You are hereನಡೆ ನುಡಿ ಸಿದ್ಧಾಂತ

ನಡೆ ನುಡಿ ಸಿದ್ಧಾಂತ


By admin - Posted on 27 August 2010

ಲೇ: ರಂಜಾನ್ ದರ್ಗಾ
ಹಕ್ಕುಗಳು: ಲೇಖಕರವು

ನಡೆನುಡಿ ಸಿದ್ಧಾಂತವಾದಲ್ಲಿ ಕುಲ ಹೊಲೆ ಸೂತಕವಿಲ್ಲ.
ನುಡಿ ಲೇಸು ನಡೆಯಧಮವಾದಲ್ಲಿ,
ಅದು ಬಿಡುಗಡೆಯಿಲ್ಲದ ಹೊಲೆ.
ಕಳವು ಪಾರದ್ವಾರಂಗಳಲ್ಲಿ ಹೊಲಬನರಿಯದೆ,
ಕೆಟ್ಟು ನಡೆವುತ್ತ, ಮತ್ತೆ ಕುಲಜರೆಂಬ ಒಡಲವರುಂಟೆ?
ಆಚಾರವೆ ಕುಲ, ಅನಾಚರವೆ ಹೊಲೆ.
ಇಂತೀ ಉಭಯವ ತಿಳಿದರಿಯಬೇಕು.
ಕೈಯುಳಿಕತ್ತಿ ಅಡಿಗೂಂಟಕ್ಕೆ ಅಡಿಯಾಗಬೇಡ,
ಅರಿ ನಿಜಾತ್ಮಾರಾಮನಾ.
-ಮಾದಾರ ಚೆನ್ನಯ್ಯ

ಮೂಲತಃ ಚೋಳದೇಶದ ಮಾದಾರ ಚೆನ್ನಯ್ಯನವರು ಕರಿಕಾಲ ಚೋಳರಾಜನ ಕುದುರೆಗಳಿಗೆ ಹುಲ್ಲು ಹಾಕುವ ಕಾಯಕ ಮಾಡುತ್ತಿದ್ದರು. ಬಸವಣ್ಣನವರ ಮಹಿಮೆಯನ್ನು ಅರಿತು ಕಲ್ಯಾಣಕ್ಕೆ ಬಂದು ಪಾದರಕ್ಷೆ ತಯಾರಿಸುವ ತಮ್ಮ ಮನೆತನದ ಕಾಯಕವನ್ನು ಆರಂಭಿಸಿದರು. ‘ಕೈಯುಳಿಕತ್ತಿ ಅಡಿಗೂಂಟಕ್ಕೆ ಅಡಿಯಾಗಬೇಡ ಅರಿ ನಿಜಾತ್ಮಾರಾಮನಾ.’ ಎಂದು ತಮ್ಮ ಕಾಯಕಕ್ಕೆ ಸಂಬಂಧಿಸಿದ ವಸ್ತುಗಳೊಂದಿಗೆ ವಚನಾಂಕಿತವನ್ನು ರೂಪಿಸಿದ್ದು ಇವರ ವೈಶಿಷ್ಟ್ಯ. ನಾವು ಕಾಯಕನಿಷ್ಠೆಯನ್ನು ಹೊಂದಬೇಕು. ಆದರೆ ಅಷ್ಟಕ್ಕೇ ತೃಪ್ತರಾಗದೆ, ಆ ಕಾಯಕದ ಮೂಲಕ ನಮ್ಮೊಳಗಿರುವ ನಿಜವಾದ ಆತ್ಮಾರಾಮನನ್ನು ಅರಿಯಬೇಕು ಎಂಬುದು ಮಾದಾರ ಚೆನ್ನಯ್ಯನವರ ಆಶಯವಾಗಿದೆ.

ಅರಿವು ಮತ್ತು ಪ್ರಜ್ಞೆ ಶಬ್ದಗಳನ್ನು ಶರಣರು ವೈಶಿಷ್ಟ್ಯಪೂರ್ಣವಾಗಿ ಬಳಸಿದ್ದಾರೆ. ಅರಿವು ಎಂಬುದು ಪರವಸ್ತುವಿನ ತಿಳಿವಳಿಕೆ. ಪ್ರಜ್ಞೆ ಎಂಬುದು ವಸ್ತುವಿನ ತಿಳಿವಳಿಕೆ. ಪರವಸ್ತುವಿನಿಂದ ವಸ್ತುವಿನ ನಿರ್ಮಾಣವಾಗಿದೆ. ಅಂದರೆ ಬ್ರಹ್ಮದಿಂದ ಬ್ರಹ್ಮಾಂಡ ನಿರ್ಮಾಣವಾಗಿದೆ. ಹಾಗೆಂದರೆ ಜಂಗಮದಿಂದ ಸ್ಥಾವರ ನಿರ್ಮಾಣವಾಗಿದೆ. ಬ್ರಹ್ಮವು ಜಂಗಮವಾದರೆ ಬ್ರಹ್ಮಾಂಡ ಸ್ಥಾವರ. ಹೀಗೆ ಪ್ರತಿವಸ್ತುವಿನ ಸಂಬಂಧ ಮೂಲವಸ್ತುವಿನ ಜೊತೆಗೆ ಇದೆ. ಆದ್ದರಿಂದ ಮೂಲವಸ್ತುವಿನ ಅರಿವಿನೊಂದಿಗೆ ವಸ್ತುಜಗತ್ತಿನಲ್ಲಿ ಪ್ರಜ್ಞಾಪೂರ್ಣವಾಗಿ ಬದುಕಿದಾಗ ಮಾತ್ರ ಅರಿವಿನ ನುಡಿ ಮತ್ತು ಪ್ರಜ್ಞೆಯ ನಡೆಯಲ್ಲಿ ವ್ಯತ್ಯಾಸವಿರದು. ಇದುವೇ ನಡೆ ನುಡಿ ಸಿದ್ಧಾಂತ. ಕೈಯುಳಿಕತ್ತಿ ಅಡಿಗೂಂಟಕ್ಕೆ ಅಡಿಯಾಗಬೇಡ ಅರಿ ನಿಜಾತ್ಮಾರಾಮನಾ ಎಂಬ ಮಾದಾರ ಚೆನ್ನಯ್ಯನವರ ವಚನಾಂಕಿತ ನಡೆನುಡಿ ಸಿದ್ಧಾಂತದ ಸಂಕೇತವಾಗಿದೆ. ಕಾಯಕ ಸಮೇತವಾಗಿ ನಮ್ಮೆಲ್ಲ ನಡೆವಳಿಕೆಗಳು ಅರಿವಿನಿಂದ ಕೂಡಿರಬೇಕು. ಆ ಮೂಲಕ ನಡೆನುಡಿಯಲ್ಲಿ ಏಕೋಭಾವ ಉಂಟಾಗಬೇಕು. ಅಂದಾಗ ಮಾತ್ರ ಜೀವಕಾರುಣ್ಯದ ಸಮಾಜ ನಿರ್ಮಾಣವಾಗಿ ಎಲ್ಲೆಡೆ ಸಮಾನತೆಯ ವಾತಾವರಣ ಸೃಷ್ಟಿಯಾಗುವುದು.

ನಡೆ ಮತ್ತು ನುಡಿಯಲ್ಲಿ ವ್ಯತ್ಯಾಸವಾದಾಗ ನಾವು ಆತ್ಮವಂಚಕರಾಗುವೆವು. ನಡೆ ಮತ್ತು ನುಡಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲದಾಗ ಅದುವೇ ನಡೆನುಡಿ ಸಿದ್ಧಾಂತವಾಗುವುದು. ಹೀಗೆ ಬದುಕುವವರೇ ಕುಲಜರು. ಅಂದರೆ ಅವರು ಯಾವುದೇ ಕುಲದವರಿದ್ದರೂ ಕುಲಸೂತಕವಿರುವುದಿಲ್ಲ. ಹೊಲೆ ಸೂತಕವಿರುವುದಿಲ್ಲ. ಒಳ್ಳೆಯ ಮಾತುಗಳನ್ನಾಡುತ್ತ ಕೆಟ್ಟ ನಡವಳಿಕೆ ಇದ್ದರೆ ಅದು ಮುಕ್ತಿ ಕಾಣದ ಹೊಲೆಬದುಕು. ಕಳ್ಳತನ, ವ್ಯಭಿಚಾರ ಮುಂತಾಗಿ ದಾರಿತಪ್ಪಿ ಹಾಳಾಗಿ ಹೋಗುವವರು ಕುಲೋತ್ತಮರು ಎಂದು ಹೇಳಲು ಸಾಧ್ಯವೆ ಎಂದು ಚೆನ್ನಯ್ಯನವರು ಪ್ರಶ್ನಿಸುತ್ತಾರೆ. ‘ಸದಾಚಾರವೇ ಕುಲ; ಅನಾಚಾರವೇ ಹೊಲೆ’ ಎಂದು ವ್ಯಾಖ್ಯಾನಿಸುತ್ತಾರೆ. ಈ ಸರಿ ತಪ್ಪುಗಳ ಬಗ್ಗೆ ಪರಿಜ್ಞಾನವಿರಬೇಕು. ಅಂದಾಗ ಮಾತ್ರ ನಮ್ಮೊಳಗಿನ ಘನವನ್ನು ತಿಳಿದುಕೊಂಡು ಘನಮನದವರಾಗಲು ಸಾಧ್ಯ ಎಂದು ತಿಳಿಸುತ್ತಾರೆ.

ಬಸವಣ್ಣನವರು ಮಾದಾರ ಚೆನ್ನಯ್ಯನವರನ್ನು ತಮ್ಮ ವಚನಗಳಲ್ಲಿ ಪದೆಪದೆ ಸ್ಮರಿಸುತ್ತಾರೆ. ‘ಮಾದಾರ ಚೆನ್ನಯ್ಯನ ಮನೆಯ ಮಗ ನಾನು’ ಎಂದು ಹೆಮ್ಮೆಯಿಂದ ಹೇಳುತ್ತಾರೆ. ‘ಕುಲಕ್ಕೆ ತಿಲಕ ನಮ್ಮ ಮಾದಾರ ಚೆನ್ನಯ್ಯ ನಿಮ್ಮಿಂದಧಿಕ ನೋಡಾ ಕೂಡಲಸಂಗಮದೇವಾ’ ಎಂದು ಅವರನ್ನು ದೇವರಿಗಿಂತಲೂ ಮೇಲ್ಮಟ್ಟದಲ್ಲಿಟ್ಟು ನೋಡುತ್ತಾರೆ. ವರ್ಣ, ಜಾತಿ ಮತ್ತು ಅಸ್ಪೃಶ್ಯತೆಯಿಂದ ಕೂಡಿದ ಶ್ರೇಣೀಕೃತ ಸಮಾಜದಲ್ಲಿ ಮಾದಾರ ಚೆನ್ನಯ್ಯನವರು ಕಟ್ಟಕಡೆಯ ಜಾತಿಗೆ ಸೇರಿದ್ದಾರೆ. ಆದರೆ ಕಾಯಕ, ಪ್ರಸಾದ ಮತ್ತು ದಾಸೋಹ ಪ್ರಜ್ಞೆಯಿಂದ ಕೂಡಿದ ಬಸವ ಸಮಾಜದಲ್ಲಿ ಅದೇ ಮಾದಾರ ಚೆನ್ನಯ್ಯನವರು ತಮ್ಮ ಸಾತ್ವಿಕ ವ್ಯಕ್ತಿತ್ವದ ವಿಕಸನದೊಂದಿಗೆ ಅತ್ಯುನ್ನತ ಮಟ್ಟ ತಲುಪಿದ್ದಾರೆ.

ನಡೆ ನುಡಿ ಸಿದ್ಧಾಂತದಿಂದ ಮಾನವನ ವ್ಯಕ್ತಿತ್ವ ವಿಕಸನಗೊಳ್ಳುವುದು. ಆ ಮೂಲಕ ಆತ ಪರಿಪೂರ್ಣತೆಯನ್ನು ಸಾಧಿಸುವನು ಎಂಬುದು ವಚನಕಾರರ ನಿಲವಾಗಿದೆ. ಮಾನವ ವಿಶ್ವಮಾನವನಾದಾಗ ಮಾತ್ರ ಪರಿಪೂರ್ಣ ಮಾನವನಾಗುವನು. ವಿಶ್ವಮಾನವನಾದವನು ಬದುಕಿನಲ್ಲಿ ಎಲ್ಲ ರೀತಿಯ ಸಮಾನತೆಯನ್ನು ಬಯಸುವನು. ಎಲ್ಲ ರೀತಿಯ ಶೋಷಣೆಯನ್ನು ವಿರೋಧಿಸುವನು. ಪ್ರಕೃತಿಯ ಸಮತೋಲನಕ್ಕಾಗಿ ಹಾತೊರೆಯುವನು. ಮನುಷ್ಯನನ್ನು ವಿಶ್ವದ ಕೇಂದ್ರವಾಗಿಸದೆ ಸಕಲ ಜೀವಿಗಳನ್ನು ವಿಶ್ವದ ಕೇಂದ್ರವಾಗಿಸುವನು. ಆಹಾರ ಸರಪಳಿಯ ಪ್ರಜ್ಞೆಯೊಂದಿಗೆ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ ಎಂದು ಪ್ರತಿಪಾದಿಸುವನು. ಇಂಥ ಹೊರಜಗತ್ತಿನ ಪ್ರಜ್ಞೆ ಮತ್ತು ಒಳಜಗತ್ತಿನ ಅರಿವಿನೊಂದಿಗೆ ನಡೆ ಮತ್ತು ನುಡಿಯಲ್ಲಿ ವ್ಯತ್ಯಾಸವಿಲ್ಲದೆ ಬದುಕುವವನೇ ವಿಶ್ವಮಾನವ. ಹೀಗೆ ಶರಣರು ವಿಶ್ವಮಾನವರಾಗಿದ್ದಾರೆ. ನಡೆ ನುಡಿ ಸಿದ್ಧಾಂತವು ಮಾನವನನ್ನು ವಿಶ್ವಮಾನವನನ್ನಾಗಿಸುವ ಶಕ್ತಿಯನ್ನು ಹೊಂದಿದೆ ಎಂಬುದನ್ನು ಶರಣರು ತೋರಿಸಿಕೊಟ್ಟಿದ್ದಾರೆ.

ಈ ಬದುಕು ಮಿಥ್ಯೆ ಎಂದು ಭಾವಿಸುವವರು ನುಡಿ ಪ್ರಧಾನವಾದ ಸಿದ್ಧಾಂತವನ್ನು ರೂಪಿಸುವರೇ ಹೊರತು ಆ ನುಡಿಗೆ ಇರಬೇಕಾದ ನಡೆಯ ಜವಾಬ್ದಾರಿಯನ್ನು ನಿಭಾಯಿಸುವ ಎಚ್ಚರಿಕೆಯನ್ನು ವಹಿಸುವುದಿಲ್ಲ. ಹೀಗಾಗಿ ಅಂಥವರ ಸಿದ್ಧಾಂತ ಬರಿ ಮಾತಿನಮಂಟಪವಾಗಿ ಉಳಿಯುವುದು. ಇಂಥ ಮಾತಿನ ಸಿದ್ಧಾಂತಗಳಿಂದಾಗಿ ದುಡಿಯುವ ವರ್ಗ ಸದಾ ಮೋಸಕ್ಕೊಳಗಾಗುತ್ತ ಬಂದಿದೆ. ಶರಣರು ನಡೆ ನುಡಿ ಸಿದ್ಧಾಂತವನ್ನು ದುಡಿಯುವ ವರ್ಗದ ಸಿದ್ಧಾಂತ ಎಂಬುದನ್ನು ಸಾಬೀತು ಪಡಿಸಿದರು. ದುಡಿಯದೆ ಬದುಕುವವರು ನಡೆ ನುಡಿ ಸಿದ್ಧಾಂತವನ್ನು ಒಪ್ಪಿಕೊಳ್ಳುವುದಿಲ್ಲ. ಅವರದು ಏನಿದ್ದರೂ ಮಹೋನ್ನತ ವಿಚಾರಗಳ ಮೇಲೆ ನಿಂತ ಸಿದ್ಧಾಂತವಾಗಿದೆ. ಆದರೆ ಆ ವಿಚಾರಗಳನ್ನು ಕಾರ್ಯರೂಪಕ್ಕೆ ತಂದರೆ ಅವರ ಐಷಾರಾಮಿ ಬದುಕಿಗೇ ಸಂಚಕಾರ ಬಂದೊದಗುತ್ತದೆ. ಆದ್ದರಿಂದ ಅವರು ಉನ್ನತ ವಿಚಾರಗಳ ಭ್ರಮೆಯನ್ನು ಸೃಷ್ಟಿಸುತ್ತ ದುಡಿಯುವ ವರ್ಗವನ್ನು ಮೋಸಗೊಳಿಸುತ್ತಲೇ ಇರುತ್ತಾರೆ. ವರ್ಣಾಶ್ರಮಧರ್ಮದ ಚಾತುರ್ವರ್ಣ್ಯ ಪದ್ಧತಿಯಲ್ಲಿನ ಮೊದಲ ಮೂರು ವರ್ಣಗಳಾದ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ ವರ್ಣಗಳ ಜನರು ಹಿಂದಿನ ಕಾಲದಲ್ಲಿ, ಬದುಕಿಗೆ ಬೇಕಾದ ವಸ್ತುಗಳ ಉತ್ಪಾದನೆಯಲ್ಲಿ ತೊಡಗಿದವರಲ್ಲ. ಬ್ರಾಹ್ಮಣರು ವೇದಶಾಸ್ತ್ರಪುರಾಣಗಳನ್ನೊದುತ್ತ ಐಷಾರಾಮಿ ಜೀವನ ಕಳೆದರು. ಕ್ಷತ್ರಿಯರು ಕ್ಷೇತ್ರ ಪಾಲನೆ ಮಾಡುತ್ತ ಅಧಿಕಾರವನ್ನು ಅನುಭವಿಸಿದರು. ವೈಶ್ಯರು ವಸ್ತುಗಳನ್ನು ಕೊಳ್ಳುತ್ತ ಮತ್ತು ಮಾರುತ್ತ ಸಂಪತ್ತನ್ನು ಸಂಪಾದಿಸಿದರು. ಹೀಗೆ ಈ ಮೂರೂ ಅನುತ್ಪಾದಕ ವರ್ಣಗಳು ಒಂದಕ್ಕೊಂದು ಪೂರಕವಾಗಿ ಬದುಕುತ್ತ ಶೋಷಕ ವರ್ಗದ ನಿರ್ಮಾಣ ಮಾಡಿದವು. ಸದಾ ಉತ್ಪಾದನೆಯಲ್ಲಿ ತೊಡಗಿದ್ದ ಶೂದ್ರ ವರ್ಣದ ಕಾಯಕಜೀವಿಗಳು ದುಡಿಯುವ ವರ್ಗವನ್ನು ಪ್ರತಿನಿಧಿಸಿದರು. ಈ ಕಾಯಕಜೀವಿಗಳನ್ನು ಮೇಲ್ವರ್ಗದ ಮೂರೂ ವರ್ಣಗಳವರು ಸಹಸ್ರಾರು ವರ್ಷಗಳಿಂದ ಶೋಷಣೆ ಮಾಡುತ್ತಲೇ ಬಂದಿದ್ದಾರೆ. ಈ ಶೋಷಣೆಯ ವ್ಯವಸ್ಥೆಯನ್ನು ಒಕ್ಕಲಿಗ ಮುದ್ದಣ್ಣನವರು ಸೂಕ್ಷ್ಮವಾಗಿ ಗಮನಿಸಿ ಬರೆದ ಈ ವಚನ ಇಡೀ ಸಮಾಜದ ಕಣ್ಣು ತೆರೆಸುವಂತಿದೆ.

ವೇದಶಾಸ್ತ್ರವನೋದುವುದಕ್ಕೆ ಹಾರುವನಲ್ಲ;
ಇರಿದು ಮೆರೆಯುವುದಕ್ಕೆ ಕ್ಷತ್ರಿಯನಲ್ಲ;
ವ್ಯವಹರಿಸುವುದಕ್ಕೆ ವೈಶ್ಯನಲ್ಲ;
ಉಳುವ ಒಕ್ಕಲಮಗನ ತಪ್ಪ ನೋಡದೆ ಒಪ್ಪುಗೊಳ್ಳಯ್ಯಾ
ಕಾಮಭೀಮಜೀವಧನದೊಡೆಯ ನೀನೆ ಬಲ್ಲೆ.
-ಒಕ್ಕಲಿಗ ಮುದ್ದಣ್ಣ

ಬ್ರಾಹ್ಮಣರು, ಕ್ಷತ್ರಿಯರು ಮತ್ತು ವೈಶ್ಯರು ಲೌಕಿಕ ಜ್ಞಾನವನ್ನು ಹೊಂದಿದವರಾಗಿದ್ದಾರೆ. ಶಾಸ್ತ್ರಗಳಿಂದ ಬ್ರಾಹ್ಮಣರು, ಶಸ್ತ್ರಗಳಿಂದ ಕ್ಷತ್ರಿಯರು ಮತ್ತು ಶೂದ್ರರು ಉತ್ಪಾದಿಸಿದ ವಸ್ತುಗಳ ವ್ಯವಹಾರದಿಂದ ವೈಶ್ಯರು ಬದುಕುತ್ತಾರೆ. ವೇದಶಾಸ್ತ್ರಗಳನ್ನು ಬರೆಯಲು ಬ್ರಾಹ್ಮಣರು ಬಳಸುತ್ತಿದ್ದ ತಾಡೋಲೆ ಹಾಗೂ ಅವರು ಯಜ್ಞಯಾಗಾದಿಗಳಿಗೆ ಬೇಕಾದ ಪರಿಕರಗಳನ್ನು ಶೂದ್ರರೇ ತಯಾರಿಸುತ್ತಿದ್ದರು. ಕ್ಷತ್ರಿಯರು ಹೋರಾಡಲು ಬಳಸುವ ಶಸ್ತ್ರಾಸ್ತ್ರಗಳನ್ನು ಮತ್ತು ವೈಶ್ಯರು ಮಾರಲು ಬಳಸುತ್ತಿದ್ದ ವಸ್ತುಗಳನ್ನು ಕೂಡ ಶೂದ್ರರೇ ತಯಾರಿಸುತ್ತಿದ್ದರು. ಮೂರೂ ವರ್ಣಗಳವರ ಐಷಾರಾಮಿ ಬದುಕಿಗೆ ಬೇಕಾದ ವಸ್ತು ಮತ್ತು ಆಹಾರ ಧಾನ್ಯಗಳನ್ನು ಶೂದ್ರರೇ ಉತ್ಪಾದಿಸುತ್ತಿದ್ದರು! ಹೀಗೆ ಎಲ್ಲವನ್ನೂ ಉತ್ಪಾದಿಸುವ ಶೂದ್ರರು ಎಲ್ಲ ರೀತಿಯ ಅವಕಾಶಗಳಿಂದ ವಂಚಿತರಾದರು. ಐಹಿಕ ಅಭ್ಯುದಯಕ್ಕಾಗಿ ಏನನ್ನೂ ಉತ್ಪಾದಿಸದ ಇತರ ಮೂರು ವರ್ಣದವರು ಸವರ್ಣೀಯರೆನಿಸಿದರು. ಆದರೆ ಸುಖಕರವಾದ ಐಹಿಕ ಬದುಕಿಗೆ ಬೇಕಾದ ವಸ್ತುಗಳೆಲ್ಲ ಇವರ ಕೈವಶವಾದವು.

ಉತ್ಪಾದಿಸುವ ಶೂದ್ರರಿಗೆ ಹಾಗೂ ಶೂದ್ರರಲ್ಲಿ ಕಟ್ಟಕಡೆಯವರಾದ ಪಂಚಮರಿಗೆ ಜನಿವಾರ ಇಲ್ಲ. ಆದರೆ ಮೇಲಿನ ಮೂರೂ ಅನುತ್ಪಾದಕ ವರ್ಣಗಳಿಗೆ ಜನಿವಾರವಿದೆ! ಈ ಮೂರು ವರ್ಣಗಳವರ ಅಡುಗೆ ಮನೆಗಳನ್ನು ನೋಡಿಕೊಂಡು ಇವರ ಪುರುಷ ಪ್ರಾಧಾನ್ಯ ಅಹಂಕಾರವನ್ನು ಸಹಿಸಿಕೊಂಡ ಅವರ ಮಹಿಳೆಯರಿಗೂ ಜನಿವಾರ ಇಲ್ಲ!

ಅಜ್ಯೇಷ್ಠಾನೋ ಅಕನಿಷ್ಠಾ ಸ ಏವತೇ ಸಂಭ್ರಾಂತರೋವಾವೃಧುಃ
ಸೌಭಗಾಯ ಯುವಾಪಿತಾಸ್ವಪಾರುದ್ರ ಏಷಾಂ ಪ್ರಶ್ನಿರ್ಮಾತಾ ಸುದಿನಾಮರುದ್ಧ್ಯಃ
-ಋಗ್ವೇದ

(ಈ ಮನುಷ್ಯರಲ್ಲಿ ದೊಡ್ಡವರಾಗಲಿ ಚಿಕ್ಕವರಾಗಲಿ ಯಾರೂ ಇರುವುದಿಲ್ಲ. ಎಲ್ಲರೂ ಸಮಾನರು. ಇವರೆಲ್ಲರ ತಂದೆ ಪರಮಾತ್ಮನು, ತಾಯಿ ಭೂದೇವತೆಯು. ಇದನ್ನು ತಿಳಿದೇ ಸಹೋದರರಾದ ಮಾನವರೆಲ್ಲ ಉನ್ನತರಾಗಬಲ್ಲರು.) ಎಂಬುದು ಋಗ್ವೇದದ ಆಶಯವಾಗಿದೆ. ಸವರ್ಣೀಯರು ಇಂಥ ಮಾತಿನ ಮಂಟಪಗಳನ್ನು ಕಟ್ಟುತ್ತಲೇ ಜನಸಂಖ್ಯೆಯ ಶೇಕಡಾ ೯೦ರಷ್ಟಿರುವ ಶೂದ್ರರನ್ನು ಮತ್ತು ಪಂಚಮರನ್ನು ಹೊರಗಿಟ್ಟರು. ಇಂಥ ಉದಾತ್ತ ವಿಚಾರಗಳು ಮೇಲಿನ ಮೂರು ವರ್ಣಗಳ ಜನರಿಗೆ ಮಾತ್ರ ಸಂಬಂಧಿಸಿವೆ ಎಂಬುದು ಅವರೆಲ್ಲರ ದೃಢನಿಲುವಾಗಿತ್ತು. ಅಂತೆಯೆ ಬಸವಣ್ಣನವರು ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮದೇವನೆಂತೊಲಿವನಯ್ಯಾ? ಎಂದು ಪ್ರಶ್ನಿಸಿದರು. ಗುಹೇಶ್ವರನ ಶರಣರು ನುಡಿದು ಸೂತಕಿಗಳಲ್ಲ. ಎಂದು ಅಲ್ಲಮಪ್ರಭುಗಳು ತಿಳಿಸಿದರು. ನುಡಿಯಲ್ಲಿ ಎಚ್ಚತ್ತು ನಡೆಯಲ್ಲಿ ತಪ್ಪಿದಡೆ ಹಿಡಿದಿರ್ದ ಲಿಂಗವು ಘಟಸರ್ಪವಯ್ಯಾ ಎಂದು ಬಸವಣ್ಣನವರು ಎಚ್ಚರಿಸಿದರು. ದಿಟವ ನುಡಿವುದು ನುಡಿದಂತೆ ನಡೆವುದು ಎಂದು ನಡೆ ನುಡಿ ಸಿದ್ಧಾಂತವನ್ನು ಎತ್ತಿಹಿಡಿದರು. ಭಕ್ತಿ ಸುಭಾಷೆಯ ನುಡಿಯ ನುಡಿವೆ, ನುಡಿದಂತೆ ನಡೆವೆ. ಎಂದು ಹೇಳುವ ಮೂಲಕ ನಡೆ ನುಡಿ ಸಿದ್ಧಾಂತವನ್ನು ಬದುಕಿನಲ್ಲಿ ಅಳವಡಿಸಿಕೊಂಡಿರುವೆ ಎಂದು ಸಾರಿದರು. ಕ್ರಿಯೆಯೇ ಜ್ಞಾನ, ಆ ಜ್ಞಾನವೇ ಕ್ರಿಯೆ. ಜ್ಞಾನವೆಂದಡೆ ತಿಳಿಯುವುದು, ಕ್ರಿಯೆ ಎಂದಡೆ ತಿಳಿದಂತೆ ಮಾಡುವುದು. ಪರಸ್ತ್ರೀಯ ಭೋಗಿಸಬಾರದೆಂಬುದೇ ಜ್ಞಾನ; ಅದರಂತೆ ಆಚರಿಸುವುದೇ ಕ್ರಿಯೆ ಎಂದು ಚೆನ್ನಬಸವಣ್ಣನವರು ನಡೆನುಡಿ ಸಿದ್ಧಾಂತವನ್ನು ಸಕಲರು ಅರ್ಥ ಮಾಡಿಕೊಳ್ಳುವ ರೀತಿಯಲ್ಲಿ ತಿಳಿಸಿರುವರು.

ಇಂಥ ನಡೆನುಡಿ ಸಿದ್ಧಾಂತವನ್ನು ವೇದದಲ್ಲಿ ಕಂಡುದಿಲ್ಲ; ಅದು ಮಾತಿನ ಮನೆಯಾಗಿ ಹೋಯಿತ್ತು. ಎಂದು ವಚನಭಂಡಾರಿ ಶಾಂತರಸರು ಸ್ಪಷ್ಟಪಡಿಸಿದ್ದಾರೆ. ಹೀಗೆ ಮಾತಿನ ಮನೆಯ ವರ್ಣಾಶ್ರಮ ಧರ್ಮದಲ್ಲಿ ನಂಬಿಕೆ ಇಟ್ಟವರು ಜಾತೀಯತೆ ಮತ್ತು ಅಸ್ಪೃಶ್ಯತೆಯನ್ನು ಆಚರಿಸುತ್ತ ಮಾನವರಲ್ಲಿ ಭೇದಭಾವವನ್ನು ಸೃಷ್ಟಿಸಿದರು. ಆ ಮೂಲಕ ಜನಿವಾರ ರಹಿತ ಶೂದ್ರ ವರ್ಣದ ಬಹುಪಾಲು ಜನರನ್ನು ಶೋಷಣೆಗೆ ಒಳಪಡಿಸುತ್ತ ಸುಖದ ಬದುಕನ್ನು ಬದುಕಿದರು.

ಚೆನ್ನಬಸವನೆಂಬ ಪ್ರಸಾದಿಯ ಪಡೆದು, ಅನುಭವಮಂಟಪವನನುಮಾಡಿ ಅನುಭವಮೂರ್ತಿಯಾನ ನಮ್ಮ ಬಸವಯ್ಯನು ಎಂದು ಬಸವಣ್ಣನವರ ವಿಚಾರಪತ್ನಿ ನೀಲಾಂಬಿಕೆ ಹೇಳಿದ್ದಾರೆ. ಬಸವಣ್ಣನವರು ಮಾತಿನ ಮನೆಗೆ ಪರ್ಯಾಯವಾಗಿ ಅನುಭವ ಮಂಟಪದಿಂದ ಕೂಡಿದ ಮಹಾಮನೆಯ ಕಡೆಗೆ ಸಕಲಜೀವಾತ್ಮರನ್ನು ಕರೆದೊಯ್ದರು. ಹೀಗೆ ಅನುಭಾವದ ಅರ್ಥದಲ್ಲಿ ಈ ಮಹಾಮನೆ ಎಂಬುದು ತನ್ನೊಳಗೆ ಇಡೀ ವಿಶ್ವವನ್ನು ಒಳಗೊಂಡಿದೆ. ನಿಸರ್ಗ ಸಮೇತ ಎಲ್ಲ ಜೀವಗಳು ಈ ಮಹಾಮನೆಯಲ್ಲಿ ನೆಮ್ಮದಿ ಪಡೆಯುವವು. ಜೀವಜಾಲದಲ್ಲಿದೆ ಚರಾಚರವೆಲ್ಲ ಎಂದು ಬಸವಣ್ಣನವರು ಹೇಳಿದ್ದಾರೆ. ಬಸವಣ್ಣನವರ ಮಹಾಮನೆಯು ಮಾನವ ಕುಲವನ್ನೇಷ್ಟೇ ಅಲ್ಲ, ಇಡೀ ಜೀವಜಾಲವನ್ನೇ ಸಂರಕ್ಷಿಸುವ ಪರಿಕಲ್ಪನೆಯನ್ನು ಹೊಂದಿದೆ. ಹೀಗೆ ಬಸವಣ್ಣನವರು ದಯೆ ಶಬ್ದವನ್ನು ವಿಶಿಷ್ಟ ಅರ್ಥದಲ್ಲಿ ಬಳಸುವುದರ ಮೂಲಕ ಅದಕ್ಕೆ ಜೀವಜಾಲವನ್ನು ಸಂರಕ್ಷಿಸುವ ಕರ್ತವ್ಯದಲ್ಲಿ ನಿರತವಾಗುವಂತೆ ಮಾಡುತ್ತಾರೆ. ಆ ಕಾರಣದಿಂದಲೇ ದಯೆಯು ಮಾನವನ ಮನದಲ್ಲಿ ಮಹಾಮನೆಯನ್ನು ನಿರ್ಮಿಸುತ್ತದೆ. ಇಡೀ ವಿಶ್ವವೇ ನಮ್ಮೊಳಗೆ ಬಂದು ನೆಲೆಗೊಳ್ಳುವಂತೆ ಮಾಡುತ್ತದೆ. ಹೀಗೆ ಬಸವಣ್ಣನವರ ದಯೆಯು ಇಂಥ ಸಂವೇದನೆಯನ್ನು ಸ್ಫುರಿಸುತ್ತದೆ. ಇಷ್ಟಲಿಂಗ ಪೂಜಾಫಲವೆಂದರೆ ಈ ಪ್ರಕಾರದ ದಯಾಭಾವವನ್ನು ಹೊಂದುವುದು. ಅದನ್ನೇ ನಡೆಯುವುದು ಮತ್ತು ನುಡಿಯುವುದು. ಇಂಥ ಸರ್ವಸಮತ್ವದ ಅರಿವನ್ನು ಆಚರಣೆಯಲ್ಲಿ ತಂದು ಲೋಕವನ್ನು ಆನಂದವಯವಾಗಿಸುವುದೇ ಶರಣರ ನಡೆ ನುಡಿ ಸಿದ್ಧಾಂತ.

ನಡೆಯಲರಿಯದೆ, ನುಡಿಯಲರಿಯದೆ
ಲಿಂಗವ ಪೂಜಿಸಿ ಫಲವೇನು? ಫಲವೇನು?
ಅವರ ದುಃಖವೆನ್ನ ದುಃಖ ಅವರ ಸುಖವೆನ್ನ ಸುಖ
ಕೂಡಲಸಂಗನ ಶರಣರ ಮನನೊಂದಡೆ
ಆನು ಬೆಂದೆನಯ್ಯಾ.
-ಬಸವಣ್ಣ

ಎಂದು ಹೇಳುವಲ್ಲಿ ಈ ನಡೆ ನುಡಿ ಸಿದ್ಧಾಂತವೇ ಇಷ್ಟಲಿಂಗ ಪೂಜಾಫಲ ಎಂಬುದು ತಿಳಿದುಬರುತ್ತದೆ. ಶರಣರ ಇಂಥ ನಡೆ ನುಡಿ ಸಿದ್ಧಾಂತದ ಮೂಲಕ ನಾವು ಲೋಕದ ದುಃಖ ನಮ್ಮ ದುಃಖ, ಲೋಕದ ಸುಖ ನಮ್ಮ ಸುಖ ಎಂಬ ಸಂವೇದನೆಯನ್ನು ಹೊಂದುವೆವು. ಇಂಥ ಸಂವೇದನಾಶೀಲ ಸಮಾಜದಲ್ಲಿ ಅಹಿಂಸೆಯೇ ಜೀವನಧರ್ಮವಾಗುತ್ತದೆ. ಅಹಿಂಸೆಯ ವಾತಾವರಣದಲ್ಲಿ ಮಾತ್ರ ಶರಣರ ಕಲ್ಯಾಣರಾಜ್ಯದ ಸ್ಥಾಪನೆ ಸಾಧ್ಯ.

ಶಿವಭಕ್ತನಾಗಿ ಸತ್ಯ ಸದಾಚಾರ ಭಕ್ತಿವಿಡಿದು ನಡೆಯಬಲ್ಲಡೆ ಕೈಲಾಸ ಬಟ್ಟೆ ಬೇರಿಲ್ಲವೆಂದ ಕಲಿದೇವಯ್ಯ ಎಂದು ಮಡಿವಾಳ ಮಾಚಿದೇವರು ಹೇಳುವಲ್ಲಿ ನಡೆ ನುಡಿ ಸಿದ್ಧಾಂತದ ಅರಿವು ಮತ್ತು ಆಚರಣೆಯೊಂದಿಗೆ ನಮ್ಮೊಳಗೆ ಸ್ವರ್ಗದ ಸೃಷ್ಟಿಯಾಗುತ್ತದೆ ಎಂಬುದರ ಸೂಚನೆ ಇದೆ. ಭಕ್ತಿ ಎಂಬುದು ಇಂಥ ಸತ್ಯದ ಅರಿವು ಮತ್ತು ಸದಾಚಾರದಿಂದ ಕೂಡಿದುದಾಗಿದೆ. ಇಂಥ ಭಕ್ತಿಯ ನಡುಗೆ ನಮ್ಮನ್ನು ನಮ್ಮೊಳಗಿನ ಕೈಲಾಸದ ಕಡೆಗೇ ಒಯ್ಯುವುದು. ಬಸವಣ್ಣನವರು ಹೇಳುವಂತೆ ಆಗ ನಮ್ಮ ಕಾಯವೇ ಕೈಲಾಸವಾಗುವುದು.
**