You are hereನನ್ನ ಪರಿಕಲ್ಪನೆಯ ಭಾರತ ಮತ್ತು ಇಂಡಿಯಾ ಹಾಗೂ ಶಿಕ್ಷಣ ನೀತಿ

ನನ್ನ ಪರಿಕಲ್ಪನೆಯ ಭಾರತ ಮತ್ತು ಇಂಡಿಯಾ ಹಾಗೂ ಶಿಕ್ಷಣ ನೀತಿ


By admin - Posted on 27 August 2010

ಲೇ: ರಂಜಾನ್ ದರ್ಗಾ
ಹಕ್ಕುಗಳು: ಲೇಖಕರವು

ಭಾರತ ದೇಶ ವಿಶ್ವದಲ್ಲೇ ವಿಶಿಷ್ಟವಾಗಿದೆ. ಕಳೆದ ಐದು ಸಾವಿರ ವರ್ಷಗಳಲ್ಲಿ ವಿವಿಧ ಜನಾಂಗ, ನಾಗರೀಕತೆ, ಸಂಸ್ಕೃತಿ, ಧರ್ಮ, ವರ್ಣ, ಜಾತಿ, ಮತ, ಪಂಥ, ಬುಡಕಟ್ಟು, ಭಾಷೆ, ಆಚಾರ ಮತ್ತು ವಿಚಾರಗಳ ವೈರುಧ್ಯಗಳೆಲ್ಲ ಸೇರಿ ಒಂದು ರಾಷ್ಟ್ರವಾಗಿ ರೂಪುಗೊಂಡಿದೆ. ಹೀಗೆ ರೂಪುಗೊಳ್ಳುವ ಮೊದಲು ಈ ನೆಲದ ನೂರಾರು ದೇಶಗಳಲ್ಲಿ, ಸಂಸ್ಥಾನಗಳಲ್ಲಿ ಮತ್ತು ಪಾಳೆಯಪಟ್ಟುಗಳಲ್ಲಿ ವೈರುಧ್ಯಗಳಿಂದ ಕೂಡಿದ ಜನಪದರು ಹರಿದುಹಂಚಿ ಹೋಗಿದ್ದರು. ದೇಶಗಳು ಬೇರೆಬೇರೆಯಾಗಿದ್ದರೂ ಹೀಗೆ ವೈರುಧ್ಯಗಳಿಂದ ಕೂಡಿದ ಬಹುಮುಖಿ ಬದುಕು ಎಲ್ಲೆಡೆ ಪಸರಿಸಿತ್ತು. ಇಡೀ ಉಪಖಂಡದ ವಿವಿಧೆಡೆಯಲ್ಲಿ ಶರಣರು, ಸಂತರು, ಸೂಫಿಗಳು, ದಾಸರು ಮತ್ತು ತತ್ತ್ವಪದಕಾರರು ವೈರುಧ್ಯಗಳ ಮಧ್ಯೆ ಭಾವೈಕ್ಯವನ್ನು ಸಾಧಿಸಲು ಯತ್ನಿಸಿದರು. ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಬಹಪಾಲು ಜನಾಂಗಗಳ ಮಧ್ಯೆ ಸಂಪರ್ಕ ಬಂದಿತು. ಸ್ವಾತಂತ್ರ್ಯಾನಂತರ ಎಲ್ಲ ವೈರುಧ್ಯಗಳೊಡನೆ ಒಂದಾದೆವು. ಆದರೆ ಆ ವೈರುಧ್ಯಗಳಿಂದ ಮೇಲೆ ಬರದೆ ಒದ್ದಾಡುತ್ತಲೇ ಇದ್ದೇವೆ.

ಸಂಪ್ರದಾಯಬದ್ಧ ಸಮಾಜದ ಜಾತಿ ಮತ್ತು ಕೋಮುಗಳ ಸಮಸ್ಯೆ ಮುಂದುವರಿಯುತ್ತಿದ್ದಂತೆಯೆ ಆಧುನಿಕ ಸಮಾಜ ಸೃಷ್ಟಿಸಿದ ಹೊಸ ಸಮಸ್ಯೆಗಳನ್ನು ನಾವಿಂದು ಎದುರಿಸುತ್ತಿದ್ದೇವೆ. ನಮ್ಮ ಶಿಕ್ಷಣ ಪದ್ಧತಿ ಅವುಗಳಲ್ಲಿ ಪ್ರಮುಖವಾಗಿದೆ. ಪರಂಪರಾಗತವಾಗಿ ಬಂದ ಉತ್ಪಾದನಾ ವ್ಯವಸ್ಥೆಯನ್ನು ನಮ್ಮ ಶಿಕ್ಷಣ ಪದ್ಧತಿ ಹಾಳುಮಾಡಿತು. ದೇಶದ ೬ ಲಕ್ಷ ೨೫ ಸಾವಿರ ಹಳ್ಳಿಗಳಲ್ಲಿ ನಿರುದ್ಯೋಗ ಸೃಷ್ಟಿಸಿತು. ನಾಲ್ಕಕ್ಷರ ಕಲಿತವರು ತಮ್ಮ ಹೊಲಗಳನ್ನು ನೋಡದಂತೆ ಮಾಡಿತು. ಅವರೆಲ್ಲ ತಮ್ಮ ಮೂಲೋದ್ಯಗದ ಬಗ್ಗೆ ತಿರಸ್ಕಾರ ಭಾವ ತಾಳುವಂಥ ವಾತಾವರಣ ಸೃಷ್ಟಿಸಿತು. ಎಲ್ಲ ನಾಗರೀಕತೆ ಮತ್ತು ಸಂಸ್ಕೃತಿಗಳ ಸಮ್ಮಿಶ್ರಣದಿಂದ ಬಂದ ಪರಂಪರಾಗತ ಜ್ಞಾನವನ್ನು ಕಡೆಗಣಿಸಲಾಯಿತು. ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಕೆಲವರಿಗಾಗಿ ಉದ್ಯೋಗಾವಕಾಶಗಳು ಕೈ ಮಾಡಿ ಕರೆದರೆ ಬಹುಪಾಲು ಜನ ಉದ್ಯೋಗಾವಕಾಶಗಳಿಂದ ವಂಚಿತವಾಗುವಂತಾಯಿತು. ಹೀಗಾಗಿ ಕಳೆದ ನೂರು ವರ್ಷಗಳ ಅವಧಿಯಲ್ಲಿ ಭಾರತದಲ್ಲೇ ಇಂಡಿಯಾವೊಂದರ ಸೃಷ್ಟಿಯಾಗಿದೆ. ಹೀಗೆ ನಮಗೆ ಒಂದೇ ರಾಷ್ಟ್ರದಲ್ಲಿ ಎರಡು ತದ್ವಿರದ್ಧ ನಿಲುವಿನ ದೇಶಗಳನ್ನು ಅನುಭವಿಸುತ್ತಿದ್ದೇವೆ. ಇಂದು ಭಾರತ ಮತ್ತು ಇಂಡಿಯಾ ಮುಖಾಮುಖಿಯಾಗುವ ಹಂತ ತಲುಪಿವೆ. ಭಾರತ ಎಂಬುದು ಕೇವಲ ಹಳ್ಳಿಗಳಿಗೆ ಸೀಮಿತವಾಗಿಲ್ಲ. ಇಂಡಿಯಾ ಎಂಬುದು ಕೇವಲ ನಗರಗಳಿಗೆ ಸೀಮಿತವಾಗಿಲ್ಲ. ಈ ಭಾರತ ಮತ್ತು ಇಂಡಿಯಾ ಹಳ್ಳಿಗಳಲ್ಲೂ ಇವೆ; ನಗರಗಳಲ್ಲೂ ಇವೆ.

ಹಳ್ಳಿ ಮತ್ತು ನಗರಗಳ ಬಡವರು, ಅಸಹಾಯಕರು, ನಿರಕ್ಷರಿಗಳು, ಸಾಂಪ್ರದಾಯಿಕ ಶಿಕ್ಷಣ ಪಡೆದವರು, ವೃತ್ತಿಪರ ಶಿಕ್ಷಣ ವಂಚಿತರು, ರೈತಾಪಿ ಜನರು, ವಿವಿಧ ಕಾಯಕಜೀವಿಗಳು ಭಾರತೀಯರಾಗಿದ್ದಾರೆ. ಉದ್ಯಮಿಗಳು, ವೃತ್ತಿಪರ ಶಿಕ್ಷಣದ ಮೂಲಕ ಉದ್ಯೋಗಾವಕಾಶಗಳನ್ನು ಪಡೆದವರು. ರಾಜಕೀಯ ಸವಲತ್ತುಗಳನ್ನು ಅನುಭವಿಸುವವರು, ಉನ್ನತ ಹುದ್ದೆಯ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ನೌಕರರು, ಭಾರಿ ಮಧ್ಯವರ್ತಿ ಕುಳಗಳು, ಭ್ರಷ್ಟರು, ಸುಲಿಗೆಕೋರರು ಮುಂತಾದವರು ಇಂಡಿಯಾದವರಾಗಿದ್ದಾರೆ. ನಮ್ಮ ಬಹುಪಾಲು ಅಭಿವೃದ್ಧಿ ಯೋಜನೆಗಳು ಇಂಡಿಯಾದವರ ಪರವಾಗಿಯೇ ಇರುತ್ತವೆ. ಈ ಯೋಜನೆಗಳು ಹಳ್ಳಿಯಲ್ಲಿಯೇ ಇರಲಿ, ನಗರದಲ್ಲಿಯೇ ಇರಲಿ ಇವುಗಳ ಲಾಭವನ್ನು ಇಂಡಿಯಾದವರೇ ಪಡೆಯುತ್ತಾರೆ. ನಮ್ಮ ರಾಷ್ಟ್ರನಾಯಕರು ದೇಶದ ಅಭಿವೃದ್ಧಿಯ ಬಗ್ಗೆ ಮಾತನಾಡುವಾಗ ಅದು ಇಂಡಿಯಾದ ಅಭಿವೃದ್ಧಿಯೇ ಆಗಿರುತ್ತದೆ. ಈ ಅಭಿವೃದ್ಧಿಯ ಪ್ರಜ್ಞೆ ಬಹುರಾಷ್ಟ್ರೀಯ ಕಂಪನಿಗಳ ಪರ ಇರುತ್ತದೆ. ವಿಶ್ವಬ್ಯಾಂಕ್, ಐಎಂಎಫ್ ಮತ್ತು ಒಟ್ಟಾರೆ ಸಾಮ್ರಾಜ್ಯಶಾಹಿಗಳು ಈ ರೀತಿಯ ಅಭಿವೃದ್ಧಿ ಪ್ರಜ್ಞೆಯ ಪೋಷಕರಾಗಿರುತ್ತಾರೆ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮುಂತಾದ ತಂತ್ರಜ್ಞಾನಗಳು ಎಲೆಕ್ಟ್ರಾನಿಕ್ಸ್ ಯುಗವನ್ನು ಸೃಷ್ಟಿಸಿವೆ. ಎಲ್ಲವೂ ಕಂಪ್ಯೂಟರ್‌ಮಯವಾಗುತ್ತಿದೆ. ಇಂಥ ವಾತಾವರಣದಲ್ಲಿ ಭಾರಿ ಹಣವುಳ್ಳವರೇ ಅಲ್ಪಸಂಖ್ಯಾತರು. ಹಣಕ್ಕಾಗಿ ಪರಿತಪಿಸುವವರೇ ಬಹುಸಂಖ್ಯಾತರು. ಇಲ್ಲಿ ಜಾತಿ, ಮತ ಮತ್ತು ಧರ್ಮಗಳು ಗೌಣವಾಗುತ್ತವೆ. ಅಲ್ಪಸಂಖ್ಯಾತ ಶ್ರೀಮಂತರು ಮಾತ್ರ್ರ ಗಣನೆಗೆ ಬರುತ್ತಾರೆ. ಬಹುಸಂಖ್ಯಾತ ಬಡವರು ಗಣನೆಗೆ ಬರಬೇಕೆಂಬುದು ಗೌತಮ ಬುದ್ಧನ ಆಶಯವಾಗಿತ್ತು. ಅಂತೆಯೆ ಆತ ’ಬಹುಜನ ಹಿತಾಯ ಬಹುಜನ ಸುಖಾಯ’ ಎಂದು ಹೇಳಿದ. ’ಸಕಲಜೀವಾತ್ಮರಿಗೆ ಲೇಸನೆ ಬಯಸುವ ಕೂಡಲಸಂಗನ ಶರಣರೇ ಕುಲಜರು’ ಎಂದು ಹೇಳುವ ಮೂಲಕ ಬಸವಣ್ಣನವರು ಎಲ್ಲ ಕಾಯಕ ಜೀವಿಗಳ ಹಿತಕಾಯುವ ದಾರಿಯನ್ನು ತೋರಿಸಿಕೊಟ್ಟರು. ’ಜಗತ್ತಿನ ಕಾರ್ಮಿಕರೇ ಒಂದಾಗಿರಿ’ ಎಂದು ಹೇಳುವ ಮೂಲಕ ಕಾರ್ಲ್ಸ್ ಮಾರ್ಕ್ಸ್ ಮಾನವ ವಿಮೋಚನೆಯ ಕ್ರಾಂತಿಗೆ ಕಾರಣವಾದರು. ಜೀಸಸ್, ಪೈಗಂಬರ್, ಗಾಂಧಿ, ಅಂಬೇಡ್ಕರ್, ಲೋಹಿಯಾ ಮುಂತಾದವರು ಕೂಡ ಇದೇ ಮಾನವ ವಿಮೋಚನೆಯ ಕುರಿತು ಮಾತನಾಡಿದ್ದಾರೆ. ಬುದ್ಧನಿಂದ ಹಿಡಿದು ಅಂಬೇಡ್ಕರ್ ವರೆಗೆ ಮೇಲೆ ಹೇಳಿದ ಮಹಾಪುರಷರೆಲ್ಲ ಬಡವರ ಪರವಾಗಿಯೇ ಇದ್ದಾರೆಂಬುದು ಗಮನಾರ್ಹ. ನಮ್ಮ ದೇಶದಲ್ಲಿ ಬಡವರೆಂದರೆ ಭಾರತೀಯರು. ಶ್ರೀಮಂತರೆಂದರೆ ಇಂಡಿಯನ್ನರು. ದೇಶದ ಯಾವುದೇ ಮೂಲೆಯಲ್ಲಿದ್ದರೂ ಬಡವರು ಬಡವರೇ; ಶ್ರೀಮಂತರು ಶ್ರೀಮಂತರೇ ಎಂಬುದನ್ನು ಮರೆಯಬಾರದು.

ಬಡವರ ಪರವಾಗಿದ್ದ ಶರಣರು, ಸೋಫಿಗಳು, ಸಂತರು, ದಾಸರು ಮತ್ತು ತತ್ತ್ವಪದಕಾರರು ಭಕ್ತಿಸಾಮ್ರಾಜ್ಯ ಸ್ಥಾಪಿಸಲು ಹೆಣಗಿದರೆ. ಆಧುನಿಕ ತಂತ್ರಜ್ಞಾನದೊಂದಿಗೆ ಬಹುರಾಷ್ಟ್ರೀಯ ಕಂಪನಿಗಳು ಇಲ್ಲಿ ಭವಿಸಾಮ್ರಾಜ್ಯ ಸ್ಥಾಪಿಸಲು ಹೆಣಗುತ್ತಿವೆ. ಇದಕ್ಕೆ ಸಾಮ್ರಾಜ್ಯಶಾಹಿಗಳ ಮಾರ್ಗದರ್ಶನವಿದೆ ಮತ್ತು ಇಲ್ಲಿನ ಬಂಡವಾಳಶಾಹಿಗಳ ಸಹಕಾರವಿದೆ.

ಭಕ್ತಿ ಸಾಮ್ರಾಜ್ಯವೆಂದರೆ ಜೀವಜಾಲ ಸಮತೋಲನವನ್ನು ಕಾಪಾಡಿಕೊಳ್ಳುತ್ತ ಸುಲಿಗೆ ಇಲ್ಲದ ಸಮಾಜವನ್ನು ಕಟ್ಟುವುದು. ಭವಿ ಸಾಮ್ರಾಜ್ಯವೆಂದರೆ ಜೀವಜಾಲ ಸಮತೋಲನವನ್ನು ಹಾಳುಗೆಡವುತ್ತ ಸುಲಿಗೆ ಸಮಾಜವನ್ನು ಕಟ್ಟುವುದು. ನಮ್ಮ ಸಮಾಜ ಸಹಸ್ರಾರು ವರ್ಷಗಳಿಂದ ಕೋಟ್ಯಂತರ ಜನರ ಅನುಭವದೊಂದಿಗೆ ಗಳಿಸಿದ ಪರಂಪರಾಗತ ಜ್ಞಾನವೆಲ್ಲ ಭವಿಗಳ ಸಾಮ್ರಾಜ್ಯದಲ್ಲಿ ಕಾಲಕಸವಾಗಿ ಹೋಗುತ್ತದೆ. ಅನಾದಿ ಕಾಲದಿಂದ ರೂಪುಗೊಂಡ ಒಂದು ಜನಾಂಗದ ವಿವೇಕ ನಗೆಪಾಟಲಿಗೀಡಾಗುತ್ತದೆ. ಸ್ವಯಂಪರಿಪೂರ್ಣ ಸಮಾಜ ವ್ಯವಸ್ಥೆಯಲ್ಲಿನ ಜಾತಿ ಮತ್ತು ಅಸ್ಪೃಶ್ಯತೆಯ ವಿಷವನ್ನು ತೆಗೆದು ಇಡೀ ಸಮಾಜವನ್ನು ಜಾತ್ಯತೀತ ಮತ್ತು ವರ್ಗಾತೀತ ಸ್ವಯಂಪರಿಪೂರ್ಣ ಸಮಾಜವಾಗಿ ರೂಪಿಸುವ ಅದ್ವಿತೀಯ ಮಹಾಯೋಜನೆಯನ್ನು ಬಸವಣ್ಣನವರು ರೂಪಿಸಿದರು.ಸ್ವಾವಲಂಬನಕ್ಕಾಗಿ ಕಾಯಕದ ಮಹತ್ವವನ್ನು ಸಾರಿದರು. ಕಾಯಕದ ಮೂಲಕವೇ ಅರ್ಥ ಮತ್ತು ಮರಮಾರ್ಥ ಗಳಿಸುವ ಕ್ರಮವನ್ನು ತೋರಿಸಿಕೊಟ್ಟರು. ಅವೆಲ್ಲವನ್ನೂ ಸಮಾಜದ ಸದುಪಯೋಗಕ್ಕಾಗಿ ಬಳಸುವ ದಾಸೋಹ ಕಲೆಯನ್ನು ಕಲಿಸಿದರು. ಇಂಥ ಸಾಧನೆಗಾಗಿ ಹೊಸ ಶಿಕ್ಷಣ ಪದ್ಥತಿಯನ್ನು ಜಾರಿಗೆ ತಂದರು. ಅನುಭವದ ಮೂಲಕ ಅನುಭಾವ ಸಾಧಿಸುವ ಶಿಕ್ಷಣ ಪದ್ಧತಿ ಇದಾಗಿದೆ. ಅನುಭವವು ಬದುಕಿಗೆ ಬೇಕಾದ ಉತ್ಪಾದನಾ ಕ್ರಿಯೆಯಿಂದ ಸಿಗುವಂಥದ್ದಾದರೆ. ಅನುಭಾವವು ಈ ಐಹಿಕ ಬದುಕಿನ ಮೂಲಕವೇ ಬಾಳುವ ಕಲೆಯನ್ನು ಕಲಿಸುವಂಥದ್ದಾಗಿದೆ. ಬಾಳುವುದೆಂದರೆ ಲೋಕದ ಹಿತ ಕಾಪಾಡುತ್ತ ಬದುಕುವುದು. ಇಂಥ ಒಂದು ಅನುಪಮ ಶಿಕ್ಷಣ ವ್ಯವಸ್ಥೆಯಿಂದಲೇ ಇದೇ ನೆಲದಲ್ಲಿ ೧೨ನೇ ಶತಮಾನದಲ್ಲಿ ಕಾಯಕಜೀವಿಗಳ ಚಳವಳಿ ಸಾಧ್ಯವಾಯಿತು. ಆ ಅನುಭವದ ಆಧಾರದ ಮೇಲೆ ೨೧ನೇ ಶತಮಾನದಲ್ಲಿ ಮತ್ತೊಂದು ಚಳವಳಿ ಆರಂಭವಾಗುವುದು ಅವಶ್ಯವಾಗಿದೆ. ಅದಕ್ಕಾಗಿ ಹೊಸ ಶಿಕ್ಷಣ ವ್ಯವಸ್ಥೆಗಾಗಿ ಮೊದಲು ಹೋರಾಡಬೇಕಾಗಿದೆ.

ನಮ್ಮ ದೇಶದ ಆಧುನಿಕ ಶಿಕ್ಷಣ ಪದ್ಧತಿ ಶೇಕಡಾ ೨೫ರಷ್ಟಿರುವ ಇಂಡಿಯಾದವರಿಗೆ ಮಾತ್ರ ಉಪಯೋಗವಾಗುವಂಥದ್ದು. ಕಳೆದ ೧೫೦ ವರ್ಷಗಳ ಅವಧಿಯಲ್ಲಿ ರೂಪುಗೊಂಡಿರುವ ಶಿಕ್ಷಣವ್ಯವಸ್ಥೆ ಇಂದು ಅರ್ಥಹೀನವಾಗುವ ಪರಿಸ್ಥಿತಿ ತಲೆದೋರಿದೆ. ನಮ್ಮ ಸಾಹಿತ್ಯ , ಸಂಸ್ಕೃತಿ, ಕಲೆ, ಜನಪದ ಕಲೆ ಅಷ್ಟೇ ಅಲ್ಲ ತತ್ತ್ವಜ್ಞಾನ, ವಿಜ್ಞಾನ, ಇತಿಹಾಸ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ ಮುಂತಾದವು ಕೂಡ ಕಾಲಕಸವಾಗುತ್ತಿವೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಮುಂದಿನ ೨೫ ವರ್ಷಗಳ ಅವಧಿಯಲ್ಲಿ ಈ ವಿಷಯಗಳು ಅರ್ಥಹೀನವೆನಿಸುತ್ತವೆ. ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಂದ ಇಂಥ ವಿಷಯಗಳ ವಿಭಾಗಗಳು ಮಾಯವಾಗುತ್ತವೆ.

ಇಂದಿನ (೨೮.೧೨.೨೦೦೬) ಪ್ರಜಾವಾಣಿ ಪತ್ರಿಕೆಯಲ್ಲಿ "ಓದಿದ್ದು ಪಿಎಚ್‌ಡಿ: ಕೆಲಸ ರಸ್ತೆ ರಿಪೇರಿ" ತಲೆಬರಹದ ಸುದ್ದಿಯೊಂದು ಪಕಟವಾಗಿದೆ. ಇಂದು ಕಾಲಕಸವಾಗುತ್ತಿರುವ ಶಿಕ್ಷಣವನ್ನು ಕಲಿತ ಭಾರತದ ಪದವೀಧರರ ಹೃದಯವಿದ್ರಾವಕ ಪರಿಸ್ಥಿಗೆ ಈ ಸುದ್ದಿ ಸಾಕ್ಷಿಯಾಗಿದೆ. ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿಯ ದಾಸರಹಳ್ಳಿ ತಾಂಡಾದ ಎಲ್. ದೇವಾ ನಾಯಕ ಬಿ.ಎ., ಬಿ.ಎಡ್., ಮತ್ತು ಎಂ.ಎ. ಪದವಿಗಳನ್ನು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ. ಪಿಎಚ್‌ಡಿ ಮಹಾಪ್ರಬಂಧವನ್ನೂ ಸಲ್ಲಿಸಿದ್ದಾರೆ. ದಲಿತರಿಗೆ ಸಿಗುವ ಮೀಸಲಾತಿ ಸೌಲಭ್ಯವನ್ನೂ ಹೊಂದಿದ್ದಾರೆ. ಆದರೆ ಯಾವುದೇ ನೌಕರಿ ಸಿಗದೆ ಹಾಸನ ನಗರದ ರಸ್ತೆ ಡಾಂಬರೀಕರಣ ಕಾಮಗಾರಿಯಲ್ಲಿ ದಿನಗೂಲಿಯಾಗಿ ಕೆಲಸ ಮಾಡುತ್ತಿದ್ದಾರೆ! ಇಷ್ಟೊಂದು ಓದಿದ ’ಭಾರತದ ವಿದ್ಯಾರ್ಥಿ’ಯ ಪರಿಸ್ಥಿತಿ ಹೇಗಿದೆ ನೋಡಿ. ಆದರೆ ಇಂಡಿಯಾ ಯುವಕನೊಬ್ಬ ಎಸ್ಸೆಸ್ಸೆಲ್ಸಿ ಪಾಸಾದ ಮೇಲೆ ಎಂಜಿನಿಯರಿಂಗ್‌ನಲ್ಲಿ ಅಥವಾ ಕಂಪ್ಯೂಟರ್ ಸೈನ್ಸ್‌ನಲ್ಲಿ ಡಿಪ್ಲೋಮಾ ಮಾಡಿಕೊಳ್ಳುತ್ತಾನೆ. ಸ್ವಲ್ಪ ಪ್ರಯತ್ನಪಟ್ಟು ಆರಂಭದಲ್ಲೇ ಹತ್ತಾರು ಸಾವಿರ ಸಂಬಳ ಸಿಗುವ ನೌಕರಿ ಪಡೆಯುತ್ತಾನೆ. ವೃತ್ತಿಪರ ಶಿಕ್ಷಣ ಪಡೆದ ಇಂಡಿಯಾದವರು ನಿರುದ್ಯೋಗಿಗಳಾಗಿ ಉಳಿಯುವುದು ಬಹಳ ಕಡಿಮೆ. ಆದರೆ ಪದವೀಧರ ಭಾರತೀಯರಿಗೆ ಉದ್ಯೋಗಾವಕಾಶಗಳೇ ತೀರ ಕಡಿಮೆ.

ಎಷ್ಟೋ ಮಂದಿ ಸ್ನಾತಕೋತ್ತರ ಪದವೀಧರರು ಸಾವಿರ ರೂಪಾಯಿ ಸಂಬಳಕ್ಕೆ ದುಡಿಯುವ ಕರುಣಾಜನಕ ಸ್ಥಿತಿ ಬಂದೊದಗಿದೆ. ನಮ್ಮ ಸಾಂಪ್ರದಾಯಿಕ ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ನಿರುದ್ಯೋಗಿಗಳನ್ನು ಸೃಷ್ಟಿಸುವ ಕಾರ್ಖಾನೆಗಳಾಗುತ್ತಿವೆ. ಇಂಥ ಸ್ಥಿತಿಯಲ್ಲಿ ನಾವು ಅಮೂಲ್ಯವಾದುದನ್ನು ಕಳೆದುಕೊಳ್ಳುತ್ತಿದ್ದೇವೆ. ಅದುವೇ ನಮ್ಮ ಪರಂಪರಾಗತವಾಗಿ ಬಂದ ಜನಪದರ ಅನುಭವ. ಈ ಅನುಭವದಲ್ಲಿ ಸಾಮಾಜಿಕ ಸಮತೋಲನ ಕಾಪಾಡುವ ವಿವೇಕವಿದೆ, ಸಾಹಿತ್ಯವಿದೆ, ಸಂಗೀತವಿದೆ, ಜೀವನವಿಧಾನವಿದೆ, ನಮ್ಮದೇ ಆದ ರೀತಿಯ ಕಷ್ಟ ಸುಖಗಳಿವೆ, ಸಮಸ್ಯಗಳಿವೆ. ನಾವು ನಮ್ಮ ವ್ಯವಸ್ಥೆಯ ಸಂರಚನೆಯಲ್ಲಿನ ಎಲ್ಲ ಅಹಿತವಾದುದನ್ನು ನಿರ್ನಾಮ ಮಾಡುತ್ತ ಮತ್ತು ಹಿತವಾದುದನ್ನು ರಕ್ಷಿಸುತ್ತ ಬಹುಜನರ ಹಿತವನ್ನು ಕಾಪಾಡುವುದೇ ವಿವೇಕ. ಇಂಥ ವಿವೇಕವನ್ನು ಉಳಿಸಿಕೊಳ್ಳಬೇಕಾದರೆ ನಾವು ರೈತರ ಮತ್ತು ಎಲ್ಲ ಕಾಯಕಜೀವಿಗಳ ದೃಷ್ಟಿಕೋನದಿಂದ ನಮ್ಮ ದೇಶದ ಬೆಳವಣಿಗೆಯನ್ನು ನೋಡಬೇಕಿದೆ. ಬಹುಪಾಲು ಜನರಿಗೆ ಉಪಯುಕ್ತವಾಗುವಂಥ ಶಿಕ್ಷಣ ವ್ಯವಸ್ಥೆ ಭಾರತೀಯರಿಗೆ ಬೇಕಾಗಿದೆ. ವೃತ್ತಿಪರ ಶಿಕ್ಷಣ ವ್ಯವಸ್ಥೆ ಇಂಡಿಯಾದವರಿಗೆ ಲಾಭದಾಯಕವೇ ಆಗಿದೆ. ಇದನ್ನೆಲ್ಲ ಬದಲಾಯಿಸುವುದು ಸಾಧ್ಯವಿಲ್ಲದ ಮಾತು. ಆದ್ದರಿಂದ ಭಾರತೀಯರಿಗಾಗಿಯೇ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ. ದೇಶದ ಜನ ಭಾರತೀಯ ಶಿಕ್ಷಣವಾದರೂ ಪಡೆಯಲಿ, ಆರ್ಥಿಕ ಸಾಮರ್ಥ್ಯವಿದ್ದರೆ ಇಂಡಿಯಾದ ಶಿಕ್ಷಣವಾದರೂ ಪಡೆಯಲಿ. ಆಯ್ಕೆ ದೇಶದ ಜನರಿಗೆ ಬಿಟ್ಟದ್ದು.

ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಅರಣ್ಯ, ಕೃಷಿ, ಕರಕುಶಲ ವಸ್ತುಗಳ ತಯಾರಿಕೆ, ಗುಡಿಕೈಗಾರಿಕೆ, ವಿವಿಧ ಕಾಯಕಗಳು, ಯೋಗ, ಆಯುರ್ವೇದ, ಯುನಾನಿ, ನಾಟಿವೈದ್ಯ,, ಪಶುವೈದ್ಯಕೀಯ, ಕಲೆ, ಸಾಹಿತ್ಯ, ಮಾನವಿಕ ಶಾಸ್ತ್ರಗಳು, ಕನ್ನಡ ಮಾಧ್ಯಮದ ಜೊತೆ ಇಂಗ್ಲಿಷ್ ಕಲಿಕೆ, ಮೂಲಭೂತ ಕಂಪ್ಯೂಟರ್ ಜ್ಞಾನ ಇಂದಿನ ಅವಶ್ಯಕತೆಗಳಾಗಿವೆ. ಕಾಯಕದ ಮಹತ್ವವನ್ನು ಮತ್ತು ಸರಳ ಜೀವನ ವಿಧಾನವನ್ನು ಸಾರುವ ನನ್ನ ಕಲ್ಪನೆಯ ಭಾರತೀಯ ಶಿಕ್ಷಣ ಪದ್ಥತಿಯಲ್ಲಿ ವ್ಯಾಸಂಗ ಮಾಡಿದವರಿಗೆ ಈ ಹಿನ್ನೆಲೆಯಲ್ಲಿ ಉದ್ಯೋಗಾವಕಾಶ ಕಲ್ಪಿಸಲು ಯಾವುದೇ ತೊಂದರೆಯಾಗುವುದಿಲ್ಲ. ಅಲ್ಲದೆ ಎಲ್ಲ ವಿಧವಾದ ನಮ್ಮ ಪರಂಪರೆಯ ಜ್ಞಾನವನ್ನು ಉಳಿಸಿಕೊಳ್ಳುವ ಮಾರ್ಗ ಇದಾಗಿದೆ.

ನಮ್ಮ ಶಿಕ್ಷಣವು ನಮಗೆ ಸಮೂಹ ಪ್ರಜ್ಞೆಯನ್ನು ಕೊಡಬೇಕು. ಲಿಂಗಭೇದ, ವರ್ಗಭೇದ, ವರ್ಣಭೇದ, ಜಾತಿ ಮತ್ತು ಉಪಜಾತಿ ಭೇದಗಳನ್ನು ಅಳಿಸಿಹಾಕುವಂಥದ್ದಾಗಿರಬೇಕು. ಮೇಲೆ ತಿಳಿಸಿದಂಥ ಭಾರತೀಯ ಶಿಕ್ಷಣ ಪದ್ಧತಿಗೆ ಇಂಥ ಸಮಾಜವನ್ನು ನಿರ್ಮಿಸುವ ಸಾಮರ್ಥ್ಯವಿದೆ.

ಹೇಗಾದರೂ ಮಾಡಿ ಇಂಡಿಯನ್ ಆಗಬೇಕೆಂಬ ಹಂಬಲ ಭಾರತೀಯರಲ್ಲಿ ಬೆಳೆಯುತ್ತಿದೆ. ಆದರೆ ಭಾರತೀಯರಾಗುವ ಹಂಬಲ ಇಂಡಿಯನ್ನರಲ್ಲಿ ಬೆಳೆಯುವಂಥ ವಾತಾವರಣ ನಿರ್ಮಾಣವಾಗಬೇಕಿದೆ. ಭಾರತೀಯನೊಬ್ಬ ಇಂಡಿಯನ್ ಆದರೆ ಭಾರತದ ಕಡೆ ನೋಡಲೂ ಸಿದ್ಧನಿರುವುದಿಲ್ಲ. ಸಹಸ್ರಾರು ವರ್ಷಗಳಿಂದ ಶಿಕ್ಷಣದಿಂದ ವಂಚಿತರಾದವರು ಕೂಡ ಬ್ರಿಟಿಷ್ ಶಿಕ್ಣಣ ಪದ್ಧತಿಯಿಂದಾಗಿ ಶಿಕ್ಷಣ ಪಡೆಯಲು ಸಾಧ್ಯವಾಯಿತು. ಆದರೆ ಬ್ರಿಟಿಷ್ ವ್ಯವಸ್ಥೆಯ ಶಿಕ್ಷಣ ಪಡೆದ ಭಾರತೀಯರು ಇಂಡಿಯನ್ನರಾಗತೊಡಗಿದರು. ನಾಲ್ಕಕ್ಷರ ಕಲಿತವರು ಸರ್ಕಾರಿ ನೌಕರಿಯೊಂದೇ ಮುಕ್ತಿಯ ಮಾರ್ಗವೆಂದು ತಿಳಿದರು. ಹೀಗಾಗಿ ಬಹುಪಾಲು ಮಂದಿ ಕೃಷಿ ಉದ್ಯೋಗವನ್ನೂ ಮೂಲೋದ್ಯೋಗವನ್ನೂ ಕಳೆದುಕೊಂಡು ನಿರುದ್ಯೋಗಿಗಳಾಗಿ ನಿರರ್ಥಕ ಜೀವನ ಸಾಗಿಸತೊಡಗಿದ್ದಾರೆ. ಖಾಸಗೀಕರಣ ಮತ್ತು ಕಂಪ್ಯೂಟರ್ ಯುಗದಲ್ಲಿ ಈ ಸಮಸ್ಯೆ ಇನ್ನೂ ಹೆಚ್ಚುತ್ತಿದೆ.

ಇಂಥ ಸಂದರ್ಭದಲ್ಲಿ ನಮ್ಮ ಮಕ್ಕಳು ಪ್ರಾಥಮಿಕ ಶಾಲೆಯಿಂದಲೇ ಈ ಮಣ್ಣಿನ ಬಗ್ಗೆ, ಎರೆಹುಳುಗಳ ಬಗ್ಗೆ, ಪಶು ಪಕ್ಷಿಗಳ ಬಗ್ಗೆ, ಮರಗಿಡಬಳ್ಳಿಗಳ ಬಗ್ಗೆ, ಹಳ್ಳಿಗಾಡಿನ ಕಾಯಕ ಜೀವಿಗಳ ಬಗ್ಗೆ ಮತ್ತು ಸ್ವಾವಲಂಬನೆಯ ಬದುಕಿನ ಬಗ್ಗೆ ಪ್ರಜ್ಞೆ ಮೂಡಿಸುವ ಶಿಕ್ಷಣ ಪದ್ಧತಿ ಅವಶ್ಯವಾಗಿದೆ. ಇದೇ ನನ್ನ ಕಲ್ಪನೆಯ ಭಾರತೀಯ ಶಿಕ್ಷಣ ಪದ್ಧತಿ. ನಾವು ಬೇಗ ಎಚ್ಚತ್ತುಕೊಳ್ಳದಿದ್ದರೆ. ಭಾರತದ ಹಳ್ಳಿಗಳೆಲ್ಲ ಇಂಡಿಯಾದ ಕೊಳೆಗೇರಿಗಳಾಗುತ್ತವೆ. ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾವಿರದಷ್ಟು ಕೊಳೆಗೇರಿಗಳಿವೆ. ಸಾವಿರಾರು ಹಳ್ಳಿಗಳ ಜನ ತಮ್ಮ ಸ್ವಚ್ಛಂದ ಹಳ್ಳಿಗಳನ್ನು ಬಿಟ್ಟು ಮತ್ತು ಭೂಮಿಯ ಸಂಬಂಧವನ್ನು ಕಡಿದುಕೊಂಡು ಕೂಲಿಗಾಗಿ ನಗರ ಸೇರಿ ಕೊಳಚೆ ಪ್ರದೇಶಗಳಲ್ಲಿ ನರಕ ಸದೃಶ ಜೀವನವನ್ನು ಸಾಗಿಸುತ್ತಿದ್ದಾರೆ. ಬೆಂಗಳೂರು ಸಿಲಿಕಾನ್ ಸಿಟಿ ಎಂದು ಇಂಡಿಯನ್ನರು ಹೇಳಿದರೆ ಭಾರತೀಯರಾದ ನಾವು ಬೆಂಗಳೂರು ಕೊಳೆಗೇರಿಗಳ ನಗರ ಎಂದು ಹೇಳಬೇಕಾಗುತ್ತದೆ. ನಮ್ಮ ಹಳ್ಳಿಗಳು ಚೆನ್ನಾಗಿದ್ದರೆ, ಹಳ್ಳಿಗರಿಗೆ ಎಲ್ಲ ಅವಕಾಶಗಳು ತಮ್ಮ ಹಳ್ಳಿಗಳಲ್ಲೇ ಸಿಕ್ಕರೆ ಅವರು ಖಂಡಿತವಾಗಿಯೂ ತಮ್ಮ ಹಳ್ಳಿಗಳನ್ನು ಬಿಟ್ಟು ನಗರಗಳಿಗೆ ಬರುವ ಅನಿವಾರ್ಯತೆ ಬರುವುದಿಲ್ಲ.

ಬಹುಜನರ ಹಿತ ರಕ್ಷಿಸುವ ಹೊಸ ಶಿಕ್ಷಣ ಪದ್ಥತಿ ಮತ್ತು ಜಾತ್ಯತೀತ ಸಮಾಜ ವ್ಯವಸ್ಥೆಯಿಂದ ಮಾತ್ರ ಸುಂದರ ಹಾಗೂ ಸದೃಢ ದೇಶ ನಿರ್ಮಾಣ ಸಾಧ್ಯ.