You are hereಮೂರು ಮೆಟ್ಟಲ ಕತೆ
ಮೂರು ಮೆಟ್ಟಲ ಕತೆ
ಲೇಖಕರು: ಬಿ.ವಿ. ವೀರಭದ್ರಪ್ಪ
ಹಕ್ಕುಗಳು: ಲೇಖಕರವು
-ನೀನಾರು?- ದೆವ್ವ ಅವನನ್ನು ಕೇಳಿತು....
-ಹುಟ್ಟಿನಿಂದ ನಾನೊಬ್ಬ ದಲಿತ. ಎಲ್ಲ ಬಡವರು ನನ್ನ ಒಡ ಹುಟ್ಟಿದವರು. ಓ ಈ ಭೂಮಿ ಎಷ್ಟು ಕುರೂಪವಾಗಿದೆ; ಜನರೆಷ್ಟು ದುಃಖಿಗಳಾಗಿದ್ದಾರೆ!
ನೇರ ಹಣೆಯ ಮತ್ತು ಬಿಗಿಮುಷ್ಟಿಯ ಯುವಕ ಈ ಮಾತು ಗಳನ್ನಾಡುತ್ತಿದ್ದ. ಅವನು ನೀಲಿ ಗೆರೆಗಳಿಂದ ಕೂಡಿದ ಬಿಳಿ ಅಮೃತಶಿಲೆಯ ಎತ್ತರವಾದ ಮೆಟ್ಟಿಲುಗಳ ಹಿಂದೆ ನಿಂತಿದ್ದ. ಉಬ್ಬಿದ ನದಿಯ ಕದಡಿದ ನೀರಿನ ಅಲೆಗಳಂತೆ ಭೋರ್ಗರೆಯುತ್ತಿದ್ದ ದೂರದ ದುಃಖಿಗಳ ಸಮೂಹದತ್ತ ಅವನ ದೃಷ್ಟಿ ಕೀಲಿಸಿತ್ತು. ಅವರು ಕದಲಿದರು, ಒಂದು ಗಳಿಗೆ ಅವೇಶಗೊಂಡರು. ಅವರ ಕಪ್ಪು ಒರಟು ಕೈಗಳು ಕಾಡಿನಂತೆ ಎದ್ದು ನಿಂತವು. ಕೋಪದಿಂದ ಕೆರಳಿದ ಅವರ ಕೂಗಿನ ಘರ್ಜನೆ ಗಾಳಿಯಲ್ಲಿ ತುಂಬಿಕೊಂಡಿತು. ಅದರ ಪ್ರತಿಧ್ವನಿ ದೂರದಲ್ಲಿ ಹಾರಿಸಿದ ಫಿರಂಗಿಯ ಗುಂಡುಗಳಂತೆ ಮೊಳಗಿ ನಿಧಾನವಾಗಿ ವಿಧಿವತ್ತಾಗಿ ಸ್ತಬ್ಧವಾಯಿತು. ಗುಂಪು ಒಂದೇ ಸಮನೆ ಹೆಚ್ಚುತ್ತಾ ಹೋಯಿತು. ಸಮೀಪಿಸುತ್ತಿದ್ದ ಕೆಂದೂಳಿನ ಅಲೆಗಳು ಕ್ರಮೇಣ ಮಾನವರ ಆಕಾರ ತಾಳಿದವು. ಕೆಂದೂಳಿನ ಹಿನ್ನೆಲೆಯಲ್ಲಿ ಆ ರೂಪಗಳು ಹೆಚ್ಚು ಹೆಚ್ಚು ಸ್ಪಷ್ಟವಾಗಿ ಕಾಣತೊಡಗಿದವು.
ಒಬ್ಬ ಮುದುಕ ಕಳೆದ ತನ್ನ ಯೌವನವನ್ನು ಹುಡುಕುತ್ತಿರುವಂತೆ ಭೂಮಿಯತ್ತ ಬಾಗಿ ನಡೆಯುತ್ತಿದ್ದ. ಅವನ ಚೆಂದಿ ಬಟ್ಟೆಯನ್ನು ಹಿಡಿದಿದ್ದ ಒಬ್ಬ ಬರಿಗಾಲಿನ ಹುಡುಗಿ ತನ್ನ ಬಿಡುಗಣ್ಣಿನಿಂದ ಎತ್ತರವಾದ ಮೆಟ್ಟಿಲುಗಳನ್ನು ದಿಟ್ಟಿಸಿ ನೋಡಿದಳು. ಅವಳು ತನ್ನ ದೃಷ್ಟಿ ಹರಿಸಿ ಮುಗುಳು ನಗೆ ಸೂಸಿದಳು. ಇತರ ಅನೇಕ ಹರಕು ಬಟ್ಟೆಯ ಕುರೂಪಿ ಕಪ್ಪುಜನ ಏಕತಾನದ ಶೋಕ ಗೀತೆಯೊಂದನ್ನು ಮೇಳದಲ್ಲಿ ಹಾಡುತ್ತಾ ಅವರನ್ನು ಹಿಂಬಾಲಿಸುತ್ತಿದ್ದರು. ಒಬ್ಬ ಶಿಳ್ಳು ಹಾಕಿದ, ಇನ್ನೊಬ್ಬ ತನ್ನ ಕೈಗಳನ್ನು ಪಕ್ಕದ ಜೇಬುಗಳಲ್ಲಿ ಇಳಿಬಿಟ್ಟು ಗಟ್ಟಿಯಾಗಿ, ಒರಟಾಗಿ ನಗುತ್ತಿದ್ದ. ಅವನ ಕಣ್ಣುಗಳು ಅವೇಶದಿಂದ ಉರಿಯುತ್ತಿದ್ದವು.
-ನಾನೊಬ್ಬ ದಲಿತ, ಎಲ್ಲ ಬಡವರು ನನ್ನ ಒಡಹುಟ್ಟಿದವರು. ಓ, ಈ ಭೂಮಿ ಎಷ್ಟು ಕುರೂಪವಾಗಿದೆ; ಜನರೆಷ್ಟು ದುಃಖಿಗಳಾಗಿದ್ದಾರೆ! ಓ ಅಲ್ಲಿ ಎತ್ತರದಲ್ಲಿರುವ ನೀನು...
ನೇರ ಹಣೆಯ ಮತ್ತು ಬಿಗಿಮುಷ್ಠಿಯ ಯುವಕ ಈ ಮಾತುಗಳನ್ನು ಬೆದರಿಸುವವನಂತೆ ಆಡುತ್ತಿದ್ದ.
-ನೀನು ಆ ಮೇಲಿನವನನ್ನು ದ್ವೇಷಿಸುವೆಯಾ?- ಯುವಕನ ಕಡೆಗೆ ಕಪಟತನದಿಂದ ಬಾಗುತ್ತ ದೆವ್ವ ಕೇಳಿತು.
-ಓ, ನಾನು ಈ ರಾಜರ ಮೇಲಿನ ಸೇಡನ್ನು ತೀರಿಸಿಕೊಳ್ಳಲೇಬೇಕು. ಯಾರ ಮುಖಗಳು ಬೂದಿ ಮಣ್ಣಿನಂತೆ ಕಪ್ಪಿಟ್ಟಿವೆಯೋ, ಯಾರು ರೊಯ್ಯನೆ ಬೀಸುವ ಆಷಾಢದ ಗಾಳಿಗಿಂತ ಹೆಚ್ಚು ಭೀಕರವಾಗಿ ಗೋಳಿಡುತ್ತಿದ್ದಾರೋ, ಆ ನನ್ನ ಒಡಹುಟ್ಟಿದವರಿಗಾಗಿ ಅನ್ಯಾಯದ ವಿರುದ್ಧ ಮುಯ್ಯಿ ತೀರಿಸಿಕೊಳ್ಳುತ್ತೇನೆ. ರಕ್ತ ಒಸರುವ ಅವರ ಬತ್ತಲೆ ದೇಹಗಳನ್ನು ನೋಡು, ಅವರ ಗೋಳಿನ ಆಕ್ರಂದನ ಕೇಳು! ನಾನು ಸೇಡು ತೀರಿಸಿಕೊಳ್ಳುತ್ತೇನೆ! ನನ್ನನ್ನು ಹೋಗಲು ಬಿಡು!"
ದೆವ್ವ ಮುಗುಳು ನಕ್ಕಿತು:- ನಾನು ಮೇಲಿನವರ ಕಾವಲುಗಾರ; ಲಂಚವಿಲ್ಲದೆ ನಾನು ದ್ರೋಹ ಬಗೆಯುವುದಿಲ್ಲ.
-ನನ್ನ ಬಳಿ ಚಿನ್ನ ಇಲ್ಲ. ಲಂಚ ಕೊಡಲು ನನ್ನಲ್ಲಿ ಏನೂ ಇಲ್ಲ. ನಾನೊಬ್ಬ ಬಡ ದೌರ್ಭಾಗ್ಯ ಯುವಕ... ಆದರೆ ನಾನು ನನ್ನ ಪ್ರಾಣ ಕೊಡಲು ಸಿದ್ಧ.
ದೆವ್ವ ಮತ್ತೊಮ್ಮೆ ಮುಗುಳುನಕ್ಕಿತು :- ಓ, ಬೇಡ, ನನಗೆ ಅಷ್ಟೊಂದು ಬೇಕಿಲ್ಲ! ನಿನ್ನ ಕಿವಿಯನ್ನಷ್ಟು ಕೊಟ್ಟರೆ ಸಾಕು!
-ಕಿವಿಯನ್ನು? ಸಂತೋಷದಿಂದ... ನಾನು ಇನ್ನು ಮುಂದೆ ಏನೂ ಕೇಳುವುದೇ ಬೇಡ. ಹಾಗೇ ಆಗಲಿ...
-ಇನ್ನು ಮುಂದೆಯೂ ನೀನು ಕೇಳುವೆ!- ದೆವ್ವ ಅವನನ್ನು ಸಾಂತ್ವನಗೊಳಿಸಿ ದಾರಿ ಬಿಟ್ಟಿತು.
-ನಡೆ!
ಯುವಕ ಓಡಿದ, ಅವನು ಒಂದೊಂದು ಸಾರಿ ಮೂರು ಮೂರು ಮೆಟ್ಟಿಲನ್ನು ಜಿಗಿದ. ಆದರೆ ದೆವ್ವದ ಕರಾಳ ಕೈ ಅವನನ್ನು ಇನ್ನೊಮ್ಮೆ ತಡೆಯಿತು:
-ಸಾಕು! ನಿನ್ನ ಒಡಹುಟ್ಟಿದವರು ಕೆಳಗೆ ಹೇಗೆ ಗೋಳಿಡುತ್ತಿದ್ದಾರೆ ಎಂಬುದನ್ನು ಕೇಳಲು ಸ್ವಲ್ಪ ನಿಲ್ಲು.
ಯುವಕ ನಿಂತು ಆಲಿಸಿದ.
-ವಿಚಿತ್ರ. ಯಾಕೆ ಇದ್ದಕ್ಕಿದ್ದ ಹಾಗೆ ಅವರು ಅಷ್ಟು ಖುಷಿಯಿಂದ ಹಾಡುತ್ತ ಹುಚ್ಚು ನಗೆ ನಗುತ್ತಿದ್ದಾರೆ?- ಮತ್ತೆ ಅವನು ಮೇಲೆ ಓಡಿದ.
ದೆವ್ವ ಅವನನ್ನು ಮತ್ತೊಮ್ಮೆ ನಿಲ್ಲಿಸಿತು.
-ಮೇಲಿನ ಮೂರು ಮೆಟ್ಟಿಲನ್ನು ಹತ್ತಲು ನನಗೆ ನಿನ್ನ ಕಣ್ಣು ಬೇಕು! ಯುವಕ ಕೈಯನ್ನು ತಳ್ಳಲು ಯತ್ನಿಸಿ ಹತಾಶನಾದ.
-ಕಣ್ಣು ಕೊಟ್ಟರೆ ನನ್ನ ಒಡಹುಟ್ಟಿದವರನ್ನಾಗಲಿ, ಸೇಡು ತೀರಿಸಿಕೊಳ್ಳಬೇಕಾಗಿರುವವರನ್ನಾಗಲೀ ನಾನು ನೋಡಲಾರೆ!
-ಮುಂದೆಯೂ ನೀನು ನೋಡಬಹುದು... ನಾನು ನಿನಗೆ ಹೆಚ್ಚು ಸುಂದರವಾದ ಬೇರೆ ಕಣ್ಣು ಕೊಡುತ್ತೇನೆ!
ಯುವಕ ಇನ್ನೂ ಮೂರು ಮೆಟ್ಟಿಲು ಹತ್ತಿ ಕೆಳಗೆ ನೋಡಿದ. ದೆವ್ವ ನೆನಪು ಮಾಡಿತು:
-ಅವರ ರಕ್ತ ಬಸಿಯುವ ಬತ್ತಲೆ ದೇಹಗಳನ್ನು ನೋಡು.
-ಓ ನನ್ನ ದೇವರೆ! ಇದು ನಿಜವಾಗಿಯೂ ವಿಚಿತ್ರ; ಯಾವಾಗ ಅವರು ಅಷ್ಟು ಚೆಂದವಾಗಿ ಅಲಂಕಾರ ಮಾಡಿಕೊಳ್ಳಲು ಕಲಿತರು! ರಕ್ತ ಜಿನುಗುವ ಗಾಯ ಗಳಿಂದ ನರಳುತ್ತಿದ್ದ ಅವರು ಎಷ್ಟು ಸುಂದರವಾದ ಕೆಂಪು ಗುಲಾಬಿಗಳಿಂದ ಅಲಂಕೃತರಾಗಿದ್ದಾರೆ!
ಪ್ರತಿ ಮೂರು ಮೆಟ್ಟಲುಗಳಿಗೊಮ್ಮೆ ದೆವ್ವ ತನ್ನ ಕಿರು ಲಂಚವನ್ನು ತೆಗೆದು ಕೊಳ್ಳುತ್ತಿತ್ತು. ಆದರೆ ಯುವಕ ಮೇಲೆ ಹತ್ತುತ್ತಿದ್ದ. ಅವನು ಆ ಹಾಳು ಸ್ಥಳವನ್ನು ತಲುಪಿ ಆ ಕೊಬ್ಬಿದ ರಾಜರ ಮೇಲೆ ಸೇಡು ತೀರಿಸಿಕೊಳ್ಳುವಂತಾದರೆ ಏನು ಕೇಳಿದರೂ ಕೊಡಲು ಸಿದ್ಧವಾಗಿದ್ದ! ಇನ್ನು ಒಂದು ಮೆಟ್ಟಲು, ಒಂದೇ ಒಂದು. ನಂತರ ಅವನು ಅತಿ ಎತ್ತರದಲ್ಲಿರುತ್ತಾನೆ! ತನ್ನ ಒಡಹುಟ್ಟಿದವರಿಗಾದ ಅನ್ಯಾಯದ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾನೆ!
-ಹುಟ್ಟಿನಿಂದ ನಾನೊಬ್ಬ ದಲಿತ. ಎಲ್ಲ ಬಡವರು.....
-ಯುವಕ, ದೆವ್ವ ಹೇಳಿತು, ಒಂದೇ ಒಂದು ಮೆಟ್ಟಿಲು! ಇನ್ನು ಒಂದೇ ಒಂದು ಮೆಟ್ಟಿಲು ಹತ್ತಿದರೆ ನೀನು ನಿನ್ನ ಸೇಡು ತೀರಿಸಿಕೊಳ್ಳುತ್ತೀಯೆ. ಆದರೆ ಈ ಮೆಟ್ಟಿಲಿಗೆ ನಾನು ಯಾವಾಗಲೂ ಎರಡರಷ್ಟು ಲಂಚ ತೆಗೆದುಕೊಳ್ಳುತ್ತೇನೆ. ನಿನ್ನ ಹೃದಯ ಮತ್ತು ನೆನಪುಗಳನ್ನು ಕೊಡು.
ಯುವಕ ತನ್ನ ಕೈಯನ್ನು ಅಲ್ಲಾಡಿಸಿದ.
-ಹೃದಯ? ಓ, ಸಾಧ್ಯವಿಲ್ಲ! ಇದು ತುಂಬಾ ಕ್ರೂರವಾಯಿತು.
-ದೆವ್ವ ಗಟ್ಟಿಯಾಗಿ ಆತ್ಮವಿಶ್ವಾಸದಿಂದ ನಕ್ಕಿತು.
ನಾನು ಅಷ್ಟು ಕ್ರೂರಿಯಲ್ಲ. ನಾನು ಅದಕ್ಕೆ ಬದಲಾಗಿ ನಿನಗೆ ಒಂದು ಚಿನ್ನದ ಹೃದಯವನ್ನೂ ಮತ್ತು ಹೊಸ ನೆನಪನ್ನು ಕೊಡುತ್ತೇನೆ! ಇದಕ್ಕೆ ಒಪ್ಪಿಕೊಳ್ಳದಿದ್ದರೆ ನೀನು ಈ ಮೆಟ್ಟಿಲನ್ನು ಹತ್ತಲಾರೆ; ಯಾರ ಮುಖಗಳು ಬೂದಿ ಮಣ್ಣಿನಂತೆ ಕಪ್ಪಿಟ್ಟಿವೆಯೋ, ಯಾರು ರೊಯ್ಯನೆ ಬೀಸುವ ಆಷಾಢದ ಗಾಳಿಗಿಂತ ಹೆಚ್ಚು ಭೀಕರವಾಗಿ ಗೋಳಿಡುತ್ತಿದ್ದಾರೋ, ಆ ನಿನ್ನ ಒಡಹುಟ್ಟಿದವರಿಗಾದ ಅನ್ಯಾಯಕ್ಕೆ ಸೇಡು ತೀರಿಕೊಳ್ಳಲಾರೆ.
ಯುವಕ ದೆವ್ವದ ಹಸಿರು ಕಣ್ಣುಗಳನ್ನೂ ದಿಟ್ಟಿಸಿದ:
-ಆದರೆ ನಾನು ಅತ್ಯಂತ ದುಃಖಿಯಾಗುತ್ತೇನೆ; ನೀನು ನನ್ನಿಂದ ಎಲ್ಲ ಮಾನವೀಯತೆಯನ್ನೂ ಕಿತ್ತುಕೊಳ್ಳುತ್ತಿದ್ದೀಯೆ.
ಅದರ ಬದಲು, ಪರಮ ಸುಖಿ...!
ಆದರೆ? ನೀನು ಒಪ್ಪುವೆಯಾ? ನಿನ್ನ ಹೃದಯ ಮತ್ತು ನೆನಪು ಮಾತ್ರ.
ಯುವಕ ಯೋಚಿಸಿದ. ಅವನ ಮುಖದ ಮೇಲೆ ಒಂದು ಕರಾಳ ನೆರಳು ಕವಿಯಿತು. ಅವನ ಸುಕ್ಕುಗಟ್ಟಿದ ಹಣೆಯಿಂದ ಬೆವರಿನ ಉಪ್ಪು ಹನಿಗಳು ಜಿನುಗತೊಡಗಿದವು. ಅವನು ತನ್ನ ಮುಷ್ಟಿಗಳನ್ನು ಬಿಗಿಗೊಳಿಸಿ ಹಲ್ಲಿನ ಸಾಲಿನ ನಡುವೆ ಉಸುರಿದ:
-ಹಾಗೇ ಆಗಲಿ! ಅವನ್ನು ತೆಗೆದುಕೋ!
... ಗಾಳಿಗೆ ಕೆದರಿದ ಕಪ್ಪು ಕೂದಲಿನ ಆ ಯುವಕ ಕೋಪ ಮತ್ತು ಆವೇಶಗಳಿಂದ ಬೇಸಗೆಯ ಚಂಡಮಾರುತದಂತೆ ಕೊನೆಯ ಮೆಟ್ಟಿಲನ್ನೂ ಜಿಗಿದ. ಇದ್ದಕ್ಕಿದ್ದ ಹಾಗೆ ಮುಖ ಮುಗುಳುನಗೆಯಿಂದ ಮಿಂಚಿತು. ಅವನ ಕಣ್ಣುಗಳು ನೆಮ್ಮದಿ ಮತ್ತು ಸಂತಸಗಳಿಂದ ಮಿನುಗಿದುವು. ಅವನ ಮುಷ್ಟಿಗಳು ಸಡಿಲಗೊಂಡವು. ಅವನು ರಾಜನ ಒಡ್ಡೋಲಗವನ್ನು ನೋಡಿದ. ಅವನು ಶಪಿಸುತ್ತಾ ಕೀಗುತ್ತಿದ್ದ ಕಪ್ಪು ಜನರ ಅಸಭ್ಯ ಗುಂಪನ್ನೂ ನೋಡಿದ. ಅವನು ನೋಡೇ ನೋಡಿದ. ಆದರೆ ಅವನ ಮುಖ ಕೋಪದಿಂದ ಗಂಟ್ಟಿಕ್ಕಿಕೊಳ್ಳಲಿಲ್ಲ; ಅದು ಖುಷಿಯಿಂದ ಕಂಗೊಳಿಸುತ್ತಿತ್ತು. ಅವನು ಮೆಟ್ಟಿಲು ಕೆಳಗೆ ವಿನೋದದಲ್ಲಿ ಪಾಲುಗೊಂಡಿದ್ದ ಜನರನ್ನು ಕಂಡ. ಅವರ ನರಳಾಟ ಈಗ ಸ್ತುತಿಪಾಠವಾಗಿತ್ತು.
-ನೀನಾರು?-ಕಪಟದ ಗೊಗ್ಗುರು ಧ್ವನಿಯಲ್ಲಿ ದೆವ್ವ ಅವನನ್ನು ಕೇಳಿತು.
-ಹುಟ್ಟಿನಿಂದ ನಾನೊಬ್ಬ ರಾಜಕುಮಾರ! ದೇವತೆಗಳು ನನ್ನ ಒಡ ಹುಟ್ಟಿದವರು! ಓ, ಈ ಭೂಮಿ ಎಷ್ಟು ಸುಂದರವಾಗಿದೆ; ಜನರು ಎಷ್ಟು ಸುಖಿಗಳಾಗಿದ್ದಾರೆ!
ಹ್ರಿಸ್ಟೊ ಸ್ಮಿರ್‍ನೇನ್‌ಸ್ಕಿಯ ಒಂದು ಬಲ್ಗೇರಿಯನ್ ಕಥೆ
- Login or register to post comments
- Email this page