You are hereಆನು ದೇವಾ ಇಂಬಿನಲಿ ಇದ್ದೇನೆ
ಆನು ದೇವಾ ಇಂಬಿನಲಿ ಇದ್ದೇನೆ
ಲೇ: ರಂಜಾನ್ ದರ್ಗಾ
ಹಕ್ಕುಗಳು: ಲೇಖಕರವು
ಲಿಂಗಾರ್ಚನೆಯ ಮಾಡುವ ಮಹಿಮರೆಲ್ಲರೂ
ಸಲಿಗೆವಂತರಾಗಿ ಒಳಗೈದಾರೆ.
ಆನು ದೇವಾ ಹೊರಗಣವನು.
‘ಸಂಬೋಳಿ ಸಂಬೋಳಿ’ ಎನುತ ಇಂಬಿನಲಿ ಇದ್ದೇನೆ.
ಕೂಡಲಸಂಗಮದೇವಾ
ನಿಮ್ಮ ನಾಮವಿಡಿದ ಅನಾಮಿಕ ನಾನು.
ಬಸವಣ್ಣನವರ ಇಷ್ಟಲಿಂಗಕ್ಕೆ ದೇಗುಲ ಇಲ್ಲ. ದೇಹವೆಂಬ ದೇಗುಲದಲ್ಲಿ ಇರುವ ದೇವರ ಪ್ರತೀಕ ಅದಾಗಿದೆ. ದೇಹದಲ್ಲಿ ದೇವರಿದ್ದಾನೆ. ಆತನೊಳಗೆ ಇಡೀ ವಿಶ್ವವೇ ಇದೆ. ಈ ಅರಿವಿನ ಕುರುಹು ಇಷ್ಟಲಿಂಗವಾಗಿದೆ. ಆದರೆ ಸ್ಥಾವರಲಿಂಗಕ್ಕೆ ದೇಗುಲವಿದೆ. ಆ ಲಿಂಗಾರ್ಚನೆಗಾಗಿ ಅರ್ಚಕರೂ ಇದ್ದಾರೆ. ಅರ್ಚಕರ ಜೊತೆ ಲಿಂಗಾರ್ಚನೆ ಮಾಡುವ ‘ಮಹಿಮರೂ’ ಸ್ಥಾವರಲಿಂಗದೊಡನೆ ಸಲಿಗೆವಂತರಾಗಿ ಗರ್ಭಗುಡಿಯೊಳಗೆ ಇದ್ದಾರೆ.
ಬಸವಣ್ಣನವರ ಪೂರ್ವಜರು ಶೈವ ಬ್ರಾಹ್ಮಣರು. ಬಸವಣ್ಣನವರು ತಿರಸ್ಕರಿಸುವ ಈ ದೇವಾಲಯ ಶೈವ ಬ್ರಾಹ್ಮಣರ ದೇವಾಲಯ. ಇಲ್ಲಿ ಅಸ್ಪೃಶ್ಯರಿಗೆ ಪ್ರವೇಶವಿಲ್ಲ. ಈ ದೇವಾಲಯದೊಳಗೆ ಸಲಿಗೆವಂತರಾಗಿ ಇರುವವರು ಶ್ರೀಮಂತ ಸವರ್ಣೀಯರು ಮಾತ್ರ. ಬಸವಣ್ಣನವರು ಹೇಳುವಂತೆ ಉಳ್ಳವರು ಮಾಡುವ ಶಿವಾಲಯಗಳಿವು. ಈ ಉಳ್ಳವರೇ ಸವರ್ಣೀಯ ಶ್ರೀಮಂತರು. ಏಕೆಂದರೆ ಮನುಸ್ಮೃತಿಯ ಪ್ರಕಾರ ಅಸ್ಪೃಶ್ಯರಾದವರಿಗೆ ಸಂಪತ್ತಿನ ಶೇಖರಣೆಯ ಹಕ್ಕಿಲ್ಲ. ಅಸ್ಪೃಶ್ಯರು ಎಂದೂ ಉಳ್ಳವರಾಗದಂಥ ವ್ಯವಸ್ಥೆಯನ್ನು ಮನುಸ್ಮೃತಿ ಸೃಷ್ಟಿಸಿತ್ತು. ಉಳ್ಳವರು ಮತ್ತು ಬ್ರಾಹ್ಮಣರು ಮಾತ್ರ ಗರ್ಭಗುಡಿಯೊಳಗೆ ಪ್ರವೇಶಿಸುವ ಹಕ್ಕನ್ನು ಹೊಂದಿದ್ದರು. ದೇವಾಲಯಗಳಲ್ಲೇ ಸಕಲ ಸುಖಭೋಗಗಳನ್ನು ಕೂಡ ಪಡೆಯುವ ಅವಕಾಶ ಇವರಿಗಿತ್ತು. ಸಾಹಿತ್ಯ, ಸಂಗೀತ ಮತ್ತು ನೃತ್ಯ ಬಲ್ಲ ದೇವದಾಸಿಯರು, ಲೈಂಗಿಕ ಶಿಲ್ಪಕಲೆ ಮತ್ತು ಮುತ್ತುರತ್ನ, ವಜ್ರವೈಡೂರ್ಯ ಹಾಗೂ ಹೊನ್ನಿನಿಂದ ಕೂಡಿದ ಸಂಪತ್ತಿನಿಂದ ದೇವಾಲಯಗಳು ತುಂಬಿತುಳುಕುತ್ತಿದ್ದವು. ಹೀಗಾಗಿ ಉಳ್ಳವರ ಸರ್ವಾಕರ್ಷಣೆಯ ಕೇಂದ್ರಗಳಾಗಿದ್ದವು. ಬ್ರಾಹ್ಮಣರ ಐಹಿಕ ಅಭ್ಯುದಯಕ್ಕೆ ಇವು ಸಹಕಾರಿ ಆಗಿದ್ದವು. ಇವರೆಲ್ಲ ದೇವರ ಜೊತೆ ‘ಸಲುಗೆಯಿಂದ ಇರುವ ಮಹಿಮರು’ ಎಂದು ಬಸವಣ್ಣನವರು ಸ್ತುತಿನಿಂದೆ ಮಾಡಿದ್ದಾರೆ.
ಬಡವರಾದ ಅಸ್ಪೃಶ್ಯರಿಗೆ ಈ ದೇವಾಲಯಗಳೊಳಗೆ ಪ್ರವೇಶವಿರಲಿಲ್ಲ. ದೇವಾಲಯದ ಗೋಡೆಯ ಕಿಂಡಿಯಿಂದ ದೇವರನ್ನು ನೋಡಬೇಕಿತ್ತು. ದೇವಾಲಯಗಳ ಇಂಥ ಕಿಂಡಿಗಳು ಶೂದ್ರರ ಮತ್ತು ಅತಿಶೂದ್ರರಾದ ಅಸ್ಪೃಶ್ಯರ ಕಿಂಡಿಗಳೇ ಆಗಿವೆ. ಹೀಗೆ ಅಸ್ಪೃಶ್ಯರು ದೇವಾಲಯಗಳಿಗೆ ಹೊರಗಿನವರಾಗಿದ್ದರು. ದೇವಾಲಯದ ಒಳಗೆ ಹೋಗುವವರಿಗೂ ಹೊರಗಿನವರಾಗಿದ್ದರು.
ಬಸವಣ್ಣನವರು ಇಂಥ ದೇವಾಲಯದ ಹೊರಗೆ ಅಸ್ಪೃಶ್ಯರ ಜೊತೆ ನಿಂತು ಚಿಂತಿಸಿದ ಅನುಭವ ಈ ವಚನದಲ್ಲಿದೆ. ಅಸ್ಪೃಶ್ಯರಿಗೆ ಪ್ರವೇಶ ನಿರಾಕರಿಸುವ ದೇವಾಲಯಗಳನ್ನು, ಅಂಥ ವ್ಯವಸ್ಥೆಯನ್ನು ರೂಪಿಸಿದ ಮನುಧರ್ಮವನ್ನು, ಆ ವ್ಯವಸ್ಥೆಯನ್ನು ಜಾರಿಗೊಳಿಸಿದ ಬ್ರಾಹ್ಮಣರನ್ನು ಮತ್ತು ಆ ವ್ಯವಸ್ಥೆಯನ್ನು ಪೋಷಿಸಿದ ಉಳ್ಳವರನ್ನು ಅವರು ವಿರೋಧಿಸಿದ್ದಾರೆ. ಈ ಮನುಧರ್ಮದ ವ್ಯವಸ್ಥೆಗೆ ಬಸವಣ್ಣನವರು ಹೊರಗಿನವರಾಗಿದ್ದಾರೆ. ದೇವಾಲಯಗಳನ್ನು ಅವರು ಧಾರ್ಮಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ನೋಡಿದ್ದಾರೆ. ಬಡವರು ಮತ್ತು ಅಸ್ಪೃಶ್ಯರು ದೇವಾಲಯಗಳಿಗೆ ಬಿಟ್ಟಿ ಕೆಲಸ ಮಾಡುತ್ತಲೇ ಬಂದಿದ್ದಾರೆ. ಆದರೂ ಅವರಿಗೆ ಧಾರ್ಮಿಕವಾಗಿ ನೆಮ್ಮದಿ ಸಿಗುವಂಥ ವಾತಾವರಣವನ್ನು ಬ್ರಾಹ್ಮಣರು ಮತ್ತು ಉಳ್ಳವರು ಕಲ್ಪಿಸಲಿಲ್ಲ. ಸಾಮಾಜಿಕವಾಗಿ ಉಳ್ಳವರು ಮತ್ತು ಬಡವರ ಮಧ್ಯದ ನಿಯಂತ್ರಣ ರೇಖೆಯ ಹಾಗೆ ಈ ದೇವಾಲಯಗಳ ಬಳಕೆಯಾಗಿದೆ. ಸಹಸ್ರಾರು ವರ್ಷಗಳಿಂದ ನಮ್ಮ ಬಹುಪಾಲು ಜನಸಮುದಾಯ ಬಡತನದಲ್ಲೇ ಕೊಳೆಯುವಂತಾಗಲು ಖರ್ಚಿನ ದೇವಾನುದೇವತೆಗಳೇ ಬಹುಮುಖ್ಯ ಕಾರಣವಾಗಿದ್ದು ಅವು ಸದಾ ಮೇಲ್ಜಾತಿ ಮತ್ತು ಮೇಲ್ವರ್ಗದವರ ಪರವಾಗಿಯೇ ಇವೆ. ಇಂಥ ದೇವತೆಗಳನ್ನೆಲ್ಲ ತಿರಸ್ಕರಿಸುವುದನ್ನು ಬಸವಣ್ಣನವರು ಕಲಿಸಿಕೊಟ್ಟರು. ಇಂಥ ದೇವತೆಗಳ ಜೊತೆ ಸಲುಗೆಯಿಂದ ಇರುವವರ ವಿರುದ್ಧ ಸತ್ಯಾಗ್ರಹ ಹೂಡಿದರು. ಈ ವಚನ ಬಸವಣ್ಣನವರು ಸತ್ಯಾಗ್ರಹಿಗಳೆಂಬುದನ್ನು ಸೂಚಿಸುತ್ತದೆ.
ಬಸವಣ್ಣನವರು ದೇವಾಲಯವನ್ನು ಪ್ರವೇಶಿಸುವ ಹಕ್ಕನ್ನು ಹೊಂದಿದ್ದಾರೆ. ಆದರೆ ಅವರು ದೇವಾಲಯವನ್ನು ಪ್ರವೇಶಿಸದೆ ದೇವಾಲಯಗಳಿಂದ ಬಹಿಷ್ಕೃತರಾದ ಜನಸಮುದಾಯದ ಜೊತೆ ನಿಂತು ಸತ್ಯಾಗ್ರಹ ಮಾಡಿದ್ದಾರೆ. ಅಂತೆಯೆ ಘೋಷಣೆ ರೂಪದ ಈ ವಚನ ಬರೆದಿದ್ದಾರೆ. ಈ ಘೋಷಣೆಯಲ್ಲಿ ಉಳ್ಳವರ ಮೇಲೆ ಸಾತ್ವಿಕ ಸಿಟ್ಟಿದೆ, ವ್ಯಂಗವಿದೆ, ತಿರಸ್ಕಾರವಿದೆ, ಹೋರಾಟಗಾರರು ನೀಡುವಂಥ ಎಚ್ಚರಿಕೆಯ ಮಾತೂ ಇದೆ. ತಾನು ಬಹಿಷ್ಕೃತ ಜನರಲ್ಲಿ ಒಂದಾಗಿ ಹೋಗಿದ್ದೇನೆ ಎಂಬುದನ್ನು ಸ್ಪಷ್ಟಪಡಿಸುವ ಎದೆಗಾರಿಕೆಯೂ ಇದೆ.
ಬಸವಣ್ಣನವರ ಈ ಎಲ್ಲ ಕ್ರಿಯೆಗೊಂದು ಸೈದ್ಧಾಂತಿಕೆ ಹಿನ್ನೆಲೆ ಇದೆ. ಅವರಿಗೆ ಕೂಡಲಸಂಗಮದೇವ ಎಂಬುದೊಂದು ಅಂತಃಸಾಕ್ಷಿಯಿಂದ ಕೂಡಿದ ಪರಿಪೂರ್ಣ ಸಿದ್ಧಾಂತ. ಅವರ ಎಲ್ಲ ನಡೆ ಮತ್ತು ನುಡಿ ಈ ಸೈದ್ಧಾಂತಿಕ ಹಿನ್ನೆಲೆಯಲ್ಲೇ ಇವೆ.
ಬಸವಣ್ಣನವರು ಈ ವಚನದಲ್ಲಿ ಚಾತರ್ವರ್ಣ ಪದ್ಧತಿಯ ಸಾಮಾಜಿಕ ವ್ಯವಸ್ಥೆಯಿಂದ ಸಿಡಿದು ಇಂಬಿನಲ್ಲಿ (ದೂರದಲ್ಲಿ) ನಿಂತಿದ್ದಾರೆ. ದೇವಾಲಯಗಳಿಂದ ಜನರು ಬಿಡುಗಡೆಗೊಳ್ಳುವ ದಾರಿಯನ್ನು ತೋರಿದ್ದಾರೆ. ಅವರು ದೇವಾಲಯಗಳ ಸುಲಿಗೆ ವ್ಯವಸ್ಥೆಯಿಂದ ದೂರದಲ್ಲಿದ್ದರೂ ಎಚ್ಚರಿಕೆ ಎಚ್ಚರಿಕೆ (ಸಂಬೋಳಿ ಸಂಬೋಳಿ) ಎಂದು ತಮ್ಮ ಜಾಗೃತಾವಸ್ಥೆಯನ್ನು ಸೂಚಿಸುತ್ತಿದ್ದಾರೆ. ಕೂಡಲಸಂಗಮದೇವನೊಬ್ಬನೇ ಅಂದರೆ ಸಿದ್ಧಾಂತವೊಂದೇ ಶ್ರೇಷ್ಠ; ನಾವೆಲ್ಲ ಅದಕ್ಕೆ ಅಧೀನರಾಗಿದ್ದರಿಂದ ನಮ್ಮಲ್ಲಿ ಮೇಲು ಕೀಳು ಇರಲು ಸಾಧ್ಯವಿಲ್ಲ. ಈ ಸತ್ಯದ ಅರಿವುಳ್ಳವರು ಅನಾಮಿಕರಂತೆ ಬದುಕುತ್ತ ಅಹಂಕಾರದ ಮೇಲೆ ವಿಜಯ ಸಾಧಿಸುತ್ತಾರೆ. ಹೀಗೆ ಈ ವಚನ ಬಸವಣ್ಣನವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ.
ಜಾತಿಗಳು ಅಹಂಕಾರದ ಪ್ರತೀಕ. ಮನುಷ್ಯನ ಅಹಂ ನಾಶವಾಗದೆ ಜಾತಿಗಳನ್ನು ನಾಶ ಮಾಡಲಿಕ್ಕಾಗದು. ಅಹಂಕಾರ ಅಳಿದಾಗ ಜಾತಿ ಸಂಕರ ಸಾಧ್ಯ. ಜಾತಿ ಸಂಕರದಿಂದ ಜಾತ್ಯತೀತ ಸಮಾಜ ನಿರ್ಮಾಣ ಸಾಧ್ಯ. ವೈದಿಕ ಬಸವಣ್ಣ ಅವೈದಿಕ ಬಸವಣ್ಣನಾದುದು ಭರತಖಂಡದ ಚರಿತ್ರೆಯಲ್ಲಿ ಅನನ್ಯ ಘಟನೆಯಾಗಿದೆ. ವೈದಿಕತ್ವ ಕಳೆದುಕೊಂಡು ಅವೈದಿಕ ಪ್ರಜ್ಞೆ ಪಡೆಯುವುದು ಸಾಮಾನ್ಯವಲ್ಲ. ಅದಕ್ಕಾಗಿ ಬಸವಣ್ಣನವರು ಮಾರ್ಗವೊಂದನ್ನು ಕಂಡುಹಿಡಿದರು. ಅದುವೇ ಕೆಳಜಾತೀಕರಣ ಅವರು ಮಾನಸಿಕವಾಗಿ ಕೆಳಜಾತೀಕರಣಕ್ಕೊಳಗಾದರು.
ಭಕ್ತಿ ಇಲ್ಲದ ಬಡವ ನಾನಯ್ಯ
ಕಕ್ಕಯ್ಯನ ಮನೆಯಲ್ಲೂ ಬೇಡಿದೆ,
ಚೆನ್ನಯ್ಯನ ಮನೆಯಲ್ಲೂ ಬೇಡಿದೆ,
ದಾಸಯ್ಯನ ಮನೆಯಲ್ಲೂ ಬೇಡಿದೆ,
ಎಲ್ಲಾ ಪುರಾತರು ನೆರೆದು ಭಕ್ತಿಭಿಕ್ಷವನಿಕ್ಕಿದಡೆ
ಎನ್ನ ಪಾತ್ರೆ ತುಂಬಿತ್ತು ಕೂಡಲಸಂಗಮದೇವಾ.
ಹೀಗೆ ಅವರು ಕೆಳಜಾತಿಗಳ ಮಹಾಪುರುಷರಿಂದ ಅನುಭವಾಮೃತ ಪಡೆದರು. ಆ ಮೂಲಕ ಕೆಳಜಾತೀಕರಣಕ್ಕೊಳಗಾಗುವುದನ್ನು ಸಮಾಜಕ್ಕೆ ತೋರಿಸಿಕೊಟ್ಟರು. ಅಹಂಕಾರ ಮರ್ದನ ಮಾಡಿ ಮಹೋನ್ನತ ಮಾನವರಾದರು. ದೇವಸ್ವರೂಪರೇ ಆದರು. "ಕುಲಮದಕ್ಕೆ ಹೋರಿ ಜಂಗಮಭೇದವ ಮಾಡುವೆ, ಫಲವೇನು?", "ಕುಲವನರಸುವರೆ ಶರಣರಲ್ಲಿ, ಜಾತಿಸಂಕರವಾದ ಬಳಿಕ ?" ಎಂದು ಪ್ರಶ್ನಿಸಿದರು.
ದೇವಸಹಿತ ಮನೆಗೆ ಬಂದಡೆ
ಕಾಯಕವಾವುದೆಂದು ಬೆಸಗೊಂಡೆನಾದಡೆ
ನಿಮ್ಮಾಣೆ! ನಿಮ್ಮ ಪುರಾತನರಾಣೆ! ತಲೆದಂಡ! ತಲೆದಂಡ!
ಕೂಡಲಸಂಗಮದೇವಾ ಭಕ್ತರಲ್ಲಿ ಕುಲವನರಿಸಿದಡೆ
ನಿಮ್ಮ ರಾಣಿವಾಸದಾಣೆ!
ಎಂದು ಜಾತ್ಯತೀತ ನಿಲುವನ್ನು ಎತ್ತಿಹಿಡಿದು, ಬಸವಧರ್ಮ ಅಂದರೆ ಶರಣಧರ್ಮ ಜಾತಿಸಂಕರ ಧರ್ಮ, ಜಾತ್ಯತೀತ ಧರ್ಮ, ಇಡೀ ಮಾನವಕುಲದ ಧರ್ಮ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. "ಮಾದಾರ ಚೆನ್ನಯ್ಯನ ಮನೆಯ ಮಗ ನಾನು" ಎಂದು ಸಾರಿದ್ದಾರೆ.
"ಕುಲಕ್ಕೆ ತಿಲಕ ನಮ್ಮ ಮಾದಾರ ಚೆನ್ನಯ್ಯ ನಿಮ್ಮಿಂದಧಿಕ ನೋಡಾ ಕೂಡಲಸಂಗಮದೇವಾ." ಎಂದು ಕಟ್ಟಕಡೆಯ ಮಾನವ ತನ್ನ ಚಾರಿತ್ರ್ಯದ ಮೂಲಕ ವ್ಯಕ್ತಿತ್ವವಿಕಸನಗೊಂಡು ದೇವರಿಗಿಂತ ಮಿಗಿಲಾಗಬಲ್ಲ ಎಂದು ಸೂಚಿಸಿದ್ದಾರೆ.
"ದಾಸೀಪುತ್ರನಾಗಲಿ, ವೇಶ್ಯಾಪುತ್ರನಾಗಲಿ ಶಿವದೀಕ್ಷೆಯಾದ ಬಳಿಕ ಸಾಕ್ಷಾತ್ ಶಿವನೆಂದು ವಂದಿಸಿ, ಪೂಜಿಸಿ ಪಾದೋದಕ ಪ್ರಸಾದವ ಕೊಂಬುದೇ ಯೋಗ್ಯ" ಎಂದು ಹೇಳುತ್ತ "ಲಿಂಗವಿದ್ದಲ್ಲಿ ಹೊಲೆಯುಂಟೆ?" ಎಂದು ಎಚ್ಚರಿಸಿದ್ದಾರೆ. "ಉತ್ತಮ ಕುಲದಲಿ ಹುಟ್ಟಿದೆನೆಂಬ ಕಷ್ಟತನದ ಹೊರೆಯ ಹೊರಿಸದಿರಯ್ಯಾ" ಎಂದು ಕೂಡಲಸಂಗಮದೇವನಲ್ಲಿ ಬೇಡಿಕೊಂಡಿದ್ದಾರೆ. "ಆನು ಹಾರುವನೆಂದಡೆ ಕೂಡಸಂಗಮದೇವ ನಗುವನಯ್ಯಾ." ಎಂದು ಲೋಕಕ್ಕೆ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ "ಆನು ದೇವಾ ಹೊರಗಣವನು" ಎಂದು ಬಸವಣ್ಣನವರು ಹೇಳುವ "ಲಿಂಗಾರ್ಚನೆಯ...." ವಚನವನ್ನು ಗ್ರಹಿಸಬೇಕು. ಈ ವಚನದಲ್ಲಿ ಬರುವ "ಹೊರಗಣವನು", "ಸಂಬೋಳಿ" ಮತ್ತು "ಅನಾಮಿಕ" ಪದಗಳು ಶ್ಲೇಷಾರ್ಥ ಹೊಂದಿವೆ. "ಹೊರಗಣವನು" ಎಂದರೆ ಬ್ರಾಹ್ಮಣ್ಯದಿಂದ ಹೊರಬಂದವನು ಮತ್ತು ಅಸ್ಪೃಶ್ಯರ ಜೊತೆ ಒಂದಾದವನು. "ಸಂಬೋಳಿ" ಎಂಬುದು ಸವರ್ಣೀಯರ ಕೇರಿಗಳಿಗೆ ದಲಿತರು ಬರುವಾಗ ಬಳಸುವ ಪದ. ಹೀಗೆ ಬರುವಾಗ ಅವರು ದಾರಿಯ ಬದಿ ಉಗುಳುವಂಥ ಪರಿಸ್ಥಿತಿ ಕೂಡ ಇರಲಿಲ್ಲ. ಆದಕ್ಕಾಗಿ ಕೊರಳಲ್ಲಿ ಗಡಿಗೆ ಕಟ್ಟಿಕೊಳ್ಳುತ್ತಿದ್ದರು. ದಾರಿಯ ಮೇಲೆ ತಮ್ಮ ಹೆಜ್ಜೆಗುರುತುಗಳು ಮೂಡದಂತೆ ಅವರು ನೋಡಿಕೊಳ್ಳಬೇಕಿತ್ತು. ಆದ್ದರಿಂದ ಅವರು ತಮ್ಮ ಹೆಜ್ಜೆಗುರುತುಗಳು ಅಳಿಸಿಹೋಗುವ ಹಾಗಿ ಟೊಂಕಕ್ಕೆ ಪೊರಕೆ ಕಟ್ಟಿಕೊಳ್ಳುತ್ತಿದ್ದರು. ಬಸವಣ್ಣನವರು ಸಂಬೋಳಿ ಪದವನ್ನು ಎಚ್ಚರ ಎಂಬರ್ಥದಲ್ಲಿ ಬಳಸಿದ್ದಾರೆ. "ಅನಾಮಿಕ" ಅಹಂಕಾರ ಮುಕ್ತ ಎಂಬರ್ಥ ಕೊಡುತ್ತದೆ. "ಹೊಲೆಯ" ಎಂಬ ಅರ್ಥವನ್ನೂ ಕೂಡುತ್ತದೆ. ಹೀಗೆ ಅವರು ಈ ವಚನದಲ್ಲಿ ಬ್ರಾಹ್ಮಣ್ಯ ವಿರೋಧಿ ನಿಲುವನ್ನು ಮತ್ತು ಅಸ್ಪೃಶ್ಯರ ಪರವಾದ ನಿಲುವನ್ನು ಏಕ ಕಾಲಕ್ಕೇ ತಾಳಿದ್ದಾರೆ. ಈ ನಿಲುವುಗಳು ಒಂದಕ್ಕೊಂದು ಪೂರಕವಾಗಿವೆ. ಬಸವಣ್ಣನವರ ಅಸ್ಪೃಶ್ಯರ ಪರ ನಿಲುವು ಬರಿ ಬಾಯಿಮಾತಿನದಾಗಿರಲಿಲ್ಲ. ಅಂತೆಯೆ ಮನುಧರ್ಮವನ್ನು ವಿರೋಧಿಸದೆ ಬಸವಧರ್ಮವನ್ನು ಪಾಲಿಸಲು ಸಾಧ್ಯವಿಲ್ಲ. ಕೆಳಜಾತಿಯ ಬಸವಣ್ಣನನ್ನು ಸೃಷ್ಟಿಸಬಯಸುವವರು ಕೆಳಜಾತೀಕರಣಗೊಂಡ ಬಸವಣ್ಣ ಎಂಥ ಅನುಪಮ ಶಕ್ತಿಶಾಲಿ ಎಂಬುದನ್ನು ಮನಗಾಣುವುದು ೨೧ನೇ ಶತಮಾನದ ಬಹುಮುಖ್ಯ ಅವಶ್ಯಕತೆಗಳಲ್ಲಿ ಒಂದಾಗಿದೆ.
- Login or register to post comments
- Email this page