You are hereಕುತೂಹಲ, ಬೆರಗುಗಳ ಹಾದಿಯಲ್ಲಿ

ಕುತೂಹಲ, ಬೆರಗುಗಳ ಹಾದಿಯಲ್ಲಿ


ಲೇಖಕರು: ಬಿ.ವಿ. ವೀರಭದ್ರಪ್ಪ
ಹಕ್ಕುಗಳು: ಲೇಖಕರವು

ಏನೇ ಕಾಣಲಿ, ಕೇಳಲಿ, ಇದೇನು? ಇದೇಕೆ? ಇತ್ಯಾದಿ ಪ್ರಶ್ನೆಗಳನ್ನು ಕೇಳುವುದು ಮಕ್ಕಳ ಸ್ವಭಾವ. ಈ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುತ್ತಾ ಅವರು ತಮಗರಿಯದ ಪ್ರಪಂಚವನ್ನೂ ಕಂಡುಹಿಡಿಯತೊಡಗುತ್ತಾ ಮಕ್ಕಳ ಕುತೂಹಲ ಬೆರಗುಗಳನ್ನು ತಣಿಸಬೇಕಾದುದು ಹಿರಿಯರ ಕರ್ತವ್ಯ. ಅನೇಕ ಸಾರಿ ಹಿರಿಯರು ತಮ್ಮ ಅಜ್ಞಾನದಿಂದಲೊ, ಮುಜುಗರದಿಂದಲೊ ಮಕ್ಕಳ ಪ್ರಶ್ನೆಗಳಿಗೆ ಉತ್ತರ ಹೇಳಲು ಅಸಮರ್ಥರಿರುತ್ತಾರೆ. ಆದರೆ ತಮ್ಮ ಅಸಮರ್ಥತೆಯನ್ನು ಒಪ್ಪಿಕೊಳ್ಳಲಾರದೆ ಪುರಾಣಗಳಿಗೆ ಅಂದರೆ ಮಿಥ್ಯಗಳಿಗೆ ಶರಣಾಗುತ್ತಾರೆ; ಕಾಗಕ್ಕ ಗುಬ್ಬಕ್ಕ ಕಥೆ ಹೇಳಿ ತಮಗೆ ತಾವೇ ಮೋಸ ಪಡಿಸಿ ಕೊಳ್ಳುವುದಲ್ಲದೆ ಮಕ್ಕಳ ಕುತೂಹಲ, ಬೆರಗುಗಳ ಹಂಬಲವನ್ನು ಚಿಗುರಿನಲ್ಲೇ ಚಿವುಟಿಹಾಕಲು ಯತ್ನಿಸುತ್ತಾರೆ. ಮಕ್ಕಳು ಸಹಜ ಕುತೂಹಲ ಕಾತರಗಳನ್ನು ಕೊನೆಯವರೆಗೆ ಉಳಿಸಿಕೊಂಡಾಗ ವೈಜ್ಞಾನಿಕತೆ ನಮ್ಮ ಜೀವನ ವಿಧಾನವಾಗುತ್ತದೆ.

ವಿಜ್ಞಾನಿಯ ಕಾರ್ಯವಿಧಾನ ಹೇಗಿರುತ್ತದೆ? ಅವನು ಪ್ರಕೃತಿಯಲ್ಲಿ ನಡೆಯುವ ಘಟನೆಗಳನ್ನು ಬೆರಗುಗಣ್ಣಿನಿಂದ ನಿರೀಕ್ಷಿಸುತ್ತಾನೆ. ಅವಕ್ಕೆ ಸಂಬಂಧಿಸಿದ ಅಲ್ಲಿಯವರೆಗೆ ನಡೆದ ಸಂಶೋಧನೆಗಳನ್ನು ಶ್ರದ್ಧೆಯಿಂದ ಅಧ್ಯಯನ ಮಾಡುತ್ತಾನೆ. ಮುಂದಿನ ಅನ್ವೇಷಣೆಗಾಗಿ ಪ್ರಯೋಗಾಲಯದಲ್ಲಿ ನಡೆಸಬಹುದಾದ ಪ್ರಯೋಗಗಳನ್ನು ರೂಪಿಸುತ್ತಾನೆ. ಪ್ರಯೋಗದ ನಂತರ ಪರಿಣಾಮವನ್ನು ನಿಖರವಾಗಿ ದಾಖಲು ಮಾಡಿಕೊಳ್ಳುತ್ತಾನೆ. ತಾನು ನಿರೀಕ್ಷಿಸುವ ಕಾರ್‍ಯಕಾರಣ ಸಂಬಂಧಗಳು ಕಂಡುಬಂದಾಗ ಅವುಗಳನ್ನು ಸಾಮಾನ್ಯೀಕರಿಸಿ ಒಂದು ವಾದದ ರೂಪದಲ್ಲಿ ಮಂಡಿಸುತ್ತಾನೆ; ಅನೇಕ ಪ್ರಯೋಗಗಳಿಂದ ಮರುಪರೀಕ್ಷಿಸುತ್ತಾನೆ. ತನ್ನ ಪ್ರಯೋಗಗಳು ಯಶಸ್ವಿಯಾದರೆ ಪ್ರಕೃತಿಯ ಹೊಸ ನಿಯಮಗಳನ್ನು ಕಂಡುಹಿಡಿದ ತೃಪ್ತಿ ಅವನಿಗೆ ಸಿಗುತ್ತದೆ. ಅಂತಹ ಹೊಸ ಅನ್ವೇಷಣೆಯನ್ನು ಆಯಾ ವಿಷಯಕ್ಕೆ ಸಂಬಂಧಿಸಿದ ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟಿಸುತ್ತಾನೆ, ಆ ಕ್ಷೇತ್ರದಲ್ಲಿ ಕೆಲಸ ಮಾಡುವ ಪ್ರಪಂಚದ ಇತರ ವಿಜ್ಞಾನಿಗಳು ಅದನ್ನು ಮರು ಪ್ರಯೋಗಗಳ ಮೂಲಕ ದೃಢಪಡಿಸುತ್ತಾರೆ; ಇಲ್ಲವೆ ಪ್ರಯೋಗಗಳಲ್ಲಿರುವ ದೋಷಗಳನ್ನು ಎತ್ತಿ ತೋರಿಸುತ್ತಾರೆ. ಇದು ವೈಜ್ಞಾನಿಕ ವಿಧಾನ. ಜೀವನದ ದೈನಂದಿನ ಸಮಸ್ಯೆಗಳನ್ನು ವಿಜ್ಞಾನದ ಬೆಳಕಿನಲ್ಲಿ ಬಿಡಿಸಲೆತ್ನಿಸುವುದು ವೈಜ್ಞಾನಿಕತೆ. ವೈಜ್ಞಾನಿಕತೆಯನ್ನು ಬೆಳೆಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಎಂದು ಸಂವಿಧಾನ ಸಾರುತ್ತದೆ.

ನಮ್ಮ ಶಾಲೆಗಳು ಮಕ್ಕಳ ಕುತೂಹಲ ಮತ್ತು ಕಲ್ಪನೆಗಳನ್ನು ಅರಳಿಸಲು ಯತ್ನಿಸುತ್ತಿಲ್ಲ. ಕಂದಾಚಾರದ ತಂದೆತಾಯಿಯರು ಮತ್ತು ಪ್ರಯೋಗ ಸಲಕರಣೆಗಳಿರದ ಶಾಲೆಗಳು ನಮ್ಮ ಮಕ್ಕಳಲ್ಲಿ ವೈಜ್ಞಾನಿಕತೆಯನ್ನು ಬೆಳೆಸಲು ಅಸಮರ್ಥವಾಗಿವೆ ಎಂದು ವಿಷಾದದಿಂದ ಹೇಳಬೇಕಾಗಿದೆ.

ಪ್ರಾಚೀನ ಭಾರತದಲ್ಲಿ ವಿಜ್ಞಾನ ಅದ್ಭುತ ಯಶಸ್ಸನ್ನು ಗಳಿಸಿತ್ತು ಎಂದು ಹೇಳಲಾಗುತ್ತಿದೆ. ಆದರೆ ಅಂದಿನ ವಿಜ್ಞಾನಿಗಳು ತಾವು ಗಳಿಸಿದ ಜ್ಞಾನವನ್ನು ನಿಗೂಢವಾಗಿಟ್ಟರು. ಅದನ್ನು ಪ್ರಸಾರ ಮಾಡಿ ಜನಸಾಮಾನ್ಯರಲ್ಲಿ ವೈಜ್ಞಾನಿಕ ದೃಷ್ಟಿಯನ್ನು ಬೆಳೆಸಲಿಲ್ಲ. ಅದ್ದರಿಂದ ವೈಜ್ಞಾನಿಕ ಬೆಳವಣಿಗೆ ನಮ್ಮಲ್ಲಿ ಮುಂದುವರಿಯಲಿಲ್ಲ.

ಪಾಶ್ಚಾತ್ಯ ದೇಶಗಳಲ್ಲಿ ವಿಜ್ಞಾನ ಉಗಮವಾದುದು ೧೭ನೆಯ ಶತಮಾನದಿಂದೀಚೆಗೆ. ಹೆಜ್ಜೆಹೆಜ್ಜೆಗೂ ಅದು ಕಂದಾಚಾರದ ಚರ್ಚನ್ನು ವಿರೋಧಿಸಿ ತನ್ನ ಪ್ರಗತಿಯನ್ನು ಸಾಧಿಸಬೇಕಾಗಿತ್ತು. ಸಹಜವಾಗಿ ವಿಜ್ಞಾನಿಗಳಿಗೆ ಜನ ಸಾಮಾನ್ಯರ ಬೆಂಬಲ ಬೇಕಾಯಿತು. ಅವರು ಜನರಿಗೆ ಉಪಯೋಗವಾಗುವ ಸಂಶೋಧನೆಗಳಲ್ಲಿ ತೊಡಗಿದರು. ಅಲ್ಲದೆ ಜನರಲ್ಲಿ ವೈಜ್ಞಾನಿಕ ದೃಷ್ಟಿಯನ್ನು ಬೆಳೆಸಿದರು. ವಿಜ್ಞಾನದ ಬೆಳವಣಿಗೆಗೆ ಜನಸಾಮಾನ್ಯರ ಬೆಂಬಲ ಹೆಚ್ಚಾದಂತೆಲ್ಲಾ ಚರ್ಚಿನ ವಿರೋಧ ಮತ್ತು ಕಂದಾಚಾರ ಕಡಿಮೆಯಾಯಿತು. ವೈಜ್ಞಾನಿಕತೆ ಪಾಶ್ಚಾತ್ಯರ ಜೀವನ ವಿಧಾನವಾಯಿತು.

ಭಾರತೀಯರಿಗೆ ಆಧುನಿಕ ವಿಜ್ಞಾನದ ಪರಿಚಯವಾದುದು ಕಳೆದ ನೂರು ವರ್ಷಗಳಿಂದೀಚೆಗೆ. ಸ್ವಾತಂತ್ರ್ಯಾನಂತರ ವೈಜ್ಞಾನಿಕ ಬೆಳವಣಿಗೆಗೆ ನಾವು ವಿಶೇಷ ಗಮನ ಕೊಡುತ್ತಿದ್ದೇವೆ. ಕಂಪ್ಯೂಟರ್ ಯುಗಕ್ಕೆ ಜಿಗಿಯುತ್ತಿದ್ದೇವೆ. ಇಂದು ಅತಿ ಹೆಚ್ಚು ವಿಜ್ಞಾನಿಗಳನ್ನು ಹೊಂದಿರುವ ದೇಶಗಳಲ್ಲಿ ಭಾರತ ನಾಲ್ಕನೆಯ ಸ್ಥಾನ ಪಡೆದಿದೆ. ಇದು ಹೆಮ್ಮೆಯ ವಿಷಯವಾದರೂ ವಿಜ್ಞಾನಿಗಳ ಸಂಖ್ಯೆಯೊಡನೆ ಗುಣವನ್ನು ಹೋಲಿಸಿದಾಗ ನಾವು ನಿರಾಶರಾಗಬೇಕಾಗಿದೆ. ಏಕೆಂದರೆ ನಮ್ಮ ವಿಜ್ಞಾನಿಗಳು ಪ್ರವೃತ್ತಿಯಿಂದ ವೃತ್ತಿಯನ್ನಾರಿಸಿಕೊಂಡವರಲ್ಲ. ಸಂಪಾದನೆಯ ಸುಲಭ ಮಾರ್ಗ ಎಂದು ವಿಜ್ಞಾನ ವನ್ನಾರಿಸಿಕೊಂಡವರಾಗಿದ್ದಾರೆ. ಪ್ರವೃತ್ತಿಯಿಂದ ಅವರಲ್ಲಿ ಅನೇಕರು ಕಂದಾಚಾರಿಗಳು. ನಮ್ಮ ವಿಜ್ಞಾನಿಗಳು ಇಬ್ಬಗೆಯ ಜೀವನ ನಡೆಸುತ್ತಿದ್ದಾರೆ. ಪ್ರಯೋಗಾಲಯದಲ್ಲಿ ಅವರು ವೈಜ್ಞಾನಿಕ ವಿಧಾನವನ್ನು ಅನುಸರಿಸತ್ತಾರೆ; ಹೊರಗೆ ಕಂದಾಚಾರದ ಆಚರಣೆಗಳಲ್ಲಿ ತೊಡಗುತ್ತಾರೆ. ತಮ್ಮ ಪ್ರಯೋಗಗಳಿಗೆ ಯಶಸ್ಸು ದೊರೆಯಲಿ ಎಂದು ದೇವರಿಗೆ ಹರಕೆ ಪೂಜೆಗಳನ್ನು ಸಲ್ಲಿಸುತ್ತಾರೆ. ಜೀವನದ ಸಮಸ್ಯೆಗಳನ್ನು ಕುರಿತು ಸಂಶೋಧನೆ ಮಾಡಲು ಅವರು ಪೂರ್ಣ ಅಸಮರ್ಥರಾಗಿದ್ದಾರೆ. ಇದರಿಂದ ವಿಜ್ಞಾನದ ಬೆಳವಣಿಗೆಗಾಗಿ ನಾವು ವೆಚ್ಚ ಮಾಡುವ ಹಣದಲ್ಲಿ ಬಹುಪಾಲು ಕಂದಾಚಾರದ ಮರುಭೂಮಿಯಲ್ಲಿ ಹಿಂಗಿ ಹೋಗುತ್ತದೆ.

ಪವಾಡಗಳನ್ನು ಮಾಡುವುದಾಗಿ ಜನರನ್ನು ವಂಚಿಸುವ ಧಾರ್ಮಿಕ ವ್ಯಕ್ತಿಗಳಿಗೆ ನಮ್ಮ ದೇಶದಲ್ಲಿ ಕೊರತೆ ಇಲ್ಲ. ಅವರ ಅನುಯಾಯಿಗಳಾಗಿ, ಅವರ ಅತೀಂದ್ರಿಯ ಶಕ್ತಿಯನ್ನು ಸಮರ್ಥಿಸುವ ವಿಜ್ಞಾನಿಗಳೂ ನಮ್ಮಲ್ಲಿ ಇದ್ದಾರೆ. ಯಾರು ಜನರ ಮೂಢನಂಬಿಕೆಗಳನ್ನು ನಿವಾರಿಸಿ ಅವರಲ್ಲಿ ವೈಜ್ಞಾನಿಕ ಭಾವನೆಗಳನ್ನು ಬೆಳೆಸಬೇಕೋ ಅಂತಹ ವಿಜ್ಞಾನಿಗಳೇ ಮೌಢ್ಯವನ್ನು ಹರಡುತ್ತಿರುವುದು ನಮ್ಮ ದೇಶದ ದೊಡ್ಡ ದುರಂತ.

ಆದರೆ ಇತ್ತೀಚೆಗೆ ಕೆಲವು ವಿಜ್ಞಾನಿಗಳಾದರೂ ಪವಾಡ ಪುರುಷರ ವಂಚನೆಗಳನ್ನು ಬಹಿರಂಗಗೊಳಿಸಲು ಮತ್ತು ಜನರ ವೈಜ್ಞಾನಿಕ ದೃಷ್ಟಿಯನ್ನು ಬೆಳೆಸಲು ಮುಂದೆ ಬರುತ್ತಿದ್ದಾರೆ. ಅವರ ಪ್ರಯತ್ನದಿಂದ ಪಾಂಡವಪುರದ ಸಾಯಿಕೃಷ್ಣನ ಪವಾಡದ ಹಿಂದಿನ ವಂಚನೆ ಬಯಲಾಯಿತು. ಗಾಳಿಯಿಂದ ಉಂಗುರಗಳನ್ನು ಸೃಷ್ಟಿಸುವ ಸಾಯಿಬಾಬಾ ಕುಂಬಳಕಾಯಿಯನ್ನು ಸೃಷ್ಟಿಸಲಾರದೆ ಹೋದ. ಗುಲ್ಬರ್ಗಾ ವಿಭಾಗದ ಗ್ರಾಮಾಂತರ ಪ್ರದೇಶಗಳನ್ನು ಬಾಧಿಸುತ್ತಿದ್ದ ’ಭಾನಾಮತಿ’ಯ ಪೀಡೆ ಅತೀಂದ್ರಿಯ ಶಕ್ತಿಯ ಫಲವಾಗಿರದೆ, ಒಂದು ಬಗೆಯ ಮಾನಸಿಕ ರೋಗ ಎಂದು ಡಾ|| ಎಚ್. ನರಸಿಂಹಯ್ಯ ಅಧ್ಯಕ್ಷರಾಗಿದ್ದ ಮಾನಸಿಕ ಆರೋಗ್ಯ ಮತ್ತು ನರಶಾಸ್ತ್ರ ರೋಗಗಳ ರಾಷ್ಟ್ರೀಯ ಸಂಸ್ಥೆಯ (ನಿಮ್ಹಾನ್ಸ್) ತಜ್ಞರ ಸಮಿತಿ ದೃಷ್ಟಾಂತಗಳಿಂದ ತೋರಿಸಿಕೊಟ್ಟಿತು. ನಿಧಾನವಾಗಿಯಾದರೂ ದಿನದಿಂದ ದಿನಕ್ಕೆ ಜನರಲ್ಲಿ ವೈಜ್ಞಾನಿಕ ದೃಷ್ಟಿ ಹರಡುತ್ತಿರುವುದು ಶುಭ ಸೂಚನೆಯಾಗಿದೆ.