಿಪ್ರಾಯವನ್ನು ಒಪ್ಪಿಲ್ಲ. ಆತ್ಮ ಇಲ್ಲ ಎಂಬ ಬಗೆಗೆ ತಮ್ಮ ವಾದಸರಣಿಯನ್ನು ಮಂಡಿಸಿದ್ದಾರೆ.

ವೇದ ಮತ್ತು ಶಾಸ್ತ್ರಗಳಲ್ಲಿ ಹೇಳಿದೆ ಎಂಬ ಒಂದೇ ಕಾರಣಕ್ಕಾಗಿ ನಾವು ಯಾವುದೇ ಒಂದು ವಸ್ತುವಿನ ಇರುವಿಕೆಯನ್ನು ಒಪ್ಪಿಕೊಳ್ಳಬಾರದು. ಅಂತಹ ಒಪ್ಪಿಗೆ ನಾವು ಈ ಶಾಸ್ತ್ರಗಳಿಗೆ ಅಧೀನವೆಂದು ತೋರಿಸುತ್ತದೆ ಎಂದು ಲೇಖಕಿ ಅಭಿಪ್ರಾಯಪಟ್ಟಿದ್ದಾರೆ, ಶಾಸ್ತ್ರಗಳು ದೇವರಿಂದ ರಚಿತವಾದುವು ಎಂದು ವೈಜ್ಞಾನಿಕವಾಗಿ ಸಾಬೀತಾಗುವವರೆಗೆ ನಾವು ಅವುಗಳನ್ನು ಸರಿ ಎಂದು ಒಪ್ಪಿಕೊಳ್ಳಲು ತಯಾರಿಲ್ಲ ಎಂದು ಸಹ ಹೇಳಿದ್ದಾರೆ. ಮುಂದುವರಿದು ಶಾಸ್ತ್ರಗಳ ತುಂಬ ಹೊಲಸು ಸಂಗತಿಗಳಿವೆ, ಅವುಗಳಲ್ಲಿರುವುದು ಸರಿ ಎಂದು ಅನಾಗರಿಕ ಜನ ಮಾತ್ರ ಒಪ್ಪಿಕೊಳ್ಳಲು ಸಾಧ್ಯ ಎಂದಿದ್ದಾರೆ. ಈ ವಾದದ ಬೆಂಬಲಕ್ಕೆ ಲೇಖಕಿ ಹಿಂದುಗಳ ಪವಿತ್ರ ಗ್ರಂಥವಾದ ಋಗ್ವೇದದಲ್ಲಿ ಬರುವ ಯಮ ಮತ್ತು ಯಮಿಯರ ಸಂಬಂಧವನ್ನು ಪ್ರಸ್ತಾಪಿಸಿದ್ದಾರೆ. ಯಮ ಯಮಿಯರು ಸೋದರ ಸೋದರಿಯರು, ಯಮಿ ಯಮನ ಬಳಿ ಸಾರಿ ತನ್ನ ಪ್ರಣಯ ಕಾತರವನ್ನು ವ್ಯಕ್ತಪಡಿಸುತ್ತಾಳೆ ಮತ್ತು ತನ್ನೊಡನೆ ಕಾಮಕ್ರೀಡೆಗೆ ಅವನನ್ನು ಆಹ್ವಾನಿಸುತ್ತಾಳೆ, ಯಮನು ಅವಳ ಆಹ್ವಾನವನ್ನು ತಿರಸ್ಕರಿಸುತ್ತಾನೆ.

ಪಂಡಿತ ರಾಮಗೋವಿಂದ ತ್ರಿವೇದಿ ಸಂಪಾದಿಸಿರುವ ಋಗ್ವೇದದ ೧೯೫೪ರ ಹಿಂದಿ ಆವೃತ್ತಿಯನ್ನು ನಾನು ಪರಿಶೀಲಿಸಿದೆ. ಅದರ ಪುಟ ೧೨೨೧ರಲ್ಲಿರುವ ಸೂಕ್ತ ೧೦ರಲ್ಲಿ ಈ ಎಲ್ಲ ಸಂಗತಿಗಳು ಇರುವುದು ನಿಜ. ಅಲ್ಲಿ ಯಮ ಮತ್ತು ಯಮಿಯರ ಪೂರ್ಣ ಸಂಭಾಷಣೆ ಇದೆ. ಅವರನ್ನು ಸೋದರ ಸೋದರಿಯರೆಂದು ತೋರಿಸಲಾಗಿದೆ. ಸೋದರಿ ಸಂಭೋಗ ಸುಖಕ್ಕಾಗಿ ತನ್ನ ಸೋದರನಲ್ಲಿ ಕೋರಿಕೆ ಸಲ್ಲಿಸುತ್ತಾಳೆ. ಯಮ ಈ ಪ್ರಣಯವನ್ನು ಇಚ್ಛಿಸುವುದಿಲ್ಲ. ಲೇಖನದಲ್ಲಿ ಕೊಡಲಾದ ಹೇಳಿಕೆಗೆ ಋಗ್ವೇದದಲ್ಲಿರುವ ಸಂಗತಿಗಳು ಆಧಾರವಾಗಿವೆ. ಮುಖ್ಯ ಲೇಖನವನ್ನು ವಿರೋಧಿಸಿದ ಓದುಗರಿಗೆ ಈ ಮಾಹಿತಿಯನ್ನು ಒದಗಿಸುವುದಕ್ಕಾಗಿ ಲೇಖಕಿ ಈ ಸತ್ಯಸಂಗತಿಗಳನ್ನು ನೀಡಿರುವುದರಿಂದ ಹಿಂದುಗಳ ಮತೀಯ ಭಾವನೆಯನ್ನು ಕೆರಳಿಸುವ ದುರುದ್ದೇಶ ಅಥವಾ ದ್ವೇಷ ಭಾವನೆ ಇರುವುದು ಕಂಡುಬರುವುದಿಲ್ಲ.

ಕೆಲವು ಓದುಗರು ಅಥರ್ವಣವೇದ (೫/೧/೨) ಮತ್ತು ಋಗ್ವೇದ (೧/೬೪/೨೦)ಗಳ ಆಧಾರದ ಮೇಲೆ ಆತ್ಮದ ಇರುವಿಕೆಯನ್ನು ಸಮರ್ಥಿಸಿ ಕೊಂಡಿದ್ದಾರೆ. ಈ ಪ್ರಶ್ನೆಗೆ ಉತ್ತರವಾಗಿ ಯಾವುದೇ ಒಂದು ವಸ್ತು ಇದೆ ಎಂದು ವೇದಶಾಸ್ತ್ರಗಳು ಹೇಳಿವೆ ಎಂಬ ಕಾರಣಕ್ಕಾಗಿಯೇ, ಅದನ್ನು ವೈಜ್ಞಾನಿಕವಾಗಿ ಸಾಬೀತುಪಡಿಸದ ಹೊರತು, ನಾವು ಅದನ್ನು ಒಪ್ಪಿಕೊಳ್ಳಬೇಕಾಗಿಲ್ಲ ಎಂದು ಲೇಖಕಿ ಹೇಳಿರುವುದು ಸಮಂಜಸವಾಗಿದೆ. ಭಾರತ ಸಂವಿಧಾನದ ೫೧ನೆಯ ವಿಧಿ ವೈಜ್ಞಾನಿಕ ಮತ್ತು ಸುಧಾರಣ ಪ್ರವೃತ್ತಿಯನ್ನು ಬೆಳೆಸಲು ಅವಕಾಶ ನೀಡುತ್ತದೆ. ಅದರ ಪ್ರಕಾರ ಪ್ರತಿಯೊಬ್ಬರಿಗೂ ಆತ್ಮದ ಇರುವಿಕೆ ಮತ್ತು ಪುನರ್‌ಜನ್ಮ ಸಿದ್ಧಾಂತವನ್ನು ಪ್ರಶ್ನಿಸಲು ಸ್ವಾತಂತ್ರ್ಯವಿದೆ. ಈ ಉದ್ದೇಶದಿಂದ ಲೇಖಕಿ ಆಕ್ಷೇಪಿತ ಲೇಖನದ ಮೂಲಕ ಓದುಗರಿಗೆ ತಿಳಿವಳಿಕೆ ನೀಡಲು ಯತ್ನಿಸಿದ್ದಾರೆ. ಇದಕ್ಕಾಗಿ ಆಕೆ ಹಿಂದುಗಳ ಮತೀಯ ಭಾವನೆ ಕೆರಳಿಸಿದ್ದಾರೆ ಎಂಬ ಆಪಾದನೆಗೆ ಒಳಗಾಗಿ ಮೂರು ವರ್ಷಗಳ ಕಾಲ ವಿಚಾರಣೆಯ ಯಾತನೆಯನ್ನು ಅನುಭವಿಸಿದ್ದಾರೆ. ಇದು ಲೇಖಕ ನಿರ್ಭೀತವಾಗಿ ತನ್ನ ಅಭಿಪ್ರಾಯ ವ್ಯಕ್ತಪಡಿಸಲು ಇರುವ ಮೂಲಭೂತ ಹಕ್ಕಿಗೆ ಅಡ್ಡಿಯುಂಟುಮಾಡುವುದಕ್ಕಿಂತ ಕಡಿಮೆಯಾದುದಲ್ಲ. ಆಕ್ಷೇಪಿತ ಲೇಖನ ಸತ್ಯಶೋಧನೆಯ ಒಂದು ಪ್ರಯತ್ನವೇ ಹೊರತು ಬೇರೆಯಲ್ಲ. ಲೇಖಕಿ ತನ್ನ ವಾದಕ್ಕೆ ಅಗತ್ಯವಾದ ಕಾರಣಗಳನ್ನು ನೀಡಿದ್ದಾರೆ. ಭಾರತ ಧರ್ಮ ನಿರಪೇಕ್ಷಿತ (Seಛಿuಟಚಿಡಿ) ದೇಶ. ಪ್ರತಿಯೊಬ್ಬರೂ ತಮಗೆ ಇಷ್ಟವಾದ ಧರ್ಮವನ್ನು ಪ್ರತಿಪಾದಿಸಲು ಮತ್ತು ಧಾರ್ಮಿಕ ವಿಷಯಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸ್ವತಂತ್ರರಾಗಿದ್ದಾರೆ. ಸತ್ಯ ಯಾರೊಬ್ಬರ ಆಸ್ತಿಯೂ ಅಲ್ಲ. ಸತ್ಯ ಹಿಂದುಗಳ ಆಸ್ತಿಯಲ್ಲ. ಯೇಸು, ಬುದ್ಧ, ಮಹಮ್ಮದ್ ಅಥವಾ ಕೃಷ್ಣ ಇವರೊಬ್ಬರ ಸ್ವಂತ ಆಸ್ತಿಯೂ ಅಲ್ಲ. ಅದು ಎಲ್ಲರ ಆಸ್ತಿ.

ಪಂಡಿತ ರಾಮಗೋವಿಂದ ತ್ರಿವೇದಿ ಸಂಪಾದಿಸಿರುವ ಋಗ್ವೇದದ ೧೯೫೪ರ ಆವೃತ್ತಿಯ ಭಾಗ ೫, ೬ ಮತ್ತು ೭ರ ಸೂಕ್ತ ೬೧ರಲ್ಲಿ ತಂದೆಯು ಮಗಳೊಡನೆ ಲೈಂಗಿಕ ಸಂಬಂಧ ಹೊಂದಿರುವ ಸಂಗತಿ ಇರುವುದನ್ನು ಲೇಖಕಿ ಪ್ರಸ್ತಾಪಿಸಿದ್ದಾರೆ. ಪರಿಶೀಲಿಸಲಾಗಿ ಅದು ನಿಜ ಎಂದು ತಿಳಿಯಿತು. ದಶರಥ ಜಾತಕ ಕಥೆಯಲ್ಲಿ ರಾಮ ಮತ್ತು ಸೀತೆಯರು ಅಣ್ಣ ತಂಗಿಯರೆಂದು ತೋರಿಸಲಾಗಿದ್ದು ನಂತರ ಅವರು ಮದುವೆಯಾದರೆಂದು ಹೇಳಲಾಗಿದೆ. ಈ ಉಲ್ಲೇಖಗಳನ್ನು ವೇದಪುರಾಣಗಳು ಹೊಲಸು ಸಂಗತಿಗಳಿಂದ ಕೂಡಿವೆ ಎಂಬುದಕ್ಕೆ ದೃಷ್ಟಾಂತವಾಗಿ ಕೊಡಲಾಗಿದೆ.

ಬೇರೊಂದು ಕಡೆ ಸ್ತ್ರೀಯು ಸಂತಾನಕ್ಕಾಗಿ ೧೧ ಪುರುಷರ ಸಂಗ ಮಾಡುವುದಕ್ಕೆ ವೇದಗಳು ಅನುಮತಿ ನೀಡುತ್ತವೆ ಎಂದು ಸ್ವಾಮಿ ದಯಾನಂದರು ಹೇಳಿರುವುದನ್ನು ಪ್ರಸ್ತಾಪಿಸಲಾಗಿದೆ. ಈ ಹೇಳಿಕೆಯಲ್ಲಿ ಸುಳ್ಳೇನೂ ಇಲ್ಲ. ಅನೇಕ ಧಾರ್ಮಿಕ ಗ್ರಂಥಗಳಲ್ಲಿ ಹಾಗೆ ಹೇಳಿದೆ.

ಆಕ್ಷೇಪಿತ ಲೇಖನ ಒಂದು ಧಾರ್ಮಿಕ ಗ್ರಂಥಗಳ ರಚನಾತ್ಮಕ ವಿಮರ್ಶೆಯಾಗಿದೆ. ಅದರ ಉದ್ದೇಶ ನಿಜಸಂಗತಿಗಳನ್ನು ಓದುಗರ ಮುಂದೆ ವಿಶದಪಡಿಸುವುದೇ ಹೊರತು ಬೇರೆಯಲ್ಲ.

ಮೇಲಿನ ವಿವೇಚನೆಯಿಂದ ಆರೋಪ ನಿರಾಧಾರವಾದುದೆಂದು ಮನವರಿಕೆಯಾಗಿದ್ದು, ಇಬ್ಬರು ಆರೋಪಿಗಳನ್ನೂ ಆಪಾದನೆಯಿಂದ ವಿಮುಕ್ತಿ ಗೊಳಿಸಲಾಗಿದೆ.

ಸಹಿ: ಸುಭಾಷ್ ವಾಸನ್
(ಅಧಿಕ ಮುಖ್ಯ ನಗರ ನ್ಯಾಯಾಧೀಶರು, ದೆಹಲಿ).


* ಸೋಮ ಸಬ್‌ಲೋಕ್ ಎಂಬ ಲೇಖಕಿ ಹಿಂದಿ ಪ್ರಾಕ್ಷಿಕ ಪತ್ರಿಕೆ ’ಸರಿತಾ’ದಲ್ಲಿ ವೇದ, ಉಪನಿಷತ್ತುಗಳನ್ನು ಓರೆಗೆ ಹಚ್ಚಿ ಅವೆಲ್ಲ ಅಸಂಬದ್ಧ ಪ್ರಲಾಪಗಳೆಂದು ಅಭಿಪ್ರಾಯಪಟ್ಟು ೧೯೭೭ರಲ್ಲಿ "ಆತ್ಮ ಮತ್ತು ಪುನರ್ಜನ್ಮ" ಎಂಬ ಲೇಖನ ಬರೆದರು. ಈ ಕಾರಣಕ್ಕಾಗಿ ಲೇಖಕಿ ಹಾಗೂ ಪತ್ರಿಕೆಯ ಸಂಪಾದಕ, ಪ್ರಕಾಶಕ ವಿಶ್ವನಾಥ್‌ರ ಮೇಲೆ ಮೊಕದ್ದಮೆ ಹೂಡಲಾಯಿತು. ಐದು ವರ್ಷಗಳ ಕಾಲ ನಡೆದ ಈ ಕುತೂಹಲಕರ ಪ್ರಕರಣದ ಇಬ್ಬರು "ಆರೋಪಿಗಳನ್ನು" ವಿಮುಕ್ತಿಗೊಳಿಸಿದ ದಿಲ್ಲಿಯ ಅಧಿಕ ಮುಖ್ಯ ನ್ಯಾಯಾಧೀಶ ಸುಭಾಷ್ ವಾಸನ್ ನೀಡಿದ ತೀರ್ಪಿನ ವಿವರ ಇಲ್ಲಿದೆ.

ಓದುಗರ ಅಭಿಪ್ರಾಯಗಳು

Search