You are hereಕಣ್ಣಿಗೆ ಕಾಣಿಸದ ಮನಸ್ಸಿಗೆ ತೋಚದ ’ದೇವರು’

ಕಣ್ಣಿಗೆ ಕಾಣಿಸದ ಮನಸ್ಸಿಗೆ ತೋಚದ ’ದೇವರು’


ಲೇಖಕರು: ಬಿ.ವಿ. ವೀರಭದ್ರಪ್ಪ
ಹಕ್ಕುಗಳು: ಲೇಖಕರವು

ಧರ್ಮದ ಮೊದಲ ಪಾಠವನ್ನು ನಾವು ನಮ್ಮ ತಂದೆ ತಾಯಿಯರಿಂದ ಕಲಿಯುತ್ತೇವೆ. ನಾವು ಮಕ್ಕಳಾಗಿದ್ದಾಗ ಎಷ್ಟು ಮುಗ್ಧರಾಗಿರುತ್ತೇವೆಂದರೆ: ಊಟ ಮಾಡುವುದನ್ನೂ ಇತರರಿಂದ ಕಲಿಯಬೇಕಾಗಿರುತ್ತದೆ. ನಮಗೆ ವಿಜ್ಞಾನವನ್ನು ಕುರಿತಾಗಲಿ, ಇತಿಹಾಸವನ್ನು ಕುರಿತಾಗಲಿ ಅಥವಾ ಜಗತ್ತಿನ ಯಾವುದನ್ನೇ ಕುರಿತಾಗಲಿ ಏನೂ ತಿಳಿದಿರುವುದಿಲ್ಲ. ನಾವು ಓದುವುದನ್ನು ಕಲಿಯುವ ಮೊದಲೇ ನಮ್ಮನ್ನು ಗುಡಿ, ಮಸೀದಿ, ಚರ್ಚುಗಳಿಗೆ, ಗುರು ಬೋಧಕರ ಬಳಿಗೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ಧರ್ಮವನ್ನು ಕುರಿತು ಏನೇನೋ ಹೇಳಲಾಗುತ್ತದೆ.

ಅದ್ವೀತೀಯನೂ, ಸರ್ವಶಕ್ತನೂ ಆದ ದೇವರಿದ್ದಾನೆ ಎಂಬುದನ್ನು ಮೇಲಿಂದ ಮೇಲೆ ನಾವು ಕೇಳುತ್ತೇವೆ. ಆದರೆ ಅವನು ಕಣ್ಣಿಗೆ ಕಾಣಿಸುವುದಿಲ್ಲ, ಕಿವಿಗೆ ಕೇಳಿಸುವುದಿಲ್ಲ, ಕೈಗೆ ಎಟಕುವುದಿಲ್ಲ. ಮೂಗಿಗೆ ವಾಸನೆ ಬಡಿಯುವುದಿಲ್ಲ, ನಾಲಗೆಗೆ ರುಚಿ ಸಿಗುವುದಿಲ್ಲ, ನಾವು ಈ ವಿಷಯವಾಗಿ ಗುರು ಬೋಧಕರ ಹೇಳಿಕೆಗಳನ್ನೇ ಪ್ರಮಾಣವಾಗಿ ಸ್ವೀಕರಿಸಬೇಕೆಂದು ನಿರೀಕ್ಷಿಸಲಾಗುತ್ತದೆ.

ವಿರಾಟ್ ಪುರುಷನ ಬಾಯಿಂದ ಪೂಜಾರಿ, ತೋಳಿನಿಂದ ಸೈನಿಕ, ತೊಡೆಯಿಂದ ಸೆಟ್ಟಿ ಮತ್ತು ಅಡಿಯಿಂದ ಜವಾನ ಹುಟ್ಟಿದರೆಂದು ನಮಗೆ ಹೇಳಲಾಗುತ್ತದೆ. (ಅವರೆಲ್ಲ ಕ್ರಮವಾಗಿ ಆರತಿ ತಟ್ಟೆ, ಕತ್ತಿ, ಗುರಾಣಿ, ತಕ್ಕಡಿ ಮತ್ತು ಪೊರಕೆಗಳನ್ನು ಕೈಯಲ್ಲಿ ಹಿಡಿದೇ ಹುಟ್ಟಿದರೋ, ಹುಟ್ಟಿದ ನಂತರ ಹಿಡಿದರೋ ಎಂಬುದನ್ನು ಯಾರೂ ಹೇಳುವುದಿಲ್ಲ!) ಇನ್ನೊಂದು ಕಡೆ ಗಂಡಿನೊಡನೆ ಎಂದೂ ಮಲಗದ ಹೆಣ್ಣಿನಿಂದ ದೇವನ ಮಗನು ಹುಟ್ಟಿದನೆಂದು ನಾವು ಕೇಳುತ್ತೇವೆ. ಮಕ್ಕಳಿಗೆ ಇದೆಲ್ಲ ವಿಚಿತ್ರವಾಗಿ ಕಾಣಿಸುತ್ತದೆ. ಆದರೆ ಅವರು ಅನುಮಾನಿಸುವ ಹಾಗಿಲ್ಲ, ಪ್ರಶ್ನಿಸುವ ಹಾಗಿಲ್ಲ. ಸುಮ್ಮನೆ ಕೇಳಬೇಕು, ಕೇಳಿದ್ದನ್ನು ನಂಬಬೇಕು.

ನಾವು ಸತ್ತನಂತರ ನಮ್ಮ ಆತ್ಮಗಳು ಉಳಿಯುತ್ತವೆ ಎಂದು ಹೇಳುತ್ತಾರೆ. ಅದಕ್ಕೆ ಆಧಾರವೇನೆಂದು ಹೇಳುವುದಿಲ್ಲ. ಆಧಾರವಿಲ್ಲದ ಹೇಳಿಕೆಯನ್ನೇ ನಾವು ನಂಬಬೇಕೆಂದು ಅವರು ನಿರೀಕ್ಷಿಸುತ್ತಾರೆ. ಸ್ವರ್ಗದಲ್ಲಿ ನೆಲೆಸುವ ಆತ್ಮವನ್ನು ಕುರಿತು ಹೇಳುವ ಪ್ರತಿಯೊಬ್ಬರೂ ತಮ್ಮದೇ ಆದ ಕತೆಯನ್ನು ಹೇಳುತ್ತಾರೆ. ಸ್ವರ್ಗವೆಲ್ಲಿದೆ ನಮಗೆ ತಿಳಿಯದು. ಆತ್ಮ ಎಂದರೇನು ನಮಗೆ ತಿಳಿಯದು. ನರಕವನ್ನು ಕುರಿತೂ ಹೇಳುತ್ತಾರೆ, ಆದರೆ ಅದನ್ನು ತೋರಿಸುವುದು ಅವರಿಂದಾಗುವುದಿಲ್ಲ.

ಧಾರ್ಮಿಕ ಸಂಗತಿಗಳೆಲ್ಲ ಕಂತೆ ಪುರಾಣಗಳು, ಅವುಗಳಿಗೆ ಯಾವುದೇ ಆಧಾರಗಳಿರಲು ಸಾಧ್ಯವಿಲ್ಲ. ಆದರೆ ನಾವು ಅವುಗಳನ್ನು ನಂಬಬೇಕೆಂದು ಅವರು ನಿರೀಕ್ಷಿಸುತ್ತಾರೆ. ಏಕೆಂದರೆ ನಮ್ಮ ತಂದೆತಾಯಿಯರು ಅಥವಾ ಪುರೋಹಿತರು ಅಥವಾ ಪ್ರಚಾರಕರು ನಮಗೆ ಸುಳ್ಳು ಹೇಳಿಯಾರೆ? ಆದರೂ ಸುಳ್ಳು ಹೇಳಲಾಗುತ್ತಿದೆ.

ವಸ್ತುಸ್ಥಿತಿಯನ್ನು ಒರೆಗೆ ಹಚ್ಚಿ ಸತ್ಯವನ್ನು ತಿಳಿಯುವ ವಿಧಾನ ಮಕ್ಕಳಾಗಿದ್ದಾಗ ನಮಗೆ ಇನ್ನೂ ತಿಳಿದಿರುವುದಿಲ್ಲ. ಅನುಮಾನಿಸುವ, ಪ್ರಶ್ನಿಸುವ ಎದೆಗಾರಿಕೆ ಬಂದಿರುವುದಿಲ್ಲ. ಸಾಮಾನ್ಯವಾಗಿ ಗುರುಹಿರಿಯರು ಹೇಳಿದ್ದನ್ನು ವಿಚಾರಿಸದೆ ನಂಬಿ ಬಿಡುತ್ತೇವೆ. ನಮ್ಮ ತಂದೆತಾಯಿಯರು ಅವರ ತಂದೆತಾಯಿಯರು ಅಥವಾ ಪುರೋಹಿತರು ಹೇಳಿದ್ದನ್ನು ನಂಬಿದರು. ಪುರೋಹಿತರು ಮತ್ತು ಪ್ರಚಾರಕರು ಮೊದಲು ಈ ಸಂಗತಿಗಳನ್ನು ತಿಳಿದದ್ದು ಅವರ ತಂದೆ ತಾಯಿಯರಿಂದ, ಅನಂತರ ಪುರೋಹಿತರು ಮತ್ತು ಪ್ರಚಾರಕರು ಬರೆದ ಪುಸ್ತಕಗಳಿಂದ, ಅವರು ಕಲಿತದ್ದು ತಮ್ಮ ಹಿಂದಿನ ತಲೆಮಾರಿನ ಪುರೋಹಿತರು ಮತ್ತು ಪ್ರಚಾರಕರ ಪುಸ್ತಕಗಳಿಂದ.

ಧರ್ಮಕ್ಕೆ ಸಂಬಂಧಿಸಿದ ಎಲ್ಲ ಪ್ರಶ್ನೆಗಳ ಎಲ್ಲ ಮುಖಗಳನ್ನು ಮಕ್ಕಳಾಗಿದ್ದಾಗ ನಮಗೆ ಬೋಧಿಸುವುದಿಲ್ಲ. ವಾಸ್ತವವಾಗಿ ಮಕ್ಕಳು ತಮ್ಮ ತಂದೆತಾಯಿಯರ ಅಥವಾ ಪುರೋಹಿತರ ಅಥವಾ ಪ್ರಚಾರಕರ ಧರ್ಮವನ್ನು ಬಿಟ್ಟು ಇತರ ಧರ್ಮಗಳ ಒಳ್ಳೆಯ ಸಂಗತಿಗಳನ್ನು ತಿಳಿಯದಂತೆ ತಡೆಯಲು ಎಲ್ಲ ಪ್ರಯತ್ನ ಮಾಡುತ್ತಾರೆ.

ಹೀಗೆ ವಿಚಾರ ಮಾಡುವ ಶಕ್ತಿಯನ್ನು ಬೆಳೆಸಿಕೊಳ್ಳದೆ ಬೆಳೆದ ನಾವು ಹಿರಿಯರು ನಮ್ಮ ಮುಂದಿಟ್ಟ ಹೇಳಿಕೆಗಳನ್ನು ನಂಬಿಬಿಡುತ್ತೇವೆ. ಬೇರೇನು ಮಾಡಲು ಸಾಧ್ಯ? ಪ್ರಶ್ನಿಸದೆ ನಂಬುವ ಪ್ರಾರಂಭದ ತರಬೇತಿ ನಮಗೆ ಒಂದು ಅಭ್ಯಾಸವಾಗಿಬಿಟ್ಟಿರುತ್ತದೆ. ಮೆದುಳಿನ ಒಂದು ವಿಶೇಷ ಭಾಗ ಬೆಳೆದೇ ಇರುವುದಿಲ್ಲ. ಧರ್ಮವನ್ನು ಕುರಿತ ಮೊದಲ ಗ್ರಹಿಕೆಗಳು ಆ ಭಾಗದಲ್ಲಿ ಆಳವಾಗಿ ಬೇರೂರಿರುತ್ತದೆ.

ಪ್ರತಿಯೊಂದು ಮಗುವೂ ವಿಚಾರ ಮಾಡುವ ಪ್ರೌಢ ವಯಸ್ಸನ್ನು ತಲುಪುವವರೆಗೆ ಎಲ್ಲ ಧಾರ್ಮಿಕ ನಂಬಿಕೆಗಳಿಂದ ದೂರವಿದ್ದುದಾದರೆ, ಅನಂತರ ಎಲ್ಲ ಧರ್ಮಗಳನ್ನು ಮತ್ತು ಅವುಗಳ ವಿರುದ್ಧದ ಎಲ್ಲ ವಿಚಾರಗಳನ್ನು ಬೋಧಿಸುವಂತಾದರೆ ಆಗ ಆಸ್ತಿಕರಾಗುವವರ ಸಂಖ್ಯೆ ತೀರ ವಿರಳವಾದೀತು.

ಇಂದು ಜಗತ್ತಿನ ತುಂಬೆಲ್ಲ ಆಸ್ತಿಕರಿದ್ದಾರೆ. ಏಕೆಂದರೆ ಅನೇಕ ಮುಖಗಳ ಸಮಸ್ಯೆಯ ಒಂದು ಮುಖವನ್ನು ಮಾತ್ರ ಮಕ್ಕಳಿಗೆ ಪರಿಚಯ ಮಾಡಿಸಲಾಗುತ್ತಿದೆ.

ಜಗತ್ತಿನಲ್ಲಿ ಸಾವಿರಾರು ಧಾರ್ಮಿಕ ನಂಬಿಕೆಗಳಿವೆ. ಪ್ರತಿಯೊಂದು ಧರ್ಮದ ಗುರುಗಳೂ ತಮ್ಮ ಧರ್ಮ ಮಾತ್ರ ಶ್ರೇಷ್ಠವೆಂದು ಪ್ರತಿಪಾದಿಸುತ್ತಾರೆ. ಈ ಧರ್ಮಗಳ ಅನುಯಾಯಿಗಳ ಮಕ್ಕಳಿಗೆ ಅವರ ಧರ್ಮ ಮಾತ್ರ ಅತ್ಯಂತ ಶ್ರೇಷ್ಠ ಎಂದು ಬೋಧಿಸಲಾಗುತ್ತದೆ. ನೀವು ಹಿಂದುವಾಗಿದ್ದರೆ ’ಇಸ್ಲಾಂನಂತಹ ಧರ್ಮ ಜಗತ್ತಿನಲ್ಲಿ ಇನ್ನೊಂದಿಲ್ಲ’ ಎಂಬ ಮಾತನ್ನು ನಿಮ್ಮ ತಂದೆಯಿಂದ ಕೇಳಿರಲಾರಿರಿ. ನೀವು ಮಾಧ್ವರಾಗಿದ್ದರೆ ಶಂಕರಾಚಾರ್ಯರ ಕೃತಿಗಳ ಹಿರಿಮೆಯನ್ನು ನಿಮ್ಮ ತಂದೆಯಿಂದ ನೀವು ತಿಳಿಯಲಾರಿರಿ. ನೀವು ವೀರಶೈವರಾಗಿದ್ದರೆ ’ಬಸವಣ್ಣನಂತಹ ಬೋಧಕ ಜಗತ್ತಿನಲ್ಲಿ ಇನ್ನೊಬ್ಬನಿಲ್ಲ’ ಎಂಬುದನ್ನು ನಿಮ್ಮ ಗುರುಗಳಿಂದ ಕೇಳಿರುತ್ತೀರಿ. ಕ್ಯಾಥೋಲಿಕ್ ಮಕ್ಕಳಿಗೆ ಕ್ಯಾಥೋಲಿಕ್ ಪಂಥವೇ ಶ್ರೇಷ್ಠವೆಂದೂ, ಮೆಥಾಡಿಸ್ಟ್ ಮಕ್ಕಳಿಗೆ ಮೆಥಾಡಿಸ್ಟ್ ಪಂಥವೇ ಸರ್ವಶ್ರೇಷ್ಠವೆಂದೂ ತಲೆಯಲ್ಲಿ ತುಂಬಲಾಗಿರುತ್ತದೆ. ಎಲ್ಲ ಧರ್ಮಗಳ ಎಲ್ಲ ಮಕ್ಕಳಿಗೂ ಹೀಗೇ ಸಮಸ್ಯೆಯ ಒಂದು ಮುಖವನ್ನು ಮಾತ್ರ ತೋರಿಸಿ ಅದಷ್ಟೇ ಸತ್ಯವೆಂದು ಬೋಧಿಸಲಾಗುತ್ತದೆ.

ಇದು ಆನುವಂಶಿಕ ರೋಗವಲ್ಲದೆ ಮತ್ತೇನು?