You are hereಬಸವದರ್ಶನ

ಬಸವದರ್ಶನ


By admin - Posted on 27 August 2010

ಲೇ: ರಂಜಾನ್ ದರ್ಗಾ
ಹಕ್ಕುಗಳು: ಲೇಖಕರವು

ಬಾಳತ್ವಕ್ಕೆಂದು ಮಧುವ ತಂದು
ಕೊಡನ ತುಂಬಿದ ಜೇನುಹುಳುವಿನಂತೆ ತಾನುಂಬುದು;
ತನ್ನೆಂಜಲ ಜಗವುಂಬುದು ನೋಡಯ್ಯಾ.
ಶಿವಭಕ್ತನಾಗಿ ಶಿವಾನ್ನವನೇ ಕೊಂಡು,
ಒಕ್ಕಮಿಕ್ಕ ವಸ್ತುವ ಜಂಗಮಕ್ಕಿಕ್ಕುವಾತನೆ ಭಕ್ತ,
ಕೊಂಡಾತನೆ ಜಂಗಮ.
ನಡುವೆ ನೀ ಬಂದು ಭಂಡು ಮಾಡದಿರೈ
ಕೂಡಲಸಂಗಮದೇವಾ.

ಜೀವನ ಮತ್ತು ಬಾಳುವೆಯ ಮಧ್ಯದ ಸೂಕ್ಷ್ಮತೆಯನ್ನು ಅರಿತುಕೊಳ್ಳುವವರೆಗೂ ಮಾನವನ ಬದುಕು ದುಃಖದಿಂದ ತುಂಬಿರುತ್ತದೆ. ಜೀವನವು ವೈಯಕ್ತಿಕವಾದ ಐಹಿಕ ಆಸೆಗಳ ಮೇಲೆ ನಿಂತಿದ್ದರೆ ಬಾಳುವೆಯು ಸಾಮೂಹಿಕ ಹೊಣೆಗಾರಿಕೆಯ ಮೇಲೆ ನಿಂತಿರುತ್ತದೆ. ಜನರು ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸುವುದರ ಮೂಲಕ ತಮ್ಮ ಜೀವನವನ್ನು ಸಾರ್ಥಕಗೊಳಿಸುವಂತೆ ಮಾಡುವುದೇ ಬಸವಧರ್ಮದ ಗುರಿಯಾಗಿದೆ. ಇಷ್ಟಲಿಂಗದ ಮೂಲಕ ವೈಯಕ್ತಿಕ ಸ್ವಾತಂತ್ರ್ಯ, ಜಂಗಮಲಿಂಗದ ಮೂಲಕ ಲೋಕಪ್ರಜ್ಞೆ, ಕಾಯಕದ ಮೂಲಕ ಸ್ವಾವಲಂಬನೆ, ದಾಸೋಹದ ಮೂಲಕ ಸಾಮಾಜಿಕ ಜವಾಬ್ದಾರಿ ಬಸವಧರ್ಮದ ಆಧಾರಸ್ತಂಭಗಳಾಗಿವೆ. ದಯಾವಂತರಾಗಿ, ಅರಿವೆಂಬ ಗುರುವಿನಿಂದ ಇವನ್ನೆಲ್ಲ ಅರ್ಥಮಾಡಿಕೊಳ್ಳಬೇಕು. ಈ ಅರಿವು ವ್ಯಕ್ತಿಗತ ಮತ್ತು ಸಾಮೂಹಿಕ ಅನುಭವ ಹಾಗೂ ಗುರುಸ್ವರೂಪಿ ಜ್ಞಾನಿಗಳ ಮೂಲಕ ಬರುವುದು. ಹೀಗೆ ಬಸವಣ್ಣನವರು ಲೋಕದ ಗುರುವಾಗಿದ್ದಾರೆ. ಈ ವಚನದಲ್ಲಿ ಬಸವಧರ್ಮದ ತತ್ತ್ವಗಳು ಅಡಗಿವೆ.

ಜೇನುಹುಳುಗಳ ಜೀವನಶೈಲಿಯ ಮೂಲಕ ಬಸವಣ್ಣನವರು ನಮಗಿಲ್ಲಿ ಬದುಕಿನ ಪಾಠವನ್ನು ಹೇಳಿಕೊಟ್ಟಿದ್ದಾರೆ. ಜೇನುಗಳಿಂದ ನಾವು ಕಲಿಯಬೇಕಾದುದು ಬಹಳಷ್ಟಿದೆ ಎಂದು ಬಸವಣ್ಣನವರು ಈ ವಚನದಲ್ಲಿ ಸೂಚಿಸಿದ್ದಾರೆ. ಸಮೂಹ ಜೀವನ, ಕಾಯಕಜೀವಿಗಳಾಗಿರುವುದು, ಕಾಯಕದ ಘನತೆ, ಸಾಮೂಹಿಕ ಸಂಗ್ರಹ, ಹಂಚಿಕೊಂಡು ತಿನ್ನುವ ದಾಸೋಹ, ಸಹಕಾರ, ಶ್ರಮ ವಿಭಜನೆ, ಸಾಮೂಹಿಕ ಹೊಣೆಗಾರಿಕೆ, ಯೋಗ್ಯ ನಾಯಕತ್ವಕ್ಕೆ ಮನ್ನಣೆ, ಸ್ವಚ್ಛತೆ, ರಕ್ಷಣೆ, ತ್ಯಾಗ ಪ್ರತ್ಯುಪಕಾರ, ಮತ್ತು ಕುಟುಂಬಯೋಜನೆ ಮುಂತಾದವು ಜೇನುಹುಳುಗಳ ಜೀವನಕ್ರಮದಲ್ಲಿ ಸೇರಿಕೊಂಡಿವೆ. ಜೇನುಹುಳುಗಳಿಂದ ಮಾನವ ಪಾಠ ಕಲಿತು ಸಾಮಾಜಿಕ ನ್ಯಾಯ, ಮಾನವಹಕ್ಕುಗಳು, ಎಲ್ಲ ಕಾಯಕಗಳನ್ನು ಸಮನಾಗಿ ಕಾಣುವ ಹೃದಯವೈಶಾಲ್ಯ, ಪರಿಸರ ರಕ್ಷಣೆ, ಏಕತೆ, ಸಾಮಾಜಿಕ ನಿಧಿ, ಪ್ರಜಾಸತ್ತಾತ್ಮಕವಾಗಿ ಕಾರ್ಯನಿರ್ವಹಣೆ, ಗಣಾಚಾರ, ಸಾಮಾಜಿಕ ಮತ್ತು ಆರ್ಥಿಕ ಭದ್ರತೆ, ಆ ಮೂಲಕ ಹೊಸ ದೇವರು ಮತ್ತು ತತ್ತ್ವದ ಮೂಲಕ ಪರ್ಯಾಯ ಸಮಾಜ ನಿರ್ಮಾಣ, ಕಾಯಕ ಮತ್ತು ದಾಸೋಹದ ಮೂಲಕ ಮಾನವಸಂಪನ್ಮೂಲದ ಸಾಮಾಜೀಕರಣ, ಸಕಲ ಜೀವಾತ್ಮರಿಗೆ ಲೇಸಾಗುವ ರೀತಿಯಲ್ಲಿ ನೈಸರ್ಗಿಕ ಸಂಪನ್ಮೂಲಗಳ ಬಳಕೆ ಮುಂತಾದವುಗಳಲ್ಲಿ ಮಾನವ ಪರಿಣತಿ ಪಡೆಯುವುದಕ್ಕಾಗಿ ಜೇನುಹುಳುವಿನ ಜೀವನಕ್ರಮವನ್ನು ಅರಿತುಕೊಳ್ಳುವುದು ಅವಶ್ಯವಾಗಿದೆ ಎಂದು ಬಸವಣ್ಣನವರು ಈ ವಚನದಲ್ಲಿ ಸೂಚಿಸಿದ್ದಾರೆ.

ಜೇನುಹುಳುಗಳು ಪರಾಗವನ್ನು ಸೇವಿಸುತ್ತವೆ ಆದರೆ ಬಾಳತ್ವಕ್ಕಾಗಿ ಅಂದರೆ ಸಾಮೂಹಿಕ ಬದುಕಿಕಾಗಿ ಮಧುಸಂಗ್ರಹ ಮಾಡುತ್ತವೆ. ದುರ್ದಿನಗಳಲ್ಲಿ ಹಂಚಿಕೊಂಡು ತಿನ್ನುತ್ತವೆ. ಎಲ್ಲ ಜೇನುಹುಳುಗಳು ರಾಣಿಜೇನಿಗೆ ನಿಷ್ಠೆಯನ್ನು ತೋರಿಸುತ್ತವೆ. ಅವು ತಮ್ಮದೇ ಆದ ಆಹಾರ ಸಂಗ್ರಹ ವ್ಯವಸ್ಥೆ ಮತ್ತು ರಕ್ಷಣಾ ವ್ಯವಸ್ಥೆಯನ್ನು ಹೊಂದಿವೆ. ಆ ಮೂಲಕ ತಮ್ಮ ಸಾಮೂಹಿಕ ಬದುಕಿಗೆ ನಿಷ್ಠವಾಗಿರುತ್ತವೆ. ಇಡೀ ಜೇನುಗೂಡು ಜಂಗಮಲಿಂಗ (ಸಮೂಹವೆಂಬ ದೇವರು) ವಾದರೆ, ಒಳಗಿರುವ ರಾಣಿಜೇನು ಇಷ್ಟಲಿಂಗದ ಹಾಗೆ. ಎಲ್ಲ ಜೇನುಹುಳುಗಳು ವಿವಿಧ ಕಾರ್ಯದಲ್ಲಿ ತೊಡಗುವ ಕಾಯಕಜೀವಿಗಳು. "ಶರಣಸತಿ ಲಿಂಗಪತಿ" ಎಂಬಂತೆ ಇವುಗಳ ಬದುಕು. ಇಲ್ಲಿ ರಾಣಿಜೇನೇ ‘ಲಿಂಗಪತಿ’ ಜೇನುಹುಳುಗಳೆಲ್ಲ ‘ಶರಣಸತಿಯರು’. ಜೇನುಗೂಡೆಂಬ ಮಹಾಮನೆಯೊಳಗೆ ರಾಣಿಜೇನು ಎಂಬ ಮನೆಯೊಡತಿ ಇರುವುದರಿಂದ ಎಲ್ಲವೂ ಸುಗಮವಾಗಿ ಸಾಗಿದೆ. ರಾಣಿಜೇನನ್ನು ಕಳೆದುಕೊಂಡು ಜೇನುಹುಳುಗಳು ಒಟ್ಟಾರೆ ಬದುಕಲಿಕ್ಕಾಗದು. ಮಹೋನ್ನತ ತತ್ತ್ವವಿಲ್ಲದೆ ಒಂದಾಗಿ ಬದುಕಲಿಕ್ಕಾಗದು. ರಾಣಿಜೇನು ಹೋದಕಡೆ ಜೇನುಹುಳುಗಳೆಲ್ಲ ಹೋಗುವವು. ಶರಣರು ತತ್ತ್ವವಿದ್ದಲ್ಲಿ ಮಾತ್ರ ಇರುವರು. ಆ ತತ್ತ್ವವೇ ಕೂಡಲಸಂಗಮದೇವ. ಶರಣರೆಂಬ ಜೇನುಹುಳುಗಳಿಗೆ ಕೂಡಲಸಂಗಮದೇವ ರಾಣೆಜೇನು ಇದ್ದಂತೆ.

ಜೇನುಹುಳುಗಳು ದೂರದೂರದ ವರೆಗೆ ಸಾಗಿ ವಿವಿಧ ಹೂಗಳ ಮಕರಂದವನ್ನು ಹೀರುತ್ತ ಅದನ್ನೆಲ್ಲ ಮಧುವಾಗಿಸಿ ಜೇನುಗೂಡಿನಲ್ಲಿ ಸಂಗ್ರಹಿಸುವವು. ಅವು ಹೂಗಳಿಂದ ಹೂಗಳಿಗೆ ಹಾರುವಾಗ ಪರಾಗಸ್ಪರ್ಶವಾಗಿ ಸಸ್ಯಲೋಕದಲ್ಲಿ ಉತ್ಪತ್ತಿ ಕ್ರಿಯೆ ನಡೆಯುವುದು. ಹೀಗೆ ಹೂಗಳು ಜೇನುಹುಳುಗಳಿಗೆ ಮಕರಂದ ಕೊಡುವ ಮೂಲಕ ದಾಸೋಹ ಮಾಡುವವು. ಜೇನುಗಳು ಪರಾಗಸ್ಪರ್ಶ ಮಾಡುವುದರ ಮೂಲಕ ಹೂಗಳ ಕಾಯಕ ಮಾಡುವವು. ಎಲ್ಲ ಜೇನುಹುಳುಗಳು ಜೇನುಗೂಡಿನಲ್ಲಿ ಜೇನುಸಂಗ್ರಹ ಮಾಡುವುದರ ಮೂಲಕ ‘ಸಾಮಾಜಿಕ ನಿಧಿ’ಯನ್ನು ಸೃಷ್ಟಿಸುವವು. ಶರಣರು ಹೀಗೆ ಸಾಮಾಜಿಕ ನಿಧಿಯನ್ನು ಸಂಗ್ರಹಿಸುವುದಕ್ಕೆ ಬಸವಣ್ಣನವರು ಶಿವನಸೊಮ್ಮು (ಶಿವನಿಧಿ) ಎಂದು ಕರೆದಿದ್ದಾರೆ. ಜೇನುಹುಳುಗಳು ರಾಣಿಜೇನನ್ನು ಮತ್ತು ಜೇನುಗೂಡನ್ನು ರಕ್ಷಿಸುತ್ತವೆ. ಆಗಂತುಕರ ವಿರುದ್ಧ ರಕ್ಷಣಾತ್ಮಕ ಹೋರಾಟ ಮಾಡುತ್ತವೆ. ಹಾಗೆ ಮಾಡುವುದರ ಮೂಲಕ ಜೀವತ್ಯಾಗ ಮಾಡುತ್ತವೆ. ಕಲ್ಯಾಣದಲ್ಲಿ ಶರಣರ ಹತ್ಯಾಕಾಂಡ ನಡೆದ ಸಂದರ್ಭದಲ್ಲಿ ಶರಣರು ಹೋರಾಟಕ್ಕೆ ಇಳಿಯುವ ಪರಿಸ್ಥಿತಿ ಉಂಟಾಯಿತು. ಇದೇ ಗಣಾಚಾರ.

ಸಕಲಜೀವಾತ್ಮರಿಗೆ ಲೇಸನೆ ಬಯಸುವ ಶರಣರು ಶಸ್ತ್ರಗಳನ್ನೇಕೆ ಹಿಡಿದರು ಎಂಬ ಪ್ರಶ್ನೆ ಅನೇಕರಿಗೆ ಕಾಡುವುದು ಸಹಜ. ಶರಣ ತತ್ತ್ವ ಹಿಂಸಾತತ್ತ್ವಕ್ಕೆ ವಿರುದ್ಧವಾಗಿದೆ. ಆದರೆ ಅವರು ಶಸ್ತ್ರವನ್ನು ಹಿಡಿಯುವ ಅನಿವಾರ್ಯತೆ ಉಂಟಾಯಿತೇಕೆ ಎಂಬುದನ್ನು ಅರಿತುಕೊಳ್ಳಬೇಕಿದೆ.

ಸರ್ವವೆಲ್ಲವೂ ಚಿದಾತ್ಮ ಭಾವವೊಳಗೊಂಡು ಸರ್ವಸಮತ್ವದಿಂದ ಇರುವುದೇ ಭಕ್ತಿ. ವರ್ಗ, ವರ್ಣ, ಜಾತಿ ಮತ್ತು ಲಿಂಗಭೇದವಿಲ್ಲದ ಸರ್ವಸಮತ್ವದ ಕಲ್ಯಾಣವನ್ನು ಬಸವಣ್ಣನವರು ತಮ್ಮ ಜೀವಿತಾವಧಿಯಲ್ಲೇ ಸಾಧಿಸಿತೋರಿಸಿದರು. ಆದರೆ ಬಿಜ್ಜಳನ ಶಸ್ತ್ರಪ್ರಭುತ್ವ ಮತ್ತು ಸರ್ವಸಮತ್ವವನ್ನು ಒಪ್ಪದ ಶಾಸ್ತ್ರಪ್ರಭುತ್ವ ಸೇರಿ ಬಸವಣ್ಣನವರ ಕಲ್ಯಾಣವನ್ನು ಹಾಳುಮಾಡಿದವು. ‘ಕೆಟ್ಟಿತ್ತು ಕಲ್ಯಾಣ, ಹಾಳಾಯಿತ್ತು ನೋಡಾ’ ಎಂದು ಬಸವಣ್ಣನವರು ವಿಷಾದ ವ್ಯಕ್ತಪಡಿಸಿದ್ದಾರೆ.

ಕೆಳಜಾತಿಯಿಂದ ಬಂದ ಮಹಾಜ್ಞಾನಿ ಅಲ್ಲಮಪ್ರಭುಗಳನ್ನು ಬಸವಣ್ಣನವರು ಶೂನ್ಯಸಿಂಹಾಸನಾಧೀಶ್ವರರನ್ನಾಗಿಸಿ ಸರ್ವಸಮಾನತೆಯ ನಾಂದಿಹಾಡಿದರು. ಶೂನ್ಯಸಿಂಹಾಸನದ ಮುಂದೆ ರಾಜ ಸಿಂಹಾಸನ ಮತ್ತು ಮನುಧರ್ಮ ಸಿಂಹಾಸನಗಳು ಕಳೆಗುಂದತೊಡಗಿದವು. ಸಮಗಾರ ಹರಳಯ್ಯನವರ ಮಗನ ಮತ್ತು ಮಧುವರಸರ ಮಗಳ ಮದುವೆ ಒಂದು ನೆಪವಾಯಿತು. ಶರಣರ ಮತ್ತು ಅವರನ್ನು ನಂಬಿದ ಜನಸಮುದಾಯದ ಹತ್ಯಾಕಾಂಡ ಆರಂಭವಾಯಿತು. ವಚನಸಂಪತ್ತು ಬೆಂಕಿಗೆ ಆಹುತಿಯಾಗತೊಡಗಿತು. ಇಂಥ ಸಂದರ್ಭದಲ್ಲಿ ಶರಣರು ಶಸ್ತ್ರಗಳನ್ನು ಕೈಗೆತ್ತಿಕೊಳ್ಳುವಂಥ ಪರಿಸ್ಥಿತಿಯನ್ನು ಪ್ರಭುತ್ವ ನಿರ್ಮಾಣ ಮಾಡಿತು. ‘ಬಸವಗೂ ಎನಗೂ ಭಾವಭೇದವಿಲ್ಲ’ ಎಂದು ಹೇಳುವ ಬಸವಣ್ಣನವರ ಸಹೋದರಿ ಅಕ್ಕ ನಾಗಮ್ಮ ಕೂಡ ವಚನ ರಕ್ಷಣೆಗಾಗಿ ಶಸ್ತ್ರಧಾರಿಯಾಗಿ ಹೋರಾಡಿದರು. ಈ ಸಂದರ್ಭದಲ್ಲಿ ಕಲ್ಯಾಣದಲ್ಲಿ ನಡೆದ ಶರಣರ ಹತ್ಯಾಕಾಂಡವನ್ನು ‘ಕಲ್ಯಾಣ ಕ್ರಾಂತಿ’ ಎಂದು ರಂಜಕವಾಗಿ ಹೇಳುತ್ತೇವೆ. ಪ್ರಭುತ್ವದ ಹತ್ಯಾಕಾಂಡ ಬಸವಕ್ರಾಂತಿ ಆಗುವುದಿಲ್ಲ. ಬಸವಕ್ರಾಂತಿಯು ಭೂಮಿಯ ಮೇಲೆ ಸರ್ವಸಮತ್ವವನ್ನು ಸಾಧಿಸುವುದಾಗಿದೆ. ಯಥಾಸ್ಥಿತಿವಾದಿಗಳು ಆ ಸಾಧನೆಯ ದಾರಿಗೆ ಅಡ್ಡಬಂದಾಗ ಅಮಾಯಕರ ಮತ್ತು ವಚನಗಳ ರಕ್ಷಣೆಗಾಗಿ ಶರಣರು ಶಸ್ತ್ರಗಳನ್ನು ಹಿಡಿಯುವುದು ಅನಿವಾರ್ಯವಾಯಿತು. ವ್ಯಾಘ್ರ ಬಂದಾಗ ಗೋಮಾತೆ ಕೊಂಬು ಮುಂದೆ ಮಾಡುವ ಹಾಗೆ ಶರಣರು ಕ್ರೂರ ವ್ಯವಸ್ಥೆಯ ವಿರುದ್ಧ ಶಸ್ತ್ರಗಳನ್ನು ಮುಂದೆಮಾಡಿದರು. ಈ ಜಗತ್ತಿನಲ್ಲಿ ವ್ಯಾಘ್ರನಿಗೆ ನಖಗಳಿರುವವರೆಗೂ ಗೋಮಾತೆಯರಿಗೆ ಕೊಂಬುಗಳಿರುತ್ತವೆ. ಪ್ರಭುತ್ವ ದಬ್ಬಾಳಿಕೆ ಸಡೆಸುವವರೆಗೂ ಹೋರಾಟಗಳು ಇದ್ದೇ ಇರುತ್ತವೆ. ಪ್ರಭುತ್ವ ಹೂಗಳನ್ನು ಹೊಸಕಿ ಹಾಕಬಲ್ಲುದು; ಆದರೆ ಅದಕ್ಕೆ ವಸಂತ ಋತುವನ್ನು ತಡೆಯುವ ಶಕ್ತಿ ಇಲ್ಲ.

ರಾಣಿಜೇನಿನಿಂದ ಮಾತ್ರ ಸಂತಾನ ಅಭಿವೃದ್ಧಿಯಾಗುತ್ತದೆ. ಕೆಲವೇ ಗಂಡು ಜೇನುಗಳನ್ನುಳಿದು ಉಳಿದೆಲ್ಲವು ಹೆಣ್ಣು ಜೇನುಗಳು. ಜೇನುಗಳೆಲ್ಲ ಕಾಯಕಜೀವಿಗಳಾಗಿವೆ. ಅವು ‘ನಮಗೆಲ್ಲ ಸಮಪಾಲು’ ಎಂಬ ತತ್ತ್ವದ ಆಧಾರದ ಮೇಲೆಯೆ ಜೇನುಗೂಡಿನಲ್ಲಿ ಮಧುವನ್ನು ಶೇಖರಿಸುತ್ತವೆ. ಪರಮೇಶ್ವರನು ‘ನಮ್ಮ ಕೂಡಲಸಂಗನ ಶರಣರ ಮನದ ಕೊನೆಯ ಮೊನೆಯ ಮೇಲಡಗಿದನು’ ಎಂದು ಬಸವಣ್ಣನವರು ಹೇಳುವಂತೆ ಜೇನುಗೂಡಿನಲ್ಲಿ ರಾಣಿಜೇನು ಇರುತ್ತದೆ. ರಾಣಿಜೇನು ಇಡೀ ಜೇನುಗೂಡಿನ ವ್ಯವಸ್ಥೆಯ ಕೇಂದ್ರಬಿಂದು. ಕಾಯಕಜೀವಿಗಳಾದ ಸಹಸ್ರಾರು ಜೇನುಗಳೇ ಎಲ್ಲವನ್ನೂ ನಿಭಾಯಿಸುತ್ತವೆ. ಆದ್ದರಿಂದ ಅಲ್ಲಿ ಪ್ರಜಾಪ್ರಭುತ್ವದ ಝೇಂಕಾರವಿರುತ್ತದೆ. ಈ ಕಾಯಕಜೀವಿ ಜೇನುಗಳ ಆಯುಷ್ಯ ಕೇವಲ ಆರೆಂಟು ವಾರಗಳಷ್ಟಿರುತ್ತದೆ. ಆದರೆ ರಾಣಿಜೇನಿನ ಆಯುಷ್ಯ ಹತ್ತುಪಟ್ಟು ಜಾಸ್ತಿ ಇರುತ್ತದೆ. ಮಾನವರ ಬದುಕಿಗೆ ಕೂಡ ಒಂದು ಮಿತಿ ಇದೆ. ಅಷ್ಟೊರಳಗೆ ಅವರು ತಮ್ಮ ಪಾಲಿನ ಕರ್ತವ್ಯವನ್ನು ಮಾಡುತ್ತ ಇಹಲೋಕದ ಯಾತ್ರೆಯನ್ನು ಮುಗಿಸಬೇಕಾಗುತ್ತದೆ. ಅಷ್ಟರೊಳಗೆ ಕಾಯಕ ಮತ್ತು ದಾಸೋಹದ ಮೂಲಕ ತಮ್ಮ ಮಾನಸಿಕ, ದೈಹಿಕ ಮತ್ತು ಸಾಮಾಜಿಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕಾಗುತ್ತದೆ. ತಮ್ಮ ಮನದ ಕೊನೆಯ ಮೊನೆಯಲ್ಲಿ ದೇವರು ಅಡಗಿದ್ದಾನೆ ಎಂಬುದನ್ನು ಅನುಭಾವಿಸಬೇಕಾಗುತ್ತದೆ. ಜೇನುಗಳ ಧ್ಯಾನ ರಾಣಿಜೇನಿನ ಕಡೆಗೆ ಇರುವಂತೆ ನಮ್ಮ ಧ್ಯಾನ ನಮ್ಮೊಳಗಿನ ದೇವರ ಕಡೆ ಇರಬೇಕಾಗುತ್ತದೆ. ಜೇನುಗಳು ತಾವು ಬದುಕುತ್ತ ಒಕ್ಕಮಿಕ್ಕದ್ದನ್ನು ಜೇನುತುಪ್ಪವಾಗಿಸಿ ಸಂಗ್ರಹಿಸುತ್ತ ’ಸಾಮಾಜಿಕ ನಿಧಿ’ಯ ಹಾಗೆ ರಕ್ಷಿಸುತ್ತವೆ. ‘ತನ್ನೆಂಜಲ ಜಗವುಂಬುದು ನೋಡಯ್ಯಾ’ ಎಂದು ಬಸವಣ್ಣನವರು ಹೇಳುವಲ್ಲಿ, ’ಎಂಜಲು’ ಶಬ್ದವನ್ನು ಗುಣಾತ್ಮಕವಾಗಿ ಬಳಸಿದ್ದಾರೆ. ಹುಟ್ಟಿನಲ್ಲಿ ಜನನ ಸೂತಕ, ಸಾವಿನಲ್ಲಿ ಪ್ರೇತಸೂತಕ, ರಜಸ್ಸಿನಲ್ಲಿ ರಜಸ್ಸೂತಕ, ಎಂಜಲಿನಲ್ಲಿ ಉಚ್ಛಿಷ್ಠಸೂತಕ ಮತ್ತು ಕುಲದಲ್ಲಿ ಜಾತಿಸೂತಕ ಎಂಬ ಐದುಬಗೆಯ ಮೈಲಿಗೆಗಳಿವೆ ಎಂದು ವೈದಿಕರು ಭಾವಿಸಿದ್ದಾರೆ. ಬಸವಣ್ಣನವರು ಈ ಪಂಚಸೂತಕಗಳನ್ನು ತಿರಸ್ಕರಿಸಿದ್ದಾರೆ. ಕಾಯಕಜೀವಿಗಳಲ್ಲಿ ಸಮಾಜದಿಂದ ಬೊಟ್ಟು ಮಾಡಿಸಿಕೊಳ್ಳದೆ ಬದುಕುವುದು ಬಾಳುವೆಯಾದರೆ, ಬಾಯಿಂದ ತೆಗೆದುಕೊಡುವುದು ಆಳವಾದ ಪ್ರೀತಿಯ ದ್ಯೋತಕವಾಗಿದೆ. ಹೀಗೆ ಬಸವಣ್ಣನವರ ಪರಿಕಲ್ಪನೆಯಲ್ಲಿ ‘ಎಂಜಲು’ ಉನ್ನತ ಸ್ಥಾನವನ್ನು ಪಡೆಯುತ್ತದೆ.

‘ಶಿವಭಕ್ತನಾಗಿ ಶಿವಾನ್ನವನೇ ಕೊಂಡು, ಒಕ್ಕಮಿಕ್ಕ ವಸ್ತುವ ಜಂಗಮಕ್ಕಿಕ್ಕುವಾತನೆ ಭಕ್ತ’ ಎಂದು ಬಸವಣ್ಣನವರು ಭಕ್ತನ ಗುಣಲಕ್ಷಣಗಳನ್ನು ತಿಳಿಸುತ್ತಾರೆ. ನಾವು ದುಡಿದು ಗಳಿಸಿದ್ದನ್ನು ಶಿವನ ಪ್ರಸಾದವೆಂದು ಸದ್ಬಳಕೆ ಮಾಡಬೇಕು. ಉಳಿದದ್ದನ್ನು ಸಾಮಾಜಿಕ ನೆಮ್ಮದಿಯನ್ನು ಉಳಿಸಿ ಬೆಳೆಸುವ ಕಾರ್ಯಗಳಿಗೆ ಉಪಯೋಗಿಸುವುದಕ್ಕಾಗಿ ಇರುವ ಶಿವನಿಧಿಯನ್ನು ಹೆಚ್ಚಿಸಲು ಕೊಡಬೇಕು. ಹಾಗೆ ಕೊಡುವವನು ಭಕ್ತನಾದರೆ ಅದನ್ನು ತೆಗೆದುಕೊಳ್ಳುವವನು ಜಂಗಮನಾಗುತ್ತಾನೆ. ಭಕ್ತನಿಗೆ ಸಾಮಾಜಿಕ ಪ್ರಜ್ಞೆ ಇರುವಂತೆ ತೆಗೆದುಕೊಳ್ಳುವವನಿಗೂ ಸಾಮಾಜಿಕ ಪ್ರಜ್ಞೆ ಇರಬೇಕಾಗುತ್ತದೆ. ಜಂಗಮನಾಗುವುದೆಂದರೆ ವೈಯಕ್ತಿಕ ಬದುಕನ್ನು ಮೀರಿ ಸಾಮಾಜಿಕವಾಗಿ ಬದುಕುವುದು. ಇಡೀ ಸಮಾಜವೇ ತಾನೆಂಬ ರೀತಿಯಲ್ಲಿ ಸಂವೇದನಾಶೀಲನಾಗಿರುವುದು. ಇಂಥ ಒಂದು ಸುಂದರ ಸಮಾಜದ ಕನಸನ್ನು ಬಸವಣ್ಣನವರು ಕಂಡಿದ್ದರು. ಅದನ್ನು ಈ ಭೂಮಿಯ ಮೇಲೆ ಸಾಕಾರಗೊಳಿಸುವ ಯೋಜನೆ ರೂಪಿಸಿದರು. ಆದರೆ ಇದು ಕಾರ್ಯಗತವಾಗುವ ಹಾಗೆ ದೇವರು ಕರುಣಿಸಬೇಕೆಂಬುದು ಅವರ ಬಯಕೆಯಾಗಿತ್ತು. ಅಂತೆಯೆ ‘ನಡುವೆ ನೀ ಬಂದು ಭಂಡು (ಅಪಮಾನ) ಮಾಡದಿರೈ ಕೂಡಲಸಂಗಮದೇವಾ.’ ಎಂದು ಪ್ರಾರ್ಥಿಸುತ್ತಾರೆ. ಇಂಥ ಒಂದು ವಿನೂತನವಾದ ಬೃಹತ್ ಕಾರ್ಯದಲ್ಲಿ ತಾವು ಅಪಮಾನಕ್ಕೆ ಒಳಗಾಗಬಾರದು ಎಂಬ ಎಚ್ಚರಿಕೆ ಅವರಿಗಿದೆ. ಹೀಗೆ ಈ ವಚನ ಬಸವಣ್ಣನವರ ದರ್ಶನವನ್ನು ಬಿಂಬಿಸುವ ಸಾಮರ್ಥ್ಯವನ್ನು ಹೊಂದಿದೆ.

"ಪ್ರತಿಯೊಂದು ನಿಜವಾದ ತತ್ತ್ವಜ್ಞಾನ ತನ್ನ ಕಾಲದ ಬೌದ್ಧಿಕವಾದ ಶುದ್ಧಸತ್ವವಾಗಿರುತ್ತದೆ" ಎಂದು ಕಾರ್ಲ್ ಮಾರ್ಕ್ಸ್ ಹೇಳಿದ್ದಾರೆ. ಬಸವಣ್ಣನವರು ತಮ್ಮ ಕಾಲದಲ್ಲಿ ನಡೆಯುತ್ತಿದ್ದ ಕಾಯಕಜೀವಿಗಳ ಶೋಷಣೆಯನ್ನು ಕಣ್ಣಾರೆ ಕಂಡರು. ಅವರೆಲ್ಲ ಜಾತಿ ಉಪಜಾತಿಗಳಲ್ಲಿ ಹರಿದುಹಂಚಿ ಹೋಗಿದ್ದರು. ಬಲಿ, ನರಬಲಿಗಳಿಂದ ಮತ್ತು ಸ್ವಯಂ ಹಿಂಸೆಯಿಂದ ಕೂಡಿದ್ದ ಭಕ್ತಿ ಅಸಹನೀಯವಾಗಿತ್ತು. ಎಲ್ಲ ರೀತಿಯಿಂದಲೂ ಶೋಷಣೆಗೊಳಗಾಗಿದ್ದ ಕಾಯಕಜೀವಿಗಳು ಇಂಥ ಹಿಂಸಾಚರಣೆಯಿಂದ ಇನ್ನೂ ಹೆಚ್ಚಿನ ಕಷ್ಟಕರವಾದ ಜೀವನ ಸಾಗಿಸುತ್ತಿದ್ದರು. ಬಸವಣ್ಣನವರು ನಿರಾಕಾರನಾದ ಏಕದೇವನನ್ನು ಪರಿಚಯಿಸಿ ಅವನನ್ನು ಸರಳವಾಗಿ ಆರಾಧಿಸುವ ಕ್ರಮವನ್ನು ತೋರಿಸಿಕೊಟ್ಟರು. ಆ ಮೂಲಕ ಬಡವರ ಶೋಷಣೆಯನ್ನು ತಪ್ಪಿಸುವುದಲ್ಲದೆ ಅವರೆಲ್ಲರು ಜಾತಿ ಮತ ಪಂಥಗಳನ್ನು ದಾಟಿ ಜೇನುನೊಣಗಳಂತೆ ಒಂದಾಗುವ ಕಲೆಯನ್ನು ಕಲಿಸಿದರು. ಜನಸಾಮಾನ್ಯರನ್ನು, ಮಾನ್ಯರನ್ನಾಗಿಸಿದರು, ಸ್ವತಂತ್ರಧೀರರನ್ನಾಗಿಸಿದರು ಜೊತೆಗೆ ‘ಸಮೂಹ’ವಾಗಿಸಿದರು. ಆ ಮೂಲಕ ಮನುಕುಲವೆಲ್ಲ ಒಂದು ಎಂದು ಸಾರಿದರು.

"ಚಿಂತನೆ ಮತ್ತು ಇರುವಿಕೆಯ ಸಂಬಂಧದ ಬಗ್ಗೆ ಕಾಳಜಿ ವಹಿಸುವುದು ತತ್ತ್ವಜ್ಞಾನದ ಪ್ರಮುಖವಾದ ಮೂಲ ಕರ್ತವ್ಯವಾಗಿದೆ" ಎಂದು ಫ್ರೆಡ್ರಿಕ್ ಏಂಗೆಲ್ಸ್ ತಿಳಿಸಿದ್ದಾರೆ. ಬಸವಣ್ಣನವರ ಚಿಂತನೆಗಳು ಆ ಕಾಲದ ಇರುವಿಕೆಯ ಆಧಾರದ ಮೇಲೆ ರೂಪುಗೊಂಡಿವೆ. ಹೀಗಾಗಿ ಅವರ ಚಿಂತನೆಗಳಿಗೆ ಕಟ್ಟಕಡೆಯ ಮನುಷ್ಯನೂ ಸ್ಪಂದಿಸುತ್ತಾನೆ.

"ವಸ್ತುವಿಲ್ಲದೆ ಚಲನಶೀಲತೆಯನ್ನು ಹೇಗೆ ಊಹಿಸಲು ಸಾಧ್ಯವಿಲ್ಲವೊ ಹಾಗೆಯ ಚಲನಶೀಲತೆ ಇಲ್ಲದ ವಸ್ತುವನ್ನು ಊಹಿಸಲು ಸಾಧ್ಯವಿಲ್ಲ. ವಸ್ತುವಿನಂತೆ ಚಲನಶೀಲತೆಯನ್ನು ಕೂಡ ಸೃಷ್ಟಿಸಲಿಕ್ಕಾಗದು ಮತ್ತು ಧ್ವಂಸ ಮಾಡಲಿಕ್ಕಾಗದು." ಎಂದು ಫೆಡ್ರಿಕ್ ಏಂಗೆಲ್ಸ್ ಹೇಳುತ್ತಾರೆ. ಈ ಚಲನಶೀಲತೆಯನ್ನು ಶರಣರು ವಸ್ತುಚೇತನ ಎಂದು ಕರೆದಿದ್ದಾರೆ. ಅದುವೆ ಅರಿವಿನ ಕುರುಹಾದ ಇಷ್ಟಲಿಂಗದ ಮೂಲ ರೂಪ. ವಸ್ತುಸ್ವರೂಪದಲ್ಲಿರುವ ವಿಶ್ವವೇ ಜಂಗಮಲಿಂಗ. ಇಷ್ಟಲಿಂಗ ಮತ್ತು ಜಂಗಮಲಿಂಗ ಅಭೇದ್ಯವಾಗಿವೆ. ವಿಶ್ವವು ರೂಪಾಂತರಗೊಂಡು ಬಯಲಾದರೂ ನಾಶವಾಗುವುದಿಲ್ಲ. ಹಾಗೆಯೆ ಅದರೊಳಗಿನ ವಸ್ತುಚೈತನ್ಯವೂ ನಾಶವಾಗುವುದಿಲ್ಲ ಎಂಬುದನ್ನು ಬಸವಣ್ಣನವರು ಸೂಚಿಸಿದ್ದಾರೆ.

ಈ ವಚನದಲ್ಲಿ ರಾಣಿಜೇನು ಚೈತನ್ಯದ ಪ್ರತೀಕವಾದರೆ ಇತರೆ ಜೇನುಹುಳುಗಳೆಲ್ಲ ವಸ್ತುರೂಪದಲ್ಲಿವೆ. ರಾಣೆಜೇನನ್ನು ಮತ್ತು ಜೇನುಹುಳುಗಳನ್ನು ಪ್ರತ್ಯೇಕಿಸಿ ಜೇನುತುಪ್ಪ ಪಡೆಯಲು ಸಾಧ್ಯವಿಲ್ಲ. ಹೀಗೆ ಚೈತನ್ಯ ಮತ್ತು ವಸ್ತುವಿನ ಸಂಬಂಧವಿದೆ. ಬಸವಣ್ಣನವರ ಅಂತಃಸಾಕ್ಷಿ ಸ್ವರೂಪದ ದೇವರು ಮತ್ತು ಜನಸಮುದಾಯವನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಜಗತ್ತಿನ ಜನಸಮುದಾಯವೆಲ್ಲ ಜಾತಿ, ಮತ, ಪಂಥ, ಕುಲ, ಧರ್ಮ, ಲಿಂಗ, ವರ್ಣ ಮತ್ತು ವರ್ಗಭೇದಗಳಿಲ್ಲದೆ ಒಂದಾದಾಗ ಮಾತ್ರ ಬಸವದರ್ಶನದ ಅರಿವಾಗುತ್ತದೆ.